Sunday, June 13, 2010

ಕಬಿನಿ ದಂಡೆಯಲ್ಲಿ ವನ್ಯಜೀವಿ ದರ್ಶನ

‘ಟಪ್’ ಎಂದು ಜೀಪಿಗೆ ಹೊಡೆದ ತಕ್ಷಣ ಜೀಪು ನಿಂತಿತು. ಜೀಪಿನ ಕಿಟಕಿಯಿಂದ ಅರ್ಧ ಮೈಯನ್ನು ಹೊರಗಿಟ್ಟುಕೊಂಡು ಸುತ್ತೆಲ್ಲಾ ಗಮನಿಸುತ್ತಿದ್ದ ಜೀವನ್ ಮತ್ತು ವಾಹನ ಓಡಿಸುತ್ತಿದ್ದ ಡ್ರೈವರ್ ನಡುವೆ ನಡೆದ ಮೂಕ ಸಂಭಾಷಣೆಯಿದು.

“ಶ್! ಶಬ್ಧ ಮಾಡಬೇಡಿ. ಅಲ್ಲಿ ನೋಡಿ ಹುಲಿ ಬರುತ್ತಿದೆ ನೀರು ಕುಡಿಯಲು” ಎಂದು ಕೈ ತೋರಿಸಿದರು.

ನಮಗೆಲ್ಲ ರೋಮಾಂಚನ. ಝೂಮ್ ಲೆನ್ಸ್‌ನಲ್ಲಿ ಹುಲಿರಾಯನನ್ನು ನೋಡುತ್ತಿದ್ದಂತೆಯೇ ನನಗೆ ಕ್ಲಿಕ್ಕಿಸುವುದೂ ಮರೆತುಹೋಯಿತು.

“ಫೋಟೋ ತೆಗೀರಿ ಸರ್...” ಎಂದು ಜೀವನ್ ತಿವಿದಾಗಲೇ ವಾಸ್ತವಕ್ಕೆ ಮರಳಿದ್ದು. ಅದರದೇ ಮನೆಯಲ್ಲಿ ಅಂದರೆ ಕಾಡಲ್ಲಿ ಹುಲಿಯನ್ನು ನೋಡುವುದಂತೂ ಎಂಥವರಿಗೂ ಮರೆಯಲಾಗದ ಅನುಭವ.

ಜೀವನ್ ಕಬಿನಿ ಜಂಗಲ್ ಲಾಡ್ಜಸ್‌ನ ನ್ಯಾಚುರಲಿಸ್ಟ್. ತೆರೆದ ಜೀಪಿನಲ್ಲಿ ಪ್ರವಾಸಿಗರನ್ನು ಕಾಡಿನಲ್ಲಿ ಕರೆದೊಯ್ದು ವನ್ಯ ಪ್ರಾಣಿಗಳನ್ನು ತೋರಿಸುತ್ತಾರೆ.

ಕಬಿನಿ ನದಿಯ ಉತ್ತರದಲ್ಲಿ ೬೫೦ ಚದರ ಕಿಮೀ ವ್ಯಾಪ್ತಿಯ ನಾಗರಹೊಳೆ ಅಭಯಾರಣ್ಯವಿದೆ. ಈಶಾನ್ಯದಲ್ಲಿ ೮೭೪ ಚದರ ಕಿಮೀ ವ್ಯಾಪಿಸಿರುವ ಬಂಡೀಪುರ ಮತ್ತು ೩೨೧ ಚದರ ಕಿಮೀ ವ್ಯಾಪ್ತಿಯ ಮದುಮಲೈ ಅಭಯಾರಣ್ಯಗಳು ಹಾಗೂ ನೈರುತ್ಯದಲ್ಲಿ ೩೪೫ ಚದರ ಕಿಮೀ ವ್ಯಾಪ್ತಿಯ ಕೇರಳದ ವೈನಾಡ್ ಅಭಯಾರಣ್ಯಗಳಿವೆ. ಇಷ್ಟು ಸಮೃದ್ಧ ಜೀವಜಾಲ ಕಂಡೊಡನೆ ಬ್ರಿಟಿಷರು ಮತ್ತು ರಾಜಮಹಾರಾಜರು ಬೇಟೆಯಾಡಲಿದು ಉತ್ತಮ ಸ್ಥಳವೆಂದು ನಿರ್ಧರಿಸಿ ಹೆಚ್.ಡಿ.ಕೋಟೆಯ ಅಂತರಸಂತೆ ವಲಯದ ಕಾರಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಅದ್ಭುತವಾದ ಬಂಗಲೆಗಳನ್ನು ನಿರ್ಮಿಸಿದ್ದರು. ಹಾಗೆಯೇ ಅನೇಕ ಹುಲಿಗಳನ್ನು ಬೇಟೆಯೂ ಆಡಿದರು.

