Friday, June 24, 2011

ಅಪರೂಪದ ಎರಡು ತಲೆ ಹಾವು!!


ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಸ್ನೇಕ್ ನಾಗರಾಜ್ ಎರಡು ತಲೆ ರಕ್ಷಿಸಿ ಆರ್ಎಫ್ಓ ರಮೇಶ್ ಮತ್ತು ಫಾರೆಸ್ಟರ್ ಶಂಕರಪ್ಪ ಅವರ ಮೂಲಕ ಕಾಡಿನಲ್ಲಿ ಬಿಟ್ಟರು.


ಮಾನವರ ದುರಾಸೆಗೆ, ಅಪವಾದಕ್ಕೆ, ಅನುಮಾನಕ್ಕೆ, ನಿಂದನೆ ಹಾಗೂ ದುಷ್ಕೃತ್ಯಕ್ಕೆ ಬಲಿಯಾಗುವ ಜೀವಿಯೊಂದನ್ನು ರಕ್ಷಿಸಿ ಕಾಡಿಗೆ ಬಿಟ್ಟ ಘಟನೆ ಇತ್ತೀಚೆಗೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ನಡೆದಿದೆ. ಅಪರೂಪಕ್ಕೆ ಕಾಣಸಿಗುವ ಇಮ್ಮಂಡೆ ಹಾವು ಅಥವಾ ಎರಡು ತಲೆ ಹಾವನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದೆ.
ಎರಡು ತಲೆ ಹಾವು ಎಂದು ಕರೆಯಲ್ಪಡುವ ಈ ಹಾವನ್ನು ತೆಲುಗಿನಲ್ಲಿ ’ಪೂಡು ಪಾಮು’ ಎಂದು ಕರೆದರೆ ಇಂಗ್ಲೀಷ್‌ನಲ್ಲಿ ’ರೆಡ್ ಸ್ಯಾಂಡ್ ಬಾವ’ ಎಂದು ಕರೆಯುತ್ತಾರೆ. ತಾಲ್ಲೂಕಿನ ಕೊತ್ತನೂರು ಗ್ರಾಮದ ಬಳಿ ಗ್ರಾಮಸ್ಥರು ಈ ಹಾವನ್ನು ಕಂಡು ಸ್ನೇಕ್ ನಾಗರಾಜ್‌ಗೆ ತಿಳಿಸಿದ್ದಾರೆ. ಅವರು ಹಾವನ್ನು ರಕ್ಷಿಸಿ ವಲಯ ಅರಣ್ಯಾಧಿಕಾರಿಗಳಾದ ರಮೇಶ್ ಮತ್ತು ಫಾರೆಸ್ಟರ್ ಶಂಕರಪ್ಪ ಅವರ ಮೂಲಕ ಕಾಡಿನಲ್ಲಿ ಬಿಟ್ಟಿದ್ದಾರೆ.’ಇದು ವಿಷವಿಲ್ಲದ ಯಾರನ್ನೂ ಕಚ್ಚದ ಅತ್ಯಂತ ನಿರುಪದ್ರವಿ ಹಾವು. ಮಣ್ಣನ್ನು ತೋಡಿಕೊಂಡು ಹೋಗುವ ಇದರ ಗುಣದಿಂದ ಇದರ ತಲೆಯ ಮುಂಭಾಗ ಗುದ್ದಲಿಯ ತುದಿಂತೆ ಗಟ್ಟಿಯಾಗಿರುತ್ತದೆ. ಬಾಲ ಮೊಂಡಾಗಿದ್ದು ಥೇಟ್ ತಲೆಯಂತೆಯೇ ಕಾಣುತ್ತದೆ. ಹಾಗಾಗಿ ಇದನ್ನು ಇಮ್ಮಂಡೆ ಹಾವು ಅಥವಾ ಎರಡು ತಲೆ ಹಾವೆಂದು ಕರೆಯುತ್ತಾರೆ’ ಎಂದು ಸ್ನೇಕ್ ನಾಗರಾಜ್ ತಿಳಿಸಿದರು.
