Thursday, February 26, 2009

ಶಿಡ್ಲಘಟ್ಟದ ನ್ಯಾಯಾಲಯದಲ್ಲಿ ಪೂರ್ವಜನ್ಮದ ಕಕ್ಷಿದಾರರು!

ಗೆಳೆಯ ಸತ್ಯನಾರಾಯಣ್ ಬಂದು "ನಮ್ಮ ಕೋರ್ಟ್ ನಲ್ಲಿ ಹಕ್ಕಿಯೊಂದು ಗೂಡು ಮಾಡಿದೆ ಫೋಟೋ ತೆಗೀತೀರಾ?" ಎಂದು ಕೇಳಿದರು. ನನಗೆ ನಗು ಬಂತು. ಎಲ್ಲಾ ಜಾಗ ಬಿಟ್ಟು ಕೋರ್ಟ್ ನಲ್ಲಿ ಗೂಡು ಮಾಡುವುದಕ್ಕೆ ಹಕ್ಕಿಗೇನು ಬುದ್ಧಿ ಇಲ್ವಾ? ಎಂದು ಅನಿಸಿ ನಗುಬಂದಿತು. ಅವರು, "ನೀವು ನಂಬಲ್ಲ ಅಂತಗೊತ್ತು. ನಾವು ವಕೀಲರು ಸಾಕ್ಷಿಯಿಲ್ಲದೆ ಮಾತನಾಡೋದಿಲ್ಲ. ನೋಡಿ ನನ್ನ ಮೊಬೈಲ್ ನ ಕ್ಯಾಮೆರಾದಲ್ಲಿ ಫೋಟೋ ತೆಗೆದಿದ್ದೀನಿ" ಎಂದು ತೋರಿಸಿದರು. ಅದರಲ್ಲಿ ಚಿತ್ರ ತುಂಬಾ ಅಸ್ಪಷ್ಟವಾಗಿತ್ತು. ಅವರು ಹಠತೊಟ್ಟು ನನ್ನನ್ನು ಕೋರ್ಟಿನ ಬಳಿಗೆ ಕರೆದೊಯ್ದರು.
ತೊಂಬತ್ತು ವರ್ಷದ ವೃದ್ಧ ಕಟ್ಟಡ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನ್ಯಾಯಾಲಯದ ಕಟ್ಟಡ ಹಳೆಯದು. ಇದು ೧೯೧೮ರಲ್ಲಿ ಕಟ್ಟಿದ ಕಟ್ಟಡ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ತಾಲೂಕು ಆಡಳಿತ ಕಛೇರಿಯಾಗಿತ್ತು. ಸ್ವಾತಂತ್ರ್ಯಾನಂತರ ಇದೇ ಕಟ್ಟಡದ ಒಂದು ಭಾಗದಲ್ಲಿ ಪೋಲೀಸ್ ಸ್ಟೇಷನ್ ಮತ್ತು ಇನ್ನೊಂದು ಭಾಗದಲ್ಲಿ ತಾಲೂಕು ಕಛೇರಿ ಕಾರ್ಯನಿರ್ವಹಿಸುತ್ತಿತ್ತು. ಹೊಸ ಕಟ್ಟಡಕ್ಕೆ ಪೋಲೀಸ್ ಸ್ಟೇಷನ್ ವರ್ಗಾವಣೆಯಾಯ್ತು. ಮಿನಿವಿಧಾನಸೌಧವಾದ ಮೇಲೆ ಆಡಳಿತ ಕಛೇರಿಯೂ ಅಲ್ಲಿಗೆ ಹೋಯಿತು. ಆಗ ಸ್ವಂತ ಕಟ್ಟಡವಿರದಿದ್ದರಿಂದ ನ್ಯಾಯವಾದಿಗಳ ವಶಕ್ಕೆ ಈ ಕಟ್ಟಡ ಬಂತು. ಈ ಕಟ್ಟಡದ ಮಧ್ಯಭಾಗದ ಖಾಲಿ ಜಾಗದಲ್ಲಿ ಹಳೆಯ ಎರಡು ಅಶೋಕ ಮರಗಳು ಮತ್ತು ಒಣಗಿನಿಂತ ಈಚಲು ಮರದ ಎರಡು ಖಾಂಡಗಳಿದ್ದವು. ವಕೀಲರೆಲ್ಲರ ಆಸಕ್ತಿಯಿಂದಾಗಿ ಈಗ ಅಲ್ಲಿ ಹಸಿರು ಉಸಿರಾಡುತ್ತಿದೆ. ತರತರದ ಹೂಗಿಡಗಳನ್ನು ನೆಟ್ಟಿದ್ದಾರೆ. ರಂಗಿನ ಗುಲಾಬಿಗಳು ನಳನಳಿಸುತ್ತಿವೆ.
ಕೋರ್ಟ್ ನ ಹೂತೋಟದಲ್ಲಿ ಈಚಲ ಕಾಂಡ ಮತ್ತು ಅದರಲ್ಲಿನ ಪೊಟರೆಯನ್ನೂ ಕಾಣಬಹುದು.