ಆದರೆ ಈಗ ಆ ಬಂಗಲೆಗಳು ಸರ್ಕಾರ ನಡೆಸುತ್ತಿರುವ ಕಬಿನಿ ಜಂಗಲ್ ರಿವರ್ ಲಾಡ್ಜಸ್‌ನ ಭಾಗವಾಗಿದೆ. ಇಲ್ಲಿ ತರಭೇತಿ ಹೊಂದಿದ ಪ್ರಕೃತಿ ವಿಜ್ಞಾನಿಗಳಿದ್ದಾರೆ. ಬೆಳಿಗ್ಗೆ ಎರಡೂವರೆ ಗಂಟೆ ಮತ್ತು ಮಧ್ಯಾಹ್ನ ಎರಡೂವರೆ ಗಂಟೆ ಕಾಡಿನೊಳಗೆ ತೆರೆದ ಜೀಪಿನಲ್ಲಿ ಸುತ್ತಿಸುತ್ತಾರೆ. ಜಿಂಕೆಗಳು, ಲಂಗೂರ್‌ಗಳು, ದೊಡ್ಡ ಅಳಿಲು, ಕಾಡು ನಾಯಿಗಳು, ಹುಲಿ, ಚಿರತೆ, ಆನೆಗಳು, ಕಾಡು ಹಂದಿಗಳು, ಸಾಂಬಾರ್, ಮೌಸ್ ಡೀರ್, ಬಾರ್ಕಿಂಗ್ ಡೀರ್, ಕಾಟಿ, ವಿವಿಧ ಹಕ್ಕಿಗಳು ಅವುಗಳ ವಾಸಸ್ಥಾನದಲ್ಲೇ ನೋಡುವುದರಿಂದ ವನ್ಯಜೀವಿಗಳ ಮೇಲೆ ಪ್ರೀತಿ, ಗೌರವ ಮತ್ತು ಆದರ ಹುಟ್ಟಿಸುತ್ತದೆ.

