Tuesday, May 31, 2011

ಕನ್ನಡ ನಾಡಲ್ಲಿ ತೆಲುಗು ಕವಿ ಜಯಂತಿಪ್ರಾಚೀನ ತೆಲುಗು ಕವಿಯೊಬ್ಬರ ಜಯಂತಿಯನ್ನು ಪ್ರತಿ ವರ್ಷ ಮೇ ತಿಂಗಳಲ್ಲಿ ಕನ್ನಡನಾಡಿನಲ್ಲಿ ಆಚರಿಸಲಾಗುತ್ತಿದ್ದು, ಕನ್ನಡ ಮತ್ತು ತೆಲುಗು ಸಾಹಿತ್ಯಿಕ-ಸಾಂಸ್ಕೃತಿಕ ಸಂಬಂಧ ಗಟ್ಟಿಗೊಳಿಸುತ್ತಿದೆ. ಸುಮಾರು ನಲವತ್ತು ವರ್ಷಗಳಿಂದ ಜಯಂತಿ ಕಾರ್ಯಕ್ರಮ ನಡೆಯುತ್ತಿದ್ದು, ತೆಲುಗು ಕವಿಯ ಕೊಡುಗೆಯನ್ನು ಸ್ಮರಿಸಲಾಗುತ್ತದೆ. ಈ ಕವಿ ಬೇರೆ ಯಾರೂ ಅಲ್ಲ, ತೆಲುಗಿನ ಮಹಾಕವಿ ಪೋತನ.ಭಕ್ತಿ ಪಂಥದೊಂದಿಗೆ ಗುರುತಿಸಿಕೊಳ್ಳುವ ಕವಿ ಪೋತನ ಮತ್ತು ಚಿಂತಾಮಣಿ ತಾಲ್ಲೂಕಿನ ಸಂತೇಕಲ್ಲಹಳ್ಳಿ ಗ್ರಾಮಕ್ಕೆ ವಿಶಿಷ್ಟ ಸಂಬಂಧವಿದೆ. ತೆಲುಗು ಮತ್ತು ಕನ್ನಡ ಸಾಹಿತ್ಯದ ಅಪಾರ ಪಾಂಡಿತ್ಯ ಹೊಂದಿದ್ದ ಸಂತೇಕಲ್ಲಹಳ್ಳಿ ಲಕ್ಷ್ಮಿನರಸಿಂಹಶಾಸ್ತ್ರಿ ಅವರು ಸುಮಾರು ೬೦ ವರ್ಷಗಳ ಹಿಂದೆಯೇ ‘ಕನ್ನಡ ಸಾಹಿತ್ಯ ಸೇವಾ ಸದನ’ ಎಂಬ ಸಾಹಿತ್ಯ ಬಳಗದ ಮೂಲಕ ೪೦ಕ್ಕೂ ಹೆಚ್ಚು ಕನ್ನಡ ಕೃತಿಗಳನ್ನು ಬರೆದು ಪ್ರಕಟಿಸಿದ್ದರು.ಅವುಗಳಲ್ಲಿ ತರಿಗೊಂಡ ವೆಂಕಮಾಂಬ, ತ್ಯಾಗರಾಜ ಮುಂತಾದ ತೆಲುಗಿನ ಭಕ್ತಿ ಕವಿಗಳನ್ನು ಪರಿಚಯಿಸಿದ್ದರು. ೧೯೬೦ ರಲ್ಲಿ ಪೋತನ ಕವಿಯ ಶ್ರೀಮದ್ಭಾಗವತವನ್ನು ಸರಳಗದ್ಯದಲ್ಲಿ ಕನ್ನಡಕ್ಕೆ ಅನುವಾದಿಸಿದ್ದರು. ಪೋತನ ಕವಿಯ ಭಾಗವತ ನಾಲ್ಕು ಸಂಪುಟಗಳಲ್ಲಿವೆ.ಕವಿ ಪೋತನ ೧೪ ನೇ ಶತಮಾನಕ್ಕೆ ಸೇರಿದವರು. ರಾಜಾಶ್ರಯವನ್ನೇ ಧಿಕ್ಕರಿಸಿ ರಾಮಚಂದ್ರನಿಗೇ ತನ್ನನ್ನು ಅರ್ಪಿಸಿಕೊಂಡಂತಹ ಆ ಕವಿಗೆ ಕಾವ್ಯಧರ್ಮ ಮತ್ತು ಭಕ್ತಿಯನ್ನು ಸಮ್ಮಿಲನಗೊಳಿಸಿರುವುದಕ್ಕೆ ಭಕ್ತಿ ಪಂಥದಲ್ಲಿ ಗೌರವದ ಸ್ಥಾನವಿದೆ. ಈ ಕವಿಯ ಜೀವನ ಚರಿತ್ರೆ ‘ಬಮ್ಮೆರ ಪೋತನ’ ಎಂಬ ಪುಸ್ತಕವನ್ನೂ ಸಂತೇಕಲ್ಲಹಳ್ಳಿ ಲಕ್ಷ್ಮಿನರಸಿಂಹಶಾಸ್ತ್ರಿ ಬರೆದಿದ್ದಾರೆ.


ಕನ್ನಡಕ್ಕೆ ಅನುವಾದಿಸಿದ ಪೋತನ ಕವಿಯ ಭಾಗವತ.

‘ಪೋತನ ಕವಿಯ ಭಾಗವತದ ನಾಲ್ಕನೆಯ ಸಂಪುಟವನ್ನು ೧೯೬೧ ರಲ್ಲಿ ಅಂದಿನ ಶೃಂಗೇರಿ ಜಗದ್ಗುರುಗಳಾಗಿದ್ದ ಅಭಿನವ ವಿದ್ಯಾತೀರ್ಥ ಸ್ವಾಮೀಜಿ ಚೈತ್ರ ಬಹುಳ ಅಷ್ಠಮಿಯಂದು ಬಿಡುಗಡೆ ಮಾಡಿದ್ದರು. ನಂತರ ಪ್ರತಿ ವರ್ಷ ಚೈತ್ರ ಬಹುಳ ಅಷ್ಠಮಿಯಂದು ಮಹಾಕವಿ ಪೋತನರ ಜಯಂತಿಯನ್ನು ಆಚರಿಸಲು ಹೇಳಿದರು’ ಎಂದು ಸಂತೇಕಲ್ಲಹಳ್ಳಿ ಲಕ್ಷ್ಮಿನರಸಿಂಹಶಾಸ್ತ್ರಿ ಕಿರಿಯ ಸಹೋದರನ ಪುತ್ರ ನಿವೃತ್ತ ಪ್ರೊಫೆಸರ್ ವೇಣುಗೋಪಾಲ್ ತಿಳಿಸಿದರು.

