Monday, July 16, 2012

ಗಂಜಿಗುಂಟೆಯ ಗೆರಿಗಿಗುಂಡು

 
ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆ ಗ್ರಾಮದಲ್ಲಿರುವ ಗುಡ್ಡದ ಮೇಲಿನ ಬೃಹದಾಕಾರದ ಗೆರಿಗಿಗುಂಡು.


ಹಿಂದೆ ಬೆಟ್ಟಗುಡ್ಡಗಳ ಪ್ರದೇಶವನ್ನು ಪಾಳೇಗಾರರು ಆಯ್ದುಕೊಂಡು ತಮ್ಮ ರಕ್ಷಣಾ ಸ್ಥಾನವನ್ನಾಗಿಸಿಕೊಳ್ಳುತ್ತಿದ್ದರು. ಅಂಥಹ ಪ್ರದೇಶಗಳು ಈಗಿನ ಕಾಲದಲ್ಲಿ ಹಳೆಯ ನೆನಪುಗಳ ಪಳೆಯುಳಿಕೆಗಳಾಗಿ ನಿಸರ್ಗದತ್ತ ಆಕರ್ಷಕ ಪ್ರದೇಶಗಳಾಗಿ ಮಾರ್ಪಾಡಾಗಿವೆ.
 ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆ ಗ್ರಾಮಕ್ಕೆ ಹೊಂದಿಕೊಂಡಿರುವ ಗೆರಿಗಿಗುಂಡು ಇಂಥಹ ಸೋಜಿಕ ಸ್ಥಳಗಳಲ್ಲೊಂದು. ಊಹಿಸಲಸಾಧ್ಯವಾದ ಬೃಹದಾಕಾರದ ಕಲ್ಲಿನ ಗುಂಡು ಇಲ್ಲಿ ಗುಡ್ಡದ ಮೇಲ್ಭಾಗದಲ್ಲಿದೆ. ಈ ಗುಡ್ಡದಲ್ಲಿ ಹಲವಾರು ದೊಡ್ಡ ಆಕಾರದ ಕಲ್ಲುಗುಂಡುಗಳಿದ್ದರೂ ಈ ಗುಂಡು ಮಾತ್ರ ಅತಿ ದೊಡ್ಡದು. ಇದನ್ನು ಹಿಂದಿನಿಂದಲೂ ಇಲ್ಲಿನವರು ಗೆರಿಗಿಗುಂಡು ಎಂದೇ ಕರೆಯುತ್ತಾರೆ.
 ಈ ಬೃಹತ್ತಾದ ಗೆರಿಗಿಗುಂಡಿನ ಮೇಲೆ ಹಿಂದೆ ಪಾಳೆಗಾರರು ನಿರ್ಮಿಸಿದ್ದ ಬುರುಜಿನ ಕೆಲ ಭಾಗವಿದ್ದು, ಇದೊಂದು ಅವರ ರಕ್ಷಣಾ ಸ್ಥಾನವಾಗಿರಬಹುದೆಂಬುದಕ್ಕೆ ಪುರಾವೆ ಸಿಗುತ್ತದೆ. ಇಲ್ಲಿ ಮನುಷ್ಯನ ಮುಖದ ಆಕಾರದ ಕಲ್ಲು ಬಂಡೆಗಳು, ತ್ರಿಕೋನಾಕಾರದ್ದು, ಇನ್ನೇನು ಬೀಳುತ್ತದೆಯೋ ಎಂದು ಗಾಬರಿಹುಟ್ಟಿಸುವಂತದ್ದು ಮುಂತಾದ ವಿವಿಧ ರೂಪಗಳನ್ನು ಗುರುತಿಸಬಹುದಾದ ಬಂಡೆಕಲ್ಲುಗಳಿವೆ.
 ಗ್ರಾಮಸ್ಥರು ಗೆರಿಗಿಗುಂಡಿನ ಕೆಳಗೆ ಗೆರಿಗಿಲಮ್ಮ ದೇವಾಲಯವನ್ನು ನಿರ್ಮಿಸಿದ್ದಾರೆ. ಗೆರಿಗಿಗುಂಡು ಮುಂಭಾಗದಲ್ಲಿ ಮುಜರಾಯಿ ಇಲಾಖಾ ವ್ಯಾಪ್ತಿಗೆ ಬರುವ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯವಿದೆ. ಇಲ್ಲಿ ಪ್ರತಿ ವರ್ಷ ಕಾಮನ ಹುಣ್ಣಿಮೆಯಂದು ವಿಶೇಷ ಜಾತ್ರೆಯನ್ನು ನಡೆಸಲಾಗುತ್ತದೆ.

