Tuesday, April 23, 2013

ಗೂಡು ನೋಡ ಬಾರೆ ರಾಜಕುಮಾರಿ...

 ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರಿನ ಕೆರೆಯಂಚಿನಲ್ಲಿ ಗೀಜಗನ ಗೂಡನ್ನು ತನ್ನ ಗೂಡನ್ನಾಗಿಸಿಕೊಳ್ಳಲು ಹೊರಟ ಮುನಿಯಾ ಹಕ್ಕಿ.

 ಕೆರೆಯಲ್ಲಿ ಬಿದ್ದ ಕಲ್ಲು ಬಹುದೂರದವರೆಗೂ ಅಲೆಗಳನ್ನೆಬ್ಬಿಸುವಂತೆ, ಮಾನವನ ಆವಾಸಸ್ಥಾನ ಹಿಗ್ಗಿದಂತೆಲ್ಲ ಪರಿಸರದಲ್ಲಿ ಹಲವಾರು ಪಲ್ಲಟಗಳು, ಬದಲಾವಣೆಗಳು ಸಂಭವಿಸುತ್ತಿರುತ್ತವೆ. ಕೆಲವೆಡೆ ಜೀವ ವೈವಿಧ್ಯ ಮತ್ತು ಸಸ್ಯಗಳ ವಿನಾಶ ಸಂಭವಿಸಿದರೆ, ಡಾರ್ವಿನ್‌ನ ವಿಕಾಸ ವಾದದಂತೆ ಬದುಕಲು ನಾನಾ ಹೋರಾಟಗಳು ಮತ್ತು ತಮ್ಮ ಸಂತತಿಯ ಮುಂದುವರಿಕೆಗಾಗಿ ಹೊಸ ತಂತ್ರಗಳನ್ನು ಜೀವಿಗಳು ರೂಪಿಸುತ್ತಿರುತ್ತವೆ.
 ತನ್ನ ಸಂತತಿಯನ್ನು ಮುಂದುವರೆಸಲು ಗುಬ್ಬಿಗಿಂತಲೂ ಪುಟ್ಟದಾದ ಮುನಿಯಾ ಹಕ್ಕಿಗಳು ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರಿನಲ್ಲಿ ಒಂದೆಡೆ ಗೀಜುಗ ಹಕ್ಕಿಗಳ ಗೂಡನ್ನೇ ಆಕ್ರಮಿಸಿಕೊಂಡಿದ್ದರೆ, ಇನ್ನೊಂದೆಡೆ ಟ್ರಾನ್ಸ್‌ಫಾರ್ಮರನ್ನೇ ತನ್ನ ಮನೆಯನ್ನಾಗಿಸಿಕೊಂಡಿದೆ.
 ಮೊಟ್ಟೆಯಿಡುವ ಮುಂಚೆ ಗೂಡನ್ನು ಸಿದ್ಧಪಡಿಸಲು ಒಣಹುಲ್ಲನ್ನು ತೆಗೆದುಕೋಂಡು ಹೋಗುತ್ತಿರುವ ಮುನಿಯಾ ಹಕ್ಕಿ.

 ಸಾಮಾನ್ಯವಾಗಿ ಗೀಜುಗ ಹಕ್ಕಿಗಳ ವೈಶಿಷ್ಟ್ಯವೇನೆಂದರೆ, ಗಂಡು ಹಕ್ಕಿ ಗೂಡನ್ನು ಅರ್ಧ ನೇಯ್ದು ಹೆಣ್ಣಿಗೆ ತೋರಿಸುತ್ತದೆ. ಅದು ಹೆಣ್ಣಿಗೆ ಇಷ್ಟವಾದರೆ ಅವೆರಡೂ ಜೋಡಿಯಾಗುತ್ತವೆ, ಗೂಡನ್ನು ಪೂರ್ತಿ ಮಾಡಿ ಸಂಸಾರ ಸಾಗಿಸುತ್ತವೆ. ಅಕಸ್ಮಾತ್ ಇಷ್ಟವಾಗಲಿಲ್ಲವೋ ಗಂಡು ಮತ್ತೊಂದು ಗೂಡು ನೇಯಲು ಶುರುಮಾಡುತ್ತದೆ. ನಮಗೆ ಹತ್ತು ಬೆರಳುಗಳಿದ್ದರೂ ನೇಯಲು ಅಸಾಧ್ಯವಾದಂತಹ ಗೂಡನ್ನು ಪುಟ್ಟ ಇಕ್ಕಳದಂತಹ ಕೊಕ್ಕಿನಿಂದಲೇ ಈ ಪುಟ್ಟ ಹಕ್ಕಿ ನೇಯುವುದನ್ನು ನೋಡಿದರೆ ಇದರ ಸಾಮರ್ಥ್ಯಕ್ಕೆ ತಲೆದೂಗಲೇಬೇಕು. ಅದಕ್ಕೇ ಇದನ್ನು ನೇಕಾರ ಹಕ್ಕಿ ಎಂದೂ ಕರೆಯುತ್ತಾರೆ.