’ಅತ್ಯಂತ ಭಯ ಹಾಗೂ ನಾಚಿಕೆ ಸ್ವಭಾವದ ಈ ಹಾವು ಅಪಾಯದ ಸುಳಿವು ಸಿಕ್ಕ ತಕ್ಷಣ ಮೈಯನ್ನು ಸುರುಳಿಯಾಕಾರಕ್ಕೆ ಕುಗ್ಗಿಸಿ ತಲೆಯನ್ನು ಬಚ್ಚಿಟ್ಟುಕೊಂಡು ಬಾಲವನ್ನು ಮೇಲೆ ಬಿಟ್ಟು ಅಲ್ಲಾಡಿಸುತ್ತದೆ. ಇದೇ ಇದರ ತಲೆಯಿರಬೇಕೆಂದು ಬೇರೆ ಪ್ರಾಣಿಗಳು ಘಾತ ಮಾಡುತ್ತವೆ. ಹಾಗಾಗಿಯೇ ಬೆಳೆದಿರುವ ಹೂಳುಹಾವಿನ ಬಾಲ ಸಾಮಾನ್ಯವಾಗಿ ಗಾಯಗೊಂಡಿರುವ ಸ್ಥಿತಿಯಲ್ಲಿರುತ್ತದೆ’’ಇಂತಹ ಹಾವು ಮರಿಯಾಗಿದ್ದಾಗ ಅಲ್ಲಲ್ಲಿ ಕಿತ್ತಳೆ ಬಣ್ಣವಿದ್ದರೂ ಬೆಳೆದ ಮೇಲೆ ಗಾಢ ಕಂದು ಬಣ್ಣ ಹೊಂದುತ್ತದೆ. ೭೫ ಸೆಮೀ ಉದ್ದ ಬೆಳೆಯುತ್ತದೆ. ಮರಳು, ಮೆದು ಮಣ್ಣು ಇರುವೆಡೆ ಇವು ವಾಸಿಸುತ್ತವೆ. ರೈತರ ಬೆಳೆಗಳಿಗೆ ಹಾನಿ ಮಾಡುವ ಇಲಿ ಮೊದಲಾದ ದಂಶಕಗಳನ್ನು ತಿಂದು ರೈತ ಮಿತ್ರನಾಗಿದೆ. ಒಣ ಪ್ರದೇಶಗಳಲ್ಲಿ ಕಾಣಸಿಗುವ ಈ ಹಾವು ಕರ್ನಾಟಕ, ತಮಿಳುನಾಡು, ಆಂದ್ರಪ್ರದೇಶ ಹಾಗೂ ವಾಯುವ್ಯ ಭಾರತದಲ್ಲಿ ಕಂಡುಬರುತ್ತದೆ. ಇದು ನಿಶಾಚರಿ. ಕತ್ತಲಲ್ಲೇ ತನ್ನ ಆಹಾರಾನ್ವೇಷಣೆ ಮಾಡುತ್ತದೆ. ಜೂನ್ ತಿಂಗಳು ಇವು ಮರಿ ಮಾಡುವ ಕಾಲ. ಈ ಹಾವುಗಳು ಮೊಟ್ಟೆಯಿಡುವುದಿಲ್ಲ. ಆರರಿಂದ ಎಂಟು ಮರಿಗಳಿಗೆ ಜನ್ಮ ನೀಡುತ್ತವೆ.
‘ಎರಡು ತಲೆ ಹಾವು ಮನೆಯಲ್ಲಿದ್ದರೆ ಐಶ್ವರ್ಯ ಬರುತ್ತದೆ ಎಂಬುದೊಂದು ಮೂಢನಂಬಿಕೆ ಇದೆ. ಇದು ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತದೆ ಎಂಬ ವದತಿಯಿಂದ ಹಲವರು ಈ ಹಾವಿನ ಪ್ರಾಣಕ್ಕೆ ಸಂಚಕಾರ ತಂದಿದ್ದಾರೆ. ತಮ್ಮ ಹಣವನ್ನೂ ಕಳೆದುಕೊಂಡಿದ್ದಾರೆ. ಕಳೆದ ವರ್ಷ ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಪೋಲಿಸರು ಈ ಹಾವನ್ನು ಮಾರಲೆತ್ನಿಸಿದ ಆರೋಪಿಗಳನ್ನು ಬಂಧಿಸಿದ್ದರು. ಖಚಿತ ನಿಲುವಿಲ್ಲದವರಿಗೆ, ಬೇರೆಯವರನ್ನು ಯಾಮಾರಿಸುವವರಿಗೆ ಎರಡು ಹಾವಿನಂತಹವನು ಎನ್ನುತ್ತಾರೆ. ಅನವಶ್ಯಕವಾಗಿ ಮನುಷ್ಯರಿಂದ ನಿಂದನೆಗೆ ಮತ್ತು ಅಪವಾದಕ್ಕೆ ಗುರಿಯಾಗಿರುವ ಜೀವಿಯಿದು. ಮನುಷ್ಯನೂ ಇವುಗಳಂತೆಯೇ ಪರಿಸರದ ಒಂದು ಭಾಗ ಎಂಬುದನ್ನು ಅರಿಯಬೇಕು’ ಎಂದು ಆರ್ಎಫ್ಓ ರಮೇಶ್ ತಿಳಿಸಿದರು.Wednesday, June 15, 2011

