Friday, December 30, 2011

ಬ್ರಿಟಿಷ್ ಅಧಿಕಾರಿ ಕಂಡ "ಸಿಲಗುಟ್ಟ"


ಶಿಡ್ಲಘಟ್ಟದಲ್ಲಿ ಇನ್ನೂರು ವರ್ಷದ ಹಿಂದೆ ಸರ್ವೇಕ್ಷಣೆ ನಡೆಸಿದ್ದ ಬ್ರಿಟಿಷ್ ಅಧಿಕಾರಿ ಫ್ರಾನ್ಸಿಸ್ ಬುಕನನ್.


ರೇಷ್ಮೆ ಮತ್ತು ಹೈನುಗಾರಿಕೆಗೆ ಶಿಡ್ಲಘಟ್ಟ ತಾಲ್ಲೂಕು ಹೆಸರುವಾಸಿ ಎಂದು ಎಲ್ಲರೂ ಅಭಿಪ್ರಾಯಪಡುತ್ತಾರೆ. ಆದರೆ ಶಿಡ್ಲಘಟ್ಟ ಹೀಗಿರಲಿಲ್ಲ. ಇಲ್ಲಿನ ಜನರಿಗೆ ರೇಷ್ಮೆಯ ಗಂಧಗಾಳಿಯೂ ಇರಲಿಲ್ಲ. ಇಲ್ಲಿನ ಜನರು ತರಕಾರಿ ಬೆಳೆಯುವುದರಲ್ಲಿ, ಹತ್ತಿಯ ಬಟ್ಟೆಗಳನ್ನು ತಯಾರಿಸುವುದರಲ್ಲಿ ಸಿದ್ದಹಸ್ತರಾಗಿದ್ದರು. ಈ ಮಾತುಗಳನ್ನು ಹೇಳಿದವರು ಮೂಲನಿವಾಸಿಗಳಲ್ಲ, ಭಾರತೀಯ ಇತಿಹಾಸಕಾರರೂ ಅಲ್ಲ. ಈ ಪ್ರದೇಶದ ಕುರಿತು ಅತೀವ ಆಸಕ್ತಿಯಿಂದ ಅಧ್ಯಯನ ಮಾಡಿದ ಬ್ರಿಟಿಷ್ ಅಧಿಕಾರಿ ಫ್ರಾನ್ಸಿಸ್ ಬುಕನನ್ ಈ ವಿಷಯವನ್ನು ತಿಳಿಸಿದ್ದಾರೆ.
೧೮೦೭ರಲ್ಲಿ ಪ್ರಕಟವಾದ ಅವರ ಪುಸ್ತಕ “ಎ ಜರ್ನಿ ಫ್ರಮ್ ಮದ್ರಾಸ್ ಥ್ರೂ ದ ಕಂಟ್ರೀಸ್ ಆಫ್ ಮೈಸೂರ್, ಕೆನರಾ ಅಂಡ್ ಮಲಬಾರ್” ದಲ್ಲಿ ಗತಕಾಲದ ಶಿಡ್ಲಘಟ್ಟದ ಇತಿಹಾಸದ ಚಿತ್ರಣವನ್ನೇ ಅವರು ನೀಡಿದ್ದಾರೆ. ಈ ಪುಸ್ತಕವನ್ನು ಸರ್ಕಾರ ಇತ್ತೀಚೆಗೆ ಮುದ್ರಿಸಿದೆ.
ಭಾರತದ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ವೆಲ್ಲೆಸ್ಲಿಗೆ ವೈದ್ಯಾಧಿಕಾರಿಯಾಗಿದ್ದರು ಫ್ರಾನ್ಸಿಸ್ ಬುಕನನ್. ೧೭೯೯ರಲ್ಲಿ ಟಿಪ್ಪುಸುಲ್ತಾನನ ಮರಣದ ನಂತರ ಇವರಿಗೆ ಆಗಿನ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ವ್ಯಾಪ್ತಿಗೆ ಒಳಪಡುವ ದಕ್ಷಿಣ ಭಾರತವನ್ನು ಸರ್ವೇಕ್ಷಿಸುವ ಜವಾಬ್ದಾರಿಯನ್ನು ಇವರಿಗೆ ವಹಿಸಲಾಯಿತು.


ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಹಿಂದೆ ಬಳಸುತ್ತಿದ್ದ ಕೃಷಿ ಉಪಕರಣಗಳ ರೇಖಾ ಚಿತ್ರ.


ಸ್ಥಳವರ್ಣನೆ, ನಕ್ಷೆ, ಸ್ವರೂಪ, ಇತಿಹಾಸ, ಪ್ರಾಚೀನ ಅವಶೇಷ, ಸ್ಥಳೀಯರ ನಡವಳಿಕೆ, ಪದ್ಧತಿ, ಧರ್ಮ, ಆಹಾರ, ಉತ್ಪಾದನೆ, ಬೆಳೆ, ಕೃಷಿ, ತರಕಾರಿ, ಗೊಬ್ಬರ, ಪ್ರವಾಹ, ಸಾಕು ಪ್ರಾಣಿಗಳು, ಜಮೀನು, ಗಡಿರೇಖೆ, ಕಲೆ, ವಾಣಿಜ್ಯ ಮುಂತಾದವುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ದಾಖಲಿಸಿದ್ದಾರೆ. ಇವರು ತಯಾರಿಸಿದ ವರದಿಗಳು ಮತ್ತು ದಾಖಲಾತಿಗಳು ಈಗಲೂ ಲಂಡನ್ನಿನ ಲೈಬ್ರರಿಯಲ್ಲಿ ಸಂರಕ್ಷಿಸಲಾಗಿದೆ. ಈ ಸರ್ವೇಕ್ಷಣಾ ಕಾರ್ಯದಲ್ಲಿ ಇವರು ಶಿಡ್ಲಘಟ್ಟಕ್ಕೂ ಬಂದಿದ್ದರು. ತಮ್ಮ ಪುಸ್ತಕದಲ್ಲಿ ಶಿಡ್ಲಘಟ್ಟವನ್ನು ಸಿಲಗುಟ್ಟ(Silagutta) ಎಂದು ಕರೆದಿದ್ದಾರೆ. ಎರಡು ಶತಮಾನಗಳ ಹಿಂದಿನ ಶಿಡ್ಲಘಟ್ಟವನ್ನು ಬುಕನನ್ ಅತ್ಯಂತ ಆಪ್ತವಾಗಿ ಪರಿಚಯಿಸಿದ್ದಾರೆ.
‘ಜುಲೈ ೧೩ ರ ಬೆಳಿಗ್ಗೆ ಸಿಲಗುಟ್ಟಕ್ಕೆ ಬಂದೆ. ಮಳೆ ಹೆಚ್ಚಾಗಿ ಬಿದ್ದಿದ್ದರಿಂದ ಜನರು ರಾಗಿ ಬಿತ್ತುವುದರಲ್ಲಿ ಮಗ್ನರಾಗಿದ್ದರು. ಪಶ್ಚಿಮದಿಂದ ಬೀಸುವ ಗಾಳಿಯ ಆರ್ಭಟ ಒಂದೆಡೆಯಾದರೆ, ಆಗಾಗ ಬೀಳುವ ಮಳೆ ಇನ್ನೊಂದೆಡೆ. ಇಲ್ಲಿ ಕಲ್ಲು ಬಂಡೆಗಳಿಲ್ಲದೆ ಭೂಮಿ ಫಲವತ್ತಾಗಿದೆ. ಸಿಲಗುಟ್ಟ ಪಟ್ಟಣದಲ್ಲಿ ಕೇವಲ ೫೦೦ ಮನೆಗಳಿವೆ. ಅದರಲ್ಲಿ ಕೆಲವರು ನೇಕಾರರಿದ್ದಾರೆ. ಇದು ಅತ್ಯಂತ ಸುಂದರವಾದ ಪ್ರದೇಶವಾಗಿದೆ. ಇಲ್ಲಿ ಎರಡು ಸುಂದರವಾದ ಕೆರೆಗಳಿವೆ. ಕೆರೆಗಳ ಅಂಚಿನಲ್ಲಿ ಉದ್ಯಾನವನಗಳಿವೆ’ ಎಂದು ತಮ್ಮ ಪುಸ್ತಕದಲ್ಲಿ ವರ್ಣಿಸಿದ್ದಾರೆ.