 
ಮನುಷ್ಯನ ಮುಖವನ್ನು ಹೊಲುವ ಕಲ್ಲುಗಳು.


‘ಪಾಳೇಗಾರರು ಇಲ್ಲಿ ಕೋಟೆಯನ್ನು ನಿರ್ಮಿಸಿದ್ದರಂತೆ. ಅವರು ಇಲ್ಲಿ ಏಳು ಕೊಪ್ಪರಿಗೆ ನಿಧಿ ನಿಕ್ಷೇಪವನ್ನು ಇಟ್ಟಿರುವರೆಂದು ದಂತಕಥೆಗಳು ಈಗಲೂ ಗ್ರಾಮದ ಹಿರಿಯರ ಬಾಯಲ್ಲಿ ಕೇಳಬಹುದಾಗಿದೆ. ಪಾಳೇಗಾರರು ಗಂಜಿಗುಂಟೆಯ ಸುತ್ತಮುತ್ತಲೂ ಏಳು ಕೆರೆಗಳನ್ನು ನಿರ್ಮಿಸಿದ್ದರು. ಇಲ್ಲಿ ಬಹಳ ಜನರಿದ್ದು ಪ್ರತಿದಿನ ಅನ್ನ ಬಸಿದ ಗಂಜಿ ಒಂದು ದೊಡ್ಡ ಗುಣಿಯಲ್ಲಿ ಶೇಖರಣೆಯಾಗುತ್ತಿತ್ತು. ಅದರಿಂದಲೇ ಈ ಪ್ರದೇಶಕ್ಕೆ ಗಂಜಿಗುಂಟೆ ಎಂಬ ಹೆಸರು ಬಂತು. ಇಲಿನ ಗೆರಿಗಿಗುಂಡಿನ ಕೆಳಗೆ ಒಂದು ದೊಡ್ಡ ಗವಿಯಿದೆ. ಇಲಿ ಸಾಧುಗಳು ವಾಸವಿರುತ್ತಾರೆ’ ಎಂದು ಗಂಜಿಗುಂಟೆಯ ಶಾಲಾ ಶಿಕ್ಷಕ ಎಲ್.ವಿ.ವೆಂಕಟರೆಡ್ಡಿ ತಿಳಿಸಿದರು.


 
ವಾಲಿ ನಿಂತಿರುವ ಬಂಡೆಯ ಮೇಲೂ ಕಲ್ಲಿನ ಗೋಪುರ.

‘ವರ್ಷಕ್ಕೊಮ್ಮೆ ಮಾಘ ಪೌರ್ಣಮಿಯಂದು ಗುರುವಂದನಾ ಹಾಗೂ ಭಜನೆ ಕಾರ್ಯಕ್ರಮವನ್ನು ಗ್ರಾಮಸ್ಥರು ಹಮ್ಮಿಕೊಳ್ಳುತ್ತಾರೆ. ಇಲ್ಲಿಗೆ ಹತ್ತಿರವಿರುವ ತಲಕಾಯಲಬೆಟ್ಟದಲ್ಲಿ ನಡೆಯುವ ರಥೋತ್ಸವದ ದಿನ ಇಲ್ಲಿನ ಗೆರಿಗಿಗುಂಡು ಗವಿಯಲ್ಲಿ ಅನ್ನಸಂತರ್ಪಣೆಯನ್ನು ಮಾಡಲಾಗುತ್ತದೆ. ಇಲ್ಲಿನ ವಾತಾವರಣವಂತೂ ಅದ್ಭುತವಾಗಿದೆ. ಮೇಲಿನಿಂದ ಕಾಣುವ ಭೂದೃಶ್ಯಗಳು ಕಣ್ಣಿಗೆ ಆನಂದ ನೀಡಿದರೆ, ಹೊರಗೆ ಎಷ್ಟೇ ಬಿಸಿಯಿದ್ದರೂ ಗೆರಿಗಿಗುಂಡಿನ ಕೆಳಗೆ ಸದಾ ತಂಪಾಗಿದ್ದು ಜೀವಕ್ಕೆ ತಂಪೆನಿಸುವಂತಿರುತ್ತದೆ. ಗುಡ್ಡ ಹತ್ತಿ ಇಲ್ಲಿನ ಪ್ರಶಾಂತ ವಾತಾವರಣದಲ್ಲಿ ಕೆಲಹೊತ್ತು ಇದು ಬಂದರೆ ದೇಹ ಮತ್ತು ಮನಸ್ಸಿಗೆ ನವಚೈತನ್ಯ ಬರುತ್ತದೆ’ ಎಂದು ಅವರು ವಿವರಿಸಿದರು.

Friday, July 13, 2012

ಕೀಟ ಬೇಟೆ

ಚೀಲದಲ್ಲಿ ತುಂಬಿರುವ ಈಸುಳ್ಳಿಗಳು.

ಮಾನವನ ಆಹಾರಪದ್ಧತಿಯಲ್ಲಿ ಕೀಟಭಕ್ಷಣೆಯೂ ಸೇರಿದೆ. ಎಲೆಗಳನ್ನು ಸೇರಿಸಿ ಗೂಡು ಕಟ್ಟುವ ಕಟ್ಟಿರುವೆ, ಜೇನು ಹುಟ್ಟಿನಲ್ಲಿರುವ ಹಾಲುಳ ಎನ್ನುವ ಬಿಳಿಹುಳಗಳು, ಅತ್ತಿ ಹಣ್ಣಿನಲ್ಲಿನ ಹುಳುಗಳು ಹಾಗೂ ಮಳೆಹುಳುಗಳು ಗ್ರಾಮೀಣ ಭಾಗದ ಜನರ ಆಹಾರದ ಒಂದು ಭಾಗವಾಗಿದೆ. ರುಚಿ ಮತ್ತು ಪ್ರೋಟೀನ್ ಅಂಶ ಹೆಚ್ಚಿರುವುದರಿಂದ ಹಲವರು ಇದನ್ನು ಇಷ್ಟಪಟ್ಟು ತಿನ್ನುತ್ತಾರೆ ಮತ್ತು ಮಕ್ಕಳಿಗೂ ತಿನ್ನಿಸುತ್ತಾರೆ.
 ಈಚೆಗೆ ಬಿದ್ದ ಭರಣಿ ಮಳೆಗೆ ನೆಲದಾಳದಿಂದ ರೆಕ್ಕೆ ಮೂಡಿದೊಡನೆ ಮೇಲೇಳುತ್ತಿದ್ದ ಗೆದ್ದಲು ಹುಳುಗಳನ್ನು ಶಿಡ್ಲಘಟ್ಟ ತಾಲ್ಲೂಕಿನ ಕಾಚನಾಯಕನಹಳ್ಳಿಯ ಹೊರವಲಯದಲ್ಲಿ ಪಂಜಿನ ಸಹಾಯದಿಂದ ಗ್ರಾಮಸ್ಥರು ಹಿಡಿದು ಗುಡ್ಡೆ ಹಾಕಿ ಚೀಲದೊಳಕ್ಕೆ ತುಂಬುತ್ತಿದ್ದರು. ಅತ್ಯಂತ ರುಚಿಕರ ಆಹಾರವೆಂಬುದು ಇದನ್ನು ಗ್ರಾಮೀಣರು ಇಷ್ಟಪಡುತ್ತಾರೆ.
 ರೆಕ್ಕೆಬಂದಿರುವ ಗೆದ್ದಲು ಹುಳುಗಳನ್ನು ಗ್ರಾಮೀಣರು ಈಸುಳ್ಳಿ, ಈಸಿಳ್ಳು, ಈಸೀಗಳು ಎಂದು ಕರೆಯುತ್ತಾರೆ. ಹಲವಾರು ಹಳ್ಳಿಗಳಲ್ಲಿ ಮಳೆ ಬಂದು ನಿಂತ ದಿನ ಹುಳುಗಳನ್ನು ಹಿಡಿಯುವುಕ್ಕೇ ಸಮಯ ಮೀಸಲಿಡುತ್ತಾರೆ. ಬೆಳಕಿನೆಡೆಗೆ ಆಕರ್ಷಿತವಾಗುವ ಈ ಹುಳುಗಳನ್ನು ಜನರು ಪಂಜು, ಲೈಟು, ಬೆಂಕಿ, ಲ್ಯಾಟೀನು ಮುಂತಾದವುಗಳಿಂದ ಆಕರ್ಷಿಸಿ ಒಟ್ಟುಗೂಡಿಸಿ ಸಂಗ್ರಹಿಸುತ್ತಾರೆ.
ಅಶ್ವಿನಿ, ಭರಣಿ ಮತ್ತು ಕೃತಿಕಾ ಮಳೆಯ ಸಂದರ್ಭದಲ್ಲಿ ಮಾತ್ರ ಸಿಗುವ ಈ ಮಳೆಹುಳುಗಳ ಸಂಗ್ರಹಣೆಗೆ ಹಲವು ಉಪಾಯಗಳನ್ನೂ ಮಾಡುತ್ತಾರೆ. ನೆಲಮಟ್ಟದಲ್ಲಿ ನೀರಿರುವ ಮಡಿಕೆಯನ್ನು ಹೂತಿಟ್ಟು ಅದರ ಬಾಯಿಯ ಬಳಿ ಬೆಳಕಿನ ಮೂಲವನ್ನಿಟ್ಟು ಕೆಲವರು ಹಿಡಿದರೆ, ಕೆಲವರು ಹುತ್ತವನ್ನು ಹುಡುಕಿ ಅದರ ಮೇಲೆ ಸೊಪ್ಪಿನ ಗುಡಾರವನ್ನು ನಿರ್ಮಿಸಿ ಬೆಳಕಿನ ಮೂಲವನ್ನಿಟ್ಟು ಹುಳುಗಳನ್ನು ಸಂಗ್ರಹಿಸುವರು. ಕೆಲವು ಹಳ್ಳಿಗಳಲ್ಲಿ ಒಂದು ಲೋಟ ಹುಳುಗಳನ್ನು ೮ ರಿಂದ ೧೦ ರೂಗಳಿಗೆ ಮಾರಾಟವನ್ನೂ ಮಾಡುವುದೂ ಉಂಟು.

