Monday, April 26, 2010

ನೆರಳು ಗೊಂಬೆಯಾಟದ ಮೂಲಕ ಪಾಠನಮ್ಮ ತಾಲ್ಲೂಕಿನ ವರದನಾಯಕನಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಲಿಕೆಯನ್ನು ಆಕರ್ಷಣೀಯವಾಗಿಸಲು ನೆರಳುಗೊಂಬೆಯಾಟವನ್ನು ಬಳಸುತ್ತಾರೆ. ವಿಶೇಷವೆಂದರೆ ಇಲ್ಲಿ ಮಕ್ಕಳೇ ಪಾತ್ರಗಳನ್ನು ನಿರ್ದೇಶಿಸುವುದು ಮತ್ತು ಸಂಭಾಷಣೆ ಹೇಳುವುದು ಹಾಗೂ ಪ್ರೇಕ್ಷಕರೂ ಅವರೇ. ಶಿಕ್ಷಕರೇನಿದ್ದರೂ ಅಲ್ಲಲ್ಲಿ ಸಲಹೆ ನೀಡುವುದಷ್ಟೇ.
ಇದಕ್ಕೆ ಬಳಸುವ ಪರಿಕರಗಳೂ ಸರಳವಾಗಿವೆ. ತೆಳುವಾದ ಬಟ್ಟೆಯನ್ನು ಕಟ್ಟುತ್ತಾರೆ. ಕೋಣೆಯನ್ನು ಕತ್ತಲು ಮಾಡಿ ಕಿಟಕಿ ಬೆಳಕನ್ನು ಮಾತ್ರ ಬಳಸುತ್ತಾರೆ. ಗೊಂಬೆಗಳನ್ನು ಮಕ್ಕಳೇ ರಟ್ಟನ್ನು ಕತ್ತರಿಸಿ ತಯಾರಿಸುತ್ತಾರೆ. ಅದಕ್ಕೆ ಕಡ್ಡಿಗಳನ್ನು ಅಂಟಿಸಿರುತ್ತಾರೆ. ಪಾತ್ರಗಳ ಸಂಭಾಷಣೆಯನ್ನು ಮೌಕಿಕವಾಗಿ ವ್ಯಕ್ತಪಡಿಸುತ್ತಾ ಅದಕ್ಕೆ ತಕ್ಕಂತಹ ಅಭಿನಯವನ್ನು ಗೊಂಬೆಗಳ ಮೂಲಕ ತೋರಿಸುವ ವಿದ್ಯಾರ್ಥಿಗಳ ಕ್ರಿಯಾಶೀಲತೆ ಬೆರಗುಹುಟ್ಟಿಸುತ್ತದೆ.
ಪ್ರಾಣಿ ಪಕ್ಷಿಗಳ ಕಥೆಗಳು, ಪಂಚತಂತ್ರದ ಕಥೆಗಳು, ಜಾನಪದ ಕಥೆಗಳು, ಐದನೇ ತರಗತಿಯಲ್ಲಿ ಪಠ್ಯದಲ್ಲಿ ಬರುವ ಶಬರಿ ಮತ್ತು ರಾಮ ಲಕ್ಷ್ಮಣ ಪಾಠ, ಆರನೇ ತರಗತಿಯ ಇಂಗ್ಲೀಷ್‌ನ ಮೌಸ್ ಅಂಡ್ ದಿ ಲಯನ್ ಪಾಠ ಎಲವನ್ನೂ ಮಕ್ಕಳು ಪಾತ್ರಗಳಾಗಿ ಗೊಂಬೆಗಳ ಮೂಲಕ ನೆರಳು ಮೂಡಿಸಿ ನಲಿಯುತ್ತಾರೆ.ನಲಿಕಲಿ ತರಭೇತಿಯಲ್ಲಿ ಮಕ್ಕಳನ್ನು ರಂಜಿಸುತ್ತಾ ಪಾಠ ಹೇಳಲು ನಾನಾ ವಿಧಗಳಿವೆ. ಒತ್ತು ಚಿತ್ರಗಳು, ಊದು ಚಿತ್ರಗಳು, ಮಾರ್ಬಲ್ ಪೇಂಟಿಂಗ್, ಜೋಡಣೆ ಚಿತ್ರಗಳು ಇತ್ಯಾದಿ. ಇವೆಲ್ಲವನ್ನೂ ಬಳಸಿದರೂ ನಮ್ಮ ಶಾಲೆಯ ಮಕ್ಕಳಿಗೆ ಅಚ್ಚುಮೆಚ್ಚಿನದು ಈ ನೆರಳು ಗೊಂಬೆಯಾಟ. ಪರಿಣಾಮಕಾರಿ ಬೋಧನೆಗೆ ಇದು ಸಹಕಾರಿಯಾಗಿದೆ ಎನ್ನುತ್ತಾರೆ ಶಿಕ್ಷಕ ವೆಂಕಟರೆಡ್ಡಿ.
ನೆರಳು ಗೊಂಬೆಯಾಟವನ್ನು ತೊಗಲು ಗೊಂಬೆಯಾಟವೆಂದೂ ಕರೆಯುವರು. ಈ ಕಲೆ ಅತಿ ಪ್ರಾಚೀನವಾದುದು. ಚೀನಾ ಮತ್ತು ಜಪಾನಿನ ಪ್ರಾಚೀನ ಸಾಹಿತ್ಯದಲ್ಲಿ ಇದರ ಪ್ರಸ್ತಾಪ ಬರುತ್ತದೆ. ಕ್ರಿ.ಪೂ. ಮೂರನೆಯ ಶತಮಾನದಲ್ಲಿಯೇ ತೊಗಲು ಗೊಂಬೆಯಾಟವು ಆಂಧ್ರದಲ್ಲಿ ಪ್ರಚಾರದಲ್ಲಿದ್ದುದಕ್ಕೆ ಆಧಾರಗಳಿವೆ. ಈ ಕಲೆ ಶಾತವಾಹನ, ಪಲ್ಲವ, ಚಾಳುಕ್ಯ, ಕಾಕತೀಯ ರಾಜರ ಕಾಲದಲ್ಲಲ್ಲದೆ ವಿಜಯನಗರ, ತಂಜಾವೂರು ರಾಜರುಗಳ ಕಾಲದಲ್ಲಿ ಅತ್ಯಂತ ಉನ್ನತಸ್ಥಿತಿಯನ್ನು ಪಡೆದು ಪ್ರಾಚೀನ ರೇವುಪಟ್ಟಣಗಳಾದ ಕಳಿಂಗಪಟ್ಟಣ, ಜೀಮಾನೀಪಟ್ಟಣ, ಕೋರಂಗಿ, ವಾಡ್ರೇವು ಇವುಗಳ ಮೂಲಕ ವಿದೇಶಗಳಿಗೆ ತೆರಳಿದ ಭಾರತೀಯರೊಡನೆ ಆಗ್ನೇಯ ಏಷ್ಯಾವನ್ನು ಪ್ರವೇಶಿಸಿದವು ಎಂಬ ಅಭಿಪ್ರಾಯವಿದೆ. ಅಲಿಂದ ಈ ಕಲೆ ಪಶ್ಚಿಮಾಭಿಮುಖವಾಗಿ ಪರ್ಶಿಯಾ, ಟರ್ಕಿ ದೇಶಗಳನ್ನು ಹಾಯ್ದು ಗ್ರೀಸ್ ದೇಶವನ್ನು ಪ್ರವೇಶಿಸಿತು. ಗ್ರೀಸಿನಲ್ಲೇ ಹೊಸ ರೂಪತಳೆದು ಉತ್ತರ ಆಫ್ರಿಕಾದಲ್ಲಿ ಮುಸ್ಲಿಂ ದೇಶಗಳಿಗೆ, ಇಟಲಿಗೆ ಮತ್ತು ಅಲ್ಲಿಂದ ಮುಂದೆ ಫ್ರಾನ್ಸ್‌ಗೆ ಕೂಡ ಹರಡಿತು.ವಿದ್ಯಾರ್ಥಿಗಳು ನೆರಳುಗೊಂಬೆಯಾಟದ ಮೂಲಕ ಇಲಿ ಮತ್ತು ಸಿಂಹದ ಕಥೆಯನ್ನು ನಿರೂಪಿಸುತ್ತಿರುವುದು.