‘ಕೃಷಿಯನ್ನೇ ನಂಬಿರುವ ಮೊರಸು ಅಥವಾ ಒಕ್ಕಲಿಗರು, ಮುಸಲ್ಮಾನರು, ಸಾದರು, ಬ್ರಾಹ್ಮಣರು, ಶೈವರು, ತೆಲುಗು ಮಾತನಾಡುವ ಬಣಜಿಗರು, ನಗರ್ತರು, ಸಾತಾನಾನರು ಇಲ್ಲಿ ವಾಸವಾಗಿದ್ದಾರೆ. ಸಿಲಗುಟ್ಟದಲ್ಲಿ ಒರಟಾದ ದಪ್ಪದ ಹತ್ತಿಯ ಕೋರಾ ಬಟ್ಟೆಗಳನ್ನು ನೇಕಾರರು ತಯಾರಿಸುತ್ತಾರೆ. ನೇಕಾರರು ಪದ್ಮಶಾಲಿ ಕುಲದವರು.
ಸಿಲಗುಟ್ಟದ ವ್ಯಾಪಾರಸ್ಥರು ಅಡಿಕೆ ಮತ್ತು ಕರಿ ಮೆಣಸನ್ನು ಕಟೀಲು ಮತ್ತು ನಗರದಿಂದ ತರುತ್ತಾರೆ. ಇಲ್ಲಿ ಸುತ್ತಮುತ್ತ ಬೆಳೆದ ತಂಬಾಕು ಮತ್ತು ನೇಯ್ದ ಬಟ್ಟೆಗಳನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಾರೆ. ಮೆಣಸು ಮತ್ತು ಅಡಿಕೆಯನ್ನು ವಾಲಾಜಪೇಟೆಯಲ್ಲಿ ಮಾರುತ್ತಾರೆ. ಸಮುದ್ರದ ಮಾರ್ಗದಿಂದ ಮದ್ರಾಸಿಗೆ ಬರುತ್ತಿದ್ದ ರೇಷ್ಮೆಯನ್ನೂ ತಂದು ಬೆಂಗಳೂರು, ಬಳ್ಳಾರಿ, ಆದೋನಿಗಳಲ್ಲಿ ಮಾರಾಟ ಮಾಡುತ್ತಾರೆ. ಅಲ್ಲಿ ಹತ್ತಿಯ ನೂಲನ್ನು ಹಾಗೂ ಕಂಬಳಿಗಳನ್ನು ಕೊಳ್ಳುತ್ತಾರೆ.
ಸಿಲಗುಟ್ಟ ತರಕಾರಿಗಳನ್ನು ಬೆಳೆಯುವುದರಲ್ಲಿ ಅತ್ಯಂತ ಹೆಸರುವಾಸಿ. ಗೋದಿ, ಅರಶಿನ, ಈರುಳ್ಳಿ, ಮೆಣಸಿನಕಾಯಿ, ಬೆಳ್ಳುಳ್ಳಿ, ಜೋಳ, ಕೊತ್ತಂಬರಿ ಬೆಳೆಯುವರು. ದನಗಳನ್ನು ಸಾಕಿದ್ದಾರೆ. ಇಲ್ಲಿ ಒಂದು ಎಕರೆಗೆ ಆರು ಕಂಡುಗ ರಾಗಿ ಬೆಳೆಯುತ್ತಾರೆ. ನೀರನ್ನು ಬಾವಿಯಿಂದ ತೆಗೆಯಲು ಇಲ್ಲಿ ಸಣ್ಣ ಏತವನ್ನೇ ಬಳಸುವರು. ನೀರು ೩೫ ಅಡಿ ಆಳಕ್ಕೆ ಹೋದರೂ ಇದರಿಂದ ನೀರೆತ್ತಬಹುದು’ ಎಂಬ ಚಿತ್ರಣವನ್ನು ನೀಡಿದ್ದಾರೆ.


ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಹಿಂದೆ ನೀರನ್ನು ಬಾವಿಯಿಂದ ಎತ್ತಲು ಬಳಸುತ್ತಿದ್ದ ಏತದ ರೇಖಾಚಿತ್ರ.‘ಇತಿಹಾಸ ನಮ್ಮ ಪೂರ್ವಜರ ಸಾಮಾಜಿಕ, ಆರ್ಥಿಕ ಹಾಗೂ ಮಾನವೀಯ ಗುಣಗಳನ್ನು ಪರಿಚಯಿಸುತ್ತದೆ. ಕಾಲ ಬದಲಾದಂತೆ ಎದುರಾಗುವ ಸಂದಿಗ್ದಗಳು ಮತ್ತು ಸವಾಲುಗಳನ್ನು ಎದುರಿಸಲು ಹಾಗೂ ತಪ್ಪುಗಳನ್ನು ತಿದ್ದಿಕೊಳ್ಳಲು ಇತಿಹಾಸವನ್ನು ಅವಲೋಕಿಸುತ್ತಿರಬೇಕು. ಬುಕನನ್ ಬರಹದಿಂದ ನಮ್ಮ ಹಿಂದಿನವರ ಕೃಷಿ, ನೀರಿನ ಸದ್ಭಳಕೆ, ವ್ಯಾಪಾರದ ಚತುರತೆ, ಧಾರ್ಮಿಕ ಪದ್ಧತಿ ಎಲ್ಲ ತಿಳಿಯುತ್ತದೆ’ ಎನ್ನುತ್ತಾರೆ ಶಾಸನತಜ್ಞ ಡಾ.ಶೇಷಶಾಸ್ತ್ರಿ.

Wednesday, December 21, 2011

ಪುಸ್ತಕ ಬಿಡುಗಡೆ ಸಮಾರಂಭ

ಡಿಸೆಂಬರ್ ೧೮ ರ ಭಾನುವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನವಕರ್ನಾಟಕ ಪ್ರಕಾಶನ ಸಂಸ್ಥೆಯವರು ಡಾ.ಎನ್.ಎಸ್.ಲೀಲಾ ಅವರ ವರ್ಣ ಮಾಯಾಜಾಲ ಮತ್ತು Mystery, Magic and Music of Colours ಹಾಗೂ ನನ್ನ, ಚಿಟ್ಟೆಗಳು ಮತ್ತು Butterflies ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಅಧ್ಯಕ್ಷತೆಯನ್ನು ಪ್ರೊ.ಕೆ.ಜಗನ್ನಾಥರಾವ್ ವಹಿಸಿದ್ದರು. ಪ್ರೊ.ಎಂ.ಆರ್.ನಾಗರಾಜು ಮತ್ತು ಕುಮಾರಿ ಅಭಿಜ್ಞ ಕೃತಿಗಳ ಪರಿಚಯವನ್ನು ಮಾಡಿಕೊಟ್ಟರು.
ಫೋಟೋಗಳನ್ನು ಕ್ಲಿಕ್ಕಿಸಿದ್ದು ಗೆಳೆಯ ಅಜಿತ್ ಕೌಂಡಿನ್ಯ.