Monday, December 29, 2008

ಮಲಗಿದ್ದಾನೆ ಕುಂಭಕರ್ಣ!

ನಿದ್ರೆಗೆ ಪರ್ಯಾಯ ಪದವೇ ಕುಂಭಕರ್ಣ. ಜೊತೆಯಲ್ಲಿ ತಿನ್ನುವುದಕ್ಕೂ. ಚೆನ್ನಾಗಿ ತಿಂದು ಮಲಗುವವನಿಗೆ ಕುಂಭಕರ್ಣ ಎಂದೇ ಕರೆಯುವುದು. ಆದರೆ ರಾವಣನ ತಮ್ಮ ಕುಂಭಕರ್ಣ ಮಹಾಪರಾಕ್ರಮಿ. ಅವನಿಗೆ ಬ್ರಹ್ಮನ ಶಾಪವಿತ್ತು. ಒಂದು ಬಾರಿ ಮಲಗಿದರೆ, ಆರು ತಿಂಗಳು ನಿದ್ದೆಯಲ್ಲಿ ತೊಡಗಿರುತ್ತಿದ್ದ. ಮತ್ತೆ ಎದ್ದರೆ ಒಂದು ದಿನ ಮಾತ್ರ ಎಚ್ಚರ. ಪುನಃ ಆರು ತಿಂಗಳು ನಿದ್ದೆ. ಕುಂಭಕರ್ಣ ತನ್ನ ಶಕ್ತಿಗೆ ತಕ್ಕಂತೆ ಬಹು ದೊಡ್ಡ ಹೊಟ್ಟೆಯನ್ನು ಹೊಂದಿದ್ದ. ಒಂದು ಲಕ್ಷ ಜನಕ್ಕೆ ಆಗುವ ಆಹಾರವನ್ನು ಅವನೊಬ್ಬನೆ ಮುಗಿಸುತ್ತಿದ್ದ.
ರಾಮರಾವಣರ ಯುದ್ಧದ ಸಮಯದಲ್ಲಿ ಕುಂಭಕರ್ಣನ ಅವಶ್ಯಕತೆ ಬಂದು, ಅವನನ್ನು ನಿದ್ರೆಯಿಂದ ಎಬ್ಬಿಸಲು ರಾವಣ ತನ್ನ ಮಂತ್ರಿಗಳಿಗೆ ಹೇಳಿದ. ಅವರೆಲ್ಲ ಕುಂಭಕರ್ಣನನ್ನು ಎಬ್ಬಿಸಲು ಮಾಡಿದ ಪ್ರಯತ್ನವೇ ರೋಚಕ ಕಥೆ. ಅನ್ನ ಮತ್ತು ಮಾಂಸದ ರಾಶಿ ಹಾಕಿ, ಚಂಡೆ ಮದ್ದಳೆಗಳನ್ನು ಬಾರಿಸಿ, ಹಗ್ಗ ಹಾಕಿ ಎಳೆದು, ಮೂಗಿಗೆ ಕಟ್ಟಿಗೆ ಹಾಕಿ ತಿರುಚಿ, ಕೂದಲು ಕಿತ್ತರೂ ಅವನು ಜಪ್ಪೆನ್ನಲಿಲ್ಲ. ಆನೆಗಳ ಕೈಲಿ ಎಳೆಸಿ , ತುಳಿಸಿ ಅವನನ್ನು ಎಬ್ಬಿಸುವಷ್ಟರಲ್ಲಿ ಅವರಿಗೆ ಅರ್ಧ ಜೀವವಾಗಿತ್ತು. ಎದ್ದವನ ಮುಂದಿದ್ದ ರಾಶಿ ರಾಶಿ ಆಹಾರವನ್ನು ಸ್ವಲ್ಪ ಹೊತ್ತಿನಲ್ಲೇ ಖಾಲಿ ಮಾಡಿಬಿಟ್ಟ. ಲಂಕೆಗೆ ಸಂಕಷ್ಟ ಬಂದಿದೆ ಎಂದು ಅಸುರರು ಕೈಮುಗಿದಾಗ ತನ್ನ ಅಣ್ಣನ ಬಳಿ ಹೋದನು. ನಡೆದ ವಿಷಯವನ್ನು ತಿಳಿದ ಕುಂಭಕರ್ಣ, "ಅಣ್ಣಾ, ಕೆಟ್ಟ ಕೆಲಸ ಮಾಡುವಾಗ ಇತರರ ಅಭಿಪ್ರಾಯ ಪಡೆಯದೆ, ಕಷ್ಟ ಬಂದಾಗ ಮಾತ್ರ ಬೇರೆಯವರಿಂದ ಸಹಾಯ ಪಡೆಯುವ ನಿನ್ನ ನೀತಿ ಸರಿಯಲ್ಲ" ಎಂದು ರಾವಣನನ್ನು ಖಂಡಿಸಿದ. ಆದರೂ ಲಂಕೆಯ ಮಾನ ಕಾಪಾಡುತ್ತೇನೆಂದು ಹೇಳಿ ರಣರಂಗಕ್ಕೆ ಹೋದನು.ವಾನರ ಹಿಂಡು ಅವನಿಗೆ ಲೆಕ್ಕಕ್ಕೇ ಇಲ್ಲ. ಹಿಡಿದಿಡಿದು ಬಾಯಿಯೊಳಗೆ ತುಂಬಿಕೊಳ್ಳತೊಡಗಿದ. ಅಂಥ ಹನುಮಂತನೇ ಅವನಿಂದ ಪೆಟ್ಟು ತಿಂದುಬಿಟ್ಟ. ಸಾಕ್ಷಾತ್ ಯಮನಂತೆ ರಣರಂಗದಲ್ಲಿ ಅಬ್ಬರಿಸಿದ ಕುಂಭಕರ್ಣ. ಕಡೆಗೆ ಶ್ರೀರಾಮನು ವಾಯುವ್ಯಾಸ್ತ್ರಗಳಿಂದ ಅವನ ತೋಳುಗಳನ್ನು, ಅರ್ಧಚಂದ್ರಾಸ್ತ್ರಗಳಿಂದ ಅವನ ಕಾಲುಗಳನ್ನೂ ಕತ್ತರಿಸಿಹಾಕಿದನು. ನಂತರ ಇಂದ್ರಾಸ್ತ್ರದಿಂದ ಅವನ ತಲೆ ತತ್ತರಿಸಿ ಕೊಂದನು.
ಕರ್ಣಾಟಕದ ಬಾಗೇಪಲ್ಲಿ, ಪೆನುಗೊಂಡ ಮಾರ್ಗವಾಗಿ ಅನಂತಪುರಕ್ಕೆ ಹೋಗುವ ದಾರಿಯಲ್ಲಿ, ಪೆನುಗೊಂಡದಿಂದ ೫ ಕಿ.ಮೀ. ಮುಂದೆ ಎಡಕ್ಕೆ ಕುಂಭಕರ್ಣ ಎಂಬ ಕ್ಷೇತ್ರವಿದೆ. ಅಲ್ಲಿ ಮೇಲಿನ ಚಿತ್ರದಲ್ಲಿರುವ ನಿದ್ರಾಭಂಗಿಯಲ್ಲಿರುವ ಕುಂಭಕರ್ಣನ ವಿಗ್ರಹವಿದೆ. ಎಷ್ಟು ದೊಡ್ಡದಾಗಿದೆಯೆಂದರೆ ಕುಂಭಕರ್ಣನ ಹೊಟ್ಟೆಯೊಳಗೆಲ್ಲಾ ನಾವು ಓಡಾಡಬಹುದು. ಅವನನ್ನು ಎಬ್ಬಿಸುವ ಪ್ರಯತ್ನದಲ್ಲಿರುವ ಅಸುರರು ಅವನ ಮೂಗಿನೊಳಗೆ ಕೋಲು ತೂರಿಸುವುದು, ನಗಾರಿ ಬಾರಿಸುವುದು, ಮಾಂಸದ ಅಡುಗೆಯಿಟ್ಟು ಆಕರ್ಷಿಸುವುದು, ತಿವಿಯುವುದು.... ಇವೆಲ್ಲಾ ನೋಡಲು ಸೊಗಸಾಗಿದೆ.
ಕುಂಭಕರ್ಣನ ಆಭರಣಗಳು, ಚಿಂತಾಕ್ರಾಂತನಾಗಿ ಕುಳಿತ ರಾವಣ, ಕುಂಭಕರ್ಣನನ್ನು ಎಬ್ಬಿಸಲು ಪ್ರಯತ್ನಿಸಿ ಧಣಿದ ರಾಕ್ಷಸರು ಅವನಿಗೆ ಕೊಡಲು ತಂದಿದ್ದ ಮಾಂಸವನ್ನು ಉಣ್ಣುತ್ತಿರುವುದು ಮನಸೆಳೆಯುತ್ತದೆ.
ಇನ್ನೇಕೆ ತಡ, ನೀವೂ ಕುಂಭಕರ್ಣ ನಿದ್ದೆಯಿಂದ ಮೇಲೆದ್ದು ನೋಡಲು ನಡೆಯಿರಿ ಕುಂಭಕರ್ಣನನ್ನು!

Saturday, December 20, 2008

ಚಿತ್ರ ಸರ(ಪ)ಣಿ!

ನಮ್ಮ ಫೋಟೋಗ್ರಫಿ ಇಂದು ಹೊಳೆ ದಂಡೆಯಲ್ಲಿ ಅಂದ ತಕ್ಷಣ ಮಕ್ಕಳೆಲ್ಲ ಚುರುಕಾಗಿಬಿಟ್ಟರು. ನೀರೆಂದರೆ ಯಾರಿಗೆ ಇಷ್ಟವಿಲ್ಲ, ಹೇಳಿ? ವಿಕಾಸ, ಸುಹಾಸ, ಸ್ವಾತಿ, ಅಶ್ವಿನಿ, ಭರತ... ಮಕ್ಕಳ ಮರಿಸೈನ್ಯದೊಂದಿಗೆ ಹೊರಟಾಗ ಮದ್ಯಾಹ್ನ ೩ ಗಂಟೆಯ ಚುರುಮುರಿ ಬಿಸಿಲು. ಹೊಳೆದಂಡೆ ಹತ್ತಿರವಾದಂತೆ ಹಣೆಯಲ್ಲಿ ಮುತ್ತಿನಂತೆ ಬೆವರು ಮೊಳೆತಿತ್ತು. ಆದರೆ ಮಕ್ಕಳಿಗೆ ಅದೆಲ್ಲಿ ಅಡಗಿರುತ್ತೋ ಆ ಚೈತನ್ಯ ಮತ್ತು ಉತ್ಸಾಹ. ನೀರು ಕಂಡೊಡನೆ 'ಓ...' ಎಂದು ಕೂಗುತ್ತಾ ಓಡತೊಡಗಿದರು. ಅರೆರೆ! ಅವರು ಓಡುವುದನ್ನೇ ಫೋಟೋ ತೆಗೆದರೆ ಹೇಗೆ ಎಂಬ ಐಡಿಯಾ ಹೊಳೆಯಿತು.
ಅಶ್ವಿನಿ, ಸುಹಾಸ, ಭರತ - ಮೂವರೂ 'ರೆಡಿ ಒನ್, ಟು, ತ್ರೀ...' ಅನ್ನುತ್ತಿದ್ದಂತೆ ರಭಸದಿಂದ ನುಗ್ಗಿಬಂದರು. ನಾನು ಕ್ಯಾಮೆರಾ ಕಂಟಿನ್ಯುಯಸ್ ಸ್ಪೀಡ್ ಗೆ ಹಾಕಿ ಬಟನ್ ಒತ್ತಿ ಹಿಡಿದೆ. ಅಂದುಕೊಳ್ಳುವುದೇ ಒಂದು ಆಗುವುದೇ ಒಂದು ಎನ್ನುವಂತೆ ಒಂದು ಆಕಸ್ಮಿಕ ಘಟಿಸಿತು. ಓಡುವಾಗ ಹೆಜ್ಜೆ ಜಾರಿ ಭರತ ಬಿದ್ದುಬಿಟ್ಟ. ಚಕಚಕನೆ ಕ್ಲಿಕ್ಕಿಸಿದ್ದರಿಂದ ಎಲ್ಲ ದಾಖಲಾಗಿಬಿಟ್ಟಿತು. ಪುನಃ ಮೂರ್ನಾಕು ಬಾರಿ ಅವರನ್ನು ಓಡಿಸಿದರೂ ಆ ಕ್ಷಣದಷ್ಟು ರೋಚಕವಾಗಿ ಮೂಡಿಬರಲಿಲ್ಲ.
ಇದು ಚಿತ್ರ ಸರಣಿಯೂ ಹೌದು, ಸರಪಣಿಯೂ ಹೌದು. ಪ್ರತಿಚಿತ್ರಗಳೂ ಪ್ರತ್ಯೇಕತೆಯನ್ನು ಉಳಿಸಿಕೊಂಡು ಒಂದಕ್ಕೊಂದು ಬಂಧವಿರಿಸಿಕೊಂಡಿವೆ.Monday, December 15, 2008

