Monday, January 25, 2010

ಶಿಡ್ಲಘಟ್ಟದ ಕೆರೆಗಳಲ್ಲಿ ಹಕ್ಕಿಗಳ ಕಲರವ...

ಅಮಾನಿಕೆರೆ ಅಥವಾ ಅಮ್ಮನಕೆರೆ ಮತ್ತು ಗೌಡನಕೆರೆ ಶಿಡ್ಲಘಟ್ಟ ಪಟ್ಟಣದ ಎರಡು ಕಣ್ಣುಗಳಿದ್ದಂತಿವೆ. ಬೇಸಿಗೆಯಲ್ಲಿ ಅವು ಬತ್ತುವವರೆಗೂ ಊರಿನ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದು. ಹದಿನಾರನೇ ಶತಮಾನದಲ್ಲಿ ಕೆಂಪೇಗೌಡನ ಪತ್ನಿ ಹಲಸೂರಮ್ಮ ಈ ಊರನ್ನು ಕಟ್ಟಿದಾಗ ನೈರುತ್ಯ ದಿಕ್ಕಿನಲ್ಲಿ ಅಮ್ಮನಕೆರೆಯನ್ನು ಆಕೆಯ ಮಗ ಶಿವನೇಗೌಡನು ಆಗ್ನೇಯ ದಿಕ್ಕಿನಲ್ಲಿ ಗೌಡನ ಕೆರೆಯನ್ನು ಕಟ್ಟಿಸಿದ್ದರು. ಅವರ ದೂರದರ್ಶಿತ್ವದಿಂದಾಗಿ ಈಗಲೂ ಜನರು ನೆಮ್ಮದಿಯನ್ನು ಕಾಣುವಂತಾಗಿದೆ.
ಮಳೆಗಾಲ ಮುಗಿದು ಬೇಸಿಗೆ ಬರುವವರೆಗೂ ಈ ಕೆರೆಗಳಿಗೆ ಅನೇಕ ಹಕ್ಕಿಗಳು ವಲಸೆ ಬರುತ್ತವೆ. ನಮ್ಮಲ್ಲಿ ಮೊಟ್ಟೆಯಿಟ್ಟು ಮರಿಮಾಡದ ಹಕ್ಕಿಗಳನ್ನು ಈ ಪ್ರದೇಶಕ್ಕೆ ವಲಸೆ ಹಕ್ಕಿ ಎಂದೇ ಪರಿಗಣಿಸಬೇಕಾಗುತ್ತದೆ. ಈ ಬಾರಿ ಸೈಬೀರಿಯಾ ಅಲಾಸ್ಕಾ ಕಡೆಯಿಂದೆಲ್ಲ ಹಕ್ಕಿಗಳು ಬಂದದ್ದು ವಿಶೇಷವಾಗಿತ್ತು.
ಪೇಯಿಂಟೆಡ್ ಸ್ಟೋರ್ಕ್, ಗ್ರೇ ಪ್ಲೋವರ್, ಗ್ರೇ ಪೆಲಿಕನ್, ರಿವರ್ ಟರ್ನ್, ಕೂಟ್, ಬ್ಲಾಕ್ ವಿಂಗ್ಡ್ ಸ್ಟಿಲ್ಟ್, ಕಾರ್ಮೋರೆಂಟ್ ಮತ್ತು ವಿವಿಧ ಬಾತುಗಳು ಕಾಣಸಿಗುತ್ತವೆ. ಬೆಳಿಗ್ಗೆ ಮತ್ತು ಸಂಜೆ ಇವುಗಳ ಸಂದಣಿ ಹೆಚ್ಚು. ಕೆಂಬಣ್ಣದ ಸೂರ್ಯನ ಹೊಂಬಣ್ಣದ ಬೆಳಕಿನಲ್ಲಿ ಇವುಗಳ ವೀಕ್ಷಣೆ ಎಂತಹ ಕಠಿಣ ಹೃದಯದವರನ್ನೂ ಕವಿಯನ್ನಾಗಿಸುತ್ತದೆ.
ರೈಲ್ವೆ ಕಾಮಗಾರಿಗಾಗಿ ಕೆರೆಯಿಂದ ಮಣ್ಣನ್ನು ತೆಗೆದದ್ದು ಮತ್ತು ಕಳೆದ ಮಳೆಗಾಲದಲ್ಲಿ ಸ್ವಲ್ಪ ಹೆಚ್ಚಾಗಿಯೇ ಬಿದ್ದ ಮಳೆಯಿಂದಾಗಿ ಕೆರೆಯಲ್ಲಿ ಇನ್ನೂ ಸಾಕಷ್ಟು ನೀರಿದೆ. ಹಾಗಾಗಿ ಕಳೆದ ಕೆಲವು ವರ್ಷಗಳಿಂದ ಕಾಣಿಸದಿದ್ದ ಅಪರೂಪದ ವಲಸಿಗ ಹಕ್ಕಿಗಳನ್ನು ಈ ಬಾರಿ ಎರಡೂ ಕೆರೆಗಳಲ್ಲಿ ಕಾಣುವಂತಾಗಿದೆ.
ಬೇಸಿಗೆ ಬಂದು ಕೆರೆ ಬತ್ತುವಷ್ಟರಲ್ಲಿ ಈ ಹಕ್ಕಿಗಳು ಚೆನ್ನಾಗಿ ಆಹಾರ ಸೇವನೆ ಮಾಡಿ ಶಕ್ತಿ ವರ್ಧಿಸಿಕೊಂಡು ತಮ್ಮ ತಮ್ಮ ಸ್ವಸ್ಥಾನ ಸೇರಲು ಹೊರಡುತ್ತವೆ. ಕೆಲವು ಸಾವಿರಾರು ಕಿಮೀ ದೂರ ಕ್ರಮಿಸಿದರೆ ಇನ್ನು ಕೆಲವು ನೂರಾರು ಕಿಮೀ ಕ್ರಮಿಸುತ್ತವೆ. ಅಲ್ಲಿ ಮೊಟ್ಟೆಯಿಟ್ಟು ಮರಿ ಮಾಡುತ್ತವೆ. ಪುನಃ ಮುಂದಿನ ವರ್ಷ ನಮ್ಮತ್ತ ಹೊರಡುತ್ತವೆ. ಅವು ಹೊರಟುಬಿಡುವ ಮುನ್ನವೇ ಒಮ್ಮೆ ನೋಡಿ ಬನ್ನಿ...