ಕೇರಳದ ವೈನಾಡಿನಲ್ಲಿ ಜನಿಸಿ ಕಾವೇರಿ ನದಿಯನ್ನು ಸೇರಿ ಬಂಗಾಳಕೊಲ್ಲಿ ಸೇರುವ ಕಬಿನಿ ನದಿಗೆ ಹೆಚ್.ಡಿ.ಕೋಟೆಯಿಂದ ಹದಿನಾಲ್ಕು ಕಿಮೀ ದೂರದಲ್ಲಿ ಬೀಚಗಾನಹಳ್ಳಿ ಮತ್ತು ಬಿದರಹಳ್ಳಿ ನಡುವೆ ಅಣೆಕಟ್ಟನ್ನು ಕಟ್ಟಲಾಗಿದೆ. ಬೇಸಿಗೆಯಲ್ಲಿ ಬಿಸಿಲು ಏರಿದಂತೆ ಕಬಿನಿ ಅಣೆಕಟ್ಟಿನ ಒಡಲಲ್ಲಿ ನೀರು ನಿಧಾನವಾಗಿ ಖಾಲಿಯಾಗುತ್ತದೆ. ನೀರಿನಡಿಯಲ್ಲಿ ಮುಳುಗಿರುವ ವಿಶಾಲಭೂಮಿ ಹೊರ ಪ್ರಪಂಚಕ್ಕೆ ತೆರೆದುಕೊಂಡು ಅಲ್ಲಿ ಚಿಗುರು ಹಸಿರು ಹೊರಹೊಮ್ಮುತ್ತದೆ. ಆಗ ನಾಗರಹೊಳೆ, ಬಂಡೀಪುರ, ಮದುಮಲೈ, ವೈನಾಡಿನ ಆನೆಗಳು, ಕಾಡುಕೋಣಗಳು ಹಿಂಡುಹಿಂಡಾಗಿ ಹಿನ್ನೀರಿನತ್ತ ವಲಸೆ ಬರುತ್ತವೆ. ಆಗ ಒಮ್ಮಗೇ ೬೦ ರಿಂದ ೭೦ ಆನೆಗಳು ಹಿಂಡು ಹಿಂಡಾಗಿ ಕಾಣಿಸುತ್ತವೆ. ದೋಣಿಯಲ್ಲಿ ಕುಳಿತು ಆನೆಗಳ ಹಿಂಡನ್ನು ಬಿದಿರ ಹಿನ್ನೆಲೆಯಲ್ಲಿ ನೋಡಲು ತುಂಬಾ ಚೆನ್ನಾಗಿರುತ್ತದೆ. ಒಣ ಮರಗಳ ಮೇಲೆ ಕುಳಿತ ಬೆಳ್ಳಕ್ಕಿಗಳು, ನೀರು ಕಾಗೆಗಳು, ಸ್ನೇಕ್ ಬರ್ಡ್, ಮಿಂಚುಳ್ಳಿಗಳು, ಹದ್ದುಗಳು, ಬಾತುಗಳು ಇತ್ಯಾದಿ ಹಕ್ಕಿಗಳನ್ನು ನೋಡುತ್ತಾ ಸಾಗಿದಂತೆ ನಮ್ಮ ಎಣಿಕೆಯೇ ತಪ್ಪುತ್ತದೆ.

ಭಾರತದ ದಕ್ಷಿಣ ತುದಿಯಿಂದ ಪ್ರಾರಂಭವಾಗಿ ಗುಜರಾತ್‌ವರೆಗೆ ೧,೬೦೦ ಕಿಮೀ ಉದ್ದದ, ೧,೬೦,೦೦೦ ಚದರ ಕಿಮೀ ವ್ಯಾಪ್ತಿಯ ಪಶ್ಚಿಮಘಟ್ಟವನ್ನು ದೇಶದ ಅತಿದೊಡ್ಡ ಜೈವಿಕ ತಾಣವೆಂದು ಪರಿಗಣಿಸಲಾಗಿದೆ. ಇದರ ಪ್ರತಿನಿಧಿಯಾದ ಕಬಿನಿ ಸುತ್ತಮುತ್ತಲ ತಾಣ ಜೀವವೈವಿದ್ಯದ ದರ್ಶನ ಮಾಡಿಸುವಲ್ಲಿ ಹೇಳಿ ಮಾಡಿಸಿದಂತ ತಾಣ.