ಹೈದರಾಬಾದ್ ಹೈಲೈಟ್ಸ್

ಪ್ರತಿ ನಗರವೂ ತನ್ನದೇ ಆದ ಸೊಗಸು, ಸೊಗಡು, ಸ್ವಾದ, ಸೆಳೆತ, ಭಾಷೆ, ಇತಿಹಾಸ, ಶೈಲಿ ಮತ್ತು ಮಾದಕತೆ ಹೊಂದಿರುತ್ತದೆ. ಇದಕ್ಕೆ ೪೦೦ ವರ್ಷ ವಯಸ್ಸಾದ ಹೈದರಾಬಾದ್ ಕೂಡ ಹೊರತಾಗಿಲ್ಲ.
ಚಾರ್ ಮಿನಾರ್, ಗೋಲ್ಕೊಂಡ ಕೋಟೆ, ಸಾಲಾರ್ಜಂಗ್ ವಸ್ತುಸಂಗ್ರಹಾಲಯ, ಬಿರ್ಲಾ ಮಂದಿರ, ಹುಸೇನ್ ಸಾಗರ್ ಇತ್ಯಾದಿ ನೋಡುವುದರೊಂದಿಗೆ ಇತರೇ ವೈವಿದ್ಯಗಳನ್ನು ಸವಿದಾಗಲೇ ಪ್ರವಾಸ ಚಂದವಾಗುವುದು.
ಸಮುದ್ರದಿಂದ ದೂರವಿದ್ದರೂ ಹೈದರಾಬಾದ್ ಭಾರತದ ಮುತ್ತಿನ ನಗರವೆಂದೇ ಪ್ರಸಿದ್ಢ. ಮುತ್ತುಗಳ ಪ್ರಿಯರಾದ ನಿಜಾಮರು ಇರಾಕ್, ಅರೇಬಿಯಾ, ಪರ್ಶಿಯಾಗಳಿಂದ ಮುತ್ತುಗಳನ್ನು ತರಿಸುತ್ತಿದ್ದರು. ನಿಜಾಮರ ಸ್ನೇಹದಿಂದ ಸೇಠ್ ಕೇದಾರ್ ನಾಥ್ ಜಿ ಮೋತಿವಾಲ ೧೯೦೬ರಲ್ಲಿ ಮೊಟ್ಟಮೊದಲ ಮುತ್ತಿನ ಅಂಗಡಿಯನ್ನು ಹೈದರಾಬಾದ್ ನಲ್ಲಿ ತೆಗೆದರು. ಮುತ್ತಿನ ಗಮ್ಮತ್ತೇ ಅಂತಹುದು. ಎಂಥವರನ್ನೂ ಆಕರ್ಷಿಸುತ್ತದೆ.
ಲಾಡ್ ಬಝಾರ್‍ - ಹೈದರಾಬಾದಿನ ಬಳೆಗಳ ಮಾರುಕಟ್ಟೆ. ೪೫೦ಕ್ಕೂ ಹೆಚ್ಚು ಬಳೆಗಳ ಅಂಗಡಿಗಳಿವೆ. ಬಣ್ಣಬಣ್ಣದ ಗಾಜಿನ ಚೂರುಗಳನ್ನು ಮಿಳಿತಗೊಳಿಸಿ ತಯಾರಿಸಿರುವ ಹೈದರಾಬಾದಿ ಬಳೆಗಳು ಲಲನೆಯರ ಕೈಗಳನ್ನು ಶೋಭಿಸುವ ಆಭರಣ.
ಆಟೋ ಟ್ಯಾಕ್ಸಿಗಳಲ್ಲಿ ಓಡಾಡುವುದು ಪಕ್ಕಕ್ಕೆ ಸರಿಸಿ ಇಲ್ಲಿನ ಮೂರು ಚಕ್ರದ ಸೈಕಲ್ ರಿಕ್ಷಾದಲ್ಲಿ ಕೂತು ಓಡಾಡಿ ನೋಡಿ. ಶ್ರಮದ ಮೋಡಿ ನಮ್ಮನ್ನು ಹೈದರಾಬಾದಿಗರನ್ನಾಗಿಸುತ್ತದೆ.
ಆಹಾರ ಪ್ರಿಯರಿಗಾಗಿ ಹೈದರಾಬಾದಿ ಬಿರ್ಯಾನಿ, ಪುಲ್ಲಾರೆಡ್ಡಿಯ ಸಿಹಿತಿಂಡಿಗಳು, ಕರಾಚಿ ಬೇಕರಿಯ ಹಣ್ಣಿನ ಬಿಸ್ಕತ್ ಗಳು ಬಾಯಲ್ಲಿ ನೀರುರಿಸುತ್ತವೆ. ಹೊಟ್ಟೆ ತುಂಬಿದ ಮೇಲೆ ಹೈದರಾಬಾದಿ ಪಾನ್ ಮೆಲ್ಲಿ ಅಥವಾ ಹೈದರಾಬಾದಿ ಇರಾನಿ ಛಾಯ್ ಸೇವಿಸಿ. ಆಗ ಪ್ರವಾಸ ಪರಿಪೂರ್ಣ ಒಳಗೂ ಹೊರಗೂ!

Thursday, December 11, 2008

ಗೋಮಟೇಶ

ಭಗವದಾಟೋಪವದು
ಮೆಯ್ಯಾಂತು ನಿಂತಂತೆ,
ಪ್ರೇಮ, ದಯೆ, ಸತ್ಯ, ಸೌಂದರ್ಯ
ಭವ್ಯಸಾಕಾರಗೊಂಡಂತೆ,
ಗಗನದೌದಾರ್ಯಮಂ
ಕಡಲ ಗಾಂಭೀರ್ಯಮಂ

ಹಿಡಿದು ಕಡೆದಿಟ್ಟಂತೆ,
ಶೋಭಿಸುವ ಬೆಳ್ಗೊಳದ ಗೋಮಟೇಶ,
ನೀನೆನಗೊಂದು ಮಹಾಕಾವ್ಯಂ,
ದಿವ್ಯಹರಕೆಯೊಲಿರುವ ನಿರ್ವಾಣಯೋಗೀಶ
ನೀ ನಿತ್ಯ ಭೂವ್ಯೋಮಪೂಜ್ಯಂ
-ಜಿ.ಎಸ್.ಎಸ್.

ಹಿಮಾಲಯದಂತಹ ದೊಡ್ಡ ವ್ಯಕ್ತಿತ್ವದ ಮುಂದೆ ನಾವು ಕುಬ್ಜರಾಗಿ ಸಮರ್ಪಿಸಿಕೊಳ್ಳುವುದು ಆತ್ಮಸಾಕ್ಷಾತ್ಕಾರದ ಮೊದಲ ಹೆಜ್ಜೆ.
ಹಾಸನಜಿಲ್ಲೆಯ ಶ್ರವಣಬೆಳಗೊಳದಲ್ಲಿನ ವಿಂದ್ಯಗಿರಿಯ ಮೇಲೆ ಹಸನ್ಮುಖಿಯಾಗಿ ನಿಂತಿರುವ ಗೋಮಟೇಶ್ವರ ವಿಗ್ರಹದ ಮುಂದೆ ನಿಂತಾಗ ನಾವು ಕುಬ್ಜರಾಗುತ್ತೇವೆ. ಅಹಂಕಾರ ಅಡಗುತ್ತದೆ. ವಿಶಾಲವಾದ ಜಗತ್ತಿನಲ್ಲಿ ನಾವೆಷ್ಟು ಚಿಕ್ಕವರೆಂಬ ಭಾವ ಬಂದು ಮನಸ್ಸು ವಿಶಾಲವಾಗುತ್ತದೆ.
ಗಂಗರ ದೊರೆ ರಾಜಮಲ್ಲನ ಮಂತ್ರಿಯಾಗಿದ್ದ ಚಾವುಂಡರಾಯ ಕ್ರಿ.ಶ. ೯೮೩ ರಲ್ಲಿ ನಿರ್ಮಿಸಿದ ಈ ೫೭ ಅಡಿಗಳ ವಿಗ್ರಹವು ನಮ್ಮ ರಾಷ್ಟ್ರದ ಹೆಮ್ಮೆಯ ಪ್ರತೀಕವಾಗಿದೆ.

Friday, December 5, 2008

ಸಾಟಿಯಿಲ್ಲದ ಕೋಣಕ್ಕೆ ಚಾಟಿ ಏಟು!

ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಸ್ಥರ ವಿನೋದಗಳಲ್ಲಿ ಕೋಣಗಳ ಓಟದ ಸ್ಪರ್ಧೆ ಅಥವಾ ಕಂಬಳ ಪ್ರಮುಖವಾದದ್ದು. ಉತ್ತಮ ತಳಿಯ ಕೋಣಗಳನ್ನು ಕಂಬಳಕ್ಕೆಂದೇ ಸಾಕುತ್ತಾರೆ. ಚೆನ್ನಾಗಿ ಉತ್ತು ನೀರು ನಿಲ್ಲಿಸಿದ ಗದ್ದೆಯಲ್ಲಿ ಕಂಬಳ ನಡೆಯುತ್ತದೆ. ಕಂಬಳಕ್ಕಾಗಿ ಏರ್ಪಡಿಸಿದ ಗದ್ದೆಯಲ್ಲಿ ಕೋಣಗಳು ಓಡಿ ಗುರಿಮುಟ್ಟುವ ಸ್ಥಳಕ್ಕೆ "ಮಂಜೊಟ್ಟಿ" ಎಂದು ಹೆಸರು. ಆದ್ದರಿಂದಲೇ ಕಂಬಳದ ಕೋಣಗಳನ್ನು ಮಂಜೊಟ್ಟಿ ಕೋಣಗಳೆಂದು ಕರೆಯುವರು. ಕೋಣಗಳ ಹಿಂಭಾಗದಲ್ಲಿ ತಳದಲ್ಲಿ ಒಂದು ಹಲಗೆಯನ್ನು ಕಟ್ಟುತ್ತಾರೆ. ಇದನ್ನು 'ಗೋರುಹಲಗೆ' ಎನ್ನುತ್ತಾರೆ. ಕೋಣಗಳನ್ನು ಓಡಿಸುವಾತ ಇದರ ಮೇಲೆ ನಿಲ್ಲುತ್ತಾನೆ. ಆತ ಎಡಗೈಯಿಂದ ಬಿಗಿಯಾಗಿ ಕೋಣದ ಬಾಲವನ್ನು ಹಿಡಿದುಕೊಂಡು ಬಲಗೈಯ ಚಾವಟಿಯಿಂದ ಅದರ ಬೆನ್ನಿನ ಮೇಲೆ ಹೊಡೆದು ಅವುಗಳು ವೇಗವಾಗಿ ಓಡುವಂತೆ ಪ್ರಚೋದಿಸುತ್ತಾನೆ. ಕೋಣಗಳು ಓಡುವ ರಭಸಕ್ಕೆ ಗೋರುಹಲಗೆಯಿಂದ ನೀರು ಮೇಲಕ್ಕೆ ಚಿಮ್ಮಿ ನಿಶಾನೆಯನ್ನು ಮುಟ್ಟುತ್ತದೆ. ನಿಶಾನೆ ಎಷ್ಟು ಎತ್ತರಕ್ಕೆ ಒದ್ದೆಯಾಯಿತು ಎಂಬ ಆಧಾರದಿಂದ ಜಯವನ್ನು ನಿರ್ಧರಿಸುತ್ತಾರೆ. ವೇಗವಾಗಿ ಓಡಿದ ಕೋಣಗಳು ಯಾವುವು ಎಂಬುದರಿಂದಲೂ ಗೆಲುವನ್ನು ನಿರ್ಧರಿಸುತ್ತಾರೆ. ಹಲಗೆ ಮಾತ್ರವಲ್ಲದೆ ಹಗ್ಗ, ನೇಗಿಲುಗಳನ್ನು ಹಿಡಿದೂ ಕೋಣಗಳ ಓಟದ ಸ್ಪರ್ಧೆ ನಡೆಸುತ್ತಾರೆ. ಅಂದ ಹಾಗೆ ಮೇಲಿರುವ ಚಿತ್ರವನ್ನು ತೆಗೆದದ್ದು ಉಡುಪಿ ಬಳಿಯ ಕಟ್ಪಾಡಿ ಕಂಬಳದಲ್ಲಿ.

