Tuesday, March 24, 2009

ಆಟೋಗ್ರಾಫ್-ಫೋಟೋಗ್ರಾಫ್ ಭಾಗ ಎರಡು

ಗೋಕರ್ಣದಲ್ಲಿ 'ಸ್ಟಡಿ ಸರ್ಕಲ್' ಸಂಸ್ಥೆಯನ್ನು ಹುಟ್ಟುಹಾಕಿ, ಒಂದು ಲಕ್ಷಕ್ಕೂ ಹೆಚ್ಚು ಅಮೂಲ್ಯ ಪುಸ್ತಕಗಳನ್ನು ಸಂಗ್ರಹಿಸಿ, ಗ್ರಂಥಭಂಡಾರವನ್ನು ಸ್ಥಾಪಿಸಿರುವವರು ಜಿ.ಎಂ.ವೇದೇಶ್ವರ್. ಅವರು ಜೀವನ ಕುರಿತಾದ ಮೂಲಭೂತ ಪ್ರಶ್ನೆಗಳಿಗೆ ನಾಡಿನಾದ್ಯಂತ ಹಿರಿಯರಿಂದ, ವಿದ್ವಜ್ಜನರಿಂದ ಉತ್ತರ ತರಿಸಿಕೊಂಡು, ಆ ಮೂಲ ಪ್ರತಿಗಳನ್ನು ೪೦-೫೦ ವರ್ಷಗಳಿಂದ ಜೋಪಾನ ಮಾಡಿ ಪುಸ್ತಕರೂಪದಲ್ಲಿ ಪ್ರಕಟಿಸಿದ್ದಾರೆ.ಸರ್.ಸಿ.ವಿ.ರಾಮನ್, ಡಾ.ಎಸ್.ರಾಧಾಕೃಷ್ಣನ್, ದ.ರಾ.ಬೇಂದ್ರೆ, ಶಿವರಾಮ ಕಾರಂತರು, ಡಿ.ವಿ.ಜಿ..... ಸುಮಾರು ೬೦ ಜನರ ಹಸ್ತಾಕ್ಷರದ ಪತ್ರಗಳು, ಫೋಟೋಗಳು ನೋಡಲು ಮುದನೀಡುತ್ತವೆ. ಅಷ್ಟೂ ಜನರ ಮಧ್ಯೆ ಕುಳಿತಂತೆ ಭಾಸವಾಗುತ್ತದೆ.
* * * * *
ಸುಮಾರು ೧೯೯೪-೧೯೯೫ ರಲ್ಲಿ "ಸುಧಾ" ವಾರಪತ್ರಿಕೆಯಲ್ಲಿ "ಸಮಕ್ಷಮ" ಎಂಬ ಲೇಖನಮಾಲೆ ಪ್ರಕಟವಾಗುತ್ತಿತ್ತು. ಅದು ಕನ್ನಡದ ಸುಪ್ರಸಿದ್ಧ ಸಾಹಿತಿಗಳನ್ನು ಪರಿಚಯಿಸುವ ಲೇಖನಮಾಲೆ. ಲೇಖಕರ ಚಿತ್ರ, ಹಸ್ತಾಕ್ಷರ ಮತ್ತು ಮಾಹಿತಿ ಎರಡು ಪುಟಗಳಲ್ಲಿ ಪ್ರಕಟವಾಗುತ್ತಿತ್ತು. ಅದನ್ನೆಲ್ಲಾ ಈಗ ನೋಡುವಾಗ ಏನೋ ಖುಷಿ, ಸಂಭ್ರಮ, ಸಂತೋಷ...
* * * *
ಕೆ.ಜಿ.ಸೋಮಶೇಖರ್ ನಮ್ಮ ನಾಡಿನ ಅಪೂರ್ವ ಛಾಯಾಚಿತ್ರಗಾರರು. ತಮ್ಮ ಕ್ಯಾಮೆರಾ ಕಣ್ಣಿನಿಂದ ವಿಶ್ವವಿಖ್ಯಾತ ಸಾಹಿತಿ, ಕಲಾವಿದ, ನಟ, ನಿರ್ದೇಶಕರ ಕ್ರಿಯಾಶೀಲ ಭಾವಭಂಗಿಗಳನ್ನು ದಾಖಲಿಸಿದ್ದಾರೆ. "ತರಂಗ"ದಲ್ಲಿ ೧೯೯೬ ರಲ್ಲಿ "ಚಿತ್ರ-ಚಿತ್ರಣ" ಎಂಬ ಲೇಖನಮಾಲೆ ಪ್ರಕಟವಾಗುತ್ತಿತ್ತು. ಇದರಲ್ಲಿ ಕೆ.ಜಿ.ಸೋಮಶೇಖರ್ ಸಂಗ್ರಹದ ಪ್ರತಿಭಾವಂತರ ಚಿತ್ರದ ಜೊತೆ ಅವರ ಹೃದಯಸ್ಪರ್ಶಿ ನೆನಪಿಗೆ ಬರಹದ ರೂಪ ಕೊಟ್ಟವರು ನಾ.ಡಿಸೋಜ.
* * * *
"ಆಟೋಗ್ರಾಫ್-ಫೋಟೋಗ್ರಾಫ್" ಗೆ ಪ್ರೇರಣೆ ನೀಡಿದ ನನ್ನಲ್ಲಿನ ಸಂಗ್ರಹದ ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾ ಈ ಬಾರಿಯ "ಸಹಿ-ಚಿತ್ರ"ಗಳನ್ನು ಪ್ರಸ್ತುತಪಡಿಸುತ್ತಿರುವೆ.

