Wednesday, June 24, 2009

ಮುನ್ನಾರಿನ ಹಣ್ಣುಗಳು

ಕೇರಳದ ಮುನ್ನಾರ್ ನಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ನಾನಾ ಸ್ಥಳಗಳಿವೆ, ಸಂಗತಿಗಳಿವೆ. ತರತರಹದ ತಿನಿಸುಗಳು ಮಾರಾಟಕ್ಕಿವೆ.
ನನ್ನನ್ನು ಆಕರ್ಷಿಸಿದ್ದು ಅಲ್ಲಿನ ಹಣ್ಣುಗಳು. ಅಲ್ಲಿಗೆ ಹೋದವರ್ಯಾರೂ ಅವುಗಳ ರುಚಿ ಸವಿಯದೆ ಬರಲಿಕ್ಕಿಲ್ಲ.
ನಮ್ಮಲ್ಲಿ ಕ್ಯಾರೆಟ್ ಸಿಕ್ಕರೂ ಅಲ್ಲಿ ಆ ಪರಿಸರದಲ್ಲಿ ಅದರ ಬಣ್ಣ, ಹೊಳಪು ಕೊಂಚ ಹೆಚ್ಚು. ಇದು ಬೇರೆ ಹಣ್ಣುಗಳಿಗೂ ಅನ್ವಯಿಸುತ್ತೆ.
ನಿಮಗಾಗಿ ಆ ಹಣ್ಣು(ಚಿತ್ರ)ಗಳನ್ನು ಹೊತ್ತು ತಂದಿರುವೆ. ನೋಡಿ ಆನಂದಿಸಿ. ಅಲ್ಲಿಗೆ ಹೋದಾಗ ಅದರ ರುಚಿ ಸವಿಯುವಿರಂತೆ. ಅಂದ ಹಾಗೆ ಈ ಹಣ್ಣುಗಳ ಬಗ್ಗೆ ಹೆಚ್ಚಿನ ಮಾಹಿತಿ ಇದ್ದರೆ ದಯವಿಟ್ಟು ತಿಳಿಸಿ.

ಕ್ಯಾರೆಟ್

ಕ್ಯಾರೆಟ್

ಫ್ಯಾಷನ್ ಫ್ರೂಟ್

ಕೋಲು ಮಾವಿನಕಾಯಿ

ಊಟಿ ಆಪಲ್

ಪೀಚ್

ರೋಸ್ ಆಪಲ್

ಸ್ಟ್ರಾಬೆರ್ರಿ

ಬೋರೆಹಣ್ಣು(ಟ್ರ‍ೀ ಟೋಮೆಟೊ): ರಾಮಾಯಣದಲ್ಲಿ ರಾಮನಿಗೆ ಶಬರಿ ತಿನ್ನಿಸಿದ ಹಣ್ಣು.