Tuesday, November 25, 2008

ಬ್ಲಾಗ್ ಶೃಂಗ ಸಭೆ - ನಂದಿಗಿರಿಧಾಮದಲ್ಲಿ!

ಬ್ಲಾಗ್ ಮಂಡಲದ ಸದಸ್ಯರಾಗಿರುವ ನಾವು ಮೂವರು ಸ್ನೇಹಿತರು - ಶಿವು, ಪ್ರಕಾಶ್ ಹೆಗಡೆ ಮತ್ತು ನಾನು (ಬ್ಲಾಗ್ ಗೆಳೆಯರು ಲಿಂಕ್ ಗಮನಿಸಿ), ಬ್ಲಾಗ್ ನೆಪ ಮಾಡಿಕೊಂಡು ನಂದಿಬೆಟ್ಟದಲ್ಲಿ ಮಂಜು ಮತ್ತು ಚಳಿಯ ನಡುವೆ ಸಂಭ್ರಮಾಚರಿಸಲು ಕುಟುಂಬ ಸಮೇತ ಹೊರಟೆವು.
ನಂದಿಬೆಟ್ಟದಲ್ಲಿಯೇ ಏಕೆಂದರೆ - ಅದು ಅನೇಕ ಮಹಾವ್ಯಕ್ತಿಗಳನ್ನು ತನ್ನೆಡೆಗೆ ಆಕರ್ಷಿಸಿದೆ. ಇನ್ನು ನಾವು ಹೋಗದಿರುವುದು ತರವೇ?!
ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಬೆಂಗಳೂರಿನಲ್ಲಿ ಸಾರ್ಕ್ ಶೃಂಗ ಸಭೆ ನಡೆದಿತ್ತು. ಆಗ ಸಾರ್ಕ್ ರಾಷ್ಟ್ರಗಳ ಪ್ರಮುಖರೆಲ್ಲರೂ ನಂದಿಬೆಟ್ಟಕ್ಕೆ ಬಂದು ಇಲ್ಲಿನ ಆಹ್ಲಾದಕರ ವಾತಾವರಣಕ್ಕೆ ಮನಸೋತಿದ್ದರು. ಆಗ ರಾಜೀವ್ ಗಾಂಧಿ ಜಿಪ್ಸಿಯನ್ನು ತಾನೇ ಡ್ರೈವ್ ಮಾಡುತ್ತಾ, ಬೆಟ್ಟದ ಹೇರ್ ಪಿನ್ ಕರ್ವ್ ಗಳಲ್ಲಿ ವಾಹನ ನಡೆಸುವ ಮಜ ಅನುಭವಿಸಿದ್ದರು.
ನನ್ನ ತಾಯಿಯ ತವರು ದೇವನಹಳ್ಳಿ ತಾಲ್ಲೂಕಿನ ಆವತಿ. ಅವರು ಶಾಲೆ ಓದುವಾಗ ಅವರನ್ನೆಲ್ಲಾ ನಂದಿಬೆಟ್ಟದ ರಸ್ತೆ ಪಕ್ಕ ನಿಲ್ಲಿಸಿ, ಎಲಿಜಬೆತ್ ರಾಣಿಯನ್ನು ತೋರಿಸಿದ್ದರಂತೆ ಅವರ ಗುರುಗಳು. ಆಗ ಎಲಿಜಬೆತ್ ರಾಣಿ ತನ್ನ ಪತಿಯೊಂದಿಗೆ ನಂದಿಬೆಟ್ಟಕ್ಕೆ ಭೇಟಿ ನೀಡಿದ್ದರು.
ನಂದಿಬೆಟ್ಟದ ಬುಡದಲ್ಲಿರುವ ಮುದ್ದೇನಹಳ್ಳಿಯವರಾದ ಸರ್.ಎಂ.ವಿಶ್ವೇಶ್ವರಯ್ಯನವರು ನಡೆದೇ ಬೆಟ್ಟಕ್ಕೆ ಹೋಗುತ್ತಿದ್ದರಂತೆ.
ಮಹಾತ್ಮಾಗಾಂಧಿ ಎರಡು ಬಾರಿ ಇಲ್ಲಿ ತಂಗಿದ್ದರು. ತಮ್ಮ ಆರೋಗ್ಯ ಸುಧಾರಣೆಗಾಗಿ ಎರಡು ತಿಂಗಳ ಕಾಲ ಇಲ್ಲಿದ್ದರು.
ಇನ್ನು ನೆಹರು, ವಿಜಯಲಕ್ಷ್ಮಿಪಂಡಿತ್, ಇಂದಿರಾಗಾಂಧಿ, ರಾಧಾಕೃಷ್ಣನ್, ವಲ್ಲಭಬಾಯಿಪಟೇಲ್, ಸರ್.ಸಿ.ವಿ.ರಾಮನ್, ರಾಜಗೋಪಾಲಾಚಾರಿ.... ಹೆಸರಿಸುತ್ತಾ ಹೋದರೆ ಗಣ್ಯರ ಪಟ್ಟಿ ನಂದಿಬೆಟ್ಟದೆತ್ತರ(೪೮೫೧ಅಡಿ) ಬೆಳೆಯತೊಡಗುತ್ತದೆ.
ಬೆಟ್ಟ ಹತ್ತುವಾಗ ಸುತ್ತ ಕಾಣುವ ಬೆಟ್ಟಗಳನ್ನು ತೋರಿಸುತ್ತಾ ಶಿವುಗೆ, "ನೋಡಿ ಶಿವು, ಇವು ಪಂಚಗಿರಿಗಳು. ನಾವು ಹತ್ತುತ್ತಿರುವುದು ನಂದಿಗಿರಿ. ಉಳಿದದ್ದು ಸ್ಕಂದಗಿರಿ, ಬ್ರಹ್ಮಗಿರಿ, ಚೆನ್ನಗಿರಿ ಮತ್ತು ದಿವ್ಯಗಿರಿ" ಎಂದು ತೋರಿಸಿದೆ. ತಕ್ಷಣ ಶಿವು, "ಬೆಟ್ಟದಿಂದ ಬೆಟ್ಟಕ್ಕೆ ರೋಪ್ ವೇ ನಿರ್ಮಿಸಿದರೆ ಹೇಗೆ? ಎರಡು ಮೂರು ಬೆಟ್ಟಗಳಿಗೆ ರೋಪ್ ವೇ ಮುಖಾಂತರ ಸಂಪರ್ಕ ಏರ್ಪಡಿಸಿದರೆ ಎಷ್ಟು ಚೆನ್ನಾಗಿರುತ್ತದೆ ಮತ್ತು ಪ್ರವಾಸೋದ್ಯಮ ಕೂಡ ಅಭಿವೃದ್ಧಿ ಹೊಂದುತ್ತದೆ ಅಲ್ವಾ?" ಅಂದರು. ಅದಕ್ಕೆ ಪ್ರಕಾಶ್ ಹೆಗಡೆಯವರು, "ಶಂಕರ್ ನಾಗ್ ಗೆ ಈ ಕನಸಿತ್ತು ಕಣ್ರೀ. ಆತ ಬದುಕಿದ್ದಿದ್ದರೆ ಇಷ್ಟೊತ್ತಿಗೆ ಮಾಡಿಯೇ ಇರುತ್ತಿದ್ದ. ಮಾಲ್ಗುಡಿಡೇಸ್ ಗಾಗಿ ನಂದಿಬೆಟ್ಟದಲ್ಲಿ ಷೂಟಿಂಗ್ ಮಾಡಿದ್ದ" ಎಂದರು.
ಟಿಪ್ಪುಸುಲ್ತಾನ್ ಇಲ್ಲಿ ಬೇಸಿಗೆ ಅರಮನೆ ಕಟ್ಟಿಕೊಂಡಿದ್ದ ಹಾಗೂ ದುರ್ಗಮವಾದ ಕೋಟೆ ಕಟ್ಟಿದ್ದ. ಅವನ ನಂತರ ಬಂದ ಬ್ರಿಟಿಷ್ ಅಧಿಕಾರಿಗಳು ಇಲ್ಲಿ ವಾಸಕ್ಕಾಗಿ ಬಂಗಲೆಗಳನ್ನು ನಿರ್ಮಿಸಿಕೊಂಡಿದ್ದರು. ಅವನ್ನೇ ಈಗ ವಸತಿಗೃಹಗಳನ್ನಾಗಿ ಮಾರ್ಪಡಿಸಿದ್ದಾರೆ. ನಾವುಗಳು ಉಳಿದುಕೊಂಡಿದ್ದದ್ದು ನೆಹರುಭವನದಲ್ಲಿ. ಇದರ ಮುಂಚಿನ ಹೆಸರು ಕಬ್ಬನ್ ಹೌಸ್. ೧೮೩೪ರಲ್ಲಿ ಮೈಸೂರು ರಾಜ್ಯದ ಕಮೀಷನರ್ ಆದ ಮಾರ್ಕ್ ಕಬ್ಬನ್ ೨೭ ವರ್ಷಗಳ ಕಾಲ ಒಂದೇ ಒಂದು ದಿನ ರಜೆ ತೆಗೆದುಕೊಳ್ಳದೆ ಉತ್ತಮ ಆಡಳಿತ ನೀಡಿದ. ಈ ಮಾರ್ಕ್ ಕಬ್ಬನ್ ನ ವೈಶಿಷ್ಟ್ಯವೇನೆಂದರೆ, ಈತ ಆಡಳಿತವೆಲ್ಲವೂ ಕನ್ನಡದಲ್ಲಿಯೇ ನಡೆಯುವಂತೆ ಮಾಡಿದ. ಕಂದಾಯ, ಅರಣ್ಯ, ಕೃಷಿ, ಹಣಕಾಸು, ಲೋಕೋಪಯೋಗಿ, ಶಿಕ್ಷಣ ಮೊದಲಾದ ಆಗಿನ ಕಾಲದ ಹದಿನೆಂಟು ಕಚೇರಿಗಳ(ಅಠಾರ್‍ಅ ಕಚೇರಿ) ಸ್ಥಾಪನೆಗಳೂ ಆತನೇ ಮಾಡಿದ್ದು. ಕಬ್ಬನ್ ನ ಆಡಳಿತ ಕಾಲದಲ್ಲಿ ಮೈಸೂರು ರಾಜ್ಯದ ಹಣಕಾಸಿನ ಸ್ಥಿತಿ ಸುಧಾರಿಸಿ ಅದು ತನ್ನೆಲ್ಲ ಸರಕಾರೀ ಸಾಲಗಳನ್ನು ತೀರಿಸಿತು. ಮೈಸೂರಿನ ಆಡಳಿತದ ಮೇಲೆ, ಜನಜೀವನದ ಮೇಲೆ ಮಾರ್ಕ್ ಕಬ್ಬನ್ ನಂತೆ ತಮ್ಮ ಮಾರ್ಕ್ ಬೀಳಿಸಿ, ಅಂದರೆ ಗುರುತು ಮೂಡಿಸಿ ಹೋದವರು ಹೆಚ್ಚು ಜನರಿಲ್ಲ. ಬೆಂಗಳೂರಿನ ಕಬ್ಬನ್ ಪಾರ್ಕ್ ಅವನ ನೆನಪಿಗೋಸ್ಕರವೇ ರಚಿತವಾಗಿದೆ. ಅಲ್ಲಿ ಅವನ ಅಶ್ವಾರೋಹಿ ಪ್ರತಿಮೆ ಕೂಡ ಇದೆ. ಬೇಸಿಗೆಯಲ್ಲಿ ವಾಸಿಸುವುದಕ್ಕಾಗಿ ಆತ ನಂದಿಬೆಟ್ಟದಲ್ಲಿ ೧೮೪೮ ರಲ್ಲಿ ಕಟ್ಟಿದ್ದ ಕಬ್ಬನ್ ಹೌಸ್ ಅನ್ನು ಹೊಸದೇನೂ ಕಟ್ಟಿಸಲು ಸಾಧ್ಯವಿರದ ಆಡಳಿತವು ಹೆಸರು ಬದಲಿಸಿ ನೆಹರು ಭವನವೆಂದು ಮಾಡಿದೆ.
