Friday, September 16, 2011

ಹಸಿರ ಸೊಬಗಲ್ಲಿ ಮೇಲೂರು ಗ್ರಾಮ ಪಂಚಾಯಿತಿ


ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನಲ್ಲಿ ಹಸುರಿನ ಮರಗಿಡಗಳ ನಡುವೆ ಟೆರ್ರಾಕೋಟಾ ಕೆಂಪು ಬಣ್ಣದ ಆಕರ್ಷಕ ಗ್ರಾಮ ಪಂಚಾಯಿತಿಯ ಕಟ್ಟಡ.

ಗ್ರಾಮ ಪಂಚಾಯಿತಿ ಕಚೇರಿ ಎಂದ ಕೂಡಲೇ ತಟ್ಟನೇ ನೆನಪಾಗುವಂತದ್ದು ಕಿರಿದಾದ ಕಟ್ಟಡ ಮತ್ತು ಮೇಜುಕುರ್ಚಿಗಳು. ಕಚೇರಿ ಎದುರು ಸ್ವಲ್ಪ ಜಾಗ ಮತ್ತು ಆಗಾಗ್ಗೆ ಬಣಗುಡುವಂತಹ ವಾತಾವರಣ. ಆದರೆ ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿ ಕಚೇರಿಗೆ ಒಮ್ಮೆ ಭೇಟಿ ನೀಡಿದರೆ, ಗ್ರಾಮ ಪಂಚಾಯಿತಿ ಕುರಿತ ಹಳೆಯ ಕಲ್ಪನೆ ಮತ್ತು ಭಾವನೆಯೇ ಹೊರಟುಹೋಗುತ್ತದೆ. ಕಾರಣ, ಕಚೇರಿ ಸುತ್ತಮುತ್ತಲೂ ಹಸಿರು ಮತ್ತು ಮನಸ್ಸಿಗೆ ಮುದ ನೀಡುವಂತಹ ಹಿತವಾದ ವಾತಾವರಣ.
ಕಚೇರಿ ಸುತ್ತಲೂ ಗಿಡಮರಗಳನ್ನು ಬೆಳೆಸಲಾಗಿದೆ. ಒಪ್ಪವಾಗಿ ಕತ್ತರಿಸಿ ಬೇಲಿ ಗಿಡಗಳಿಗೆ ವಿಶಿಷ್ಟ ಆಕಾರ ನೀಡಲಾಗಿದೆ. ಮೆತ್ತನೆಯ ಹುಲ್ಲುಹಾಸು, ಅದರ ಬಳಿಯೇ ಕೆಂಪು ಬಣ್ಣದ ಕಟ್ಟಡ ಆಕರ್ಷಕವಾಗಿ ಕಾಣುತ್ತದೆ. ಹಸಿರು ವಾತಾವರಣದ ಜೊತೆಗೆ ಗ್ರಾಮ ಪಂಚಾಯಿತಿಯವರು ಸೌರವಿದ್ಯುತ್ ಸೌಲಭ್ಯ ಕೂಡ ಕಲ್ಪಿಸಿದ್ದಾರೆ.
ಗ್ರಾಮ ಪಂಚಾಯಿತಿ ಕಚೇರಿ, ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ, ಅಂಗನವಾಡಿ ಮತ್ತು ಗ್ರಂಥಾಲಯ ಒಂದೇ ಆವರಣದಲ್ಲಿ ಗಿಡಮರಗಳ ಮಧ್ಯದಲ್ಲಿ ಇರುವುದು ವಿಶೇಷ. ಪಂಚಾಯಿತಿ ಕಚೇರಿಯೊಳಗೆ ಗಣಕಯಂತ್ರ ಕೊಠಡಿ, ಅಧಿಕಾರಿಗಳು ಮತ್ತು ಅಧ್ಯಕ್ಷರ ಕೊಠಡಿ ಮತ್ತು ಸಭಾಂಗಣವು ವಿಶಾಲವಾಗಿದೆ.


ಗ್ರಾಮ ಪಂಚಾಯಿತಿ ಕಟ್ಟಡದ ಆವರಣದಲ್ಲಿರುವ ಹಸಿರು ಉದ್ಯಾನ ಮತ್ತು ಹೂಗಿಡಗಳು.

