Saturday, September 28, 2013

ಆವಲಕೊಂಡ

 ಆವಲಕೊಂಡ

ಬೀಸುವ ತಂಗಾಳಿ ಮೊಣಕಾಲೆತ್ತರ ಬೆಳೆದ ಹುಲ್ಲನ್ನು ತಳ್ಳುತ್ತಾ ಆಹ್ಲಾದವನ್ನುಂಟು ಮಾಡಿದರೆ, ಹಕ್ಕಿಗಳ ಚಿಲಿಪಿಲಿ ನಾದ, ಬಣ್ಣದ ಪಾತರಗಿತ್ತಿಗಳು, ಕಣ್ಣು ಹಾಸಿದಷ್ಟು ದೂರವೂ ಹಸಿರನ್ನು ಹೊದ್ದ ಕಾಡು ಮತ್ತು ಬಂಡೆಗಳಬೆಟ್ಟಗಳ ಸಾಲು ಜೀವ ಚೈತನ್ಯವುಂಟುಮಾಡುತ್ತವೆ. ಇದು ಮಲೆನಾಡಿನ ವರ್ಣನೆಯಲ್ಲ. ಮಲೆನಾಡನ್ನೂ ನಾಚಿಸುವ ಜಿಲ್ಲೆಯ ಬೆಟ್ಟವೊಂದರ ಮೇಲಿನ ದೃಶ್ಯ ವೈಭವವಿದು. 
 ಚಿಕ್ಕಬಳ್ಳಾಪುರ ತಾಲ್ಲೂಕು ಮಂಡಿಕಲ್‌ ಬಳಿಯಿರುವ ಆವಲಕೊಂಡ, ಹಸುಬೆಟ್ಟ ಅಥವಾ ಧೇನುಗಿರಿ ಅಲ್ಲಿನ ನರಸಿಂಹಸ್ವಾಮಿ ದೇಗುಲದೊಂದಿಗೆ ಸೂರ್ಯೋದಯ, ಸೂರ್ಯಾಸ್ತ ವೀಕ್ಷಣೆಗೂ, ಚಾರಣಕ್ಕೂ, ಜಗದ ಜಂಜಡವನ್ನು ಮರೆತು ಪ್ರಕೃತಿಯೊಂದಿಗೆ ಮೌನ ಸಂಭಾಷಣೆ ನಡೆಸುವ ತಾಣವಾಗಿದೆ. ಇಲ್ಲಿ ಬೇಸಿಗೆಯಲ್ಲಿ ತಂಗಾಳಿಯ ಅನುಭವ ದೊರೆತರೆ, ಚಳಿಗಾಲದಲ್ಲಿ ಬೆಟ್ಟಗಳ ಮೇಲೆ ಚಲಿಸುವ ಮೋಡಗಳು ಸುಂದರವಾಗಿ ಕಾಣುತ್ತವೆ. ಇನ್ನು ಮಳೆಗಾಲದಲ್ಲಿ ವರ್ಷಧಾರೆಯಲ್ಲಿ ಬೆಟ್ಟದ ಮೇಲೆ ನಿಂತು ತೊಯ್ಯುತ್ತಾ ನಿಸರ್ಗದಲ್ಲಿ ಒಂದಾಗುವುದೇ ಸೊಗಸಾದ ಅನುಭವ. 