ರೆಕ್ಕೆ ಬಡಿಯುತ್ತಿರುವ ಗ್ರೇ ಪೆಲಿಕನ್ ಹಕ್ಕಿ

ಬೆಳ್ಳಕ್ಕಿಯ ಮೋಹಕ ಹಾರಾಟ

ನೀರ ನಡುವಿನ ಬಂಡೆಕಲ್ಲನ್ನೇ ಮನೆ ಮಾಡಿಕೊಂಡ ರಿವರ್ ಟರ್ನ್ ಹಕ್ಕಿ


ಹಣೆ ಮೇಲೆ ನಾಮದಂತೆ ಬಿಳಿ ಮಚ್ಚೆಯಿರುವ ಕೂಟ್ ಬಾತು


ಆಹಾರವನ್ನು ಹುಡುಕುತ್ತಿರುವ ಬ್ಲಾಕ್ ವಿಂಗ್ಡ್ ಸ್ಟಿಲ್ಟ್ ಹಕ್ಕಿ


ಗ್ರೇ ಪ್ಲೋವರ್ ಹಕ್ಕಿ


ಪೇಯಿಂಟೆಡ್ ಸ್ಟೋರ್ಕ್ ಹಕ್ಕಿಗಳ ಗುಂಪು


ಪಾಂಡ್ ಹೆರಾನ್ ಹಕ್ಕಿಯ ಪ್ರತಿಬಿಂಬ


ಹಾರುತ್ತಿರುವ ಗ್ರೇ ಪೆಲಿಕನ್ ಹಕ್ಕಿ

ಎಲ್ಲೋ ವ್ಯಾಗ್‌ಟೇಲ್ ಹಕ್ಕಿ


ಲ್ಯಾಪ್ ವಿಂಗ್‌ಗಳ ನಡಿಗೆ


ಪ್ಲೋವರ್ ಹಕ್ಕಿಯ ಬಿಂಬ ಪ್ರತಿಬಿಂಬ

Sunday, January 17, 2010

ಬೆವರ ಜೊತೆ ರಕ್ತವೂ ಹರಿದಿದೆ. ದಿ ಬೆಸ್ಟ್ ಪಿಚ್ಚರ್ ಸಿಗುತ್ತೆ ಬಿಡಿ

ಮೊಣಕಾಲಿಗೂ ಮೇಲೆ ನೀರು ಹರಿಯುತ್ತಿತ್ತು. ನುಣುಪಾದ ಬೆಣಚು ಕಲ್ಲುಗಳ ಮೇಲೆ ಜಾರದಂತೆ ಹುಷಾರಾಗಿ ನಿಂತಿದ್ದೆ. ಹಿಂದೆ ಒಣಗಿದ್ದ ಮರವೊಂದಿತ್ತು. ಅದರ ರೆಂಬೆಗೆ ಬೆನ್ನು ತಾಗಿಸಿ ನಿಂತಿದ್ದೆ. ಕೈಯಲ್ಲಿ ಒಂದೂವರೆ ಕೆಜಿ ತೂಕದ ಕ್ಯಾಮೆರಾ ಇದ್ದದ್ದರಿಂದ ಇಷ್ಟೆಲ್ಲ ಮುಂಜಾಗರೂಕತೆಗೆ ಬೇಕಿತ್ತು. ನನ್ನ ಪಕ್ಕದಲ್ಲಿ ಶಿವು ಇದ್ದರು. ಅವರದೂ ಅದೇ ಕಥೆ. ನಾಗೇಂದ್ರರದ್ದು ಕ್ಯಾಮೆರಾ ಚಿಕ್ಕದಿದ್ದುದರಿಂದ ಸ್ವಲ್ಪ ಮುಂದಿದ್ದರು.
ದೂರದಲ್ಲಿ ಮಕ್ಕಳು ನೀರಲ್ಲಿ ಆಡುತ್ತಿದ್ದರು. ಅವರ ನಮ್ಮ ನಡುವೆ ಮೇಲೆ ರಸ್ತೆಗಾಗಿ ಮಾಡಿರುವ ಸೇತುವೆ. ಸೇತುವೆಯ ಎರಡು ಕಂಬಗಳ ನಡುವಿನಿಂದ ನಾವು ಮಕ್ಕಳನ್ನು ನೋಡಬಹುದಿತ್ತು. ಆ ದಿನ ಮಕ್ಕಳಿಗೆ ನೀರಿನಲ್ಲಿ ಆಡಲು ಬಣ್ಣಬಣ್ಣದ ಚೊಂಬು ತಟ್ಟೆಗಳನ್ನು ಕೊಟ್ಟಿದ್ದೆವು. ನೀರೇ ಮಕ್ಕಳಿಗೆ ದೊಡ್ಡ ಆಟಿಕೆ. ಅಂತಹುದರಲ್ಲಿ ಪ್ರೋತ್ಸಾಹಿಸುವಂತೆ ಅವರಿಗೆ ಆಟಿಕೆಗಳನ್ನೂ ಕೊಟ್ಟರೆ ಅವರನ್ನೆಲ್ಲಾ ಹಿಡಿಯುವರುಂಟೆ?
"ಸುಹಾಸ ಇತ್ತ ಬಾ. ಅಶ್ವಿನಿ ಅತ್ತ ನಿಲ್ಲು. ಭರತ ಮುಂದೆ ಹೋಗು..." ಎಂದು ನಾಗೇಂದ್ರ ಕೂಗುತ್ತಿದ್ದರು. ಮಕ್ಕಳು ಅವರದೇ ಆದ ಸಂಭ್ರಮದಲ್ಲಿ ಅವರಿದ್ದರು. ಇವರು ಇತ್ತ ಕಡೆಯಿಂದ ಕೂಗುತ್ತಿದ್ದುದು ಅವರಿಗೇನು ಕೇಳಿಸುತ್ತಿತ್ತೋ ಅವರಿನ್ನೇನೋ ಮಾಡುತ್ತಿದ್ದರು. ಹೇಳಿದ ಮಾತು ಕೇಳುತ್ತಿಲ್ಲವಲ್ಲ ಎಂದು ನಾಗೇಂದ್ರರಿಗೆ ಬೇಸರ ಕೋಪ ಎಲ್ಲ ಒಂದೇ ಬಾರಿ ಉದ್ಭವಿಸಿತು. ತಕ್ಷಣ ಪಕ್ಕದಲ್ಲಿದ್ದ ವಿ.ಡಿ.ಭಟ್, "ನಾಗೇಂದ್ರ ನೀವು ಹೇಳ್ತಾ ಇರಿ. ಮಕ್ಕಳು ಬೇಕಾದ್ದು ಮಾಡ್ತಾ ಇರಲಿ. ಆಗ ನಾವು ತೆಗೆದದ್ದೆಲ್ಲ ಒಳ್ಳೆ ಚಿತ್ರಗಳಾಗ್ತವೆ" ಎಂಬ ಅಮೂಲ್ಯ ಸಲಹೆ ಕೊಟ್ಟರು. ಆಗ ಶುರುವಾಯ್ತು ನಮ್ಮ ಕೂಗಾಟ ಮಕ್ಕಳ ನೀರಾಟ! ಜೊತೆಯಲ್ಲೇ ಕ್ಲಿಕ್ಕಿಸುವಿಕೆ ಮುಂದುವರೆದಿತ್ತು.