ಸಾಮಾನ್ಯವಾಗಿ ಹಳ್ಳಿಗಳಲ್ಲಿ ಇಂತಹ ಮನರಂಜನೆಯನ್ನು ಸುಗ್ಗಿಯ ಕಾಲದಲ್ಲಿ, ದುಡಿಮೆಯ ನಂತರ ಫಸಲನ್ನು ಮನೆಯಲ್ಲಿ ತುಂಬಿಕೊಂಡ ಮೇಲೆ ಏರ್ಪಡಿಸುವರು. ಇದಕ್ಕೆ ಸಂಭಾವನೆಯಾಗಿ ಕಲಾವಿದರಿಗೆ ಊರಿನವರು ದವಸ ಧಾನ್ಯಗಳನ್ನು ಸಂಗ್ರಹಿಸಿ ಕೊಡುತ್ತಾರೆ. ರಾಮಾಯಣ, ಮಹಾಭಾರತ, ಭಾಗವತ, ಪುರಾಣ ಹಾಗೂ ಜನಪದ ಕಥೆಗಳಿಂದ ಆಯ್ದ ಭಾಗಗಳನ್ನು ಈ ತೊಗಲು ಗೊಂಬೆಯಾಟದಲ್ಲಿ ಸಾಹಿತ್ಯವಾಗಿ ಬಳಸುವರು. ಇವರು ಬಳಸುವ ವಾದ್ಯ ವಿಶೇಷಗಳು ಮತ್ತು ಹಿಮ್ಮೇಳ ಈ ಕಲೆಯ ಮತ್ತೊಂದು ವೈಶಿಷ್ಟ್ಯ.
ಇಂತಹ ತೆರೆಮರೆಗೆ ಸರಿಯುತ್ತಿರುವ ಜನಪದ ಕಲೆಯನ್ನು ಶಾಲೆಯಲ್ಲಿ ಕಲಿಕೆಯ ಸಾಧನವಾಗಿ ಬಳಸಿರುವುದು ವಿಶೇಷ. ಈ ಕಲೆ ಮಕ್ಕಳನ್ನು ಕಲಿಕೆಯತ್ತ ಸೆಳೆಯುವುದಲ್ಲದೆ ಅವರೇ ಪಾಲ್ಗೊಂಡು ಅನುಭವಿಸಿ ಅಭಿನಯಿಸಲು ಪ್ರೇರೇಪಿಸುತ್ತದೆ. ಇಲಿ ಮಕ್ಕಳೇ ಹೊಸ ಹೊಸ ಕಥೆಗಳನ್ನು ನಿರೂಪಿಸುವುದರಿಂದ ಅವರ ಕ್ರಿಯಾಶೀಲತೆ ಅರಳುತ್ತದೆ.
ವರದನಾಯಕನಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಒಡೆದ ಬಳೆಚೂರು, ಒಣ ಎಲೆ ಹೂವು ಮತ್ತು ಮಾರ್ಬಲ್ ಪೇಂಟಿಂಗ್ ಬಳಸಿ ಹಳೆ ಆಹ್ವಾನಪತ್ರಿಕೆಗಳಲ್ಲಿ ಗ್ರೀಟಿಂಗ್ ಕಾರ್ಡ್ ತಯಾರಿಸಿ ತಮ್ಮಲ್ಲೇ ಹಂಚಿಕೊಳ್ಳುತ್ತಾರೆ.

Wednesday, April 14, 2010

ಕೋಲೆ ಬಸವನಾಟ


ಕೋಲೆ ಬಸವನಾಟದಲ್ಲಿ ಎರಡು ಕಾಲಿನಲ್ಲಿ ನಿಂತ ಬಸವ.


ಇತ್ತೀಚೆಗೆ ನಮ್ಮೂರ ಬಳಿಯ ವರದನಾಯಕನಹಳ್ಳಿ ಗ್ರಾಮದಲ್ಲಿ ಕೋಲೆ ಬಸವನಾಟ ನಡೆಯಿತು. ಆಂಧ್ರಪ್ರದೇಶದ ನಲ್ಲೂರಿನ ಕಡೆಯಿಂದ ಬಂದಿರುವ ರಂಗಪ್ಪ ತನ್ನ ಬಸವ, ಹಸು, ಹೆಂಡತಿ ಮಕ್ಕಳೊಂದಿಗೆ ಈ ಆಟ ಆಡಿಸುತ್ತಾ ಬಂದಿದ್ದರು.
ಪ್ರಾಣಿಗಳಿಗೆ ಕಲಾಭ್ಯಾಸ ಮಾಡಿಸಿ ಪ್ರದರ್ಶನ ಮಾಡುವ ಕಲೆಗಳಲ್ಲಿ “ಕೋಲೆ ಬಸವನಾಟ” ಪ್ರಮುಖವಾದುದು. ಈ ಆಟ ಆಡಿಸುವವರನ್ನು ಕೆಲವು ಕಡೆ ಗಂಗೆತ್ತಿನವರು ಅಥವಾ ಕವಲೆತ್ತಿನವರು ಎಂದು ಕರೆಯುತ್ತಾರೆ. ಮಕ್ಕಳ ಪರಿಭಾಷೆಯಲ್ಲಿ ಬುರ್ ಬುರ್ ಬಸವಣ್ಣ ಎಂದೂ ಹೇಳುವುದುಂಟು. ಪ್ರೇಕ್ಷಕರ ಮನಸ್ಸನ್ನು ಮಂತ್ರಮುಗ್ಧವನ್ನಾಗಿ ಮಾಡುವ ಈ ಕಲೆಯಲ್ಲಿ ಮಾತು ಬಾರದ ಪ್ರಾಣಿ ಮಾನವನ ಮಾತನ್ನು ಅರ್ಥಮಾಡಿಕೊಂಡು ಅದ್ಭುತ ಪ್ರದರ್ಶನ ನೀಡುತ್ತದೆ. ಬುದ್ಧಿ ಸೂಕ್ಷ್ಮತೆ ಮಾನವನಿಗಷ್ಟೇ ಮೀಸಲಲ್ಲ ಎಂಬುದನ್ನು ತೋರಿಸಿಕೊಡುತ್ತದೆ. ‘ಕೋಲೆ ಬಸವ ಆಡಿಸಿದಂತೆ ತಲೆ ಆಡಿಸ್ತೀಯ’ ಎಂಬ ಬಳಕೆಯ ಮಾತು ಈ ಕಲೆಯ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಬಸವನನ್ನಾಡಿಸುವ ಕಲಾವಿದರು ಅರೆ ಅಲೆಮಾರಿಗಳು. ಸಾಮಾನ್ಯವಾಗಿ ಹಳ್ಳಿಯಿಂದ ಹಳ್ಳಿಗೆ ತಿರುಗುವ ಇವರು ಈ ಆಟವನ್ನು ಉಪಕಸುಬನ್ನಾಗಿ ಮಾಡಿಕೊಂಡಿದ್ದಾರೆ. ಇವರ ಮೂಲ ಉದ್ಯೋಗ ವ್ಯವಸಾಯ. ಮಳೆಗಾಲದಲ್ಲಿ ಮೈಬಗ್ಗಿಸಿ ಬೆವರು ಸುರಿಸಿ ದುಡಿದರೂ ಬೇಸಿಗೆಯಲ್ಲಿ ಸುಮ್ಮನೆ ಕುಳಿತಿರುವುದಿಲ್ಲ, ಕೋಲೆ ಬಸವನನ್ನು ಹಿಡಿದುಕೊಂಡು ಹೊರಡುತ್ತಾರೆ.ಮಗುವಿನ ಮೇಲೆ ಪಾದಸ್ಪರ್ಶ ಮಾಡುತ್ತಿರುವ ಬಸವ.