ಇಲ್ಲಿ ಒಣಗಿನಿಂತಿರುವ ಈಚಲು ಖಾಂಡದಲ್ಲಿ ಪೊಟರೆ. ಅದರಲ್ಲಿ ಕುಟುರ ಹಕ್ಕಿಯ ಗೂಡು. ಜನದಟ್ಟಣೆಯಿಂದ ಗಿಜಗುಡುವ ನ್ಯಾಯಾಲಯದ ಆವರಣದಲ್ಲಿ ಹಕ್ಕಿ ಗೂಡು ಮಾಡಿದೆಯಲ್ಲ ಎಂಬುದೇ ಅಚ್ಚರಿ. ನಾನಲ್ಲಿ ನೋಡುತ್ತಿರುವಾಗಲೇ ತಾಯಿಹಕ್ಕಿ ಹಾರಿ ಬಂದು ಗುಟುಕು ಕೊಟ್ಟು ಹೋಯಿತು. ಆದರೆ ಇದನ್ನು ಫೋಟೋ ತೆಗೆಯುವುದು ಹೇಗೆ? ನನ್ನ ಕ್ಯಾಮೆರಾ, ಟ್ರೈಪಾಡ್ ಎಲ್ಲ ತಂದು ನಿಲ್ಲಿಸಿದರೆ, ನನ್ನ ಸುತ್ತಲು ಜನ ಮುತ್ತಿ, ಹಕ್ಕಿ ಬರದೇ ನಾನಾ ಪಡಿಪಾಟಲು ಅನುಭವಿಸಬೇಕಾಗುತ್ತೆ. ಈ ಸಮಸ್ಯೆಗೆ ಗೆಳೆಯರೇ ಪರಿಹಾರ ಸೂಚಿಸಿದರು. "ಬೆಳೆಗ್ಗೆ ಬೇಗ ಬನ್ನಿ. ವಾಚ್ ಮನ್ ಗೆ ಹೇಳಿರ್ತೀನಿ. ಯಾರೂ ಇರಲ್ಲ. ನೀವು ಫೋಟೋ ತೆಗೀಬಹುದು" ಅಂದರು.
ಸದಾ ಚಟುವಟಿಕೆಯಿಂದಿರುವ ಸುಂದರ ಸೂರಕ್ಕಿ.
ಮಾರನೇ ದಿನ ಬೆಳಿಗ್ಗೆ ಬೇಗ ಹೋಗಿ ನನ್ನ ಕ್ಯಾಮೆರಾವನ್ನು ಟ್ರೈಪಾಡ್ ಗೆ ಹೊಂದಿಸಿ, ಕೇಬಲ್ ಹಾಕಿ, ಅದರ ತುದಿ ಹಿಡಿದು ದೂರದಲ್ಲಿ ಕೂತು ಗಮನಿಸತೊಡಗಿದೆ. ನನ್ನ ಕಣ್ಮುಂದೆ ಹೂತೋಟವಿತ್ತು. ಚಿಟ್ಟೆಗಳು ಹೂವಿನ ಮಕರಂದ ಹೀರುತ್ತಾ ಹಾರಾಡುತ್ತಿದ್ದವು. ಕೀಚ್ ಕೀಚ್ ಎನ್ನುತ್ತಾ ಸೂರಕ್ಕಿಗಳು ತಮ್ಮ ಚೂಪಾದ ಕೊಕ್ಕಿನಿಂದ ದಾಸವಾಳ ಹೂವಿನ ಮಕರಂದ ಹೀರುತ್ತಿದ್ದವು.
ಅಂಬರಗುಬ್ಬಿಗಳ ಗೂಡು.
ಅತಿ ವೇಗವಾಗಿ ಹಾರಾಡುವ ಅಂಬರಗುಬ್ಬಿಗಳು ಹಾರಾಟ ನಡೆಸಿದ್ದವು. ನೋಡಿದರೆ ಅವೂ ಗೂಡು ಕಟ್ಟಿದ್ದವು. ಇನ್ನು ಗುಬ್ಬಿ, ಪಾರಿವಾಳ, ಅಳಿಲುಗಳೂ ಅಲ್ಲಿದ್ದವು. ಅರೆ! ಇದು ನ್ಯಾಯಾಲಯವೊ ಇಲ್ಲಾ ಕಾನನವೊ ಅನ್ನಿಸಿತು.
ತನ್ನ ಮರಿಗಾಗಿ ಹಣ್ಣು ತಂದಿರುವ ಕುಟುರ.
ಇದರ ಮಧ್ಯೆ ಕುಟುರ ತನ್ನ ಮರಿಗೆ ಹಣ್ಣು, ಕೀಟಗಳನ್ನು ತಂದು ತಿನ್ನಿಸುತ್ತಿತ್ತು. ಮರಿಯಾಗಲೇ ಕೊಂಚ ದೊಡ್ಡದಾಗಿತ್ತು. ತಲೆಯನ್ನು ಗೂಡಿನಿಂದ ಹೊರಕ್ಕೆ ಹಾಕುತ್ತಿತ್ತು.
ನ್ಯಾಯ ಬೇಕೇ ಬೇಕು ಎಂದು ಹಠಯೋಗಿಯಂತೆ ಕುಳಿತಿರುವ ಹದ್ದು.
ನಾನು ಫೋಟೋ ತೆಗೆದು, ಇಷ್ಟೆಲ್ಲಾ ಹಕ್ಕಿ ಚಿಟ್ಟೆ ಕೌತುಕಗಳನ್ನು ನೋಡಿ ಬೆರಗಿನಿಂದ ಹೊರಬರುವಾಗ್ಗೆ ಹದ್ದೊಂದು ನ್ಯಾಯಾಲಯದ ಆವರಣದಲ್ಲಿ ಕುಳಿತಿತ್ತು. ಅದರ ಫೋಟೋವನ್ನೂ ತೆಗೆದೆ. ಅದು ನ್ಯಾಯಾಲಯದ ಬಾಗಿಲು ತೆರೆಯುವುದಕ್ಕಾಗಿ ಕಾದು ಕುಳಿತಿರುವಂತೆ ಅನ್ನಿಸಿತು. ಆಗ ನನಗೆ ಇವು ಹೋದ ಜನ್ಮದಲ್ಲಿ ಹಾಕಿದ್ದ ಕೇಸ್ ಗಳನ್ನು ಶತಾಯಗತಾಯ ಇತ್ಯರ್ಥ ಮಾಡಿಕೊಳ್ಳಬೇಕೆಂಬ ತೀರ್ಮಾನದಲ್ಲಿ ಇಲ್ಲಿಗೆ ಬಂದಿರಬೇಕು ಅನ್ನಿಸಿತು.
ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಯನ್ನು ಕಿಟಕಿಯ ಮೇಲೆ ಕುಳಿತು ಆಲಿಸುವ ಗುಬ್ಬಿ ದಂಪತಿ.

