Saturday, November 20, 2010

’ವರದ’ನಾಯಕನಹಳ್ಳಿ ಸಹಕಾರ ಸಂಘ

‘ಸಿಲ್ಕ್’ ಮತ್ತು ‘ಮಿಲ್ಕ್’ಗೆ ಖ್ಯಾತಿ ಗಳಿಸಿರುವ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸಾವಿರಾರು ಕುಟುಂಬಗಳು ರೇಷ್ಮೆ ಮತ್ತು ಹೈನುಗಾರಿಕೆ ಮೇಲೆ ಅವಲಂಬಿತವಾಗಿವೆ. ಹೈನುಗಾರಿಕೆ ಅಭಿವೃದ್ಧಿ ಮಾಡುವಲ್ಲಿ ಸಹಕಾರಿ ಸಂಘಗಳ ಪಾತ್ರವೂ ವಿಶೇಷ. ಕೆಲ ಸಹಕಾರಿ ಸಂಘಗಳು ಹೈನುಗಾರಿಕೆ ಚಟುವಟಿಕೆಗಳಿಗೆ ಮಾತ್ರವೇ ಸೀಮಿತವಾಗಿದ್ದರೆ ಇನ್ನೂ ಕೆಲ ಸಂಘಗಳು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿವೆ.