ಎಲ್ಲರೂ ಯೋಗನಂದೀಶ್ವರ ದೇವಸ್ಥಾನಕ್ಕೆ ಬೇಟಿ ಕೊಟ್ಟೆವು. ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿರುವ ಈ ದೇವಾಲಯದಲ್ಲಿ ಶಿವನು ಯೋಗದೀಕ್ಷೆಯಲ್ಲಿರುವುದರಿಂದ ಉತ್ಸವಗಳು ನಡೆಯುವುದಿಲ್ಲ. ಗರ್ಭಗುಡಿ, ಸುಕನಾಸಿ, ನವರಂಗ ಮತ್ತು ಕಲ್ಯಾಣಮಂಟಪಗಳನ್ನೊಳಗೊಂಡ ಈ ದೇವಾಲಯ ಬಹಳ ಸುಂದರವಾಗಿದೆ. ಸುಕನಾಸಿಯ ಬಾಗಿಲುವಾಡದ ಹಿತ್ತಾಳೆಯ ಚೌಕಟ್ಟಿನಲ್ಲಿ ಅನೇಕ ಚಿತ್ರಗಳನ್ನು ಕೆತ್ತಲಾಗಿದೆ. ದ್ವಾರದ ಎರಡು ಪಕ್ಕಗಳಲ್ಲೂ ಸುಮಾರು ಐದು ಅಡಿ ಎತ್ತರದ ಲೋಹದ ದ್ವಾರಪಾಲಕ ವಿಗ್ರಹಗಳಿವೆ. ಇವು ಶ್ರೀಕೃಷ್ಣದೇವರಾಯನ ಕಾಣಿಕೆ.
ಮಕ್ಕಳ ಮನರಂಜನೆಗಾಗಿ ಇಲ್ಲಿ ಆಟದ ಮೈದಾನವಿದೆ. ಜಾರುಬಂಡೆ, ಉಯ್ಯಾಲೆ, ರಿಂಗ್ ರೋಲ್, ಸೀ ಸಾ ಮುಂತಾದ ಪುಟಾಣಿಗಳನ್ನು ಸೆಳೆಯುವ ಅನೇಕ ಸಾಧನಗಳನ್ನು ಅಳವಡಿಸಿದ್ದಾರೆ. ಇಲ್ಲಿನ ಹವೆಯ ಮಹಿಮೆಯೋ ಏನೋ ಉಲ್ಲಸಿತರಾದ ದೊಡ್ಡವರೆಲ್ಲರೂ ಮಕ್ಕಳಾಗಿಬಿಡುತ್ತಾರೆ. ಹಿರಿಯರು, ಕಿರಿಯರೆಂಬ ಭೇದವಿಲ್ಲದೆ ಮಕ್ಕಳಂತೆ ಆಡುತ್ತಾರೆ, ನಲಿಯುತ್ತಾರೆ. ಇದೇ ಜೀವನದ ಸೊಗಸು.
ದೇವಾಲಯದ ಪಕ್ಕದಲ್ಲಿರುವ ಹೋಟೆಲಿನಲ್ಲಿ ಕಾಫಿ ಕುಡಿಯಲು ಸಂಜೆ ಹೋದೆವು. ಟೋಕನ್ ಪಡೆದು ಪ್ರಕಾಶ್ ಹೆಗಡೆ ಮತ್ತು ನಾನು ಕಾಫಿ, ಟೀ ಕೊಡುವವರ ಬಳಿ ಹೋದೆವು. ಅಷ್ಟರಲ್ಲಿ ಹೋಟೆಲಿನ ಒಡತಿ ಜೋರ್‍ಆಗಿ " ಏ ಪ್ರಕಾಶಾ..." ಎಂದು ಕೂಗಿದರು. ಪ್ರಕಾಶ್ ಹೆಗಡೆಯವರು ಮತ್ತು ನಾನು ಅತ್ತ ನೋಡಿದೆವು. ಆ ಹೆಂಗಸು ಹೋಟೆಲಿನಲ್ಲಿ ಕೆಲಸ ಮಾಡುವವನನ್ನು ಕೂಗಿದ್ದದ್ದು! ಕಾಫಿ ಕುಡಿಯಲು ಕುಳಿತಾಗ ಪ್ರಕಾಶ್ ಹೆಗಡೆಯವರು ತಮ್ಮ ನಾಮಾಮೃತದ ಬಗ್ಗೆ ಸ್ವಾರಸ್ಯವಾಗಿ ಮಾತನಾಡಿದರು. ಅದನ್ನು ಅವರ ಶೈಲಿಯಲ್ಲಿ ಅವರ ಬ್ಲಾಗಲ್ಲಿ ಓದೋಣ.
ನಂದಿಬೆಟ್ಟದಲ್ಲಿ ರಾತ್ರಿ, ಅದರಲ್ಲೂ ಈ ಚಳಿಗಾಲದ ರಾತ್ರಿಗೆ ಒಂದು ಸೊಗಸಿದೆ, ಸೊಬಗಿದೆ. ಅಲ್ಲಲ್ಲಿ ಹಚ್ಚಿರುವ ಎಲೆಕ್ಟಿಕ್ ದೀಪಗಳಡಿ ಇರುವ ಹಸಿರು ಮತ್ತು ಅದರ ಮೇಲಿನ ಮುತ್ತು(ನೀರಹನಿ) ಬಹಳ ಚಂದ. ದೀಪದ ಹಿಂಬದಿಯ ನೆರಳಲ್ಲಿರುವ ಮಬ್ಬು ಮಬ್ಬಾಗಿ ಕಾಣುವ ರೆಂಬೆ, ಕೊಂಬೆ, ಬಳ್ಳಿ ನಿಗೂಢತೆಯ ಅನುಭವ ತರುತ್ತದೆ. ಪ್ರಕಾಶ್ ಹೆಗಡೆಯವರು 'ಚಪಾತಿ'ಯ ವಿಶ್ವರೂಪದರ್ಶನ ಮಾಡಿಸಿದರು. ಒಂಟೆ ಹಾಲಿನ ಬಗ್ಗೆ ತಮ್ಮ ಅನುಭವ ಹೇಳಿ ನಾವೆಲ್ಲಾ ಹೊಟ್ಟೆ ಬಿರಿಯುವಂತೆ ನಗಿಸಿದರು. ನನಗಂತೂ ನಕ್ಕು ನಕ್ಕು ಕಣ್ಣಲ್ಲಿ ನೀರು ಬಂದು ಪಕ್ಕೆಯೆಲ್ಲಾ ನೋವು ಬಂತು. ಅವರ ಈ ಕಥನಗಳೆಲ್ಲಾ ಅವರ ಬ್ಲಾಗಲ್ಲೇ ಓದೋಣ.
ಬೆಳೆಗ್ಗೆ ನೆಹರು ಭವನದ ಮುಂದೆ ಅಡ್ಡಾಡಲು ಹೋದಾಗ ಮಳೆ ಬಂದಂತೆ ಅನುಭವವಾಯ್ತು. ಅದು ಮರ ಗಿಡಗಳ ಮೇಲೆ ಸಂಗ್ರಹವಾಗಿದ್ದ ಇಬ್ಬನಿ ಹನಿಗಳಾಗಿ ಉದುರುತ್ತಿದ್ದುದು. ನಂದಿಬೆಟ್ಟದ ಮೇಲಿನ ಮುಂಜಾವನ್ನು ಪದಗಳಲ್ಲಿ ಕಟ್ಟಿಕೊಡಲು ನನ್ನಿಂದ ಅಸಾಧ್ಯ. ಪ್ರಕಾಶ್ ಅವರ ಮಗ ಆಶಿಷ್ ತನ್ನ ವೀಡಿಯೋ ಕ್ಯಾಮೆರಾದಲ್ಲಿ ಎಲೆಗಳ ಮೇಲಿನ ಇಬ್ಬನಿ, ತರತರಹದ ಪುಷ್ಪಗಳು ಮತ್ತು ಪ್ರಕೃತಿಯನ್ನು ಸೆರೆಹಿಡಿಯುತ್ತಿದ್ದ. ಹಲವಾರು ಹಕ್ಕಿಗಳನ್ನಲ್ಲಿ ನೋಡಿದೆವು. ಇಲ್ಲಿ ಮಂಗಗಳ ಹಾವಳಿ ಜಾಸ್ತಿ. ತಿಂಡಿ ಕೈಲಿದ್ದರೆ ಕಿತ್ತುಕೊಂಡು ಹೋಗುತ್ತವೆ.
ಶಿವು ತಮ್ಮ ಬ್ಲಾಗಿನಲ್ಲಿ ನಮಗೆಲ್ಲಾ ಉಣಬಡಿಸುತ್ತಿರುವ ರಸದೌತಣಕ್ಕಾಗಿ ಹೊಸವಸ್ತುವನ್ನು ಆಯ್ದುಕೊಂಡಿದ್ದಾರೆ. ಅದು "ನಡೆದಾಡುವ ಭೂಪಟ". ಅದಕ್ಕಾಗಿ ಅವರು ತಮ್ಮ ಕ್ಯಾಮೆರಾದೊಂದಿಗೆ ಚುರುಕಾಗಿ ನಂದಿಬೆಟ್ಟವನ್ನು ಸ್ಕ್ಯಾನ್ ಮಾಡುತ್ತಿದ್ದರು.
ಗಾಂಧಿನಿಲಯ ಸುತ್ತ ಸುತ್ತಾಡಿ, ಬೆಟ್ಟದ ಮೇಲಿಂದ ಕಾಣುವ ಮನೋಹರ ದೃಶ್ಯಗಳನ್ನು ನೋಡಿದೆವು. ಕೆರೆಗಳ ಹೊಳೆಯುವ ನೀರು, ಬೈತೆಲೆ ಗೆರೆಯಂತಿರುವ ರಸ್ತೆ, ಪುಟ್ಟದಾಗಿ ಕಾಣುವ ಮನೆಗಳು, ತೋಟಗಳು, ಬೆಟ್ಟ ಗುಡ್ಡಗಳನ್ನೆಲ್ಲಾ ಕಣ್ಣಿಗೆ ತುಂಬಿಕೊಂಡೆವು. ಕ್ಯಾಪ್ಟನ್ ಕನಿಂಗ್ ಹ್ಯಾಂ ಕಟ್ಟಿಸಿದ್ದ ಬಂಗಲೆ "ಓಕ್ ಲ್ಯಾಂಡ್ಸ್" ಅನ್ನು ಹೆಸರು ಬದಲಿಸುವುದರಲ್ಲಿ ನಿಷ್ಣಾತರಾದ ಸರಕಾರದವರು, ೧೯೩೬ರಲ್ಲಿ ಮಹಾತ್ಮಾ ಗಾಂಧಿಯವರು ಕೆಲ ವಾರಗಳ ಕಾಲ ವಿಶ್ರಾಂತಿ ಪಡೆದುದರ ಸವಿನೆನಪಿಗಾಗಿ "ಗಾಂಧಿ ನಿಲಯ" ಎಂದು ನಾಮಕರಣ ಮಾಡಿದ್ದಾರೆ.
ಅಂದಹಾಗೆ, ನಂದಿ ಬೆಟ್ಟದಲ್ಲಿ ಊಟವಾದ ಮೇಲೆ ಹೆಂಗಸರನ್ನು ಬ್ಲಾಗ್ ಕುರಿತಂತೆ ಸಂದರ್ಶನ ಮಾಡುವೆ ಅನ್ನುತ್ತಿದ್ದ ಪ್ರಕಾಶ್ ಹೆಗಡೆಯವರು, ಹೊರಡುವಾಗ, "ಬ್ಲಾಗ್ ಬಗ್ಗೆ ಏನೂ ಮಾತನಾಡಲಿಲ್ಲವಲ್ಲ?" ಅಂದ ಹೆಂಗಳೆಯರಿಗೆ, "ನಿಮ್ಮ ಮನಸ್ಸಿನಲ್ಲಿರುವುದು ನನಗರ್ಥವಾಗಿದೆ. ಹಾಗೂ ನಿಮ್ಮ ಅಭಿಪ್ರಾಯವನ್ನು ನಾನು ಒಪ್ಪುತ್ತೇನೆ" ಎಂದು ಹೇಳಿ ಮಂಗಳ ಹಾಡಿದರು! ಹಾಗಂತ ಬ್ಲಾಗಿಗೆ ಮೋಸವಾಗಿಲ್ಲ. ಮೂವರಿಗೂ ಸಾಕಷ್ಟು ಸರಕುಗಳು ಸಂಚಯವಾಗಿದೆ.
ಮೂರೂ ದಂಪತಿಗಳು(ಧಂ ಕಳೆದುಕೊಂಡ ಪತಿಗಳಲ್ಲ!) ಜೊತೆಯಲ್ಲಿ ಎರಡು ಮರಿಗಳು(ಆಶಿಷ್ ಮತ್ತು ಓಂ), ನಂದಿಬೆಟ್ಟದ ಮೇಲೆ - ಸಂಜೆಯ ಮಂಜು, ಮಬ್ಬುಗತ್ತಲಿನ ಇಬ್ಬನಿ, ಬೆಳಗಿನ ಸೊಬಗನ್ನು, ಸಮಪ್ರಮಾಣದಲ್ಲಿ ಸವಿದೆವು, ಸಂತಸಪಟ್ಟೆವು. ಅನುಭವವನ್ನು ಪದಗಳಲ್ಲಿ ಕಟ್ಟಿಕೊಡುವುದು ಕಷ್ಟ. ಅದರಲ್ಲೂ ಎಲ್ಲರ ಸಂತಸಾನುಭವವನ್ನು ವರ್ಣಿಸುವುದು ಕಷ್ಟ ಕಷ್ಟ. ಆದರೂ ಪ್ರಯತ್ನಿಸಿದ್ದೇನೆ.

