Thursday, August 27, 2009

ಸಾವಿನಿಂದ ಅಂದವಿದೆ..!

ಬಿಸಿ ಬಿಸಿ ಅನ್ನ, ಗಿಡಬಸಳೆಸೊಪ್ಪಿನ ಗೊಜ್ಜು, ಅಮಟೆಕಾಯಿ ಗುಳುಂಬ, ತೊವ್ವೆ, ದೊಡ್ಡಪತ್ರೆ ತಂಬುಳಿ, ಚಕ್ಕುಲಿ, ಅತ್ರಾಸ, ಕರ್ಜೀಕಾಯಿ, ಮೊಸರು...
ಪ್ರಕಾಶ್ ಹೆಗಡೆಯವರ ಮನೆಯಲ್ಲಿ ಭರ್ಜರಿ ಭೋಜನ.
ಶಿವು, ನಾನು ಮತ್ತು ಪ್ರಕಾಶ್ ಹೆಗಡೆಯವರು ಬ್ಯಾಟಿಂಗ್ ಶುರುಮಾಡಿದ್ದೆವು.
ಪ್ರಕಾಶ್‌ರ ಪತ್ನಿ ನಮಗೆ ಬಡಿಸುತ್ತಾ, "ಶಿವು, ನಿಮ್ಮ ಮನೇಲಿ ವಾಟರ್ ಫಿಲ್ಟರ್ ಹಾಕ್ಸಿದ್ರಾ?" ಎಂದು ಕೇಳಿದರು.
"ಇನ್ನೂ ಇಲ್ಲ. ಹಾಕಿಸ್ಬೇಕು" ಅಂದರು ಶಿವು.
"ಈ ರಿವರ್ಸ್ ಆಸ್ಮಾಸಿಸ್ ಇರುವ ಫಿಲ್ಟರ್ ಬೆಲೆ ಜಾಸ್ತಿಯಲ್ವಾ?" ನಾನು ಮಧ್ಯೆ ಮೂಗು ತೂರಿಸಿದೆ.
"ಹೌದು. ನೀವದನ್ನು ಹಾಕ್ಸಿಲ್ವಾ?" ಎಂದು ಕೇಳಿದರು ಪ್ರಕಾಶ್.
"ಇಲ್ಲ ಸರ್. ನಮ್ಮಲ್ಲಿ ಸಿಹಿನೀರಲ್ವಾ. ಹಾಗಾಗಿ ಆ ಸಿಸ್ಟಂ ಬೇಕಿಲ್ಲ. ಅದೂ ಅಲ್ದೆ ನಮ್ಮ ಶಿಡ್ಲಘಟ್ಟದ ನೀರು ಬಹಳ ರುಚಿ" ಅಂದೆ.
"ನೀರು ರುಚಿಯಾ?" ಪ್ರಕಾಶ್ ಅಚ್ಚರಿಪಟ್ಟರು.
"ಹೌದು. ನಿಮ್ಮ ಕಾವೇರಿ ನೀರಿಗಿಂತ ರುಚಿಯಾಗಿರುತ್ತೆ. ಅದಕ್ಕೇ ನಮ್ಮ ರೇಷ್ಮೆಗೂ ಬೆಲೆ ಜಾಸ್ತಿ" ಅಂದೆ.
"ಅಂದ್ರೆ ಸೀರೆ ಮಾಡ್ತೀರಾ?" ಪ್ರಕಾಶ್‌ರ ಪತ್ನಿ ಕೇಳಿದರು.
"ನಮ್ಮಲ್ಲಿ ಕಚ್ಛಾರೇಷ್ಮೆ ಅಂದ್ರೆ ರಾ ಸಿಲ್ಕ್ ತಯಾರಿಸುತ್ತೇವೆ. ರೇಷ್ಮೆ ಗೂಡನ್ನು ಕುದಿಯುವ ನೀರಲ್ಲಿ ಹಾಕಿ ಅದರಿಂದ ರೇಷ್ಮೆ ಎಳೆಯನ್ನು ತೆಗೆಯುವುದು. ಇಲ್ಲಿ ನೀರಿನ ಗುಣ ಮುಖ್ಯ ಪಾತ್ರ ವಹಿಸುತ್ತೆ. ನಮ್ಮ ಶಿಡ್ಲಘಟ್ಟದ ಸಿಹಿನೀರಲ್ಲಿ ತೆಗೆದ ರೇಷ್ಮೆಗೆ ಬಣ್ಣ, ಹೊಳಪು ಮತ್ತು ಹಿಗ್ಗುವಿಕೆ(ಎಲಾಸ್ಟಿಸಿಟಿ) ಗುಣವಿರುತ್ತೆ. ಹಾಗಾಗಿ ಈ ರೇಷ್ಮೆಯು ಸೀರೆ ತಯಾರಿಸಲು ಕಂಚಿಗೆ, ಜರಿ ತಯಾರಿಸಲು ಸೂರತ್‌ಗೆ ಹೆಚ್ಚಾಗಿ ಹೋಗುತ್ತೆ. ಬೇರೆ ಕಡೆ ತಯಾರಾಗುವ ರೇಷ್ಮೆಗಿಂತ ನಮ್ಮ ರೇಷ್ಮೆ ಬೆಲೆ ಹೆಚ್ಚು"
"ರೇಷ್ಮೆ ತೆಗೆದು ಉಳಿದಿರೋದ್ರಲ್ಲಿ ಹಾರ ಮಾಡ್ತಾರಾ?"