 
ಶಿಡ್ಲಘಟ್ಟ ತಾಲ್ಲೂಕಿನ ಕಾಚನಾಯಕನಹಳ್ಳಿಯ ಹೊರವಲಯದಲ್ಲಿ ಈಚೆಗೆ ಬಿದ್ದ ಭರಣಿ ಮಳೆಗೆ ನೆಲದಾಳದಿಂದ ರೆಕ್ಕೆ ಮೂಡಿದೊಡನೆ ಮೇಲೇಳುತ್ತಿದ್ದ ಗೆದ್ದಲುಹುಳುಗಳನ್ನು ಪಂಜಿನ ಸಹಾಯದಿಂದ ಗ್ರಾಮಸ್ಥರು ಹಿಡಿದು ಗುಡ್ಡೆ ಹಾಕಿ ಚೀಲದೊಳಕ್ಕೆ ತುಂಬುತ್ತಿರುವುದು. 


‘ಈ ಮಳೆಹುಳುಗಳನ್ನು ಸಂಗ್ರಹಿಸುವುದು ಒಂದು ಭಾಗವಾದರೆ ಇದರ ಸಂಸ್ಕರಣೆ ಮತ್ತೊಂದು ಮುಖ್ಯ ಭಾಗ. ರೆಕ್ಕೆ ಕಳಚಿರುವ ಹುಳುಗಳನ್ನು ಬತ್ತದ ಜರಡಿಯಲ್ಲಿ ಹಾಕಿ ಕಲಕಿ ರೆಕ್ಕೆ ಹಾಗೂ ಇನ್ನಿತರ ಕಸದಿಂದ ಬೇರ್ಪಡಿಸುತ್ತಾರೆ. ಬಿಸಿಲಿನಲ್ಲಿ ಒಣಗಿಸುತ್ತಾರೆ. ನಂತರ ಬಾಣಲಿಯಲ್ಲಿ ಹದವಾಗಿ ಹುರಿಯಲಾಗುತ್ತದೆ. ಇದಕ್ಕೆ ಬೆಳ್ಳುಳ್ಳಿ, ಉಪ್ಪು ಮೆಣಸು ಸೇರಿಸಿದರೆ ರುಚಿಕಟ್ಟಾದ ಆಹಾರವಾಗುತ್ತವೆ. ಇದರಲ್ಲಿ ಯಥೇಚ್ಛವಾಗಿ ಪ್ರೋಟೀನ್ ಅಂಶವಿರುವುದರಿಂದ ಮಕ್ಕಳಿಗೂ ಒಳ್ಳೆಯದು. ಹಿಂದೆ ಎಳೆಯ ಮಕ್ಕಳು ಬಡಕಲಾಗಿದ್ದರೆ ಅಂತಹ ಮಕ್ಕಳಿಗೆ ಹುತ್ತದ ತಳದಲ್ಲಿರುವ ದೊಡ್ಡ ಆಕಾರದ ರಾಣಿ ಗೆದ್ದಲು ಹುಳುವನ್ನು ತಂದು ಮಕ್ಕಳಿಗೆ ತಿನ್ನಿಸುವ ಪರಿಪಾಠವೂ ಇತ್ತು. ನಾವಂತೂ ಪ್ರತಿವರ್ಷ ಈಸಿಳ್ಳುಗಳನ್ನು ಹಿಡಿದು ತಿನ್ನುತ್ತೇವೆ’ ಎನ್ನುತ್ತಾರೆ ಕಾಚನಾಯಕನಹಳ್ಳಿಯ ಶ್ರೀನಿವಾಸ್.
 ಮನುಷ್ಯರಿಗಷ್ಟೇ ಅಲ್ಲದೆ ಕೋತಿಗಳಿಗೂ ಈಸುಳ್ಳಿಗಳು ಬಹಳ ಪ್ರಿಯ. ಓತಿಕ್ಯಾತ, ಕಾಗೆ ಮುಂತಾದ ಹುಳು ಭಕ್ಷಕ ಜೀವಿಗಳಿಗೆಲ್ಲಾ ಇದು ಬಹು ಮುಖ್ಯವಾದ ಆಹಾರವಾಗಿದೆ.