 ಕುಶಲೋಪರಿಯಲ್ಲಿ ತೊಡಗಿರುವ ಮುನಿಯಾ ಜೋಡಿ ಹಕ್ಕಿಗಳು.

 ತಾಲ್ಲೂಕಿನ ಕೊತ್ತನೂರಿನಲ್ಲಿ ಕೆರೆಯಂಚಿನಲ್ಲಿ ಜಾಲಿ ಮರದಲ್ಲಿ ಸುಂದರವಾಗಿ ನೇಯ್ದ ಗೀಜಗನ ಗೂಡನ್ನು ವೈಟ್ ಥ್ರೋಟೆಡ್ ಮುನಿಯಾ, ಇಂಡಿಯನ್ ಸಿಲ್ವರ್ ಬಿಲ್, ಬಿಳಿ ಕತ್ತಿನ ರಾಟವಾಳ ಎಂದೆಲ್ಲಾ ಕರೆಯುವ ಗುಬ್ಬಿಗಿಂತಲೂ ಚಿಕ್ಕ ಆಕಾರದ ಹಕ್ಕಿಗಳು ತಮ್ಮ ಸಂತತಿಯ ಮುಂದುವರಿಕೆಗಾಗಿ ಮನೆಯನ್ನಾಗಿಸಿಕೊಂಡಿವೆ. ಇನ್ನೊಂದೆಡೆ ವಿದ್ಯುತ್ ಟ್ರಾನ್ಸ್‌ಫಾರ್ಮರಿನೊಳಗೆ ಸ್ಪಾಟೆಡ್ ಮುನಿಯಾ ಅಥವಾ ಚುಕ್ಕೆ ರಾಟವಾಳ ಹಕ್ಕಿಯು ತನ್ನ ಸಂಸಾರವನ್ನು ನಡೆಸಿದೆ.

ವಿದ್ಯುತ್ ಟ್ರಾನ್ಸ್‌ಫಾರ್ಮರನ್ನೇ ತನ್ನ ಮನೆಯನ್ನಾಗಿಸಿಕೊಂಡಿರುವ ಚುಕ್ಕೆ ರಾಟವಾಳ ಹಕ್ಕಿ.

 ’ಹಾವು, ಹದ್ದು, ಬೆಕ್ಕು ಮುಂತಾದವುಗಳಿಂದ ತನ್ನ ಮೊಟ್ಟೆ ಮತ್ತು ಮರಿಗಳನ್ನು ನಾಶಪಡಿಸಬಹುದೆಂದು ಅವುಗಳಿಗೆ ಸಿಗದಂತೆ ಕೆರೆಯಂಚಿನ ಜಾಲಿ ರೆಂಬೆಯ ತುದಿಯಲ್ಲಿ ಗೀಜುಗ ಹಕ್ಕಿಗಳು ತಮ್ಮ ಗೂಡು ನೇಯುತ್ತವೆ. ಅವು ಉಪಯೋಗಿಸಿ ಬಿಟ್ಟ ಗೂಡನ್ನು ಮುನಿಯಾ ತನ್ನ ಮನೆಯನ್ನಾಗಿಸಿಕೊಂಡಿದೆ. ಇನ್ನೊಂದೆಡೆ ವಿದ್ಯುತ್ ಪ್ರವಹಿಸುವ ತಂತಿಗಳ ಕೆಳಗೆ ತನಗೆ ತೊಂದರೆಯಾಗುವುದಿಲ್ಲವೆಂದು ಮನಗಂಡು ಇನ್ನೊಂದು ಮುನಿಯಾ ಹಕ್ಕಿ ತನ್ನ ತಾವನ್ನು ರಚಿಸಿಕೊಂಡಿದೆ. ಇತ್ತ ಮನುಷ್ಯರಿಂದ ಅತ್ತ ತನ್ನನ್ನು ತಿಂದು ಬದುಕುವ ಪ್ರಾಣಿಗಳಿಂದ ರಕ್ಷಿಸಿಕೊಳ್ಳುತ್ತಾ ತನ್ನ ಸಂತತಿಯನ್ನೂ ಮುಂದುವರಿಸುವಲ್ಲಿ ಸಾಹಸ ಮೆರೆಯುವ ಈ ಪುಟ್ಟ ಹಕ್ಕಿಗಳಿಂದ ನಾವು ಬಹಳಷ್ಟು ಪಾಠ ಕಲಿಯಬೇಕಿದೆ’ ಎನ್ನುತ್ತಾರೆ ಕೊತ್ತನೂರು ನಾಗರಾಜ್.