ಪ್ರಕಾಶ್‌ರ ಪತ್ನಿ ಕೇಳಿದರು.
"ಇಲ್ಲ. ಹಾರ ಮಾಡಲು ಚೆನ್ನಾಗಿರುವ ಗೂಡನ್ನೇ ಬಳಸುತ್ತಾರೆ. ಅದನ್ನು ಕತ್ತರಿಸಿ ಒಳಗಿರುವ ಹುಳುವನ್ನು ಬಿಸಾಡಿ ಹಾರ ತಯಾರಿಸ್ತಾರೆ"
"ಈ ಹುಳುಗಳನ್ನು ಏನ್ಮಾಡ್ತೀರ?"
ಪ್ರಕಾಶ್ ಕೇಳಿದರು.
"ಸರ್, ಇಲ್ಲಿ ಯಾವುದೂ ವೇಸ್ಟ್ ಅಲ್ಲ. ರೇಷ್ಮೆ ತೆಗೆದ ಮೇಲೆ ಉಳಿಯುವ ಪೊರೆ, ಹುಳುಗಳನ್ನು ಬೇರ್ಪಡಿಸಿ ಸಂಸ್ಕರಿಸುವುದೇ ಒಂದು ಘಟಕ. ಅದು ಕೆಟ್ಟ ವಾಸನೆ ಬೀರುವುದರಿಂದ ಊರ ಹೊರಗೆ ಮಾಡಿರ್ತಾರೆ. ಈ ಹುಳಗಳಿಂದ ಎಣ್ಣೆ ತಯಾರಿಸುತ್ತಾರೆ. ಆ ಎಣ್ಣೆ ಸೋಪ್ ಫ್ಯಾಕ್ಟರಿಗಳಲ್ಲಿ ಬಳಸುತ್ತಾರೆ"
"ಅಂದದ ಮೈಕಾಂತಿ ಹಿಂದೆ ಎಷ್ಟೊಂದು ಹಿಂಸೆ ಇದೆ ಮಾರಾಯ್ರೆ!"
ಪ್ರಕಾಶ್‌ರ ಆಲೋಚನೆ ಎಲ್ಲೆಲ್ಲಿಗೋ ಹೋಯಿತು.
"ಹಾಗ್ಯಾಕೆ ಯೋಚಿಸ್ತೀರಿ ಸರ್. ರೇಷ್ಮೆ ಮೊಟ್ಟೆಯಿಂದ ಬಟ್ಟೆಯಾಗಲು ನಾನಾ ಹಂತಗಳು. ಮೊದಲು ಗ್ರೇನೇಜ್‌ನಲ್ಲಿ ಮೊಟ್ಟೆ ತಯಾರಾಗುತ್ತೆ. ನಂತರ ಚಾಕಿ ಸೆಂಟರ್‌ನಲ್ಲಿ ಮೊಟ್ಟೆಯಿಂದ ಹೊರಬಂದ ಹುಳು ಸ್ವಲ್ಪ ಬೆಳೆಸುವರು. ಇಲ್ಲಿಂದ ರೈತರು ಕೊಂಡು ತಮ್ಮ ಹುಳುಮನೆಯಲ್ಲಿ ಸಾಕುತ್ತಾರೆ. ಬೆಳೆದ ಹುಳುವನ್ನು ಚಂದ್ರಂಕಿಗಳಲ್ಲಿ ಹಾಕಿ ಗೂಡು ಕಟ್ಟಿಸುತ್ತಾರೆ. ಈ ಗೂಡುಗಳನ್ನು ಮಾರುಕಟ್ಟೆಯಲ್ಲಿ ಹರಾಜು ಹಾಕುತ್ತಾರೆ"
"ಗೂಡು ತಯಾರಿಸೋದಕ್ಕೇ ಇಷ್ಟು ಹಂತಗಳಾ? ಎಷ್ಟು ಜನ ಕೆಲಸ ಮಾಡ್ಬೇಕಲ್ವಾ? ರಾಮನಗರದಲ್ಲಿ ಗೂಡು ಮಾರ್ಕೆಟ್ ಇದೆಯೆಂದು ಕೇಳಿರುವೆ"
ಅಂದರು ಪ್ರಕಾಶ್.
"ಹೌದು ಸರ್. ರಾಮನಗರ ಬಿಟ್ಟರೆ ನಮ್ಮ ಶಿಡ್ಲಘಟ್ಟದ್ದು ಭಾರತದಲ್ಲೇ ಅತಿ ದೊಡ್ಡದಾದ ಗೂಡಿನ ಮಾರ್ಕೆಟ್. ಇಲ್ಲಿ ಕೋಟ್ಯಾಂತರ ವ್ಯವಹಾರ ನಡೆಯುತ್ತೆ"
"ಗೂಡಿನ ನಂತರ ಏನಾಗುತ್ತೆ"
ಕುತೂಹಲದಿಂದ ಶಿವು ಕೇಳಿದರು.