’ಸ್ವಾಮೀಜಿ ನಿರ್ದೇಶನದಂತೆ ಅರ್ಜಿಕ ವೆಂಕಟೇಶ್ ಮತ್ತು ಹೈಕೋರ್ಟ್ ರಿಜಿಸ್ಟ್ರಾರ್ ಲಂಕಾ ಕೃಷ್ಣಮೂರ್ತಿ ಅವರ ಸಹಕಾರದಿಂದ ೧೯೭೦ ರ ವರೆಗೂ ಬೆಂಗಳೂರಿನ ಶಂಕರ ಮಠದಲ್ಲಿ ಜಯಂತಿ ಆಚರಿಸಿದೆವು. ನಂತರ ನಮ್ಮ ಮನೆಯಲ್ಲೇ ಆಚರಿಸುತ್ತಿದ್ದೆವು. ನಾನು ಸಂತೇಕಲ್ಲಹಳ್ಳಿಗೆ ಬಂದ ಮೇಲೆ ೨೦೦೬ ರಿಂದ ಚಿಂತಾಮಣಿಯ ಬ್ರಹ್ಮ ಚೈತನ್ಯ ರಾಮ ಮಂದಿರದಲ್ಲಿ ವಸಂತ ಸಾಹಿತ್ಯೋತ್ಸವ ಎಂಬ ಹೆಸರಿನಲ್ಲಿ ಆಚರಿಸುತ್ತಿದ್ದೇವೆ’ ಎಂದು ಅವರು ತಿಳಿಸಿದರು.


ಸಂತೇಕಲ್ಲಹಳ್ಳಿ ಲಕ್ಷ್ಮಿನರಸಿಂಹಶಾಸ್ತ್ರಿಚಿಂತಾಮಣಿಯ ಬ್ರಹ್ಮ ಚೈತನ್ಯ ರಾಮ ಮಂದಿರದಲ್ಲಿ ಇತ್ತೀಚೆಗೆ ನಡೆದ ಮಹಾಕವಿ ಪೋತನ ಜಯಂತ್ಯುತ್ಸವದಲ್ಲಿ ಸಂತೇಕಲ್ಲಹಳ್ಳಿ ಲಕ್ಷ್ಮಿನರಸಿಂಹಶಾಸ್ತ್ರಿ ಬರೆದಿರುವ ಕನಕದಾಸರ ಮರುಮುದ್ರಣ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಡಾ.ಶೇಷಶಾಸ್ತ್ರಿ, ಕನ್ನಡ ಸಾಹಿತ್ಯ ಸೇವಾ ಸದನದ ಅಧ್ಯಕ್ಷ ಬಿ.ಶಂಕರ್, ಸಾಹಿತ್ಯ ಕೂಟದ ಅಧ್ಯಕ್ಷ ಶ್ರೀರಾಮಮೂರ್ತಿ, ವೈ.ಜಿ.ಗಿರಿಶಾಸ್ತ್ರಿ ಹಾಜರಿದ್ದರು.ಲಕ್ಷ್ಮಿನರಸಿಂಹಶಾಸ್ತ್ರಿ ಅವರು ಬರೆದಿರುವ ಕನಕದಾಸ ಕೃತಿಯ ಬಗ್ಗೆ ಸ.ರಘುನಾಥ ಅವರು ಮಾತನಾಡಿದರು.
ನಿವೃತ್ತ ಪ್ರೊಫೆಸರ್ ವೇಣುಗೋಪಾಲ್ಕಳೆದ ಬಾರಿ ನಡೆದ ಅಷ್ಟಾವಧಾನ ಕಾರ್ಯಕ್ರಮ.

Wednesday, May 25, 2011

ಬುರ್‌ಬುರ್ ಗಂಗಮ್ಮ


ಶಿಡ್ಲಘಟ್ಟದ ಬಳಿ ಕಂಡುಬಂದ ‘ಬುರ್ಬುರ್ ಗಂಗಮ್ಮ’ ಜನಾಂಗದವರು.

ತುತ್ತು ಅನ್ನಕ್ಕಾಗಿ ಕೆಲವರು ಪಡಬಾರದ ಕಷ್ಟಗಳನ್ನೆಲ್ಲ ಪಡುತ್ತಾರೆ. ಹೊಟ್ಟೆ ತುಂಬ ಊಟ ಮಾಡಲಾಗದೇ ಪರಿತಪಿಸುತ್ತಾರೆ. ಪರಾವಲಂಬಿಯಾಗಿ ಯಾತನೆಯಿಂದ ಬದುಕುವುದು ಅನಿವಾರ್ಯವಾಗುತ್ತದೆ. ಆದರೆ ಸ್ವಾವಲಂಬಿ ಸ್ವಾಭಿಮಾನದಿಂದ ಬದುಕಲು ಕೆಲವರು ಶ್ರಮಿಸುತ್ತಾರೆ. ದೇಹದಂಡನೆ ಮಾಡುತ್ತಾರೆ. ಅಂಥವರು ‘ಬುರ್‌ಬುರ್ ಗಂಗಮ್ಮ’ ಎಂಬ ಜನಾಂಗದಲ್ಲಿದ್ದಾರೆ.