ಅಪರೂಪದ ‘ಪ್ರೊಗೇರಿಯಾ’ ಕಾಯಿಲೆ - ವಯಸ್ಸು ಕಿರಿದಾಗ್ದಿದರೂ ವೃದ್ಧನಂತೆ ನರಳಾಟ


ತನ್ನ ತಂದೆ ತಾಯಿಯೊಂದಿಗಿರುವ ದೇವರಾಜು.


ಅಪರೂಪದ ಅನುವಂಶಿಕ ಕಾಯಿಲೆ ‘ಪ್ರೋಗೇರಿಯಾ’ ದಿಂದ ಬಳಲುವ ಬಾಲಕನ ಪಾತ್ರವನ್ನು ನಟ ಅಮಿತಾಭ್ ಬಚ್ಚನ್ ‘ಪಾ’ ಚಲನಚಿತ್ರದಲ್ಲಿ ಅಭಿನಯಿಸಿದ್ದರು. ವಯಸ್ಸು ಚಿಕ್ಕದಿದ್ದರೂ ನೋಡಲು ಮುದುಕನಂತೆ ಕಾಣುತ್ತಾರೆ. ೮೦ ಲಕ್ಷ ಮಂದಿಯಲ್ಲಿ ಒಬ್ಬರಿಗೆ ಕಾಡುವ ಈ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರು ಶಿಡ್ಲಘಟ್ಟದಲ್ಲಿ ವಾಸವಿದ್ದಾರೆ.

ಶಿಡ್ಲಘಟ್ಟದ ಚಿಂತಾಮಣಿ ರಸ್ತೆಯ ಸಿಟಿಜನ್ ಡಿ.ಎಡ್ ಕಾಲೇಜು ಸಮೀಪದ ನಿವಾಸಿ ಕೃಷ್ಣಪ್ಪ ಎಂಬುವರ ಮೂರನೇ ಪುತ್ರ ದೇವರಾಜು ‘ಪ್ರೋಗೇರಿಯಾ’ ಕಾಯಿಲೆಯಿಂದ ನರಳುತ್ತಿದ್ದಾರೆ. ಕುಬ್ಜ ದೇಹ, ಮುದುಡಿದ ಸುಕ್ಕುಗಟ್ಟಿದ ಚರ್ಮ, ಸಂಕುಚಿತಗೊಂಡ ಮುಖ ಮೇಲ್ನೋಟಕ್ಕೆ ಕಾಣುವ ಲಕ್ಷಣಗಳು. ಅವರಿಗೆ ಆಹಾರ ಸುಲಭವಾಗಿ ಜೀರ್ಣಿಸಿಕೊಳ್ಳಲು ಆಗುವುದಿಲ್ಲ. ನಿಶ್ಶಕ್ತಿ, ಪರಾವಲಂಬನೆ, ನೋವು, ನರಳಾಟದ ಸಮಸ್ಯೆ ನಿತ್ಯ ಎದುರಿಸುತ್ತಿದ್ದಾರೆ.


ದೇವರಾಜು

೩೨ ವರ್ಷ ವಯಸ್ಸಿನ ದೇವರಾಜುಗೆ ಕೈಲಿ ಒಂದು ಲೋಟ ನೀರನ್ನು ತೆಗೆದುಕೊಳ್ಳುವಷ್ಟು ಶಕ್ತಿಯಿಲ್ಲ. ದಿನಕ್ಕೆ ಒಂದು ಬಾರಿ ಅದೂ ಅತ್ಯಲ್ಪ ಆಹಾರವಷ್ಟೇ ಸೇವಿಸಲು ಸಾಧ್ಯ. ತಿನ್ನುವ ಆಹಾರ ಸ್ವಲ್ಪ ಹೆಚ್ಚಾದರೆ ತೀವ್ರ ಹೊಟ್ಟೆ ನೋವು ಬರುತ್ತದೆ. ಅವರ ನರಳಾಟ ಹೆಚ್ಚಾದಾಗ ತಂದೆ ತಾಯಿ ವೈದ್ಯರ ಬಳಿ ಕರೆದೊಯ್ದು ಚುಚ್ಚುಮದ್ದು ಕೊಡಿಸುತ್ತಾರೆ.