Sunday, April 21, 2013

ಸರ್ಕಸ್ ಜನರ ಬದುಕೇ ಸರ್ಕಸ್

 ಟೆಂಟ್ ಒಳಗೇ ನಾಯಿಗಳು, ಹಾಸಿಗೆ, ಟೀವಿ ಮತ್ತು ಇಡೀ ಸಂಸಾರ.

 ‘ಇದೇ ನಮ್ಮ ಶಾಲೆ. ನಮ್ಮ ಬದುಕು. ನಮ್ಮ ಅನ್ನ ಎಲ್ಲ ಇಲ್ಲಿಯೇ. ನಾನು ಹುಟ್ಟಿದ್ದು ಹೀಗೇ ಇರುವ ಒಂದು ಟೆಂಟ್‌ನಲ್ಲಿ. ಇನ್ನು ಜೀವನವೆಲ್ಲ ಇಲ್ಲಿಯೇ ಕಳೆಯುತ್ತೇನೆ’ ಎಂದು ಸರ್ಕಸ್‌ನ ಹರಿದ ಟೆಂಟ್‌ನ ಅಡಿಯಲ್ಲಿ ಕುಳಿತು ಹೇಳುತ್ತಾರೆ ಪಶ್ಚಿಮ ಬಂಗಾಲದ ಮಹಮ್ಮದ್ ಫಾರೂಕ್.
 ಶಿಡ್ಲಘಟ್ಟಕ್ಕೆ ಆಗಮಿಸಿದ್ದ ಕಮಲ್ ಸರ್ಕಸ್‌ನಲ್ಲಿ ಇಡೀ ಭಾರತವೇ ಒಂದೆಡೆ ಕಲೆತಂತೆ ವಿವಿಧ ರಾಜ್ಯಗಳ ಕಲಾವಿದರು ಇದ್ದರು. ಕೊಲ್ಕತ್ತ, ಮಧ್ಯಪ್ರದೇಶ, ಬಿಹಾರ, ಗುಜರಾತ್, ಪಶ್ಚಿಮ ಬಂಗಾಲ, ಆಂಧ್ರಪ್ರದೇಶ, ಅಸ್ಸಾಂ, ಉತ್ತರಪ್ರದೇಶದ ಕಲಾಕಾರರು ಕಲೆತಿದ್ದಾರೆ.
 ಮೈಯನ್ನು ರಬ್ಬರಿನಂತೆ ಬಗ್ಗಿಸುವ ಸುಮನ್ ತಾಮಂಗ್ ಮತ್ತು ಸುರಬಿ ಸಾಮಂತ್ ಸೋದರಿಯರು ಅಸ್ಸಾಮಿನವರಾದರೆ, ಮೇಲೆ ಹಗ್ಗದಿಂದ ಜೀಕುವ ಮಹಮ್ಮದ್ ಫಾರೂಕ್ ಪಶ್ಚಿಮ ಬಂಗಾಳದವರು. ಬೈಕನ್ನು ಹಾರಿಸುವ ರಮ್‌ಜಾನ್ ಗುಜರಾತಿನವರಾದರೆ, ಗುಂಡನೆಯ ಬಿದಿರಿನ ಬಾಕ್ಸ್ ಒಳಗೆ ಬೈಕ್ ಸುತ್ತಿಸುವ ಆಶಿಕ್ ಪಶ್ಚಿಮ ಗೋದಾವರಿಯ ತಾಡೆಪಲ್ಲಿಗುಡಂನವರು. ಇಷ್ಟೆಲ್ಲಾ ವಿವಿಧ ರಾಜ್ಯಗಳ ಕಲಾವಿದರನ್ನು ಸೂತ್ರದಾರನಂತೆ ನೋಡಿಕೊಳ್ಳುವ ಸರ್ಕಸ್ ಯಜಮಾನ ಕೋಲಾರ ಜಿಲ್ಲೆಯ ಮುಳಬಾಗಲಿನ ರಮಣಪ್ಪ.


ಕಷ್ಟದ ಜೀವನ ನಡೆಸುವ ಸರ್ಕಸ್ ಕಲಾವಿದರ ಊಟ ಮಾಡುವ ಸ್ಥಳ ಹೀಗಿದೆ.