ಈ ಕಲೆಯು ಆಂಧ್ರಪ್ರದೇಶದಲ್ಲಿ ಹೆಚ್ಚು ಬಳಕೆಯಲ್ಲಿದೆ. ಕೋಲೆ ಬಸವನಾಟದ ಕಲೆ ಗೊಲ್ಲರಲ್ಲಿ ವಂಶಪಾರಂಪರ್ಯವಾಗಿ ಬೆಳೆದು ಬಂದಿದೆ. ಇವರನ್ನು ಪೆದ್ದಟ್ಟಿ ಗೊಲ್ಲರು ಎಂದು ಕರೆಯುತ್ತಾರೆ. ಗೊಲ್ಲರಲ್ಲಿ ತಮ್ಮ ಆರಾಧ್ಯ ದೈವವಾದ ಜುಂಜಪ್ಪನೇ ಬಸವನ ರೂಪವನ್ನು ತಾಳಿದ್ದಾನೆ ಎಂಬ ನಂಬಿಕೆಯಿದೆ.
ಈ ಕಲೆಯ ಪ್ರದರ್ಶನಕ್ಕೆ ಸಾಕಷ್ಟು ಪೂರ್ವಭಾವಿ ಸಿದ್ಧತೆ ಮತ್ತು ಪೂರ್ವಾಭ್ಯಾಸ ಬೇಕಾಗುತ್ತದೆ. ಒಂದು ಬಸವನನ್ನು ಪ್ರದರ್ಶನಕ್ಕೆ ಸಿದ್ಧ ಮಾಡಲು ಅನೇಕ ತಿಂಗಳುಗಳ ನಿರಂತರ ಪರಿಶ್ರಮದ ಅಗತ್ಯವಿದೆ. ಎತ್ತುಗಳನ್ನು ಯಾರಾದರೂ ದಾನ ಮಾಡುತ್ತಾರೆ ಇಲ್ಲವೆ ಉತ್ತಮ ರಾಸುಗಳನ್ನು ನೋಡಿ ಇವರೇ ಆಯ್ಕೆ ಮಾಡಿಕೊಳ್ಳುವರು. ಈ ಪ್ರದರ್ಶನವನ್ನು ಒಂದರ್ಥದಲ್ಲಿ ಬೀದಿಯ ನಾಟಕವೆಂದೇ ಹೇಳಬೇಕು. ನಾಟಕದಲ್ಲಿ ವ್ಯಕ್ತಿಗಳು ಪಾತ್ರವಹಿಸಿದರೆ, ಇಲ್ಲಿ ವ್ಯಕ್ತಿಗಳ ಜೊತೆಗೆ ಪ್ರಾಣಿಗಳೂ ಪಾತ್ರವಹಿಸುತ್ತವೆ. ಕಥೆಯನ್ನು ತಮ್ಮದೇ ಆದ ಶೈಲಿಯಲ್ಲಿ ಅಳವಡಿಸಿಕೊಳ್ಳುವ ಕಲಾವಿದರು ತುಂಬಾ ಪ್ರಭಾವಯುತವಾಗಿ ಅದನ್ನು ನಿರೂಪಿಸುತ್ತಾರೆ.
ಒಂದು ಬಸವ ರಾಮನಾದರೆ, ಒಂದು ಹಸು ಸೀತೆಯಾಗುತ್ತದೆ. ರಾಮನ ಒಡೆಯನೊಬ್ಬನಾದರೆ ಸೀತೆಯ ತಂದೆಯಾಗಿ ಒಬ್ಬ ಪಾತ್ರವಹಿಸುತ್ತಾರೆ. ಬಸವನ ಕೊಂಬುಗಳಿಗೆ ಬಣ್ಣಬಣ್ಣದ ಬಟ್ಟೆ ಸುತ್ತಿ ಅವು ಲಕ್ಷಣವಾಗಿ ಎತ್ತರವಾಗಿ ಕಾಣಿಸುವಂತೆ ಮಾಡಿ ಮೇಲೆ ಕುಚ್ಚನ್ನು ಕಟ್ಟಿರುತ್ತಾರೆ. ಹಣೆಯ ಮೇಲೆ ಆಂಜನೇಯನ ಮುದ್ರೆಯಿರುವ ಹಿತ್ತಾಳೆ ತಗಡಿನ ಅಲಂಕಾರವಿರುತ್ತದೆ. ಬಸವನ ಭುಜ(ಮುಡ)ವನ್ನು ಕರಡಿ ಚರ್ಮದಿಂದ ಗೋಪುರದಂತೆ ಹೊದಿಸಿ ಶೃಂಗರಿಸಿರುತ್ತಾರೆ. ಬೆನ್ನ ಮೇಲೆ ಬಣ್ಣಬಣ್ಣದ ಬಟ್ಟೆಗಳು, ಕಾಲುಗಳಿಗೆ ಗೆಜ್ಜೆ, ಕೊರಳಿಗೆ ಗಂಟೆ ಮತ್ತು ಮಣಿಯ ಸರಗಳಿಂದ ಅಲಂಕಾರ ಮಾಡಿರುತ್ತಾರೆ. ಸೀತೆಯ ಹಣೆಗೆ ಕುಂಕುಮ ಇಟ್ಟು ಬೆನ್ನಿನ ಮೇಲೆ ನಾಲ್ಕಾರು ಬಣ್ಣಬಣ್ಣದ ಸೀರೆಗಳನ್ನು ಹೊದಿಸಿರುತ್ತಾರೆ. ಈ ಬಟ್ಟೆಬರೆಗಳು ಸಾಮಾನ್ಯವಾಗಿ ಪ್ರದರ್ಶನದಲ್ಲಿ ಪ್ರೇಕ್ಷಕರು ಕೊಟ್ಟ ಕೊಡುಗೆಗಳು.ಸೀತಾರಾಮರ ಮದುವೆಯ ಸನ್ನಿವೇಶದಲ್ಲಿ ರಾಮನ ಸುತ್ತ ಪ್ರದಕ್ಷಿಣೆ ಬರುತ್ತಿರುವ ಸೀತೆ.