"ಎಚ್.ಎಂ.ಕೃಷ್ಣಮೂರ್ತಿ ಅವರು ಪ್ರಧಾನರಾಗಿದ್ದ ಕಾಲದಲ್ಲಿ ಡಿಸೆಂಬರ್ ೧೯೯೦ ರಲ್ಲಿ ಪಂಚಾಯಿತಿ ಕಟ್ಟಡದ ಶಂಕುಸ್ಥಾಪನೆಯನ್ನು ಮಾಡಿ ಕಟ್ಟಡವನ್ನು ಕಟ್ಟಲಾಗಿತ್ತು. ಹಿಂದೆ ಹತ್ತಿರದಲ್ಲಿ ಕುಂಟೆ ಇದುದರಿಂದಾಗಿ ಕಟ್ಟಡ ಬಿರುಕು ಬಿಟ್ಟು ಶಿಥಿಲವಾಗತೊಡಗಿತ್ತು. ೨೦೦೯ರಲ್ಲಿ ನಾನು ಗ್ರಾಮ ಪಂಚಾಯಿತಿ ಅಧ್ಯಕ್ಷನಾದ ಅವಧಿಯಲ್ಲಿ ನವೀಕರಣ ಮಾಡಲಾಯಿತು. ಗ್ರಾಮದ ರಾಜ್‌ಕುಮಾರ್ ಸಂಘದ ಸದಸ್ಯರು ಕಟ್ಟಡಕ್ಕೆ ಟೆರ್ರಾಕೋಟ ಬಣ್ಣವೇ ಇರಬೇಕು ಎಂದು ಕಟ್ಟಡದ ಅಂದಚಂದಕ್ಕಾಗಿ ಬಣ್ಣಗಳ ಆಯ್ಕೆಯನ್ನು ಮಾಡಿದರು. ಹಸಿರು ಪರಿಸರವನ್ನು ನಿರ್ಮಿಸಲು ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು ನೆರವಾದರು. ಪಂಚಾಯಿತಿಗೆ ನಿಶ್ಚಿತ ವರಮಾನವಿದ್ದರೆ ಮಾತ್ರ ಇವೆಲ್ಲವುಗಳ ನಿರ್ವಹಣೆ ಸಾಧ್ಯವೆಂದು ಐದು ಅಂಗಡಿಗಳನ್ನು ಕಟ್ಟಿದೆವು. ಈಗ ಅದರಿಂದ ತಿಂಗಳಿಗೆ ೭,೫೦೦ ರೂಪಾಯಿ ಬಾಡಿಗೆ ಬರುತ್ತಿದೆ. ರುದ್ರಭೂಮಿಯಲ್ಲಿ ಅರ್ಧ ಎಕರೆಯಷ್ಟು ಮುಳ್ಳು ಹಾಗೂ ಕಳ್ಳಿಗಿಡ ಆವರಿಸಿತ್ತು. ಅವನ್ನು ಸ್ವಚ್ಛಗೊಳಿಸಿ ೪೦ ಸಸಿಗಳನ್ನು ನೆಡಿಸಿದ್ದೆವು. ಈಗ ಅವು ಮರಗಳಾಗಿವೆ. ಅಲ್ಲಿ ಕೈಕಾಲು ತೊಳೆಯಲು ನೀರಿನ ಸಿಸ್ಟರ್ನ್ ಕೂಡ ಇರಿಸಿದ್ದೇವೆ. ನಮ್ಮ ಪಂಚಾಯಿತಿಯಲ್ಲಿ ಕಸ ವಿಲೇವಾರಿಗೆಂದೇ ಟಿಲ್ಲರನ್ನು ಹೊಂದಿದ್ದೇವೆ" ಎಂದು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ.ಮಂಜುನಾಥ್ ತಿಳಿಸಿದರು."ಹಿಂದಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ.ಉಮೇಶ್ ಅವರ ಅವಧಿಯಲ್ಲಿ ಪ್ಲಾಸ್ಟಿಕ್ ರಹಿತ ಪಂಚಾಯಿತಿಯನ್ನಾಗಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ನಿಷೇಧಿಸಿದೆವು. ವಿದ್ಯುತ್ ಉಳಿತಾಯ ಮಾಡಲು ಮೊದಲಿದ್ದ ಟ್ಯೂಬ್‌ಲೈಟುಗಳ ಬದಲಿಗೆ ಈಗ ಸಿಎಫ್ಎಲ್ ಬಲ್ಬ್‌ಗಳನ್ನು ಅಳವಡಿಸುತ್ತಿದ್ದೇವೆ. ಮೇಲೂರಿನ ಆಸ್ಪತ್ರೆ ಆವರಣದಲ್ಲಿರುವ ಸ್ಥಳದಲ್ಲಿ ಗಿಡಗಳನ್ನು ನೆಡಲು ಯೋಜನೆ ಹಮ್ಮಿಕೊಂಡಿದ್ದೇವೆ. ನಮ್ಮ ಗ್ರಾಮದಿಂದ ಚೌಡಸಂದ್ರದವರೆಗೂ ರಸ್ತೆಬದಿ ತಂಪಾದ ನೆರಳು ನೀಡುವ ಮರಗಳಿವೆ. ಅದೇ ಮಾದರಿಯಲ್ಲಿ ಗಂಗನಹಳ್ಳಿಗೆ ಹೋಗುವ ರಸ್ತೆಯ ಎರಡು ಬದಿಗಳಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನೂ ರೂಪಿಸಿದ್ದೇವೆ" ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಸ್.ಮಂಜುನಾಥ್ ಹೇಳಿದರು.


ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ಸಿಬ್ಬಂದಿ.

Friday, September 9, 2011

ಬಾತುಕೋಳಿಗಳಿಂದ ಬದುಕು


ಶಿಡ್ಲಘಟ್ಟದ ಅಮ್ಮನಕೆರೆಯಲ್ಲಿ ಬಾತು ಮರಿಗಳನ್ನು ಸಾಕುತ್ತಿರುವ ಸುಗಟೂರಿನ ಕೃಷ್ಣಪ್ಪ.

ಶಿಡ್ಲಘಟ್ಟದ ಹೊರವಲಯದಲ್ಲಿರುವ ಅಮ್ಮನಕೆರೆಗೆ ಈಚೆಗೆ ಬಿದ್ದ ಮಳೆಯಿಂದಾಗಿ ನೀರು ಬಂದಿದೆ. ಅದರೊಂದಿಗೆ ನೂರಾರು ಬಾತುಗಳು ಕೂಡ ಆಗಮಿಸಿದೆ. ಆದರೆ ಬಾತುಗಳು ಎಲ್ಲೋ ದೂರದ ಹಿಮಪ್ರದೇಶಗಳಿಂದ ಬಂದವಲ್ಲ. ಇಲ್ಲಿನವರೇ ಮಾಂಸಕ್ಕಾಗಿ ಸಾಕಲು ಬಿಟ್ಟಿರುವುದು.
“ಬಾ..ಬಾ..ಬಾಬಾ...ಬಾ...” ಎಂದು ಲಯಬದ್ದವಾಗಿ ಕೂಗಿದೊಡನೆಯೇ ಪ್ರಭಾತ್ ಪೇರಿಯಲ್ಲಿ ಪಾಲ್ಗೊಂಡ ಶಾಲಾ ಮಕ್ಕಳು ಮಾರ್ಚ್ ಫಾಸ್ಟ್ ಮಾಡುವ ಹಾಗೆ ಒಂದರ ಹಿಂದೊಂದು ತಮ್ಮ ಜಲಪಾದಗಳಲ್ಲಿ ಪುಟ್ಟಪುಟ್ಟ ಹೆಜ್ಜೆಯಿಡುತ್ತಾ ಮಾಲಿಕನ ಹತ್ತಿರ ಧಾವಿಸುತ್ತವೆ.
ಕೋಲಾರದ ಬಳಿಯ ಸುಗಟೂರಿನಿಂದ ಆಗಮಿಸಿರುವ ೨೫ ಜನರ ಕುಟುಂಬ ಕೆರೆಯ ಅಂಚಿನಲ್ಲಿ ಟೆಂಟ್ ಹಾಕಿಕೊಂಡು ಬೀಡು ಬಿಟ್ಟಿದೆ. ಇವರ ಕಾಯಕ ಬಾತುಗಳನ್ನು ಮೇಯಿಸುವುದು. ಕೆಲ ವರ್ತಕರು ಮರಿಗಳನ್ನು ಮತ್ತು ಅವಕ್ಕೆ ಆಹಾರವನ್ನು ಇವರಿಗೆ ಒದಗಿಸುತ್ತಾರೆ. ಅವುಗಳನ್ನು ಸಾಕಿ ಬೆಳೆಸಿ ವಾಪಸ್ ನೀಡಿದಾಗ ಕೆಜಿಗೆ ಇಂತಿಷ್ಟು ಎಂಬಂತೆ ಹಣ ನೀಡುತ್ತಾರೆ."