"ಮಾರುಕಟ್ಟೆಯಲ್ಲಿ ಗೂಡು ಕೊಂಡ ರೀಲರುಗಳು ಫಿಲೇಚರ್(ರೇಷ್ಮೆ ನೂಲು ಬಿಚ್ಚಾಣಿಕಾ ಘಟಕ) ನಲ್ಲಿ ಗೂಡಿನಿಂದ ರೇಷ್ಮೆ ನೂಲು ತೆಗೆಯುತ್ತಾರೆ. ಈ ನೂಲನ್ನು ಟ್ವಿಸ್ಟಿಂಗ್ ಫ್ಯಾಕ್ಟರಿಯಲ್ಲಿ ಹುರಿ ಮಾಡಲಾಗುತ್ತೆ. ನಂತರ ಇದು ಡೈಯಿಂಗ್ ಘಟಕದಲ್ಲಿ ಬಣ್ಣ ಪಡೆಯುತ್ತೆ. ಆಮೇಲೆ ಮಗ್ಗದಲ್ಲಿ ಸೀರೆಯಾಗುತ್ತೆ. ಸೀರೆಯಾದಮೇಲೆ ಪಾಲಿಷ್ ಮಾಡಬೇಕು. ಮುಂದೆ ಸೀರೆ ಅಂಗಡಿ..."
"ಅಬ್ಬಬ್ಬಾ! ಎಷ್ಟೊಂದು ಕೆಲಸ. ಒಳ್ಳೆ ರೈಲಿನ ಬೋಗಿಗಳಂತೆ ಒಂದರ ಹಿಂದೆ ಒಂದು ಹೇಳ್ತಾ ಇದ್ದೀರಲ್ಲ"
ಎಂದು ಈ ರೇಷ್ಮೆ ಸರಪಣಿಯ ಬಗ್ಗೆ ಪ್ರಕಾಶ್ ಮೆಚ್ಚುಗೆಯ ಅಚ್ಚರಿ ವ್ಯಕ್ತಪಡಿಸಿದರು.
"ನಮ್ಮೂರಲ್ಲಿ ೪೫೦೦ ರೇಷ್ಮೆ ಘಟಕಗಳಿವೆ. ಇದರಲ್ಲಿ ಸುಮಾರು ೩೦೦೦೦ ಮಂದಿ ಕೆಲಸ ಮಾಡುತ್ತಾರೆ. ನಮ್ಮ ತಾಲೂಕಿನಲ್ಲಿ ೫೦೦೦ ಹೆಕ್ಟೇರ್ ಭೂಮಿಯಲ್ಲಿ ರೇಷ್ಮೆ ಕೃಷಿ ಅಂದರೆ ಹಿಪ್ಪು ನೇರಳೆ ಸೊಪ್ಪು ಬೆಳೆಯುತ್ತಾರೆ. ಸುಮಾರು ೧೦೦೦೦ ರೈತ ಕುಟುಂಬಗಳು ಇದನ್ನು ಅವಲಂಭಿಸಿವೆ. ಇದಲ್ಲದೆ ರೇಷ್ಮೆ ಕೊಳ್ಳುವವರು, ಮಾರುವವರು, ಬ್ರೋಕರುಗಳು, ಬಡ್ಡಿಗೆ ಕೊಡುವವರು, ಮೂಟೆ ಹೊರುವವರು, ನೀರು ಗಾಡಿಯವರು, ಫ್ಯಾಕ್ಟರಿಗೆ ಬೇಕಾದ ಸಾಮಾನು ಮಾರುವವರು, ಟೆಂಪೋಗಳು, ಕಾರುಗಳು, ತಳ್ಳುವ ಗಾಡಿಗಳು.... ಒಂದೇ ಎರಡೇ.. ಲಕ್ಷಾಂತರ ಜನರಿಗೆ ಅನ್ನ ಕೊಡುತ್ತಿದೆ ರೇಷ್ಮೆ"
"ರೇಷ್ಮೆ ಹುಳುಗಳ ಸಾವು ನೋವಿನಿಂದ ಅಂದವೂ ಇದೆ ಚಂದವೂ ಇದೆ ಲಕ್ಷಾಂತರ ಜನರಿಗೆ ಹೊಟ್ಟೆ ಬಟ್ಟೆಯೂ ಇದೆ ಅಂತ ಗೊತ್ತಿಲ್ಲಾಗಿತ್ತು ಮಾರಾಯ್ರೆ"
ಅಂದರು ಪ್ರಕಾಶ್.
"ಈ ರೇಷ್ಮೆ ಸೀರೆ ಹಿಂದೆ ಇಷ್ಟೊಂದು ಹಿಂಸೆ ಇದೆ ಅಂತ ಈ ಸಾರಿ ಹಬ್ಬಕ್ಕೆ ನನ್ಹೆಂಡತಿಗೆ ಸೀರೆ ಕೊಡಿಸ್ಲಿಲ್ಲ!" ಎಂದು ಶಿವು ಚಟಾಕಿ ಹಾರಿಸಿದರು.
"ಕಳ್ಳಂಗೊಂದು ಪಿಳ್ಳೆ ನೆವವಂತೆ. ಇರಿ ಹೇಮಾಶ್ರೀಗೆ ಫೋನ್ ಮಾಡಿ ಹೇಳ್ತೀನಿ. ನಿಮ್ಮ ಜೇಬಿಗೆ ಕತ್ತರಿ ಹಾಕಿಸ್ತೀನಿ" ಅಂದರು ಪ್ರಕಾಶ್ ಪತ್ನಿ.
ಶಿವು ಗಲಿಬಿಲಿಗೊಂಡರು.
"ನಮ್ದೇನಿದೆ ಶಿವು. ನಮ್ಮದೆಲ್ಲಾ ಹೆಂಗಸರ ಕೈಲಿದೆ..! ಅವ್ರು ಹೇಳಿದಂತೆ ಕುಣಿದ್ರಾಯ್ತು" ಎಂದು ಕಣ್ಣು ಮಿಟುಕಿಸುತ್ತಾ ಸಾಂತ್ವನ ಹೇಳಿದರು ಪ್ರಕಾಶ್.