  ಅಲೆಮಾರಿಗಳಂತೆ ಒಂದೊಂದು ತಿಂಗಳು ಒಂದೊಂದು ಊರಿನಲ್ಲಿ ತಂಗುವ ಇವರು ಉಳಿದುಕೊಳ್ಳುವುದು ಸರ್ಕಸ್‌ನ ಮುಖ್ಯ ಡೇರಾ ಹಿಂಬದಿಯ ಟೆಂಟ್‌ಗಳಲ್ಲಿ. ಒಂದೊಂದು ಕುಟುಂಬಕ್ಕೆ ಒಂದೊಂದು ಟೆಂಟ್‌ಗಳು. ಇದರಲ್ಲೇ ಇವರು ತಮ್ಮ ಅಡುಗೆ, ದೇವರು, ಮಲಗಲು ವ್ಯವಸ್ಥೆ, ನೀರಿನ ಶೇಖರಣೆ, ಟೀವಿ ಮುಂತಾದವುಗಳನ್ನು ಹೊಂದಿಸಿಕೊಂಡಿರುತ್ತಾರೆ. ಸರ್ಕಸ್‌ನಲ್ಲಿ ರಂಜಿಸುವ ನಾಯಿಗಳು, ಕುದುರೆ, ಒಂಟೆ ಮತ್ತು ಆಡು ಕೂಡ ಇವರೊಂದಿಗೇ ಸಹಬಾಳ್ವೆ ನಡೆಸುತ್ತವೆ.

 ಬೈಕನ್ನು ಹಾರಿಸುವ ಗುಜರಾತ್‌ನ ರಮ್‌ಜಾನ್‌ರ ಪುಟ್ಟ ಸಂಸಾರ ಡೇರೆಯ ಒಳಗೆ.


ಬೈಕನ್ನು ಹಾರಿಸುವ ಕಲಾವಿದನನ್ನು ಜನರು ಬೆಕ್ಕಸಬೆರಗಾಗಿ ನೋಡುತ್ತಿರುವುದು.  

 ಸರ್ಕಸ್ ಟೆಂಟ್‌ನ ಒಳಗೆ ಕಳೆದ ತಿಂಗಳಷ್ಟೇ ಜನಿಸಿದ ಪಶ್ಚಿಮ ಬಂಗಾಲದ ಮಹಮ್ಮದ್ ಫಾರೂಕ್‌ನ ಗಂಡು ಮಗು, ಮದುವೆಯಾಗಿ ಮೂರು ತಿಂಗಳುಗಳಾಗಿರುವ ಕುಬ್ಜ ಇಂದ್ರಜಿತ್‌ಕುಮಾರ್, ತಂದೆ ಕಳೆದುಕೊಂಡು ಸರ್ಕಸ್‌ನ ಆಸರೆಯಲ್ಲಿರುವ ಅಸ್ಸಾಮಿನ ಸೋದರಿಯರು, ಮನುಷ್ಯರಿಗಿಂತ ಪ್ರಾಣಿಗಳೇ ಮೇಲು ಎನ್ನುವ ಒಂಟೆ ತರಬೇತುದಾರ ಕೊಲ್ಕತ್ತಾದ ರವಿ, ಎಲ್ಲರೂ ತಮ್ಮ ಕಷ್ಟಕರ ಜೀವನದಲ್ಲೂ ಮಾನವೀಯ ಸಂಬಂಧಗಳ ಬಗ್ಗೆ ಹೊಸ ಅರ್ಥ ಕಲ್ಪಿಸುತ್ತಾರೆ.
 ‘ನಮಗೆ ಇಲ್ಲಿ ಊಟ, ಕಾಫಿ, ತಿಂಡಿ, ಆಸ್ಪತ್ರೆ ಖರ್ಚು ಎಲ್ಲವನ್ನೂ ಮಾಲೀಕರೇ ನೋಡಿಕೊಳ್ಳುತ್ತಾರೆ. ನಮ್ಮ ಕುಟುಂಬವನ್ನು ಸಲಹಿಕೊಂಡು ನಮ್ಮ ಊರುಗಳಲ್ಲಿರುವ ತಂದೆ ತಾಯಿಯರಿಗೆ ಹಣವನ್ನು ಕಳಿಸುತ್ತೇವೆ. ನನ್ನ ಹೆಂಡತಿ ಕಳೆದ ತಿಂಗಳಷ್ಟೇ ಗಂಡು ಮಗುವಿಗೆ ಜನ್ಮವಿತ್ತಿದ್ದಾಳೆ. ನನ್ನ ಇಬ್ಬರು ಹೆಣ್ಣುಮಕ್ಕಳೂ ಸರ್ಕಸ್‌ನಲ್ಲಿ ಚಮತ್ಕಾರ ಪ್ರದರ್ಶಿಸುತ್ತಾರೆ. ನಾವು ಅಲೆಮಾರಿಗಳಾಗಿರುವುದರಿಂದ  ಉಳಿದವರಂತೆ ಮಕ್ಕಳನ್ನು ಶಾಲೆಗೆ ಕಳಿಸಲು ಆಗದು. ಮನೆ ಕಟ್ಟಲು ಆಗದು. ಸರ್ಕಸ್ ಬಿಟ್ಟರೆ ನಮಗೆ ಬೇರೇನೂ ತಿಳಿಯದು’ ಎನ್ನುತ್ತಾರೆ ಫಾರೂಕ್.

