Monday, March 28, 2011

ಪುಟಾಣಿ ಕೀಟಗಳ ರಮ್ಯ ನೋಟ


ಶಿಡ್ಲಘಟ್ಟದ ಹೊರವಲಯದ್ಲಲಿ ಕಂಡು ಬಂದ ಹುಲ್ಲಿನ ಮೇಲಿನ ಜೇಡ ಮತ್ತು ಕಂಬಳಿಹುಳು.


ಒಂದೇ ಕಡ್ಡಿಯ ಮೇಲೆ ಎರಡು ಜೀವಿಗಳ ತೊಳಲಾಟಗಳು. ಒಂದು ತನ್ನ ಹೆಜ್ಜೆಯ ಜಾಡನ್ನು ತೋರಿಸದೇ ಮುನ್ನಡೆಯುತ್ತಿದ್ದರೆ, ಇನ್ನೊಂದು ಸಾವಿರ ಕಾಲುಗಳ ಬಲದಿಂದ ಅದನ್ನು ಹಿಂಬಾಲಿಸುತ್ತಿದೆ. ತನ್ನ ಪ್ರೀತಿಯ ಮೊಟ್ಟೆಗಳನ್ನು ಬಲೆಯಲ್ಲಿ ಹೆಣೆದುಕೊಂಡು ನಿಧಾನವಾಗಿ ಜೇಡ ಹೆಜ್ಜೆ ಹಾಕುತ್ತಿದ್ದರೆ, ಸಾವಿರ ಕಾಲುಗಳ ಕಂಬಳಿಹುಳು ಹಿಡಿದೇ ತೀರುತ್ತೇನೆ ಎಂಬಂತೆ ನಿಗಾ ವಹಿಸಿಕೊಂಡು ಸಾಗುತ್ತಿದೆ.

ಮೈಯೆಲ್ಲಾ ಹಸಿರು ಬಣ್ಣದಿಂದ ಕೂಡಿರುವ ಲಿಂಕ್ ಜಾತಿಯ ಜೇಡ ತನ್ನ ಮೊಟ್ಟೆಗಳಿಗೆ ಯಾವುದೇ ಅಪಾಯವಾಗದಿರಲಿ ಎಂದು ಬಲೆಯನ್ನು ನೇಯ್ದು ಉಂಡೆಯಂತೆ ಮಾಡಿಕೊಂಡಿದೆ. ಪ್ರಥಮ ನೋಟಕ್ಕೆ ಮೊಲದ ಹಿಕ್ಕೆಯಂತೆ ಕಾಣುವ ಉಂಡೆಯಲ್ಲಿ ಮೊಟ್ಟೆಗಳಿವೆ ಎಂದು ನಂಬಲು ಸಹ ಆಗುವುದಿಲ್ಲ. ನಿಧಾನವಾಗಿ ಯಾರಿಗೂ ಗೊತ್ತಾಗದ ಹಾಗೆ ಮೊಟ್ಟೆಗಳ ಕೋಶವನ್ನು ಯಾವುದಾದರೂ ಎಲೆಯ ಮರೆಯಲ್ಲಿ ಸೇರಿಸಿ ಜೋಪಾನ ಮಾಡುವ ತಾಯಿ ಕಾಳಜಿ ಅದರದ್ದು.

ಆದರೆ ಮತ್ತೊಂದೆಡೆ ಇಬ್ಬನಿಯಲ್ಲಿ ತೊಯ್ದ ಪುಟಾಣಿ ಕಂಬಳಿ ಹುಳು ಮೈಮೇಲಿರುವ ರೋಮಗಳನ್ನು ಬಿಸಿಲಿಗೆ ಒಡ್ಡಿ ಮೈ ಒಣಗಿಸಿಕೊಳ್ಳುತ್ತಾ ಆಹಾರದ ಹುಡುಕಾಟದಲ್ಲಿ ಮುನ್ನಡೆದಿದೆ. ಅದೇ ಹುಲ್ಲಿನ ಕಡ್ಡಿಯ ಮೇಲೆ ಅವಲಂಬಿತವಾಗಿರುವ ಕಂಬಳಿ ಹುಳು ಜೇಡನ ಹೆಜ್ಜೆ ಜಾಡು ಹುಡುಕುತ್ತ ಸಾಗಿದೆ ಎಂಬಂತೆ ಕಾಣಿಸುತ್ತದೆ.


ತಾಯಿ ಜೇಡ ಮೊಟ್ಟೆಗಳನ್ನು ಕಾಪಾಡಲು ಪ್ರಯತ್ನಿಸುತ್ತಿದ್ದರೆ ರೋಮಗಳ ಕಂಬಳಿಹುಳು ಎತ್ತರಕ್ಕೇರಲು ಪ್ರಯತ್ನಸುತ್ತಿದೆ.