ಕೋಲೆ ಬಸವನಾಟಕ್ಕೆ ಡೋಲು, ನಾಗಸ್ವರ, ಮುಖವೀಣೆ ವಾದ್ಯಗಳನ್ನು ಬಳಸುತ್ತಾರೆ. ಕೆಲವು ಹಾಡುಗಳನ್ನು ಸನ್ನಿವೇಶಕ್ಕೆ ತಕ್ಕಂತೆ ನಾಗಸ್ವರದಲ್ಲಿ ನುಡಿಸುತ್ತಾರೆ. ವಾದ್ಯಗಳ ನಾದಕ್ಕೆ ಅನುಗುಣವಾಗಿ ಗಂಭೀರ ಗತ್ತಿನಲ್ಲಿ ನಡೆಯುವ ಬಸವನ ಅಭಿನಯ ನೋಡಲು ಮನಮೋಹಕವಾಗಿರುತ್ತದೆ. ಕುಣಿಯುವ ಬಸವನ ಕಾಲಿಗೆ ಕಟ್ಟಿರುವ ಗೆಜ್ಜೆಗಳು ಘಲ್ ಘಲ್ ಎಂದು ಸದ್ದು ಮಾಡುವುದು ಪ್ರದರ್ಶನಕ್ಕೇ ಸೊಗಸು. ಹಳ್ಳಿಗಳಲ್ಲಿ ಬಸವನನ್ನಾಡಿಸುವವರು ಬಂದಿದ್ದಾರೆ ಎಂದರೆ ಮಕ್ಕಳು ಸುತ್ತಲೂ ಸೇರಿಕೊಂಡು ಸಿಳ್ಳು, ಕೇಕೆ ಹಾಕುತ್ತಾ ಕುಣಿಯುತ್ತಾರೆ.
ಕೋಲೆ ಬಸವನ ಆಟದಲ್ಲಿ ಸೀತಾರಾಮರ ಮದುವೆಯ ಸನ್ನಿವೇಶವಂತೂ ಪ್ರೇಕ್ಷಕರನ್ನು ಬೆರಗುಗೊಳಿಸುವಂತಹುದು. ವಿವಾಹಕ್ಕೆ ಮೊದಲು ಸೀತೆ ಒಂದು ಕಡೆ ರಾಮ ಒಂದು ಕಡೆ ನಿಂತಿರುತ್ತಾರೆ. ಆಗ ಸೀತೆಯ ತಂದೆ “ನೋಡು ಸೀತಮ್ಮ, ರಾಮದೇವರು ನಿನ್ನ ಮದುವೆ ಆಗಬೇಕೂಂತ ಕೇಳ್ತಾರೆ. ನಿನ್ನ ರೂಪಕ್ಕೆ ಅವರು ಸೋತಿದ್ದಾರೆ. ಮದುವೆಯಾಗ್ತೀಯೇನಮ್ಮಾ? ಅವರು ನೋಡೋಕೆ ಮನ್ಮಥನ ಥರಾ ಇದಾರೆ” ಎಂದು ಕೇಳಿದಾಗ “ಇಲ್ಲ” ಎಂದು ತಲೆಯಲ್ಲಾಡಿಸಿ ಸೀತಮ್ಮ ತನ್ನ ಅಸಮ್ಮತಿಯನ್ನು ಸೂಚಿಸುತ್ತದೆ. ಆಗ ಒಡವೆಯ ಬಗ್ಗೆ, ಸೀರೆಯ ಬಗ್ಗೆ ಆಸೆ ತೋರಿಸುತ್ತಾರೆ. ಆಗ ಸೀತೆ ಆಗಲೆಂಬಂತೆ ತಲೆ ಹಾಕುತ್ತದೆ. ನಡುವೆ ಸಂಧಾನ ಮಾಡುವ ಹಾಸ್ಯದ ಮಾತುಗಳನ್ನಾಡುವ ಕಲಾವಿದರಿಂದ ಆಟಕ್ಕೆ ರಂಗೇರುತ್ತದೆ. ರಾಮನನ್ನು ಪರಿಚಯ ಮಾಡಿಕೊಟ್ಟು ಧಾರೆಯೆರೆಯಲು ಗಂಡಿನ ಕಡೆಯವರನ್ನು ಕರೆಯುತ್ತಾರೆ. ಸೀತೆ ಸಹಜ ನಾಚಿಕೆಯಿಂದ ತಲೆತಗ್ಗಿಸಿಕೊಂಡು ಮೆಲ್ಲನೆ ಬಂದು ರಾಮನ ಪಕ್ಕದಲ್ಲಿ ನಿಲ್ಲುತ್ತದೆ. ಆಗ ಮಂಗಳವಾದ್ಯಗಳು ಮೊಳಗುತ್ತವೆ. ಧಾರೆಯೆರೆದ ಮೇಲೆ ರಾಮನ ಸುತ್ತ ಸೀತೆ ಮೂರು ಸುತ್ತು ಸುತ್ತುವುದು, ಸಪ್ತಪದಿ ನಡೆಯುವುದು ನಿಜಕ್ಕೂ ಹೃದಯಸ್ಪರ್ಶಿ.
ಮೊದಲು ಸಂಜೆವೇಳೆಗಳಲ್ಲಿ ಪ್ರದರ್ಶನ ನೀಡುತ್ತಿದ್ದರು. ಈಗ ಟಿ.ವಿ. ಸಂಸ್ಕೃತಿಯಿಂದಾಗಿ ಸಂಜೆ ಜನ ಸೇರುವುದು ಕಡಿಮೆ. ಈ ವೃತ್ತಿಯನ್ನು ಯಾವುದೇ ಕಾರಣಕ್ಕೂ ಬಿಡುವಂತಿಲ್ಲ. ಬಿಟ್ಟರೆ ಮನೆಯಲ್ಲಿ ಏನಾದರೂ ತೊಂದರೆಯಾಗುವುದು. ಆದರಿಂದ ಎಷ್ಟೇ ಶ್ರೀಮಂತರಾದರೂ ವರ್ಷಕ್ಕೆ ಒಂದು ದಿನವಾದರೂ ಬಸವನ ಭಜನೆ ಮಾಡಿಸಲೇಬೇಕೆಂಬುದು ನಮ್ಮ ತಾತನ ಕಾಲದಿಂದಲೂ ಕಂಡುಕೊಂಡ ಸತ್ಯ. ನಮಗೆ ಬಸವನೇ ದೇವರು. ಆತನ ಸೇವೆಯಿಂದಲೇ ನಮ್ಮ ಜೀವನ ಎನ್ನುತ್ತಾರೆ ರಂಗಪ್ಪ.ಸೀತಾರಾಮರ ಮದುವೆಯ ಸನ್ನಿವೇಶ.

ಈ ಕಲಾವಿದರು ಬಸವನೊಂದಿಗೆ ಮನೆಮನೆಗೂ ಹೋಗುತ್ತಾರೆ. ಮನೆ ಹೆಣ್ಣು ಮಕ್ಕಳು ಸೀತಾ ರಾಮರಿಗೆ ಕುಂಕುಮವಿಟ್ಟು, ಗಂಧದಕಡ್ಡಿ ಹಚ್ಚಿ ಬೆಳಗಿ ಹುರುಳಿ ಹಿಟ್ಟು ಅಥವಾ ರಾಗಿ ಹಿಟ್ಟು ಕಲಸಿ ಕೊಡುತ್ತಾರೆ. ಕಲಾವಿದರಿಗೆ ಶಕ್ತ್ಯಾನುಸಾರ ರಾಗಿ, ಜೋಳ, ಅಕ್ಕಿಯನ್ನು ಕೊಟ್ಟು ಕಳುಹಿಸುತ್ತಾರೆ. ಮನರಂಜನೆಯ ದೃಷ್ಟಿಯಿಂದ ಕೋಲೆ ಬಸವನ ಆಟ ಎಲ್ಲರಿಗೂ ಅಚ್ಚುಮೆಚ್ಚು. ಬಸವ, ಹಸುಗಳೊಡನೆ ಅವಿನಾಭಾವ ಸಂಬಂಧ ಬೆಸಿಕೊಂಡಿರುವ ರೈತರಿಗೆ ಇದು ಭಕ್ತಿ, ಮನರಂಜನೆ ಹಾಗೂ ನೀತಿ ಬೋಧಿಸುವ ಮಾಧ್ಯಮವಾಗಿದೆ. ಕೌಲೆತ್ತಿನವರ ತೆಲುಗು ಕನ್ನಡ ಮಿಶ್ರ ಭಾಷೆ ವಿಚಿತ್ರವೆನಿಸಿದರೂ ಭಾವಪೂರ್ಣತೆಯಿಂದಿದ್ದು ಎಲ್ಲರ ಮನಮುಟ್ಟುತ್ತದೆ. ರಾಮ ಸೀತೆಯರ ಮದುವೆ ಹಳ್ಳಿಯ ಮದುವೆಯ ಸಮಗ್ರ ಸಂಕೇತವಾಗಿರುತ್ತದೆ.