ಮಲಬಾರ್ ಜೈಂಟ್ ಸ್ಕ್ವಿರ್ಲ್


ಬಾರ್ಕಿಂಗ್ ಡೀರ್


ಆಸ್ಪ್ರೇ ಹಕ್ಕಿ


ಸ್ನೇಕ್ ಬರ್ಡ್


ಆಸ್ಪ್ರೇ ಹಕ್ಕಿ


ನೀರು ಕಾಗೆ

Tuesday, June 1, 2010

ಎರಡು ಕನಸು!
ಮಗನನ್ನು ಶಾಲೆಯ ಬಸ್ಸಿಗೆ ಹತ್ತಿಸಿ ಹಾಗೇ ವೆಂಕಟರಮಣನ ಹೋಟೆಲ್ ಮುಂದೆ ಬಂದೆ. ಹೊರಗೆ ನಿಂತಿದ್ದ ಅವನನ್ನು ಕಂಡು ಹಿಂದಿನ ದಿನ ಧರ್ಮಸ್ಥಳಕ್ಕೆ ಹೋಗುತ್ತೇನೆಂದು ಹೇಳಿದ್ದುದು ನೆನಪಿಗೆ ಬಂತು.
ಬೈಕ್ ನಿಲ್ಲಿಸಿ, “ಏನ್ ಸಮಾಚಾರ ಧರ್ಮಸ್ಥಳಕ್ಕೆ ಹೋಗ್ತೀನಂತ ಹೇಳಿ ಪ್ಯಾಂಟು ಷರ್ಟು ಹಾಕಿರುವ ಗೊಮ್ಮಟೇಶ್ವರನ ಥರಾ ನಿಂತಿದ್ದೀಯ?” ಎಂದು ಕಿಚಾಯಿಸಿದೆ.
ಮುಖ ಒಂಥರಾ ಅರಳೆಣ್ಣೆ ಕುಡಿದವನಂತೆ ಮಾಡಿಕೊಂಡು, “ಅಷ್ಟು ದೂರ ಬಿಸಿಲಲ್ಲಿ ಇವನ್ಯಾಕೆ ಬರ್ಬೇಕು ಅಂತ ದೇವರೇ ನನ್ಮುಂದೆ ಪ್ರತ್ಯಕ್ಷ ಆಗ್ಬಿಟ್ಟಿದ್ದಾನೆ” ಅಂದ.
ಚಿಕ್ಕ ವಯಸ್ಸಿಗೇ ಬಹಳ ಕಷ್ಟ ನಷ್ಟಗಳನ್ನು ಅನುಭವಿಸಿ ಜೀವನಾನುಭವ ಪಡೆದಿರುವ ಇವನು ಅರ್ಧ ತೋಳಿನ ಅಂಗಿ ಧರಿಸಿ ನಿಂತಿದ್ದರೆ, ಚಿಕ್ಕ ವಯಸ್ಸಿನವನಂತೆ, ಏನೂ ತಿಳಿಯದವನಂತೆ ಕಾಣುತ್ತಾನೆ. ಇವನಿಂದ ದೇವರ ಮಾತು ಹೊರಗೆ ಬರಲು ಹೊಟ್ಟೆಯೊಳಕ್ಕೆ ಕಾಫಿ ಕಳಿಸಬೇಕು!
ಇಬ್ಬರೂ ಭುಜಂಗನ ಹೋಟೆಲಿಗೆ ಹೋದೆವು. “ಪ್ರಕಾಶ ಎರ್ಡು ಪಾರ್ಟ್ ಕಾಫಿ” ಎಂದು ಹೇಳಿ ವೆಂಕಟರಮಣನಿಗೆ, “ದೇವರ ವಿಷ್ಯ ಏನು?” ಎಂದು ಕೇಳಿದೆ.