Wednesday, November 19, 2008

ನಂದಿಬೆಟ್ಟದ ಮೇಲ್ಮಂಜು

ನಂದಿಬೆಟ್ಟದ ಮೇಲೇನಿದೆ?ನೆಹರೂ ಭವನವಿದೆ, ಟಿಪ್ಪು ಅರಮನೆಯಿದೆ, ಯೋಗನಂದೀಶ್ವರ ದೇವಾಲಯವಿದೆ, ಪಾರ್ಕಿದೆ, ಹಸಿರಿದೆ, ಉಸಿರಿಗೆ ಒಳ್ಳೆಯ ಗಾಳಿಯಿದೆ, ಕಣ್ತುಂಬಿಬರುವ ಒಳ್ಳೆಯ ದೃಶ್ಯಾವಳಿಯಿದೆ, ಟಿಪ್ಪುಡ್ರಾಪೂ ಇದೆ! ಅಷ್ಟೇನಾ? ಮಳೆಗಾಲ ಮುಗಿದ ಮೇಲೆ ಒಮ್ಮೆ ಹೋಗಿ ನೋಡಿ. ಅದ್ಭುತ ಮಂಜು ನಿಮ್ಮನ್ನು ಸ್ವಾಗತಿಸಿ ನಿಮ್ಮನ್ನಾವರಿಸಿಕೊಳ್ಳದಿದ್ದರೆ ಕೇಳಿ.
ಈ ಮಂಜಿನಲ್ಲಿ ಗೆಳೆಯರೊಂದಿಗೊ, ಸಂಗಾತಿಯೊಂದಿಗೊ, ಮಕ್ಕಳೊಂದಿಗೊ ಅಥವಾ ಏಕಾಂತವಾಗೊ ಒಂದು ಸುತ್ತು ನಡೆದು ಬನ್ನಿ. ಆಗ ಸಿಗುವ ಆನಂದ, ಮನೋಲ್ಲಾಸ, ಉತ್ಸಾಹ ಪದಗಳಲ್ಲಿ ಬಣ್ಣಿಸಲಾಗದು.ಬಲ್ಲವನೇ ಬಲ್ಲ ಬೆಲ್ಲದ ಸವಿಯ. ಅಲ್ಲಲ್ಲ ಮಂಜಿನ ಸವಿಯ!

Sunday, November 9, 2008

ಪಾತರಗಿತ್ತಿಯ ಜನನ

ನಿಧಾನವಾಗಿ ಮೊಗ್ಗು ಅರಳಿ ಹೂವಾಗುವಂತೆ, ತನ್ನ ಕೋಶದಿಂದ ಹೊರಬಂದು ಬಣ್ಣ ಬಣ್ಣದ ರೆಕ್ಕೆ ಅರಳಿಸಿ ನಿಲ್ಲುವ ಚಿಟ್ಟೆಯನ್ನು ಕಾಣುವುದೇ ಸೊಗಸು. ಇದು ಛಾಯಾಗ್ರಹಣ ಮಾಡಲೂ ಸವಾಲಿನ ಕೆಲಸ.
ನಿಂಬೇಗಿಡದ ಎಲೆ ತಿಂದು ದೊಡ್ಡದಾದ ಕಂಬಳಿಹುಳು ಕೋಶದೊಳಕ್ಕೆ ಸೇರಿಕೊಂಡು ನಂತರ ಲೈಮ್ ಬಟರ್ ಫ್ಲೈ ಎಂಬ ಸುಂದರ ಚಿಟ್ಟೆಯಾಗಿ ಹೊರಹೊಮ್ಮುತ್ತದೆ.
ಈ ಚಿಟ್ಟೆಯ ಕಪ್ಪು ಬಣ್ಣದ ರೆಕ್ಕೆ ಮೇಲೆ ಹಳದಿ, ಕೆಂಪು ಮತ್ತು ನೀಲಿಯ ಮಚ್ಚೆಗಳಿವೆ. ಇದರ ಹೊಟ್ಟೆ ಮತ್ತು ಮೈ ಹಳದಿ ಬಣ್ಣವಿದ್ದು ಕಪ್ಪು ಬಣ್ಣದ ಉದ್ದುದ್ದ ಗೆರೆಗಳಿವೆ. ರೆಕ್ಕೆ ಅಗಲಿಸಿದರೆ ೮ ರಿಂದ ೧೦ ಸೆ.ಮೀ.
ಒಂದು ಚಿಟ್ಟೆಯ ಜನನದಿಂದ ನಮ್ಮ ಕಣ್ಮನ ಪುಳಕಗೊಳ್ಳುವುದಷ್ಟೇ ಅಲ್ಲ, ನೂರಾರು ಹೂಗಳ ಪರಾಗಸ್ಪರ್ಶಕ್ಕೆ ಕಾರಣವೂ ಹೌದು. ಹ್ಯಾಪಿ ಬರ್ತ್ ಡೇ ಅಂತ ಹೇಳೋಣವೇ?

Thursday, October 30, 2008

ಕಾರು ಓಡುತ್ತಾ...ಕುಪ್ಪಳಿಸುತ್ತಾ...?

ಈ ಚಿತ್ರ ನೋಡಿದ ಮೇಲೆ ನಿಮಗೆ ಮೇಲಿನ ಅನುಮಾನ ಶುರುವಾದ್ರೆ ಅದಕ್ಕೆ ನಾನಂತೂ ಕಾರಣನಲ್ಲ. ಯಾಕಂದ್ರೆ ಕೆಲ ತಿಂಗಳ ಹಿಂದೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ನಡೆದ ಕರ್ನಾಟಕ ಕಾರ್ ರೇಸ್ ನಲ್ಲಿ ಪಾಲ್ಗೊಂಡಿದ್ದ ಎಲ್ಲ ಕಾರುಗಳೂ ಹೀಗೆಯೇ ಕುಪ್ಪಳಿಸಿದ್ದು...!

