Monday, December 29, 2008

ಮಲಗಿದ್ದಾನೆ ಕುಂಭಕರ್ಣ!

ನಿದ್ರೆಗೆ ಪರ್ಯಾಯ ಪದವೇ ಕುಂಭಕರ್ಣ. ಜೊತೆಯಲ್ಲಿ ತಿನ್ನುವುದಕ್ಕೂ. ಚೆನ್ನಾಗಿ ತಿಂದು ಮಲಗುವವನಿಗೆ ಕುಂಭಕರ್ಣ ಎಂದೇ ಕರೆಯುವುದು. ಆದರೆ ರಾವಣನ ತಮ್ಮ ಕುಂಭಕರ್ಣ ಮಹಾಪರಾಕ್ರಮಿ. ಅವನಿಗೆ ಬ್ರಹ್ಮನ ಶಾಪವಿತ್ತು. ಒಂದು ಬಾರಿ ಮಲಗಿದರೆ, ಆರು ತಿಂಗಳು ನಿದ್ದೆಯಲ್ಲಿ ತೊಡಗಿರುತ್ತಿದ್ದ. ಮತ್ತೆ ಎದ್ದರೆ ಒಂದು ದಿನ ಮಾತ್ರ ಎಚ್ಚರ. ಪುನಃ ಆರು ತಿಂಗಳು ನಿದ್ದೆ. ಕುಂಭಕರ್ಣ ತನ್ನ ಶಕ್ತಿಗೆ ತಕ್ಕಂತೆ ಬಹು ದೊಡ್ಡ ಹೊಟ್ಟೆಯನ್ನು ಹೊಂದಿದ್ದ. ಒಂದು ಲಕ್ಷ ಜನಕ್ಕೆ ಆಗುವ ಆಹಾರವನ್ನು ಅವನೊಬ್ಬನೆ ಮುಗಿಸುತ್ತಿದ್ದ.
ರಾಮರಾವಣರ ಯುದ್ಧದ ಸಮಯದಲ್ಲಿ ಕುಂಭಕರ್ಣನ ಅವಶ್ಯಕತೆ ಬಂದು, ಅವನನ್ನು ನಿದ್ರೆಯಿಂದ ಎಬ್ಬಿಸಲು ರಾವಣ ತನ್ನ ಮಂತ್ರಿಗಳಿಗೆ ಹೇಳಿದ. ಅವರೆಲ್ಲ ಕುಂಭಕರ್ಣನನ್ನು ಎಬ್ಬಿಸಲು ಮಾಡಿದ ಪ್ರಯತ್ನವೇ ರೋಚಕ ಕಥೆ. ಅನ್ನ ಮತ್ತು ಮಾಂಸದ ರಾಶಿ ಹಾಕಿ, ಚಂಡೆ ಮದ್ದಳೆಗಳನ್ನು ಬಾರಿಸಿ, ಹಗ್ಗ ಹಾಕಿ ಎಳೆದು, ಮೂಗಿಗೆ ಕಟ್ಟಿಗೆ ಹಾಕಿ ತಿರುಚಿ, ಕೂದಲು ಕಿತ್ತರೂ ಅವನು ಜಪ್ಪೆನ್ನಲಿಲ್ಲ. ಆನೆಗಳ ಕೈಲಿ ಎಳೆಸಿ , ತುಳಿಸಿ ಅವನನ್ನು ಎಬ್ಬಿಸುವಷ್ಟರಲ್ಲಿ ಅವರಿಗೆ ಅರ್ಧ ಜೀವವಾಗಿತ್ತು. ಎದ್ದವನ ಮುಂದಿದ್ದ ರಾಶಿ ರಾಶಿ ಆಹಾರವನ್ನು ಸ್ವಲ್ಪ ಹೊತ್ತಿನಲ್ಲೇ ಖಾಲಿ ಮಾಡಿಬಿಟ್ಟ. ಲಂಕೆಗೆ ಸಂಕಷ್ಟ ಬಂದಿದೆ ಎಂದು ಅಸುರರು ಕೈಮುಗಿದಾಗ ತನ್ನ ಅಣ್ಣನ ಬಳಿ ಹೋದನು. ನಡೆದ ವಿಷಯವನ್ನು ತಿಳಿದ ಕುಂಭಕರ್ಣ, "ಅಣ್ಣಾ, ಕೆಟ್ಟ ಕೆಲಸ ಮಾಡುವಾಗ ಇತರರ ಅಭಿಪ್ರಾಯ ಪಡೆಯದೆ, ಕಷ್ಟ ಬಂದಾಗ ಮಾತ್ರ ಬೇರೆಯವರಿಂದ ಸಹಾಯ ಪಡೆಯುವ ನಿನ್ನ ನೀತಿ ಸರಿಯಲ್ಲ" ಎಂದು ರಾವಣನನ್ನು ಖಂಡಿಸಿದ. ಆದರೂ ಲಂಕೆಯ ಮಾನ ಕಾಪಾಡುತ್ತೇನೆಂದು ಹೇಳಿ ರಣರಂಗಕ್ಕೆ ಹೋದನು.