“ಭಾನುವಾರ ರಶ್ಶಿರುತ್ತೆ ನಾಳೆ ಗುರುವಾರ ಧರ್ಮಸ್ಥಳಕ್ಕೆ ಹೊರಡೋಣ ಅಂದಿದ್ದ ವೆಂಕಟರೆಡ್ಡಿ. ಬೆಳಿಗ್ಗೆ ಎಲೆಕ್ಟ್ರಿಕ್ ಕಂಬದಲ್ಲಿ ಶಾರ್ಟ್ ಆಗಿದೆ. ಮಸಾಲೆ ಅರೆಯಲು ಗ್ರೈಂಡರ್ ಆನ್ ಮಾಡ್ತಿದ್ದಂತೆ ಮೋಟರ್ ಸುಟ್ಟು ಹೋಯಿತು. ಮೂರು ಸಿಎಫ್ಎಲ್ ಬಲ್ಪುಗಳು ಬರ್ನ್ ಆದವು. ಯುಜಿಡಿ ಬ್ಲಾಕ್ ಆಗಿ ಹೋಟೆಲ್ನಿಂದ ಪಾತ್ರೆ ತೊಳೆದ ನೀರು ಹೊರಕ್ಕೆ ಹೋಗ್ತಾಯಿಲ್ಲ. ಲೈನ್ ಮನ್‌ನ ಕರೆದುಕೊಂಡು ಬಂದಿದ್ದೆ. ವೈರುಗಳು ಮೆಲ್ಟಾಗಿದೆ, ಸುಟ್ಟು ಹೋಗಿದೆ. ಬದಲಾಯಿಸೆಂದ. ಮೇಲೆ ನೀರಿನ ಟ್ಯಾಂಕಲ್ಲಿ ನೀರು ಖಾಲಿಯಾಗಿದೆ. ಸಂಪಲ್ಲಿರುವ ನೀರನ್ನು ಪಂಪ್ ಮಾಡಲು ಆಗಲ್ಲ...” ಎಂದು ನಿರ್ವಿಕಾರವಾಗಿ ಹೇಳತೊಡಗಿದ.
ಕೇಳುತ್ತಿದ್ದ ನನಗೇ ಸಮಸ್ಯೆಗಳ ನಂದಿಬೆಟ್ಟವೇ ಮೇಲೆ ಬಿದ್ದಂತಾಗಿ ಹೌಹಾರಿದೆ.
ಶಕುನಗಳು, ಕನಸಿನ ಪ್ರಭಾವ ಮುಂತಾದವುಗಳನ್ನು ವೆಂಕಟರಮಣ ನಂಬುತ್ತಾನೆ. ಎಲ್ಲ ದಿವ್ಯಾಸ್ತ್ರಗಳೂ ಒಟ್ಟಿಗೇ ಪ್ರಯೋಗ ಆಗಿರುವಾಗ ಇದರ ಮುನ್ಸೂಚನೆ ಕೂಡ ಸಿಕ್ಕಿರಬೇಕಲ್ಲ ಎಂಬ ವಿಚಿತ್ರ ತರ್ಕದಿಂದ, “ಹೀಗೆಲ್ಲಾ ಆಗುತ್ತೆ ಅಂತ ಏನಾದರೂ ಕನಸು ಬಿದ್ದಿತ್ತಾ?” ಅಂತ ಕೇಳಿದೆ.
“ಅಯ್ಯೋ ಕನಸುಗಳಿಗೇನು ಬರ. ಮೊನ್ನೆ ಒಂದು ವಿಚಿತ್ರವಾದ ಕನಸು ಬಿದ್ದಿತ್ತು. ನಿಮಗೆ ಹೇಳ್ಬೇಕೂಂತ ಇದ್ದೆ” ಅಂದ. ತಕ್ಷಣ, “ಪ್ರಕಾಶ ಇನ್ನೊಂದು ಪಾರ್ಟ್ ಕಾಫಿ” ಎಂದು ಹೇಳಿ ಕೇಳಲು ಕುಳಿತೆ.