Saturday, April 3, 2010

ತೊಗಲು ಗೊಂಬೆಯಾಟ
ಬಾಗೇಪಲ್ಲಿ ತಾಲ್ಲೂಕಿನ ತಿಮ್ಮಪಲ್ಲಿಯಿಂದ ಬಂದಿರುವ ಶಿಂದೆ ರಾಮಮೂರ್ತಿ(೯೯೮೦೯೮೦೩೮೩) ತನ್ನ ಟಿಲ್ಲರಿನಲ್ಲಿ ತೊಗಲು ಗೊಂಬೆಯಾಟದ ಪರಿಕರಗಳನ್ನು ಹೊತ್ತು ತಂದು ವರದನಾಯಕನಹಳ್ಳಿ ಗ್ರಾಮದಲ್ಲಿ ಬೀಡುಬಿಟ್ಟಿದ್ದಾನೆ. ಮಳೆಗಾಲ ಬಿಟ್ಟರೆ ವರ್ಷ ಪೂರ ಅಲೆಮಾರಿಯಾಗಿ ಈತ ಸುತ್ತುತ್ತಿರುತ್ತಾನೆ. ಸರ್ಕಾರದ ಕರಕುಶಲಕಲೆಯ ಮುಖ್ಯ ಕಚೇರಿಯಿಂದ ಈತನಿಗೆ ಗುರಿತಿನ ಪತ್ರ ನೀಡಿದ್ದಾರೆ. ತೆಲುಗು ಭಾಷೆಯಲ್ಲಿ ರಾಮಾಯಣದಲ್ಲಿ ಬರುವ ಸುಂದರ ಖಾಂಡ, ಮೈರಾವಣ ಚರಿತ್ರೆ, ಸತಿ ಸುಲೋಚನಾ, ಲಕ್ಷ್ಮಣ ಮೂರ್ಚೆ ಪ್ರಸಂಗ ಇತ್ಯಾದಿ ಕಥೆಗಳನ್ನು ಆಡಿಸುವರು.

ತಬಲಾ, ಹಾರ್ಮೋನಿಯಂ, ಮೈಕ್ ಮತ್ತು ಆರು ಜನ ಸದಸ್ಯರುಗಳ ತಂಡ ಈ ಪ್ರದರ್ಶನ ನೀಡುವರು. ಪ್ರತಿ ಪ್ರದರ್ಶನಕ್ಕೆ ೪೦೦೦ ರೂ ಪಡೆಯುವ ಇವರು ಬರಿಯ ಆಟದಿಂದ ಬದುಕು ಸಾಗುವುದು ಕಷ್ಟವೆಂದು ಈಗೀಗ ಚಿಕ್ಕ ಆಕಾರದ ತೊಗಲು ಗೊಂಬೆಗಳನ್ನು ಮಾಡಿ ನಗರಗಳಲ್ಲಿ ೨೦೦ ರೂಗಳಂತೆ ಮಾರಾಟಮಾಡುತ್ತಿರುವರು. ವಿದೇಶೀಯರು ಹೆಚ್ಚಾಗಿ ಇವನ್ನು ಖರೀದಿಸುವರು.

ಕರ್ನಾಟಕದ ಗೊಂಬೆಯಾಟದ ಪ್ರಕಾರಗಳಲ್ಲಿ ತೊಗಲು ಗೊಂಬೆಗೆ ವಿಶಿಷ್ಟ ಸ್ಥಾನವಿದೆ. ಇದು “ಸಿಳ್ಳೆಕ್ಯಾತ” ಎಂಬ ಜನರಲ್ಲಿ ವಂಶಪಾರಂಪರ್ಯವಾಗಿ ಬೆಳೆದು ಬಂದಿರುವ ಉದ್ಯೋಗಿ ಕಲೆ. ಈ ಸಿಳ್ಳೆಕ್ಯಾತ ಅಥವಾ ಕಿಳ್ಳೆಕ್ಯಾತ ಜನಾಂಗ ಮೂಲತಃ ರತ್ನಗಿರಿ ಜಿಲ್ಲೆಗೆ ಸೇರಿದವರು. ಇವರು ಮರಾಠಿ ಮಿಶ್ರಿತ ತೆಲುಗು ಅಥವಾ ಕನ್ನಡ ಮಾತನಾಡುತ್ತಾರೆ. ತೊಗಲು ಗೊಂಬೆಯಾಡಿಸುವವರನ್ನು ಕಿಳ್ಳೆಕ್ಯಾತರು, ಸಿಳ್ಳೆಕ್ಯಾತರು, ಗೊಂಬೆರಾಮರು, ಗೊಂಬೆಯೋರು ಎಂಬ ಹಲವಾರು ಹೆಸರಿನಿಂದ ಕರೆಯುತ್ತಾರೆ. ತೆಲುಗಲ್ಲಿ ಇವರನ್ನು ಬೊಮ್ಮಲಾಟವಾಳ್ಳು ಎನ್ನುವರು.
ಇವರ ಮನೆ ಮಾತು ಮರಾಠಿ. ಮಹಾರಾಷ್ಟ್ರದ ಕಡೆಯಿಂದ ವಲಸೆ ಬಂದ ಜನ ಇವರು ಎಂಬುದಕ್ಕೆ ಸಾಕಷ್ಟು ಆಧಾರಗಳು ಸಿಗುತ್ತವೆ. ವಲಸೆ ಬರಲು ಕಾರಣವೇನೇ ಇರಲಿ, ಇವರು ಬಂದ ಕಡೆಯೇ ಹೊಂದಿಕೊಂಡಿರುವುದಂತೂ ನಿಜ. ತೊಗಲು ಗೊಂಬೆಯಾಟ ಉದ್ಯೋಗಿ ಕಲೆಯಾದ್ದರಿಂದ ಇವರು ಒಂದೆಡೆ ನೆಲೆಸಲು ಸಾಧ್ಯವಾಗುವುದಿಲ್ಲ. ಇವರು ಹಳ್ಳಿ ಹಳ್ಳಿಗೆ ಗೊಂಬೆಗಳನ್ನು ಹೊತ್ತುಕೊಂಡು ಹೋಗಿ ಆಡಿಸಿ ಜನರನ್ನು ಸಂತೋಷಪಡಿಸಿ ಅವರು ನೀಡಿದ ಮರಿ, ಕುರಿ, ದವಸ, ಧಾನ್ಯ, ಹಣ ಮುಂತಾದ ಕಾಣಿಕೆಗಳನ್ನು ಸಂಗ್ರಹಿಸಿ ಜೀವನ ಸಾಗಿಸುತ್ತಾರೆ.
ಇವರು ಎಲಾ ಸಂದರ್ಭಗಳಲ್ಲೂ ಒಂದೇ ರೀತಿಯ ಆಟ ಪ್ರದರ್ಶಿಸುವುದಿಲ್ಲ. ತಿಥಿ ಸಂದರ್ಭದಲ್ಲಿ ಸ್ವರ್ಗಾರೋಹಣ ಪ್ರಸಂಗ, ಮದುವೆ ಮತ್ತಿತರ ಸಂದರ್ಭದಲ್ಲಿ ಗಿರಿಜಾ ಕಲ್ಯಾಣ ಪ್ರಸಂಗ ಆರಿಸಿಕೊಳ್ಳುತ್ತಾರೆ. ಮಳೆ ಬರದೆ ಕ್ಷಾಮ ಒದಗಿದಾಗ ಮಳೆ ಹುಯ್ಯಲಿ ಎಂದು ತೊಗಲು ಗೊಂಬೆ ಆಟ ಆಡಿಸುವುದುಂಟು. ಕಲಾವಿದರು ಅನೇಕ ಆಟಗಳ ಸಾಹಿತ್ಯವನ್ನು ಬಾಯಿಪಾಠ ಮಾಡಿಕೊಂಡಿರುತ್ತಾರೆ. ಆರಂಭದಲ್ಲೂ ಗಣೇಶನ ಪೂಜೆ, ಮುಕ್ತಾಯದಲ್ಲೂ ಗಣೇಶನ ಪೂಜೆ ಸ್ತುತಿ ಇರುತ್ತದೆ. ಕಲಾಪ್ರದರ್ಶನದಲ್ಲಿ ಹೆಂಗಸರೂ ಭಾಗವಹಿಸುತ್ತಾರೆ. ಸ್ತ್ರೀ ಪಾತ್ರಗಳ ಗೊಂಬೆಗಳನ್ನು ಕುಣಿಸುವಲ್ಲಿ ಹಾಡು ಮತ್ತು ಸಂಭಾಷಣೆಗಳಿಗೆ ಸ್ತ್ರೀಯೇ ಕಂಠದಾನ ಮಾಡುತ್ತಾಳೆ.ಮೊದಲು ಗೊಂಬೆರಾಮರು ತೊಗಲು ಗೊಂಬೆಯನ್ನು ಜಿಂಕೆಯ ಚರ್ಮದಿಂದ ಮಾಡುತ್ತಿದ್ದರು. ಆದರೆ ಈಗ ಮೇಕೆಯ ಚರ್ಮ ಬಳಸುವರು. ತೊಗಲು ಗೊಂಬೆ ಆಡಿಸುವುದು ಒಂದು ಕಲೆಯಾದರೆ ಆ ಗೊಂಬೆ ಮಾಡುವುದೂ ಒಂದು ಕುಶಲ ಕಲೆ. ಚರ್ಮ ಹದಮಾಡಿ ಒಣಗಿಸಬೇಕು. ಪಾತ್ರಗಳ ಲಕ್ಷಣ ಹಾಗೂ ಔಚಿತ್ಯಕ್ಕೆ ತಕ್ಕಂತೆ ತೊಗಲನ್ನು ಕತ್ತರಿಸಿ ಯಾವ ಪಾತ್ರಗಳಿಗೆ ಯಾವ ಬಣ್ಣ ಹಾಕಬೇಕು ಎಂಬುದನ್ನು ನೋಡಿಕೊಂಡು ಬಣ್ಣ ಹಾಕುತ್ತಾರೆ. ಬಿದಿರಿನ ಕಡ್ಡಿಯನ್ನು ಪೆನ್ನಿನ ರೀತಿಯಲ್ಲಿ ಬಳಸಿ ಚಿತ್ರಗಳ ರೂಪ ರಚಿಸುತ್ತಾರೆ. ವಿವಿಧ ರೀತಿಯ ಸಣ್ಣ ಉಳಿಗಳನ್ನು ಬಳಸಿ ಚಿತ್ರಗಳಲ್ಲಿ ಬೇಕಾದ ಕಡೆ ರಂಧ್ರ ಮಾಡಿ ಬೆಳಕು ತೂರಿ ಬರುವಂತೆ ಮಾಡುತ್ತಾರೆ. ಗೊಂಬೆಗಳು ಚಲಿಸುವಂತೆ ಅನುಕೂಲವಾಗಲು ಕೈ ಕಾಲು ಕತ್ತುಗಳಿಗೆ ಕೀಲುಗಳಿರುತ್ತವೆ. ಕೈಚಳಕದಿಂದ ಆಡಿಸಲು ಹಿಂದಕ್ಕೆ ಬಿದಿರಿನ ಕಡ್ಡಿಯನ್ನು ಕಟ್ಟಿರುತ್ತಾರೆ. ಗೊಂಬೆಯಾಡಿಸುವುದು ಆಡಿಸುವವನ ಕೈಚಳಕದ ಮೇಲೆ ನಿಂತಿರುತ್ತದೆ. ಗೊಂಬೆಗಳು ಸುಮಾರು ಎರಡು ಮೂರು ಅಡಿ ಎತ್ತರ ಇರುತ್ತವೆ. ಕೆಲವೆಡೆ ಮಾನವಾಕೃತಿಯ ಅಳತೆಯ ಗೊಂಬೆಗಳು ಇರುವುದೂ ಉಂಟು. ಗೊಂಬೆಗಳು ನೋಟಕ್ಕೆ ಪುರಾಣ ಪುರುಷರ ಕಲ್ಪನೆ ಉಂಟುಮಾಡುತ್ತದೆ. ಗೊಂಬೆಗಳನ್ನು ತಯಾರಿಸುವಾಗ ಪಾತ್ರದ ಹಿರಿಮೆ, ಗಂಭೀರತೆ, ಜನ್ಮಕಾಲ, ಬೆಳವಣಿಗೆ ಕಾಲ ಹೀಗೆ ವಿವಿಧ ಹಂತಗಳಿಗೆ ಅನುಗುಣವಾಗಿ ಅವುಗಳ ಆಕಾರವೂ ಸಹ ಬದಲಾವಣೆ ಹೊಂದುತ್ತದೆ.
ಎಂಟರಿಂದ ಹತ್ತು ಬಿದಿರು ಗಳಗಳನ್ನು ಬಳಸಿ ಮಂಟಪದ ರೀತಿ ರಚಿಸಿ ಉದ್ದದ ಬಿಳಿ ಬಟ್ಟೆ ಸುಕ್ಕಿರದಂತೆ ಕಟ್ಟುತ್ತಾರೆ. ಪೆಟ್ರೋಮ್ಯಾಕ್ಸ್ ಇಲ್ಲವೇ ವಿದ್ಯುಚ್ಛಕ್ತಿ ದೀಪದ ಬಳಕು ಬಳಸುತ್ತಾರೆ. ತೆರೆಯ ಹಿಂದೆ ಕುಳಿತ ಕಲಾವಿದರು ಯಾರೂ ಪ್ರೇಕ್ಷಕರಿಗೆ ಕಾಣಿಸುವುದಿಲ್ಲ. ತೆರೆಯ ಮೇಲೆ ಪಡಿನೆಳಲಾಗುವ ಗೊಂಬೆಗಳನ್ನು ಬಿಟ್ಟು ಉಳಿದ ಗೊಂಬೆಗಳು ಯಾರಿಗೂ ಕಾಣುವುದಿಲ್ಲ. ಈ ಆಟ ಜನಸಾಮಾನ್ಯರಿಗೆ ಸುಲಭವಾಗಿ ಪೌರಾಣಿಕ ಕಥೆಗಳನ್ನು ಹೇಳುವ ಮಾಧ್ಯಮ.