 ಸುಮಾರು ಐವತ್ತು ಮಿಲಿಯನ್ ವರ್ಷಗಳಿಂದಲೂ ಈ ಭೂಮಿಯಲ್ಲಿ ವಾಸಿಸುತ್ತಿರುವ ಸಂಘಜೀವಿಗಳಾದ ಗೆದ್ದಲುಗಳು ಮಾನವನಿಗಿಂತ ಮುಂಚಿನಿಂದಲೇ ತಮ್ಮ ಜೀವನಕ್ರಮವನ್ನು ರೂಪಿಸಿಕೊಂಡಿವೆ. ಇವುಗಳಲ್ಲಿ ೩೦೦೦ ಪ್ರಬೇಧಗಳಿವೆ. ಉಷ್ಣವಲಯ ಮತ್ತು ಸಮಶೀತೋಷ್ಣವಲಯಗಳಲ್ಲಿ ಇವು ಕಂಡುಬರುತ್ತವೆ. ಮರಮುಟ್ಟುಗಳಲ್ಲಿರುವ ಸೆಲ್ಯುಲೋಸ್ ಇದರ ಪ್ರಮುಖ ಆಹಾರ.
 ಗೆದ್ದಲು ಹುಳುಗಳಲ್ಲಿ ಮೊಟ್ಟೆಯಿಡುವ ರಾಣಿಯಲ್ಲದೆ, ರಾಜವಂಶ, ಕೆಲಸಗಾರ ಮತ್ತು ಸೈನಿಕ ಎಂಬ ಮೂರು ವರ್ಗಗಳಿವೆ. ಸಂತಾನೋತ್ಪತ್ತಿ ನಡೆಸುವುದಷ್ಟೇ ರಾಜವಂಶದ ಹುಳುಗಳ ಕೆಲಸ. ಬೇಸಿಗೆಯ ಕಡೆಯಲ್ಲಿ ಮೊದಲ ಮಳೆ ಬಿದ್ದೊಡನೆಯೇ ಈ ರಾಜವಂಶದ ಹುಳುಗಳಿಗೆ ರೆಕ್ಕೆ ಮೂಡುತ್ತವೆ. ಹೊಸ ಸಂಸಾರ ಹೂಡಲು ತಯಾರಾದ ವಯಸ್ಸಿಗೆ ಬಂದ ಗೆದ್ದಲು ಹುಳುಗಳಿಗೆ ರೆಕ್ಕೆ ಮೂಡಿ ಗೂಡಿನಿಂದ ಹೊರಕ್ಕೆ ಬರುತ್ತವೆ. ಇದು ಅವುಗಳ ಜೀವನದ ಮೊದಲ ಮತ್ತು ಕಡೆಯ ಹಾರಾಟ. ಸೂಕ್ತ ಸಂಗಾತಿಯನ್ನರಸಿ ನಡೆಸುವ ಕಟ್ಟ ಕಡೆಯ ಹಾರಾಟವಿದು.
 ಸೂಕ್ತ ಸಂಗಾತಿ ಸಿಕ್ಕೊಡನೆ, ತಮ್ಮ ರೆಕ್ಕೆ ಕಳಚಿಕೊಂಡು ಇವು ಸೂಕ್ತ ಸ್ಥಳ ಹುಡುಕಿ ತಮ್ಮ ಸಂಸಾರವನ್ನು ಪ್ರಾರಂಭಿಸುತ್ತವೆ. ಹೆಣ್ಣು ಮೊಟ್ಟೆಯಿಡತೊಗುತ್ತದೆ. ದಿನಕ್ಕೆ ಸಾವಿರಾರು ಮೊಟ್ಟೆಯಿಡುವ ಹೆಣ್ಣು ಹುಳ ಶೀಘ್ರವಾಗಿ ತನ್ನದೇ ಯಶಸ್ವಿ ಕುಟುಂಬದ ಒಡತಿಯಾಗುತ್ತದೆ. ಮಣ್ಣಿನ ಫಲವತ್ತತೆ, ಅಂತರ್ಜಲ ಹೆಚ್ಚಿಸುವಲ್ಲಿ, ಹಲವಾರು ಪ್ರಾಣಿಗಳ ಆಹಾರವಾಗಿ ಉಪಯುಕ್ತ ಜೀವಿಯಾಗಿದೆ.