“ನಮ್ಮ ಅಡುಗೆ ಭಟ್ಟ ಮುರುಗ ಗೊತ್ತಲ್ಲ. ಅವನಿಲ್ಲದಿದ್ದರೆ ನನ್ನ ಕೈ ಕತ್ತರಿಸಿದಂತೆ ಆಗುತ್ತೆ. ಮೊನ್ನೆ ಕನಸಲ್ಲಿ ಅವನು ಸತ್ತುಹೋಗಿದ್ದ! ಕೆರೆ ಪಕ್ಕ ಹೆಣ ಹೂಳಲು ಜಾಗ ನೋಡಿಕೊಂಡು ಬರಲು ನನ್ನ ತಮ್ಮ ಗೋಪಾಲನನ್ನು ಕಳಿಸಿದೆ. ಹೊರಗೆ ವಿಪರೀತ ಮಳೆ ಬರುತ್ತಿತ್ತು. ಗೋಪಾಲ ಬಂದವನು ನೀರೆಲ್ಲ ತುಂಬಿದೆ ಹೆಣ ಹೂಳಲು ಜಾಗಾನೇ ಇಲ್ಲ ಅಂದ.
ಏನು ಮಾಡುವುದು ಅಂದುಕೊಂಡು ಹೊರಗೆ ಬಂದೆ. ಮುನಿಸಿಪಾಲಿಟಿಯವರು ಆಟೋಗೆ ಮೈಕಿಟ್ಟು ಹೆಣಗಳನ್ನು ಜ್ಯೂನಿಯರ್ ಕಾಲೇಜಿನ ಮೈದಾನಕ್ಕೆ ಸಾಗಿಸಿ ಸುಡಿ ಎಂದು ಜೋರಾಗಿ ಅನೌನ್ಸ್ ಮಾಡುತ್ತಿದ್ದಾರೆ. ಹೆಣ, ಸೌದೆ ಎಲ್ಲ ಮೈದಾನಕ್ಕೆ ಸಾಗಿಸಿದೆವು. ಅಲ್ಲಿ ಆಗಲೇ ಸಾಕಷ್ಟು ಜನ ಸೌದೆ ಇಟ್ಟು ಹೆಣಗಳನ್ನು ಮಲಗಿಸಿದ್ದರು. ನಾವೂ ಜಾಗ ಮಾಡಿಕೊಂಡು ಸೌದೆ ಜೋಡಿಸಿ ಮುರುಗನನ್ನು ಮಲಗಿಸಿದೆವು. ಗೋಪಾಲ ಮನೆಯಲ್ಲಿ ಕೆಲಸವಿದೆಯೆಂದು ಹೊರಟುಬಿಟ್ಟ. ಮಳೆಗೆ ನೆನೆದ ಸೌದೆ ಉರಿಯದು. ಸೀಮೆ ಎಣ್ಣೆ ಮರೆತು ಬಂದಿದ್ದೆ. ಬೇರೆಯವರದ್ದೂ ಅದೇ ಕಥೆ. ಒಬ್ಬೊಬ್ಬರೇ ಸೀಮೆ ಎಣ್ಣೆ ತರ್ತೀನಿ ನನ್ನ ಹೆಣ ನೋಡಿಕೋ ಅಂತ ಹೇಳಿ ಹೊರಟರು. ನನಗೂ ಸೀಮೆ ಎಣ್ಣೆ ಬೇಕು ಅಂದೆ. ನಾವೆಲ್ಲ ಸ್ವಲ್ಪ ಜಾಸ್ತಿ ತಂದರೆ ನಿನಗಾಗುತ್ತೆ ಇಲ್ಲೇ ಇರು ಎಂದು ಹೇಳಿ ಎಲ್ಲರೂ ಜಾಗ ಖಾಲಿ ಮಾಡಿದರು. ಅಲ್ಲುಳಿದದ್ದು ಹೆಣಗಳು ಮತ್ತು ನಾನು ಮಾತ್ರ.