ಕೃಷ್ಣಪ್ಪ-ಸರೋಜಮ್ಮ ದಂಪತಿಗಳಿಗೆ ಉಳಿದ ಮೂವರು ಮಕ್ಕಳು ಆರೋಗ್ಯವಾಗಿದ್ದು, ಬೇರೆ ಕಡೆ ವಾಸವಿದ್ದಾರೆ. ಈ ದಂಪತಿಗಳಿಗೆ ಸದ್ಯಕ್ಕೆ ಜೀವನದ ಆಸರೆಯಾಗಿ ಉಳಿದಿರುವುದು ಅರ್ಧ ಎಕರೆ ಜಮೀನು ಮತ್ತು ಕಾಯಿಲೆಪೀಡಿತ ಮಗ ದೇವರಾಜು ಮಾತ್ರ.


ದೇವರಾಜು

‘ಕಳೆದ ೩೦ ವರ್ಷಗಳಿಂದ ನನ್ನ ಮಗ ದೇವರಾಜು ಅನುಭವಿಸುತ್ತಿರುವ ನರಕ ಯಾತನೆ ಯಾರಿಗೂ ಬೇಡ. ಇಷ್ಟು ವರ್ಷಗಳಿಂದ ಕೇವಲ ಮೂರು ಅಡಿಯಷ್ಟೇ ಬೆಳೆದಿರುವ ನನ್ನ ಮಗನಿಗೆ ಬಂದಿರುವ ಕಾಯಿಲೆ ಎಂಥದ್ದು ಅಂತ ಯಾವ ವೈದ್ಯರೂ ಕಂಡು ಹಿಡಿಯಲಾಗಿಲ್ಲ. ೧೯೭೯ರಲ್ಲಿ ಜನಿಸಿದ ದೇವರಾಜು ೬ ತಿಂಗಳ ಮಗುವಾಗಿದ್ದಾಗ ಸ್ವಲ್ಪ ಜ್ವರ ಕಾಣಿಸಿಕೊಂಡಿತು. ಬೆನ್ನ ಕೆಳಗೆ ಸಣ್ಣ ಗುಳ್ಳೆಗಳಾಗಿ ಗಾಯಗಳಾದವು. ಇದಾದ ನಂತರ ಆಸ್ಪತ್ರೆಯ ಚಿಕಿತ್ಸೆ ಕೊಡಿಸಿದ ನಂತರ ವಾಸಿಯಾದರೂ ನಂತರದ ದಿನಗಳಲ್ಲಿ ದೇಹದ ಬೆಳವಣಿಗೆಯಾಗಲೇ ಇಲ್ಲ’ ಎಂದು ತಾಯಿ ಸರೋಜಮ್ಮ ತಿಳಿಸಿದರು.

‘ಮುಖದ ಮೇಲೆ ನಿಧಾನವಾಗಿ ಮಚ್ಚೆ ಮತ್ತು ಪೊರೆ ಕಾಣಿಸಿಕೊಳ್ಳತೊಡಗಿತು. ಸರಿಯಾಗಿ ಹಸಿವಾಗದೇ ಊಟ ಮಾಡುತ್ತಿರಲಿಲ್ಲ. ಆಗಾಗ ಜ್ವರ ಮತ್ತು ಬೇಧಿಯಿಂದ ನರಳತೊಡಗಿದ. ದಿನಕ್ಕೆ ಕೇವಲ ಒಂದು ಹೊತ್ತು ಮಾತ್ರ ಊಟ ಮಾಡುತ್ತಾನೆ. ಒಂದೆರಡು ತುತ್ತು ಊಟ ಹೆಚ್ಚಾದರೂ ಅಜೀರ್ಣವಾಗುತ್ತದೆ. ಹೊಟ್ಟೆ ನೋವಿನಿಂದ ನರಳುವಾಗ ಮಗು ಪಡುವ ನರಕ ಯಾತನೆಯ ನೋವನ್ನು ನೋಡುವವರಿಗೆ ಕರಳು ಕಿತ್ತು ಬರುತ್ತದೆ. ಇಂತಹ ಯಾತನಾ ಬದುಕು ಕೇವಲ ಒಂದೆರಡು ದಿನದ್ದಲ್ಲ. ನಿರಂತರವಾಗಿ ಮೂವತ್ತು ವರ್ಷಗಳಿಂದ ನಡೆಯುತ್ತಲೇ ಇದೆ’ ಎಂದು ಅವರು ತಿಳಿಸಿದರು.