ಶಿಡ್ಲಘಟ್ಟದ ರೇಷ್ಮೆ ಬಗ್ಗೆ ವೀಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ :

http://www.youtube.com/watch?v=eAkaFniaB2o


http://www.youtube.com/watch?v=bqrOSPB7opU

Friday, August 21, 2009

ಅಂಗಳದ ಗಿಡದಲ್ಲಿ ಹೂಕುಟುಕ

ಮತ್ಯಾರ ನಿರೀಕ್ಷೆಯೋ ನಿನಗೆ...
ಸಣ್ಣಗಾತ್ರದ ಉಜ್ವಲವರ್ಣದ ಅತಿಥಿಗಳು ಈಚೆಗೇನಾದರೂ ನಿಮ್ಮ ಮನೆಯಂಗಳಕ್ಕೆ ಬಂದಿದ್ದರಾ? ನೀವು ಕಚೇರಿಗೆ ಹೋಗಿದ್ದಾಗಲೋ, ಅಥವಾ ಕೆಲಸದಲ್ಲಿ ಮಗ್ನರಾಗಿದ್ದಾಗಲೋ ಆಮಂತ್ರಣ ಇಲ್ಲದೆಯೇ ಬಂದು ಹೋಗಿರುತ್ತಾರೆ ಬಿಡಿ. ನಿಮ್ಮ ಗಮನಕ್ಕದು ಬಂದಿರಲಿಕ್ಕಿಲ್ಲ. ಬರುವುದಷ್ಟೇ ಅಲ್ಲ. ನಿಮ್ಮ ಮನೆಯಲ್ಲಿ ಹೂಗಿಡಗಳಿದ್ದರೆ ಖಂಡಿತ ಚಹಾ... ಕ್ಷಮಿಸಿ ಮಧುಪಾನವನ್ನು ಮಾಡಿ ಹೋಗಿರುತ್ತಾರೆ. ಈ ಬಾರಿ ಈ ಪುಟಾಣಿ ಅತಿಥಿಗಳು ರೆಕ್ಕೆ ಬಡಿಯುತ್ತ ನಿಮ್ಮ ಅಂಗಳಕ್ಕೆ ಅಡಿಯಿಟ್ಟಾಗ ಮರೆಯದೆ ಗಮನಿಸಿ, ಆತಿಥ್ಯ ನೀಡಿ.
ಹೂವಿನ ಸಿಹಿ ಹೀರುತ್ತ ಮೈಮರೆತ ಹಕ್ಕಿ.
ನೆಕ್ಟಾರಿನಿಯಿಡೀ ಕುಟುಂಬಕ್ಕೆ ಸೇರಿರುವ ಈ ಹಳದಿ ಹೂ ಗುಬ್ಬಿ(ಪರ್ಪಲ್ ರಂಪ್ಡ್ ಸನ್‌ಬರ್ಡ್) ಗಾತ್ರದಲ್ಲಿ ಗುಬ್ಬಚ್ಚಿಗಿಂತ ಸಣ್ಣವು. ಹೆಚ್ಚು ಕಡಿಮೆ ಹಮ್ಮಿಂಗ್ ಪಕ್ಷಿಯಂತೆ. ಇದರ ವೈಜ್ಞಾನಿಕ ಹೆಸರು "ನೆಕ್ಟರೀನಿಯಾ ಜೀಲಾನಿಕ".

ಈ "ಮರೆ"ಯಲ್ಲಿ ಕೂತೇ ಮುದ್ದು ಹಕ್ಕಿಗಳ ಚಿತ್ರ ತೆಗೆದದ್ದು.
ಸಾಮಾನ್ಯವಾಗಿ ವನ್ಯಜೀವಿ ಛಾಯಾಗ್ರಾಹಕರು ಹಕ್ಕಿಗಳ ಚಿತ್ರ ತೆಗೆಯಲು ಆಯ್ದುಕೊಳ್ಳುವುದು ಅದರ ಗೂಡನ್ನು. ಏಕೆಂದರೆ ಮರಿಗಳ ಪಾಲನೆಗಾಗಿ ಪದೇ ಪದೇ ಹಕ್ಕಿ ಗೂಡಿಗೆ ಬರುತ್ತದೆಂದು. ಇದಕ್ಕೆ ವ್ಯತಿರಿಕ್ತವಾಗಿ ಈ ಹೂ ಗುಬ್ಬಿಗಳು ನಮ್ಮ ಮನೆಯ ದಾಸವಾಳದ ಗಿಡಕ್ಕೆ ಪದೇ ಪದೇ ಲಗ್ಗೆಯಿಟ್ಟು ಮಧು ಹೀರುತ್ತಿದ್ದವು. ಫೋಟೋ ತೆಗೆದರೆ ಎಷ್ಟು ಚಂದ ಎಂದುಕೊಂಡು ಕ್ಯಾಮೆರಾ ಸಿದ್ಧಮಾಡಿ ಒಮ್ಮೆ ದಿನಪೂರ್ತಿ ಕಾದರೂ ಆ ದಿನ ಅವು ಸುಳಿಯಲೇ ಇಲ್ಲ! ಇನ್ನೊಮ್ಮೆ ನನ್ನ ಮನದ ಇಂಗಿತ ತಿಳಿದವಂತೆ ತಾವಾಗಿಯೇ ಬಂದು "ಟಿಟ್ಯೂಂ ಟಿಟ್ಯೂಂ ಟಿರ್ರ್..." ಎಂದು ಕರೆದವು.
ಹೆಣ್ಣು ಸೂರಕ್ಕಿ.

ಸರಿ ನಾನೂ ಫೋಟೋ ತೆಗೆಯಲು ಸಿದ್ಧನಾದೆ. ಗಂಡಿನ ತಲೆಯ ಮೇಲ್ಭಾಗದಲ್ಲಿ ಲೋಹ ಹೊಳಪಿನ ಹಸಿರು ಬಣ್ಣ. ರೆಕ್ಕೆ ಮತ್ತು ಬಾಲದ ಪುಕ್ಕಗಳು ಹೊಳೆಯುವ ನೇರಳೆ, ಕಂದುಬಣ್ಣ. ಎದೆ, ಹೊಟ್ಟೆ ಹಳದಿ ಬಣ್ಣ. ಹೆಣ್ಣು ಹಕ್ಕಿಗೆ ಹೊಳೆಯುವ ಬಣ್ಣಗಳಿಲ್ಲ. ಬೂದು ಬಿಳುಪು. ಗಲ್ಲ ಮತ್ತು ಹೊಟ್ಟೆಯ ಭಾಗ ಮಾತ್ರ ಹಳದಿ ಬಣ್ಣ. ಇವಕ್ಕೆ ಹೂವುಗಳಲ್ಲಿನ ಮಧು ಹೀರಲು ಅನುಕೂಲವಾಗುವಂತೆ ನೀಳ ಹಾಗೂ ಅತಿ ತೆಳುವಾದ ಕೊಕ್ಕು ಮತ್ತು ಸಹಾಯಕವಾಗಿ ನಾಳಾಕಾರದ ಚೋಷಕ ನಾಲಗೆ ಇರುತ್ತದೆ.