"ಮಲ್ಲಿಕಾರ್ಜುನ್ ಶಟರ್ ಸ್ಪೀಡ್ ಎಷ್ಟು ಇಟ್ಟಿದ್ದೀರ?" ಎಂದು ಶಿವು ಎಚ್ಚರಿಸಿದರು. "ಬದಲಾಯಿಸುತ್ತಿದ್ದೇನೆ ಶಿವು. ಒಂದಕ್ಕೇ ಫಿಕ್ಸ್ ಆಗಿಲ್ಲ" ಅಂದೆ. "ಗುಡ್. ಬದಲಾಯಿಸುತ್ತಿರಿ. ಯಾವುದು ಸಕ್ಸ್‌ಸ್ ಆಗುತ್ತೋ ಹೇಳಲಾಗದು" ಅಂದರು ಶಿವು.
ಇದ್ದಕ್ಕಿದ್ದಂತೆ ನಾನು ಒರಗಿದ್ದ ಒಣ ಮರದ ರೆಂಬೆ ಲಟಾರನೆ ಮುರಿಯಿತು. ಎರಡೂ ಕೈಲಿ ಕ್ಯಾಮೆರಾ ಇತ್ತು. ಆಸರೆಗೆ ತಡವಿಕೊಳ್ಳಲು ಕೈ ಖಾಲಿ ಇಲ್ಲ. ನಾನು ಬಿದ್ದರೆ ಚಿಂತೆಯಿಲ್ಲ. ಕ್ಯಾಮೆರಾ ನೀರಲ್ಲಿ ಬೀಳಬಾರದಲ್ಲ. ಪಕ್ಕದಲ್ಲಿದ್ದ ಯಾರಿಗೂ ಆ ಕ್ಷಣದಲ್ಲಿ ಇದು ಅರಿವಿಗೆ ಬಂದಿರಲಿಲ್ಲ. ಬೀಳುವಾಗ ಏನೂ ತೋಚದೆ ಕ್ಯಾಮೆರಾ ಅವುಚಿಕೊಂಡು ಹಣೆಯನ್ನೇ ಆಸರೆ ಮಾಡಿಕೊಂಡು ಮರದ ಕಾಂಡಕ್ಕೆ ಗುದ್ದಿದಂತೆ ಒರಗಿದೆ. ಹಣೆಗೆ ಏನೋ ಚುಚ್ಚಿದಂತಾಯ್ತು. ಸಧ್ಯ ಕ್ಯಾಮೆರಾ ಮತ್ತು ನಾನು ನೀರಿನಲ್ಲಿ ಬೀಳುವುದರಿಂದ ಬಚಾವಾಗಿದ್ದೆವು. ತಕ್ಷಣ ಶಿವು, "ಮಲ್ಲಿಕಾರ್ಜುನ್ ಏನಾಯ್ತು" ಎಂದು ಸಹಾಯಕ್ಕೆ ಧಾವಿಸಿದರು. ನಾಗೇಂದ್ರ ಮತ್ತು ವಿ.ಡಿ.ಭಟ್ ಕೂಡ ಬಂದರು. ಹಣೆಯಿಂದ ರಕ್ತ ಸ್ರಾವವಾಗುತ್ತಿತ್ತು. ನನಗೇನೂ ಕಾಣದೆ, "ಶಿವು ಏನಾದ್ರೂ ಚುಚ್ಚಿಕೊಂಡಿದೆಯೋ ನೋಡಿ" ಎಂದು ಕೇಳಿದೆ. ಕರ್ಚೀಫನ್ನು ನೀರಲ್ಲಿ ಅದ್ದಿ ಒರೆಸಿಕೊಂಡೆ. "ಏನೂ ಚುಚ್ಚಿಲ್ಲ. ಗಾಯ ಆಗಿದೆ. ನೀವು ರೆಸ್ಟ್ ತಗೊಳ್ಳಿ. ಗಾಬರಿಯಾಗಬೇಡಿ" ಅಂದರು ಶಿವು. ಆದರೆ ಆ ಸಂಜೆ ಬೆಳಕು ಮುಗಿದ ಮೇಲೆ ಏನೂ ಮಾಡಲು ಸಾಧ್ಯವಿಲ್ಲವಲ್ಲ. ಅಲ್ಲದೆ ಮಕ್ಕಳು ಇದೇನೂ ಗೊತ್ತಿಲ್ಲದೆ ಆಡುತ್ತಿದ್ದರು. ನಾವು ಎದ್ದು ನಿಂತೆವು. ಒದ್ದೆ ಕರ್ಚೀಫನ್ನು ಹಣೆಗೆ ಒತ್ತಿಕೊಳ್ಳುತ್ತಾ ಕ್ಲಿಕ್ಕಿಸಲು ಶುರುಮಾಡಿದೆ.
"ಮಲ್ಲಿಕಾರ್ಜುನ್, ಬೆವರ ಜೊತೆ ರಕ್ತವೂ ಹರಿದಿದೆ. ದಿ ಬೆಸ್ಟ್ ಪಿಚ್ಚರ್ ಸಿಗುತ್ತೆ ಬಿಡಿ" ಅಂದರು.ಅವರ ನುಡಿ ಸುಳ್ಳಾಗಲಿಲ್ಲ. ಅದ್ಭುತ ಕಲಾಕೃತಿ ಆ ದಿನ ಸೃಷ್ಟಿಯಾಗಿತ್ತು.(ಫೋಟೋ ಹಿಂದಿನ ಕಥೆಗಳು ಬರೆಯಬೇಕೆಂದು ಶಿವು ಮತ್ತು ನಾನು ಮಾತನಾಡಿಕೊಂಡು ಬರೆಯುತ್ತಿದ್ದೇವೆ. ನಿಮ್ಮ ಅನಿಸಿಕೆ ಮತ್ತು ಪ್ರೋತ್ಸಾಹ ಅತ್ಯಗತ್ಯ. ದಯವಿಟ್ಟು ನಿಮ್ಮ ಅನಿಸಿಕೆ ತಿಳಿಸಿ. ಮುತ್ಮುರ್ಡುವಿನ ರಂಗಸ್ಥಳದಲ್ಲಿ ಸೃಷ್ಟಿಯಾದ ಮತ್ತಷ್ಟು ಚಿತ್ರಗಳ ಬಗ್ಗೆ ಒಂದೊಂದಾಗಿ ಮುಂದೆ ಬರೆಯುವೆ.)