ಭಾರತದ ಅತಿದೊಡ್ಡ ಸಾಹಿತ್ಯ ಪುರಸ್ಕಾರ "ಜ್ಞಾನಪೀಠ ಪ್ರಶಸ್ತಿ" ಪಡೆದ ಏಳು ಮಂದಿ ಕನ್ನಡಿಗರಲ್ಲಿ ಒಬ್ಬರಾದ ಡಾ.ಯು.ಆರ್.ಅನಂತಮೂರ್ತಿಯವರು ನಮ್ಮ ದೇಶದ ಹಿರಿಯ ಲೇಖಕರಲ್ಲೊಬ್ಬರು. ಇವರ "ಸಂಸ್ಕಾರ"ದಿಂದಲೂ ನಮಗೆಲ್ಲ ಇಷ್ಟವಾಗುತ್ತಾರೆ.

ನಡೆದಾಡುವ "ಜೀವಂತ ಕಥಾಕೋಶ" ಎಂದು ಎಲ್ಲರಿಂದಲೂ ಕರೆಯಿಸಿಕೊಳ್ಳುವ ದೈತ್ಯ ಪ್ರತಿಭೆ - ನಮ್ಮೆಲ್ಲರ ಪ್ರೀತಿಯ ಕುಂ ವೀರಭದ್ರಪ್ಪನವರು.

'ತರಂಗ'ದ ಸಂಪಾದಕರಾಗಿದ್ದ ಸಂತೋಷಕುಮಾರ್ ಗುಲ್ವಾಡಿಯವರು ನನಗೆ ಓದುವ ಗೀಳನ್ನು ಹೆಚ್ಚಿಸಿದವರು. ತಮ್ಮ 'ಅಂತರಂಗ'ದ ಮಾತುಗಳನ್ನು 'ಬಹಿರಂಗ'ವಾಗಿ ಬರೆದು ನಮ್ಮ ಜ್ಞಾನ ವೃದ್ಧಿಸಿದವರು.

ನಾಡಿನ ಅಚ್ಚು ಮೆಚ್ಚಿನ ತುಂಟಕವಿ ಬಿ.ಆರ್.ಲಕ್ಷ್ಮಣರಾವ್. ನಮ್ಮ ಶಿಡ್ಲಘಟ್ಟ ತಾಲೂಕಿನ ಚೀಮಂಗಲದಲ್ಲಿ ಹುಟ್ಟಿದ ಇವರು ನಮ್ಮ ಪಕ್ಕದೂರು ಚಿಂತಾಮಣಿಯಲ್ಲಿದ್ದಾರೆ.
"ಬಿಳಿಗಿರಿಯಷ್ಟು ಪೋಲಿಯೂ ಅಲ್ಲದ ಶಿವರುದ್ರಪ್ಪನವರಂತೆ 'ಸಾದ್ವಿ'ಯೂ ಅಲ್ಲದ 'ನಡು'ಗನ್ನಡದ ಕವಿ ಬಿ.ಆರ್.ಎಲ್" -
ಜೋಗಿ
"ಬುಗುರಿ"ಯಂತೆ ಮೊಗಳ್ಳಿ ಗಣೇಶ್ ಅವರ ಕಥೆಗಳು ನಮ್ಮನ್ನು ಆಡಿಸುತ್ತ, ಕಾಡಿಸುತ್ತವೆ.
ಕಬ್ಬಿಣದ ಕಡಲೆಯಾದ ವಿಜ್ಞಾನವನ್ನು ಸರಳವಾಗಿ ಕಸ್ತೂರಿ ಕನ್ನಡದಲ್ಲಿ ಸಾದರಪಡಿಸುವ ವಿಜ್ಞಾನಿ ಹಾಲ್ದೊಡ್ಡೇರಿ ಸುಧೀಂದ್ರ ಅವರು.