ಆ ಕೆಲವೇ ಸಂಘಗಳಲ್ಲಿ ನಮ್ಮ ತಾಲ್ಲೂಕಿನ ವರದನಾಯಕನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘ ಕೂಡ ಒಂದು. ದೈನಂದಿನ ಚಟುವಟಿಕೆಗಳ ಜೊತೆಗೆ ಶಾಲಾ ಮಕ್ಕಳಿಗಾಗಿ ಹಾಲು ಪೂರೈಕೆ, ಗ್ರಾಮದಲ್ಲಿ ಬೀದಿದೀಪಗಳನ್ನು ಅಳವಡಿಸುವುದು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹಣಕಾಸು ನೆರವು ನೀಡುವುದು ಮುಂತಾದ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವುದರ ಜೊತೆಗೆ ಗ್ರಾಮೀಣಾಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದೆ.
"ಸಂಘ ಸ್ಥಾಪನೆಗೊಂಡು ೩೫ ವರ್ಷಗಳು ಕಳೆದಿವೆ. ೧೬ ಲೀಟರ್ ಹಾಲಿನ ಶೇಖರಣೆಯಿಂದ ಆರಂಭಗೊಂಡ ಸಂಘ ಈಗ ೮೦೦ ಲೀಟರಿನಷ್ಟು ಹಾಲನ್ನು ಪ್ರತಿ ದಿನ ಸಂಗ್ರಹಿಸುತ್ತಿದೆ. ಸಹಕಾರಿ ಸಂಘಗಳ ಲೆಕ್ಕ ಪರಿಶೋಧಕರಿಂದ ಪ್ರತಿ ವರ್ಷವೂ ‘ಬಿ’ ಗ್ರೇಡ್ ಪಡೆಯುತ್ತಿದ್ದೇವೆ. ಹಾಲಿನ ಅಳತೆ ನಿಖರವಾಗಿ ದಾಖಲಿಸಲು ಕಂಪ್ಯೂಟರೀಕೃತ ಅಳತೆ ವ್ಯವಸ್ಥೆ ಮಾಡಿದ್ದೇವೆ. ರಾಸುಗಳಿಗೆ ಆರೋಗ್ಯ ತಪಾಸಣೆ, ವೈದ್ಯರಿಂದ ಚಿಕಿತ್ಸೆ, ರಾಸುಗಳಿಗೆ ನೀಡಬೇಕಾದ ಪೌಷ್ಠಿಕ ಆಹಾರ ಹಾಗೂ ಪಾಲನೆ ಬಗ್ಗೆ ಕಾರ್ಯಗಾರ, ಪಶು ಆಹಾರ ಸರಬರಾಜು, ಮೇವಿನ ಬೀಜ ವಿತರಣೆ ಮತ್ತು ಶುದ್ಧ ಹಾಲು ನೀಡುವ ಗ್ರಾಹಕರನ್ನು ಗುರುತಿಸಿ ಬಹುಮಾನ ನೀಡುತ್ತೇವೆ" ಎಂದು ಸಂಘದ ಅಧ್ಯಕ್ಷ ವಿ.ಬಿ.ಅಮರನಾಥ್ ತಿಳಿಸಿದರು.
ಆರಂಭದಲ್ಲಿ ಚೀಮನಹಳ್ಳಿ ಹಾಗೂ ತಾತಹಳ್ಳಿಯಿಂದ ಉತ್ಪಾದಕರು ಬರುತ್ತಿದ್ದರು. ಈಗ ಅಲ್ಲೆಲ್ಲಾ ಸಹಕಾರ ಸಂಘಗಳು ಸ್ಥಾಪನೆಯಾದ್ದರಿಂದ ಕೇವಲ ವರದನಾಯಕನಹಳ್ಳಿಗೆ ಮಾತ್ರ ಈ ಸಂಘ ಸೀಮಿತವಾಗಿದೆ. ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದಿದ ಈ ಸಂಘವು ಉಳಿತಾಯದ ರೂಪದಲ್ಲಿ ಬ್ಯಾಂಕಿನಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಜಮೆ ಮಾಡಿದ್ದು ಆರ್ಥಿಕವಾಗಿ ಸುಸ್ಥಿತಿಯಲ್ಲಿದೆ.
"ಕಳೆದ ೮ ವರ್ಷಗಳಿಂದ ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಬಿಸಿಯೂಟದ ಜೊತೆ ಮಜ್ಜಿಗೆಗಾಗಿ ಸಂಘದವರು ಹಾಲು ಒದಗಿಸುತ್ತಿದ್ದಾರೆ. ರಾಷ್ಟ್ರೀಯ ಹಬ್ಬಗಳಂದು ಶಾಲಾ ಮಕ್ಕಳಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸುವುದರ ಜೊತೆ ಬಡ ವಿದ್ಯಾರ್ಥಿಗಳಿಗೆ ಪಠ್ಯ ಸಾಮಗ್ರಿಗಳನ್ನು ವಿತರಿಸುತ್ತಾರೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವುದರ ಜೊತೆಗೆ ಶಾಲೆಯ ಅಗತ್ಯಗಳಿಗೆ ಸ್ಪಂದಿಸುತ್ತಾರೆ" ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹೆಚ್.ವಿ.ವೆಂಕಟರೆಡ್ಡಿ ತಿಳಿಸುತ್ತಾರೆ.
"ಗ್ರಾಮದಲ್ಲಿ ಓಡಾಡಲು ಅನುಕೂಲವಾಗುವಂತೆ ಅಗತ್ಯವಾದ ಸಿಎಫ್ಎಲ್ ಬೀದಿ ದೀಪಗಳ ಅಳವಡಿಕೆ. ಆರ್ಥಿಕವಾಗಿ ಅಶಕ್ತ ಕುಟುಂಬದವರಿಗೆ ಅನಾರೋಗ್ಯ ಕಂಡು ಬಂದಾಗ ಅವರ ತುರ್ತು ಅಗತ್ಯಕ್ಕೆ ೨೦೦೦ ದಿಂದ ೪೦೦೦ ರೂಗಳವರೆಗೆ ನೆರವು ನೀಡುವುದರ ಜೊತೆಗೆ ಗ್ರಾಮದ ಜಾತ್ರೆ ಹಾಗೂ ಉತ್ಸವಗಳಿಗೆ ಸಂಘದವರು ಹಾಲು ಮತ್ತು ಮಜ್ಜಿಗೆ ವ್ಯವಸ್ಥೆ ಮಾಡುತ್ತಾರೆ. ಗ್ರಾಮದ ಜನಪದ ಕಲೆಗಳ ಪ್ರೋತ್ಸಾಹಕ್ಕಾಗಿ ನೆರವು ನೀಡುವರು. ಈ ಬಾರಿ ಶಾಲೆ ಹಾಗೂ ಎಲ್ಲ ಗ್ರಾಮಸ್ಥರೂ ಒಂದೇ ಸ್ಥಳದಲ್ಲಿ ರಾಷ್ಟ್ರೀಯ ಹಬ್ಬದಾಚರಣೆ ಮಾಡಬೇಕೆಂಬ ಉದ್ದೇಶದಿಂದ ಧ್ವಜ ಸ್ತಂಬ ಮತ್ತು ಕಲ್ಲಿನ ವೇದಿಕೆ ನಿರ್ಮಿಸುತ್ತಿದ್ದಾರೆ" ಎಂದು ಹೇಳುತ್ತಾರೆ ಗ್ರಾಮದ ಹಿರಿಯ ಗೋಪಾಲಪ್ಪ.