ನಮ್ಮಲ್ಲಿ ಆರು ದಿನಗಳ ೨೫೦ ಬಾತು ಮರಿಗಳಿವೆ ಮತ್ತು ಒಂದು ತಿಂಗಳು ವಯಸ್ಸಿನ ೨೦೦ ಮರಿಗಳಿವೆ. ಇವಕ್ಕೆ ರಾಗಿ, ರಾಗಿ ಹಿಟ್ಟು, ರೇಷ್ಮೆ ಹುಳವನ್ನು ಆಹಾರವಾಗಿ ನೀಡುತ್ತೇವೆ. ನಮಗೆ ಮರಿಗಳನ್ನು ಒದಗಿಸಿರುವ ಮಾಲೀಕರು ಮೇವನ್ನೂ ಕೊಟ್ಟಿದ್ದಾರೆ. ಸುಮಾರು ಒಂದೂವರೆ ತಿಂಗಳು ಮೇಯಿಸಿದ ಮೇಲೆ ಇವು ಒಂದೊಂದೂ ಒಂದೂ ಮುಕ್ಕಾಲು ಕೇಜಿ ತೂಗುತ್ತವೆ. ಕೇಜಿಗೆ ಇದರ ಮಾಂಸ ರೂ.೯೦ ಕ್ಕೆ ಮಾರಾಟವಾಗುತ್ತದೆ. ನಮಗೆ ಸಾಕುವುದಕ್ಕೆ ಕೂಲಿ ಸಿಗುತ್ತದೆ" ಎಂದು ಸುಗಟೂರಿನ ಕೃಷ್ಣಪ್ಪ ಹೇಳುತ್ತಾರೆ."ಬಾತುಗಳೆಲ್ಲ ನೀರಲ್ಲಿ ಗುಂಪಾಗಿ ಈಜುವಾಗ ನೀರೆಲ್ಲ ಹಳದಿ ಬಣ್ಣವಾಗಿರುವಂತೆ, ಚಂದದ ಚಿತ್ತಾರದಂತೆ ಕೆರೆಯ ಕಟ್ಟೆಯ ಮೇಲಿಂದ ಕಾಣುತ್ತದೆ. ಮುದ್ದಾದ ಬಾತುಮರಿಗಳನ್ನು ನೋಡುವುದೇ ಚೆನ್ನ. ಇವುಗಳ ಆಯಸ್ಸು ಅತ್ಯಂತ ಕಡಿಮೆ ಎಂದು ತಿಳಿದು ಮನಸ್ಸಿಗೆ ಬೇಸರವುಂಟಾಗುತ್ತದೆ. ಕೆರೆಯ ಏರಿಯ ಮೇಲೆ ವಾಹನದಲ್ಲಿ ಹೋಗುವಾಗ ಇವುಗಳನ್ನು ನೋಡದೇ ನಾನು ಹೋಗುವುದೇ ಇಲ್ಲ" ಎನ್ನುತ್ತಾರೆ ಉಪನ್ಯಾಸಕ ಅಜಿತ್ ಕೌಂಡಿನ್ಯ.