ಎರಡು ಜೀವಿಗಳ ನಾಟಕಕ್ಕೆ ರಂಗಮಂದಿರವಾಗಿರುವ ಹುಲ್ಲಿನ ಕಡ್ಡಿ ಮತ್ತು ದೇವರ ಋಜುವಿನಂತಿರುವ ಎಳೆ ಹುಲ್ಲು ಅದರ ಮೇಲಿನ ಇಬ್ಬನಿ ಅದ್ಭುತ ಸೌಂದರ್ಯದ ದೃಶ್ಯವನ್ನಾಗಿಸಿದೆ.
ಹೆಣ್ಣು ಜೇಡ ಒಂದು ಬಾರಿಗೆ ನೂರಾರು ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಗಳನ್ನಿಡುವುದಕ್ಕಾಗಿಯೇ ಅದು ರೇಷ್ಮೆಯ ಚೀಲವನ್ನು ತಯಾರಿಸುತ್ತದೆ.
ನಿಸರ್ಗದ ಅನಂತ ಕ್ಷಣಗಳಲ್ಲಿ ನಡೆಯುವ ದೃಶ್ಯಾವಳಿಗಳಲ್ಲಿ ಸೆರೆಸಿಕ್ಕ ಕೆಲ ಅಮೂರ್ತ ಕ್ಷಣಗಳಿವು.ಹೆಣ್ಣು ಜೇಡ ತನ್ನ ಮುಂದಿನ ಸಂತತಿಯನ್ನು ರಕ್ಷಿಸಲು ಸಾಧ್ಯವಾಯಿತೆ? ಸಾವಿರ ರೋಮಗಳ ಕಂಬಳಿಹುಳು ತನ್ನನ್ನು ತಾನು ರಕ್ಷಿಸಿಕೊಂಡು ಗಮ್ಯ ತಲುಪಿತೆ? ಇವೆರಡರ ತೊಳಲಾಟಕ್ಕೆ ಸಾಕ್ಷಿಯಾದ ಹುಲ್ಲಿನ ಪಾತ್ರವೇನು? ಇಬ್ಬನಿಗಳ ಭಾಷೆಯನ್ನು ಓದುವವರ್ಯಾರು? ಮುಂತಾದ ಅನೇಕ ಪ್ರಶ್ನೆಗಳಿಗೆ ಉತ್ತರವೇ ಇಲ್ಲವೇನೊ. ಅರೆ ಕ್ಷಣದ ಸೌಂದರ್ಯವನ್ನು ಸವಿಯುವುದೇ ಪ್ರಕೃತಿ ನಮಗೆ ನೀಡುವ ವರದಾನ.

Tuesday, March 15, 2011

ಹಸಿರೆಲೆ ಮೇಲೆ ಏನಿದು ತಂತಾನ...ನಿರ್ಜೀವ ಒಣ ಹುಲ್ಲಿನಲ್ಲಿ ಸಂಚಲನ ಕಾಣುವುದು ಕಷ್ಟ. ನಡೆದಾಡುವುದು ಕಾಣುವುದಂತೂ ಅಸಾಧ್ಯ. ಕಣ್ಣು ಮಿಟುಕಿಸಿದ ಕ್ಷಣ ಮಾತ್ರದಲ್ಲೇ ಒಣಹುಲ್ಲು ಅಲ್ಪಸ್ವಲ್ಪ ಮಿಸುಕಾಡಿದರೆ ಅದು ಅಚ್ಚರಿ. ಅಂತಹ ಒಂದು ಅಚ್ಚರಿ ಕಂಡು ಬಂದುದಷ್ಟೇ ಅಲ್ಲದೆ ಕ್ಷಣಕಾಲ ಕುತೂಹಲಕ್ಕೂ ಎಡೆಮಾಡಿಕೊಟ್ಟಿತು.
ಶಿಡ್ಲಘಟ್ಟದ ಗೌಡನಕೆರೆ ಅಂಚಿನಲ್ಲಿ ಒಣಹುಲ್ಲಿನಂತಿದ್ದ ಎರಡು ಕೀಟಗಳು ಯಾರಿಗೂ ತಿಳಿಯದ ಹಾಗೆ, ಸದ್ದು ಮಾಡದೇ ಪುಟ್ಟ ಎಲೆಯ ಮೇಲೆ ಹೆಜ್ಜೆ ಗುರುತು ಬಿಡದೇ ಸಂಚಲಿಸಿ ಬೆರಗು ಮೂಡಿಸಿದವು. ಒಣಹುಲ್ಲಿಗೂ ಜೀವ ಬಂತೇ ಎಂಬ ಪ್ರಶ್ನೆ ಕ್ಷಣ ಕಾಲ ಕಾಡುವಂತೆ ಮಾಡಿದವು.


ಶಿಡ್ಲಘಟ್ಟದ ಗೌಡನಕೆರೆ ಬಳಿ ಹಸಿರೆಲೆಯ ಮೇಲೆ ಕಾಣಿಸಿದ ಒಣಹುಲ್ಲಿನಂತೆ ಕಾಣುವ ಕಡ್ಡಿಗಳ ಜೋಡಿ.