‘ದೇವರಾಜುಗೆ ಅಪರೂಪದ ಅನುವಂಶಿಕ ಖಾಯಿಲೆ. ೧೮೮೬ ರಲ್ಲಿ ಹಚಿನ್ಸನ್ ಮತ್ತು ಗಿಲ್ಫೋರ್ಡ್ ಎಂಬ ವಿಜ್ಞಾನಿಗಳು ಇದರ ಗುಣಲಕ್ಷಣಗಳ ಬಗ್ಗೆ ಬೆಳಕು ಚೆಲ್ಲಿದ್ದರಿಂದ ಕಾಯಿಲೆಗೆ ಹಚಿನ್ಸನ್ ಗಿಲ್ಫೋರ್ಡ್ ಪ್ರೋಗೇರಿಯಾ ಸಿಂಡ್ರೋಮ್(ಎಚ್.ಜಿ.ಪಿ.ಎಸ್) ಎಂದು ಕರೆಯುತ್ತಾರೆ. ಇದಕ್ಕೆ ಈವರೆಗೆ ಸೂಕ್ತ ಔಷಧಿಯನ್ನು ಕಂಡು ಹಿಡಿಯಲಾಗಿಲ್ಲ. ದೇಹದ ವಿವಿಧ ತೊಂದರೆಗಳಿಗೆ ತಾತ್ಕಾಲಿಕವಾಗಿ ಚಿಕಿತ್ಸೆ ನೀಡಬಹುದೇ ಹೊರತು ಸಂಪೂರ್ಣವಾಗಿ ಗುಣಪಡಿಸಲು ಆಗುವುದಿಲ್ಲ’ ಎಂದು ವೈದ್ಯ ಡಾ. ಡಿ.ಟಿ.ಸತ್ಯನಾರಾಯಣರಾವ್ ತಿಳಿಸಿದರು.

‘ಕಾಯಿಲೆಪೀಡಿತ ಮಾನವನ ದೇಹ ವಯಸ್ಸಾಗುವಾಗ ನಡೆಯುವ ವಿವಿಧ ಪ್ರಕ್ರಿಯೆಗಳ ಬಗ್ಗೆ ವಿಜ್ಞಾನಿಗಳು ಅಧ್ಯಯನ ಮಾಡುತ್ತಿದ್ದಾರೆ. ಕಾಯಿಲೆ ಗುಣಪಡಿಸುವಿಕೆಗೆ ಸಂಬಂಧಿಸಿದಂತೆ ಸಂಶೋಧನೆಗಳು ನಡೆದಿವೆ’ ಎಂದು ಅವರು ತಿಳಿಸಿದರು.