ವಾನರ ಹಿಂಡು ಅವನಿಗೆ ಲೆಕ್ಕಕ್ಕೇ ಇಲ್ಲ. ಹಿಡಿದಿಡಿದು ಬಾಯಿಯೊಳಗೆ ತುಂಬಿಕೊಳ್ಳತೊಡಗಿದ. ಅಂಥ ಹನುಮಂತನೇ ಅವನಿಂದ ಪೆಟ್ಟು ತಿಂದುಬಿಟ್ಟ. ಸಾಕ್ಷಾತ್ ಯಮನಂತೆ ರಣರಂಗದಲ್ಲಿ ಅಬ್ಬರಿಸಿದ ಕುಂಭಕರ್ಣ. ಕಡೆಗೆ ಶ್ರೀರಾಮನು ವಾಯುವ್ಯಾಸ್ತ್ರಗಳಿಂದ ಅವನ ತೋಳುಗಳನ್ನು, ಅರ್ಧಚಂದ್ರಾಸ್ತ್ರಗಳಿಂದ ಅವನ ಕಾಲುಗಳನ್ನೂ ಕತ್ತರಿಸಿಹಾಕಿದನು. ನಂತರ ಇಂದ್ರಾಸ್ತ್ರದಿಂದ ಅವನ ತಲೆ ತತ್ತರಿಸಿ ಕೊಂದನು.
ಕರ್ಣಾಟಕದ ಬಾಗೇಪಲ್ಲಿ, ಪೆನುಗೊಂಡ ಮಾರ್ಗವಾಗಿ ಅನಂತಪುರಕ್ಕೆ ಹೋಗುವ ದಾರಿಯಲ್ಲಿ, ಪೆನುಗೊಂಡದಿಂದ ೫ ಕಿ.ಮೀ. ಮುಂದೆ ಎಡಕ್ಕೆ ಕುಂಭಕರ್ಣ ಎಂಬ ಕ್ಷೇತ್ರವಿದೆ. ಅಲ್ಲಿ ಮೇಲಿನ ಚಿತ್ರದಲ್ಲಿರುವ ನಿದ್ರಾಭಂಗಿಯಲ್ಲಿರುವ ಕುಂಭಕರ್ಣನ ವಿಗ್ರಹವಿದೆ. ಎಷ್ಟು ದೊಡ್ಡದಾಗಿದೆಯೆಂದರೆ ಕುಂಭಕರ್ಣನ ಹೊಟ್ಟೆಯೊಳಗೆಲ್ಲಾ ನಾವು ಓಡಾಡಬಹುದು. ಅವನನ್ನು ಎಬ್ಬಿಸುವ ಪ್ರಯತ್ನದಲ್ಲಿರುವ ಅಸುರರು ಅವನ ಮೂಗಿನೊಳಗೆ ಕೋಲು ತೂರಿಸುವುದು, ನಗಾರಿ ಬಾರಿಸುವುದು, ಮಾಂಸದ ಅಡುಗೆಯಿಟ್ಟು ಆಕರ್ಷಿಸುವುದು, ತಿವಿಯುವುದು.... ಇವೆಲ್ಲಾ ನೋಡಲು ಸೊಗಸಾಗಿದೆ.
ಕುಂಭಕರ್ಣನ ಆಭರಣಗಳು, ಚಿಂತಾಕ್ರಾಂತನಾಗಿ ಕುಳಿತ ರಾವಣ, ಕುಂಭಕರ್ಣನನ್ನು ಎಬ್ಬಿಸಲು ಪ್ರಯತ್ನಿಸಿ ಧಣಿದ ರಾಕ್ಷಸರು ಅವನಿಗೆ ಕೊಡಲು ತಂದಿದ್ದ ಮಾಂಸವನ್ನು ಉಣ್ಣುತ್ತಿರುವುದು ಮನಸೆಳೆಯುತ್ತದೆ.
ಇನ್ನೇಕೆ ತಡ, ನೀವೂ ಕುಂಭಕರ್ಣ ನಿದ್ದೆಯಿಂದ ಮೇಲೆದ್ದು ನೋಡಲು ನಡೆಯಿರಿ ಕುಂಭಕರ್ಣನನ್ನು!