ನಾನು ಡಾ.ಕೃಷ್ಣಾನಂದ ಕಾಮತರನ್ನು ನೋಡಲಾಗಲಿಲ್ಲ. ಆದರೆ ಅವರನ್ನು ಮಾತೃಸ್ವರೂಪರಾದ ಡಾ.ಜ್ಯೋತ್ಸ್ನಾಕಾಮತರಲ್ಲಿ ಕಂಡೆ. ಬೆಂಗಳೂರಿನ ಆಕಾಶವಾಣಿಯ ನಿರ್ದೇಶಕರಾಗಿ ನಿವೃತ್ತರಾಗಿರುವ ಇವರು ಈಗಲೂ ಅಧ್ಯಯನ ಮಾಡುತ್ತಲೇ ತಮ್ಮ ಪತಿ ಡಾ.ಕೃಷ್ಣಾನಂದ ಕಾಮತರ ನೆನಪಿಗಾಗಿ ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ.

ನಮ್ಮೆಲ್ಲರ ಮೆಚ್ಚಿನ ಕವಯತ್ರಿ ಪ್ರತಿಭಾ ನಂದಕುಮಾರ್.

ನಮ್ಮ ಕೋಲಾರ ಜಿಲ್ಲೆಯವರಾದ ಕೃಷಿ ವಿಜ್ಞಾನಿ ಡಾ.ಕೆ.ಎನ್.ಗಣೇಶಯ್ಯ ಕಥೆ ಹೇಳುವುದರಲ್ಲಿ ಸಿದ್ಧಹಸ್ತರು. ಚರಿತ್ರೆಯ ಬಗ್ಗೆ ಆಸಕ್ತಿ ಹುಟ್ಟಿಸುವುದಲ್ಲದೆ ಐತಿಹಾಸಿಕ ಸ್ಥಳಗಳನ್ನು ಹೊಸ ರೀತಿಯಲ್ಲಿ ನೋಡಲು ಪ್ರೇರೇಪಿಸುತ್ತವೆ ಇವರ ಕೃತಿಗಳು.

ಕುವೆಂಪು ನಂತರದ ಮಲೆನಾಡಿನ ಲೇಖಕರಲ್ಲಿ ಪ್ರಮುಖರು ಬಿಳುಮನೆ ರಾಮದಾಸ್. ಇವರ ಕಾದಂಬರಿಯಲ್ಲಿ ಬರುವ ಪಾತ್ರ ಮತ್ತು ಚಿತ್ರಣ ಮಲೆನಾಡಿನ ಜೀವನದ ಇನ್ನೊಂದು ಮಗ್ಗುಲನ್ನು ಸ್ಪರ್ಶಿಸುತ್ತದೆ.

ನಿವೃತ್ತ ನ್ಯಾಯಾಧೀಶರು, ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದವರೂ ಆದ ಕೋ.ಚನ್ನಬಸಪ್ಪನವರು ಪ್ರಬುದ್ಧ ಸಾಹಿತ್ಯ ಶಕ್ತಿಯೂ ಹೌದು.

ಬರುಗೂರು ರಾಮಚಂದ್ರಪ್ಪ ಬಹುರೂಪಿ. ಬಂಡಾಯಗಾರರು, ಕನ್ನಡ ಹೋರಾಟಗಾರರು, ಸಾಹಿತಿ, ಸಿನಿಮಾ ನಿರ್ದೇಶಕ, ರಾಜಕೀಯ...

ನೀರಿನ ಮಹತ್ವ ಮತ್ತು ಸದುಪಯೋಗ ತಿಳಿಸುತ್ತಾ ಜಲಸಾಕ್ಷರತೆ ಮೂಡಿಸುತ್ತಿರುವವರು ಶ್ರೀಪಡ್ರೆ.

Tuesday, March 17, 2009

ದೇವರು ಹೀಗೂ ಕಾಣಿಸಬಹುದು!