Thursday, June 18, 2009

ಪೆರಿಯಾರ್

ಕೇರಳದ ಥೇಕಡಿ ಪೆರಿಯಾರ್ ವನ್ಯಧಾಮಕ್ಕೆ ಹೆಬ್ಬಾಗಿಲು.ಈ ಪೆರಿಯಾರ್ ಅನ್ನು ಹುಲಿ ಸಂರಕ್ಷಣಾ ತಾಣವನ್ನಾಗಿ ೧೯೭೮ರಲ್ಲೇ ಘೋಷಿಸಲಾಗಿದೆ.
ಪ್ರವಾಸಿಗರಿಗೆ ಬೇರೆಲ್ಲೂ ಸಿಗದ ಅನುಕೂಲತೆಯೊಂದು ಇಲ್ಲಿದೆ. ಅದೇನೆಂದರೆ ಇಲ್ಲಿ ದೋಣಿಯಲ್ಲಿ ಕುಳಿತು ಪ್ರಾಣಿಪಕ್ಷಿಗಳನ್ನು ವೀಕ್ಷಿಸಬಹುದಾಗಿದೆ.
ಮಲ್ಲಪೆರಿಯಾರ್ ಅಣೆಕಟ್ಟಿನ ನಿರ್ಮಾಣದಿಂದಾಗಿ ಇಲ್ಲಿ ಪೆರಿಯಾರ್ ನದಿಯು ವಿಶಾಲವಾಗಿ ಹರಡಿಕೊಂಡಿರುವುದರಿಂದ ದೋಣಿಯಲ್ಲಿ ಕುಳಿತು ಪ್ರವಾಸಿಗರು ಪ್ರಾಣಿಪಕ್ಷಿಗಳನ್ನು ಹತ್ತಿರದಿಂದ ವೀಕ್ಷಿಸಬಹುದು.
ಬನ್ನಿ ಇನ್ನೇಕೆ ತಡ. ಪೆರಿಯಾರ್ ನದಿಯಲ್ಲಿ ಒಂದು ಸುತ್ತು ಹಾಕಿ ಬರೋಣ...
ಮಂಜುಮುಸುಕಿದ ಮುಂಜಾವಿನಲ್ಲಿ ದೋಣಿಯಾನ.

ಸ್ನೇಕ್ ಬರ್ಡ್ ಗಳ ಮುಖಾಮುಖಿ.

ಕಾರ್ಮೊರೆಂಟ್ ಗಳ ರೆಕ್ಕೆಯಾಟ.

ಫ್ಲೈಟ್ ಟೇಕಾಫ್ ಇದ್ದಂತೆ ಬೆಳ್ಳಕ್ಕಿಯ ಟೇಕಾಫ್.

ಒಂದು, ಎರಡು.... ಆಮೇಲಿನ್ನೇನು?

ಒಣಮರದ ಮೇಲೂ ಚಿಗುರುವ ಕನಸು.

ದೇವರ ಪೆನ್ನಿನ ಗೀಚುಗೆರೆ!

ನೀರಿನ ನಡುವಿರುವ ಒಣಮರಗಳು ಪಕ್ಷಿಗಳ ವಾಸಸ್ಥಾನವಾಗಿದೆ.

ಸ್ನೇಕ್ ಬರ್ಡ್ ಮತ್ತು ಪಾಂಡ್ ಹೆರಾನ್.

ತ್ರಿವಳಿ ಕಿಂಗ್ ಫಿಷರ್ ಗಳ ಹಾರಾಟ.

ಆಕ್ಟೋಪಸ್ ಅಲ್ಲ, ಒಣಮರದ ಪ್ರತಿಬಿಂಬ.

ಬ್ಲಾಕ್ ಅಂಡ್ ವೈಟ್!

ಓಡು...ಓಡು...

ಓರೆಕೊರೆ ಮರದ ಮೇಲೆ ಕೊಕ್ಕರೆ.

Friday, June 12, 2009

ಚಾಯ್...ಚಾಯ್...

