Thursday, October 30, 2008

ಕಾರು ಓಡುತ್ತಾ...ಕುಪ್ಪಳಿಸುತ್ತಾ...?

ಈ ಚಿತ್ರ ನೋಡಿದ ಮೇಲೆ ನಿಮಗೆ ಮೇಲಿನ ಅನುಮಾನ ಶುರುವಾದ್ರೆ ಅದಕ್ಕೆ ನಾನಂತೂ ಕಾರಣನಲ್ಲ. ಯಾಕಂದ್ರೆ ಕೆಲ ತಿಂಗಳ ಹಿಂದೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ನಡೆದ ಕರ್ನಾಟಕ ಕಾರ್ ರೇಸ್ ನಲ್ಲಿ ಪಾಲ್ಗೊಂಡಿದ್ದ ಎಲ್ಲ ಕಾರುಗಳೂ ಹೀಗೆಯೇ ಕುಪ್ಪಳಿಸಿದ್ದು...!

Friday, October 24, 2008

ನಿಶಾಚರ ಜೀವಿಯ ನಿಗೂಢ ಬದುಕು

"ನಂದಿಬಟ್ಟಲ ಗಿಡದ ಕೆಳಗೆಲ್ಲಾ ಹಿಕ್ಕೆಗಳು ಬಿದ್ದಿವೆ. ತುಂಬಾ ಹುಳಗಳಿರಬೇಕು. ಮೊದಲು ಅವನ್ನೆಲ್ಲಾ ಬಿಸಾಡಬೇಕು. ಇಲ್ಲದಿದ್ದರೆ ಗಿಡಾನೆಲ್ಲಾ ಹಾಳುಮಾಡ್ತವೆ" ಎಂದು ಅಜ್ಜಿ ಮೊಮ್ಮಗಳು ಮಾತನಾಡುತ್ತಿದ್ದುದು ಕೇಳಿ ನನ್ನ ಕಿವಿಗಳು ನೆಟ್ಟಗಾದವು. ಹೂತೋಟದ ಉಸ್ತುವಾರಿ ವಹಿಸಿಕೊಂಡಿರುವ ಇವರಿಗೆ ತೊಂದರೆ ಕೊಡುತ್ತಿರುವ ಹುಳ ಯಾವುದು ಎಂದು ಮಧ್ಯೆ ಪ್ರವೇಶಿಸಿದೆ.
ಎಲೆಗಳ ಬಣ್ಣವನ್ನೇ ಪಡೆದು ಒಂದೇ ಸಮನೆ ಎಲೆಗಳನ್ನು ಸ್ವಾಹಾ ಮಾಡುವ ಈ ಹುಳಗಳನ್ನು ಕಂಡುಹಿಡಿಯುವುದು ಸುಲಭವಲ್ಲ. ಆದರೆ ಶಿಡ್ಲಘಟ್ಟದ ರೇಷ್ಮೆ ಬೆಳೆಗಾರರಿಗೆ ಇಂಥ ಸೂಕ್ಷ್ಮಗಳೆಲ್ಲ ಬಾಲ್ಯದಲ್ಲೇ ಗೊತ್ತಾಗುತ್ತವೆ. ನೆಲದಲ್ಲಿ ಅವುಗಳ ಹಸಿ ಹಿಕ್ಕೆ ಬಿದ್ದಲ್ಲಿ ಸರಿಯಾಗಿ ನಿಂತು ತಲೆಯ ಮೇಲ್ಗಡೆ ಇರುವ ಎಲೆಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಬೇಕು. ತಲೆಯ ಮೇಲೂ ಒಂದೆರಡು ಹಿಕ್ಕೆ ಬಿದ್ದರೆ ನಿಮ್ಮ ಅದೃಷ್ಟ. ಹುಳು ಸಿಕ್ಕೇ ಸಿಗುತ್ತದೆ. ನನಗೂ ಸಿಕ್ಕಿತು. ಅದರ ಮೈಮೇಲೊಂದು ಬಿಳಿಯ ಗೆರೆಯೂ, ಅಲ್ಲಲ್ಲಿ ಬಿಳಿ ಚುಕ್ಕೆಗಳೂ, ಹಳದಿಯ ಪುಟ್ಟ ಬಾಲವೂ ಇರುತ್ತದೆ. ಇತರೇ ಜೀವಿಗಳನ್ನು ಹೆದರಿಸಲೋ ಏನೋ ದೊಡ್ಡ ಕಣ್ಣುಗಳಿರುವಂತೆ ಕಾಣುವ ನೀಲಿ ಬಣ್ಣದ ಮಚ್ಚೆಗಳಿವೆ.
ಹುಡುಕಿದಾಗ ಇನ್ನೂ ನಾಲ್ಕು ಹುಳುಗಳು ಸಿಕ್ಕವು. ನನಗೇನೋ ಈ ಕಂಬಳಿ ಹುಳು ಮುಂದೆ ಚಿಟ್ಟೆಯಾದೀತು ಎಂಬ ಅನುಮಾನ. ನಮ್ಮಜ್ಜಿಗೆ ಹೇಳಿದಾಗ ಅವರು, "ಅಯ್ಯೋ, ಇವು ಬರೀ ಎಲೆ ತಿನ್ನುವ ಹುಳಗಳು. ನಾನೆಷ್ಟೋ ವರ್ಷಗಳಿಂದ ಇವನ್ನು ನೋಡಿದ್ದೀನಿ. ಮೊದಲು ಬಿಸಾಕು" ಅಂದರು. ಆದರೂ ಒಂದು ರಟ್ಟಿನ ಡಬ್ಬ ತಂದು ಅದರಲ್ಲಿ ಒಂದಷ್ಟು ನಂದಿಬಟ್ಟಲ ಎಲೆಗಳನ್ನು ಹಾಕಿ ಈ ಹುಳಗಳನ್ನು ಅದರಲ್ಲಿ ಬಿಟ್ಟೆ.
ರಾತ್ರಿ ನನ್ನ ತಮ್ಮ, "ಆ ಹುಳಗಳಲ್ಲಿ ಒಂದು ಸತ್ತಿತ್ತು, ಬಿಸಾಡಿದೆ. ಇನ್ನೊಂದು ಸಾಯುವ ಸ್ಥಿತಿಯಲ್ಲಿದೆ ನೋಡು" ಅಂದ. ಒಂದು ಹುಳವಂತೂ ಕಂದು ಬಣ್ಣವಾಗಿಬಿಟ್ಟಿತ್ತು. ಉಳಿದೆರಡೂ ನಿಸ್ತೇಜವಾಗಿದ್ದವು.
ಬೆಳೆಗ್ಗೆನೇ ಯಾರಿಗೂ ಹೇಳದೇ ಇವನ್ನು ಗಿಡದಲ್ಲಿ ಬಿಟ್ಟೆ. ಕಂದು ಬಣ್ಣದ್ದಂತೂ ಗಿಡದಲ್ಲಿ ಬಿಟ್ಟ ತಕ್ಷಣ ಸರಸರನೆ ರೆಂಬೆಯ ಮೇಲೆ ನಡೆಯತೊಡಗಿತು. ಮಿಕ್ಕೆರಡನ್ನೂ ಗಿಡದಲ್ಲಿ ಬಿಟ್ಟು ಬಂದೆ.
ಮೂರ್ನಾಕು ದಿನಗಳ ನಂತರ ನನ್ನ ತಂಗಿ, "ಒಂದು ಹೊಸ ಹುಳ ನೋಡಿದೆ, ಫೋಟೋ ತೆಗೀತೀಯಾ?" ಅಂದಳು. ದಾಸವಾಳದ ಗಿಡದ ಕೆಳಗೆ ಕೊಳೆತ ಎಲೆಗಳ ನಡುವೆ ಒಂದು ಕಾಯಂತಿತ್ತು. ಅವಳು ಗಿಡಕ್ಕೆ ನೀರು ಹಾಕುವಾಗ ಅದು ಕದಲಿತಂತೆ. ಅದರಿಂದಾಗಿ ಅದೊಂದು ಹುಳವಿರಬೇಕೆಂದು ಅಂದುಕೊಂಡಿದ್ದಳು.