 ಟೆಂಟ್ ಒಳಗೇ ದೇವರು, ನೀರಿನ ಶೇಖರಣೆ, ಬಟ್ಟೆ, ಕ್ಯಾಲೆಂಡರ್ ಮುಂತಾದ ವಸ್ತುಗಳು. 

 ‘ಸುಮಾರು ೫೦ ಜನರ ಒಟ್ಟು ಕುಟುಂಬ ನಮ್ಮದು. ಹಲವಾರು ರಾಜ್ಯಗಳಿಂದ ಇವರೆಲ್ಲ ಬಂದಿದ್ದರೂ ಒಂದೇ ಕುಟುಂಬದ ಸದಸ್ಯರಂತೆ ನಾವಿದ್ದೇವೆ. ಮೊದಲಾದರೆ ಹಲವಾರು ಪ್ರಾಣಿಗಳಿದ್ದವು. ಈಗ ಅವುಗಳನ್ನು ಸಾಕಲು ಕಷ್ಟವಾಗುತ್ತದೆ. ಅಷ್ಟೂ ಜನರ ಊಟ, ವಸತಿ, ಆರೋಗ್ಯ, ಸೌಕರ್ಯ ಮುಂತಾದವುಗಳನ್ನು ನೋಡಿಕೊಳ್ಳುವುದು ಬಹಳ ಕಷ್ಟ. ಜನರು ನೀಡುವ ಹಣದಿಂದಲೇ ನಮ್ಮ ಜೀವನ ಸಾಗಬೇಕು. ನಿಜ ಅರ್ಥದಲ್ಲಿ ನಮ್ಮ ಜೀವನವೂ ಒಂದು ಸರ್ಕಸ್ಸೇ. ನಮಗಿದನ್ನು ಬಿಟ್ಟು ಬೇರೇನೂ ತಿಳಿಯದು’ ಎಂದು ಕಮಲ್ ಸರ್ಕಸ್ ಮಾಲೀಕ ರಮಣಪ್ಪ  ತಿಳಿಸಿದರು.ಶಿಡ್ಲಘಟ್ಟಕ್ಕೆ ಆಗಮಿಸಿದ್ದ ಕಮಲ್ ಸರ್ಕಸ್‌ನ ಹಾಸ್ಯ ಕಲಾವಿದರ ಹಾಸ್ಯಪ್ರಸಂಗಗಳು.

Tuesday, April 2, 2013

ಅಡ್ರೋಟು ಹೆಣಿಗೆ


ಶಿಡ್ಲಘಟ್ಟ ತಾಲ್ಲೂಕಿನ ಎಚ್.ಕ್ರಾಸ್‌ನಲ್ಲಿ ಬಿದಿರ ಚಂದ್ರಂಕಿ ತಯಾರಿಕೆಯಲ್ಲಿ ತೊಡಗಿರುವ ಕುಟುಂಬ.


ಶಿಡ್ಲಘಟ್ಟ ತಾಲ್ಲೂಕಿನ ಎಚ್.ಕ್ರಾಸ್ ಎಂದೇ ಪ್ರಸಿದ್ಧವಾದ ಹಿಂಡಿಗನಾಳ ಕ್ರಾಸ್ ಅಥವಾ ಅಡ್ರೋಟು, ರೇಷ್ಮೆ ಬೆಳೆಗಾಗರಿಗೆ ಅತ್ಯಗತ್ಯವಾದ ಚಂದ್ರಂಕಿಗಳ ತಯಾರಿಕೆಗೆ ಹೆಸರುವಾಸಿ.
 ಬೆಳಗಾಂನಿಂದ ಬಿದಿರ ಗಳಗಳು, ಆಂಧ್ರದ ನಂದ್ಯಾಲದಿಂದ ಚಂದ್ರಂಕಿಗಳ ಮೇಲೆ ಹೆಣೆಯುವ ಬಿದಿರ ಹೂಗಳು ಮತ್ತು ಚಂದಂಕಿಗಳ ಹಿಂದೆ ಹರಡುವ ಬಿದಿರ ಚಾಪೆಯನ್ನು ಅಸ್ಸಾಮಿನಿಂದ ತರಿಸಿ ಇಲ್ಲಿನ ಕುಶಲಕರ್ಮಿಗಳು ಚಂದ್ರಂಕಿಗಳನ್ನು ತಯಾರಿಸುತ್ತಾರೆ. ವಿಶಾಲ ಸ್ಥಳಗಳನ್ನು ಬಾಡಿಗೆಗೆ ಪಡೆದುಕೊಂಡು ಬಿದಿರ ಗಳಗಳನ್ನು ನೀರಿನಲ್ಲಿ ನೆನೆಸುತ್ತಾ, ಒಣಗಿಸುತ್ತಾ ಶೆಡ್‌ಗಳನ್ನು ನಿರ್ಮಿಸಿ, ಕಚ್ಛಾ ಪದಾರ್ಥಗಳನ್ನು ಶೇಖರಿಸಿಟ್ಟುಕೊಂಡು, ಕುಶಲಕರ್ಮಿಗಳಿಗೆ ಅನುಕೂಲ ಕಲ್ಪಿಸಿ, ಚಂದ್ರಂಕಿಗಳನ್ನು ತಯಾರಿಸುತ್ತಾರೆ.
 ಹಿಂದೆ ಈ ರೇಷ್ಮೆ ವ್ಯಾಪಾರ ಚೆನ್ನಾಗಿದ್ದ ಸಮಯದಲ್ಲಿ ಎಚ್.ಕ್ರಾಸ್‌ನಲ್ಲಿ ಚಂದ್ರಂಕಿ ತಯಾರಿಸುವ ೩೫ ಮಂಡಿಗಳಿದ್ದವು. ಆದರೆ ರೇಷ್ಮೆ ಬೆಲೆ ಕುಸಿತ, ನೀರಿನ ಅಭಾವ, ರೇಷ್ಮೆ ಹುಳು ಸಾಕಾಣಿಕೆಯಲ್ಲಿ ಹೊಸ ತಾಂತ್ರಿಕತೆಗಳ ಅಳವಡಿಸುವಿಕೆ, ನೂತನ ಚಂದ್ರಂಕಿಗಳ ಸಂಶೋಧನೆ, ಹೆಚ್ಚು ಸ್ಥಳ ಆಕ್ರಮಿಸುವ ಮಂಡಿಗಳ ಸ್ಥಳಾಂತರ ಮುಂತಾದ ಕಾರಣಗಳಿಂದ ಈಗ ೧೫ ಮಂಡಿಗಳು ಮಾತ್ರ ಉಳಿದಿವೆ.
 