Thursday, February 19, 2009

ಆಟೋಗ್ರಾಫ್ - ಫೋಟೋಗ್ರಾಫ್

"ನಾನೇ ಭಾಗ್ಯವಂತ... ನಾನೇ ಪುಣ್ಯವಂತ..."

ನನ್ನ ಸಂಗ್ರಹದಲ್ಲಿರುವ ಫೋಟೋಗಳನ್ನು ನೋಡುವಾಗ, ಎಷ್ಟೊಂದು ಪ್ರತಿಭೆ, ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳ ಚಿತ್ರಗಳನ್ನು ತೆಗೆದಿರುವೆ... ಅವರಿರುವ ಕಾಲದಲ್ಲೇ ನಾನಿರುವೆ... ಅದೃಷ್ಟವಂತನಲ್ಲವೇ? ಅನ್ನಿಸಿದೆ.
ಫೋಟೋಗ್ರಾಫ್ ಮತ್ತು ಆಟೋಗ್ರಾಫ್ ಎರಡೂ ನನ್ನ ಹವ್ಯಾಸಗಳು. ನಾನು ಕ್ಲಿಕ್ಕಿಸಿದ ಚಿತ್ರಗಳು ಮತ್ತು ಪಡೆದಿರುವ ಹಸ್ತಾಕ್ಷರಗಳನ್ನು ಸಮ್ಮಿಲನಗೊಳಿಸಿ ಎಲ್ಲರೊಂದಿಗೂ ಹಂಚಿಕೊಳ್ಳುವ ಪ್ರಯತ್ನವಿದು.
ಪಕ್ಷಿ ಮತ್ತು ಕೀಟ ಜಗತ್ತಿನೆಡೆಗೆ ಬೆರೆಗಿನಿಂದ ನಾನು ನೋಡಲಾರಂಭಿಸಿದುದು ತೇಜಸ್ವಿಯವರ ಪುಸ್ತಕ ಓದಿದ ನಂತರವೇ. ಶಾಲೆಯಲ್ಲಿ ವಿಜ್ಞಾನ ಪುಸ್ತಕಗಳಿಂದಾಗದ ಕೆಲಸವನ್ನು ಅವರ ಪುಸ್ತಕಗಳು ಮಾಡಿದವು. ಅವರಿಂದ ಅವರ ಕೃತಿಗಳಿಂದ ಸ್ಫೂರ್ತಿಗೊಂಡು ಸುತ್ತಲಿನ ಪರಿಸರದ ಸೂಕ್ಷ್ಮಗಳೆಡೆಗೆ ನೋಡಿದವರೆಲ್ಲರ ಒಂದೇ ಮಾತು - "ತೇಜಸ್ವಿಯವರು ಇನ್ನೂ ಇರಬೇಕಿತ್ತು".
ನಮ್ಮ ಹೆಮ್ಮೆಯ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ.

ನಮ್ಮ ನಾಡಿಗೆ "ನಿತ್ಯೋತ್ಸವ"ದ ಮೆರುಗು ನೀಡಿದ ಶ್ರೇಷ್ಠ ವ್ಯಕ್ತಿ ಮತ್ತು ಕವಿ - ನಮ್ಮೆಲ್ಲರ ಪ್ರೀತಿಯ ನಿಸಾರ್ ಸಾರ್.

"ಚೆನ್ನಾಗಿ ಬದುಕುವುದೇ ದೊಡ್ಡ ಸಾಧನೆ ಕಣಯ್ಯ" ಎನ್ನುತ್ತಾ ಸದಾ ನನ್ನೊಳಗೆ ಚೈತನ್ಯವನ್ನು ತುಂಬುವ ಗುರುಸ್ವರೂಪಿಗಳಾದ, ಅನಂತಪುರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕನ್ನಡ ಪ್ರೊಫೆಸರ್ ಡಾ.ಶೇಷಶಾಸ್ತ್ರಿ.