ಅಂದಕಾಲದಲ್ಲಿ ಬ್ರಹ್ಮದೇವನಿಗೆ ಹಣೆಬರಹ ಬರೆದೂ ಬರೆದೂ ಹಣೆ ಅಂದರೆ ತಲೆ ನೋವು ಶುರುವಾಯಿತಂತೆ. ಆಗ ಸರಸ್ವತಿದೇವಿ ತಲೆ ಕೆಡಿಸಿಕೊಂಡು ಕ್ಷೀರಸಾಗರದಿಂದ ಹಾಲನ್ನೂ, ಶಿವನ ತಲೆಯಲ್ಲಿರುವ ಗಂಗೆಯಿಂದ ನೀರನ್ನೂ, ಮನ್ಮಥನ (ಕಬ್ಬಿನ)ಬಿಲ್ಲಿನಿಂದ ಸಕ್ಕರೆಯನ್ನೂ, ನೀಲಗಿರಿ ಪರ್ವತದಿಂದ ಟೀಸೊಪ್ಪನ್ನೂ ತಂದು ಬೆರೆಸಿ ಅಗ್ನಿಸಾಕ್ಷಿಯಾಗಿ ಕಾಯಿಸಿ, ಸೋಸಿದಳಂತೆ. ಆಗ ಉದಿಸಿದ ಚಂದದ ಟೀ ಕುಡಿದ ಬ್ರಹ್ಮ ಆವತ್ತಿನಿಂದ ಇವತ್ತಿನವರೆಗೂ ರೆಸ್ಟಿಲ್ಲದೆ ಸೃಷ್ಟಿಕೆಲಸ ಸಾಗಿಸುತ್ತಿದ್ದಾನೆ. ಅಷ್ಟು ಮಹತ್ತರವಾದ "ಟೀ"ಯ ಇನ್ನೊಂದು ಹೆಸರೇ ಚಾಯ್ ಅಥವಾ ಚಹ.
ಟೀ ತೋಟದ ಮೇಲೆ ಕಾಮನಬಿಲ್ಲು.
ಇತ್ತೀಚೆಗೆ ಮುನ್ನಾರ್ ಗೆ ಹೋದಾಗ ಟೀ ಗಿಡಗಳ ಮಧ್ಯೆ ಓಡಾಡಿ, ಟೀ ಫ್ಯಾಕ್ಟರಿಗೆ ಭೇಟಿ ಕೊಟ್ಟು ಅದರ ಸೌಂಧರ್ಯವನ್ನು ಸವಿದೆ, ಕುಡಿದೆ ಮತ್ತು ಆಸ್ವಾದಿಸಿದೆ. ಎಲ್ಲೆಲ್ಲೂ ಹಸಿರು, ರಂಗೋಲಿ ಹಾಕಿದಂತೆ ಮಧ್ಯೆ ಮಧ್ಯೆ ಗೆರೆಗಳು... ಈ ಟೀ ಗಿಡಗಳಿಂದ ಸಿಂಗರಿಸಿಕೊಂಡ ಬೆಟ್ಟಗಳನ್ನು ನೋಡಲು ಚೆಂದವೋ ಚೆಂದ.
ಈ ಟೀ ಸಸ್ಯದ ಆಯಸ್ಸು ಮಾನವನಂತೆಯೇ ನೂರು ವರ್ಷ. ಬಿಟ್ಟರೆ ಇದು ಮರವಾಗಬಲ್ಲುದು. ಆದರೆ ಬೆಳೆಯಲು ಬಿಡದೆ ಕತ್ತರಿಸುವುದರಿಂದ ಮಟ್ಟಸವಾಗಿರುತ್ತೆ.

ಚೀನೀಯರಿಗೆ ಮತ್ತು ಜಪಾನೀಯರಿಗೆ "ಟೀ" ಒಂದು ಸಂಪ್ರದಾಯ ಮತ್ತು ಸಂಸ್ಕೃತಿಯ ಒಂದು ಭಾಗ. ಚೀನಾದ ಅರಸ ಶೆನ್ ನುಂಗ್ ಕ್ರಿ.ಪೂ.೨೭೩೭ ರಲ್ಲಿ ಈ ಟೀ ಸಸ್ಯವನ್ನು ಮೊದಲು ಗುರುತಿಸಿದವನಂತೆ. ಆತ ನೀರು ಕುದಿಸುತ್ತಿದ್ದಾಗ ಅಕಸ್ಮಾತ್ತಾಗಿ ಟೀ ಮರದಿಂದ ಕೆಲ ಎಲೆಗಳು ಬಿದ್ದವಂತೆ. ನೀರು ಬಣ್ಣ ತಿರುಗಿತು, ಸುವಾಸನೆ ಬಂತು, ಕುದಿಯುವ ನೀರಿಂದ ಲೋಕಕ್ಕೆ ಹೊಸ ಪಾನೀಯ ಉದಿಸಿತು.