ದೊಡ್ಡಬಳ್ಳಾಪುರ ಹತ್ತಿರವಾಗುತ್ತಿತ್ತು. ಕಿರ್ ಕಿರ್ರೋ ಎಂದು ಶಬ್ದ ಮಾಡುತ್ತಾ ಹಕ್ಕಿಗಳು ಹಾರಿ ರಸ್ತೆಯ ಎಡದ ಮರದಿಂದ ಬಲದ ಮರಕ್ಕೆ ಹಾರಿದ್ದು ಕಾಣಿಸಿತು. ತಕ್ಷಣ ಕಾರನ್ನು ರಸ್ತೆ ಬದಿ ನಿಲ್ಲಿಸಿದೆ. ನೋಡಿದರೆ ಮರದ ಮೇಲೆ ಜೋಡಿ ಹಕ್ಕಿಗಳು ಕೂತಿವೆ.
ಇದರ ಹೆಸರು ನೀಲಕಂಠ. ಇಂಗ್ಲೀಷಿನಲ್ಲಿ ಇದಕ್ಕೆ ಎರಡು ಹೆಸರುಗಳಿವೆ. ಬ್ಲೂ ಜೇ(ಬಣ್ಣದಿಂದ) ಮತ್ತು ಇಂಡಿಯನ್ ರೋಲರ್(ಹಾರಾಡುವಾಗ ಪಲ್ಟಿ ಹೊಡೆಯುವುದರಿಂದ). ಇನ್ನೊಂದು ವಿಶೇಷವೆಂದರೆ ಇದು ನಮ್ಮ ಕರ್ನಾಟಕದ ರಾಜ್ಯ ಪಕ್ಷಿ. ನಮ್ಮ ರಾಜ್ಯ ಮತ್ತು ಭಾಷೆಯಷ್ಟೇ ಸುಂದರವಾದ ಹಕ್ಕಿ.
ಆ ಮರದಲ್ಲೇ ಇದ್ದ ಪೊಟರೆಯಲ್ಲಿ ಗೂಡು ಮಾಡುತ್ತಿದ್ದಿರಬಹುದು. ಇಣುಕುತ್ತಿತ್ತು. ಫೋಟೋ ತೆಗೆದು ದೇವಸ್ಥಾನದ ಬಾಗಿಲು ಹಾಕಿದರೆ ಕಷ್ಟ ಎಂದುಕೊಂಡು ಹೊರಟೆವು.
ಚಂದವಾದ.. ನೀಲಿ..
ರೇಷ್ಮೆಸೀರೆಯುಟ್ಟ ನಾರಿಯಂತೆ..
ಬೆಡಗು ಬಿನ್ನಾಣ..
ನಾಚಿಕೆಯೇ.. ಬಡಿವಾರ..!
ಈ ಹಕ್ಕಿಯ ಫೋಟೋ ನೋಡಿ ಇಟ್ಟಿಗೆ ಸಿಮೆಂಟ್ ಬ್ಲಾಗಿನ ಪ್ರಕಾಶ್ ಹೆಗಡೆಯವರ ಉದ್ಘಾರವಿದು.
ನಾವು ಹೋಗುತ್ತಿದ್ದುದು ಘಾಟಿಗೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬಹ್ಮಣ್ಯಸ್ವಾಮಿ ದೇವಾಲಯವಿರುವುದು ಕಣಿವೆಯಲ್ಲಿ. ಹಾವಿನಂತೆ ಬಳುಕುವ ಹಾದಿಯಲ್ಲಿ ಬೆಟ್ಟಗಳ ನಡುವಿರುವ ಕಣಿವೆಯೊಳಕ್ಕೆ ಇಳಿಯಬೇಕು.
ಇಲ್ಲಿ ಸುಬ್ರಹ್ಮಣ್ಯ ತಪಸ್ಸನ್ನು ಮಾಡಿದನೆಂಬ ಪ್ರತೀತಿಯಿದೆ. ಇಲ್ಲಿನ ದೇವರ ಮೂರ್ತಿಗೆ ಎರಡು ರೂಪ. ಒಂದುಕಡೆಯಿಂದ ಸುಬ್ರಹ್ಮಣ್ಯ ಮತ್ತೊಂದು ಕಡೆಯಿಂದ ಲಕ್ಷ್ಮೀನರಸಿಂಹ ಕಾಣುತ್ತಾರೆ.
ದಾರಿಯಲ್ಲಿ ಬರುವಾಗ ನಾಗ ಗಣಪತಿ ದೇವಾಲಯವಿತ್ತು. ಅಲ್ಲಿ ಗಣೇಶನ ಎತ್ತರದ ಸುಂದರವಾದ ಮೂರ್ತಿಯನ್ನು ನೋಡಲು ಹೋದೆವು.
ಆ ದೇವಾಲಯದಲ್ಲಿದ್ದ ಬಿಳಿ ಎಕ್ಕದ ಹೂಗಳ ಮಕರಂದವನ್ನು ಸೂರಕ್ಕಿಯು ಹೀರುತ್ತಿತ್ತು. ಅದನ್ನು ನೋಡುವುದೇ ಚಂದ. ಗಾಳಿಯಲ್ಲಿ ರೆಕ್ಕೆ ಪಟಪಟಿಸುತ್ತಲೇ ಸ್ಟ್ರಾ ತರಹದ ತನ್ನ ಕೊಕ್ಕನ್ನು ಹೂವಿನೊಳಗೆ ತೂರಿಸಿ ಮಕರಂದ ಹೀರುತ್ತದೆ
ದಾರಿಯಲ್ಲಿ ವಾಪಸಾಗುವಾಗ ನನ್ನ ಹೆಂಡತಿ ಮತ್ತು ಮಗ ಎಷ್ಟು ದೇವರುಗಳನ್ನು ನೋಡಿದೆವೆಂದು ಲೆಕ್ಕಹಾಕುತ್ತಿದ್ದರು. ನಾನೂ ಮನಸ್ಸಿನಲ್ಲಿ ಲೆಕ್ಕಹಾಕತೊಡಗಿದೆ!