ದೊಡ್ಡವರಿಗಷ್ಟೇ ಅಲ್ಲ ಮಕ್ಕಳಿಗೂ ಆಪ್ತರಾದ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ.

ನೇಮಿಚಂದ್ರ - ನನಗೆ ಇವರೊಂದು ಬೆರಗು. ಇವರ 'ಬದುಕು' ನನ್ನಂಥವರನ್ನೆಷ್ಟೋ 'ಬದಲಿಸಿದೆ'. ಹೆಚ್.ಎ.ಎಲ್. ನಲ್ಲಿ ಜವಾಬ್ದಾರಿಯುತ ಹುದ್ದೆಯಲ್ಲಿರುವ ಇವರು ಬರೆಯಲು ಸಮಯ ಸಿಗುವುದೇ? ಎಂದನಿಸಿದ್ದಿದೆ. ಪ್ರವಾಸ, ಓದು, ಮಹಿಳಾ ಸಂಘಟನೆ, ಬರಹ... ಇಷ್ಟೊಂದು ಕೆಲಸದ ನಡುವೆ ನನ್ನಂತಹ ಅಭಿಮಾನಿಗಳಿಗೆ ಪತ್ರವನ್ನೂ ಬರೆಯುತ್ತಾರೆ. ಇವರು ಎಲ್ಲರಿಗೂ ಸ್ಫೂರ್ತಿಯನ್ನು ನೀಡುವಂತವರು.

"...ಜಯಂತ್ ಬಲು ದೊಡ್ಡ ಭಾವಜೀವಿ. ಶಂಖವನ್ನು ಕಿವಿಗೆ ಹಿಡಿದರೆ, ಅದರೊಳಗಿನ ಪುಟಾಣಿ ಹುಳುವಿನ ಹೃದಯಕ್ಕೆ ಕವಾಟಗಳೆಷ್ಟು ಎಂಬುದನ್ನು ಹೇಳಬಲ್ಲ ಸೂಕ್ಷ್ಮ ಕಲೆಗಾರ..." - ರವಿ ಬೆಳಗೆರೆ.
ಬೊಗಸೆಯಲ್ಲಿ ಮಳೆ... ಮುಂಗಾರು ಮಳೆ... ಆಗಸ ಭೂಮಿ ಒಂದು ಮಾಡುವ ಜಯಂತ್ ಕಾಯ್ಕಿಣಿಯವರ ಮಳೆ ಸದಾ ಸುರಿಯುತ್ತಿರಲಿ.

ಪ್ರಜಾವಾಣಿ ಆಫೀಸ್ ಗೆ ನನ್ನ ಸ್ನೇಹಿತನ ಜೊತೆ ಮೊದಲ ಬಾರಿ ಹೋಗಿದ್ದೆ. ನಾಗೇಶ್ ಹೆಗಡೆಯವರ ಬಳಿ ಅವರ ಪುಸ್ತಕ "ನನ್ನೊಳಗಿನ ಬ್ರಹ್ಮಾಂಡ" ಹಿಡಿದು ಆಟೋಗ್ರಾಫ್ ಕೇಳಿದೆ. "ಮುಂದಿನ ಬಾರಿ ಲೇಖನ ಬರೆದು ತರಬೇಕು. ಹಾಗೇ ಬರಬಾರದು" ಎಂದರು ಅವರು. ನಾನೂ ಬರೆಯಬಲ್ಲೆ ಎಂಬ ಕಾನ್ಫಿಡೆನ್ಸ್ ಮೂಡಿಸಿದವರೇ ಅವರು. ಇದು ನನ್ನೊಬ್ಬನ ಮಾತಲ್ಲ. ನಾಡಿನ ಮೂಲೆ ಮೂಲೆಗಳಲ್ಲಿ ನಾನಾ ವೃತ್ತಿಗಳಲ್ಲಿದ್ದವರಿಗೆ ಬರೆಯಲು ಸ್ಫೂರ್ತಿ ನೀಡಿದ್ದಾರೆ. ವೃತ್ತಿಯಿಂದ ನಿವೃತ್ತರಾದರೂ ನಮ್ಮಂತವರನ್ನು ತಿದ್ದುವ ಪರ್ಮನೆಂಟ್ ಎಡಿಟರ್ - ನಾಗೇಶ್ ಹೆಗಡೆ.

"ಮನ್ವಂತರ"... "ಮಾಯಾಮೃಗ"... "ಮತದಾನ"... "ಮುಕ್ತ ಮುಕ್ತ"... ಮಾತಿನಿಂದಲೇ ಮನೆಮಾತಾದವರು ಟಿ.ಎನ್.ಸೀತಾರಾಮ್.

ಸದಾ ಹಸನ್ಮುಖಿ... ನಮ್ಮೆಲ್ಲರ ಪ್ರೀತಿಯ "ಛಂದ"ದ ಕತೆಗಾರ ವಸುಧೇಂದ್ರ.

ನನ್ನೊಳಗೂ "ಕ್ಯೂಬಾ" ಎಂಬ ಹಾಡನ್ನು ಹಾಡಿಸಿದವರು ಜಿ.ಎನ್.ಮೋಹನ್.