ತೊಗಲು ಗೊಂಬೆಯಾಟ ಆಡಿಸಿದರೆ ಊರಿಗೆ ತಗುಲಿದ ರೋಗ ರುಜಿನ ಅನಿಷ್ಟಗಳು ತೊಲಗುತ್ತವೆಂದು, ಮಳೆ ಬಾರದಿದ್ದಾಗ ಆಡಿಸಿದರೆ ಮಳೆ ಬೀಳುವುದೆಂದು ಜನರಲ್ಲಿ ನಂಬಿಕೆಯಿದೆ. ರಾತ್ರಿ ೯ ರಿಂದ ಪ್ರಾರಂಭಿಸಿ ಮಧ್ಯರಾತ್ರಿ ೨ ಅಥವಾ ೩ ಗಂಟೆಯವರೆಗೂ ಆಟ ನಡೆಯುತ್ತದೆ.
ವರದನಾಯಕನಹಳ್ಳಿ ಗ್ರಾಮದಲ್ಲಿ ಅಪರೂಪದ ಜನಪದ ಕಲೆ ತೊಗಲುಗೊಂಬೆಯಾಟ ರಾತ್ರಿ ೧೦ ಗಂಟೆಗೆ ಪ್ರಾರಂಭವಾಗಿ ಮುಗಿಯುವಷ್ಟರಲ್ಲಿ ಮಧ್ಯರಾತ್ರಿ ೧.೩೦ ಆಗಿತ್ತು. ಶಿಂದೆ ರಾಮಮೂರ್ತಿ ತನ್ನ ಹೆಂಡತಿ ಮತ್ತು ಮಗನೊಂದಿಗೆ ರಾಮಾಯಣದ ಸುಂದರಕಾಂಡದ ಪ್ರಸಂಗವನ್ನು ಹಾರ್ಮೋನಿಯಂ ಮತ್ತು ತಬಲದ ಹಿಮ್ಮೇಳದೊಂದಿಗೆ ತೆಲುಗಿನಲ್ಲಿ ಸುಶ್ರಾವ್ಯವಾಗಿ ಹಾಡುತ್ತಾ ನಡೆಸಿಕೊಟ್ಟರು. ಸುತ್ತಮುತ್ತಲಿನ ಗ್ರಾಮಗಳಿಂದ ಹೆಂಗಸರು, ಮಕ್ಕಳು, ವೃದ್ಧರು ಎಲರೂ ಬಂದು ತೊಗಲುಗೊಂಬೆಯಾಟದ ಮೋಜನ್ನು, ಮನರಂಜನೆಯನ್ನು ಅನುಭವಿಸಿದರು.ಈ ಕಲೆಯ ಪ್ರದರ್ಶನಕ್ಕೆ ವಿಶಿಷ್ಟ ರಂಗಸಜ್ಜಿಕೆ ಬೇಕು. ಎತ್ತರದ ವೇದಿಕೆ ಮೇಲೆ ಸುಮಾರು ೮ ಅಡಿ ಅಗಲ, ೮ ಅಡಿ ಉದ್ದ ಮತ್ತು ೮ ಅಡಿ ಎತ್ತರ ಇರುವಂತೆ ಮಂಟಪ ರಚಿಸಿ, ಎರಡು ಮೊಳ ಅಗಲ ೯ ಮೊಳ ಉದದ ಬಿಳಿ ಬಟ್ಟೆಯನ್ನು ಮುಂಭಾಗಕ್ಕೆ ಕಟ್ಟಿರುತ್ತಾರೆ. ಮಂಟಪದ ಉಳಿದ ಮೂರು ಬದಿಗಳನ್ನು ಚಾಪೆ ಅಥವಾ ಕಂಬಳಿಗಳಿಂದ ಮುಚ್ಚುತ್ತಾರೆ.
ಒಬ್ಬ ಏಕಕಾಲದಲ್ಲಿ ಎರಡು ಗೊಂಬೆಗಳನ್ನು ಆಡಿಸಬಲ್ಲ. ಆಡಿಸುವ ಗೊಂಬೆಗಳಿಗೆ ಮೂರು ಸೂತ್ರದ ಕಡ್ಡಿಗಳಿರುತ್ತವೆ. ಕಡ್ಡಿಗಳನ್ನು ಬೆರಳುಗಳಿಗೆ ಸಿಕ್ಕಿಸಿಕೊಂಡು ಚಮತ್ಕಾರಯುತವಾಗಿ ಕುಣಿಸುತ್ತಾರೆ. ಪರದೆಯ ಹಿಂದೆ ಕುಣಿಯುವ ಈ ಬಣ್ಣದ ಗೊಂಬೆ ಬಿಳಿ ತೆರೆಯ ಮೇಲೆ ಪಡಿ ಮೂಡುವಂತೆ ತೆರೆಯ ಹಿಂಭಾಗದಲ್ಲಿ ವಿದ್ಯುಚ್ಛಕ್ತಿ ದೀಪ ಬಳಸಿ ಮಂದವಾದ ಬೆಳಕು ನೀಡುವ ವ್ಯವಸ್ಥೆ ಮಾಡಿರುತ್ತಾರೆ. ತೆರೆಯ ಹಿಂದೆ ಕುಳಿತ ಕಲಾವಿದರು ಯಾರೂ ಪ್ರೇಕ್ಷಕರಿಗೆ ಕಾಣಿಸುವುದಿಲ್ಲ. ತೆರೆಯ ಹಿಂದೆ, ಕಥೆಗೆ ತಕ್ಕಂತೆ ಗೊಂಬೆಗಳನ್ನು ಜೋಡಿಸಿಟ್ಟುಕೊಂಡಿರುತ್ತಾರೆ. ತೆರೆಯ ಮೇಲೆ ಮೂಡುವ ಗೊಂಬೆಗಳನ್ನು ಬಿಟ್ಟು ಉಳಿದ ಗೊಂಬೆಗಳು ಯಾರಿಗೂ ಕಾಣುವುದಿಲ್ಲ.
ಆರಂಭದಲ್ಲಿ ಗಣೇಶನ ಸ್ತುತಿಯೊಂದಿಗೆ ಗಣಪತಿಯ ಗೊಂಬೆಯನ್ನು ಕುಣಿಸುತ್ತಾರೆ. ಅನಂತರ ಕಥಾ ಪ್ರಸಂಗ ಪ್ರಾರಂಭವಾಗುತ್ತದೆ. ತೊಗಲುಗೊಂಬೆಯಾಟದಲ್ಲಿ ಯುದ್ಧ ಸನ್ನಿವೇಶಗಳಂತೂ ಅತ್ಯಂತ ಕುತೂಹಲಕಾರಿಯಾಗಿರುತ್ತದೆ. ತೊಗಲುಗೊಂಬೆಯ ತಲೆ, ಎದೆ, ಕೈ ಕಾಲುಗಳು ಬೇರೆ ಬೇರೆಯಾಗಿದ್ದು ಅವನ್ನು ದಾರಗಳಿಂದ ಜೋಡಿಸಲಾಗಿರುವುದರಿಂದ ಇಂತಹ ಪ್ರದರ್ಶನಕ್ಕೆ ಅನುಕೂಲ. ಕೈಕಾಲುಗಳು, ಮುಂಡ, ತಲೆ ಇವುಗಳು ಸರಿದಾಡುವಂತೆ ಅವುಗಳಿಗೆ ಬಿದಿರಿನ ಅಥವಾ ಈಚಲ ಕಡ್ಡಿಗಳನ್ನು ಜೋಡಿಸಿರುತ್ತಾರೆ.