ನಾನು ಹತ್ತಿರದಿಂದ ಅದನ್ನು ನೋಡಿದೆ. ನಂದಿಬಟ್ಟಲ ಗಿಡದ ಹುಳಕ್ಕೂ ಇದಕ್ಕೂ ಸಾಮ್ಯತೆ ಇರುವಂತೆ ಅನಿಸಿ ಅನುಮಾನ ಹುಟ್ಟಿತು. ಅಲ್ಲೇ ಸುತ್ತಮುತ್ತ ಹುಡುಕಿದಾಗ ಇನ್ನೆರಡು ಅದೇ ತರಹದ್ದು ಸಿಕ್ಕವು. ನೋಡಲು ಒಂದು ಕಾಯಿಯಂತಿದ್ದರೂ ಬೆರಳಿನಲ್ಲಿ ಮುಟ್ಟಿದರೆ ಥಟ್ಟನೆ ಕದಲುತ್ತಿತ್ತು. ಒಂದು ಪುಟ್ಟ ರಟ್ಟಿನ ಡಬ್ಬಿಯಲ್ಲಿಟ್ಟು ಮನೆಯೊಳಗೆ ತಂದೆ. ಪತಂಗ ಇದ್ದೀತೆ? ಪುಸ್ತಕವನ್ನೆಲ್ಲಾ ತಿರುವಿ ಹಾಕಿದೆ.
ಚಿಟ್ಟೆಗಳು ಮತ್ತು ಪತಂಗಗಳು ಒಂದೇ ಜಾತಿಯವು. ಆದರೆ ಕೆಲವು ವ್ಯತ್ಯಾಸಗಳಿವೆ. ಚಿಟ್ಟೆಗಳು ಹಗಲು ಜೀವಿಗಳಾದರೆ, ಪತಂಗಗಳು ನಿಶಾಚರಿಗಳು. ಚಿಟ್ಟೆಗಳು ರೆಕ್ಕೆಗಳನ್ನು ಮೇಲಕ್ಕೆ ಮಡಿಚುತ್ತವೆ. ಆದರೆ ಪತಂಗಗಳು ವಿಮಾನದ ರೆಕ್ಕೆಗಳಂತೆ ಅಡ್ಡಡ್ಡ ಅಗಲಿಸಿರುತ್ತವೆ. ಚಿಟ್ಟೆಗಳ ಮೈ ಬಡಕಲು, ಮೀಸೆ ಅನ್ನೋದು ಬೆಂಕಿಕಡ್ಡಿ ಥರಾ. ಪತಂಗಗಳದ್ದು ಠೊಣಪರ ಮೈ. ಹಂಚಿಕಡ್ಡಿ ಮೀಸೆ. ನಿಶಾಚರ ಜೀವಿಗಳಾದ ಈ ಪತಂಗಗಳನ್ನು ನಾವು ನೋಡುವುದೇ ತೀರಾ ಕಡಿಮೆ. ಕಂಬಳಿ ಹುಳುಗಳು ಚೆನ್ನಾಗಿ ಎಲೆತಿಂದು ಬೆಳೆದ ಮೇಲೆ ಪ್ಯೂಪಾ ಆಗುವಾಗ ಮಣ್ಣಲ್ಲಿ ನೆಲದಲ್ಲಿ ಎಲೆಗಳ ಮರೆ ಸೇರಿಬಿಡುತ್ತವೆ.
ನಾನು ಅದನ್ನು ಮನೆಯೊಳಗೆ ತಂದ ಏಳನೇ ದಿನ ಪ್ಯೂಪಾ ಪೂರ್ತಿ ಕಪ್ಪುಬಣ್ಣಕ್ಕೆ ತಿರುಗಿತ್ತು. ಬೆಳೆಗ್ಗೆನೇ ಎದ್ದು ನೋಡಿದೆ. ಪ್ಯೂಪಾ ಒಡೆದಿದೆ. ಕೆಂಪು ಬಣ್ಣದ ದ್ರವವಿದೆ. ಆದರೆ ಪತಂಗವೇ ಇಲ್ಲ. ಸುತ್ತ ನೋಡಿದೆ. ನನ್ನ ಪುಣ್ಯ. ಕಿಟಕಿಯ ಗ್ರಿಲ್ ಚಿಕ್ಕದಾಗಿದ್ದು ಅದು ಹೊರ ಹೋಗಲಾಗದೇ ಅದರ ಮೇಲೆ ಕುಳಿತಿತ್ತು. ದಪ್ಪ ಹೊಟ್ಟೆ, ದೊಡ್ಡ ಕಣ್ಣುಗಳು, ಅಗಲವಾದ ರೆಕ್ಕೆ. ಪಾಚಿ ಬಣ್ಣದಲ್ಲಿ ಹಾಗೂ ರೆಕ್ಕೆಯ ಮೇಲೆ ಬಿಳಿ ಬಣ್ಣದಲ್ಲಿ ಕಣ್ಣುಗಳು ಮತ್ತು ವೀರಪ್ಪನ್ ಮೀಸೆ ಬರೆದಂತಿತ್ತು. ಬೆಳಕಾಗಿದ್ದರಿಂದ ಅದು ಕದಲದೇ ಹಾಗೆಯೇ ಕುಳಿತಿತ್ತು. ಅದನ್ನು ನಮ್ಮಜ್ಜಿಗೆ ತೋರಿಸಿದೆ. "ಎಷ್ಟು ಚೆನ್ನಾಗಿದೆ. ನೋಡಿದ್ಯಾ ನಂಗೊತ್ತೇ ಇರಲಿಲ್ಲ" ಎಂದು ಸಂತೋಷಿಸಿದರು. ಇದರ ಫೋಟೋ ತೆಗೆದು ಪುಸ್ತಕದಲ್ಲಿ ಹುಡುಕಿದೆ. ಇದರ ಹೆಸರು ಓಲಿಯಾಂಡರ್ ಹಾಕ್ ಮಾತ್ .
ಕತ್ತಲಾದ ಮೇಲೆ ಹೊರಗೆ ತೆಗೆದುಕೊಂಡು ಹೋದೆ. ಮನೆಯಿಂದ ಹೊರಗೆ ಬರುವಷ್ಟರಲ್ಲೇ ರೆಕ್ಕೆ ಪಟಪಟಿಸಿದ ಅದು ಆಚೆ ಬರುತ್ತಿದ್ದಂತೆಯೇ ಹಾರಿಹೋಯಿತು.
ಮುದ್ದೆ ಮುದ್ದೆಯಂತಿರುವ, ಸದಾ ತಿನ್ನುವ ಠೊಣಪನಂತಿರುವ ಈ ಕಂಬಳಿ ಹುಳುಗಳು ಸುಂದರ ರೆಕ್ಕೆಗಳಿರುವ ಪತಂಗಗಳಾಗಿ ಮಾರ್ಪಾಡಾಗುವ ಸೋಜಿಗ ನೋಡುವಾಗ ನಾನಾ ಪ್ರಶ್ನೆಗಳು ಮನದಲ್ಲಿ ಮೂಡುತ್ತವೆ. ಮಣ್ಣಿನ ಬಣ್ಣದ ಕವಚ ಕಟ್ಟಿಕೊಂಡು ಮಣ್ಣಿನಲ್ಲಿ ಸೇರುವಂತೆ ಇವಕ್ಕೆ ಹೇಳಿಕೊಟ್ಟವರ್ಯಾರು? ಬೆರಳ ಗಾತ್ರದ ಹುಳಕ್ಕೆ ಕವಚದೊಳಗೆ ರೆಕ್ಕೆಯು ಮೂಡುವುದೆಂತು? ಪತಂಗಕ್ಕೆ ಇಂತಹದೇ ಹೂವಿನ ಮಕರಂದ ಹೀರೆಂದು, ಇದೇ ಗಿಡದಲ್ಲಿ ಮೊಟ್ಟೆ ಇಡೆಂದು ಹೇಳಿಕೊಟ್ಟವರ್ಯಾರು?
ಇದೊಂದು ಕೊನೆಯಿರದ, ಸಂತಸಪಡುವ, ತಾಳ್ಮೆಯಿಂದ ಅಭ್ಯಸಿಸುವ, ಗಮನಿಸುವ ಕೌತುಕಲೋಕ.