ಜಾನಕಿಯಾಗಿ... ಜೋಗಿಯಾಗಿ... ಅಪರೂಪಕ್ಕೆ ಗಿರೀಶ್ ರಾವ್ ಆಗಿಯೂ ನಿಬ್ಬೆರಗಾಗುವಂತೆ ಬರೆವ ಇವರ ಬರಹ ವಿಕ್ಟೋರಿಯಾ ಫಾಲ್ಸ್ ನಂತೆ ಸದಾ ಧುಮ್ಮಿಕ್ಕುತ್ತಿರಲಿ...
"ಸಹಿ-ಚಿತ್ರ" ಸರಣಿ ಮುಂದುವರಿಯಲಿದೆ...

Thursday, February 12, 2009

ಜೀವಲೋಕದ ಪ್ರೇಮಸಲ್ಲಾಪ

ಫೆಬ್ರವರಿ ೧೪ - ಪ್ರೇಮಿಗಳ ದಿನ.
ಪ್ರೇಮಿಗಳ ದಿನದ ಸಂದರ್ಭದಲ್ಲಿ ನಮ್ಮ ಸುತ್ತಮುತ್ತಲಿನ ಜೀವ ಸಂಕುಲದ ಪ್ರೇಮ ಜೀವನವನ್ನು ಕೊಂಚ ಗಮನಿಸೋಣವೇ?
ನಮಗಿರುವಂತೆ ಇತರ ಜೀವ ಸಂಕುಲಕ್ಕೆ ತಂದೆಗೊಂದು ದಿನ, ತಾಯಿಗೊಂದು ದಿನ, ಅಜ್ಜನಿಗೊಂದು ದಿನ, ಗುರುವಿಗೊಂದು ದಿನ, ಗೆಳೆತನಕ್ಕೊಂದು ದಿನ, ಭ್ರಾತೃತ್ವಕ್ಕೊಂದು ದಿನ... ಹೀಗೆ ಇಲ್ಲ. ಆದರೂ ಇಂದು ಪ್ರೇಮಿಗಳ ದಿನದ ಹೊಸಿಲ ಮೇಲೆ ನಿಂತು ನಮ್ಮ ಮೂಗಿನ ಮೇಲಿರುವ ಕ್ಯಾಮರಾ ಕಣ್ಣಿನ ನೇರಕ್ಕೆ ಇತರ ಜೀವಿಗಳ ಪ್ರಣಯ ಜೀವನದ ಒಂದು ಪುಟ್ಟ ಅವಲೋಕನವಷ್ಟೆ.
ಮಾನವರಂತೆ ಈ ಜೀವಿಗಳಿಗೆ ಪ್ರೀತಿ - ಪ್ರೇಮ - ಪ್ರಣಯ ಎಂಬ ಒಂದೊಂದು ಪದಕ್ಕೊಂದು ಅರ್ಥ, ವ್ಯಾಖ್ಯಾನ ಇಲ್ಲವಾದರೂ ಈ ಪದಗಳೆಲ್ಲ ಸೇರಿಕೊಂಡು ಅವುಗಳ ಪಾಲಿನ ಒಟ್ಟಾರೆ ಅರ್ಥ ಸಂತತಿಯ ಮುಂದುವರಿಕೆಯಷ್ಟೆ ಆಗಿದೆ. ಆದರೂ ಅಲ್ಲಿ ದಾಂಪತ್ಯಕ್ಕೆ ಮುನ್ನ ಅಸಂಖ್ಯ ಚಮತ್ಕಾರಗಳಿವೆ. ಗಂಡುಗುಬ್ಬಿಗೆ ಜೀವನವಿಡೀ ಒಂದೇ ಸಂಗಾತಿ. ಗೀಜಗ ಹೆಣ್ಣಿನ ನಿರಂತರ ವರಪರೀಕ್ಷೆ. ತನ್ನೊಂದಿಗೆ ಮಿಲನಗೊಂಡ ಸಂಗಾತಿಯನ್ನೇ ನುಂಗುವ ಹೆಣ್ಣು ಜೇಡ.... ಇವೆಲ್ಲವೂ ಸಂತಾನ ಸಾತತ್ಯದ ನಾಟಕಗಳು.