Friday, October 24, 2008

ನಿಶಾಚರ ಜೀವಿಯ ನಿಗೂಢ ಬದುಕು

"ನಂದಿಬಟ್ಟಲ ಗಿಡದ ಕೆಳಗೆಲ್ಲಾ ಹಿಕ್ಕೆಗಳು ಬಿದ್ದಿವೆ. ತುಂಬಾ ಹುಳಗಳಿರಬೇಕು. ಮೊದಲು ಅವನ್ನೆಲ್ಲಾ ಬಿಸಾಡಬೇಕು. ಇಲ್ಲದಿದ್ದರೆ ಗಿಡಾನೆಲ್ಲಾ ಹಾಳುಮಾಡ್ತವೆ" ಎಂದು ಅಜ್ಜಿ ಮೊಮ್ಮಗಳು ಮಾತನಾಡುತ್ತಿದ್ದುದು ಕೇಳಿ ನನ್ನ ಕಿವಿಗಳು ನೆಟ್ಟಗಾದವು. ಹೂತೋಟದ ಉಸ್ತುವಾರಿ ವಹಿಸಿಕೊಂಡಿರುವ ಇವರಿಗೆ ತೊಂದರೆ ಕೊಡುತ್ತಿರುವ ಹುಳ ಯಾವುದು ಎಂದು ಮಧ್ಯೆ ಪ್ರವೇಶಿಸಿದೆ.
ಎಲೆಗಳ ಬಣ್ಣವನ್ನೇ ಪಡೆದು ಒಂದೇ ಸಮನೆ ಎಲೆಗಳನ್ನು ಸ್ವಾಹಾ ಮಾಡುವ ಈ ಹುಳಗಳನ್ನು ಕಂಡುಹಿಡಿಯುವುದು ಸುಲಭವಲ್ಲ. ಆದರೆ ಶಿಡ್ಲಘಟ್ಟದ ರೇಷ್ಮೆ ಬೆಳೆಗಾರರಿಗೆ ಇಂಥ ಸೂಕ್ಷ್ಮಗಳೆಲ್ಲ ಬಾಲ್ಯದಲ್ಲೇ ಗೊತ್ತಾಗುತ್ತವೆ. ನೆಲದಲ್ಲಿ ಅವುಗಳ ಹಸಿ ಹಿಕ್ಕೆ ಬಿದ್ದಲ್ಲಿ ಸರಿಯಾಗಿ ನಿಂತು ತಲೆಯ ಮೇಲ್ಗಡೆ ಇರುವ ಎಲೆಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಬೇಕು. ತಲೆಯ ಮೇಲೂ ಒಂದೆರಡು ಹಿಕ್ಕೆ ಬಿದ್ದರೆ ನಿಮ್ಮ ಅದೃಷ್ಟ. ಹುಳು ಸಿಕ್ಕೇ ಸಿಗುತ್ತದೆ. ನನಗೂ ಸಿಕ್ಕಿತು. ಅದರ ಮೈಮೇಲೊಂದು ಬಿಳಿಯ ಗೆರೆಯೂ, ಅಲ್ಲಲ್ಲಿ ಬಿಳಿ ಚುಕ್ಕೆಗಳೂ, ಹಳದಿಯ ಪುಟ್ಟ ಬಾಲವೂ ಇರುತ್ತದೆ. ಇತರೇ ಜೀವಿಗಳನ್ನು ಹೆದರಿಸಲೋ ಏನೋ ದೊಡ್ಡ ಕಣ್ಣುಗಳಿರುವಂತೆ ಕಾಣುವ ನೀಲಿ ಬಣ್ಣದ ಮಚ್ಚೆಗಳಿವೆ.
ಹುಡುಕಿದಾಗ ಇನ್ನೂ ನಾಲ್ಕು ಹುಳುಗಳು ಸಿಕ್ಕವು. ನನಗೇನೋ ಈ ಕಂಬಳಿ ಹುಳು ಮುಂದೆ ಚಿಟ್ಟೆಯಾದೀತು ಎಂಬ ಅನುಮಾನ. ನಮ್ಮಜ್ಜಿಗೆ ಹೇಳಿದಾಗ ಅವರು, "ಅಯ್ಯೋ, ಇವು ಬರೀ ಎಲೆ ತಿನ್ನುವ ಹುಳಗಳು. ನಾನೆಷ್ಟೋ ವರ್ಷಗಳಿಂದ ಇವನ್ನು ನೋಡಿದ್ದೀನಿ. ಮೊದಲು ಬಿಸಾಕು" ಅಂದರು. ಆದರೂ ಒಂದು ರಟ್ಟಿನ ಡಬ್ಬ ತಂದು ಅದರಲ್ಲಿ ಒಂದಷ್ಟು ನಂದಿಬಟ್ಟಲ ಎಲೆಗಳನ್ನು ಹಾಕಿ ಈ ಹುಳಗಳನ್ನು ಅದರಲ್ಲಿ ಬಿಟ್ಟೆ.
ರಾತ್ರಿ ನನ್ನ ತಮ್ಮ, "ಆ ಹುಳಗಳಲ್ಲಿ ಒಂದು ಸತ್ತಿತ್ತು, ಬಿಸಾಡಿದೆ. ಇನ್ನೊಂದು ಸಾಯುವ ಸ್ಥಿತಿಯಲ್ಲಿದೆ ನೋಡು" ಅಂದ. ಒಂದು ಹುಳವಂತೂ ಕಂದು ಬಣ್ಣವಾಗಿಬಿಟ್ಟಿತ್ತು. ಉಳಿದೆರಡೂ ನಿಸ್ತೇಜವಾಗಿದ್ದವು.
ಬೆಳೆಗ್ಗೆನೇ ಯಾರಿಗೂ ಹೇಳದೇ ಇವನ್ನು ಗಿಡದಲ್ಲಿ ಬಿಟ್ಟೆ. ಕಂದು ಬಣ್ಣದ್ದಂತೂ ಗಿಡದಲ್ಲಿ ಬಿಟ್ಟ ತಕ್ಷಣ ಸರಸರನೆ ರೆಂಬೆಯ ಮೇಲೆ ನಡೆಯತೊಡಗಿತು. ಮಿಕ್ಕೆರಡನ್ನೂ ಗಿಡದಲ್ಲಿ ಬಿಟ್ಟು ಬಂದೆ.
ಮೂರ್ನಾಕು ದಿನಗಳ ನಂತರ ನನ್ನ ತಂಗಿ, "ಒಂದು ಹೊಸ ಹುಳ ನೋಡಿದೆ, ಫೋಟೋ ತೆಗೀತೀಯಾ?" ಅಂದಳು. ದಾಸವಾಳದ ಗಿಡದ ಕೆಳಗೆ ಕೊಳೆತ ಎಲೆಗಳ ನಡುವೆ ಒಂದು ಕಾಯಂತಿತ್ತು. ಅವಳು ಗಿಡಕ್ಕೆ ನೀರು ಹಾಕುವಾಗ ಅದು ಕದಲಿತಂತೆ. ಅದರಿಂದಾಗಿ ಅದೊಂದು ಹುಳವಿರಬೇಕೆಂದು ಅಂದುಕೊಂಡಿದ್ದಳು.
ನಾನು ಹತ್ತಿರದಿಂದ ಅದನ್ನು ನೋಡಿದೆ. ನಂದಿಬಟ್ಟಲ ಗಿಡದ ಹುಳಕ್ಕೂ ಇದಕ್ಕೂ ಸಾಮ್ಯತೆ ಇರುವಂತೆ ಅನಿಸಿ ಅನುಮಾನ ಹುಟ್ಟಿತು. ಅಲ್ಲೇ ಸುತ್ತಮುತ್ತ ಹುಡುಕಿದಾಗ ಇನ್ನೆರಡು ಅದೇ ತರಹದ್ದು ಸಿಕ್ಕವು. ನೋಡಲು ಒಂದು ಕಾಯಿಯಂತಿದ್ದರೂ ಬೆರಳಿನಲ್ಲಿ ಮುಟ್ಟಿದರೆ ಥಟ್ಟನೆ ಕದಲುತ್ತಿತ್ತು. ಒಂದು ಪುಟ್ಟ ರಟ್ಟಿನ ಡಬ್ಬಿಯಲ್ಲಿಟ್ಟು ಮನೆಯೊಳಗೆ ತಂದೆ. ಪತಂಗ ಇದ್ದೀತೆ? ಪುಸ್ತಕವನ್ನೆಲ್ಲಾ ತಿರುವಿ ಹಾಕಿದೆ.
ಚಿಟ್ಟೆಗಳು ಮತ್ತು ಪತಂಗಗಳು ಒಂದೇ ಜಾತಿಯವು. ಆದರೆ ಕೆಲವು ವ್ಯತ್ಯಾಸಗಳಿವೆ. ಚಿಟ್ಟೆಗಳು ಹಗಲು ಜೀವಿಗಳಾದರೆ, ಪತಂಗಗಳು ನಿಶಾಚರಿಗಳು. ಚಿಟ್ಟೆಗಳು ರೆಕ್ಕೆಗಳನ್ನು ಮೇಲಕ್ಕೆ ಮಡಿಚುತ್ತವೆ. ಆದರೆ ಪತಂಗಗಳು ವಿಮಾನದ ರೆಕ್ಕೆಗಳಂತೆ ಅಡ್ಡಡ್ಡ ಅಗಲಿಸಿರುತ್ತವೆ. ಚಿಟ್ಟೆಗಳ ಮೈ ಬಡಕಲು, ಮೀಸೆ ಅನ್ನೋದು ಬೆಂಕಿಕಡ್ಡಿ ಥರಾ. ಪತಂಗಗಳದ್ದು ಠೊಣಪರ ಮೈ. ಹಂಚಿಕಡ್ಡಿ ಮೀಸೆ. ನಿಶಾಚರ ಜೀವಿಗಳಾದ ಈ ಪತಂಗಗಳನ್ನು ನಾವು ನೋಡುವುದೇ ತೀರಾ ಕಡಿಮೆ. ಕಂಬಳಿ ಹುಳುಗಳು ಚೆನ್ನಾಗಿ ಎಲೆತಿಂದು ಬೆಳೆದ ಮೇಲೆ ಪ್ಯೂಪಾ ಆಗುವಾಗ ಮಣ್ಣಲ್ಲಿ ನೆಲದಲ್ಲಿ ಎಲೆಗಳ ಮರೆ ಸೇರಿಬಿಡುತ್ತವೆ.
ನಾನು ಅದನ್ನು ಮನೆಯೊಳಗೆ ತಂದ ಏಳನೇ ದಿನ ಪ್ಯೂಪಾ ಪೂರ್ತಿ ಕಪ್ಪುಬಣ್ಣಕ್ಕೆ ತಿರುಗಿತ್ತು. ಬೆಳೆಗ್ಗೆನೇ ಎದ್ದು ನೋಡಿದೆ. ಪ್ಯೂಪಾ ಒಡೆದಿದೆ. ಕೆಂಪು ಬಣ್ಣದ ದ್ರವವಿದೆ. ಆದರೆ ಪತಂಗವೇ ಇಲ್ಲ. ಸುತ್ತ ನೋಡಿದೆ. ನನ್ನ ಪುಣ್ಯ. ಕಿಟಕಿಯ ಗ್ರಿಲ್ ಚಿಕ್ಕದಾಗಿದ್ದು ಅದು ಹೊರ ಹೋಗಲಾಗದೇ ಅದರ ಮೇಲೆ ಕುಳಿತಿತ್ತು. ದಪ್ಪ ಹೊಟ್ಟೆ, ದೊಡ್ಡ ಕಣ್ಣುಗಳು, ಅಗಲವಾದ ರೆಕ್ಕೆ. ಪಾಚಿ ಬಣ್ಣದಲ್ಲಿ ಹಾಗೂ ರೆಕ್ಕೆಯ ಮೇಲೆ ಬಿಳಿ ಬಣ್ಣದಲ್ಲಿ ಕಣ್ಣುಗಳು ಮತ್ತು ವೀರಪ್ಪನ್ ಮೀಸೆ ಬರೆದಂತಿತ್ತು. ಬೆಳಕಾಗಿದ್ದರಿಂದ ಅದು ಕದಲದೇ ಹಾಗೆಯೇ ಕುಳಿತಿತ್ತು. ಅದನ್ನು ನಮ್ಮಜ್ಜಿಗೆ ತೋರಿಸಿದೆ. "ಎಷ್ಟು ಚೆನ್ನಾಗಿದೆ. ನೋಡಿದ್ಯಾ ನಂಗೊತ್ತೇ ಇರಲಿಲ್ಲ" ಎಂದು ಸಂತೋಷಿಸಿದರು. ಇದರ ಫೋಟೋ ತೆಗೆದು ಪುಸ್ತಕದಲ್ಲಿ ಹುಡುಕಿದೆ. ಇದರ ಹೆಸರು ಓಲಿಯಾಂಡರ್ ಹಾಕ್ ಮಾತ್ .
ಕತ್ತಲಾದ ಮೇಲೆ ಹೊರಗೆ ತೆಗೆದುಕೊಂಡು ಹೋದೆ. ಮನೆಯಿಂದ ಹೊರಗೆ ಬರುವಷ್ಟರಲ್ಲೇ ರೆಕ್ಕೆ ಪಟಪಟಿಸಿದ ಅದು ಆಚೆ ಬರುತ್ತಿದ್ದಂತೆಯೇ ಹಾರಿಹೋಯಿತು.
ಮುದ್ದೆ ಮುದ್ದೆಯಂತಿರುವ, ಸದಾ ತಿನ್ನುವ ಠೊಣಪನಂತಿರುವ ಈ ಕಂಬಳಿ ಹುಳುಗಳು ಸುಂದರ ರೆಕ್ಕೆಗಳಿರುವ ಪತಂಗಗಳಾಗಿ ಮಾರ್ಪಾಡಾಗುವ ಸೋಜಿಗ ನೋಡುವಾಗ ನಾನಾ ಪ್ರಶ್ನೆಗಳು ಮನದಲ್ಲಿ ಮೂಡುತ್ತವೆ. ಮಣ್ಣಿನ ಬಣ್ಣದ ಕವಚ ಕಟ್ಟಿಕೊಂಡು ಮಣ್ಣಿನಲ್ಲಿ ಸೇರುವಂತೆ ಇವಕ್ಕೆ ಹೇಳಿಕೊಟ್ಟವರ್ಯಾರು? ಬೆರಳ ಗಾತ್ರದ ಹುಳಕ್ಕೆ ಕವಚದೊಳಗೆ ರೆಕ್ಕೆಯು ಮೂಡುವುದೆಂತು? ಪತಂಗಕ್ಕೆ ಇಂತಹದೇ ಹೂವಿನ ಮಕರಂದ ಹೀರೆಂದು, ಇದೇ ಗಿಡದಲ್ಲಿ ಮೊಟ್ಟೆ ಇಡೆಂದು ಹೇಳಿಕೊಟ್ಟವರ್ಯಾರು?
ಇದೊಂದು ಕೊನೆಯಿರದ, ಸಂತಸಪಡುವ, ತಾಳ್ಮೆಯಿಂದ ಅಭ್ಯಸಿಸುವ, ಗಮನಿಸುವ ಕೌತುಕಲೋಕ.