ಶಿಡ್ಲಘಟ್ಟ ತಾಲ್ಲೂಕಿನ ಎಚ್.ಕ್ರಾಸ್‌ನ ಚಂದ್ರಂಕಿಗಳ ತಯಾರಿಕಾ ಘಟಕದಲ್ಲಿ ಬಿದಿರ ಗಳುಗಳನ್ನು ನೆನೆಹಾಕಿರುವುದು ಮತ್ತು ತಯಾರಾದ ಚಂದ್ರಂಕಿಗಳನ್ನು ಜೋಡಿಸಿರುವುದು.

’ಮೊದಲಾದರೆ ಬಿದಿರ ತಟ್ಟೆ, ಮೊರ, ಮಂಕರಿ, ಬುಟ್ಟಿ ಮುಂತಾದ ಹಲವು ರೀತಿಯ ಬಿದಿರ ಉತ್ಪನ್ನಗಳನ್ನು ತಯಾರಿಸುತ್ತಿದ್ದೆವು. ಪ್ಲಾಸ್ಟಿಕ್ ವಸ್ತುಗಳ ಆಗಮನದಿಂದ ಹಲವಾರು ಬಿದಿರಿನ ಉತ್ಪನ್ನಗಳು ಕಣ್ಮರೆಯಾದವು. ಕೆಲಸಗಾರರ ಅಭಾವ, ಹೆಚ್ಚುತ್ತಿರುವ ಅವರ ಸಂಬಳ, ಮಾರುಕಟ್ಟೆಯ ಮಿತಿ, ರೇಷ್ಮೆ ಬೆಳೆಯ ಏರಿಳಿತ, ಇಲ್ಲಿನ ಸ್ಥಳಗಳ ಬೆಲೆ ಏರಿಕೆಯಿಂದ ಮಾಲೀಕರು ನಾವು ಕೊಡುವ ಬಾಡಿಗೆ ಸಾಲದೆಂದು ಖಾಲಿ ಮಾಡಿಸುತ್ತಿರುವುದರಿಂದ ಮುಂದೆ ಈ ಉದ್ಯಮವನ್ನು ನಡೆಸುವುದು ಕಷ್ಟಕರವಾಗಿದೆ’ ಎನ್ನುತ್ತಾರೆ ಚಂದ್ರಂಕಿ ಮಂಡಿಯೊಂದರ ಮಾಲೀಕ ಮಂಜುನಾಥ್.
 ’ನಮ್ಮ ತಾಲ್ಲೂಕಿನಲ್ಲಿ ಕೇವಲ ಎಚ್.ಕ್ರಾಸ್‌ನಲ್ಲಿ ಮಾತ್ರ ಈ ಉದ್ದಿಮೆ ಉಳಿದಿದೆ. ಒಂದೊಂದು ಚಂದ್ರಂಕಿಗಳನ್ನು ೪೮೦ ರೂಗಳಿಂದ ೫೦೦ ರೂಗಳವರೆಗೆ ಮಾರಾಟ ಮಾಡುತ್ತೇವೆ. ಈಗ ಈ ಉದ್ದಿಮೆಯಲ್ಲಿ ಖರ್ಚು ಜಾಸ್ತಿ ಲಾಭ ಕಡಿಮೆಯಾಗಿದೆ. ಅಸ್ಸಾಂನಿಂದ ಬಿದಿರ ಚಾಪೆ ಬರುವುದು ಕೂಡ ಕಡಿಮೆಯಾಗಿದೆ. ಅವರು ಚಾಪೆಗಳನ್ನು ಪ್ಲೈವುಡ್ ತಯಾರಿಕಾ ಘಟಕಕ್ಕೆ ಕಳುಹಿಸಲು ಪ್ರಾರಂಭಿಸಿದ್ದಾರೆ. ಸರ್ಕಾರ ಈ ಉದ್ದಿಮೆ ಉಳಿಯಲು ಕ್ರಮ ಕೈಗೊಂಡರೆ ಉತ್ತಮ’ ಎಂದು ಅವರು ತಮ್ಮ ಸಂಕಷ್ಟಗಳನ್ನು ತೆರೆದಿಟ್ಟರು.
’ನಮಗೆ ಒಂದು ಚಂದ್ರಂಕಿ ತಯಾರಿಸಲು ೧೫೦ ರಿಂದ ೨೦೦ ರೂಗಳನ್ನು ನೀಡುತ್ತಾರೆ. ಸಾಮನ್ಯವಾಗಿ ಒಂದೊಂದು ಕುಟುಂಬದವರು ಒಟ್ಟಾಗಿ ಸೇರಿ ಚಂದ್ರಂಕಿ ತಯಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತೇವೆ. ಆರು ಜನರು ಸೇರಿಕೊಂಡು ೩೦ ರಿಂದ ೩೫ ಚಂದ್ರಂಕಿಗಳನ್ನು ಎರಡು ಮೂರು ದಿನಗಳಲ್ಲಿ ತಯಾರಿಸುತ್ತೇವೆ’ ಎನ್ನುತ್ತಾರೆ ಚಂದ್ರಂಕಿ ತಯಾರಿಕೆಯಲ್ಲಿ ತೊಡಗಿರುವ ಕುಶಲಕರ್ಮಿ ಮುನಿರತ್ನಪ್ಪ.