ಗಂಡು ಸೂರಕ್ಕಿ.
ಸಾಮಾನ್ಯವಾಗಿ ಇವು ಜೋಡಿಯಾಗಿಯೇ ಬರುತ್ತವೆ. ಒಂದು ಕ್ಷಣ ಒಂದು ಕಡೆ ನಿಲ್ಲದೆ ಅವಿಶ್ರಾಂತವಾಗಿ ಹಾರಾಡುತ್ತಿರುತ್ತವೆ.
ಮರೆಯೊಳಗೆ ಅವಿತು ತೂಕಡಿಸುವಾಗ ಇವು ಬಂದದ್ದು ತಿಳಿಯುತ್ತಿದ್ದುದೇ ಇವುಗಳ ಚಿಕ್ - ಚಿಕ್ ಅಥವಾ "ಟಿಟ್ಯೂಂ ಟಿಟ್ಯೂಂ ಟಿರ್ರ್..." ಎನ್ನುವ ವಿಶಿಷ್ಟ ಇಂಚರದಿಂದ. ತಕ್ಷಣವೇ ತಡಬಡಾಯಿಸಿ ಕ್ಯಾಮೆರಾ ಅಣಿಗೊಳಿಸುತ್ತಿದ್ದೆ. ಒಂದು ಕಡೆ ಕೂತು ಫೋಟೋಗಾಗಿ ಒಂದು ಭಂಗಿಯನ್ನು ಕೊಡುವುದು ಇವುಗಳ ಜಾಯಮಾನಕ್ಕೇ ಬಂದಂತಿಲ್ಲ! ಒಂದು ರೆಂಬೆಯಿಂದ ಮತ್ತೊಂದಕ್ಕೆ ಒಂದು ಹೂವಿಂದ ಮತ್ತೊಂದು ಹೂವಿಗೆ ನಿರಂತರವಾಗಿ ಸಿಳ್ಳು ಹಾಕುತ್ತಾ ಹಾರುತ್ತಲೇ ಇದ್ದವು.
ವಿವಿಧ ಭಂಗಿಗಳಲ್ಲಿ ಮಧುಪಾನ ಮಾಡುವ ಸೂರಕ್ಕಿ.
ಹಾಂ! ಈ ಹಕ್ಕಿಗೆ ಸೂರಕ್ಕಿಯೆಂತಲೂ ಹೆಸರಿದೆ( ಸನ್ ಬರ್ಡ್ ಎಂಬುದನ್ನು ಕನ್ನಡೀಕರಿಸಿ). ಆದರೆ ಸನ್‌ಬರ್ಡ್ ಎಂಬ ಹೆಸರು ಹೇಗೆ ಬಂತು? ನಾನು ಹುಡುಕಿದ ಯಾವ ಪುಸ್ತಕದಲ್ಲೂ ಇದರ ಬಗ್ಗೆ ಮಾಹಿತಿ ದೊರಕಲಿಲ್ಲ. ಸೂರ್ಯನಿಗೂ ಈ ಹಕ್ಕಿಗೂ ಇರುವ ಸಂಬಂಧವೇ ತಿಳಿಯಲಿಲ್ಲ.
ಅತಿ ಹಗುರ ಹಕ್ಕಿಗಳಾದ್ದರಿಂದ ಹೂವಿನ ತೊಟ್ಟು ದಳಗಳ ಮೇಲೆಲ್ಲಾ ರೆಕ್ಕೆ ಬಡಿಯುತ್ತಾ ತೆಲೆಕೆಳಗಾಗಿ ಜೋತಾಡುತ್ತಾ ಮಧು ಕುಡಿಯುವುದನ್ನು ನೋಡುವುದೇ ಕಣ್ಣಿಗೊಂದು ಹಬ್ಬ.
ಭಾರತದಾದ್ಯಂತ ಕಂಡುಬರುವ ಈ ಹೂಗುಬ್ಬಿಗಳು ಪರಾಗಸ್ಪರ್ಶಕ್ಕೆ ಸಹಾಯ ಮಾಡುತ್ತವೆ. ಜೋಳಿಗೆಯಾಕಾರದ ಗೂಡುಕಟ್ಟಿ ಎರಡರಿಂದ ಮೂರು ಮೊಟ್ಟೆಗಳನ್ನಿಡುತ್ತವೆ.
ಮನಮೋಹಕವಾದ ಈ ಹಕ್ಕಿಗಳ ಸೌಂದರ್ಯವನ್ನು ನೋಡಿ ಆನಂದಿಸುವುದು ಜೀವನದ ಸಾರ್ಥಕ ಕ್ಷಣಗಳೇ ಅಲ್ಲವೇ?

