Sunday, May 16, 2010

ಗಾಣಲಿಂಗೇಶ್ವರನಾಗಿ ರೂಪುಗೊಳ್ಳುತ್ತಿರುವ ಗಾಣದಕಲ್ಲು


ಶಿಡ್ಲಘಟ್ಟ ತಾಲ್ಲೂಕಿನ ಶೆಟ್ಟಹಳ್ಳಿಯಲ್ಲಿರುವ ಗಾಣ.

ಬೃಹತ್ ಉದ್ದಿಮೆಗಳಾಗಿ ಬೆಳೆದು ನಿಂತಿರುವ ಎಣ್ಣೆ ಕಾರ್ಖಾನೆಗಳೊಂದಿಗೆ ಪರಂಪರಾಗತವಾಗಿ ನಡೆದುಕೊಂಡು ಬಂದಂತಹ ಸಂಪ್ರದಾಯಿಕ ಎಣ್ಣೆ ಗಾಣಗಳು ಯಾವ ತರಹದ ಪೈಪೋಟಿಗಳನ್ನು ನಡೆಸಲಸಾಧ್ಯವಾಗಿ, ಅಸಹಾಯಕವಾಗಿ ಇಂದು ಸಂಪೂರ್ಣವಾಗಿ ನೆಲಕಚ್ಚುತ್ತಿವೆ. ಇನ್ನೂ ಅಲ್ಲಲ್ಲಿ ಕೆಲವೆಡೆ ಈ ಎಣ್ಣೆ ಗಾಣಗಳು ಜೀವಂತವಾಗಿದ್ದರೂ ಆಧುನಿಕ ತಂತ್ರಜ್ಞಾನದ ಪರಿಸರದಲ್ಲಿ ಸಂದಿಗ್ಧತೆಯಲ್ಲಿವೆ.
ನಮ್ಮ ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದಲ್ಲಿ ಈ ರೀತಿ ಪಳೆಯುಳಿಕೆಯಂತೆ ನಿಂತಿದ್ದ ಗಾಣದ ಕಲ್ಲಿಗೆ ಲಿಂಗವನ್ನು ಪ್ರತಿಷ್ಠಾಪಿಸಿ ಗಾಣಲಿಂಗೇಶ್ವರನನ್ನಾಗಿ ರೂಪಾಂತರಗೊಳಿಸಿದ್ದಾರೆ. ಕಳ್ಳಿಪಾಳ್ಯ ವಿ.ನಾಗರಾಜಪ್ಪ ಇದರ ರೂವಾರಿಯಾಗಿದ್ದು ಅನೇಕ ಕಡೆ ಅವರು ಗಾಣಲಿಂಗೇಶ್ವರನ್ನು ಪ್ರತಿಷ್ಠಾಪಿಸಿರುವರು.
ಗಾಣವೆಂದರೆ, ಒಂದು ವಸ್ತುವನ್ನು ಹಿಂಡಿ, ದ್ರವರೂಪದ ವಸ್ತುವನ್ನು ಪಡೆಯುವಲ್ಲಿ ಉಪಯೋಗಿಸುವ ಸಾಧನ. ಮೂಲತಃ ಕೊಬ್ಬರಿ, ಕಡಲೆ, ಹರಳು, ಹೊನ್ನೆ, ಎಳ್ಳು, ಔಡಲ, ಕುಸುಬಿ ಮುಂತಾದ ಎಣ್ಣೆ ಹಿಂಡುವ ಸಾಧನವಾಗಿದ್ದ ಗಾಣ, ನಂತರದ ದಿನಗಳಲ್ಲಿ ಇದು ಕಬ್ಬನ್ನು ಅರೆಯುವ ಸಾಧನವಾಗಿ ರೂಪುಗೊಂಡು ಆಲೆಮನೆ ಎಂಬ ಹೆಸರು ಪಡೆಯಿತು. ಪ್ರಾಚೀನ ಗುಡಿ, ಮಠ, ಮನೆಗಳ ನಿರ್ಮಾಣ ಕಾರ್ಯದಲ್ಲಿ ಗಚ್ಚನ್ನು ತಯಾರಿಸುವ ಸಾಧನವೂ ಗಾಣದ ಕಲೆಯ ಇನ್ನೊಂದು ರೂಪಾಂತರ.


ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರದಲ್ಲಿ ಪಳೆಯುಳಿಕೆಯಂತೆ ನಿಂತಿರುವ ಗಾಣದ ಕಲ್ಲು.

ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಹೆಚ್ಚಾಗಿ ಉತ್ತರ ಕರ್ನಾಟಕದಲ್ಲಿ ಮರದಗಾಣಗಳು ಬಳಸಿದರೆ, ಹಳೇ ಮೈಸೂರು ಕಡೆಯ ಪ್ರದೇಶಗಳಲ್ಲಿ ಕಲ್ಲಿನ ಗಾಣಗಳು ಹೆಚ್ಚಾಗಿ ರೂಢಿಯಲ್ಲಿದೆ.
ಎಣ್ಣೆ ಗಾಣಗಳ ರಚನಾತ್ಮಕತೆ ದೃಷ್ಟಿಯಿಂದ ಮೂರು ಪ್ರಕಾರದ್ದಾಗಿ ಗುರುತಿಸಬಹುದು. ಜೋಡೆತ್ತುಗಳ ಅಥವಾ ಕೋಣಗಳ ಸಹಾಯದಿಂದ ನಡೆಸುವ ಕಲ್ಲಿನ ಗಾಣ, ಮನುಷ್ಯರೇ ಶ್ರಮವಹಿಸಿ ತಿರುಗಿಸಿ ಎಣ್ಣೆಯನ್ನು ಉತ್ಪಾದಿಸಬಹುದಾದ ಮರದ ಗಾಣ ಮತ್ತು ಕೇವಲ ಒಂಟಿ ಎತ್ತನ್ನು ಬಳಸಿಕೊಂಡು ಎಣ್ಣೆಯನ್ನು ಉತ್ಪಾದಿಸುವಂತಹ ಒಂಟೆತ್ತಿನ ಗಾಣ.
ಗಾಣದ ವಿನ್ಯಾಸವು ಮೊದಲು ಸುಮಾರು ೯ ರಿಂದ ೧೦ ಅಡಿ ವ್ಯಾಸದ ಚಪ್ಪಟೆಯಾದ ಗಟ್ಟಿ ನೆಲ ನಿರ್ಮಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಇಲಿ ತೈಲ ಬೀಜಗಳನ್ನು ಹಾಕಲು ದೊಡ್ಡ ಒರಳನ್ನು ಇಡಲಾಗುತ್ತದೆ. ಅದಕ್ಕೆ ಗಾಣದ ಮರವನ್ನು ಕಟ್ಟುತ್ತಾರೆ. ಕಬ್ಬಿಣದ ಬಳೆಯ ಅಂಚನ್ನುಳ್ಳ ಮರದ ಒನಕೆಯನ್ನು ಗಾಣದ ಒರಳಿನ ಸೂಕ್ತವಾದ ಆಯಕಟ್ಟಿನ ಸ್ಥಳದಲ್ಲಿ ಸ್ಥಾಪಿಸಿರುತ್ತಾರೆ. ಗಾಣದ ಮರ ಹಾಗೂ ಒರಳಿನ ಕೆಳಭಾಗಕ್ಕೂ ಹೊಂದಿಕೊಂಡಿರುವಂತೆ ಕತ್ತರಿ ಹಲಗೆಯೊಂದನ್ನು ನಿರ್ಮಿಸಿ ಆ ಹಲಗೆಯ ಮೇಲೆ ಭಾರವಾದ ಕಲ್ಲುಗಳನ್ನು ಹೇರಿರುತ್ತಾರೆ. ಕತ್ತರಿ ಹಲಗೆಯು ತನ್ನೊಂದು ಹಗ್ಗದಿಂದ ಗಾಣದ ಮಧ್ಯಭಾಗವನ್ನು ಆವರಿಸಿಕೊಂಡು ಭದ್ರವಾಗಿರುತ್ತದೆ. ನಂತರ ಒನಕೆಗೆ ಹೊಂದಿಕೊಂಡು ಆಸರೆಯಾಗಿರುವಂತೆಯೂ ಬೀಜಗಳನ್ನು ಅರೆಯುವ ಪ್ರಧಾನ ಕ್ರಿಯೆಯು ಸುಸೂತ್ರವಾಗುವಂತೆ ಮಲ್ಲಗಂಬವೊಂದನ್ನು ಸ್ವಲ್ಪ ಓರೆಯಾಗಿ ನಿಲ್ಲಿಸಲಾಗುತ್ತದೆ. ಹೀಗೆ ಸ್ಥಾನ ಗ್ರಹಣ ಮಾಡಿದ ಈ ಮಲ್ಲಗಂಬವು ಮಧ್ಯದಲ್ಲಿ ಬಲವಾದ ಹಗ್ಗದ ಜೋಡಣೆಯನ್ನು ಹೊಂದಿರುತ್ತದೆ. ಈ ಎಲ್ಲಾ ಸಿದ್ಧತೆಗಳನ್ನು ಒಳಗೊಂಡು ರಚನೆಯಾದ ಎಣ್ಣೆಗಾಣದ ಕ್ರಿಯೆಯಿಂದ ಕೊಬ್ಬರಿ, ಔಡಲ, ಶೇಂಗಾ ಮುಂತಾದ ತೈಲ ಬೀಜಗಳ ಎಣ್ಣೆ ಉತ್ಪಾದನೆಯಾಗುತ್ತದೆ. ಇಂಥಾ ಪ್ರತಿಭಾಪೂರ್ಣವಾದ ಗಾಣದ ಕರಕುಶಲ ಕಲೆಯು ಬಡಿಗನ ಕುಶಾಗ್ರಮತಿಯನ್ನು ಪ್ರತಿನಿಧಿಸುತ್ತದೆ. ನೋಡಲು ಲಿಂಗದ ಆಕಾರದ ಈ ಗಾಣ ತುಂಬಾ ಕಲಾತ್ಮಕತೆಯಿಂದ ಕೂಡಿದುದಾಗಿರುತ್ತದೆ.


ವರದನಾಯಕನಹಳ್ಳಿಯಲ್ಲಿ ಗಾಣಲಿಂಗೇಶ್ವರನಾಗಿ ರೂಪುಗೊಂಡಿರುವ ಗಾಣದಕಲ್ಲು.

“ಎಳ್ಳಿಲ್ಲದ ಗಾಣವನ್ನಾಡಿದ ಎತ್ತಿನಂತಾಯಿತೆನ್ನ ಭಕ್ತಿ” ಎಂದು ಬಸವಣ್ಣನವರು ಹೇಳಿದ್ದಾರೆ. ಆದರೀಗ ಗಾಣವೇ ಇಲ್ಲ. ಗಾಣವು ಪರಿವರ್ತನೆಗೊಂಡು ಗಾಣಲಿಂಗೇಶ್ವರನಾಗಿರುವುದು, ಹಳೆಯ ಕುಶಲಕಲೆಗಳು, ವೃತ್ತಿಗಳು, ಕಲಾಪ್ರಕಾರಗಳು ಪಡೆದುಕೊಳ್ಳುತ್ತಿರುವ ರೂಪಾಂತರದ ಪ್ರತಿರೂಪವಾಗಿ ಕಾಣಿಸುತ್ತದೆ.