Saturday, December 20, 2008

ಚಿತ್ರ ಸರ(ಪ)ಣಿ!

ನಮ್ಮ ಫೋಟೋಗ್ರಫಿ ಇಂದು ಹೊಳೆ ದಂಡೆಯಲ್ಲಿ ಅಂದ ತಕ್ಷಣ ಮಕ್ಕಳೆಲ್ಲ ಚುರುಕಾಗಿಬಿಟ್ಟರು. ನೀರೆಂದರೆ ಯಾರಿಗೆ ಇಷ್ಟವಿಲ್ಲ, ಹೇಳಿ? ವಿಕಾಸ, ಸುಹಾಸ, ಸ್ವಾತಿ, ಅಶ್ವಿನಿ, ಭರತ... ಮಕ್ಕಳ ಮರಿಸೈನ್ಯದೊಂದಿಗೆ ಹೊರಟಾಗ ಮದ್ಯಾಹ್ನ ೩ ಗಂಟೆಯ ಚುರುಮುರಿ ಬಿಸಿಲು. ಹೊಳೆದಂಡೆ ಹತ್ತಿರವಾದಂತೆ ಹಣೆಯಲ್ಲಿ ಮುತ್ತಿನಂತೆ ಬೆವರು ಮೊಳೆತಿತ್ತು. ಆದರೆ ಮಕ್ಕಳಿಗೆ ಅದೆಲ್ಲಿ ಅಡಗಿರುತ್ತೋ ಆ ಚೈತನ್ಯ ಮತ್ತು ಉತ್ಸಾಹ. ನೀರು ಕಂಡೊಡನೆ 'ಓ...' ಎಂದು ಕೂಗುತ್ತಾ ಓಡತೊಡಗಿದರು. ಅರೆರೆ! ಅವರು ಓಡುವುದನ್ನೇ ಫೋಟೋ ತೆಗೆದರೆ ಹೇಗೆ ಎಂಬ ಐಡಿಯಾ ಹೊಳೆಯಿತು.
ಅಶ್ವಿನಿ, ಸುಹಾಸ, ಭರತ - ಮೂವರೂ 'ರೆಡಿ ಒನ್, ಟು, ತ್ರೀ...' ಅನ್ನುತ್ತಿದ್ದಂತೆ ರಭಸದಿಂದ ನುಗ್ಗಿಬಂದರು. ನಾನು ಕ್ಯಾಮೆರಾ ಕಂಟಿನ್ಯುಯಸ್ ಸ್ಪೀಡ್ ಗೆ ಹಾಕಿ ಬಟನ್ ಒತ್ತಿ ಹಿಡಿದೆ. ಅಂದುಕೊಳ್ಳುವುದೇ ಒಂದು ಆಗುವುದೇ ಒಂದು ಎನ್ನುವಂತೆ ಒಂದು ಆಕಸ್ಮಿಕ ಘಟಿಸಿತು. ಓಡುವಾಗ ಹೆಜ್ಜೆ ಜಾರಿ ಭರತ ಬಿದ್ದುಬಿಟ್ಟ. ಚಕಚಕನೆ ಕ್ಲಿಕ್ಕಿಸಿದ್ದರಿಂದ ಎಲ್ಲ ದಾಖಲಾಗಿಬಿಟ್ಟಿತು. ಪುನಃ ಮೂರ್ನಾಕು ಬಾರಿ ಅವರನ್ನು ಓಡಿಸಿದರೂ ಆ ಕ್ಷಣದಷ್ಟು ರೋಚಕವಾಗಿ ಮೂಡಿಬರಲಿಲ್ಲ.
ಇದು ಚಿತ್ರ ಸರಣಿಯೂ ಹೌದು, ಸರಪಣಿಯೂ ಹೌದು. ಪ್ರತಿಚಿತ್ರಗಳೂ ಪ್ರತ್ಯೇಕತೆಯನ್ನು ಉಳಿಸಿಕೊಂಡು ಒಂದಕ್ಕೊಂದು ಬಂಧವಿರಿಸಿಕೊಂಡಿವೆ.