Saturday, January 2, 2010

ಆಹಾ ನನ್ನ ಮದುವೆಯಂತೆ...!

ವೆಂಕಟರಮಣನ ಸಂಕಟಗಳು ಒಂದಾ ಎರಡಾ...
ಅವನ ಮದುವೆ ಕಥೆ ಅವನ ಬಾಯಲ್ಲೇ ಕೇಳೋಣ...


ಮದನಪಲ್ಲಿಯಿಂದ ನಮ್ಮಣ್ಣ ಬರುತ್ತಿದ್ದಂತೆಯೇ ನಮ್ಮಜ್ಜಿಯ ರಾಗ ಶುರುವಾಗುತ್ತಿತ್ತು. ಹಳೇ ಗ್ರಾಮಾಫೋನ್ ಪ್ಲೇಟಿನಂತೆ ಒಂದೇ ರಾಗ.. "ಇವನಿಗೊಂದು ಹೆಣ್ಣು ನೋಡೋ. ಬೇಗ ಮದುವೆ ಮಾಡೋಣ.."
"ಇನ್ನೂ ಎರಡು ವರ್ಷ ಬೇಡಣ್ಣ. ಅಜ್ಜಿ ಮಾತು ಕೇಳ್ಬೇಡ" ಅಂತ ನಮ್ಮಣ್ಣನಿಗೆ ಹೇಳುತ್ತಿದ್ದೆ.
ನಮ್ಮಣ್ಣ ಊರೂರು ಸುತ್ತಿದವನು. ಯಾವಾಗ ಯಾರನ್ನು ಹೇಗೆ ಮಾತಾಡಬೇಕೆಂದು ಅರಿತವನು. ಇಬ್ಬರಿಗೂ ತಲೆ ಸವರುತ್ತಿದ್ದ!

ಒಮ್ಮೆ ಮದನಪಲ್ಲಿಗೆ ಅಣ್ಣನ ಮನೆಗೆ ಹೋಗಿದ್ದೆ. ಆಗ ಅಣ್ಣ ಸ್ನೇಹಿತರ ಮನೆಗೆ ಹೋಗಬೇಕು ಬಾ ಎಂದು ನನ್ನನ್ನು ಕರೆದುಕೊಂಡು ಹೋದ. ಅಲ್ಲಿಗೆ ಹೋದ ಮೇಲೆ ಗೊತ್ತಾಯಿತು ಹೆಣ್ಣು ನೋಡಲು ಎಂದು. ನನಗೆ ಗಾಬರಿ, ಕೋಪ ಒಟ್ಟೊಟ್ಟಿಗೇ ಬಂತು. ಅವರ ಮನೆಯಲ್ಲಿ ಇಬ್ಬರು ಹುಡುಗಿಯರು. ನನ್ನ ಪುಣ್ಯ.. ಅವರಿನ್ನೂ ಓದಬೇಕು ಈಗಲೇ ಮದುವೆ ಮಾಡುವುದಿಲ್ಲ ಅಂದುಬಿಟ್ಟರು. ಆದರೆ ಅಣ್ಣನ ಮಾತಿನ ಮೋಡಿಗೆ ಪುಂಗಿಯ ಎದುರಿಗೆ ತಲೆದೂಗುವ ಹಾವಿನಂತಿದ್ದ ಅವರು, "ಇಲ್ಲೇ ಪೀಲೇರಿನಲ್ಲಿ ನಮ್ಮ ನೆಂಟರಿದ್ದಾರೆ. ಅವರ ಮನೆಯಲ್ಲೊಂದು ಹೆಣ್ಣಿದೆ ನಡೀರಿ ಹೋಗೋಣ" ಎಂದು ಹೊರಡಿಸಿಬಿಟ್ಟರು.
ದುರುಗುಟ್ಟಿ ನೋಡುತ್ತಿದ್ದ ನನ್ನನ್ನು, "ಏ! ನೋಡಿದ ತಕ್ಷಣ ಆಗ್ಬಿಡುತ್ತಾ ಸುಮ್ನಿರೋ" ಅಂದ ಅಣ್ಣ.

ಪೀಲೇರಿಗೆ ಹೋದೆವು. ಅವರ ಮನೆಯಲ್ಲಿ ಕಾಫಿ ತಿಂಡಿ ತಿನ್ನುವಾಗ ಡಿವಿಡಿಯಲ್ಲಿ ಫಾರ್ವರ್ಡ್ ಬಟನ್ ಒತ್ತಿದಂತೆ ಟುಯ್ ಟುಯ್ ಎಂದು ಹುಡುಗಿ ಬಂದು ಹೋಗಿಬಿಟ್ಟಳು.
ಹುಡುಗಿಯ ತಂದೆ ಬಂದು ನಮ್ಮಣ್ಣನನ್ನು, "ಹುಡುಗ ಹುಡುಗೀನ ನೋಡಿದ್ನಲ್ಲ. ಓಕೆನಾ?" ಅಂದರು.
ಅಣ್ಣ, "ಹುಂ..ಓಕೆ..ಓಕೆ" ಅಂದ.
ದುರುಗುಟ್ಟಿ ನೋಡುತ್ತಿದ್ದ ನನ್ನನ್ನು ನೋಡಿ ವೆಂಕಟೇಶ್ವರನಂತೆ ಹಸ್ತವನ್ನು ತೋರಿಸುತ್ತಾ ಸುಮ್ಮನಿರು ಅನ್ನುತ್ತಿದ್ದಾನೆ.