ಓದು-ಬರಹ ಕಲಿಯಲಾಗದ ಅವರಿಗೆ ಶಿಸ್ತುಬದ್ಧ ಜೀವನ ಕೂಡ ಇರುವುದಿಲ್ಲ. ಊರೂರಿಗೆ ಅಲಮಾರಿಗಳಂತೆ ತಿರುಗುವ ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಊರುಗಳನ್ನು ತಿರುಗುತ್ತ ಶಿಡ್ಲಘಟ್ಟಕ್ಕೆ ಬಂದ ಅವರು ತಮ್ಮ ಜೀವನದ ಕಟುಸತ್ಯಗಳನ್ನು ತೆರೆದಿಟ್ಟರು.
‘ನಮಗೆ ಓದಲು-ಬರೆಯಲು ಬರುವುದಿಲ್ಲ. ಯಾರೂ ಕೆಲಸ ಕೂಡ ಕೊಡುವುದಿಲ್ಲ. ಈ ಕಾರಣಕ್ಕಾಗಿ ನಮ್ಮ ಶರೀರವನ್ನು ಹಿಂಸಿಸಿಕೊಳ್ಳುತ್ತ, ನಮ್ಮ ಕಲೆಯನ್ನು ಪ್ರದರ್ಶಿಸುತ್ತವೆ. ಇದನ್ನು ನೋಡುವ ಜನರು ಬೆರಗಾಗಿ ಅಲ್ಪಸ್ವಲ್ಪ ಹಣವನ್ನು ನೀಡುತ್ತಾರೆ. ಆ ಒಂದು ದಿನದ ಊಟಕ್ಕೆ ಸಾಕಾಗುವಷ್ಟು ಹಣ ಬರುತ್ತದೆ. ಇವತ್ತಿನ ಊಟದ ಸಮಸ್ಯೆಯಿಲ್ಲ ಎಂದು ನೆಮ್ಮದಿಯಿಂದ ಊಟ ಮಾಡಿ ಮತ್ತೆ ಮುಂದಿನ ಊರಿಗೆ ಪ್ರಯಾಣಿಸುತ್ತೇವೆ’ ಎಂದು ಜನಾಂಗದ ಕಲಾವಿದರು ತಿಳಿಸಿದರು.

‘ಅಲೆಮಾರಿಗಳಾಗಿರುವ ನಮ್ಮ ಬಳಿ ಬಳಿ ಪಡಿತರ ಚೀಟಿ ಇಲ್ಲ. ಹೇಳಿಕೊಳ್ಳಲು ಸ್ವಂತ ಊರು ಇಲ್ಲ. ಸರ್ಕಾರಿ ಸೌಲಭ್ಯಗಳು ಸಿಗುವುದಂತೂ ಇನ್ನೂ ದೂರ. ನೋವು-ದುಃಖವನ್ನು ಮರೆಯಲು ಸೆರೆ ಕುಡಿಯುತ್ತೇವೆ. ಅನಾರೋಗ್ಯಕ್ಕೀಡಾವರು ಆಯಾ ಊರುಗಳಲ್ಲೇ ಸಾವನ್ನಪ್ಪುತ್ತಾರೆ. ನಮ್ಮ ಹುಟ್ಟು-ಸಾವುಗಳ ಬಗ್ಗೆ ಯಾರೂ ಲೆಕ್ಕ ಇಡುವುದಿಲ್ಲ’ ಎಂದು ಅವರು ಹೇಳಿದರು.

ದಕ್ಷಿಣ ಕರ್ನಾಟಕದಲ್ಲಿ ಉರು ಮಾರಿಯಮ್ಮ, ಕೊಲ್ಲಾಪುರದಮ್ಮ, ಬುರ್‌ಬುರ್ ಗಂಗಮ್ಮ ಎಂದು ಕರೆಸಿಕೊಳ್ಳುವ ಈ ಜನಾಂಗದವರು ಉತ್ತರ ಕರ್ನಾಟಕ ಭಾಗದಲ್ಲಿ ‘ದುರುಗ ಮುರುಗಿ’ ಎಂದು ಕರೆಯಲ್ಪಡುತ್ತಾರೆ. ಮಾರಮ್ಮ ಅಥವಾ ಗಂಗಮ್ಮ ದೇವತೆಯ ಮೂರ್ತಿಯನ್ನು ಪೆಟ್ಟಿಗೆಯಲ್ಲಿಟ್ಟುಕೊಳ್ಳುವ ಅವರು ಅದನ್ನು ಹೊತ್ತುಕೊಂಡು ಊರೂರು ತಿರುಗುತ್ತಾರೆ. ವಾದ್ಯ ಬಡಿತಕ್ಕೆ ತಕ್ಕಂತೆ ಕುಣಿಯುವುದಲ್ಲದೆ, ಪೋತುರಾಜನ ವೇಷ ಮತ್ತು ಸೋಮನ ಮುಖವಾಡದ ಪ್ರದರ್ಶನ ಕೂಡ ನೀಡುತ್ತಾರೆ.
ಸಂತೆ, ಜಾತ್ರೆಗಳಂತಹ ಹೆಚ್ಚು ಜನಸಂಖ್ಯೆಯಿರುವ ಪ್ರದೇಶದಲ್ಲಿ ತಮ್ಮ ಪೆಟ್ಟಿಗೆಯನ್ನು ಸ್ಥಾಪಿಸಿ ಗಂಟೆ ಸದ್ದು ಮಾಡುತ್ತಾರೆ. ಮಹಿಳೆಯರು ಉರುಮೆ ಸದ್ದು ಮಾಡುತ್ತಾ ಮರಗಮ್ಮನ ಸ್ತುತಿ ಮಾಡುತ್ತಾರೆ. ಪುರುಷರು ಚಾವಟಿಯಿಂದ ತಮ್ಮ ಬರಿಮೈಗೆ ಹೊಡೆದುಕೊಂಡು ದೇವರನ್ನು ಹೊಗಳುತ್ತಾರೆ. ಉರುಮೆ ವಾದ್ಯದ ಗತಿಗೆ ತಕ್ಕಂತೆ ಹೆಚ್ಚೆ ಹಾಕುತ್ತಾ ‘ಪೋತರಾಜ’ ಆವೇಶ ಬಂದವರಂತೆ ಚಾವಟಿಯಿಂದ ಪಟಪಟನೆ ಮೈಯಿಗೆ ಹೊಡೆದುಕೊಳ್ಳುತ್ತಾರೆ. ಕೆಲವೊಮ್ಮೆ ರಕ್ತ ಕೂಡ ಒಸರುತ್ತದೆ.
ಅವರ ವೇಷಭೂಷಣಗಳು ವಿಚಿತ್ರ. ಮುಖಕ್ಕೆ ಅರಿಶಿನ, ಹಣೆಗೆ ದೊಡ್ಡ ಬೊಟ್ಟಿನಾಕಾರದ ಕುಂಕುಮ, ಕಣ್ಣಿಗೆ ಕಾಡಿಗೆ, ಪೊದೆ ಮೀಸೆ, ಎದೆಗೂ ಅರಿಶಿನ ಕುಂಕುಮದ ಲೇಪನ, ಕೈ ರೆಟ್ಟೆಗೆ ಬೆಳ್ಳಿಯ ಕಡಗ, ನಡುವಿಗೆ ದಪ್ಪ ಗೆಜ್ಜೆಯ ಸರ, ಕಾಲಿಗೆ ಪೊದೆಗೆಜ್ಜೆ, ಕೆಂಪು ಸೀರೆಯನ್ನೇ ನಿರಿಗೆಯಾಗಿ ಕಚ್ಚೆಯ ರೀತಿ ಕಟ್ಟಿದ ಕಾಸೆ, ಕೈಯಲ್ಲಿ ಚಾವಟಿ-ಇವು ಪೋತರಾಜನ ವೇಷ. ಈತನ ಜೊತೆಯಲ್ಲಿರುವ ಮಹಿಳೆ ಕೈಗೆ ಕಡಗ, ನಡುವಿಗೆ ಡಾಬು, ಮೂಗುತಿ ಹಾಗೂ ಇತರ ಬೆಳ್ಳಿಯ ಒಡವೆ ಧರಿಸಿರುತ್ತಾರೆ.
‘ಗ್ರಾಮೀಣ ಶಕ್ತಿದೇವತೆಗಳಲ್ಲಿ ಮಾರಮ್ಮ ಅತ್ಯಂತ ಪ್ರಭಾವಶಾಲಿ. ಉರಿ ಮಾರಮ್ಮ ಅಂದರಂತೂ ಮತ್ತಷ್ಟು ಉಗ್ರ. ಅಂತಹ ‘ಹೊತ್ತಾಡುವ ಉರಿ ಮಾರಮ್ಮ’ ಊರಿಗೆ ಬಂದರೆ ಕಷ್ಟಗಳು ದೂರವಾಗುತ್ತವೆ ಗ್ರಾಮಸ್ಥರ ನಂಬಿಕೆ. ಭಯ ಹಾಗೂ ಭೀಭತ್ಸ ಬೆರೆತ ಅಪರೂಪದ ಜಾನಪದ ಕಲೆಯಿದು’ ಎಂದು ಜನಪದ ತಜ್ಞ ಡಾ.ಜಿ.ಶ್ರೀನಿವಾಸಯ್ಯ ತಿಳಿಸಿದರು.