Thursday, October 16, 2008

ಮಿರಿಮಿರಿ ಮಿಂಚುವ ಮಿಂಚುಳ್ಳಿ

"ಏನ್ರೋ ಅದು?" ಮೇಸ್ಟ್ರು ಕೇಳಿದರು. "ಹಕ್ಕಿ ಸಾರ್", ಗುಂಪುಗೂಡಿದ್ದ ಹುಡುಗರು ಉತ್ತರಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿಯ ಪ್ರಾಥಮಿಕ ಶಾಲೆ. ಅಲ್ಲಿನ ಉಪಾಧ್ಯಾಯರುಗಳಾದ ನಾಗಭೂಷಣ್ ಮತ್ತು ವೆಂಕಟರೆಡ್ಡಿ ಮಕ್ಕಳ ಕೈಲಿ ಯಾವುದಪ್ಪ ಹೊಸ ಹಕ್ಕಿ ಎಂದು ಕುತೂಹಲಗೊಂಡು ಹೋಗಿ ನೋಡಿದರು. "ಅರೆ! ಮಿಂಚುಳ್ಳಿ. ಎಲ್ಲಿ ಸಿಕ್ತೋ ನಿಮ್ಗೆ?" ಎಂದು ಕೇಳಿದರು. "ದ್ರಾಕ್ಷಿ ತೋಟಕ್ಕೆ ಬಲೆ ಕಟ್ಟಿರ್ತಾರಲ್ಲ ಸಾರ್. ಅದಕ್ಕೆ ಸಿಕ್ಕಾಕ್ಕೊಂಡಿತ್ತು" ಅಂದರು ಮಕ್ಕಳು. ಗಾಬರಿಗೊಂಡೋ ಅಥವಾ ಸುಸ್ತಾಗಿಯೋ ಕದಲದೇ ಕುಸಿದು ಕುಳಿತಿದ್ದ ಆ ಹಕ್ಕಿಯ ಬಾಯಿಗೆ ಮೇಸ್ಟ್ರುಗಳು ನೀರು ಹಾಕಿ ಅಲ್ಲೇ ಇದ್ದ ಗಿಡದ ರೆಂಬೆಯ ಮೇಲೆ ಬಿಟ್ಟಿದ್ದಾರೆ. ಮಕ್ಕಳು ಮನೆಗೆ ತೆಗೆದುಕೊಂಡು ಹೋಗೆ ಸಾಕುತ್ತೇವೆಂದು ಕೇಳಿದ್ದಾರೆ. ಕೋಳಿಯಂತೆ ಇದನ್ನು ಸಾಕಲು ಸಾಧ್ಯವಿಲ್ಲ. ಸ್ವಚ್ಛಂದವಾಗಿ ಹಾರಾಡುತ್ತಾ ಮೀನು, ಕಪ್ಪೆ, ಹುಳುಗಳನ್ನು ತಿಂದು ಬದುಕುವ ಈ ಮಿಂಚುಳ್ಳಿಯ ಜೀವನಕ್ರಮದ ಬಗ್ಗೆ ತಿಳಿಸಿದ್ದಾರೆ.
ಇಷ್ಟೆಲ್ಲಾ ಆದ ಮೇಲೆ ರಂಗಪ್ರವೇಶಿಸಿದ್ದು ನನ್ನ ಕ್ಯಾಮೆರಾ! ನಾಗಭೂಷಣ್ ಫೋನ್ ಮಾಡಿ ಮಿಂಚುಳ್ಳೀಯ ಫೋಟೋ ತೆಗೆಯಲು ಕರೆದರು. ನಾನಲ್ಲಿಗೆ ಹೋದಾಗ ಮೇಸ್ಟ್ರುಗಳಿಂದ ಮಕ್ಕಳಿಗೆ ಮಿಂಚುಳ್ಳಿಯ ಪಾಠ ನಡೆಯುತ್ತಿತ್ತು."ಅದು ಮೊಟ್ಟೆ ಎಲ್ಲಿಡ್ತದೆ?""ಮರಿಗೆ ಏನು ತಿನ್ನಿಸ್ತದೆ?""ಇದು ಗಂಡೋ, ಹೆಣ್ಣೋ?"ಯಕ್ಷಪ್ರಶ್ನೆಗಳು ಮಕ್ಕಳಿಂದ ತೂರಿ ಬರುತ್ತಿದ್ದರೆ, ಸಾವಧಾನದಿಂದ ಉಪಾಧ್ಯಾಯರು ಉತ್ತರಿಸುತ್ತಿದ್ದರು. ಮಿಂಚುಳ್ಳಿಗಳಲ್ಲಿ ಹಲವು ವಿಧಗಳಿವೆ. ಇಂಗ್ಲಿಷ್ ನಲ್ಲಿ ಇದಕ್ಕೆ WhiteBreastedKingfisher ಎನ್ನುತ್ತಾರೆ. ಗಂಡು ಹೆಣ್ಣು ಒಂದೇ ರೀತಿಯಿರುತ್ತವೆ. ನೀರಿರುವೆಡೆ ಮಣ್ಣಿನ ಎತ್ತರದ ಗೋಡೆಯಂತಹುದ್ದನ್ನು ಆಯ್ದುಕೊಂಡು ಅದರಲ್ಲಿ ಎತ್ತರದಲ್ಲಿ ತೂತು ಕೊರೆದು ಗೂಡು ಮಾಡಿ ಮೊಟ್ಟೆಯಿಟ್ಟು ಮರಿಮಾಡುತ್ತವೆ.
ಅಷ್ಟರಲ್ಲಿ ಹಕ್ಕಿ ಚೇತರಿಸಿಕೊಂಡಿತ್ತು. ನಾನು ಫೋಟೋ ತೆಗೆದ ಮೇಲೆ ಮಕ್ಕಳನ್ನು ಶಾಲೆಯ ಒಳಗೆ ಕಳಿಸಿ, ಹಕ್ಕಿಯನ್ನು ಯಾರ ಕೈಗೂ ಸಿಗದಂತೆ ಪೊದೆಗಳ ಹಿಂದೆ ಗಿಡವೊಂದರಲ್ಲಿ ಬಿಟ್ಟು ಬಂದರು.
ಇಂಥಹ ಪಾಠ ಎಷ್ಟು ಮಕ್ಕಳಿಗೆ ಸಿಗುತ್ತಿದೆ?