ಬೇಟೆಯ ನೆನಪುಗಳು


ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯಿತಿಯ ಹಕ್ಕಿಪಿಕ್ಕಿಕಾಲೋನಿಯಲ್ಲಿ ಹಕ್ಕಿಪಿಕ್ಕಿಗಳ ಬಳಿ ಇರುವ, ಹಿಂದೆ ಅವರು ಬೇಟೆಗಾಗಿ ಬಳಸುತ್ತಿದ್ದ ಬೇಟೆಯ ಪರಿಕರಗಳು.

“ವಾಕ್ಕೂ ಸೊಕ್ಕು ಕಡಮ ಭಿಂಗು” ಎಂದರೆ ಗೌಜಹಕ್ಕಿಯ ಬಲೆ ಎಂದರ್ಥ. “ಖಡಾ ಬಲ್ಡಾಪರ್ ಟಾಂಗ್‌ಚೀರಿ ಪಡೀಸ್” ಎನ್ನುವುದು ಪುರಲಕ್ಕಿ ಬಲೆಯನ್ನು. ಈ ನುಡಿಗಟ್ಟುಗಳು ವಾಗ್ರಿ ಭಾಷೆಯಲ್ಲಿವೆ. ಇದು ಹಕ್ಕಿಪಿಕ್ಕಿಗಳ ಭಾಷೆ. ಹಕ್ಕಿಪಿಕ್ಕಿ ಎಂಬ ಹೆಸರು ಇವರ ಸಾಂಪ್ರದಾಯಿಕ ಕಸುಬಾದ ಹಕ್ಕಿಗಳನ್ನು ಹಿಡಿಯುವುದರಿಂದ ಬಂದಿದೆ. ಹಿಂದೆ ಬೇಟೆ ಮತ್ತು ಆಹಾರ ಸಂಗ್ರಹಣೆಯ ಮೂಲಕ ವ್ಯವಸ್ಥಿತವಾಗಿ ಸಂಘಟಿತವಾಗುತ್ತಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗುತ್ತಾ ಜೀವನ ರೂಪಿಸಿಕೊಂಡಿದ್ದ ಸಮಯದಲ್ಲಿ ಇವರು ಶುದ್ಧ ಅಲೆಮಾರಿಗಳಾಗಿದ್ದರು. ಹಕ್ಕಿಪಿಕ್ಕಿಯರು ಹಿಂದೆ ಬೇಟೆಗಾಗಿ ಬಳಸುತ್ತಿದ್ದ ಚಿತ್ರ ವಿಚಿತ್ರವಾದ ಬಲೆಗಳು, ಪೌದುಗಳು, ಹಕ್ಕಿಗಳನ್ನು ಹಿಡಿಯಲು ಬಳಸುತ್ತಿದ್ದ ಪರಿಕರಗಳು ಈಗಲೂ ಅವರ ಬಳಿ ಪಳೆಯುಳಿಕೆಯಂತಿವೆ. ಹಕ್ಕಿಪಿಕ್ಕಿಗಳು ಹಿಂದೆ ಗಿಡಮೂಲಿಕೆಗಳ ಜನಕರಾಗಿದ್ದರು. ನೋವುಗಳಿಗೆ ಮಸಾಜ್ ಮಾಡಲು ಬಳಸುವ ವಿವಿಧ ಎಣ್ಣೆಗಳನ್ನು ಇವರು ತಯಾರಿಸುತ್ತಿದ್ದರು. ಉಡದ ಎಣ್ಣೆ, ನವಿಲಿನ ಎಣ್ಣೆ, ಬೆಳ್ಳುಳ್ಳಿ ಎಣ್ಣೆ ಇತ್ಯಾದಿ ಇವರ ಸಂಗ್ರಹದಲ್ಲಿರುತ್ತಿದ್ದವು. ಕಾಡು ಉತ್ಪನ್ನಗಳಾದ ಗೆಡ್ಡೆ ಗೆಣಸು ಹಾಗೂ ಜೇನನನ್ನೂ ಸಹ ಮಾರಾಟ ಮಾಡುತ್ತಿದ್ದರು.
ಬೇಟೆಯಿಂದ ವ್ಯವಸಾಯಕ್ಕೆ ಮಾರ್ಪಾಡಾದ ನಂತರ ನೆಲೆ ನಿಂತು ಒಟ್ಟಾಗಿ ಬಾಳುವುದರೊಂದಿಗೆ ತಮ್ಮದೇ ಆದ ಸಾಮಾಜಿಕ ವ್ಯವಸ್ಥೆಯನ್ನು ಕಾಲಾಂತರದಲ್ಲಿ ಇವರು ರೂಪಿಸಿಕೊಂಡಿದ್ದಾರೆ. ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯಿತಿಯಲ್ಲಿ ಹಕ್ಕಿಪಿಕ್ಕಿಕಾಲೋನಿ ಮತ್ತು ಬಾಳೇಗೌಡನಹಳ್ಳಿ ಎಂಬ ಎರಡು ಗ್ರಾಮಗಳಲ್ಲಿ ಇವರು ನೆಲೆಯನ್ನು ಕಂಡುಕೊಂಡಿದ್ದಾರೆ. ಇಂದು ಹಕ್ಕಿಪಿಕ್ಕಿಯರ ಸಂಪ್ರದಾಯಗಳು ಬಹುವಾಗಿ ಕಣ್ಮರೆಯಾಗುತ್ತಿವೆ. ಇವರ ಆರಂಭದ ದಿನಗಳಲ್ಲಿ ಬೇಟೆಯಾಡುವುದೇ ಮೂಲ ಕಸುಬಾಗಿತ್ತು. ಇವರು ತಮ್ಮ ಮೂಲಸ್ಥಾನವಾದ ಮಧ್ಯ ಭಾರತದ ವಿಂದ್ಯಪರ್ವತದಿಂದ, ಗುಜರಾತ್, ರಾಜಾಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕರ್ನಾಟಕಗಳತ್ತ ಬೇಟೆಯನ್ನು ಅರಸುತ್ತಾ ಬಂದವರು. ಆಡುಮುಟ್ಟದ ಸೊಪ್ಪು ಹೇಗೆ ಇಲ್ಲವೋ, ಅದೇ ರೀತಿಯಲ್ಲಿ ಹಕ್ಕಿಪಿಕ್ಕಿಯರು ತಿನ್ನದೇ ಇರುವ ಸೊಪ್ಪು ಇಲ್ಲವೆನ್ನಬಹುದು. ನಾಡಿಗಿಂತ ಕಾಡಿನ ಜೀವನವೇ ಹೆಚ್ಚಾಗಿ ಅನುಭವಿಸಿದ ಈ ಬುಡಕಟ್ಟು ಕಾಡಿನಲ್ಲಿರುವ ಎಲ್ಲಾ ಸೊಪ್ಪುಗಳನ್ನು ತಮ್ಮ ಆಹಾರಕ್ಕಾಗಿ ಬಳಸಿಕೊಳ್ಳುತ್ತಾರೆ. ಇವರ ಮಾಂಸಾಹಾರದ ಅಡುಗೆಯ ಬಗ್ಗೆ ತಿಳಿಯುವುದರಿಂದ ಇವರು ಎಂಥೆಂಥಹ ಬೇಟೆಯನ್ನಾಡುತ್ತಿದ್ದರು ಎಂಬುದರ ಬಗ್ಗೆಯೂ ತಿಳಿದುಬರುತ್ತದೆ. ತಿತರೋನಿ(ಗೌಜಲಹಕ್ಕಿ), ಗೇರಾಜನಿ(ಪುರಲಕ್ಕಿ), ನ್ಹೋರಿನಿ(ಗುಳ್ಳೇನರಿ), ಮುಂಗಶ್ನಿ(ಮುಂಗುಸಿ), ಗೋಯಿನಿ(ಉಡ), ಗಿಲೋರಿನಿ(ಅಳಿಲು), ಚಕತಾಂಡೋನಿ(ಹಾಲಕ್ಕಿ), ಗುಗ್ಗೂನಿ(ಗೂಬೆ), ಢೋಳ್ನಿ(ಸೊರಕ್ಕಿ), ಕೊಂಗಾನಿ(ಬಿಳಿಕೊಕ್ಕರೆ), ಶಾಮ್ಮುರಗನಿ(ಕರಿತಲೆಯ ಬಾತುಕೋಳಿ), ಖೇಕಡನಿ(ಏಡಿ), ಮಾತ್ಸುಲುನಿ(ಮೀನು), ಗೂಬ್ನಿ(ಹೆಗ್ಗಣ), ಲಕ್ಕಡ್‌ಪೋಡನಿ(ಮರಕುಟಿಕಹಕ್ಕಿ), ಪರ್ಯಾವೋನಿ(ಪಾರಿವಾಳ), ಹರಣ್ಣಿ(ಚಿಗರೆ), ದಾಂತಿ(ಮೊಲ), ಡುಕರ್ನಿ(ಕಾಡುಹಂದಿ), ಭೋಕಡಾನಿ(ಆಡು), ಮುರಗಾನಿ(ಕೋಳಿ), ಮೇಂಡೋನಿ(ಕುರಿ), ಭೇಖೋನಿ(ಕೋಣ), ಬಿಲ್ಲಾಡಾನಿ(ಕಾಡುಬೆಕ್ಕು). ಈ ರೀತಿಯ ಇವರ ಆಹಾರ ಕ್ರಮ ಹಿಂದೆ ಇದ್ದ ಇವರ ಅಲೆಮಾರಿತನ, ಕಾಡಿನ ಜೀವನ ಮತ್ತು ಇವರ ಆರ್ಥಿಕ ಪರಿಸ್ಥಿತಿಯನ್ನೂ ತಿಳಿಸುತ್ತದೆ.