Monday, December 15, 2008

ಹೈದರಾಬಾದ್ ಹೈಲೈಟ್ಸ್

ಪ್ರತಿ ನಗರವೂ ತನ್ನದೇ ಆದ ಸೊಗಸು, ಸೊಗಡು, ಸ್ವಾದ, ಸೆಳೆತ, ಭಾಷೆ, ಇತಿಹಾಸ, ಶೈಲಿ ಮತ್ತು ಮಾದಕತೆ ಹೊಂದಿರುತ್ತದೆ. ಇದಕ್ಕೆ ೪೦೦ ವರ್ಷ ವಯಸ್ಸಾದ ಹೈದರಾಬಾದ್ ಕೂಡ ಹೊರತಾಗಿಲ್ಲ.
ಚಾರ್ ಮಿನಾರ್, ಗೋಲ್ಕೊಂಡ ಕೋಟೆ, ಸಾಲಾರ್ಜಂಗ್ ವಸ್ತುಸಂಗ್ರಹಾಲಯ, ಬಿರ್ಲಾ ಮಂದಿರ, ಹುಸೇನ್ ಸಾಗರ್ ಇತ್ಯಾದಿ ನೋಡುವುದರೊಂದಿಗೆ ಇತರೇ ವೈವಿದ್ಯಗಳನ್ನು ಸವಿದಾಗಲೇ ಪ್ರವಾಸ ಚಂದವಾಗುವುದು.
ಸಮುದ್ರದಿಂದ ದೂರವಿದ್ದರೂ ಹೈದರಾಬಾದ್ ಭಾರತದ ಮುತ್ತಿನ ನಗರವೆಂದೇ ಪ್ರಸಿದ್ಢ. ಮುತ್ತುಗಳ ಪ್ರಿಯರಾದ ನಿಜಾಮರು ಇರಾಕ್, ಅರೇಬಿಯಾ, ಪರ್ಶಿಯಾಗಳಿಂದ ಮುತ್ತುಗಳನ್ನು ತರಿಸುತ್ತಿದ್ದರು. ನಿಜಾಮರ ಸ್ನೇಹದಿಂದ ಸೇಠ್ ಕೇದಾರ್ ನಾಥ್ ಜಿ ಮೋತಿವಾಲ ೧೯೦೬ರಲ್ಲಿ ಮೊಟ್ಟಮೊದಲ ಮುತ್ತಿನ ಅಂಗಡಿಯನ್ನು ಹೈದರಾಬಾದ್ ನಲ್ಲಿ ತೆಗೆದರು. ಮುತ್ತಿನ ಗಮ್ಮತ್ತೇ ಅಂತಹುದು. ಎಂಥವರನ್ನೂ ಆಕರ್ಷಿಸುತ್ತದೆ.
ಲಾಡ್ ಬಝಾರ್‍ - ಹೈದರಾಬಾದಿನ ಬಳೆಗಳ ಮಾರುಕಟ್ಟೆ. ೪೫೦ಕ್ಕೂ ಹೆಚ್ಚು ಬಳೆಗಳ ಅಂಗಡಿಗಳಿವೆ. ಬಣ್ಣಬಣ್ಣದ ಗಾಜಿನ ಚೂರುಗಳನ್ನು ಮಿಳಿತಗೊಳಿಸಿ ತಯಾರಿಸಿರುವ ಹೈದರಾಬಾದಿ ಬಳೆಗಳು ಲಲನೆಯರ ಕೈಗಳನ್ನು ಶೋಭಿಸುವ ಆಭರಣ.
ಆಟೋ ಟ್ಯಾಕ್ಸಿಗಳಲ್ಲಿ ಓಡಾಡುವುದು ಪಕ್ಕಕ್ಕೆ ಸರಿಸಿ ಇಲ್ಲಿನ ಮೂರು ಚಕ್ರದ ಸೈಕಲ್ ರಿಕ್ಷಾದಲ್ಲಿ ಕೂತು ಓಡಾಡಿ ನೋಡಿ. ಶ್ರಮದ ಮೋಡಿ ನಮ್ಮನ್ನು ಹೈದರಾಬಾದಿಗರನ್ನಾಗಿಸುತ್ತದೆ.
ಆಹಾರ ಪ್ರಿಯರಿಗಾಗಿ ಹೈದರಾಬಾದಿ ಬಿರ್ಯಾನಿ, ಪುಲ್ಲಾರೆಡ್ಡಿಯ ಸಿಹಿತಿಂಡಿಗಳು, ಕರಾಚಿ ಬೇಕರಿಯ ಹಣ್ಣಿನ ಬಿಸ್ಕತ್ ಗಳು ಬಾಯಲ್ಲಿ ನೀರುರಿಸುತ್ತವೆ. ಹೊಟ್ಟೆ ತುಂಬಿದ ಮೇಲೆ ಹೈದರಾಬಾದಿ ಪಾನ್ ಮೆಲ್ಲಿ ಅಥವಾ ಹೈದರಾಬಾದಿ ಇರಾನಿ ಛಾಯ್ ಸೇವಿಸಿ. ಆಗ ಪ್ರವಾಸ ಪರಿಪೂರ್ಣ ಒಳಗೂ ಹೊರಗೂ!