Tuesday, May 17, 2011

ತುತ್ತು ಅನ್ನಕ್ಕಾಗಿ ಮೈಲು ದಾಟಿ ಬಂದರು... ನೋವಿನ ನಡುವೆ ಸಾಗಿದೆ ಜೀವನ...


ಶಿಡ್ಲಘಟ್ಟದಲ್ಲಿ ಕಮ್ಮಾರಿಕೆ ಕೆಲಸ ಮಾಡುತ್ತಿರುವ ರಾಜಾಸ್ತಾನದ ಅಲೆಮಾರಿಗಳು.

’ಹೆಚ್ಚೇನೂ ಆಸೆಪಡದ ಬಡವನಿಗೆ ತನ್ನ ದುಡಿಮೆಯಿಂದ ಗಳಿಸಿದ ಒಂದು ತುತ್ತು ಅನ್ನ ಸಿಕ್ಕರೆ ಸಾಕು. ಆ ಕ್ಷಣ ಸಂಭ್ರಮದಿಂದ ಬದುಕಿಬಿಡುತ್ತಾನೆ’. ಇಂತಹ ಒಂದು ಸಂಭ್ರಮಕ್ಕಾಗಿ ಬಡವ ಊರೂರು ಅಲೆಯುತ್ತಾನೆ. ದೇಶ ಸುತ್ತುತ್ತಾನೆ. ದಿನಪೂರ್ತಿ ಕಷ್ಟಪಟ್ಟ ದುಡಿಮೆಯಿಂದ ಸಿಗುವ ಕ್ಷಣಿಕ ಸುಖ-ಸಂಭ್ರಮ ಅರಸುತ್ತ ರಾಜಾಸ್ತಾನದ ಕುಟುಂಬವೊಂದು ಶಿಡ್ಲಘಟ್ಟಕ್ಕೆ ಆಗಮಿಸಿದೆ. ಕಮ್ಮಾರಿಕೆಯನ್ನು ನೆಚ್ಚಿಕೊಂಡು ಬದುಕುತ್ತಿರುವ ಈ ಕುಟುಂಬ ಕೆಲ ದಿನಗಳಿಂದ ಇಲ್ಲೇ ಬೀಡುಬಿಟ್ಟಿದೆ.

ಗ್ರಾಮೀಣ ಜನರ ವ್ಯವಸಾಯಕ್ಕೆ ಬೇಕಾದ ಕಬ್ಬಿಣದ ಉಪಕರಣಗಳನ್ನು ತಯಾರಿಸಿ ಮಾರುವ ಈ ಕುಟುಂಬದಲ್ಲಿ ಹಿರಿಯರು-ಕಿರಿಯರು ಇದ್ದಾರೆ. ದುಡಿಮೆ ಎಂಬುದು ಕುಟುಂಬದ ಹಿರಿಯನಿಗೆ ಅಥವಾ ಪುರುಷನಿಗೆ ಸೀಮಿತವಾದುದಲ್ಲ. ದುಡಿಮೆಯಲ್ಲಿ ತಮ್ಮದು ಸಹಯೋಗವಿದೆ ಎಂಬಂತೆ ಮಹಿಳೆಯರು ಮತ್ತು ಮಕ್ಕಳು ಸಹ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ.

ದೂರದ ರಾಜಾಸ್ತಾನದಲ್ಲಿನ ಮನೆ, ಆಪ್ತ ಸದಸ್ಯರನ್ನು, ಅಲ್ಲಿನ ದೈನಂದಿನ ಸಂಸ್ಕೃತಿಯಿಂದ ದೂರಗೊಂಡು ಶಿಡ್ಲಘಟ್ಟಕ್ಕೆ ಬಂದಿರುವ ಈ ಕುಟುಂಬಕ್ಕೆ ಶಾಶ್ವತ ಸೂರು ಇಲ್ಲ. ರಾತ್ರಿ ವೇಳೆ ತಾತ್ಕಾಲಿಕ ಟೆಂಟ್ ಕಟ್ಟಿಕೊಂಡು ಮಲಗುವ ಇವರು ದಿನಪೂರ್ತಿ ಕುಲುಮೆ ಕೆಲಸದಲ್ಲಿ ನಿರತರಾಗಿರುತ್ತಾರೆ. ಒಬ್ಬರು ಉಪಕರಣಗಳ ತಯಾರಿಕೆಯಲ್ಲಿ ಪರಿಣತಿಗಳಿಸಿದ್ದರೆ, ಮತ್ತೊಬ್ಬರು ಅವುಗಳ ಮಾರಾಟದಲ್ಲಿ ಸಿದ್ಧಹಸ್ತರು.