Tuesday, March 10, 2009

ಚಿತ್ತಾಕರ್ಷಕ ಚಿಟ್ಟೆ

"ಕಾರೆಹಣ್ಣುಗಳ ಫೋಟೋ ತೆಗೀತೀರಾ? ಹಾಗೇ ಒಂದಷ್ಟು ಮನೆಗೆ ತರೋಣ ಬನ್ನಿ" ಎಂದು ಸ್ನೇಹಿತ ನಾಗಭೂಷಣ್ ಅವರ ಹಳ್ಳಿ ಪಕ್ಕದಲ್ಲಿದ್ದ ಪೊದೆಗಳ ಮಧ್ಯೆ ನನ್ನನ್ನು ಕರೆದೊಯ್ದರು. ಕಾರೆ ಹಣ್ಣಿನ ಫೋಟೋ ತೆಗೆದು ಕವರಿನೊಳಕ್ಕೆ ಹಳದಿ ಹಣ್ಣುಗಳನ್ನು ತುಂಬುತ್ತಿದ್ದಾಗ, ಆ ಮುಳ್ಳಿನ ಗಿಡಕ್ಕೆ ಹಬ್ಬಿದ ಬಳ್ಳಿಯ ಮೇಲೆ ಹುಳುವೊಂದು ಕಾಣಿಸಿತು.
ಚಾಕೊಲೇಟ್ ಬಣ್ಣದಲ್ಲಿದ್ದ ಅದರ ಮೈಮೇಲೆ ಕೇಸರಿ ಬಣ್ಣದ ಆಂಟೆನಾಗಳು. "ಇದು ಯಾವುದೋ ಚಿಟ್ಟೆಯಾಗುತ್ತೆ. ಮನೆಗೆ ತೆಗೆದುಕೊಂಡು ಹೋಗ್ತೀನಿ" ಎಂದು ಹೇಳಿ ಹುಶಾರಾಗಿ ಬಳ್ಳಿ ಸಮೇತೆ ಕತ್ತರಿಸಿಕೊಂಡೆ. ಆ ಬಳ್ಳಿಯನ್ನು ನೋಡಿದ ನಾಗಭೂಷಣ್, "ಇದು ಈಶ್ವರೀಬಳ್ಳಿ ಕಣ್ರಿ. ಇದೊಂದು ಔಷಧೀಯ ಸಸ್ಯ. ಆದರೆ ಏತಕ್ಕೆ ಬಳಸುತ್ತಾರೆ ಅಂತ ಮಾತ್ರ ಗೊತ್ತಿಲ್ಲ" ಅಂದರು. ಅದನ್ನು ತಂದು ಡಬ್ಬದಲ್ಲಿಟ್ಟೆ. ಒಂದು ದಿನಕ್ಕೇ ಆ ಬಳ್ಳಿ, ಎಲೆ ಬಾಡಿದಂತಾಯಿತು. ಅದಕ್ಕಾಗಿ ಮಾರನೇ ದಿನವೂ ಹುಳಕ್ಕೆ ಮೇವು ತರಲು ಹೋದೆ.
ಆಗ ಇನ್ನೊಂದು ಹುಳ ಸಿಕ್ಕಿತು. ಪ್ರತಿ ದಿನವೂ ಎಲೆ ತರುವುದು ಮುಖ್ಯ ಕೆಲಸವಾಯಿತು.

ಒಂದು ದಿನ ನೋಡಿದರೆ, ಈ ಹುಳಗಳಲ್ಲಿ ಒಂದು ಕೋಶಾವಸ್ಥೆಗೆ ಹೋಗಿದೆ, ಇನ್ನೊಂದು ಕೋಶಾವಸ್ಥೆಗೆ ಹೋಗುವ ತಯಾರಿಯಲ್ಲಿದೆ. ಅದರ ಫೋಟೋ ತೆಗೆದೆ.
ನಂತರ ಒಂದು ವಾರಕ್ಕೆ ಅದರ ಹೆರಿಗೆ. ಕೋಶದಿಂದ ಹೊರಬಂದ ಮೇಲಷ್ಟೇ ನನಗೆ ತಿಳಿದದ್ದು ಅದು ಕ್ರಿಮ್ಸನ್ ರೋಸ್ ಚಿಟ್ಟೆಯೆಂದು.
ನಿರಂತರವಾಗಿ ಪ್ರಕೃತಿಯ ಸೆರಗಲ್ಲಿ ನಡೆಯುವ ಈ ರೂಪಾಂತರ ಕ್ರಿಯೆಯನ್ನು ನೋಡಿ ಅನುಭವಿಸುವುದು ರೋಚಕ. ಇದನ್ನು ಚಿತ್ರಗಳನ್ನಾಗಿಸುವುದು ಸವಾಲಿನ ಕೆಲಸ. ಅನೇಕ ಆಯುರ್ವೇದದ ಔಷಧಗಳ ಮೂಲವಸ್ತುವಾದ ಈ ಈಶ್ವರೀಬಳ್ಳಿಯನ್ನು ತಿಂದೇ ಜೀವಿಸುವುದರಿಂದ ಈ ಚಿಟ್ಟೆಗೆ ಇಷ್ಟೊಂದು ಬಣ್ಣಗಳಿವೆಯೋ ತಿಳಿಯದು. ಇಲ್ಲಿ ತಿಳಿದಿರುವುದು ಅಲ್ಪ. ತಿಳಿಯಬೇಕಿರುವುದು ಅಪಾರ.