ಬ್ರಿಟೀಷರು ಭಾರತದಲ್ಲಿ ಮೊಟ್ಟಮೊದಲು ವೈಜ್ಞಾನಿಕವಾಗಿ ಮತ್ತು ಪ್ಲಾಂಟೇಷನ್ ರೂಪ ಕೊಟ್ಟು "ಟೀ" ಬೆಳೆದವರು. ೧೭೭೮ರಲ್ಲಿ ಈಸ್ಟ್ ಇಂಡಿಯಾ ಕಂಪೆನಿ ಭಾರತದಲ್ಲಿ ಟೀ ಬೆಳೆಸಲು ಶುರುಮಾಡಿತು. ೧೮೩೯ರಲ್ಲಿ ಲಂಡನ್ನಿಗೆ ಭಾರತದಿಂದ ಟೀ ರಫ್ತಾಗಿ ಅತ್ಯುತ್ತಮ ಬೆಲೆಗೆ ಮಾರಾಟವಾಯಿತು. ಆ ನಂತರ ಉತ್ತರಭಾರತದಲ್ಲಿ ಹೆಚ್ಚೆಚ್ಚು ಟೀ ಬೆಳೆಯಲು ಶುರುಮಾಡಿದರು.

ಒಂಟಿ ಮರದ ಮೇಲೆ ಬಿಸಿಲು ಕೋಲು.

ದಕ್ಷಿಣ ಭಾರತದಲ್ಲಿ ೧೮೩೨ರಲ್ಲಿ ನೀಲಗಿರಿ ಪರ್ವತ ಶ್ರೇಣಿಯಲ್ಲಿ ಬೆಳೆಯಲು ಶುರುವಾದ ಈ ಟೀ ಎಷ್ಟೊಂದು ವ್ಯಾಪಕವಾಯಿತೆಂದರೆ ೧೯೦೦ರ ಹೊತ್ತಿಗೆ ೧೨,೬೭೦ ಹೆಕ್ಟೇರ್ ಪ್ರದೇಶ ಹರಡಿ, ೨೩೧೫ ಟನ್ ಟೀ ಉತ್ಪಾದನೆಯಾಗಿತ್ತು.(ಎಷ್ಟು ಕಾಡು ಟೀ ಕಪ್ಪಲ್ಲಿ ಕರಗಿಹೋಯಿತೋ?)

ಸುಡುವ ಸೌದೆಗೂ ಅಲಂಕಾರಿಕ ಜೋಡಣೆ.

ಟೀ ದಾರಿ!

ಟೀ ಉತ್ಪಾದನೆಯಲ್ಲಿ ಭಾರತ ಪ್ರಮುಖ ಸ್ಥಾನ ಪಡೆದಿದೆ. ವಾರ್ಷಿಕ ೯೫೦ ಮಿಲಿಯನ್ ಕೆಜಿ ಉತ್ಪಾದನೆ ಅಂದ್ರೆ ಸುಮ್ನೇನಾ? ಅಂದ ಹಾಗೆ ಟೀಗಳಲ್ಲಿ ಮೂರು ವಿಧ - ಗ್ರೀನ್ ಟೀ, ಓಲಾಂಗ್ ಟೀ ಮತ್ತು ಬ್ಲಾಕ್ ಟೀ. ಆದರೆ ಡುಂಡಿರಾಜ್ ಅವರು ಬೇರೇನೊ ಹೇಳ್ತಾರೆ -
ಟೀಯಲ್ಲೂ ಉಂಟು ವೆರೈಟಿ
ಕೇಟಿ, ಲೆಮನ್ ಟಿ, ಮಸಾಲಾಟಿ
ಎಲ್ಲಕ್ಕಿಂತ ರುಚಿ
ನಲ್ಲೆಯ ಕೆಂದು-ಟಿ!