ಕಬ್ಬಿಣದ ಕೃಷಿ ಉಪಕರಣಗಳನ್ನು ಮಾರಾಟ ಮಾಡುತ್ತಿರುವುದು.

ಕಾರ್ಯ ವಿಧಾನ:
ಕಬ್ಬಿಣವನ್ನು ಕುಲುಮೆಯ ಒಲೆಯಲ್ಲಿ ಇಟ್ಟು ಅದರ ಸುತ್ತಲೂ ಇದ್ದಿಲು ಮುಚ್ಚಿ ತಿರುಗಣಿಯನ್ನು ತಿರುಗಿಸುತ್ತಾ ಹೋದಂತೆ ಕಬ್ಬಿಣ ಕೆಂಪಾಗುತ್ತದೆ. ಹದ ಬಂದ ಮೇಲೆ ಇಕ್ಕುಳದ ಸಹಾಯದಿಂದ ಗಟ್ಟಿಯಾಗಿ ಹಿಡಿದು ಅಡಿಗಲ್ಲಿನ ಮೇಲಿಟ್ಟು ಸುತ್ತಿಗೆಯಿಂದ ಬಲವಾದ ಪೆಟ್ಟು ಕೊಡುತ್ತಾರೆ. ಸಣ್ಣ ಸುತ್ತಿಗೆಯಿಂದ ಬಡಿದು ತಿದ್ದಿದ ಮೇಲೆ ಕಬ್ಬಿಣ ಕಠಿಣವಾಗಲೆಂದು ತಕ್ಷಣ ನೀರಿನಲ್ಲಿ ಎಷ್ಟು ಬೇಕೋ ಅಷ್ಟು ಪ್ರಮಾಣದಲ್ಲ್ಲಿ ಅದ್ದಿ ನೀರುಬಾನಿಗೆ ಹಾಕಿ ತೆಗೆಯುತ್ತಾರೆ.

ಇವರು ತಯಾರಿಸುವ ಸಾಧನಗಳು:
ಕುಡಗೋಲು, ನೆರಗೋಲು, ಗುದ್ದಲಿ, ಸಲಿಕೆ, ಕೊಡಲಿಗಳನ್ನು ಹೆಚ್ಚಾಗಿ ತಯಾರಿಸುವ ಇವರು ನೇಗಿಲಿಗೆ ಬೇಕಾದ ಕುಳ, ಬೆಳೆಗಳ ಸಾಲು ಮಾಡಲು ಪಿಳೆಗುಡ, ಕಸ ಸ್ವಚ್ಛ ಮಾಡಲು ಹೆಗ್ಗುಡ, ಬಿತ್ತಿದ ಮೇಲೆ ಸಾಲು ಮಾಡಲು ಬಳಗುಡ, ಟ್ರಾಕ್ಟರ್ ಬಳಸಿ ಹರಗಲು ಬಳಸುವ ಡಮಗುಂಟೆಗಳನ್ನೂ ತಯಾರಿಸಿ ಕೊಡುವರು.ಇವರ ವಾಸವೂ ಇಲ್ಲೆ ಹಾಗೂ ದುಡಿಮೆಯೂ ಇಲ್ಲೆ.

ಕಬ್ಬಿಣ ಕಠಿಣಗೊಳಿಸುವ ಕ್ರಿಯೆಯೊಂದಿಗೆ ತಮ್ಮ ಜೀವನವನ್ನು ಹೋಲಿಸಿಕೊಳ್ಳುವ ಇವರು, ’ನಮಗೆ ಈ ಊರು ಸರಿಯಾಗಿ ಗೊತ್ತಿಲ್ಲ. ಇಲ್ಲಿನ ನೀತಿ, ನಿಯಮ ಮತ್ತು ಸಂಸ್ಕೃತಿ ಬಗ್ಗೆ ಅರಿವಿಲ್ಲ. ಇವತ್ತು ಈ ಊರು-ನಾಳೆ ಇನ್ನೊಂದು ಊರಿಗೆ ಹೋಗುತ್ತೇವೆ. ಚೆಂದದ ಮನೆ ಕಟ್ಟಿಸಿಕೊಂಡು ರಾಜಾಸ್ತಾನದಲ್ಲಿ ವಾಸವಿದ್ದ ನಾವು ಬಡತನ, ನಿರುದ್ಯೋಗದಿಂದ ಅಲೆಮಾರಿಗಳು ಆಗಬೇಕಾಯಿತು. ನಮಗೆ ಬೇಕಿರುವುದು ತುತ್ತು ಅನ್ನ, ಧರಿಸಲು ಬಟ್ಟೆ ಮತ್ತು ವಾಸಿಸಲು ಮನೆ. ಒಳ್ಳೆಯ ಬಟ್ಟೆ ಮತ್ತು ಮನೆ ಸಿಗದಿದ್ದರೂ ಚಿಂತೆಯಿಲ್ಲ. ತುತ್ತು ಅನ್ನ ಸಿಕ್ಕರೆ ಸಾಕು, ಜೀನಾ ಇಸಿ ಕಾ ನಾಮ್ ಹೈ... ಎಂಬಂತೆ ನಮ್ಮ ಬದುಕು’ ಎಂದು ಮಾರ್ಮಿಕವಾಗಿ ನುಡಿಯುತ್ತಾರೆ.

’ನಮಗೆ ಎಲ್ಲಿ ಅನ್ನ ಸಿಗುವುದೋ ಅದೇ ನಮ್ಮೂರು. ನಾವು ೧೦ ಜನರು. ಒಗ್ಗಟ್ಟಿನಿಂದ ಕಷ್ಟಪಟ್ಟು ದುಡಿಯುತ್ತೇವೆ. ಕಲಿತಿರುವ ಕಸುಬು ನಮ್ಮನ್ನು ಉಪವಾಸ ಹಾಕಲ್ಲ ಎಂಬ ನಂಬಿಕೆಯಿದೆ. ಒಂದು ಕೆಜಿಗೆ ೧೫೦ ರೂಪಾಯಿಯಂತೆ ಕೃಷಿ ಉಪಕರಣಗಳನ್ನು ಮಾಡಿಕೊಡುತ್ತೇವೆ’ ಎಂದು ಆಕಾಶ್ ಎಂಬುವವರು ತಿಳಿಸಿದರು.