Thursday, October 16, 2008

ಮಿರಿಮಿರಿ ಮಿಂಚುವ ಮಿಂಚುಳ್ಳಿ

"ಏನ್ರೋ ಅದು?" ಮೇಸ್ಟ್ರು ಕೇಳಿದರು. "ಹಕ್ಕಿ ಸಾರ್", ಗುಂಪುಗೂಡಿದ್ದ ಹುಡುಗರು ಉತ್ತರಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿಯ ಪ್ರಾಥಮಿಕ ಶಾಲೆ. ಅಲ್ಲಿನ ಉಪಾಧ್ಯಾಯರುಗಳಾದ ನಾಗಭೂಷಣ್ ಮತ್ತು ವೆಂಕಟರೆಡ್ಡಿ ಮಕ್ಕಳ ಕೈಲಿ ಯಾವುದಪ್ಪ ಹೊಸ ಹಕ್ಕಿ ಎಂದು ಕುತೂಹಲಗೊಂಡು ಹೋಗಿ ನೋಡಿದರು. "ಅರೆ! ಮಿಂಚುಳ್ಳಿ. ಎಲ್ಲಿ ಸಿಕ್ತೋ ನಿಮ್ಗೆ?" ಎಂದು ಕೇಳಿದರು. "ದ್ರಾಕ್ಷಿ ತೋಟಕ್ಕೆ ಬಲೆ ಕಟ್ಟಿರ್ತಾರಲ್ಲ ಸಾರ್. ಅದಕ್ಕೆ ಸಿಕ್ಕಾಕ್ಕೊಂಡಿತ್ತು" ಅಂದರು ಮಕ್ಕಳು. ಗಾಬರಿಗೊಂಡೋ ಅಥವಾ ಸುಸ್ತಾಗಿಯೋ ಕದಲದೇ ಕುಸಿದು ಕುಳಿತಿದ್ದ ಆ ಹಕ್ಕಿಯ ಬಾಯಿಗೆ ಮೇಸ್ಟ್ರುಗಳು ನೀರು ಹಾಕಿ ಅಲ್ಲೇ ಇದ್ದ ಗಿಡದ ರೆಂಬೆಯ ಮೇಲೆ ಬಿಟ್ಟಿದ್ದಾರೆ. ಮಕ್ಕಳು ಮನೆಗೆ ತೆಗೆದುಕೊಂಡು ಹೋಗೆ ಸಾಕುತ್ತೇವೆಂದು ಕೇಳಿದ್ದಾರೆ. ಕೋಳಿಯಂತೆ ಇದನ್ನು ಸಾಕಲು ಸಾಧ್ಯವಿಲ್ಲ. ಸ್ವಚ್ಛಂದವಾಗಿ ಹಾರಾಡುತ್ತಾ ಮೀನು, ಕಪ್ಪೆ, ಹುಳುಗಳನ್ನು ತಿಂದು ಬದುಕುವ ಈ ಮಿಂಚುಳ್ಳಿಯ ಜೀವನಕ್ರಮದ ಬಗ್ಗೆ ತಿಳಿಸಿದ್ದಾರೆ.
ಇಷ್ಟೆಲ್ಲಾ ಆದ ಮೇಲೆ ರಂಗಪ್ರವೇಶಿಸಿದ್ದು ನನ್ನ ಕ್ಯಾಮೆರಾ! ನಾಗಭೂಷಣ್ ಫೋನ್ ಮಾಡಿ ಮಿಂಚುಳ್ಳೀಯ ಫೋಟೋ ತೆಗೆಯಲು ಕರೆದರು. ನಾನಲ್ಲಿಗೆ ಹೋದಾಗ ಮೇಸ್ಟ್ರುಗಳಿಂದ ಮಕ್ಕಳಿಗೆ ಮಿಂಚುಳ್ಳಿಯ ಪಾಠ ನಡೆಯುತ್ತಿತ್ತು."ಅದು ಮೊಟ್ಟೆ ಎಲ್ಲಿಡ್ತದೆ?""ಮರಿಗೆ ಏನು ತಿನ್ನಿಸ್ತದೆ?""ಇದು ಗಂಡೋ, ಹೆಣ್ಣೋ?"ಯಕ್ಷಪ್ರಶ್ನೆಗಳು ಮಕ್ಕಳಿಂದ ತೂರಿ ಬರುತ್ತಿದ್ದರೆ, ಸಾವಧಾನದಿಂದ ಉಪಾಧ್ಯಾಯರು ಉತ್ತರಿಸುತ್ತಿದ್ದರು. ಮಿಂಚುಳ್ಳಿಗಳಲ್ಲಿ ಹಲವು ವಿಧಗಳಿವೆ. ಇಂಗ್ಲಿಷ್ ನಲ್ಲಿ ಇದಕ್ಕೆ WhiteBreastedKingfisher ಎನ್ನುತ್ತಾರೆ. ಗಂಡು ಹೆಣ್ಣು ಒಂದೇ ರೀತಿಯಿರುತ್ತವೆ. ನೀರಿರುವೆಡೆ ಮಣ್ಣಿನ ಎತ್ತರದ ಗೋಡೆಯಂತಹುದ್ದನ್ನು ಆಯ್ದುಕೊಂಡು ಅದರಲ್ಲಿ ಎತ್ತರದಲ್ಲಿ ತೂತು ಕೊರೆದು ಗೂಡು ಮಾಡಿ ಮೊಟ್ಟೆಯಿಟ್ಟು ಮರಿಮಾಡುತ್ತವೆ.
ಅಷ್ಟರಲ್ಲಿ ಹಕ್ಕಿ ಚೇತರಿಸಿಕೊಂಡಿತ್ತು. ನಾನು ಫೋಟೋ ತೆಗೆದ ಮೇಲೆ ಮಕ್ಕಳನ್ನು ಶಾಲೆಯ ಒಳಗೆ ಕಳಿಸಿ, ಹಕ್ಕಿಯನ್ನು ಯಾರ ಕೈಗೂ ಸಿಗದಂತೆ ಪೊದೆಗಳ ಹಿಂದೆ ಗಿಡವೊಂದರಲ್ಲಿ ಬಿಟ್ಟು ಬಂದರು.
ಇಂಥಹ ಪಾಠ ಎಷ್ಟು ಮಕ್ಕಳಿಗೆ ಸಿಗುತ್ತಿದೆ?

Sunday, October 12, 2008

ಬಾಲ್ಯದ ಆಟ, ಹುಡುಗಾಟ

ನೀರಿನ ಸಂಪರ್ಕದಲ್ಲಿ ಎಲ್ಲರೂ ಮಕ್ಕಳಾಗಿಬಿಡುತ್ತಾರೆ. ಅದರಲ್ಲೂ ನದಿ, ಹೊಳೆಗಳ ಸಂಸರ್ಗದಲ್ಲಿ ಬೆಳೆಯುವ ಮಕ್ಕಳಿಗಂತೂ ನೀರೊಂದು ಆಟದ ವಸ್ತು. ನೀರಲ್ಲಿ ಬೀಳುವುದು, ಮುಳುಗೇಳುವುದು, ಈಜು, ನೀರೆರಚಾಟ, ಒಂದೆ ಎರಡೆ... ಕೊನೆ ಮೊದಲಿಲ್ಲದ ಚೆಲ್ಲಾಟ. ಮಕ್ಕಳಿಗೆ ದಣಿವೆನ್ನುವುದರ ಅರ್ಥವೇ ಗೊತ್ತಿಲ್ಲ. ಮನಸ್ಸು ಮತ್ತು ದೇಹ ಎರಡೂ ಪ್ರಫುಲ್ಲ ಮತ್ತು ಆರೋಗ್ಯಪೂರ್ಣ.
ಶ್ರೀರಂಗಪಟ್ಟಣದ ಹತ್ತಿರವಿರುವ ಒಂದು ಹಳ್ಳಿ ಪಕ್ಕದಲ್ಲಿ ಕಾವೇರಿ ನದಿ ಹೆಚ್ಚು ರಭಸವಿಲ್ಲದೆ ಹರಿಯುತ್ತದೆ. ಹಕ್ಕಿಯ ಫೋಟೋ ತೆಗೆಯಲು ಹೋಗಿದ್ದ ನನಗೆ ಈ ರೆಕ್ಕೆಯಿಲ್ಲದ ಹಕ್ಕಿಗಳು(ಮಕ್ಕಳು) ನೀರಿಗೆಗರುತ್ತ ಆಡುತ್ತಿದ್ದುದು ಕಾಣಿಸಿತು. ಕ್ಲಿಕ್ಕಿಸಿದೆ.
ಸ್ವರ್ಗ ಅಲ್ಲೆಲ್ಲೋ ಇಲ್ಲ. ಇಲ್ಲೇ ಇದೆ. ಏನಂತೀರ?

Thursday, October 2, 2008

ಕಾಟಿಮರಾಯ ಹಕ್ಕಿ


ಶಿಡ್ಲಘಟ್ಟದ ಬಳಿಯ ಕದಿರಿನಾಯಕನಹಳ್ಳಿಯಲ್ಲಿ ಈ ಕಾಟಿಮರಾಯ ಹಕ್ಕಿ ಜೋಡಿಯೊಂದು ಮನೆಮಾಡಿತ್ತು. 'ಹಳ್ಳಿಯಲ್ಲಿ ಹಕ್ಕಿಯ ಮನೆಯೇ?' ಎಂದು ಅಚ್ಚರಿ ಪಡಬೇಡಿ. ಅಲ್ಲಿನ ತೋಟದ ಮನೆಯೊಂದರ ಮೇಲಿನ ಕಲ್ಲು ಚಪ್ಪಡಿ ಸಂದಿಯಲ್ಲಿ ಅದರ ಪುಟ್ಟ ಗೂಡು. ಅದೇ ಅದರ ಮನೆ. ಆ ತೋಟದ ಒಡೆಯ ನಾರಾಯಣಸ್ವಾಮಿಯಿಂದ ವಿಷಯ ತಿಳಿದು ನಾನು ಹೋಗಿ ಒಮ್ಮೆ ಹಕ್ಕಿಯ ಚಲನವಲನ ಗಮನಿಸಿದೆ. ಅದಾಗಲೇ ಮರಿಗಳಿಗೆ ಗುಟುಕನ್ನು ಒಯ್ಯುತ್ತಿತ್ತು. ಅದು ಕೂರುವ ಜಾಗವನ್ನು ನೋಡಿ, ಅದಕ್ಕೆ ಸ್ವಲ್ಪ ದೂರದಲ್ಲಿ ನನ್ನ ಮರೆಯನ್ನಿಟ್ಟೆ. ಮರೆಯೆಂದರೆ ಒಬ್ಬರು ಒಳಗೆ ಸೇರಿಕೊಂಡು ಫೋಟೋ ತೆಗೆಯಬಹುದಾದ ಗುಡಾರದಂತದ್ದು. ಅದು ಹಸಿರು ಬಣ್ಣದಲ್ಲಿದ್ದು ಹಕ್ಕಿ ಬೇಗ ಹೊಂದಿಕೊಳ್ಳುತ್ತೆ. ಎರಡು ದಿನ ಬಿಟ್ಟು ನಂತರ ಮರೆಯೊಳಗೆ ಕುಳಿತು ಫೋಟೋ ತೆಗೆದೆ.
ಈ ಹಕ್ಕಿಗೆ ಆಡು ಭಾಷೆಯಲ್ಲಿ ಕಾಟಿಮರಾಯ ಹಕ್ಕಿ ಅನ್ನುತ್ತಾರೆ. ಹಳ್ಳಿಯಲ್ಲಿ ಪೂಜಿಸುವ ಕಾಟಿಮರಾಯ ದೇವರಿಗೂ ಈ ಹಕ್ಕಿಗೂ ಏನು ಸಂಬಂಧವೋ ತಿಳಿಯದು. ಆದರೆ ರೈತನಿಗೆ ಪೀಡೆಯಾದಂತಹ ಕೀಟಗಳನ್ನೆಲ್ಲಾ ತಿಂದು ಅಳಿಲು ಸೇವೆ ಮಾಡುತ್ತದೆ. ಇದಕ್ಕೆ ನೆಲಕುಟುಕ ಮತ್ತು ಚಂದ್ರಮುಕುಟ ಎಂಬ ಹೆಸರೂ ಇದೆ. ನೋಡಲು ಮರಕುಟುಕದ ತರಹ ಇದ್ದರೂ ಎರಡರ ಸ್ವಭಾವ ಬೇರೆಬೇರೆ. ಇಂಗ್ಲೀಷ್ ನಲ್ಲಿ Hoopoe ಅನ್ನುತ್ತಾರೆ. ಇದರ ತಲೆಮೇಲೆ ಬೀಸಣಿಗೆಯಂತಿರುವ ಜುಟ್ಟಿದೆ. ಮೈಮೇಲೆ ಜೀಬ್ರಾದಂತೆ ಕಪ್ಪು ಬಿಳಿ ಪಟ್ಟೆಗಳು. ಎದೆ ಮತ್ತು ಕತ್ತು ಕೇಸರಿ ಬಣ್ಣವಿದೆ.