Wednesday, March 4, 2009

ರೇಷ್ಮೆ ಉದ್ಯಮದಲ್ಲಿ ಹದ್ದುಗಳ ಸಹಭೋಜನ

ಶಿಡ್ಲಘಟ್ಟದ ಪ್ರಸಿದ್ಧ ರೇಷ್ಮೆ.
ಶಿಡ್ಲಘಟ್ಟದ ರೇಷ್ಮೆ ದಾರವು ಸೂರತ್ ನಲ್ಲಿ ಜರಿ ರೂಪ ಪಡೆಯುತ್ತೆ. ಕಂಚಿಯಲ್ಲಿ ರೇಷ್ಮೆ ಸೀರೆಯಾಗಿ ರೂಪಾಂತರ ಹೊಂದುತ್ತೆ ಎಂಬ ವಿಷಯ ಎಲ್ಲರಿಗೂ ತಿಳಿದದ್ದೇ. ಆದರೆ "ಕಾಮನ್ ಪರಯ ಕೈಟ್" ಅಥವಾ "ಕಪ್ಪು ಗರುಡ" ಎಂದು ಕರೆಯುವ ಹದ್ದುಗಳ ಭೋಜನಕ್ಕೂ ರೇಷ್ಮೆಗೂ ಏನು ಸಂಬಂಧ ಅನ್ನಿಸಿತೇ? ಇದೊಂಥರಾ ಬೆಟ್ಟದ ನೆಲ್ಲಿ ಮತ್ತು ಸಮುದ್ರದ ಉಪ್ಪಿನಂತೆ. ದಿನವೂ ನಡೆಯುವ ಹದ್ದುಗಳ ಸಹಭೋಜನ ವೀಕ್ಷಿಸಬೇಕೆಂದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟಕ್ಕೆ ಬನ್ನಿ. ಅಂದ ಹಾಗೆ, ಊರಿನ ಹೊರಗಿರುವ ಈ ಜಾಗಕ್ಕೆ ಮೂಗು ಮುಚ್ಚಿಕೊಂಡೇ ಹೋಗಬೇಕು.
ಎಲ್ಲೆಲ್ಲಿ ನೋಡಿದರೂ ಹದ್ದುಗಳೇ ಹದ್ದುಗಳು.
ರೇಷ್ಮೆ ಮೊಟ್ಟೆಯಿಂದ ಬಟ್ಟೆಯವರೆಗೆ ಸಾಗುವ ರೇಷ್ಮೆ ಉದ್ಯಮವನ್ನು ಕಲ್ಪವೃಕ್ಷಕ್ಕೆ ಹೋಲಿಸಬಹುದು. ಇಲ್ಲಿ ಎಲ್ಲವೂ ಉಪಯುಕ್ತವೇ. ಕುದಿಯುವ ನೀರಲ್ಲಿ ಗೂಡನ್ನು ಹಾಕಿ ಸೂಕ್ಷ್ಮವಾದ ರೇಷ್ಮೆ ನೂಲನ್ನು ತೆಗೆದ ಮೇಲೆ ಹುಳುಗಳ ತೆಳು ಪೊರೆಯಂತಹ ರೇಷ್ಮೆ ತ್ಯಾಜ್ಯವು ಉಳಿಯುತ್ತದೆ. ರೇಷ್ಮೆ ನೂಲು ತೆಗೆಯುವುದೇ ಒಂದು ಗೃಹ ಕೈಗಾರಿಕೆಯಾದರೆ, ಹುಳು ಮತ್ತು ರೇಷ್ಮೆ ತ್ಯಾಜ್ಯವನ್ನು ಸಂಗ್ರಹಿಸಿ ಬೇರ್ಪಡಿಸಿ, ಒಣಗಿಸುವುದೇ ಮತ್ತೊಂದು ಪುಟ್ಟ ಗುಡಿ ಕೈಗಾರಿಕೆ.
ರೇಷ್ಮೆ ಹುಳುಗಳನ್ನು ಹೆಕ್ಕಿ ತಿನ್ನಲು ನಾಮುಂದು ತಾಮುಂದು ಎನ್ನುತ್ತ ಕುಳಿತ ಹದ್ದುಗಳ ದಂಡು.
ತುಂಬಾ ದುರ್ಗಂಧ ಬೀರುವುದರಿಂದ ಈ ಹುಳುವಿನ ಕೆಲಸ ಊರ ಹೊರಗೆ ನಡೆಯುತ್ತದೆ. ಫಿಲೇಚರ್ ಗಳಲ್ಲಿ ಸಂಗ್ರಹಿಸಿದ ಹುಳುಗಳನ್ನು ತಂದು ನೀರಿನ ತೊಟ್ಟಿಯಲ್ಲಿ ಹಾಕಿ ಕಡ್ಡಿಯಲ್ಲಿ ತಿರುಗಿಸುತ್ತಾರೆ. "ಜಾಲ" ಎಂದು ಕರೆಯುವ ಈ ರೇಷ್ಮೆ ತ್ಯಾಜ್ಯವನ್ನು ಬೇರ್ಪಡಿಸಿ ಒಣಗಿಸುವರು. ಇಲ್ಲಿಂದ ಹುಳುಗಳನ್ನು ಎಣ್ಣೆ ತಯಾರಿಸಲು ತೆಗೆದುಕೊಂಡು ಹೋದರೆ, ಉಳಿದ 'ಜಾಲ'ವು ರೇಷ್ಮೆ ತಯಾರಿಕೆಗೆ ಹೋಗುತ್ತದೆ.