Tuesday, August 11, 2009

ಪೌರಾತ್ಯ ರಾಷ್ಟ್ರಗಳ ವೆನಿಸ್ - ಅಲೆಪ್ಪಿ

ನಮ್ಮ ಇಟ್ಟಿಗೆ ಸಿಮೆಂಟ್ ಬ್ಲಾಗಿನ ಪ್ರಕಾಶ್ ಹೆಗಡೆಯವರ ಫೋನ್.
"ಸರ್, ಎಲ್ಲಿದ್ದೀರಿ?"
"ಅಲೆಪ್ಪಿಯಲ್ಲಿ.. ಆಟೋದಲ್ಲಿ ಸರ್.. ಇಲ್ಲಿ ಇವರ ಭಾಷೆ ನಮಗೆ ಬರಲ್ಲ, ನಮ್ಮ ಭಾಷೆ ಇವರಿಗೆ ಬರಲ್ಲ"
"ಒಂದ್ಕೆಲ್ಸ್ ಮಾಡಿ ಸರ್. ಒಂದು ಡಬ್ಬದಲ್ಲಿ ನಾಲ್ಕು ಕಲ್ಲು ಹಾಕಿ ಅಲುಗಾಡಿಸಿ. ಅವರಿಗೆ ಅರ್ಥವಾಗುತ್ತೆ..!"
ಪ್ರತಿಯೊಂದು ಸಮಸ್ಯೆಗೂ ಪ್ರಕಾಶ್ ಹೆಗಡೆಯವರ ಬಳಿ ಉತ್ತರವಿದೆ. ಮಲಯಾಳಂ ಮಾತನಾಡಲು ಎಷ್ಟು ಸುಲಭದ ಮಾರ್ಗ ಹೇಳುತ್ತಿದ್ದಾರೆ ಅನ್ನಿಸಿ ನನ್ನದೂ ಒಗ್ಗರಣೆ ಹಾಕಬೇಕಲ್ಲ...
"ಆ ಡಬ್ಬಕ್ಕೆ ಸ್ವಲ್ಪ ನೀರು ಹಾಕಿದರೆ ಹೇಗೆ ಸರ್? "ಳ" ಗಳ ಉತ್ಪತ್ತಿ ಆಗುತ್ತೆ..." ಎಂದು ಹೇಳಿದೆ.
"ಅಲ್ಲಿನ ವಿಶೇಷಗಳನ್ನೆಲ್ಲ ಸೆರೆ ಹಿಡಿದು ತನ್ನಿ ಸರ್. ಆಲ್ ದಿ ಬೆಸ್ಟ್..."
ಪ್ರಕಾಶ್ ಹೆಗಡೆಯವರು ಹಾರೈಸಿದಂತೆಯೇ ಅಲ್ಲಿನ ಅನೇಕ ವಿಶೇಷಗಳೊಂದಿಗೆ ಬಂದಿರುವೆ. ನೋಡಿ ನಿಮ್ಮ ಅನಿಸಿಕೆ ತಿಳಿಸಿ.ನೀರು ಜಡೆಯ ನೀರೆಯರು
ಕೇರಳದ ಮಹಿಳೆಯರ ಜಡೆ ಕಡುಕಪ್ಪು ಮತ್ತು ಥೇಟ್ ಅವರ ನಾಗದೋಣಿಯಂತೆ ಉದ್ದೋಉದ್ದ. ತೆಂಗು ಬೆಳೆಯುವ ನಾಡದು. ಆಯುರ್ವೇದದ ತವರೂರು. ತೆಂಗಿನೆಣ್ಣೆಗೆ ದಾಸವಾಳದ ಹೂ, ಮೆಹೆಂದಿ ಎಲೆ, ತುಳಸಿ, ಕರಿಬೇವು, ಕೈಯೂನಿ ಇತ್ಯಾದಿ ಮಿಶ್ರಣ ಮಾಡಿ ತಯಾರಿಸಿದ ಎಣ್ಣೆ ಕೂದಲಿಗೆ ಹಚ್ಚಿಕೊಳ್ಳುತ್ತಾರೆ. ತಲೆಗೂದಲನ್ನು ಶಾಂಪು, ಸೀಗೆಕಾಯಿ ಬಳಸದೆ ಬರೀ ನೀರು ಹಾಕಿಕೊಂಡು ನೀರುಜಡೆ(ಅದೇ..ಜಡೆ ತುದಿಯಲ್ಲೊಂದು ಪುಟ್ಟ ಗಂಟು) ಹಾಕುವರು. ಇಲ್ಲಿನ ಬಿಸಿಲಿಗೆ ಅದು ಅಗತ್ಯ ಕೂಡ. ಹಾಗೆ ತಲೆ ತೊಳೆಯಬೇಕಾದಾಗ ದಾಸವಾಳದ ಎಲೆಯನ್ನು ಸ್ವಲ್ಪ ನೀರಿನೊಂದಿಗೆ ಕಲ್ಲಿನ ಮೇಲೆ ಅರೆದು, ಅದನ್ನು ಶಾಂಪೂ ತರಹ ಬಳಸುವರಂತೆ. ನೋಡಿದ್ರಾ ಹೇಗಿದೆ ಕೇರಳದ ನಾರಿಯರ ಕಪ್ಪು ಜಡೆಯ ರಹಸ್ಯ.

ಚಿನ್ನದ ಅಥವಾ ಬಣ್ಣದ ಅಂಚಿರುವ ಬಿಳಿ ಕಾಟನ್ ಸೀರೆಯನ್ನು ಕಸುವು ಮುಂಡು ಮತ್ತು ನೇರ್ಯತ್ತು ಅನ್ನುತ್ತಾರೆ. ಈ ಸೀರೆ, ಕಪ್ಪು ಬಣ್ಣದ ಹೊಳೆಯುವ ಉದ್ದ ಕೂದಲು... ಅದರ ಮೇಲೆ ಮಲ್ಲಿಗೆ ಹೂ... ಸಾದಾ... ಸೀದಾ... ಸುಂದರ...

ಮುಂಡು
ಬಿಳಿ ಪಂಚೆ ಅಲ್ಲಿನ ಸಾಂಪ್ರದಾಯಿಕ ಉಡುಪು. ಅಲ್ಲಿನ ವಾತಾವರಣಕ್ಕೆ ಅದು ಸೂಕ್ತ. ಆದರೆ ಅವರು ನಮ್ಮಂತೆ ಉಡುವುದಿಲ್ಲ. ಉಲ್ಟಾ!
ಸುಮ್ಮನೆ ಪಂಚೆ ಉಡುವುದನ್ನು ಊಹಿಸಿಕೊಳ್ಳಿ. ಬೆನ್ನು ಬಳಸಿ ಬಂದಿರುವ ಪಂಚೆಯ ಎರಡೂ ತುದಿಗಳನ್ನು ಎರಡು ಕೈಗಳಲ್ಲೂ ಹಿಡಿದಿರುವಿರಿ. ನಮ್ಮ ಕಡೆ ಮೊದಲು ಎಡಗೈಯಲ್ಲಿರುವ ತುದಿಯನ್ನು ಒಳಗೆ ತಂದು ನಂತರ ಬಲಗೈಯಲ್ಲಿರುವ ಬಲತುದಿಯನ್ನು ತಂದು ಸಿಕ್ಕಿಸುತ್ತೇವೆ. ಆದರೆ ಅವರು ಇದರ ತಿರುಗಾಮುರುಗಾ. ಮೊದಲು ಬಲಗೈ ನಂತರ ಎಡಗೈ. ಅವರದನ್ನು "ಮುಂಡು" ಅನ್ನುವರು.

ರಸ್ತೆ ಪಕ್ಕದಲ್ಲಿ ಮಾರಾಟಕ್ಕಿಟ್ಟಿದ್ದ ನಳ್ಳಿ, ಸೀಗಡಿ ಮತ್ತು ಮೀನುಗಳನ್ನು ನೋಡುವಾಗ, ಆಟೋ ಡ್ರೈವರ್ ಶಿಬು ಅವನ್ನು "ಕೊಂಜಿ", "ಚೆಮ್ಮೀನ್" ಮತ್ತು "ಕರಿಮಿ" ಎನ್ನುವರೆಂದ. "ಕರಿಮಿ" ಅಂದರೆ, ನನ್ನನ್ನು "ಕರಿ" ಮಾಡಿ ಎಂದೇ? ಗೊತ್ತಿಲ್ಲ!