ಬರುವಾಗ ದಾರಿಯಲ್ಲಿ, "ಯಾಕಣ್ಣ ಹೀಗೆ ಮಾಡಿದೆ? ನೀನು ಮಾಡಿದ್ದು ಸರಿಯಿಲ್ಲ... ನಾನು ಹುಡುಗೀನ ಸರಿಯಾಗಿ ನೋಡಿಲ್ಲ... ನೀನ್ಯಾಕೆ ಇಷ್ಟ ಆಯ್ತು ಅಂತ ಹೇಳಿದೆ?" ಒಳಗಿದ್ದ ಸಿಟ್ಟೆಲ್ಲ ಕಾರತೊಡಗಿದೆ.
"ಸುಮ್ನಿರೊ... ನಿಮ್ಮ ಹುಡುಗಿ ಚೆನ್ನಾಗಿಲ್ಲ... ಇಷ್ಟ ಆಗಲಿಲ್ಲ.. ಅಂತ ಮುಖದ ಮೇಲೆ ಹೊಡೆದಂಗೆ ಹೇಳೊಕಾಗುತ್ತಾ..? ಈಗೇನು ಬರೀ ನೋಡಿ ತಾನೆ ಬರ್ತಿರೋದು... ಇಷ್ಟಕ್ಕೇ ಮದುವೆ ಆಗಿಬಿಡುತ್ತಾ?" ಮತ್ತೆ ಅಣ್ಣ ತಲೆ ಸವರಿದ.

ಮನೆಗೆ ಬಂದು ಅಣ್ಣ ಅದೇನು ಹೇಳಿದನೋ ತಿಳಿಯದು ಮನೆಯವರೆಲ್ಲ ನಾವೂ ನೋಡಿಬರುತ್ತೇವೆಂದು ಹೇಳಿ ಪೀಲೇರಿಗೆ ಹೋಗಿ ಬಂದರು.
"ಹುಡುಗಿ ಚೆನ್ನಾಗಿದ್ದಾಳಲ್ಲ... ನೀನ್ಯಾಕೆ ಬೇಡ ಅಂತೀಯ? ಒಂದ್ಕೆಲ್ಸ ಮಾಡು.. ನಿನ್ನ ಫ್ರೆಂಡ್ ನಾರಾಯಣನನ್ನು ಕರೆದುಕೊಂಡು ಹೋಗಿ ಸರಿಯಾಗಿ ನೋಡಿಕೊಂಡು ಬಾ..." ಎಂದು ಮನೆಯಲ್ಲಿ ಹೊಸ ರಾಗ ಪ್ರಾರಂಭಿಸಿದರು.

ಹರಕೆಯ ಕುರಿಯಂತೆ ನಾರಾಯಣನ ಜೊತೆ ಹೊರಟೆ. ಅವರ ಮನೆಯಲ್ಲಿ ಹುಡುಗಿ ಕೈಯಲ್ಲಿ ಕಾಫಿ ತಿಂಡಿ ಕೊಡಿಸಿದರು. ಹುಡುಗಿಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಲು ಮುಜುಗರ. ವಾರೆಗಣ್ಣಲ್ಲಿ ನೋಡಿದೆ..!
"ಹೇಗಿದ್ದಾಳಯ್ಯ ಹುಡುಗಿ?" ನಾರಾಯಣನನ್ನು ಕೇಳಿದೆ.
"ಸುಮ್ನಿರಯ್ಯ ಆಮೇಲೆ ಮಾತಾಡೋಣ..." ಎನ್ನುತ್ತಾ ಅವನು ತಿಂಡಿ ತಿನ್ನುತ್ತಿದ್ದಾನೆ!
ಇನ್ನೇನು ಹೊರಡಬೇಕು ಆಗ ಪುಟ್ಟ ಹುಡುಗಿಯೊಬ್ಬಳು ಬಂದು "ಅಂಕಲ್ ಆಂಟಿ ನಿಮ್ಮ ಜೊತೆ ಮಾತಾಡಬೇಕಂತೆ" ಅಂದಳು.
"ನೋಡಯ್ಯ ಹುಡುಗಿ ನಿನ್ನ ಜೊತೆ ಮಾತಾಡಬೇಕಂತೆ... ಸರಿಯಾಗಿ ನೋಡು... ನನ್ನ ತಲೆ ತಿನ್ಬೇಡ..." ಎಂದು ನಾರಾಯಣ ಒಣಗಿದ್ದ ನನ್ನ ಬಾಯಿಗೆ ಮೆಣಸಿನಕಾಯಿ ಅರೆದ.

ಅವರ ಮನೆಪಕ್ಕ ಹೂಗಿಡಗಳಿವೆ. ಅದರ ನಡುವೆ ಬಾವಿಯಿದೆ. ಆ ಬಾವಿ ಪಕ್ಕ ನಿಂತೆ. ದೂರದಲ್ಲಿ ನಿರ್ದೇಶಕನಂತೆ ನಾರಾಯಣ ನಿಂತ.
ಹುಡುಗಿ ಬಂದಳು... ನನ್ನ ಎದೆ ಡವ ಡವ...
"ನಿಮ್ಮನ್ನೇನೋ ಕೇಳ್ಬೇಕು... ಏನೂ ಅನ್ಕೋಬೇಡಿ..." ಅಂದಳು.
"ಏನು?" ಆಳದ ಬಾವಿಯೊಳಗಿಂದ ಬಂದಂತಿತ್ತು ನನ್ನ ಸ್ವರ!
"ಎರಡು ಸಾವಿರ ರೂಪಾಯಿ ಬೇಕಾಗಿತ್ತು..." ಅಂದಳು.
"ಆಂ.." ಬೆವೆತಿದ್ದ ಹಣೆಯನ್ನು ಒರೆಸಲೂ ಕೈ ಮೇಲೇರುತ್ತಿಲ್ಲ.
"ವಾಪಸ್ ಕೊಡ್ತೀನಿ... ಸಾಲ ಅಂತ ಕೊಡಿ.."
ಅಬ್ಬಬ್ಬಾ.. ಆಂಧ್ರ ಹುಡುಗೀರು ಗಟ್ಟಿಗಿತ್ತಿಯರು... ಆದ್ರೆ ಈ ರೀತಿಯಾ..?
"ಇಲ್ಲ ಇಲ್ಲ... ನನ್ಹತ್ರ ದುಡ್ಡಿಲ್ಲ... ಕೊಡಲ್ಲ.." ತೊದಲಿದೆ.
ದೂರದಲ್ಲಿ ನಾರಾಯಣ ಮ್ಯೂಸಿಕ್ ಡೈರೆಕ್ಟರ್ ಥರಹ ಕೈಸೈಗೆ ಮಾಡುತ್ತಿದ್ದಾನೆ.
"ನೆಕ್ಸ್ಟ್ ಟೈಮ್ ಬಂದಾಗ ವಾಪಸ್ ಕೊಡ್ತೀನಿ ಕೊಡಿ..."
ಈಗ್ಲೆ ಹೀಗೆ... ಇನ್ನು ಮದುವೆಯಾದರೆ..? ನನಗೇನೂ ತೋಚದೆ ಸೀದಾ ನಾರಾಯಣನ ಬಳಿ ಬಂದು, "ನಡಿಯಯ್ಯಾ ಹೋಗೋಣ..." ಎಂದು ಹೊರಡಿಸಿದೆ.
"ಸರಿಯಾಗಿ ಮಾತಾಡ್ದೇನಯ್ಯಾ?" ಅವನ ಪ್ರಶ್ನೆ.
"ಹುಡುಗಿ ಎರಡು ಸಾವಿರ ದುಡ್ಡು ಕೇಳಿದ್ಲಯ್ಯಾ.." ಅಂದೆ.
"ಏ ಬಿಡಯ್ಯ.. ಏನೋ ತಮಾಷೆಗೆ ಕೇಳಿರಬೇಕು.. ಹುಡುಗಿ ಇಷ್ಟತಾನೇ?"
ನಾರಾಯಣನ ಮಾತಿಗೂ ನನ್ನ ಆಲೋಚನೆಗೂ ತಾಳೆಯಾಗುತ್ತಿಲ್ಲ.