Sunday, September 28, 2008

ಗೀಜಗ

"ಅಣ್ಣ ನಮ್ ಹಳ್ಯಾಗೆ ಬಾವಿ ಒಳ್ಗೆ ಹಕ್ಕಿ ಗೂಡು ಮಾಡೈತೆ ಫೋಟೋ ತೆಗೀತೀಯಾ?" ಎಂದು ರಮೇಶ ಕರೆದ. ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಅವನ ಹಳ್ಳಿ. ಅಲ್ಲಿ ಹೋಗಿ ನೋಡಿದರೆ ಹಳೆ ಬಾವಿಯ ಸುತ್ತ ಜಿಗ್ಗು, ಮುಳ್ಳುಕಂಟಿಗಳು, ಲಾಂಟಾನಾ ಗಿಡಗಳು ತುಂಬಿಕೊಂಡು ಬಾವಿಯೇ ಕಾಣದಂತಿದೆ. ಆ ಬಾವಿಯ ಪಕ್ಕ ಬೆಳೆದ ಗಿಡಕ್ಕೆ ಗೀಜಗ ಹಕ್ಕಿಗಳು ಗೂಡುಗಳನ್ನು ನೇಯ್ದಿವೆ. ಅವು ಬಾವಿಯೊಳಕ್ಕೆ ನೇತಾಡುತ್ತಿದ್ದವು. ನಾವಿಬ್ಬರೂ ಸೇರಿ ಸ್ವಲ್ಪ ಲಾಂಟಾನಾ ಗಿಡವನ್ನು ಕತ್ತರಿಸಿ ಜಾಗ ಮಾಡಿ ನನ್ನ ಮರೆಯನ್ನಿಟ್ಟು, ಬಟ್ಟೆ ಹೊದ್ದಿಸಿದೆವು. ಮರೆಯೊಳಗೆ ಕೂತು ಅವನನ್ನು ಎರಡು ಮೂರು ಗಂಟೆ ಬಿಟ್ಟು ಬರಲು ಹೇಳಿಕಳಿಸಿದೆ. ಕ್ಯಾಮೆರಾವನ್ನು ಬಟ್ಟೆಯಲ್ಲಿದ್ದ ರಂಧ್ರದಲ್ಲಿ ತೂರಿಸಿ ನೋಡುತ್ತಾ ಕುಳಿತೆ.
ಗೀಜಗ ಹಕ್ಕಿಗಳ ವೈಶಿಷ್ಟ್ಯವೇನೆಂದರೆ, ಗಂಡು ಹಕ್ಕಿ ಗೂಡನ್ನು ಅರ್ಧ ನೇಯ್ದು ಹೆಣ್ಣಿಗೆ ತೋರಿಸುತ್ತದೆ. ಅದು ಹೆಣ್ಣಿಗೆ ಇಷ್ಟವಾದರೆ ಅವೆರಡೂ ಜೋಡಿಯಾಗುತ್ತವೆ, ಗೂಡನ್ನು ಪೂರ್ತಿ ಮಾಡಿ ಸಂಸಾರ ಸಾಗಿಸುತ್ತವೆ. ಅಕಸ್ಮಾತ್ ಇಷ್ಟವಾಗಲಿಲ್ಲವೋ ಗಂಡು ಮತ್ತೊಂದು ಗೂಡು ನೇಯಲು ಶುರುಮಾಡುತ್ತದೆ. ನಮಗೆ ಹತ್ತು ಬೆರಳುಗಳಿದ್ದರೂ ನೇಯಲು ಅಸಾಧ್ಯವಾದಂತಹ ಗೂಡನ್ನು ಪುಟ್ಟ ಇಕ್ಕಳದಂತಹ ಕೊಕ್ಕಿನಿಂದಲೇ ಈ ಪುಟ್ಟ ಹಕ್ಕಿ ನೇಯುವುದನ್ನು ನೋಡಿದರೆ ಇದರ ಸಾಮರ್ಥ್ಯಕ್ಕೆ ತಲೆದೂಗಲೇಬೇಕು. ಅದಕ್ಕೇ ಇದನ್ನು ನೇಕಾರ ಹಕ್ಕಿ ಎಂದೂ ಕರೆಯುತ್ತಾರೆ.
ಹಕ್ಕಿಯು ನಾರನ್ನು ತಂದು ತಂದು ತನ್ನ ಕೊಕ್ಕಿನಿಂದ ಸುಲಲಿತವಾಗಿ ಗೂಡು ಕಟ್ಟುವುದನ್ನು ನೋಡುತ್ತಾ ಕ್ಲಿಕ್ಕಿಸತೊಡಗಿದೆ. ನನ್ನ ಬಳಿ ಇದ್ದ ರೋಲ್ ಪೂರಾ ಖಾಲಿಯಾಯ್ತು. ಇನ್ನು ಅಲ್ಲಿದ್ದು ಅವಕ್ಕೆ ತೊಂದರೆ ಕೊಡುವುದು ಬೇಡವೆಂದು ನಿಧಾನವಾಗಿ ಹೊರಬಂದೆ. ಮೂರು ಗಂಟೆ ಕದಲದೇ ಕುಳಿತಿದ್ದರಿಂದಾಗಿ ಕಾಲು ಜೋಮು ಹಿಡಿದಿತ್ತು. ನಾನು ಹೊರಬಂದದ್ದು ನೋಡಿ ದೂರದಲ್ಲಿದ್ದ ರಮೇಶ ಓಡಿ ಬಂದ. ಆ ಹಳೇ ಬಾವಿಯೊಳಗೆ ಮೆಟ್ಟಿಲುಗಳಿದ್ದವು. ಬಗ್ಗಿ ನೋಡಿದೆವು. ದೊಡ್ಡ ನಾಗರಹಾವೊಂದು ನಿಧಾನವಾಗಿ ಒಳಗಿಳಿಯುತ್ತಿತ್ತು. "ಅಣ್ಣ ಅದು ನಿಮ್ಮ ಪಕ್ಕದಿಂದಲೇ ಹೋಗಿರುತ್ತೆ" ಎಂದ ರಮೇಶ. ನನ್ನ ಕೈಕಾಲು ತಣ್ಣಗಾಗತೊಡಗಿತು!

Sunday, September 21, 2008

ಮುನ್ನಾರ್ ನ ಮೋಹಕ ಭೂದೃಶ್ಯಗಳು

ದೂರದ ಬೆಟ್ಟದ ಮೇಲೆ ಮನೆ. ಮನೆಯ ಹಿಂದೆ ಗೆರೆ ಎಳೆದಂತಿರುವ ನೀಲಗಿರಿ ಮರಗಳು. ಬೆಳಗಿನ ೬-೩೦. ಅರುಣನ ಹೊಂಗಿರಣ ಇವುಗಳ ಮೇಲೆ ಸಿಂಪಡಿಸಿದಂತಿದ್ದ ದೃಶ್ಯಕಾವ್ಯ. ಈ ನಿಸರ್ಗದ ಕಲಾಕೃತಿ ಸೆರೆಹಿಡಿಯಬೇಕೆಂದಿದ್ದರೆ ಕೇರಳದ ಮುನ್ನಾರ್ ಗೆ ಬನ್ನಿ. ಚುಮು ಚುಮು ನಸುಕಿನಲ್ಲಿ ಹಾಸಿಗೆ ಬಿಟ್ಟು ಮೇಲೇಳುವುದು ತುಸು ತಡವಾದರೆ ಸೂರ್ಯ ಮೇಲೆದ್ದು ಕೆಲಸ ಕೆಡಿಸಿಬಿಡುತ್ತಾನೆ. ಎಲ್ಲೆಲ್ಲೂ ಬೆಟ್ಟಂಬೆಳಗು. ಪ್ರಕೃತಿ ನೀಡುವ ಕೆಲವೇ ಕ್ಷಣಗಳಲ್ಲಿ ನಾವು ಹುಷಾರಾಗಿ ಬೇಗ ಬೇಗ ಕ್ಯಾಮೆರಾದಲ್ಲಿ ಸೆರೆ ಹಿಡಿದಿಡಬೇಕಷ್ಟೆ.
ಮುನ್ನಾರ್ ನಲ್ಲಿ ಮೋಡಗಳು ಟಾರ್ಚ್ ರೀತಿ ಕೆಲಸ ಮಾಡುತ್ತವೆ. ಒಮ್ಮೆ ಒಂದು ಬೆಟ್ಟದ ಮೇಲೆ ಇನ್ನೊಮ್ಮೆ ಇನ್ನೊಂದು ಬೆಟ್ಟದ ಮೇಲೆ ಟಾರ್ಚ್ ಲೈಟ್. ದೇವೀಕುಲಂ ಬೆಟ್ಟದ ಮೇಲಿನ ದೇವಸ್ಥಾನದ ಮೇಲೆ ಟಾರ್ಚ್ ಬೆಳಕು ಬೀಳಲೆಂದು ಕಾದಿದ್ದು ಸಾರ್ಥಕ ಕ್ಷಣ.
ಹಾಗೆಯೇ ಒಂದು ಚಿಕ್ಕ ಸಿಲ್ವರ್ ಮರದ ಮೇಲೆ ಬಿದ್ದಾಗ ಸಿಕ್ಕಿದ್ದು ಅದೃಷ್ಟದ ಕ್ಷಣ.
ಅಲ್ಲಿ ಲೋಕ್ಹಾರ್ಟ್ ಗ್ಯಾಪ್ ಮತ್ತು ರಾಕ್ ಕೇವ್ ಬಳಿ ನಿಂತಾಗ ದೂರದಲ್ಲೊಂದು ಸುಂದರ ಮನೆ ಕಾಣುತ್ತದೆ.
ವಾರೆವ್ಹಾ! ಟಾಟಾ ಟೀ ಎಸ್ಟೇಟ್ ನಲ್ಲೊಂದು ಒಣಗಿ ನಿಂತ ಒಂಟಿ ಮರವಿದೆ. ಇನ್ನೊಂದು ಕೋನ ಹುಡುಕುತ್ತ ಟೀ ಗಿಡದ ಮಧ್ಯೆ ನುಸುಳುವಷ್ಟರಲ್ಲಿ ಮೇಘರಾಜ ಆಗಸವನ್ನು ಮುಚ್ಚುವ ಹವಣಿಕೆಯಲ್ಲಿದ್ದ. ಸಿಕ್ಕಷ್ಟೇ ಭಾಗ್ಯ. ನೀಲಗಗನದಲ್ಲಿ ನನಗೆ ಸಿಕ್ಕ ಒಂಟಿ ಮರದ ಸಿಲೌಟ್ ಹೇಗಿದೆ ನೋಡಿ.
ಮುನ್ನಾರ್ ನ ಹವಾಮಾನ ಹೇಗೆಂದರೆ ಅಲ್ಲಿ ಮಳೆ ಬೀಳಲು ಋತು ಬೇಕಿಲ್ಲ. ಆದರೆ ಮಳೆಗಾಲ ಮುಗಿದ ಮೇಲೆ ಹೋಗುವುದೊಳ್ಳೆಯದು. ಆಗ ನೀಲಗಿರಿ ತಾಹ್ರ್(ಬೆಟ್ಟದ ಮೇಕೆ)ಗಳನ್ನೂ ಕ್ಯಾಮೆರಾದಲ್ಲಿ ಶೂಟ್ ಮಾಡಬಹುದು.