Thursday, November 11, 2010

ಕಾಡು ಹೂಗಳ ಕಾರುಬಾರು...


ಕ್ಯಾಸಿಯಾಮರ

ಶಿಡ್ಲಘಟ್ಟದ ಹೊರವಲಯದ ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ರೇಷ್ಮೆ ವಿಸ್ತರಾಣಾಧಿಕಾರಿಗಳ ಕಚೇರಿ ಮುಂದೆ ಕ್ಯಾಸಿಯಾಮರ ಹಳದಿ ಬಣ್ಣದ ಹೂಗಳನ್ನು ಅರಳಿಸಿಕೊಂಡು ದಾರಿ ಹೋಕರ ಕಣ್ಮನ ತಣಿಸುತ್ತಿದೆ.
ಈ ಕಚೇರಿಯ ಆವರಣದಲ್ಲಿ ಎರಡು ಮರಗಳಿವೆ. ಟೆಕೋಮಾ ಅಥವಾ ಟಿಬೆಬುಯಾ ಎಂದು ಕರೆಯುವ ಮರ ಬೇಸಿಗೆಯಲ್ಲಿ ಯುಗಾದಿ ಹಬ್ಬದ ಸಮಯದಲ್ಲಿ ಎಲೆಯನ್ನೆಲ್ಲಾ ಉದುರಿಸಿಕೊಂಡು ಹಳದಿ ಹೂಗಳನ್ನು ಮರದ ತುಂಬಾ ಅರಳಿಸಿ ಕಂಗೊಳಿಸುತ್ತದೆ. ಇನ್ನೊಂದು ಮರವಾದ ಸೀಮೆ ತಂಗಡಿ ವಿಜಯದಶಮಿ ಸಮಯದಲ್ಲಿ ಮರದ ತುಂಬಾ ಹಳದಿ ಬಣ್ಣದ ಹೂವನ್ನು ಅರಳಿಸಿ ಹೊನ್ನಿನ ಹೂ ಚೆಲ್ಲುವಂತೆ ಭಾಸವಾಗುತ್ತದೆ.
ಮರದ ಕೆಳಗೆ ಬಿದ್ದ ಹೂವಿನಿಂದ ನೆಲವೆಲ್ಲ ಶೃಂಗಾರಗೊಂಡಿದೆ. ಮಳೆ ಕಡಿಮೆ ಇರುವ ಪ್ರದೇಶದಿಂದ ಮಳೆ ಹೆಚ್ಚು ಇರುವ ಪ್ರದೇಶಗಳಲ್ಲಿ ಬೆಳೆಯಬಲ್ಲ ಈ ಮರ ಸೌಂದರ್ಯದ ಪ್ರತೀಕವಾಗಿದೆ. ಆಂಗ್ಲ ಭಾಷೆಯಲ್ಲಿ ಕ್ಯಾಸಿಯಾ ಎಂದು ಕರೆಯುವ ಇದರ ದಟ್ಟ ಹಳದಿ ಬಣ್ಣದ ಚಿಕ್ಕ ಹೂಗಳು ಆಕರ್ಷಕವಾಗಿವೆ. ಹೂದಾನಿಯಲ್ಲಿ ಸಿಂಗರಿಸಿಟ್ಟರೆ ವಾರಕ್ಕೂ ಹೆಚ್ಚು ಕಾಲ ಬಾಡುವುದಿಲ್ಲ.
ತಂಗಡಿ, ಸೀಮೆತಂಗಡಿ ಮತ್ತು ಕಕ್ಕೆ ಗಿಡಗಳ ಹೂಗಳು ಒಂದೇ ರೀತಿಯಿದ್ದರೂ ಎಲ್ಲವೂ ಬೇರೆ ಬೇರೆ. ಸೌಂದರ್ಯವಷ್ಟೇ ಅಲ್ಲದೆ ಆಯುರ್ವೇದದ ಔಷಧಿ ತಯಾರಿಕೆಯಲ್ಲೂ ಇದರ ಹೂ, ಎಲೆ ಹಾಗೂ ತೊಗಟೆ ಬಳಕೆಗೆ ಬರುತ್ತದೆ.