Tuesday, June 9, 2009

ಬೆಹ್ರೆನ್ ನಲ್ಲಿ ನಾಗೇಂದ್ರರಿಗೆ ಸನ್ಮಾನ

ನಾಗೇಂದ್ರ ಮುತ್ಮುರ್ಡು, ನನ್ನ ಆಪ್ತ ಸ್ನೇಹಿತರಲ್ಲೊಬ್ಬರು. ಅವರನ್ನು ಬೆಹ್ರೆನ್ ನ ಮನಾಮದಲ್ಲಿನ ಸಾರ್ಥ ಫೌಂಡೇಶನ್ ಅವರು ತಾ: ೧೨=೬=೨೦೦೯ ರಂದು ಸನ್ಮಾನಿಸಲಿದ್ದಾರೆ. ಈ ಸಂತಸದ ಸಂಗತಿಯನ್ನು ಬ್ಲಾಗ್ ಗೆಳೆಯರೊಂದಿಗೆ ಹಂಚಿಕೊಳ್ಳುವುದು ನನ್ನ ಉದ್ದೇಶ. ನಾಗೇಂದ್ರ ಅಪ್ಪಟ ಗ್ರಾಮೀಣ ಪ್ರತಿಭೆ. ಸಿರಸಿ ತಾಲ್ಲೂಕಿನ ಮುತ್ಮುರ್ಡು ಎಂಬ ಹಳ್ಳಿಯ ಅಡಿಕೆ ಕೃಷಿಕರು. ಅವರ ಹಳ್ಳಿಗೆ ಬಸ್ಸಿಲ್ಲ, ಟಾರ್ ರಸ್ತೆಯಿಲ್ಲ ಮತ್ತು ಮೊಬೈಲ್ ಸಿಗ್ನಲ್ಲೂ ಇಲ್ಲ. ಅಲ್ಲಿದ್ದೇ ಅವರು ಛಾಯಾಗ್ರಹಣದಲ್ಲಿ ದೇಶ ವಿದೇಶಗಳ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಉತ್ತಮ ಚಿತ್ರಲೇಖನಗಳನ್ನು ಪತ್ರಿಕೆಗಳಲ್ಲಿ ಬರೆಯುವರು. ಆದಿಕೈಲಾಸಕ್ಕೆ ಚಾರಣ ಹಾಗೂ ಕೈಲಾಸ ಮಾನಸ ಸರೋವರಕ್ಕೆ ಹೋಗಿಬಂದಿರುವರು. ಇವರ ಸಾಧನೆಯನ್ನು ಗಮನಿಸಿ ಬೆಹ್ರೆನಿನ ಕನ್ನಡಿಗರು ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರಿಂದ ಸನ್ಮಾನಿಸುತ್ತಿದ್ದಾರೆ. ಈ ಹೆಮ್ಮೆಯ ಮತ್ತು ಸಂತಸದ ಸಂಗತಿಯನ್ನು ನಾಗೇಂದ್ರರ ಚಿತ್ರಗಳೊಂದಿಗೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ. ನಾಗೇಂದ್ರರಿಗೆ ಅಭಿನಂದನೆಗಳು.