"ಎಷ್ಟೊತ್ತಿಗಪ್ಪಾ ಹುಳುಗಳನ್ನು ಎಸೆಯೋದು..." ಹದ್ದುಗಳ ಕಾತರ.
ಹದ್ದುಗಳೆಲ್ಲ ಬರುವುದೇ ಹುಳುಗಳಿಗಾಗಿ. ಒಣಗಲು ಹಾಕಿದ ಜಾಲದಲ್ಲಿರುವ ಹುಳುಗಳನ್ನು ಹದ್ದುಗಳು ತಂಡೋಪತಂಡವಾಗಿ ಬಂದು ಖಾಲಿ ಮಾಡುತ್ತವೆ. ಈ ರೀತಿ ಪಂಕ್ತಿಯಲ್ಲಿ ಕೂತು ಜಾಲವನ್ನು ಚೊಕ್ಕಟಗೊಳಿಸಲು ಹದ್ದುಗಳು ದುಡ್ಡುಕಾಸು ಕೇಳುವುದಿಲ್ಲ! ನೆಲ ಮುಗಿಲು ಎಲ್ಲೆಲ್ಲಿ ನೋಡಿದರೂ ಹದ್ದುಗಳೇ ಹದ್ದುಗಳು. ನಿಸರ್ಗದ ಪೌರಕಾರ್ಮಿಕರಾದಂತಹ ಹದ್ದುಗಳು ಆಹಾರ ಸರಪಣಿಯ ಮುಖ್ಯ ಕೊಂಡಿ. ಕೀಟನಾಶಕ ಮತ್ತು ಇತರೇ ಮಾನವ ಸೃಷ್ಟಿಸಿದ ವಿಷವಸ್ತುಗಳು ಸತ್ತ ಪ್ರಾಣಿಗಳ ಮುಖಾಂತರ ರಣಹದ್ದುಗಳನ್ನು ಆಕಾಶದಿಂದ ಮಾಯಮಾಡಿರುವ ಸಂಗತಿಯು ಇಲ್ಲಿ ನೆನಪಾಗುತ್ತದೆ. ಆದರೆ, ರೇಷ್ಮೆ ನೂಲು ತಯಾರಿಸುವಾಗ ಆಗಲಿ, ಹುಳು-ಜಾಲ ಬೇರ್ಪಡಿಸುವಾಗ ಆಗಲಿ ರಸಾಯನಿಕಗಳನ್ನು ಉಪಯೊಗಿಸದಿರುವುದು ಒಂದು ಸಂತಸದ ವಿಷಯ.
ಬಿಳಿ ಗರುಡನ ವೀಕ್ಷಣೆ.
ಇಲ್ಲಿ ಹದ್ದುಗಳಷ್ಟೇ ಅಲ್ಲ. ಕಾಗೆಗಳೂ ಇವೆ. ಆದರೆ ಹದ್ದುಗಳಿಂದ ದೂರವಿರುತ್ತವೆ. ಅಪರೂಪಕ್ಕೊಮ್ಮೊಮ್ಮೆ ಒಂದೊಂದು ಬಿಳಿ ಗರುಡ (ಬ್ರಾಮಿನಿ ಕೈಟ್)ಗಳು, ಒಂದೆರಡು ಜಾಡಮಾಲಿ ಹದ್ದು (ವೈಟ್ ಸ್ಕ್ಯಾವೆಂಜರ್ ವಲ್ಚರ್)ಗಳು ಕಾಣಸಿಗುತ್ತವೆ. ಕಪ್ಪು ಗರುಡಗಳಂತೆ ಇವು ಏಕೆ ಗುಂಪುಗುಂಪಲ್ಲಿ ಅಥವಾ ಹೆಚ್ಚಾಗಿ ಕಾಣಿಸುತ್ತಿಲ್ಲ ಎಂಬುದೊಂದು ಅಚ್ಚರಿಯ ಸಂಗತಿ. ಕಪ್ಪು ಗರುಡಗಳ ಗುಂಪು ಹೆಚ್ಚಾಗಿದ್ದು ಬೇರೆ ಹದ್ದುಗಳಿಗೆ ಜಾಗ ಕೊಡುತ್ತಿಲ್ಲವೋ ಏನೋ ಗೊತ್ತಿಲ್ಲ.
ಕಪ್ಪು ಗರುಡನ ತೇಗೋ ಅಥವಾ ಆಕಳಿಕೆಯೋ?!!
ಹುಳುಗಳನ್ನು ತಿನ್ನುತ್ತಾ ಹದ್ದುಗಳು ತಮ್ಮ ಬೃಹತ್ ಸಂತತಿಯೊಂದಿಗೆ ರೇಷ್ಮೆ ಉದ್ಯಮವೆಂಬ ದೊಡ್ಡ ವೃಕ್ಷದ ಪುಟ್ಟ ರೆಂಬೆಯಂತಾಗಿದೆ. ಈ ರೆಂಬೆಯು ಸದಾ ಹಸಿರಾಗಿ ನಳನಳಿಸುತ್ತಿರಲಿ ಎಂದು ಹಾರೈಸೋಣ.
ಹಾರುತ ದೂರಾ ದೂರಾ ಮೇಲೇರುತ ಬಾರಾ ಬಾರಾ...