ಅರಳಿರುವ ಕಾಡು ತುಂಬೆ ಹೂಗಳು.

ಶಿಡ್ಲಘಟ್ಟದ ಹೊರವಲಯದಲ್ಲಿ ಅಮ್ಮನಕೆರೆ ಏರಿಯ ಮೇಲೆ ರಸ್ತೆಯ ಎರಡೂ ಬದಿಯಲ್ಲಿ ಕೆಂಪು ಕೆಂಪಾದ ಪುಟ್ಟ ಪುಟ್ಟ ಹೂಗಳು ಅರಳಿ ಪ್ರಯಾಣಿಗರ ಕಣ್ಮನ ತಣಿಸುತ್ತಿವೆ. ಇಷ್ಟು ದಿನ ಕಳೆ ಗಿಡಗಳಂತೆ ಕಂಡುಬರುತ್ತಿದ್ದ ಗಿಡಗಳಲ್ಲಿ ಈಗ ಹೂಗಳು ಅರಳಿ ಹಸಿರಿನ ಹಿನ್ನೆಲೆಯಲ್ಲಿ ಆಕರ್ಷಕವಾಗಿ ಕಾಣುತ್ತಿದೆ.


ಕಾಡು ತುಂಬೆ ಹೂ

ಪಿ.ಲಂಕೇಶರ "ಕೆಂಪಾದವೋ ಎಲ್ಲ ಕೆಂಪಾದವೋ..." ಹಾಡಿನ ಸಾಲುಗಳನ್ನು ನೆನೆಪಿಸುವಂತೆ ಅರಳಿರುವ ಈ ಹೂವನ್ನು "ಕಾಡು ತುಂಬೆ", "ಹಾಲು ಬಳ್ಳಿ" ಎಂದು ಕರೆಯುವರು. ಇಂಗ್ಲೀಷಿನಲ್ಲಿ ಇದನ್ನು ರೆಡ್ ಸ್ಟಾರ್ ಗ್ಲೋರಿ ಎನ್ನುತ್ತಾರೆ. ಸುಮಾರು ೩ ರಿಂದ ೪ ಸೆಮೀ ಉದದ ಕೆಂಪು ಹೂಗಳಿಂದ ಹಳದಿ ಬಣ್ಣದ ಪರಾಗರೇಣುಗಳು ಹೊರಬಂದು ಅತ್ಯಂತ ಸುಂದರವಾಗಿರುತ್ತವೆ. ಉತ್ತರ ಮೆಕ್ಸಿಕೋ ಮತ್ತು ಅರಿಜೋನಾ ಮೂಲದ ಈ ಸಸ್ಯ ಈಗ ಭಾರದ್ದೇ ಆಗಿಹೋಗಿದೆ. ಸಾಧಾರಣವಾಗಿ ಮಳೆ ಮುಗಿಯುವ ಸಮಯದಲ್ಲಿ ಅಂದರೆ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೂ ಈ ಹೂಗಳು ಅರಳುತ್ತವೆ. ಈ ಹೂಗಳನ್ನು ಕಂಡು ರೈತರು ಮಳೆ ಮುಗಿಯಿತೇ ಎಂದು ಆತಂಕ ಅನುಭವಿಸುವಂತಾಗಿದೆ.



ಈ ಹೂವಿನ ಜತೆಯಲ್ಲೇ ತಂಗಡಿ, ದತ್ತೂರಿ, ಮುಟ್ಟಿದರೆ ಮುನಿ, ಲಾಂಟಾನಾ, ಮಾರ್ನಿಂಗ್ ಗ್ಲೋರಿ, ತುಂಬೆ, ಸಿಲ್ವರ್ ಕಾಕ್ಸ್‌ಕೂಂಬ್, ಉತ್ತರಂಗಿ ಮುಂತಾದ ಹೂಗಳೂ ಅಲ್ಲಲ್ಲಿ ಅರಳಿರುವುದರಿಂದ ನಾನಾ ವಿಧದ ಬಣ್ಣ ಬಣ್ಣದ ಚಿಟ್ಟೆಗಳು ಮಕರಂದ ಹೀರಲು ಹಾರಾಡುತ್ತಿರುತ್ತವೆ.