’ಕಮ್ಮಾರಿಕೆ ಮಾಡುತ್ತಿದ್ದವರು ಮೂಲತಃ ವಿಶ್ವಬ್ರಾಹ್ಮಣ ಕುಲದವರಾಗಿದ್ದು ಕರಕುಶಲ ಕಲೆಗಳ ಬೆಳವಣಿಗೆಗೆ ಇವರ ಕೊಡುಗೆ ಅಪಾರವಾದುದು. ನಂತರ ಮುಸಲ್ಮಾನರು ಈ ವೃತ್ತಿಯನ್ನು ಮುಂದುವರೆಸಿದರು. ಅವರು ಇದನ್ನು ಕೊಲಿಮಿ ಅನ್ನುತ್ತಿದ್ದರು. ಹಿಂದೆ ಚಕ್ಕಡಿ ಗಾಡಿಗಳನ್ನು ಬಳಸುತ್ತಿದ್ದರು. ಅದರ ಗಾಲಿಗಾಗಿ ಕಬ್ಬಿಣದ ಅಚ್ಚು ಅತ್ಯಗತ್ಯವಾಗಿತ್ತು. ಚಕ್ಕಡಿ ಬಂಡಿಗೆ ಬೇಕಾದ ಸಾಮಗ್ರಿಗಳಾದ ಗಾಲಿಯ ಅಚ್ಚು, ಗಾಲಿಯ ಗಡ್ಡು ಕಟ್ಟು, ಬಾಯಕಟ್ ಗಾಲಿಗಳನ್ನು ಜೋಡಿಸುವ ಅಚ್ಚು, ರಂಧ್ರಕ್ಕೆ ಬೇಕಾದ ಬಾಯಬಳಿ ಹಾಗೂ ಕಿವಿಬಳಿ ಇವೆಲ್ಲಕ್ಕೂ ರೈತರು ಇವರನ್ನು ಅವಲಂಬಿಸಿದ್ದರು. ಟೈರು ಗಾಡಿಗಳು ಹಾಗೂ ಟ್ರ್ಯಾಕ್ಟರು ಬಂದ ಮೇಲೆ ಈ ವೃತ್ತಿಯವರು ಕ್ರಮೇಣ ನಶಿಸಿದರು’ ಎಂದು ಶಿಡ್ಲಘಟ್ಟದ ಹಿರಿಯರೊಬ್ಬರು ತಿಳಿಸಿದರು.

Monday, May 9, 2011

ಕೈಯಲ್ಲಿ ಮೂಡುವ ಚಿತ್ತಾರ ’ಹಚ್ಚೆ’


ಶಿಡ್ಲಘಟ್ಟದಲ್ಲಿ ನಡೆಯುವ ಸಂತೆಯಲ್ಲಿ ಹಚ್ಚೆಯನ್ನು ಕೈಮೇಲೆ ಹಾಕಿಸಿಕೊಳ್ಳುತ್ತಿರುವ ಯುವಕ.

ಒಂದು ಕೈಮೇಲೆ ಪ್ರೀತಿಪಾತ್ರರಾದವರ ಹೆಸರು, ಮತ್ತೊಂದು ಕೈಮೇಲೆ ಆರಾಧಿಸುವ ಭಗವಂತನ ಚಿತ್ರ. ಒಬ್ಬರಿಗೆ ಪ್ರಾಣಿಯ ಚಿತ್ರ ಬಿಡಿಸಿಕೊಳ್ಳುವ ಆಸೆ, ಮತ್ತೊಬ್ಬರಿಗೆ ಪಕ್ಷಿಯ ಚಿತ್ರ ಮೂಡಿಸಿಕೊಳ್ಳುವ ಹಂಬಲ.
ಹಸ್ತ ಮತ್ತು ಬೆರಳುಗಳಿಗೆ ಮಾತ್ರವೇ ಸೀಮಿತವಾಗಿದ್ದ ಈ ರೀತಿಯ ಚಿತ್ತಾರಗಳು ಈಗ ಭುಜವನ್ನು ದಾಟಿಕೊಂಡು ಮುಖದವರೆಗೂ ತಲುಪಿವೆ. ಇದಕ್ಕೆ ಕನ್ನಡದಲ್ಲಿ ಕರೆಯಲ್ಪಡುವ ಹೆಸರು ’ಹಚ್ಚೆ’. ಇಂಗ್ಲಿಷ್‌ನಲ್ಲಿ ’ಟ್ಯಾಟೂ’.
ಹಲವು ವರ್ಷಗಳ ಹಿಂದೆ ಭಾರಿ ಜಾತ್ರೆ ಮತ್ತು ಸಂತೆಗಳಿಗೆ ಹೋಗುತ್ತಿದ್ದ ಗ್ರಾಮಸ್ಥರು ತಮ್ಮ ಮಕ್ಕಳು ಮತ್ತು ಕುಟುಂಬದ ಸದಸ್ಯರ ಕೈಗಳಿಗೆ ಹಚ್ಚೆಯನ್ನು ಹಾಕಿಸುತ್ತಿದ್ದರು. ಜನದಟ್ಟಣೆ, ಸದ್ದುಗದ್ದಲದಲ್ಲಿ ಕಳೆದುಹೋಗಬಾರದು. ಒಂದುವೇಳೆ ತಪ್ಪಿಸಿಕೊಂಡರೂ ಕೈ ಮೇಲಿನ ಹೆಸರು ತೋರಿಸಿಕೊಂಡು, ಹೇಳಿಕೊಂಡು ಮತ್ತೆ ಕುಟುಂಬ ಸದಸ್ಯರೊಂದಿಗೆ ಸೇರಿಕೊಳ್ಳಬಹುದು ಎಂಬ ನಂಬಿಕೆ ಗ್ರಾಮಸ್ಥರಲ್ಲಿತ್ತು. ಪುರಾತನ ಜಾನಪದ ಮಾದರಿಯ ಈ ಹಚ್ಚೆ ಕಲೆ ಗ್ರಾಮಾಂತರ ಪ್ರದೇಶ ದಾಟಿ ನಗರದ ಯುವಜನರ ಮನಸ್ಸಿನಲ್ಲೂ ಆವರಿಸಿದೆ. ಬಗೆಬಗೆಯ ಚಿತ್ತಾರ, ವಿನ್ಯಾಸಗಳಿಗೆ ಮಾರು ಹೋಗಿರುವ ಯುವಜನರು ’ಟ್ಯಾಟೂ’ ಎಂಬ ಹೆಸರಿನಲ್ಲಿ ಮೈಮೇಲೆಲ್ಲಾ ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾರೆ.