Thursday, June 4, 2009

ಮುಖವಾಡ

ಮುಖವಾಡಗಳೆಂದರೆ ಮುಖವನ್ನು ಮರೆಸುವ ಸಾಧನಗಳೆಂದು ಕರೆಯಬಹುದು. ಮೊದಲಿನ ಶಿಲಾಯುಗದ ಚಿತ್ರಗಳಲ್ಲಿ ಮುಖವಾಡಗಳನ್ನು ಬಳಸಿದ ಚಿತ್ರಗಳಿವೆಯಂತೆ. ಭಾರತ, ಗ್ರೀಕ್, ಫ್ರಾನ್ಸ್, ಚೈನಾ, ಇಂಡೋನೇಷ್ಯಾ, ಜಪಾನ್ ಮೊದಲಾದ ದೇಶಗಳಲ್ಲಿ ಪ್ರಾಚೀನ ಕಾಲದಿಂದಲೂ ಮುಖವಾಡಗಳನ್ನು ಬಳಸುತ್ತಿದ್ದರು. ಪ್ರಾಚೀನ ಗ್ರೀಕ್ ರಂಗಭೂಮಿಯಲ್ಲಿ ಮುಖವಾಡಗಳು ವಿಶೇಷವಾಗಿ ಬಳಕೆಯಲ್ಲಿದ್ದವು. ಜಪಾನಿನ "ನೋ" ನಾಟಕಗಳಲ್ಲೂ ಮುಖವಾಡಗಳನ್ನು ಬಳಸುತ್ತಿದ್ದರು. ಅಲ್ಲದೆ ಇತ್ತೀಚಿನ ಸಾಂಕೇತಿಕ ನಾಟಕಗಳಲ್ಲಿ ಈ ಮುಖವಾಡಗಳ ಬಳಕೆಯನ್ನು ಕಾಣಬಹುದು.
ಮುಖವಾಡದ ಬಣ್ಣಗಾರಿಕೆಯ ಸೊಬಗನ್ನು ಗಮನಿಸಿದರೆ ಜನಪದ ಚಿತ್ರಕಲೆಯ ಶ್ರೇಷ್ಠತೆಯನ್ನು ಗುರುತಿಸಬಹುದು. ನಮ್ಮಲ್ಲಿ ಜಾತ್ರೆ, ಗ್ರಾಮ ದೇವತೆಗಳ ಉತ್ಸವ, ಭೂತಾರಾಧನೆ, ದೇವರ ಕುಣಿತ, ಸೋಮನ ಕುಣಿತ, ಹುಲಿವೇಷ ಕುಣಿತ, ಸಿಂಹನೃತ್ಯ, ಗಾರುಡಿಕುಣಿತಗಳಲ್ಲಿ ವಿವಿಧ ರೀತಿಯ ಮುಖವಾಡಗಳನ್ನು ಧರಿಸುವುದನ್ನು ಕಾಣಬಹುದು.
ಕೇರಳದ ಕೃಷ್ಣಾಟ್ಟಂ ಕಲಾಪ್ರದರ್ಶನದಲ್ಲಿ ಬಳಸುವ "ಘಂಟಕರಣ" ಮುಖವಾಡ.
ಕರ್ನಾಟಕದ ರಾಕ್ಷಸ ಮುಖವಾಡ.

ಮಹಾರಾಷ್ಟ್ರದ "ಭೈರವ" ಮುಖವಾಡ.

ಹಿಮಾಲಯದ ಬೌದ್ಧರ "ರಾಕ್ಷಸ" ಮುಖವಾಡ.

ದಕ್ಷಿಣ ಕವಾರದ "ಭೂತನಾಥ"ನ ಮುಖವಾಡ.

ಹಿಮಾಲಯದ ಬೌದ್ಧರ ಅಲಂಕಾರಿಕ ಮುಖವಾಡ.

ತಮಿಳುನಾಡಿನ ಭಾಗವತ ಮೇಳದ "ಗಣೇಶ" ಮುಖವಾಡ.

ಪಶ್ಚಿಮ ಬಂಗಾಲದ ಛಾವು ಕಲಾ ಪ್ರದರ್ಶನದ "ಹರ್-ಹರ್" ಮುಖವಾಡ.

ಲಡಾಕ್ ನ "ಗುರುಖಾಸಿಮ್" ಮುಖವಾಡ.

ಒರಿಸ್ಸಾದ ಸಾಹಿಜಾತ್ರಾದಲ್ಲಿ ಬಳಸುವ "ಗರುಡ" ಮುಖವಾಡ.

ಒರಿಸ್ಸಾದ :ನರಸಿಂಹ" ಮುಖವಾಡ.

ಕೇರಳದ ಕೃಷ್ಣಾಟ್ಟಂ ಕಲಾಪ್ರದರ್ಶನದಲ್ಲಿ ಬಳಸುವ ಮುಖವಾಡ.

"ಸೂರ್ಯ" - ಮೈಸೂರಿನ ಅಲಂಕಾರಿಕ ಮುಖವಾಡ.