ಮದನಪಲ್ಲಿಗೆ ಬಂದೆವು. ನಾಗಾರ್ಜುನನ "ಸಿಸಿಂದ್ರಿ" ಫಿಲಂ ರಿಲೀಜ್ ಆಗಿತ್ತು. ಹೋದೆವು. ನಾರಾಯಣ ನಾಗಾರ್ಜುನನ ಫ್ಯಾನ್. ನೋಡಲೂ ಹಾಗೇ ಇದ್ದಾನೆ. ಹಾಗಾಗಿ ಹುಡುಗಿ ಹೇಗಿದ್ದಾಳೆಂದು ಸರಿಯಾಗಿ ಹೇಳುತ್ತಾನೆಂಬ ಭ್ರಮೆ ನನ್ನದು.
"ಹುಡುಗಿ ಸಣ್ಣ... ಬಣ್ಣ ಅಷ್ಟಕ್ಕಷ್ಟೇ... ಚೆನ್ನಾಗಿಲ್ಲ ಅಲ್ವೇನಯ್ಯಾ?" ನಾರಾಯಣನ ತಲೆ ತಿನ್ನಲು ಪ್ರಾರಂಭಿಸಿದೆ. ಆ ಚಲನಚಿತ್ರದಲ್ಲಿ ಹೀರೋಯಿನ್ ಆಮನಿಯ ಜೊತೆಯಲ್ಲಿ ಸಣ್ಣಗಿರುವ ಹುಡುಗಿಯೊಬ್ಬಳಿರುತ್ತಾಳೆ. ಅವಳನ್ನು ತೋರಿಸುತ್ತಾ, "ನೋಡ್ಕೊಳ್ಳಯ್ಯ... ಹೀಗೇ ಇರೋದು ಹುಡುಗಿ.. ಇವಳೇ ಅನ್ಕೋ... ನಾನು ಬಡ್ಕೊಂಡೆ... ಸರಿಯಾಗಿ ನೋಡು.. ಮಾತಾಡ್ಸು.." ಎಂದು ನಾರಾಯಣ ನನ್ನ ತಲೆ ಗಜಿಬಿಜಿ ಮಾಡಿದ.
ಬೆಳ್ಳಿತೆರೆಗೂ ನಿಜಬದುಕಿಗೂ ವ್ಯತ್ಯಾಸವಿದೆಯೆಂಬ ಸಣ್ಣ ವಿಚಾರ ನನ್ನ ತಲೆಗೆ ಹೊಳೆಯಲೇ ಇಲ್ಲ.

ದಾರಿಯಲ್ಲಿ ಬರುವಾಗ, "ಸರಿಯಾಗಿ ಹೇಳು ನಾರಾಯಣ... ನೀನೇ ನನ್ನ ಜಾಗದಲ್ಲಿ ಇದ್ದಿದ್ದರೆ ಆಗ್ತಿದ್ಯಾ?" ಅಂತ ಕೇಳಿದೆ.
"ನೀನು ಆಗಲ್ಲ ಅಂದ್ರೆ ಹೇಳಯ್ಯ... ನಾನೇ ಮದುವೆ ಆಗ್ತೀನಿ" ಅಂದುಬಿಟ್ಟ!
ಫಿಗರ್ ನಾರಾಯಣನೇ ಹೀಗನ್ನಬೇಕಾದರೆ ಗಾಬರಿಯಲ್ಲಿ ನಾನೇ ಸರಿಯಾಗಿ ನೋಡಿಲ್ಲವೇನೋ... ಫಿಲಂನಲ್ಲಿ ನೋಡಿದ ಹುಡುಗಿ... ನಿಜವಾದ ಹುಡುಗಿ... ಎಲ್ಲ ಕಲಸುಮೇಲೋಗರವಾಗಿ ಹುಡುಗಿ ಮುಖವೇ ನೆನಪಾಗದಾಯಿತು!
ಮನೆಯಲ್ಲಿ ಸರಿಯಾಗಿ ನೋಡಿಲ್ಲವೆಂದೇ ಹೇಳಿದೆ.