Monday, April 1, 2013

ನಾಗರಾಜನಲ್ಲಿ ಎಷ್ಟೊಂದು ಅಮೃತ


 ಪರಿಸರ ಸಂರಕ್ಷಣೆಗಾಗಿ ಕೆಲವರು ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದ್ದರೆ, ಕೆಲವರು ಗಿಡಮರಗಳನ್ನು ನೆಟ್ಟು ಪರಿಸರಕ್ಕೆ ತಮ್ಮ ಕಾಣಿಕೆ ಸಲ್ಲಿಸುತ್ತಿರುತ್ತಾರೆ. ಸಾಂಘಿಕ ಪ್ರಯತ್ನ ಕೆಲವರದ್ದಾದರೆ, ಏಕಾಂಗಿ ಹೋರಾಟ ಕೆಲವರದ್ದು. ಆದರೆ ಗ್ರಾಮೀಣ ಭಾಗದಲ್ಲಿದ್ದುಕೊಂಡು ತಮ್ಮ ಚಟುವಟಿಕೆಯಿಂದ ತಮಗೇ ಅರಿವಿಲ್ಲದೆ ಪರಿಸರ ಸಂರಕ್ಷಣೆಯಲ್ಲಿ ಭಾಗಿಯಾಗಿರುವವರೂ ಕೆಲವರಿದ್ದಾರೆ. ಅವರ ಸಾಲಿನಲ್ಲಿ ಸೇರುವವರು ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರಿನ ಸ್ನೇಕ್ ನಾಗರಾಜ್.

 
ಭರಧ್ವಾಜ ಹಕ್ಕಿಯನ್ನು ರಕ್ಷಿಸಿರುವ ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರಿನ ಸ್ನೇಕ್ ನಾಗರಾಜ್. 

 ಯಾವುದೇ ರೀತಿಯ ಹಾವಾದರೂ ಸಲೀಸಾಗಿ ಹಿಡಿದು ರಕ್ಷಿಸಿ ಸುರಕ್ಷಿತ ಸ್ಥಾನಕ್ಕೆ ಬಿಡುವ ಇವರು ಹಾವನ್ನಷ್ಟೇ ಅಲ್ಲದೆ ಹಲವಾರು ಹಕ್ಕಿಗಳು ಹಾಗೂ ವಿವಿಧ ಜೀವಜಂತುಗಳನ್ನೂ ರಕ್ಷಿಸಿದ್ದಾರೆ. ದ್ರಾಕ್ಷಿ ತೋಟಗಳಲ್ಲಿ ಹಕ್ಕಿಗಳಿಂದ ಬೆಳೆಯನ್ನು ರಕ್ಷಿಸಲು ತೆಳ್ಳನೆಯ ಬೇಲಿಯನ್ನು ಕಟ್ಟಿರುತ್ತಾರೆ. ಆ ಬೇಲಿಗೆ ಸಿಕ್ಕಿ ನರಳುವ ಬಾವಲಿ, ಮಿಂಚುಳ್ಳಿ,  ಗೂಬೆ, ಅಳಿಲು, ಕಾಗೆ, ಭರಧ್ವಾಜ, ಗಿಳಿ, ಕೋಗಿಲೆ, ಕೆಂಬೂತ ಮುಂತಾದ ಹಲವಾರು ಹಕ್ಕಿಗಳನ್ನು ರಕ್ಷಿಸಿದ್ದಾರೆ.