 ದೂರದಿಗಂತದವರೆಗೆ ಕಣ್ಣು ಹಾಯಿಸಿದಷ್ಟು ದೂರ ಕಾಣುವ ಬೆಟ್ಟದ ಸಾಲುಗಳು

ವಾರಾಂತ್ಯದಲ್ಲಿ ಒಂದು ದಿನ ಚಾರಣ ಕೈಗೊಳ್ಳಬಹುದಾದಂತ ಪ್ರವಾಸಿ ಸ್ಥಳ ಧೇನುಗಿರಿಯನ್ನು ಸ್ಥಳೀಯರು ಆವಲಕೊಂಡ, ಆವಲಬೆಟ್ಟ, ಹಸುಗಳಬೆಟ್ಟ ಎಂದೆಲ್ಲಾ ಕರೆಯುತ್ತಾರೆ. ಈ ಬೆಟ್ಟದ ಮೇಲೆ ನರಸಿಂಹದೇವರ ದೇವಸ್ಥಾನವೊಂದಿದೆ. ಈ ದೇವಾಲಯಕ್ಕೆ ಹೋಗಲು ಇನ್ನೂರು ಮೆಟ್ಟಿಲುಗಳನ್ನು ಹತ್ತಬೇಕು. 150 ಮೆಟ್ಟಿಲುಗಳನ್ನು ಹತ್ತಿದರೆ ಲಕ್ಷ್ಮೀದೇವಿಯ ಮಂದಿರವಿದೆ.ನರಸಿಂಹದೇವರ ದೇವಾಲಯ ಬಹಳ ಸಾಧಾರಣವಾದ ದೇಗುಲ. ಇದೊಂದು ಗುಹೆಯ ದೇವಾಲಯ. ಮೂರು ಕಡೆ ಗೋಡೆ ಮತ್ತು ಒಂದು ಕಿರುಬಾಗಿಲು ಇದೆ. ಮುಂಚಾಚಿದ ಹೆಬ್ಬಂಡೆಯ ತಳವೇ ಸೂರು ಹಾಗೂ ಹಿಂಬದಿಯ ಗೋಡೆಯಾಗಿದೆ. ಬಹಳ ತಗ್ಗಿನಲ್ಲಿರುವ ಈ ದೇವಾಲಯದಲ್ಲಿ ದೇವರ ವಿಗ್ರಹ ಮುಂದೆ ನಿಂತಾಗ ಮಾತ್ರ ತಲೆ ಎತ್ತಲೂ ಅವಕಾಶ. ಶ್ರಾವಣ ಮಾಸದಲ್ಲಿ ಇಲ್ಲಿ ವಿಶೇಷ ಪೂಜೆ-ಪುನಸ್ಕಾರಗಳು ನಡೆಯುತ್ತದೆ.

 ದೇವಾಲಯದ ಬಳಿಯಿರುವ ಮಂಟಪ

ಬೆಟ್ಟದ ಮೇಲಿಂದ ಕಾಣುವ ವಿಹಂಗಮ ನೋಟ ಸುಂದರ ಹಾಗೂ ನಯನಮನೋಹರ. ಸುತ್ತಲೂ ಕಾಣುವ ಕೆರೆ,ಗದ್ದೆ, ಊರು, ಪಚ್ಚೆ ಬಣ್ಣದ ಹಸಿರು ಕಾನನ ಮನಸ್ಸಿಗೆ ಹೊಸ ಲವಲವಿಕೆ ತುಂಬುವುದು. ಹಸಿರಿನ ಮಧ್ಯದಲ್ಲಿ ಸ್ವಲ್ಪ ದೂರ ಕಾಲ್ನಡಿಗೆ, ಮೆಟ್ಟಿಲು ಹತ್ತುವ ಸಾಹಸ ಮಾಡಿದಾಗ ದಣಿವಿನಿಂದ ಕೂಡಿದ ದೇಹ ಬೆಟ್ಟದ ಮೇಲೆ ಉತ್ತಮ ಗಾಳಿ ಹಾಗೂ ಸುಂದರ ವಾತಾವರಣದಿಂದ ಹೊಸ ಶಕ್ತಿ ಪಡೆಯುತ್ತದೆ.
 ’ಹಿಂದೆ ಸಮುದ್ರ ಮಂಥನ ನಡೆದಾಗ ಜನಿಸಿದ ಹಸುವೊಂದು ಇಲ್ಲಿ ಬಂದು ನೆಲೆ ನಿಂತಿತಂತೆ. ಅಂದಿನಿಂದ ಈ ಬೆಟ್ಟಕ್ಕೆ ತುಂಬಾ ಹಸುಗಳು ಬರಲಾರಂಭಿಸಿದವು. ಹಾಗಾಗಿ, ಈ ಬೆಟ್ಟಕ್ಕೆ ಧೇನುಗಿರಿ ಅಂದರೆ ಕಾಮಧೇನುಗಳ (ಹಸುಗಳ)ಬೆಟ್ಟ ಎಂಬ ಹೆಸರು ಸ್ಥಿರವಾಯಿತು ಎಂದು ಹಿರಿಯರು ಹೇಳುತ್ತಾರೆ. ಈ ಗಿರಿಧಾಮ ಚಾರಣಿಗರಿಗೆ, ಪ್ರಕೃತಿ ಪ್ರಿಯರಿಗೆ ಹಾಗೂ ಆಧ್ಯಾತ್ಮ ಸಾಧಕರಿಗೆ ಇಷ್ಟವಾಗುತ್ತದೆ’ ಎನ್ನುತ್ತಾರೆ ಸ್ಥಳೀಯರಾದ ನರಸಿಂಹಪ್ಪ.

ಹಸಿರನ್ನು ಹೊದ್ದ ಸಿರಿ ಭೂ ದೃಶ್ಯ ಮಲೆನಾಡನ್ನು ನೆನಪಿಸುತ್ತದೆ

1 comment:

sunaath said...

ಸುಂದರ ಛಾಯಾಚಿತ್ರಗಳು ಮನಸ್ಸಿಗೆ ಆಹ್ಲಾದವನ್ನು ಉಂಟು ಮಾಡಿದವು.