ಮಾರ್ನಿಂಗ್ ಗ್ಲೋರಿ


ಉತ್ತರಂಗಿ



ಈ ಬೆಡಗಿನ ಸಿರಿಗಳು ಕೇವಲ ಕೆಲ ದಿನಗಳು ಮಾತ್ರ ಅರಳಿ ತಮ್ಮ ಚೆಲುವಿನಿಂದ ನೋಡುಗರ ಮನತಣಿಸಿ ಅನೇಕ ಚಿಟ್ಟೆ ಹಾಗೂ ದುಂಬಿಗಳ ಹೊಟ್ಟೆಯನ್ನೂ ತುಂಬಿಸಿ ತಾವು ಬಂದ ಕೆಲಸ ಮುಗಿಯಿತೆಂಬಂತೆ ಮಾಯವಾಗುತ್ತವೆ.


ಮುಟ್ಟಿದರೆ ಮುನಿ



ಮೊದಲು ಪ್ರತಿ ಮನೆಯ ಹಿಂದೆ ಅಥವಾ ಮುಂದೆ ಹೂದೋಟವಿದ್ದೇ ಇರುತ್ತಿತ್ತು. ಇಂಥಹ ಹೂ ಬಳ್ಳಿಗಳನ್ನು ಬೇಲಿಗೆ ಹಬ್ಬಿಸುತ್ತಿದ್ದರು. ಮನೆಗೆ ಸುಂದರ ವಾತಾವರಣವನ್ನು ಇವು ಕಲ್ಪಿಸುತ್ತಿದ್ದವು. ಆದರೆ ಆಧುನಿಕತೆ ಬೆಳೆದಂತೆ ಮನೆ ಮುಂದಿನ ಆವರಣದಲ್ಲಿ ಇಂಥ ಕಾಡು ಹೂ ಬಳ್ಳಿ ಕಾಣೆಯಾಗುತ್ತಿವೆ. ಮುಡಿಗೇರದೆ ಗುಡಿಸೇರದೆ ತನ್ನಷ್ಟಕ್ಕೆ ತಾನರಳಿ ಅಳಿದುಹೋಗುವ ಈ ಸುಂದರ ಸುಮಗಳನ್ನು ಸ್ಪರ್ಷಿಸುವ ಅದೃಷ್ಟ ಪಾತರಗಿತ್ತಿಗಳಂತೆ ನಮ್ಮ ಕಣ್ಣಿಗೂ ಇರಲಿ.


ತುಂಬೆ


ಹಳದಿ ಕಾಡುತುಂಬೆಹೂ



ತಂಗಡಿ

Thursday, November 4, 2010

ಶಿಡ್ಲಘಟ್ಟದಲ್ಲೊಂದು ವಿಶಿಷ್ಟ ಕೃಷಿ ಪ್ರಯೋಗ


ಶಿಡ್ಲಘಟ್ಟ ತಾಲ್ಲೂಕು ಹಿತ್ತಲಹಳ್ಳಿಯ ರೈತ ಎಚ್.ಜಿ.ಗೋಪಾಲಗೌಡ ತಮ್ಮ ತೋಟದಲ್ಲಿ ಬೆಳೆದಿರುವ ಮಿಶ್ರ ಬೆಳೆ

ಹವಾಮಾನ ಮತ್ತು ಪರಿಸರಕ್ಕೆ ಅನುಗುಣವಾಗಿ ಕೃಷಿ ಚಟುವಟಿಕೆ ಕೈಗೊಳ್ಳಬೇಕು. ವಿಜ್ಞಾನಿಗಳ ಹಾಗೆ ಚಿಂತನೆ ನಡೆಸಿ, ಉತ್ತಮ ಬೆಳೆ ಬೆಳೆಯಬೇಕು ಎಂದು ಮೇಲಿಂದ ಮೇಲೆ ರೈತರಿಗೆ ಸಲಹೆ ನೀಡಲಾಗುತ್ತದೆ. ಕೆಲ ಸಂದರ್ಭಗಳಲ್ಲಿ ಸರ್ಕಾರದಿಂದ ಪ್ರೋತ್ಸಾಹ ಕೂಡ ನೀಡಲಾಗುತ್ತದೆ. ಆದರೆ ಇದ್ಯಾವುದರ ಮೇಲೆಯೂ ಅವಲಂಬಿತರಾಗದೇ ತಾಲ್ಲೂಕಿನ ರೈತರೊಬ್ಬರು ವಿಶಿಷ್ಟ ರೀತಿಯ ಪ್ರಯೋಗ ಕೈಗೊಂಡಿದ್ದಾರೆ.