ಶಿಡ್ಲಘಟ್ಟದಲ್ಲಿ ನಡೆಯುವ ಸಂತೆಯಲ್ಲಿ ಹಚ್ಚೆಯನ್ನು ಹಾಕಲು ನಾನಾ ಬಗೆಯ ಚಿತ್ತಾರದ ಮಾದರಿಗಳನ್ನು ಇಟ್ಟುಕೊಂಡಿರುವ ಹೆಂಗಸು.

’ಒಮ್ಮೆ ಹಚ್ಚೆ ಹಾಕಿದ ಮೇಲೆ ಅದು ಜೀವನ ಪರ್ಯಂತ ಹೋಗುವುದಿಲ್ಲ. ಎಷ್ಟೇ ತಿಕ್ಕಿದರೂ, ಏನೇ ಮಾಡಿದರೂ ಹಚ್ಚೆ ಯಥಾಸ್ಥಿತಿ ಉಳಿದುಕೊಂಡಿರುತ್ತದೆ. ಹಚ್ಚೆ ಕಲೆಗಾರರು ಅಷ್ಟೇ ಸೂಕ್ಷ್ಮ ಕಲಾವಿದರು ಮತ್ತು ಶ್ರಮಜೀವಿಗಳು. ಕಡಿಮೆ ಖರ್ಚಿನಲ್ಲಿ ಹಚ್ಚೆ ಹಾಕುವ ಅವರು ಜಾನಪದ ಸಂಸ್ಕೃತಿ ಕಾಪಾಡಿಕೊಂಡು ಬರುತ್ತಿದ್ದಾರೆ’ ಎಂದು ಹಿರಿಯರೊಬ್ಬರು ಹೇಳಿದರು.
ಕಾಡಿಗೆ, ಚಿಮಣಿ ಎಣ್ಣೆಯಿಂದ ಸಂಗ್ರಹಿಸಿದ ಕಪ್ಪು ಪುಡಿ, ಕಾಡಿಗೆ, ಇಂಕ್, ಬ್ಯಾಟರಿ ಚಾಲಿತ ಸೂಜಿ ಬಳಸಿ ಚುಚ್ಚುವ ಮೂಲಕ ಹಚ್ಚೆಯನ್ನು ಹಾಕುತ್ತಾರೆ. ಸಾಮಾನ್ಯವಾಗಿ ಕೊರವಂಜಿ, ಒಡ್ಡರು, ಬೇಡರು ಮತ್ತು ಕಿಳ್ಳೆಕ್ಯಾತ ಜನಾಂಗದವರು ಹಚ್ಚೆಯನ್ನು ಹಾಕುತ್ತಾರೆ. ಕೆಲವರು ಇಷ್ಟ ದೇವರುಗಳು, ಚಿತ್ತಾರಗಳು, ರಂಗೋಲಿಗಳು ಮುಂತಾದವುಗಳನ್ನು ತಮ್ಮ ಕೈಗಳ ಮೇಲೆ ಧರಿಸಲು ಇಚ್ಛೆಪಡುತ್ತಾರೆ.
‘ಇತ್ತೀಚಿನ ದಿನಗಳಲ್ಲಿ ಜಾನಪದ ಶೈಲಿಯಲ್ಲಿ ಹಚ್ಚೆ ಹಕುವ ಕಲಾವಿದರ ಸಂಖ್ಯೆ ವಿರಳವಾಗುತ್ತಿದೆ. ಸಂತೆ ಮತ್ತು ಜಾತ್ರೆಗಳಲ್ಲಿ ಕಾಣಸಿಗುವ ಕಲಾವಿದರು ವಿವಿಧ ಆಕಾರದ ಚಿತ್ತಾರದ ಮಾದರಿಗಳನ್ನು ಇಟ್ಟುಕೊಂಡು ಗ್ರಾಹಕರ ಇಚ್ಛೆಯಂತೆ ಅವರು ಬಯಸಿದ ಕಡೆ ಪಡಿಮೂಡಿಸುತ್ತಾರೆ. ನಮ್ಮ ಸಂಸ್ಕೃತಿಯಲ್ಲಿ ಅದರಲ್ಲೂ ತಳ ಸಮುದಾಯದಲ್ಲಿ ಈ ಹಚ್ಚೆ ಕಲೆಗೆ ಗೌರವವಿದೆ’ ಎಂದು ಜನಪದ ತಜ್ಞ ಜಿ.ಶ್ರೀನಿವಾಸಯ್ಯ ತಿಳಿಸಿದರು.
’ಹಚ್ಚೆ ಕಲೆ ಸೌಂದರ್ಯದ ಸಂಕೇತ. ಅದು ನಮ್ಮ ಜೊತೆಯಲ್ಲಿ ಇರುತ್ತದೆ ಮತ್ತು ಹಾಕಿಸಿದವರ ನೆನಪು ಸದಾ ಕಾಲವಿರುತ್ತದೆ ಎಂಬ ನಂಬಿಕೆಗಳಿವೆ. ಹಾಗಾಗಿ ಇದು ಪವಿತ್ರ ಸ್ಥಾನವನ್ನು ಪಡೆದಿದೆ. ಹೊರ ದೇಶಗಳಲ್ಲಿ ಇದನ್ನು ಫ್ಯಾಷನ್ ರೂಪದಲ್ಲಿ ಬಳಸಿದರೆ ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಇದೊಂದು ಪುರಾತನ ಜನಪದ ಕಲೆ’ ಎಂದು ಅವರು ತಿಳಿಸಿದರು.