ನಾಗರಹಾವನ್ನು ರಕ್ಷಿಸುತ್ತಿರುವುದು.

  ’ಹಾಲಿನ ಡೈರಿಯಲ್ಲಿ ಕೆಲಸ ಮಾಡುವುದರಿಂದ ಬೆಳಿಗ್ಗೆ ಬೇಗ ಎದ್ದು ಹೊರಡುತ್ತೇನೆ. ದ್ರಾಕ್ಷಿ ತೋಟಗಳ ಬೇಲಿಗುಂಟ ನಡೆದು ಹೋಗುವಾಗ ಯಾವುದಾದರೂ ಹಕ್ಕಿ ಅಥವಾ ಬಾವಲಿ ತೋಟದ ಬಲೆಗೆ ಸಿಕ್ಕಿದ್ದು ಕಂಡು ಬಂದಲ್ಲಿ ಬಿಡಿಸಿ ನೀರು ಕುಡಿಸಿ ಸುರಕ್ಷಿತ ಸ್ಥಳದಲ್ಲಿ ಬಿಡುತ್ತೇನೆ. ನನ್ನ ಚಟುವಟಿಕೆಗಳನ್ನು ಕಂಡಿರುವ ನಮ್ಮ ಗ್ರಾಮದವರು ಏನಾದರೂ ಜಂತುಗಳನ್ನು ಕಂಡರೆ ನನಗೆ ತಿಳಿಸುತ್ತಾರೆ. ಕೆಲವು ಬಾರಿ ಅವುಗಳ ಜೀವ ಉಳಿಸಲು ಅಸಾಧ್ಯವಾದಾಗ ತುಂಬ ಬೇಸರವಾಗುತ್ತದೆ.
  ನಮ್ಮಲ್ಲಿ ಹಾವನ್ನು ವಿಷಜಂತು ಎಂದು ಪರಿಗಣಿಸಿರುದರಿಂದ ಎಲ್ಲಾದರೂ ಹಾವು ಕಂಡಲ್ಲಿ ದೂರವಾಣಿ ಮೂಲಕ ತಿಳಿಸುತ್ತಾರೆ. ನಾನು ಹಿಡಿದು ರಕ್ಷಿಸುತ್ತೇನೆ. ಸುರಕ್ಷಿತ ಸ್ಥಳಕ್ಕೆ ಬಿಟ್ಟುಬರುತ್ತೇನೆ. ಹಾಗೆಯೇ ಯಾವುದೇ ಹಕ್ಕಿ, ಚೇಳು ಮುಂತಾದ ಯಾವುದೇ ಜೀವಿಗೆ ತೊಂದರೆಯಾಗಿರುವುದು ಕಂಡರೂ ರಕ್ಷಿಸಲು ಪ್ರಯತ್ನಿಸುತ್ತೇನೆ. ಅವೂ ನಮ್ಮಂತೆಯೇ. ಆದರೆ ಮಾತು ಬರದಷ್ಟೇ. ಎಲ್ಲಾ ಪ್ರಾಣಿಗಳಿಗೂ ಬದುಕಲು ನಮ್ಮಷ್ಟೇ ಹಕ್ಕಿದೆ. ಸುತ್ತ ಮುತ್ತ ಯಾವುದೇ ಜೀವಿಗೆ ತೊಂದರೆಯಾದರೂ ಸಾಧ್ಯವಾದಷ್ಟೂ ಸಹಾಯ ಮಾಡುವುದು ನನ್ನ ಹವ್ಯಾಸವಾಗಿಬಿಟ್ಟಿದೆ’ ಎನ್ನುತ್ತಾರೆ ಕೊತ್ತನೂರಿನ ಸ್ನೇಕ್ ನಾಗರಾಜ್. 

ವಿಷಪೂರಿತ ಮಂಡಲಹಾವನ್ನು ಹಿಡಿದಿರುವುದು.
ಕೊತ್ತನೂರಿನ ಸ್ನೇಕ್ ನಾಗರಾಜ್ ಫೋನ್ ನಂ. ೯೩೪೨೫೧೫೪೪೩