ನಮ್ಮ ತಾಲ್ಲೂಕಿನ ಹಿತ್ತಲಹಳ್ಳಿಯ ಕೃಷಿಕ ಎಚ್.ಜಿ.ಗೋಪಾಲಗೌಡ ಅವರು ಕೇವಲ ಮಳೆಯನ್ನೇ ನಂಬಿ ತಮ್ಮ ಮೂರೂವರೆ ಎಕರೆ ಜಮೀನಿನಲ್ಲಿ ಮಿಶ್ರ ಬೆಳೆ ಬೆಳೆದು ಯಶಸ್ವಿಯಾಗಿದ್ದಾರೆ. ಮಾವು, ರಾಗಿ, ಕಡಲೆಕಾಯಿ, ಹಿಪ್ಪುನೇರಳೆ, ಅವರೆ, ಬೆಂಡೆ, ಹಲಸಂದೆ, ಸಾಸಿವೆ, ತೊಗರಿ, ಚೆಂಡುಹೂ ಮತ್ತು ಬದುಗಳಲ್ಲಿ ಸಿಲ್ವರ್ ಗಿಡಗಳನ್ನು ಬೆಳೆದಿದ್ದಾರೆ. ಗುಂಡಿಗಳಲ್ಲಿ ಕೃಷಿ ತ್ಯಾಜ್ಯವನ್ನು ತುಂಬಿ, ಸಾವಯವ ಗೊಬ್ಬರ ಬಳಸಿ ಬೆಳೆ ಬೆಳೆಯುತ್ತಿದ್ದಾರೆ.



"ಮೂರು ವರ್ಷಗಳ ಹಿಂದೆ ಈ ಜಮೀನಿನಲ್ಲಿ ನೀಲಗಿರಿ ಮರಗಳಿದ್ದವು. ಅದರಿಂದ ಕಡಿಮೆಆದಾಯ ಬರುತ್ತಿತ್ತು. ಹೀಗಾಗಿ ಎರಡು ವರ್ಷಗಳ ಹಿಂದೆ ಮಿಶ್ರ ಬೆಳೆಯ ಪ್ರಯೋಗ ಕೈಗೊಂಡೆ. ಮೊದಲ ವರ್ಷ ಉತ್ತಮ ಫಲ ಸಿಗಲಿಲ್ಲ. ಆದರೆ ಕಳೆದ ವರ್ಷ ೪೦ ಕ್ವಿಂಟಾಲ್ ರಾಗಿ, ನಾಲ್ಕು ರೇಷ್ಮೆ ಬೆಳೆಗಾಗುವಷ್ಟು ಹಿಪ್ಪುನೇರಳೆಸೊಪ್ಪು, ೨ ಚೀಲ ಕಡಲೆಕಾಯಿ, ಒಂದು ಚೀಲ ಅವರೆಕಾಯಿ, ೨ ತಿಂಗಳ ಕಾಲ ಮನೆ ಬಳಕೆಗಾಗುವಷ್ಟು ತರಕಾರಿ ಬೆಳೆದೆ. ಜಮೀನಿನ ಫಲವತ್ತತೆಗೆ ರೇಷ್ಮೆ ತ್ಯಾಜ್ಯ, ಕುರಿ ತ್ಯಾಜ್ಯ, ಸಗಣಿ, ಗಂಜಲ, ಬಯೋಗ್ಯಾಸ್ ಸ್ಲರಿ ಬಳಕೆ ಮಾಡಿರುವೆ. ಆದಷ್ಟೂ ಸಾಗುವಳಿ ವೆಚ್ಚ ಕಡಿಮೆ ಮಾಡುವುದರಿಂದ ಆದಾಯ ಹೆಚ್ಚುತ್ತದೆ" ಎಂದು ಗೋಪಾಲಗೌಡ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ.