ಅಸಂಖ್ಯಾತ ಬಣ್ಣ, ಆಕಾರಗಳ ತೊಟ್ಟು ಬೆರಗು ಹುಟ್ಟಿಸುವ ವರ್ತನೆಗಳಿರುವ ಜೀವ ಕೋಟಿಗಳ ಸಾಮಾಜಿಕ ನಡವಳಿಕೆಗಳಲ್ಲಿ ಮುಖ್ಯವಾದದ್ದು ಬದುಕುವುದು ಮತ್ತು ಸಂತಾನಾಭಿವೃದ್ಧಿ. ತಮ್ಮ ಶಕ್ತಿಯ ಬಜೆಟ್ ಮಿತಿಯಾಗಿರುವುದರಿಂದ ಅದನ್ನು ಆದಷ್ಟೂ ಬೆಳವಣಿಗೆ ಮತ್ತು ಸಂತಾನ ಕ್ರಿಯೆಗೆ ಸದುಪಯೋಗ ಮಾಡಬೇಕು. ಇವುಗಳು ಆದಷ್ಟೂ ತಮ್ಮ ಆಹಾರ ಹೆಚ್ಚಾಗಿರುವಂತಹ ಕಾಲದಲ್ಲಿ ಮರಿಗಳು ಹೊರಬರುವಂತೆ ತಮ್ಮ ಸಂತಾನ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತವೆ.
ವಿಕಾಸವಾದದ ಪ್ರಕಾರ ಉತ್ತಮ ಅನುವಂಶಿಕ ಗುಣಗಳು, ತಲೆಮಾರಿನಿಂದ ತಲೆಮಾರಿಗೆ ಮುಂದುವರಿಯಲು ಹೆಣ್ಣಿಗೆ ತನಗುತ್ತಮನಾದ ಶಕ್ತ ಗಂಡನ್ನೇ ಆರಿಸುವ ಅವಶ್ಯಕತೆಯಿದ್ದರೆ, ಗಂಡಿಗೆ ಹೆಣ್ಣನ್ನು ಒಲಿಸಿಕೊಳ್ಳಲು ನಾನಾ ಕಸರತ್ತುಗಳನ್ನು ಶೌರ್ಯ ಪ್ರದರ್ಶನವನ್ನೆಲ್ಲಾ ಮಾಡಬೇಕಾದ ಅನಿವಾರ್ಯತೆ ಇದೆ.
ನಾವು ನೋಡುವ ಬಣ್ಣ ಬಣ್ಣದ ಚಿಟ್ಟೆಗಳು ಹಿಂದೆ ಮೂರು ಬಾರಿ ವೇಷಗಳನ್ನು ಕಳಚಿ ಬಂದಿರುತ್ತವೆ. ಇವು ತಮ್ಮ ಊಟ, ನಿದ್ರೆಗಳ ಚಿಂತೆಗಳನ್ನೆಲ್ಲ ಹಿಂದಿನ ಅವತಾರಗಳಲ್ಲೇ ಮುಗಿಸಿ ಬಂದಿರುವುದರಿಂದ ಈಗಿನ ಅವತಾರವನ್ನು ಕೇವಲ ಪ್ರೇಮ ಜೀವನಕ್ಕಾಗಿ, ಪ್ರಿಯತಮೆಯ ಶೋಧಕ್ಕಾಗಿ ಮೀಸಲಿರಿಸುತ್ತವೆ.
ಪ್ರತಿಯೊಂದು ವರ್ಗದ ಜೀವಿಗಳ ನಡುವೆಯೂ ಹಾಗೂ ಭೂಮಿಯ ಸಮಸ್ತ ವರ್ಗಗಳ ನಡುವೆಯೂ ಏಕಕಾಲದಲ್ಲಿ ಒಂದು ಸೂಕ್ಷ್ಮವಾದ ಪರಸ್ಪರ ಒಡನಾಟವು ನಡೆಯುತ್ತಿರುತ್ತದೆ. ಈ ಸಂಕೀರ್ಣ ಸಂಬಂಧವು ಒಂದು ಸಮತೋಲನವನ್ನು ಕಾಯ್ದುಕೊಂಡಿರುತ್ತದೆ. ಮಾನವ ತಾನು ಮಾತ್ರ ಇವುಗಳಿಂದ ಬೇರೆಯೇ ಎನ್ನುವಂತೆ ಊಹಿಸಿ ಈ ಸಮತೋಲನದ ಏರುಪೇರು ಮಾಡಲು ಹೊರಟಿದ್ದಾನೆ. ತಾನು ಕೂತ ಕೊಂಬೆಯ ಬುಡಕ್ಕೇ ಕೊಡಲಿಯೇಟು ಕೊಡುತ್ತಿದ್ದಾನೆ.