Thursday, December 11, 2008

ಗೋಮಟೇಶ

ಭಗವದಾಟೋಪವದು
ಮೆಯ್ಯಾಂತು ನಿಂತಂತೆ,
ಪ್ರೇಮ, ದಯೆ, ಸತ್ಯ, ಸೌಂದರ್ಯ
ಭವ್ಯಸಾಕಾರಗೊಂಡಂತೆ,
ಗಗನದೌದಾರ್ಯಮಂ
ಕಡಲ ಗಾಂಭೀರ್ಯಮಂ

ಹಿಡಿದು ಕಡೆದಿಟ್ಟಂತೆ,
ಶೋಭಿಸುವ ಬೆಳ್ಗೊಳದ ಗೋಮಟೇಶ,
ನೀನೆನಗೊಂದು ಮಹಾಕಾವ್ಯಂ,
ದಿವ್ಯಹರಕೆಯೊಲಿರುವ ನಿರ್ವಾಣಯೋಗೀಶ
ನೀ ನಿತ್ಯ ಭೂವ್ಯೋಮಪೂಜ್ಯಂ
-ಜಿ.ಎಸ್.ಎಸ್.

ಹಿಮಾಲಯದಂತಹ ದೊಡ್ಡ ವ್ಯಕ್ತಿತ್ವದ ಮುಂದೆ ನಾವು ಕುಬ್ಜರಾಗಿ ಸಮರ್ಪಿಸಿಕೊಳ್ಳುವುದು ಆತ್ಮಸಾಕ್ಷಾತ್ಕಾರದ ಮೊದಲ ಹೆಜ್ಜೆ.
ಹಾಸನಜಿಲ್ಲೆಯ ಶ್ರವಣಬೆಳಗೊಳದಲ್ಲಿನ ವಿಂದ್ಯಗಿರಿಯ ಮೇಲೆ ಹಸನ್ಮುಖಿಯಾಗಿ ನಿಂತಿರುವ ಗೋಮಟೇಶ್ವರ ವಿಗ್ರಹದ ಮುಂದೆ ನಿಂತಾಗ ನಾವು ಕುಬ್ಜರಾಗುತ್ತೇವೆ. ಅಹಂಕಾರ ಅಡಗುತ್ತದೆ. ವಿಶಾಲವಾದ ಜಗತ್ತಿನಲ್ಲಿ ನಾವೆಷ್ಟು ಚಿಕ್ಕವರೆಂಬ ಭಾವ ಬಂದು ಮನಸ್ಸು ವಿಶಾಲವಾಗುತ್ತದೆ.
ಗಂಗರ ದೊರೆ ರಾಜಮಲ್ಲನ ಮಂತ್ರಿಯಾಗಿದ್ದ ಚಾವುಂಡರಾಯ ಕ್ರಿ.ಶ. ೯೮೩ ರಲ್ಲಿ ನಿರ್ಮಿಸಿದ ಈ ೫೭ ಅಡಿಗಳ ವಿಗ್ರಹವು ನಮ್ಮ ರಾಷ್ಟ್ರದ ಹೆಮ್ಮೆಯ ಪ್ರತೀಕವಾಗಿದೆ.