"ಜಮೀನಿನ ಸುತ್ತ ೩ ಅಡಿ ಆಳ ಮತ್ತು ಅಗಲದ ಗುಣಿ ಮಾಡಿರುವುದರಿಂದ ದನಗಳ ಕಾಟವಿಲ್ಲ ಮತ್ತು ಮಳೆ ನೀರು ಇಂಗುತ್ತದೆ. ನಮ್ಮ ಜಮೀನಿನಲ್ಲಿ ಬಿದ್ದ ಮಳೆನೀರು ಒಂದು ತೊಟ್ಟೂ ಪೋಲಾಗದಂತೆ ಜಮೀನಿನ ಏರು ತಗ್ಗನ್ನು ಅನುಸರಿಸಿ ಮಧ್ಯೆ ಮಧ್ಯೆ ಗುಣಿ ಮಾಡಿದ್ದೇವೆ. ಇದರಿಂದಾಗಿ ಜಮೀನಿನ ಪಕ್ಕದಲ್ಲೇ ನೀಲಗಿರಿ ತೋಪಿದ್ದರೂ ಜಮೀನಿಗೆ ತೊಂದರೆಯಾಗಿಲ್ಲ. ಇದಲ್ಲದೆ ಜಮೀನಿನ ಒಂದು ಭಾಗದಲ್ಲಿ ೨೫ ಮೀಟರ್ ಉದ್ದ ಅಗಲ ಮತ್ತು ೪ ಮೀಟರ್ ಆಳದ ಕೃಷಿಹೊಂಡ ನಿರ್ಮಿಸಿದ್ದೇವೆ. ಪಕ್ಕದಲ್ಲಿ ಕಾಲುವೆಯಿದ್ದು ಮಳೆ ನೀರು ಹರಿದು ಹೋಗುವಾಗ ಹೊಂಡದಲ್ಲಿ ಬಂದು ಇಂಗುತ್ತದೆ" ಎಂದು ಅವರು ನೀರಿನ ಸದ್ಭಕೆಯ ತಂತ್ರವನ್ನು ವಿವರಿಸುತ್ತಾರೆ.



"ಗೋಪಾಲಗೌಡರು ಕಡಿಮೆ ನೀರು ಬಳಸಿ ಸಾವಯವ ಪದ್ಧತಿಯಲ್ಲಿ ಉತ್ತಮ ಹಿಪ್ಪುನೇರಳೆ ಸೊಪ್ಪನ್ನು ಬೆಳೆಯುತ್ತಾರೆ. ಗುಣಮಟ್ಟದ ರೇಷ್ಮೆ ಗೂಡನ್ನೂ ಬೆಳೆಯುತ್ತಾರೆ. ಮಿಶ್ರ ಬೆಳೆ, ರಾಂಬುಲೆಟ್ ಕುರಿ ಸಾಕಣೆ, ಕಡಿಮೆ ವೆಚ್ಚ ಮಾಡಿ ಹೆಚ್ಚು ಇಳುವರಿ ಪಡೆಯುವ ಇವರ ಮಾದರಿ ವಿಧಾನ ಹಾಗೂ ಸಾಧನೆ ಗುರುತಿಸಿ ರಾಜ್ಯ ಸರ್ಕಾರ ಕಳೆದ ವರ್ಷ ಕೃಷಿ ಪಂಡಿತ ಪ್ರಶಸ್ತಿ ನೀಡಿ ಗೌರವಿಸಿದೆ. ಚೀನಾ ಮತ್ತು ಹಾಂಕಾಂಗ್ ದೇಶಗಳು ಮತ್ತು ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿನ ಕೃಷಿ ಪದ್ಧತಿಯನ್ನು ಅಧ್ಯಯನ ಮಾಡಿದ್ದಾರೆ. ಸಿರಿ ರೈತಕೂಟದ ಅಧ್ಯಕ್ಶರಾಗಿ ಇತರ ರೈತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಇಂಥಹ ರೈತರಿರುವುದು ಜಿಲ್ಲೆಗೇ ಹೆಮ್ಮೆ" ಎಂದು ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಶಿವರಾಂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.



ಗೋಪಾಲಗೌಡರ ಪೋನ್ ನಂ: ೯೪೪೮೧೩೮೩೯೭