Friday, February 6, 2009

ಪ್ರವಾಸವೆಂಬ ಔಷಧ!

ಮಡಿಕೇರಿಗೆ ಹೋಗುವಾಗ ಸಿಗುವ ಏರಿಳಿತದ ಹಾದಿಯಲ್ಲಿ ಆ ಗುಡ್ಡದ ಮೇಲೊಂದು ಮನೆ, ಈ ಇಳಿಜಾರಿನಲ್ಲೊಂದು ಮನೆ ಇರುವುದನ್ನು ನೋಡಿ, "ಮನೆಮನೆಗೆ ಹೋಗಿ ವೋಟು ಕೇಳೋದು ಇಲ್ಲಿ ಶ್ಯಾನೆ ಕಷ್ಟ!" ಎಂದು ಮಧು ಉದ್ಗರಿಸಿದ. ಹಾಗಂತ ಅವನೇನೂ ರಾಜಕಾರಣಿಯಲ್ಲ, ಶಿಡ್ಲಘಟ್ಟದ ಔಷಧ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ. ಔಷಧಿ ಮಾರುತ್ತಾ ಸದಾ ಅಂಗಡಿಗಳಲ್ಲೇ ಬಂಧಿತರಾಗಿರುವವರಿಗೂ ಕೊಂಚ ಬದಲಾವಣೆ ಇರಲೆಂದು ಹದಿನೈದು ಜನ ಪ್ರವಾಸ ಕೈಗೊಂಡಿದ್ದೆವು.
ರಾತ್ರಿ ಹೊರಟು ಕುಶಾಲನಗರ ತಲುಪಿದಾಗ ಬೆಳಗ್ಗೆ ೬ ಗಂಟೆಯ ಚುಮುಚುಮು ಚಳಿ. ಯಾರೂ ಕೆಳಗಿಳಿಯಲಿಲ್ಲ. ಎಲ್ಲರೂ ವಾಹನದಲ್ಲೇ ಮುದುಡಿಕೊಂಡಿದ್ದರು. ಅಂಜನಿ ಫಾರ್ಮದ ಮೋಹನ ಮತ್ತು ನಾನು ಅಲ್ಲೆಲ್ಲಾ ಹುಡುಕಿದಾಗ ಸಿಕ್ಕಿದ್ದು ಲಾಡ್ಜಲ್ಲಿ ಒಂದೇ ರೂಮು. ಮೋಹನ ರೂಮಿಗೆ ಹೋದವನೇ ಪವಡಿಸಿಬಿಟ್ಟ. ನನಗೋ ನಿದ್ದೆ ಬಾರದು. ಕೋಗಿಲೆಯ ಕೂಗು ಕೇಳಿಬರುತ್ತಿತ್ತು. "ಮೋಹನ, ಕೋಗಿಲೆ ಕೂಗ್ತಿದೆಯಲ್ಲೋ" ಅಂದೆ. "ಸುಮ್ನೆ ಮಲ್ಕೊಳ್ರಣ್ಣ. ನಿಮಗೆ ಯಾವಾಗ್ಲೂ ಅದೇ ಧ್ಯಾನ" ಅಂದ. ಎದ್ದು ರೂಮಿನ ಹೊರಗೆ ಬಂದರೆ ಮುಂದೆಯೇ ಇದ್ದ ಗಸಗಸೆ ಮರದಲ್ಲಿ ಗಂಡು ಕೋಗಿಲೆ ಕುಳಿತಿತ್ತು. "ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತೂ..." ಎಂಬ ಉಪಾಸನೆ ಚಿತ್ರದ ಗೀತೆ ನೆನಪಾಯ್ತು.
ಫೋಟೋ ತೆಗೆಯುತ್ತಿರುವಾಗ ಅಲ್ಲಿಗೆ ಗಸಗಸೆ ಗಿಡದ ಪುಟ್ಟಪುಟ್ಟ ಹೂಗಳ ಮಕರಂದ ಹೀರಲು ಮತ್ತು ಹಣ್ಣು ತಿನ್ನಲು ಸಣ್ಣ ಗಾತ್ರದ ಹೂಕುಟುಕ (ಫ್ಲವರ್ ಪೆಕ್ಕರ್) ಹಕ್ಕಿ ಬಂತು. ತುಂಬಾ ಚುರುಕಾಗಿ, ಚಟುವಟಿಕೆಯಿಂದಿರುವ ಈ ಹಕ್ಕಿ ಎಷ್ಟೊಂದು ವೇಗವಾಗಿ ಹಾರಾಡುತ್ತಿತ್ತೆಂದರೆ ನಾನು ಫೋಟೋ ತೆಗೆಯಲು ತುಂಬಾ ಕಷ್ಟಪಡಬೇಕಾಯಿತು.
ಸುಂದರವಾದ ದ್ವೀಪ ದುಬಾರೆ. ಇಲ್ಲಿ ಕಾವೇರಿ ಕವಲೊಡೆದು ಹರಿಯುತ್ತದೆ. ಆನೆಗಳು ಇಲ್ಲಿಯ ಮುಖ್ಯ ಆಕರ್ಷಣೆ. ಮಡಿಕೇರಿಯಿಂದ ಕೇವಲ ೩೨ ಕಿಮೀ ದೂರದಲ್ಲಿದೆ. ದುಬಾರೆಯಲ್ಲಿ ಆನೆ ಲದ್ದಿ ಹಾಕಿ ನಮ್ಮನ್ನು ಸ್ವಾಗತಿಸಿತು!
ಆನೆಗಳ ಸ್ನಾನ, ಊಟ ಮತ್ತು ಆಟಗಳನ್ನು ಹತ್ತಿರದಲ್ಲೇ ನೋಡಿ ಸವಿಯುವ ಭಾಗ್ಯ ನಮ್ಮದಾಯ್ತು.