Friday, December 5, 2008

ಸಾಟಿಯಿಲ್ಲದ ಕೋಣಕ್ಕೆ ಚಾಟಿ ಏಟು!

ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಸ್ಥರ ವಿನೋದಗಳಲ್ಲಿ ಕೋಣಗಳ ಓಟದ ಸ್ಪರ್ಧೆ ಅಥವಾ ಕಂಬಳ ಪ್ರಮುಖವಾದದ್ದು. ಉತ್ತಮ ತಳಿಯ ಕೋಣಗಳನ್ನು ಕಂಬಳಕ್ಕೆಂದೇ ಸಾಕುತ್ತಾರೆ. ಚೆನ್ನಾಗಿ ಉತ್ತು ನೀರು ನಿಲ್ಲಿಸಿದ ಗದ್ದೆಯಲ್ಲಿ ಕಂಬಳ ನಡೆಯುತ್ತದೆ. ಕಂಬಳಕ್ಕಾಗಿ ಏರ್ಪಡಿಸಿದ ಗದ್ದೆಯಲ್ಲಿ ಕೋಣಗಳು ಓಡಿ ಗುರಿಮುಟ್ಟುವ ಸ್ಥಳಕ್ಕೆ "ಮಂಜೊಟ್ಟಿ" ಎಂದು ಹೆಸರು. ಆದ್ದರಿಂದಲೇ ಕಂಬಳದ ಕೋಣಗಳನ್ನು ಮಂಜೊಟ್ಟಿ ಕೋಣಗಳೆಂದು ಕರೆಯುವರು. ಕೋಣಗಳ ಹಿಂಭಾಗದಲ್ಲಿ ತಳದಲ್ಲಿ ಒಂದು ಹಲಗೆಯನ್ನು ಕಟ್ಟುತ್ತಾರೆ. ಇದನ್ನು 'ಗೋರುಹಲಗೆ' ಎನ್ನುತ್ತಾರೆ. ಕೋಣಗಳನ್ನು ಓಡಿಸುವಾತ ಇದರ ಮೇಲೆ ನಿಲ್ಲುತ್ತಾನೆ. ಆತ ಎಡಗೈಯಿಂದ ಬಿಗಿಯಾಗಿ ಕೋಣದ ಬಾಲವನ್ನು ಹಿಡಿದುಕೊಂಡು ಬಲಗೈಯ ಚಾವಟಿಯಿಂದ ಅದರ ಬೆನ್ನಿನ ಮೇಲೆ ಹೊಡೆದು ಅವುಗಳು ವೇಗವಾಗಿ ಓಡುವಂತೆ ಪ್ರಚೋದಿಸುತ್ತಾನೆ. ಕೋಣಗಳು ಓಡುವ ರಭಸಕ್ಕೆ ಗೋರುಹಲಗೆಯಿಂದ ನೀರು ಮೇಲಕ್ಕೆ ಚಿಮ್ಮಿ ನಿಶಾನೆಯನ್ನು ಮುಟ್ಟುತ್ತದೆ. ನಿಶಾನೆ ಎಷ್ಟು ಎತ್ತರಕ್ಕೆ ಒದ್ದೆಯಾಯಿತು ಎಂಬ ಆಧಾರದಿಂದ ಜಯವನ್ನು ನಿರ್ಧರಿಸುತ್ತಾರೆ. ವೇಗವಾಗಿ ಓಡಿದ ಕೋಣಗಳು ಯಾವುವು ಎಂಬುದರಿಂದಲೂ ಗೆಲುವನ್ನು ನಿರ್ಧರಿಸುತ್ತಾರೆ. ಹಲಗೆ ಮಾತ್ರವಲ್ಲದೆ ಹಗ್ಗ, ನೇಗಿಲುಗಳನ್ನು ಹಿಡಿದೂ ಕೋಣಗಳ ಓಟದ ಸ್ಪರ್ಧೆ ನಡೆಸುತ್ತಾರೆ. ಅಂದ ಹಾಗೆ ಮೇಲಿರುವ ಚಿತ್ರವನ್ನು ತೆಗೆದದ್ದು ಉಡುಪಿ ಬಳಿಯ ಕಟ್ಪಾಡಿ ಕಂಬಳದಲ್ಲಿ.