ನೋಡುತ್ತಿದ್ದಂತೆಯೇ ಒಂದೊಂದೇ ಹೆಣಗಳು ಎದ್ದು ಓಡಾಡತೊಡಗಿದವು. ಅರೆ! ಅದರ ಯಜಮಾನ ಬಂದರೆ ಏನು ಹೇಳುವುದು? ಹೋಗಿ ಒಬ್ಬೊಬ್ಬರನ್ನೇ ಮಲಗಿಸತೊಡಗಿದೆ. ಒಂದನ್ನು ಮಲಗಿಸುವಷ್ಟರಲ್ಲಿ ಇನ್ನೆರಡು ಓಡಾಡುತ್ತಿದ್ದವು. ಎಷ್ಟು ಹೊತ್ತಾದರೂ ಯಾರೂ ಬರಲಿಲ್ಲ. ನನಗೆ ಮಾತ್ರ ಬಿಡುವಿರದ ಕೆಲಸ! ಅಷ್ಟರಲ್ಲಿ ಮುರುಗ ಎದ್ದು ಮೈಮುರಿದು “ಹೋಗಣ್ಣೋ ಎಷ್ಟು ಹೊತ್ತು ಮಲಗೋದು. ನನಗೆ ಬೇಜಾರು” ಅಂತ ಹೇಳಿದವನು ನನ್ನ ಮಾತಿಗೂ ಕಾಯದೆ ಸೀದಾ ಮನೆಕಡೆ ಹೊರಟುಬಿಟ್ಟ...”
“ಏನ್ಸಾರ್ ಇನ್ನೊಂದೊಂದು ಪಾರ್ಟ್ ಕಾಫಿ ಕೊಡ್ಲಾ?” ಎಂದು ಕೇಳಿ ಹೋಟೆಲಿನ ಪ್ರಕಾಶ ವೆಂಕಟರಮಣನ ಕಥೆಗೆ ಬ್ರೇಕ್ ಹಾಕಿದ.
“ಅಯ್ಯೋ ಲೇಟಾಗುತ್ತೆ, ರೆಡಿಯಾಗಿ ಹೊರಡಬೇಕು, ನಮ್ಮಜ್ಜಿ ತಿಥಿಯಿದೆ. ಮಧ್ಯಾಹ್ನದೊಳಗೆ ಬಂದುಬಿಡ್ತೀನಿ” ಎಂದು ಹೇಳುತ್ತಾ ಎದ್ದ ವೆಂಕಟರಮಣ.
“ಎಲ್ಲಿಗೆ ಹೋಗ್ತಿರೋದು?” ಎಂದು ಕೇಳಿದೆ.
“ವಿಜಯಪುರ ಆಚೆ ಇರೋ ನಾರಾಯಣಪುರದಲ್ಲಿ ಅವರ ಮಣ್ಣು ಮಾಡಿರೋದು. ಅಲ್ಲಿಗೆ ಹೋಗಿ ಬರಬೇಕು. ಇಲ್ಲೇ ಮಣ್ಣ ಮಾಡೋಣ ಅಂದ್ರೆ ಕೇಳಬೇಕಲ್ಲ. ನಮ್ಮಜ್ಜಿ ಕನಸಲ್ಲೆಲ್ಲಾ ಬಂದು ಕಾಟ ಕೊಡ್ತಿದ್ರು” ಅಂದ.
“ಅಂದ್ರೆ, ಸಾಯೋದಕ್ಕೆ ಮುಂಚೆ ಏನಾದ್ರೂ ಒಪ್ಪಂದ ಆಗಿತ್ತಾ?”ಎಂದು ಕೇಳಿದೆ.
“ನಮ್ಮ ತಾತನನ್ನು ಆ ಕಾಲದಲ್ಲಿ ನಾರಾಯಣಪುರದ ನಮ್ಮ ಕಡೆಯವರ ಜಮೀನಿನಲ್ಲಿ ಹೂತಿದ್ದರಂತೆ. ನಮ್ಮಜ್ಜಿ ಯಾವಾಗ್ಲೂ ನನ್ನನ್ನು ಸತ್ತ ಮೇಲೆ ನಿಮ್ಮ ತಾತನ ಪಕ್ಕದಲ್ಲೇ ಹೂಣಬೇಕು ಅನ್ನುತ್ತಿದ್ದರು. ಅವರು ಹಾಗಂದಾಗಲೆಲ್ಲ ನಿಂಗೇನು ಗೊತ್ತಾಗುತ್ತಾ ನಾವು ಎಲ್ಲಿ ಹೂಳ್ತೀವಿ ಅಂತ ರೇಗಿಸ್ತಿದ್ದೆ. ಪ್ರತಿವರ್ಷ ನಮ್ಮ ತಾತನ ತಿಥಿಗೆ ಪೂಜೆಗೆ ಹೋದಾಗಲೆಲ್ಲಾ ನಮಗೆ ಸಾಕು ಸಾಕಾಗುತ್ತಿತ್ತು. ಸಮಾಧಿ ಸುತ್ತಮುತ್ತ ಮುಳ್ಳು ಕಂಪೆಗಳು ಬೆಳೆದು ಅಲ್ಲಿಗೆ ಹೋಗೋದಕ್ಕೇ ಆಗೋದಿಲ್ಲ. ಆಗೆಲ್ಲಾ ನಮ್ಮಜ್ಜಿದು ಊರ ಹತ್ತಿರವೇ ಮಾಡಬೇಕು ಅಂದುಕೊಳ್ಳುತ್ತಿದ್ದೆ. ಆದರೆ ಪದೇ ಪದೇ ಒಂದು ಕನಸು ಬೀಳಲು ಶುರುವಾಗಿ ನನ್ನ ನಿರ್ಧಾರ ಬದಲಿಸಬೇಕಾಯ್ತು.
ಕನಸಿನಲ್ಲಿ ನಮ್ಮಜ್ಜಿ ತೀರಿಕೊಂಡಿದ್ದರು. ಆ ಮುಳ್ಳುಕಂಪೆ ತರಿದು ಗುಣಿ ಒಡೆಯಲು ಯಾರೂ ಮುಂದೆ ಬರದೆ ಕೊನೆಗೆ ನಮ್ಮಪ್ಪ ಬೇಜಾರಾಗಿ ಅಲ್ಲೇ ಕುಂಟೆ ಪಕ್ಕದ ಕಟ್ಟೆ ಮೇಲೆ ಸುಟ್ಟು ಬಿಡೋಣ ಅಂದ್ರು. ಅಜ್ಜಿ ಯಾವಾಗ್ಲೂ ತಾತನ ಪಕ್ಕ ಮಣ್ಣು ಮಾಡು ಅಂತಿದ್ಲಲ್ಲ ಅಂದೆ. ಈ ಮುಳ್ಳುಗಳನ್ನು ತೆಗೆಯಲು ಆಗಲ್ಲ, ಪರವಾಗಿಲ್ಲ ಬಿಡೋ ಅಂದ್ರು ಅಪ್ಪ. ಅಲ್ಲೇ ಸೌದೆ ತರಿಸಿ, ಹೆಣಕ್ಕೆ ಬೆಂಕಿ ಇಟ್ಟು ವಾಪಸಾಗುತ್ತಿದ್ದೆವು. ಹಿಂದೇನೇ ಸತ್ತಿದ್ದ ನಮ್ಮಜ್ಜಿ ಎದ್ದು ಬಂದುಬಿಟ್ಲು. ನಮ್ಮನ್ನು ಚೆನ್ನಾಗಿ ಬಯ್ಯಲು ಶುರುಮಾಡಿದಳು. ನಾನೇಳಿದ್ದೇನು? ನೀವು ಮಾಡ್ತಿರೋದೇನು? ನಿಮಗೆ ಜ್ಞಾನ ಇಲ್ವಾ?.... ಸಹಸ್ರನಾಮ ಪ್ರಾರಂಭಿಸಿದಳು... ಎರಡು ಮೂರು ಬಾರಿ ನಮ್ಮಜ್ಜಿ ಬದುಕಿರುವಾಗಲೇ ಈ ಕನಸು ಬಿದ್ದಿತ್ತು. ಹಾಗಾಗಿ ಅವರು ಸತ್ತ ಮೇಲೆ ಅಲ್ಲೇ ತಾತನ ಪಕ್ಕದಲ್ಲೇ ಮಣ್ಣು ಮಾಡಿದ್ವಿ. ಸರಿ, ಮಧ್ಯಾಹ್ನ ಸಿಗ್ತೀನಿ” ಎನ್ನುತ್ತಾ ಹೊರಟ ವೆಂಕಟರಮಣ.