Sunday, October 12, 2008

ಬಾಲ್ಯದ ಆಟ, ಹುಡುಗಾಟ

ನೀರಿನ ಸಂಪರ್ಕದಲ್ಲಿ ಎಲ್ಲರೂ ಮಕ್ಕಳಾಗಿಬಿಡುತ್ತಾರೆ. ಅದರಲ್ಲೂ ನದಿ, ಹೊಳೆಗಳ ಸಂಸರ್ಗದಲ್ಲಿ ಬೆಳೆಯುವ ಮಕ್ಕಳಿಗಂತೂ ನೀರೊಂದು ಆಟದ ವಸ್ತು. ನೀರಲ್ಲಿ ಬೀಳುವುದು, ಮುಳುಗೇಳುವುದು, ಈಜು, ನೀರೆರಚಾಟ, ಒಂದೆ ಎರಡೆ... ಕೊನೆ ಮೊದಲಿಲ್ಲದ ಚೆಲ್ಲಾಟ. ಮಕ್ಕಳಿಗೆ ದಣಿವೆನ್ನುವುದರ ಅರ್ಥವೇ ಗೊತ್ತಿಲ್ಲ. ಮನಸ್ಸು ಮತ್ತು ದೇಹ ಎರಡೂ ಪ್ರಫುಲ್ಲ ಮತ್ತು ಆರೋಗ್ಯಪೂರ್ಣ.
ಶ್ರೀರಂಗಪಟ್ಟಣದ ಹತ್ತಿರವಿರುವ ಒಂದು ಹಳ್ಳಿ ಪಕ್ಕದಲ್ಲಿ ಕಾವೇರಿ ನದಿ ಹೆಚ್ಚು ರಭಸವಿಲ್ಲದೆ ಹರಿಯುತ್ತದೆ. ಹಕ್ಕಿಯ ಫೋಟೋ ತೆಗೆಯಲು ಹೋಗಿದ್ದ ನನಗೆ ಈ ರೆಕ್ಕೆಯಿಲ್ಲದ ಹಕ್ಕಿಗಳು(ಮಕ್ಕಳು) ನೀರಿಗೆಗರುತ್ತ ಆಡುತ್ತಿದ್ದುದು ಕಾಣಿಸಿತು. ಕ್ಲಿಕ್ಕಿಸಿದೆ.
ಸ್ವರ್ಗ ಅಲ್ಲೆಲ್ಲೋ ಇಲ್ಲ. ಇಲ್ಲೇ ಇದೆ. ಏನಂತೀರ?