ನೀರುಕಾಗೆ(ಕಾರ್ಮೊರಾಂಟ್) ಅವರ ಭಾಷೆಯಲ್ಲಿ "ನ್ಯಾರ" ಆಗಿದೆ.
ಮಿಂಚುಳ್ಳಿಯನ್ನು "ಪೊಣ್ಮಾನ್" ಅನ್ನುವರಂತೆ.ಬತ್ತದ ವಿಶೇಷ
ಇಡೀ ಪ್ರಪಂಚದಲ್ಲಿ ನೆದರ್‌ಲ್ಯಾಂಡ್ ಬಿಟ್ಟರೆ ಇಲ್ಲಿ ಮಾತ್ರ ಸಮುದ್ರ ಮಟ್ಟಕ್ಕಿಂತ ಕೆಳಗೆ (೧.೫ - ೨ ಮೀಟರ್ ಕೆಳಗೆ) ಬತ್ತ ಬೆಳೆಯುವರು. ಇವರ ಹಸಿರು ಗದ್ದೆಗಳು ಮಾತಿನಿಂದ ಬಣ್ಣಿಸಲು ಸಾಧ್ಯವಿಲ್ಲ. ಕುವೆಂಪು ಅವರ ಕವನವನ್ನಷ್ಟೇ ಇಲ್ಲಿ ಬರೆಯಬಲ್ಲೆ.
ಹಸುರಾಗಸ ; ಹಸುರು ಮುಗಿಲು ;
ಹಸುರು ಗದ್ದೆಯಾ ಬಯಲು ;
ಹಸುರಿನ ಮಲೆ ; ಹಸುರು ಕಣಿವೆ ;
ಹಸುರು ಸಂಜೆಯಾ ಬಿಸಿಲೂ!

ಅದೊ ಹುಲ್ಲಿನ ಮಕಮಲ್ಲಿನ
ಪೊಸಪಚ್ಚೆಯ ಜಮಖಾನೆ
ಪಸರಿಸಿ ತಿರೆ ಮೈಮುಚ್ಚಿರೆ
ಬೇರೆ ಬಣ್ಣವನೆ ಕಾಣೆ !

ಹೊಸ ಹೂವಿನ ಕಂಪು ಹಸುರು,
ಎಲರಿನ ತಂಪೂ ಹಸುರು !
ಹಕ್ಕಿಯ ಕೊರಲಿಂಪು ಹಸುರು ;
ಹಸುರು ಹಸುರಿಳೆಯುಸಿರೂ !

ಹಸುರತ್ತಲ್ ! ಹಸುರಿತ್ತಲ್ !
ಹಸುರೆತ್ತಲ್ ಕಡಲಿನಲಿ
ಹಸುರ್ಗಟ್ಟಿತೊ ಕವಿಯಾತ್ಮಂ
ಹಸುರ್‌ನೆತ್ತರ್ ಒಡಲಿನಲಿ !

ನಾಗದೋಣಿ
ನಾರ್ವೆ ದೇಶದ "ಸ್ನೇಕ್ ಬೋಟ್" ಹೋಲುತ್ತದೆಂದು ಇಲ್ಲಿಗೆ ಮೊದಲು ಬಂದ ಯುರೋಪಿಯನ್ನರು ಇದನ್ನು "ಸ್ನೇಕ್ ಬೋಟ್" ಎಂದು ಕರೆದರು. ಹಾಗಾಗಿ ಕನ್ನಡದಲ್ಲಿ "ನಾಗದೋಣಿ" ಅನ್ನಬೇಕಾಗಿದೆ. ಕೇರಳಿಗರು ಮಾತ್ರ "ಚುಂಡನ್ ವಲ್ಲಂ" ಅನ್ನುವರು. ೨೪ ರಿಂದ ೩೬ ಮೀಟರ್ ಉದ್ದವಿರುವ ಈ ಚುಂಡನ್ ವಲ್ಲಂಗಳ ತುದಿ ಒಳ್ಳೆ ಹಾವಿನ ಹೆಡೆಯಂತೆಯೇ ಇರುತ್ತದೆ. ಹಿತ್ತಾಳೆಯಿಂದ ಅಲಂಕರಿಸಿದ ಈ ಹೆಡೆಯ ಭಾಗವನ್ನು "ಅಮರಂ" ಅನ್ನುವರು. ನೂರಕ್ಕೂ ಹೆಚ್ಚು ಜನ ಅಂಬಿಗರು, ವಾದ್ಯಗಾರರೊಂದಿಗೆ ಸೇರಿ "ವಂಚಿಪಟ್ಟು" ಎನ್ನುವ ಹಾಡುಗಳನ್ನು ಹಾಡುತ್ತಾ ಹೊಂದಾಣಿಕೆಯಿಂದ ಹುಟ್ಟುಹಾಕುವುದನ್ನು ನೋಡುವುದೇ ಹಬ್ಬ. ಅವರ ವೇಗ, ಶಕ್ತಿ, ಸ್ಥಿರತೆ, ಹೊಂದಾಣಿಕೆ... ಎಲ್ಲವೂ ಮೇಳೈಸಿದರೆ ಮಾತ್ರ ವಿಜಯ. ಈ ವಿಜಯದ ಕಿರೀಟ ಮಾಲೆಯೇ "ನೆಹರೂ ಟ್ರೋಫಿ".