ಹಕ್ಕಿಗಳನ್ನು ಹಿಡಿಯಲು ಹೇಗೆ ಪೌದುಗಳನ್ನು ಹರಡಬೇಕೆಂದು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿರುವುದು.

‘ಹಿಂದೆ ಬೇಟೆಯೇ ನಮ್ಮ ಬದುಕಾಗಿತ್ತು. ಆಗ ನಾವು ಬಹುತೇಕ ಪ್ರಾಣಿ ಪಕ್ಷಿಗಳನ್ನು ಜೀವ ಸಹಿತ ಹಿಡಿಯಲು ಪ್ರಯತ್ನಿಸುತ್ತಿದ್ದೆವು. ಕೌಜುಗ ಜಾತಿಯ ನೆಲದ ಮೇಲೆ ಚಲಿಸುವ ಹಕ್ಕಿಗಳನ್ನು ಪೌದುಗಳನ್ನು ಬಳಸಿ ಹಿಡಿಯುತ್ತಿದ್ದೆವು. ಮೊಲ, ಮುಂಗುಸಿಯಂಥಹ ಪ್ರಾಣಿಗಳನ್ನು ಬೋನುಗಳನ್ನು ಬಳಸಿ ಹಿಡಿಯುತ್ತಿದ್ದೆವು. ಕೆಲವು ಪ್ರಾಣಿಗಳನ್ನು ಹಿಡಿಯಲು ಮೊಟ್ಟೆ, ಒಣಮೀನು, ಮಾಂಸದ ವಾಸನೆಗೆ ಆಕರ್ಷಿಸಿ ಬಲೆಗೆ ಬೀಳಿಸುತ್ತಿದ್ದೆವು. ಬೋನನ್ನು ಇಟ್ಟು ಹಸುವಿನೊಂದಿಗೆ ತಲೆಗೆ ಟೋಪಿ ಮಾಡಿಕೊಂಡು ಕರುವಿನಂತೆ ನಟಿಸುತ್ತಾ ಬೋನಿಗೆ ಓಡಿಸಿ ಕೌಜುಗಗಳನ್ನು ಹಿಡಿಯುತ್ತಿದ್ದೆವು. ಆದರೆ ಸರ್ಕಾರ ಬೇಟೆಯನ್ನು ನಿಷೇಧಿಸಿರುವುದರಿಂದ ನಾವು ಈಗ ವ್ಯವಸಾಯ ಮತ್ತು ಅಲಂಕಾರಿಕ ವಸ್ತುಗಳನ್ನು ತಯಾರಿಸುವ ಕೈಕಸುಬನ್ನು ಮಾಡಿ ಜೀವನ ನಡೆಸುತ್ತೇವೆ’ ಎನ್ನುತ್ತಾರೆ ಹಕ್ಕಿಪಿಕ್ಕಿಯರಲ್ಲಿ ಹಿರಿಯರಾದ ವೈರ್‌ಮಣಿ.