Thursday, October 2, 2008

ಕಾಟಿಮರಾಯ ಹಕ್ಕಿ


ಶಿಡ್ಲಘಟ್ಟದ ಬಳಿಯ ಕದಿರಿನಾಯಕನಹಳ್ಳಿಯಲ್ಲಿ ಈ ಕಾಟಿಮರಾಯ ಹಕ್ಕಿ ಜೋಡಿಯೊಂದು ಮನೆಮಾಡಿತ್ತು. 'ಹಳ್ಳಿಯಲ್ಲಿ ಹಕ್ಕಿಯ ಮನೆಯೇ?' ಎಂದು ಅಚ್ಚರಿ ಪಡಬೇಡಿ. ಅಲ್ಲಿನ ತೋಟದ ಮನೆಯೊಂದರ ಮೇಲಿನ ಕಲ್ಲು ಚಪ್ಪಡಿ ಸಂದಿಯಲ್ಲಿ ಅದರ ಪುಟ್ಟ ಗೂಡು. ಅದೇ ಅದರ ಮನೆ. ಆ ತೋಟದ ಒಡೆಯ ನಾರಾಯಣಸ್ವಾಮಿಯಿಂದ ವಿಷಯ ತಿಳಿದು ನಾನು ಹೋಗಿ ಒಮ್ಮೆ ಹಕ್ಕಿಯ ಚಲನವಲನ ಗಮನಿಸಿದೆ. ಅದಾಗಲೇ ಮರಿಗಳಿಗೆ ಗುಟುಕನ್ನು ಒಯ್ಯುತ್ತಿತ್ತು. ಅದು ಕೂರುವ ಜಾಗವನ್ನು ನೋಡಿ, ಅದಕ್ಕೆ ಸ್ವಲ್ಪ ದೂರದಲ್ಲಿ ನನ್ನ ಮರೆಯನ್ನಿಟ್ಟೆ. ಮರೆಯೆಂದರೆ ಒಬ್ಬರು ಒಳಗೆ ಸೇರಿಕೊಂಡು ಫೋಟೋ ತೆಗೆಯಬಹುದಾದ ಗುಡಾರದಂತದ್ದು. ಅದು ಹಸಿರು ಬಣ್ಣದಲ್ಲಿದ್ದು ಹಕ್ಕಿ ಬೇಗ ಹೊಂದಿಕೊಳ್ಳುತ್ತೆ. ಎರಡು ದಿನ ಬಿಟ್ಟು ನಂತರ ಮರೆಯೊಳಗೆ ಕುಳಿತು ಫೋಟೋ ತೆಗೆದೆ.
ಈ ಹಕ್ಕಿಗೆ ಆಡು ಭಾಷೆಯಲ್ಲಿ ಕಾಟಿಮರಾಯ ಹಕ್ಕಿ ಅನ್ನುತ್ತಾರೆ. ಹಳ್ಳಿಯಲ್ಲಿ ಪೂಜಿಸುವ ಕಾಟಿಮರಾಯ ದೇವರಿಗೂ ಈ ಹಕ್ಕಿಗೂ ಏನು ಸಂಬಂಧವೋ ತಿಳಿಯದು. ಆದರೆ ರೈತನಿಗೆ ಪೀಡೆಯಾದಂತಹ ಕೀಟಗಳನ್ನೆಲ್ಲಾ ತಿಂದು ಅಳಿಲು ಸೇವೆ ಮಾಡುತ್ತದೆ. ಇದಕ್ಕೆ ನೆಲಕುಟುಕ ಮತ್ತು ಚಂದ್ರಮುಕುಟ ಎಂಬ ಹೆಸರೂ ಇದೆ. ನೋಡಲು ಮರಕುಟುಕದ ತರಹ ಇದ್ದರೂ ಎರಡರ ಸ್ವಭಾವ ಬೇರೆಬೇರೆ. ಇಂಗ್ಲೀಷ್ ನಲ್ಲಿ Hoopoe ಅನ್ನುತ್ತಾರೆ. ಇದರ ತಲೆಮೇಲೆ ಬೀಸಣಿಗೆಯಂತಿರುವ ಜುಟ್ಟಿದೆ. ಮೈಮೇಲೆ ಜೀಬ್ರಾದಂತೆ ಕಪ್ಪು ಬಿಳಿ ಪಟ್ಟೆಗಳು. ಎದೆ ಮತ್ತು ಕತ್ತು ಕೇಸರಿ ಬಣ್ಣವಿದೆ.