ಕಲಾವಿದರು ಯಾವುದೇ ಪ್ರಸಂಗದಲ್ಲಾಗಲಿ ಮಧ್ಯೆ ಮಧ್ಯೆ ಬಂಗಾರಕ್ಕ, ಕಿಳ್ಳೇಕ್ಯಾತ, ಪಿಳ್ಳಿಜುಟ್ಟು ಮುಂತಾದ ಹಾಸ್ಯ ಪಾತ್ರಗಳನ್ನು ತರಲು ಮರೆಯುವುದಿಲ್ಲ. ಪ್ರೇಕ್ಷಕರು ತೂಕಡಿಸುವಾಗ ಕೆಲವು ಪಾತ್ರಗಳು ಆರ್ಭಟ ಮಾಡಿಕೊಂಡು ಬರುತ್ತವೆ. ಕೊನೆಯ ತನಕ ಪ್ರೇಕ್ಷಕರ ಆಸಕ್ತಿಯನ್ನು ಕಾಯ್ದುಕೊಳ್ಳಲು ಮತ್ತು ಬೇಸರವನ್ನು ನಿವಾರಿಸಿ ಮನರಂಜನೆ ನೀಡಲು ಈ ಪಾತ್ರಗಳು ಮುಖ್ಯ ಪಾತ್ರ ವಹಿಸುತ್ತವೆ. ಕೆಲವು ಸಮಯದಲ್ಲಿ ಅಶ್ಲೀಲವೆನಿಸಬಹುದಾದ ಹಾಸ್ಯವನ್ನು ತಂದು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿಬಿಡುತ್ತಾರೆ. ನಿರ್ಜೀವ ಗೊಂಬೆಗಳು ಜೀವತಳೆದು ಬೆಡಗಿನ ಪ್ರತಿಲೋಕವನ್ನೇ ಸೃಷ್ಟಿಸುವುದು ಇಲ್ಲಿನ ಅನನ್ಯ ತಂತ್ರಗಾರಿಕೆ. ಈ ಆಟವು ವಿಜ್ಞಾನ, ತಂತ್ರಜ್ಞಾನ, ಕಲೆ, ಸಾಹಿತ್ಯ, ಸಂಸ್ಕೃತಿ ಎಲ್ಲವೂ ಹದವಾಗಿ ಮೇಳೈಸಿರುವ ಅಪರೂಪದ ಕಲಾಸೃಷ್ಟಿ.ಹಗಲಿನ ಬೆಳಕಿನಲ್ಲಿ ನೋಡಿದಾಗ ತೀರಾ ಸಾಮಾನ್ಯವೆನಿಸುವ ತೊಗಲುಗೊಂಬೆಗಳು ಕಲಾಸಕ್ತರನ್ನು ತೀವ್ರವಾಗಿ ಸೆಳೆಯುವುದು, ತಮ್ಮ ಬೆಡಗನ್ನು ಮೆರೆಯುವುದು ದೀಪದ ಬೆಳಕಿನಲ್ಲಿ. ಬಿಳಿ ಪರದೆಯ ಮೇಲೆ ಬಂದಾಗ ಯಾವುದೇ ವಸ್ತು ತನ್ನಿಂತಾನೇ ಅದ್ಭುತವಾಗುವುದಿಲ್ಲ. ಪ್ರತಿಭಾವಂತನ ಕೈಗೆ ಸಿಕ್ಕಾಗ ಮಾತ್ರ ಅದರ ವಿಶಿಷ್ಟ ಸಾಧ್ಯತೆ ತೆರೆದುಕೊಳ್ಳುತ್ತದೆ. ಆಟಗಾರನ ಅನುಭವ, ಕರಕೌಶಲ್ಯಗಳು ಹೊಸ ಮಾಯಾಲೋಕವನ್ನು ಸೃಷ್ಟಿಸುವುದನ್ನು ನೋಡಿಯೇ ಅನುಭವಿಸಬೇಕು. ನವರಸಗಳನ್ನು ಮೈದುಂಬಿಕೊಳ್ಳುವ ತೊಗಲುಗೊಂಬೆ ಕಲಾವಿದ ಯಾವುದೇ ಸನ್ನಿವೇಶವನ್ನು ಪ್ರೇಕ್ಷಕರ ಮನಮುಟ್ಟುವಂತೆ ನಿರೂಪಿಸುವಲ್ಲಿ ಸಿದ್ಧಹಸ್ತನಾಗಿರುತ್ತಾನೆ.
ಗೊಂಬೆಗಳಲ್ಲಿನ ವಿಶೇಷ ಆಕರ್ಷಣೆಗಳಲ್ಲಿ ಅವುಗಳ ಬಣ್ಣ, ಹೊಳೆಯುವ ಆಭರಣ, ಮಣಿಸರ ಇತ್ಯಾದಿಗಳು. ಕೆಲವೇ ಬಣ್ಣಗಳನ್ನು ಬಳಸಿಕೊಂಡು ಬೆಡಗು, ಸಂಕೀರ್ಣತೆಯ ಅನುಭವ ಕಟ್ಟಿಕೊಡುತ್ತಾರೆ. ಆಭರಣ ಮತ್ತಿತರ ಹೊಳಪಿನ ಕುಸುರಿ ಬೇಕಿರುವೆಡೆ ಚರ್ಮದಲ್ಲಿ ರಂಧ್ರಗಳನ್ನು ಮಡಿರುತ್ತಾರೆ. ಅತ್ಯಂತ ಜಾಣತನದ ಆದರೆ ಬಹಳ ಪರಿಣಾಮಕಾರಿಯಾದ ಕ್ರಮವಿದು.
ತೊಗಲುಗೊಂಬೆಯಾಟ ಒಂದು ಅದ್ಭುತ ಕೈಚಳಕದ ಆಟ. ಈ ಆಟ ಜನಸಾಮಾನ್ಯರಿಗೆ ಸುಲಭವಾಗಿ ಪೌರಾಣಿಕ ಕಥೆಗಳನ್ನು ಹೇಳುವ ಮಾಧ್ಯಮ. ಇವರು ಬಹುತೇಕ ಮಹಾಭಾರತ ಮತ್ತು ರಾಮಾಯಣದ ಪೌರಾಣಿಕ ಪ್ರಸಂಗಗಳನ್ನೇ ಪ್ರದರ್ಶಿಸುತ್ತಾರೆ. ಗೊಂಬೆಗಳನ್ನು ಕುಣಿಸುತ್ತಾ ಆ ಗೊಂಬೆಗೆ ಜೀವ ತುಂಬುವಂತೆ ತಾವೇ ಹಾಡುತ್ತಾ ಸಂಭಾಷಿಸುವ ಇವರ ಕಲೆ ಎಂಥವರನ್ನೂ ದಂಗುಬಡಿಸುತ್ತದೆ. ಆಧುನಿಕ ಅನಿಮೇಷನ್ ಲೋಕದ ಪುರಾತನ ಕೊಂಡಿ ಈ ತೊಗಲುಗೊಂಬೆಯಾಟ.