ಸ್ವಲ್ಪ ದಿನಗಳಾಯ್ತು. ಮನೆಯವರೆಲ್ಲ ಹೋಗಿದ್ದಾಗ ಅಪ್ಪ ಹೋಗಿರಲಿಲ್ಲ. ಈಗ ತಾನೇ ಹೊರಟ. ಎರಡು ಟಾಟಾ ಸುಮೋ ಬಂದವು. ನೆಂಟರು ಪಂಟರು ಎಲ್ಲ ಹತ್ತಿದರು. ದುರ್ಗಮ ದಾರಿಯಲ್ಲಿ ದಿಕ್ಕುತಪ್ಪಿದ ದಾರಿಹೋಕನಂತಾಗಿತ್ತು ನನ್ನ ಸ್ಥಿತಿ. ನಾನು ಯಾರಿಗೂ ಇಲ್ಲಿ ಲೆಕ್ಕಕ್ಕೇ ಇಲ್ಲ.
ಅವರ ಮನೆ ತಲುಪಿದಾಗ ಮದ್ಯಾಹ್ನ ೧೨ ಗಂಟೆ. ಸೂರ್ಯ ಮೇಲೂ ಒಳಗೂ ಸುಡುತ್ತಿದ್ದ. ಅವರೆಲ್ಲ ಗಾಡಿಯಿಂದ ಇಳಿದರೂ ನಾನು ಕೆಳಗಿಳಿಯಲಿಲ್ಲ. ಎಷ್ಟು ಕರೆದರೂ ಸುಮೋ ಬಿಟ್ಟು ಕದಲಲಿಲ್ಲ. ಸುಮಾರು ೧.೩೦ಕ್ಕೆ ಹುಡುಗಿ ಅಣ್ಣ ಬಂದ. ತೆಲುಗು ಫಿಲಂನಲ್ಲಿ ವಿಲನ್ ಪಾತ್ರ ಮಾಡುವ ಕ್ಯಾಪ್ಟನ್ ರಾಜ ಥರ ಇದ್ದಾನೆ. ಬೇಕೆಂದರೆ ನನ್ನನ್ನು ಕಂಕುಳಲ್ಲಿ ಎತ್ತಿಕೊಂಡು ಹೋಗಿಬಿಡಬಲ್ಲ!
"ಬೇಗ ಬಾ... ಎಲ್ಲರೂ ಕಾಯುತ್ತಿದ್ದಾರೆ..." ಎಂದು ಕೈಹಿಡಿದು ಎಳೆದ. ಬಿಡಿಸಿಕೊಳ್ಳುತ್ತಾ ಯಾಕೆ ಎಂದು ಕೇಳಿದೆ.
"ಎಂಗೇಜ್‌ಮೆಂಟ್.. ಬೇಗ ಬಾ.."
ಅಂದ.
ತಮಾಷೆ ಮಾಡ್ತಿರಬೇಕು... ಆವತ್ತು ನೋಡಿದರೆ ಎರಡು ಸಾವಿರ ರೂಪಾಯಿ... ಇವತ್ತು ಎಂಗೇಜ್‌ಮೆಂಟ್... ತಿಂಡಿ ತಿನ್ನುವುದಕ್ಕಿರಬೇಕೆಂದುಕೊಂಡು ಹೊರಟೆ.
ಒಳಗೆ ಹೋದೆ. ಗಾಬರಿಯಾಯ್ತು. ಹುಡುಗಿ, ಪುರೋಹಿತ ಎಲ್ಲ ಕುಳಿತಿದ್ದಾರೆ. ಏನು ಮಾಡುವುದೋ ತೋಚಲಿಲ್ಲ. ಅಪ್ಪ "ಕೂತ್ಕೋ" ಅಂದರು.
ಅವರಿಗೆ ಮೂಗಿನ ತುದಿಯಲ್ಲೇ ಕೋಪ. ಇನ್ನೊಮ್ಮೆ ಗಟ್ಟಿಯಾಗಿ "ಕೂತ್ಕೊಳೋ" ಅಂದರು.ಆ ಎಂಗೇಜ್‌ಮೆಂಟ್ ಫೋಟೋ ನೋಡಿದರೆ ನಿಮಗೆ ನನ್ನ ಮುಖಾನೇ ಕಾಣಲ್ಲ. ಬರೀ ಕೋಪ, ಬೇಜಾರು ಮಾತ್ರ ಕಾಣುತ್ತೆ.

"ಯಾಕಣ್ಣ ಹೀಗೆ ಮಾಡಿದೆ" ಎಂದು ಅಣ್ಣನನ್ನು ಕೇಳಿದೆ.
"ಈಗ ಏನಾಗಿದೆಯೋ?" ಎಂದು ಏನೂ ತಿಳಿಯದವನಂತೆ ಅಣ್ಣ ನನ್ನನ್ನೇ ಕೇಳಿದ.
"ಹುಡುಗಿ ಸಣ್ಣ, ಕಲರ್ ಕಡಿಮೆ... ನಿನಗೆ ಕಾಣ್ತಿಲ್ವಾ?" ಅಂದೆ.
"ಇನ್ನೊಂದು ತಿಂಗಳು ಬಿಟ್ಟು ಬಂದು ನೋಡು ಹೇಗಿರ್ತಾಳೇಂತ. ಹುಡುಗೀರು ಮದುವೆ ಫೀಕ್ಸ್ ಆದ್ಮೇಲೆ ದಪ್ಪಗಾಗ್ತಾರೆ... ಕಲರ್ ಕೂಡ ಬರ್ತಾರೆ.. ನಮ್ಮೂರಿನ ನೀರಿಗೆ ಇನ್ನೂ ಬೆಳ್ಳಗಾಗ್ತಾಳೆ ಬಿಡೋ.. ನಿನಗೇನು ಗೊತ್ತು" ಎಂದು ನನ್ನ ಬಾಯಿ ಮುಚ್ಚಿಸಿದ.

"ಕೊಡೋದು ಬಿಡೋದು ಏನೂ ಬೇಡ. ನಮ್ಮೂರಲ್ಲಿ ನಾವೇ ಮದ್ವೆ ಇಟ್ಕೋತೀವಿ" ಎಂದು ಅಪ್ಪ ಅವರಿಗೆ ಹೇಳಿದ. ಹೇಳಿದ್ದೇ ಸಾಕಾಯ್ತು ಹೆಣ್ಣಿನವರು ಮನೆ ಕಟ್ಟಿಕೊಂಡರು... ನನ್ನ ತಲೆ ಮೇಲೆ ಚಪ್ಪಡಿ ಪೇರಿಸಿದರು!
ಬಂದೇ ಬಿಡ್ತಲ್ಲ ಆ ದಿನ... ಮದುವೆ ದಿನ.. ಸರ್ಕಾರಿ ಬಸ್ ನೌಕರರ ಪ್ರತಿಭಟನೆಯಿಂದಾಗಿ ಅವತ್ತು ಬಸ್‌ಗಳಿರಲಿಲ್ಲ. ಹೊಸಹುಡ್ಯದ ಪ್ಲೇಗ್‌ಮಾರಮ್ಮ ಚತ್ರ. ಆರತಕ್ಷತೆಗೆ ಎಲ್ಲರೂ ಕಾಯುತ್ತಿದ್ದರು. ಹೆಣ್ಣಿನವರು ತಡವಾಗಿ ಲಾರಿಯಲ್ಲಿ ಬಂದಿಳಿದರು. ಆರತಿ ಬೆಳಗುತ್ತಿರುವಾಗಲೇ ಹೆಣ್ಣು ಡಬ್ ಎಂದು ಬಿದ್ದಳು.
ನನ್ನ ಪಕ್ಕದಲ್ಲಿ ನಿಂತಿದ್ದ ಮಲ್ಲಳ್ಳಿ ಮುನಿಯಪ್ಪ, " ಹೋಗಿ ಹೋಗಿ ಯಾವುದೋ ರೋಗದ ಕೋಳೀನ ತಂದಿದ್ದೀರಲ್ಲ. ನಿಮಗೆ ಬೇರೆ ಹೆಣ್ಣೇ ಸಿಗಲಿಲ್ವಾ? ಎಷ್ಟು ದುಡ್ಡು ಕೊಟ್ರು?" ಎಂದರು. ಭೂಮಿ ಬಾಯ್ಬಿಡಬಾರದಾ ಅನ್ನಿಸಿಬಿಡ್ತು.