ಜವಹರಲಾಲ್ ನೆಹರೂರವರು ೧೯೫೨ರಲ್ಲಿ ಅಲೆಪ್ಪಿಗೆ ಬಂದಿದ್ದಾಗ ಮೊಟ್ಟಮೊದಲು ಈ ಚುಂಡನ್ ವಲ್ಲಂ ಸ್ಪರ್ಧೆ ಆಯೋಜಿಸಿದ್ದರು. ಇದನ್ನು ನೋಡಿ ಪುಳಕಿತರಾದ ನೆಹರೂ ದಿಲ್ಲಿಗೆ ಹೋದ ಮೇಲೆ ಅಲ್ಲಿಂದ ತಮ್ಮ ಹಸ್ತಾಕ್ಷರವಿರುವ ಬೆಳ್ಳಿಯ ಟ್ರ‍ೋಫಿ ಕಳಿಸಿಕೊಟ್ಟರಂತೆ. ಈ ಟ್ರೋಫಿ ಗೆಲ್ಲಲು ಪ್ರತಿವರ್ಷ ಆಗಸ್ಟ್ ತಿಂಗಳ ಎರಡನೆ ಶನಿವಾರ ಇಲ್ಲಿನ ಪುನ್ನಮಡ ಲೇಕ್‌ನಲ್ಲಿ ಸ್ಪರ್ಧೆ... ಅದನ್ನು ವೀಕ್ಷಿಸಲು ದೇಶವಿದೇಶಗಳಿಂದ ಬಂದ ಜನಸಾಗರ...

ಈ ಬಾರಿ ಅಂದರೆ ೫೭ನೇ ವರ್ಷದ ಸ್ಪರ್ಧೆಗೆ ನೆಹರೂ ಕುಟುಂಬದಿಂದ ಸೋನಿಯಾಗಾಂಧಿ ಆಗಮಿಸಿದ್ದರು. ಅವರದ್ದೂ ಚಿತ್ರವನ್ನು ತೆಗೆಯಲು ಸಾಧ್ಯವಾಯ್ತು. ನೋಡಿ...

೧೩೭೦ ಮೀಟರ್ ಉದ್ದದ ಟ್ರಾಕ್‌ನಲ್ಲಿ ನಡೆಯುವ ದೋಣಿ ಸ್ಪರ್ಧೆ.

ಪ್ರಪಂಚದ ಅತಿ ದೊಡ್ಡ ಟೀಮ್‌ಸ್ಪೋರ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಈ ಸ್ನೇಕ್‌ಬೋಟ್ ರೇಸ್.

ನೆಹರೂ ಪೆವಿಲಿಯನ್‌ನಲ್ಲಿ ಮುಖ್ಯ ಅತಿಥಿಗಳು.

ಇನ್ನಷ್ಟು ನಾಗದೋಣಿಗಳ ಚಿತ್ರಾವಳಿ ವೀಕ್ಷಿಸಿ.


ಚಿತ್ರದಲ್ಲಿರುವ ವಿದೇಶಿ ಮಹಿಳೆಯರು ಮೂರು ತಿಂಗಳ ಹಿಂದೆ ಬಂದು ಇಲ್ಲಿನ ಮಹಿಳೆಯರೊಂದಿಗೆ ಸೇರಿ ತರಬೇತಿ ಪಡೆದು ಪ್ರಶಸ್ತಿಯನ್ನೂ ಬಾಚಿಕೊಂಡರು. ಹ್ಯಾಟ್ಸ್ ಆಫ್ ಟು ದೆಮ್.

Tuesday, August 4, 2009

ಕೇರಳದ ಲಾರಿಮಣಿಗಳು

ಕೇರಳಿಗರು ಹೆಚ್ಚಾಗಿ ಸಾದಾ ಬಿಳಿಬಣ್ಣದ ಪಂಚೆ, ಸೀರೆ ಉಟ್ಟರೂ ತಮ್ಮ ಲಾರಿಗಳಿಗೆ ಮಾತ್ರ ರಂಗ್‌ಬಿರಂಗಿ ಬಣ್ಣಗಳಿಂದ ಅಲಂಕರಿಸುತ್ತಾರೆ.
ಅವುಗಳ ಒನಪು, ವಯ್ಯಾರ, ಸೊಗಸು, ಠೀವಿ, ಆಕಾರ... ನೋಡಿ ಸವಿದರೇ ಚೆನ್ನ.
ಅವರು ಟಾಟಾ ಎಫ್‌ಇ ಚಾಸಿಗಳಿಗೆ ಆದಷ್ಟು ಮರವನ್ನೇ ಬಳಸಿ ಬಾಡಿಬಿಲ್ಡ್ ಮಾಡುತ್ತಾರೆ. ಘಟ್ಟ ಹತ್ತಿ ಇಳಿಯಬೇಕು, ಟಿಂಬರ್ ಸಾಗಿಸಬೇಕು ಹಾಗಾಗಿ ಪಿಕ್‌ಅಪ್ ಹೆಚ್ಚಿರುವ ಈ ಚಾಸಿಯನ್ನೇ ಬಳಸುತ್ತಾರೆ.
ನಿಮಗಾಗಿ ಒಂದಷ್ಟು ಸುಂದರ ಲಾರಿಮಣಿಗಳನ್ನು ಚಿತ್ರೀಕರಿಸಿ ತಂದಿರುವೆ. ನೋಡಿ ಆನಂದಿಸಿ.

ತೈ ತೈ ಬಂಗಾರಿ... ತೈ ತೈ ಸಿಂಗಾರಿ... ಬೆಟ್ಟಾದ ಮೇಲಿಂದ ಓಡೋಡಿ ಬಂದಂಥ... ಲಾರಿ!

ಲಾರಿ ಮುನಿದರೆ ಮಾರಿ!

ಮೊಗವು ಚೆನ್ನ, ನಗುವು ಚೆನ್ನ ... ನಿನ್ನ ರೂಪ ಬಲು ಚೆನ್ನ.

ರಂಗು ರಂಗಿನ ರಂಗೀಲ ಮತ್ತು ಬಿಳಿ ಹೆಂಡ್ತಿ.

ಲಾರಿ ಸ್ಟ್ಯಾಂಡ್

ಲಾರಿಯ ಬ್ಯೂಟಿ ಪಾರ್ಲರ್!

ಸೀತಾ ಔರ್ ಗೀತಾ!


ಮೂತಿ ಮೇಲೆ ಮುರುಗನ್!