Monday, May 2, 2011

ಮುದ್ದುಮುಖದ ಕಾಡುಪಾಪಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದ ಸಮೀಪದ ತೋಪಿನಲ್ಲಿ ಇತ್ತೀಚೆಗೆ ಮುದ್ದುಮುಖದ ದೊಡ್ಡಕಂಗಳ ಬಹಳ ನಾಚಿಕೆಯ ಸ್ವಭಾವದ ಅಪರೂಪದ ಅತಿಥಿಯ ಆಗಮನವಾಗಿತ್ತು. ಅದುವೇ ಕಾಡುಪಾಪ.
ಇಂಗ್ಲೀಷಿನಲ್ಲಿ ಸ್ಲೆಂಡರ್ ಲೋರಿಸ್ ಎಂದು ಕರೆಯುವ ಇದನ್ನು ತೆಲುಗಿನಲ್ಲಿ ‘ಅಡವಿ ಪಾಪ’ ಎನ್ನುವರು. ತೆಲುಗಿನಲ್ಲಿ ಪಾಪ ಎಂದರೆ ಹುಡುಗಿ. ಹೆಣ್ಣಿನ ಸಹಜ ನಾಚಿಕೆ ಗುಣವನ್ನು ಇದು ಹೊಂದಿರುವುದರಿಂದ ಹಾಗೂ ಅಡವಿಯಲ್ಲಿರುವುದರಿಂದ ಅಡವಿ ಪಾಪ ಎನ್ನುತ್ತಾರೆ. ಕನ್ನಡದ ಪಾಪೆ ಎಂಬುದು ಕಣ್ಣನ್ನು ಸೂಚಿಸುತ್ತದೆ. ದೊಡ್ಡ ಕಣ್ಣುಗಳ ಇದನ್ನು ಕನ್ನಡದಲ್ಲಿ ಈ ಅರ್ಥದಲ್ಲಿ ಕಾಡುಪಾಪ ಎನ್ನುವರು. ಕಾಡಿನಲ್ಲಿನ ಪ್ರಾಣಿಗಳಲ್ಲೇ ಅತ್ಯಂತ ಮುಗ್ಧ, ನಿರಪಾಯಕಾರಿ, ಭಯ ಹಾಗೂ ನಾಚಿಕೆಯ ಸ್ವಭಾವದ ಪ್ರಾಣಿಯಾದ್ದರಿಂದ ಕಾಡಿನ ಮಗು ಅಥವಾ ಕಾಡು ಪಾಪ ಎಂಬ ಹೆಸರು ಬಂದಿದೆ. ಹೆಚ್ಚು ನಾಚಿಕೆಯ ಸ್ವಭಾವವನ್ನು ತೋರುವುದರಿಂದ ಕಾವ್ಯಮಯವಾಗಿ ಜಾನಪದದಲ್ಲಿ ಇದನ್ನು “ಬಿದಿರಮೇಗಳ ಚದುರೆ” ಎಂದು ಕರೆದಿದ್ದಾರೆ.
ಕಾಡುಪಾಪವು ಅಪೂರ್ವವಾದ ಲಕ್ಷಣಗಳನ್ನು ಹೊಂದಿದೆ. ದುಂಡುತಲೆ, ಗಿಡ್ಡಮೂತಿ, ದೊಡ್ಡಕಿವಿ, ಹೊಳೆಯುವ ದುಂಡನೆಯ ದೊಡ್ಡ ಕಣ್ಣುಗಳು, ಹಿಂಗಾಲುಗಳಿಗಿಂತ ಮುಂಗಾಲುಗಳು ದೊಡ್ಡವು ಹಾಗೂ ಬಾಲವಿಲ್ಲ. ತನ್ನ ಹತ್ತಿರದ ಬಂಧುಗಳಾದ ಮಂಗ, ವಾನರ ಮತ್ತು ಮನುಷ್ಯನಂತಹ ಪ್ರಾಣಿಗಳೊಂದಿಗೆ ಹೋಲಿಕೆಯನ್ನು ತೋರಿದರೂ ಅನೇಕ ಆದಿಮ ಲಕ್ಷಣಗಳನ್ನು ಇನ್ನೂ ಉಳಿಸಿಕೊಂಡಿದೆ.
ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಇದು ಕರ್ನಾಟಕದಲ್ಲಿ ಕಂಡುಬರುತ್ತದೆ. ಕಾಡುಪಾಪಗಳ ಹತ್ತಿರದ ಸಂಬಂಧಿಗಳು ಜಾವ, ಮಲಯ ಪರ್ಯಾಯ ದ್ವೀಪಗಳಲ್ಲಿ ಕಂಡು ಬರುತ್ತವೆ. ಅಲ್ಲಿಯ ಮೂಲನೆಲೆಯಿಂದ ಕರ್ನಾಟಕವನ್ನು ಇದು ಹೇಗೆ ಬಂದು ತಲುಪಿ ನೆಲೆಸಿತು ಎಂಬುದು ವಿಕಾಸ ತಜ್ಞರಿಗೆ ಇನ್ನೂ ಸೋಜಿಗದ ಸಂಗತಿಯಾಗಿ ಉಳಿದಿದೆ.
‘ನಮ್ಮ ಕಡೆ ತೋಪುಗಳಲ್ಲಿ ಇವು ಅಪರೂಪವಾಗಿ ಕಾಣಿಸುತ್ತವೆ. ನಿಶಾಚರಿ ಜೀವಿಗಳಾದ್ದರಿಂದ ನಮ್ಮ ಕಣ್ಣಿಗೆ ಹೆಚ್ಚಾಗಿ ಬೀಳುವುದಿಲ್ಲ. ನೀಲಗಿರಿ ಮರ, ಆಲದ ಮರ, ಅರಳಿಮರ, ಸರ್ವೆಮರಗಳು ಮತ್ತು ಹುಣಿಸೆಮರಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಇವು ದಟ್ಟ ಕಾಡುಗಳಿಗೆ ಸೀಮಿತವಾಗಿರದೆ ತೆಳು ಕಾಡಿನಲ್ಲಿಯ ಮೈದಾನ ಪ್ರದೇಶಗಳಲ್ಲಿಯೂ ಕಂಡುಬರುತ್ತವೆ. ಇವು ಹಣ್ಣು, ಕಾಯಿ, ಕೀಟಗಳು, ಜೀರುಂಡೆ, ಮಿಡತೆ, ಹಲ್ಲಿ, ಹಾವುರಾಣಿ, ಹಕ್ಕಿಗಳ ಮೊಟ್ಟೆಗಳು, ಮರಗಪ್ಪೆ ಮುಂತಾದುವುಗಳನ್ನು ತಿನ್ನುತ್ತವೆ. ಇದು ಅಪಾಯದ ಅಂಚಿನಲ್ಲಿರುವ ಮತ್ತು ಕಾನೂನಿನಿಂದ ರಕ್ಷಿಸಲ್ಪಟ್ಟಿರುವ ಪ್ರಾಣಿ’ ಎಂದು ಕೊತ್ತನೂರಿನ ಸ್ನೇಕ್ ನಾಗರಾಜ್ ತಿಳಿಸಿದರು.