"ಇಂಡಿಯನ್ ವಾಕಿಂಗ್ ಸ್ಟಿಕ್" ಎಂದು ಕರೆಯಲ್ಪಡುವ ಒಣಹುಲ್ಲಿನಂತಿರುವ ಕಾಣುವ ಕಡ್ಡಿ ಕೀಟಗಳು ತಮ್ಮ ಸಂತತಿಯನ್ನು ಈ ಪ್ರದೇಶದಲ್ಲಿ ಬೆಳೆಸಿಕೊಳ್ಳುತ್ತಿವೆ. ನಿಶಾಚರ ಜೀವಿಯಾದ ಈ ಹುಳುಗಳು ಹಗಲಿನಲ್ಲಿ ಸಂಚರಿಸುವುದು ತೀರ ಕಡಿಮೆ. ಕದಲದೆ ಒಂದೆಡೆ ನಿಲ್ಲುವುದರಿಂದ ಹುಲ್ಲೆಂದು ಮೋಸಹೋಗುವುದು ಸಹಜ. ರಾತ್ರಿ ವೇಳೆಯಲ್ಲಿ ಎಲೆ, ಹೂವಿನ ಎಸಳುಗಳನ್ನು ಆಹಾರವಾಗಿ ಸೇವಿಸುತ್ತದೆ.
ತೀರ ಹತ್ತಿರದಿಂದ ಗಮನಿಸಿದರೆ ಗರಗಸದಂತಹ ಕೈಗಳು, ಜಗಿಯಲು ಹಲ್ಲುಗಳು, ಉದ್ದದ ಕಾಲುಗಳು, ಸಂಯುಕ್ತ ಕಣ್ಣುಗಳನ್ನು ಕಾಣಬಹುದು. ವಿದೇಶಗಳಲ್ಲಿ ನಾಯಿ, ಬೆಕ್ಕು, ಮೀನುಗಳಂತೆ ಮನೆಗಳಲ್ಲಿ ಈ ಕೀಟವನ್ನು ಸಾಕುವ ಹವ್ಯಾಸವಿದೆ.ಈ ಕೀಟಗಳಲ್ಲಿ ಹೆಚ್ಚಿನವು ಹೆಣ್ಣುಗಳೇ. ಗಂಡುಗಳು ತೀರಾ ಕಡಿಮೆ. ಸಂತಾನೋತ್ಪತ್ತಿಯು ಗಂಡಿನ ಅಗತ್ಯವಿಲ್ಲದೆಯೇ ಈ ಜೀವಿಯಲ್ಲಿ ನಡೆಯುತ್ತದೆ. ಕೀಟವು ಮೊಟ್ಟೆಯಿಂದ ಹೊರಬಂದ ಮೇಲೆ ಆರು ಹಂತದಲ್ಲಿ ಬೆಳೆದು ಪ್ರೌಢಾವಸ್ಥೆಯನ್ನು ತಲುಪುತ್ತದೆ. ಒಂದೊಂದು ಬಾರಿಯೂ ಅದು ಹಾವು ಕಳಚಿದಂತೆ ಪೊರೆ ಕಳಚುತ್ತಾ ಬೆಳೆಯುತ್ತದೆ. ಪ್ರೌಢಾವಸ್ಥೆ ತಲುಪಿದ ತಕ್ಷಣ ಮೊಟ್ಟೆಯಿಡಲು ಪ್ರಾರಂಭಿಸುತ್ತದೆ. ದಿನಕ್ಕೆ ೩ ಮೊಟ್ಟೆಗಳನ್ನಿಡುವ ಇವು ೪ ರಿಂದ ೫ ಇಂಚು ಉದ್ದವಿರುತ್ತದೆ. ಇವುಗಳ ಜೀವಿತಾವಧಿ ೬ ತಿಂಗಳಿನಿಂದ ಒಂದು ವರ್ಷ.
ನಮ್ಮ ಸುತ್ತ ಮುತ್ತ ಅನೇಕ ಕೀಟಗಳು, ಜೇಡಗಳು, ಪತಂಗ, ಚಿಟ್ಟೆ, ವನಸುಮಗಳು, ದುಂಬಿಗಳು ಜೀವಿಸುತ್ತಿರುತ್ತವೆ. ಅವುಗಳನ್ನು ನೋಡುವ, ತಿಳಿದುಕೊಳ್ಳುವ ಮತ್ತು ದಾಖಲಿಸುವ ಕುತೂಹಲ ಮನಸ್ಸು ಮೂಡಬೇಕು. ಮಕ್ಕಳಿಗೆ ಜೀವ ವೈವಿದ್ಯದ ಪರಿಚಯ ಪುಸ್ತಕದಲ್ಲಿ ತೋರಿಸಿಯಲ್ಲ ನೈಜವಾಗಿ ತೋರಿಸಿ ಆಸಕ್ತಿ ಮೂಡಿಸಬೇಕು. ಅಲ್ಲವೇ?