Wednesday, June 8, 2011

ಚಿತ್ತಾರದ ಹಾವು
ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದ ಬಳಿ ವಿಶೇಷವಾದ ಹಾವೊಂದು ಕಂಡು ಬಂದಿದೆ. ಅದುವೇ ಟ್ರಿಂಕೆಟ್ ಹಾವು. ಕನ್ನಡದಲ್ಲಿ ಇದನ್ನು ಚಿತ್ತಾರದ ಹಾವು ಎನ್ನುವರು. ಕೊತ್ತನೂರಿನ ಕೆ.ಜಿ.ಬಾಬು ಅವರ ರೇಷ್ಮೆ ಹುಳು ಸಾಕಾಣಿಕಾ ಕೇಂದ್ರದ ಬಳಿ ಕಾಣಿಸಿದ ಈ ಹಾವನ್ನು ಕೊತ್ತನೂರಿನ ಸ್ನೇಕ್ ನಾಗರಾಜ್ ಹಿಡಿದು ಕಾಡಿಗೆ ಬಿಟ್ಟರು.
ಈ ಟ್ರಂಕೆಟ್ ಹಾವು ನಯವಾದ ಹೊಳಪುಳ್ಳ ಹುರುಪೆಗಳ ಹೊದಿಕೆಯನ್ನು ಹೊಂದಿದ್ದು ಮುಂಭಾಗ ಬಿಳಿಪಿರುತ್ತದೆ. ಇದರ ಬಾಲ ದಟ್ಟ ಬಣ್ಣವಿರುತ್ತದೆ. ದೇಹ ಕಂದಿದ ಚಾಕಲೇಟ್ ಕಂದು ಬಣ್ಣವಿದ್ದರೆ, ದೇಹದ ಪಕ್ಕದಲ್ಲಿ ಎರಡು ಪ್ರಧಾನ ದಟ್ಟ ಬಣ್ಣದ ಪಟ್ಟಿಗಳಿರುತ್ತವೆ. ಮುಂಭಾಗದಲ್ಲಿ ಚೌಕಳಿ ಗುರುತುಗಳಿರುತ್ತವೆ. ತಲೆ ಉದ್ದ. ಕುತ್ತಿಗೆಯ ಮೇಲ್ಭಾಗದಲ್ಲಿ ಹಿಂದೆ ಮುಂದಾದ ‘ವಿ’ ಗುರುತಿರುತ್ತದೆ. ಇದರ ಹೊಟ್ಟೆಯ ಭಾಗ ಮುತ್ತು ಬಿಳುಪು. ಕಣ್ಣುಗಳ ಮುಂದಿನ ಹುರುಪೆಗಳ ಮೇಲೆ ಅನೇಕ ರಂಧ್ರಗಳಿವೆ.ರಾಜ್ಯದ ಬಯಲು ಪ್ರದೇಶ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸಮುದ್ರ ಮಟ್ಟದಿಂದ ೧೦೦೦ ಮೀಟರ್ ಎತ್ತರದವರೆಗೆ ಕಂಡುಬರುತ್ತವೆ. ಅಪರೂಪವಾಗಿ ಮನುಷ್ಯನ ವಸತಿಗಳ ಬಳಿ ಕಂಡುಬರಬಹುದು. ಸಾಮಾನ್ಯವಾಗಿ ಈ ಹಾವು ೪ ಅಡಿ ಉದವಿರುತ್ತವೆ. ಹೆಣ್ಣು ಗಂಡಿಗಿಂತ ಹೆಚ್ಚು ಉದ್ದವಿರುತ್ತದೆ. ದಂಶಕ ಪ್ರಾಣಿಗಳು ಇದರ ಮುಖ್ಯ ಆಹಾರ. ಅಪರೂಪವಾಗಿ ಹಕ್ಕಿಗಳನ್ನು ಮತ್ತು ಹಕ್ಕಿಗಳ ಮೊಟ್ಟೆಗಳನ್ನು ತಿನ್ನುತ್ತವೆ. ಹಾವಿನ ಮರಿಗಳು, ಕೀಟಗಳು ಮತ್ತು ಸಣ್ಣ ಹಲ್ಲಿಗಳನ್ನು ಹಾಗೂ ಹಾವುರಾಣಿಗಳನ್ನು ತಿನ್ನುತ್ತವೆ.
‘ಈ ಚಿತ್ತಾರದ ಹಾವು ಗೊಂದಲವಾದಾಗ ಉದ್ರೇಕಗೊಂಡು ರೇಗುತ್ತದೆ. ದೇಹವನ್ನು ನೆಲದಿಂದ ಮೇಲೆತ್ತಿ ಬಡಿಯುತ್ತದೆ. ಕತ್ತನ್ನು ಉಬ್ಬಿಸಿ, ತಲೆಯೆತ್ತಿ ಬಾಯಿ ತೆರೆದು ಕಚ್ಚಲು ಬರುತ್ತದೆ. ಆದರೆ ಇದು ವಿಷಪೂರಿತ ಹಾವಲ್ಲ. ಹಾಗಾಗಿ ಕಚ್ಚಿದರೂ ಅಪಾಯವಾಗದು. ನಾನು ಇದುವರೆಗೂ ನೂರಾರು ಹಾವುಗಳನ್ನು ರಕ್ಷಿಸಿದ್ದೇನೆ. ಈ ರೀತಿಯ ಹಾವನ್ನು ನಮ್ಮ ಪ್ರದಶದಲ್ಲಿ ಎಂದೂ ಕಂಡಿರಲಿಲ್ಲ’ ಎಂದು ಸ್ನೇಕ್ ನಾಗರಾಜ್ ತಿಳಿಸಿದರು.

ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಕಂಡು ಬಂದ ಟ್ರಿಂಕೆಟ್ ಹಾವನ್ನು ಕೊತ್ತನೂರಿನ ಸ್ನೇಕ್ ನಾಗರಾಜ್ ರಕ್ಷಿಸಿದರು.