ರಿಸೆಪ್ಶನ್‌ಗೆ ಹೆಣ್ಣಿಗೆ ಮೇಕಪ್ ಮಾಡಿದ್ದರು. ಒಳ್ಳೆ ಯಕ್ಷಗಾನದ ಪಾತ್ರದಂತಿತ್ತು. ಸ್ಟೇಜ್ ಮೇಲೆ ಕೂತಿದ್ರೆ... ನಮ್ಮನ್ನು ನೋಡ್ತಿರೋರೆಲ್ಲ ಏನೆಂದು ಕಮೆಂಟ್ ಮಾಡ್ತಿರಬಹುದು ಎಂದು ಆಲೋಚಿಸಿದಷ್ಟೂ ಬೇಸರವಾಗುತ್ತಿತ್ತು.
ನಮ್ಮಣ್ಣ ಆದಿನಾರಾಯಣ, ನಮ್ಮಜ್ಜಿ ಆದೆಮ್ಮ. ಇವರಿಬ್ಬರೂ ನನ್ನನ್ನು ಆಳ ಬಾವಿಗೆ ತಳ್ಳಿದ ಆದಿಮಾನವರು. ಇವರ ಆಲೋಚನೆ ಕೂಡ ಆದಿಮಾನವನಂತೆಯೇ ಇತ್ತು.
ಏನೇನೆಲ್ಲ ಕನಸು ಕಂಡಿದ್ದೆ. ನಾನು ಮದುವೆಯಾಗುವ ಹುಡುಗಿ ಹೇಗಿರಬೇಕೆಂದುಕೊಂಡಿದ್ದೆ. ಹೇಗಾಯ್ತು...

ಮಹೂರ್ತ ಸಮೀಪಿಸಿತು. ಪುರೋಹಿತರು ತಾಳಿ ಕಟ್ಟಲು ಹೇಳಿದರು. ಆಗಲೂ ನನಗೆ ಹಿಂಜರಿಕೆ. ಕಟ್ಟುವುದೋ ಬೇಡವೋ..? ಕಟ್ಟಿದ ಮೇಲೆ ಏನೂ ಮಾಡೋಕಾಗಲ್ವಲ್ಲ! ನಿಲ್ಲಲು ಇದೇನು ಫಿಲಮ್ಮಾ?
ಮದುವೆಯಾಯ್ತು. ಸ್ಟೇಜ್ ಮೇಲೆ ಕುರ್ಚಿ ಹಾಕಿ ಕೂರಿಸಿದರು. ನಾರಾಯಣ ಬಂದ. ಹತ್ತಿರ ಕರೆದು, "ನಿನ್ನ ಎದೆ ಮೇಲೆ ಕೈಯಿಟ್ಟು ಹೇಳಯ್ಯ. ಹುಡುಗಿ ಚೆನ್ನಾಗಿದ್ದಾಳಾ?" ಅಂದೆ.
"ನಾನೇನಯ್ಯ ಮಾಡ್ಲಿ. ನಿಮ್ಮನೆಯವರೆಲ್ಲ ನನ್ನ ಬಾಯಿ ಮುಚ್ಸಿದ್ರು. ಎಲ್ರೂ ಒಪ್ಪಿರೋವಾಗ ಇವನದೇನು. ನೀನೂ ಹುಡುಗಿ ಚೆನ್ನಾಗಿದ್ದಾಳೆ ಅಂತ ಹೇಳ್ಬಿಡು ಅಂದಿದ್ದು. ಋಣಾನುಬಂಧ. ಮುಂದೆ ಸರಿ ಹೋಗುತ್ತೆ ಬಿಡು" ಅಂದ.

ಮುಂದಿನ ಸಾಲಲ್ಲಿ ಸುಂದರವಾದ ಹುಡುಗಿ ಕುಳಿತಿದ್ದಳು. "ಎಷ್ಟು ಚೆನ್ನಾಗಿದ್ದಾಳಲ್ವಾ. ಇವಳನ್ನಾದ್ರೂ ಮದುವೆ ಆಗಿದ್ದಿದ್ರೆ..." ಎಂಬ ಆಲೋಚನೆ ಬಂದು ಮನಸ್ಸು ದುಗುಡಗೊಂಡಿತು. ಅಕ್ಕ ಬಂದವಳು ಅದೇ ಸುಂದರ ಹುಡುಗಿಯನ್ನು ತೋರಿಸಿ, "ಬೆಂಗಳೂರಲ್ಲಿ ರಾಜಣ್ಣ ಮಾವ ಇದ್ದಾರಲ್ಲ ಅವರ ನೆಂಟರ ಹುಡುಗಿ ಮಂಜುಳ ಅಂತ. ನಿನಗೆ ಕೊಡ್ಬೇಕು ಅಂದ್ಕೊಂಡಿದ್ದರಂತೆ. ಅವಳ ಪರೀಕ್ಷೆ ಆಗಲಿ ಎಂದು ಕಾಯುತ್ತಿದ್ದರಂತೆ... ಮಾವ ಹೇಳಿದರು" ಅಂದಳು.
ಕುತ್ತಿಗೆಯಿಂದ ಹಾರ ತೆಗೆದೆ. ಅದರಲ್ಲಿದ್ದ ನೀರು ರೇಷ್ಮೆ ಶರ್ಟಿನ ಮೇಲಿಳಿದು ಕರೆಯಾಗಿತ್ತು...