ಮಡಿಕೇರಿಯಿಂದ ೮ ಕಿಮೀ ದೂರದಲ್ಲಿ ಕಾಫಿ, ಏಲಕ್ಕಿ ತೋಟಗಳ ನಡುವೆ ಬಂಡೆಗಳ ಮೇಲಿಂದ ಅಬ್ಬಿ ಜಲಪಾತ ಧುಮ್ಮಿಕ್ಕುತ್ತದೆ. ಸುಮಾರು ೮೦ ಅಡಿ ಎತ್ತರದಿಂದ ಹಾಲಿನ ಹೊಳೆಯಂತೆ ಬಿಳಿ ನೊರೆಯಾಗಿ ಸುರಿಯುವ ಅಬ್ಬಿ ಜಲಪಾತ ಕಣ್ಮನ ತುಂಬುತ್ತದೆ. ಕೊಡವ ಭಾಷೆಯಲ್ಲಿ "ಅಬ್ಬಿ" ಎಂದರೆ ಜಲಪಾತವೆಂದು ಅರ್ಥ.
ಕ್ರಿ.ಶ.೧೮೨೦ ರಲ್ಲಿ ಕೊಡಗನ್ನು ಆಳುತ್ತಿದ್ದ ಅರಸ ಲಿಂಗರಾಜೇಂದ್ರ ಕಟ್ಟಿಸಿದ ಓಂಕಾರೇಶ್ವರ ದೇವಾಲಯ ಇಸ್ಲಾಂ ಮತ್ತು ರೋಮನ್ ವಾಸ್ತುಶಿಲ್ಪಗಳ ಪ್ರಭಾವವಿರುವ ಏಕೈಕ ಹಿಂದು ದೇವಾಲಯ.
ಕಾವೇರಿ ನಿಸರ್ಗಧಾಮ - ಕುಶಾಲನಗರದಿಂದ ೨ ಕಿಮೀ ದೂರದಲ್ಲಿದೆ. ಕಾವೇರಿ ನದಿಯಿಂದಾವೃತವಾದ ಈ ದ್ವೀಪದ ವಿಸ್ತೀರ್ಣ ೬೫ ಎಕರೆ. ಈ ದ್ವೀಪಕ್ಕೆ ಹೋಗುವುದು ಕಬ್ಬಿಣದ ತೂಗುಸೇತುವೆಯ ಮೇಲೆ. ತೂಗುಸೇತುವೆ ತೂಗುಯ್ಯಾಲೆಯ ಅನುಭವ ನೀಡುತ್ತದೆ.
ಕಾವೇರಿ ದಡದಲ್ಲಿ ಸಾಗಿ ನೀರಾಟವಾಡಬಹುದು. ಬಂಡೆಗಳ ಮೇಲೆ ಕುಳಿತು ನೀರಿನ ಕಾರಂಜಿಯಾಗಬಹುದು!
ಗೋಲ್ಡನ್ ಟೆಂಪಲ್ ಎಂದೇ ಪ್ರಸಿದ್ಧಿ ಪಡೆದಿರುವ ಬೈಲುಕುಪ್ಪೆಯ "ಪದ್ಮಸಾಂಭವ ಬೌದ್ಧ ವಿಹಾರ ಕೇಂದ್ರ" ಕ್ಕೆ ಭೇಟಿಕೊಟ್ಟೆವು. ಟಿಬೆಟಿಯನ್ ಶಿಲ್ಪಿಗಳ ಮೂರು ವರ್ಷಗಳ ಪರಿಶ್ರಮದಿಂದ ೫.೫ ಕೋಟಿ ರೂ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ಸೆಪ್ಟೆಂಬರ್ ೨೪,೧೯೯೯ ರಂದು ಟಿಬೆಟಿಯನ್ನರ ಧಾರ್ಮಿಕ ನಾಯಕ ದಲಾಯಿಲಾಮರಿಂದ ಇದು ಉದ್ಘಾಟನೆಗೊಂಡಿತು. ಸ್ವರ್ಣಲೇಪಿತ ಕಂಚಿನ ಪ್ರತಿಮೆಯಾದ ಬುದ್ಧ ಶಾಕ್ತಮುನಿಯು ನಡುಭಾಗದಲ್ಲಿದ್ದರೆ, ಬಲಬದಿ ಪದ್ಮಶಾಂಭವ್ ಎಂಬ ಏಳನೇ ಶತಮಾನದಲ್ಲಿ ನಳಂದ ವಿಶ್ವವಿದ್ಯಾನಿಲಯದ ಖ್ಯಾತ ಪಂಡಿತರಾಗಿದ್ದವರ ಪುತ್ಥಳಿಯಿದೆ. ಮತ್ತೊರ್ವ ಬುದ್ಧ ಅಮಿತಾಯುಸ್ ರ ಪ್ರತಿಮೆ ಎಡಭಾಗದಲ್ಲಿದೆ. ಈ ಎಲ್ಲ ಪ್ರತಿಮೆಗಳ ಎತ್ತರ ೨೦ ಮೀಟರ್. ಚಿನ್ನದಿಂದ ಲೇಪಿತಗೊಂಡು ಫಳಫಳನೆ ಹೊಳೆಯುವ ಬೃಹತ್ ತ್ರಿಮೂರ್ತಿಗಳನ್ನು ನೋಡುವುದೇ ಒಂದು ಅನನ್ಯ ಅನುಭವ.
ಲಾಮಾಗಳಲ್ಲಿ ಎಲ್ಲರೂ ಕಡುಕೆಂಪು ಬಣ್ಣದ ವಸ್ತ್ರವನ್ನೇ ಧರಿಸುತ್ತಾರೆ. ವೇಸ್ಟ್ ಕೋಟಿನಂತಹ ಒಂದು ಮೇಲಂಗಿ ಹಾಗೂ ಲಂಗದಂತಹ ಒಂದು ನಿಲುವಂಗಿಯೇ ಇವರ ಮುಖ್ಯ ವಸ್ತ್ರಗಳಾಗಿದ್ದು, ಎಲ್ಲಾ ಕಡುಕೆಂಪು ಬಣ್ಣದಿಂದ ಕೂಡಿರುತ್ತದೆ. ಕೆಂಪು ಬಣ್ಣದ ಈ ವಸ್ತ್ರಕ್ಕೆ ಇವರ ಭಾಷೆಯಲ್ಲಿ "ದಚ್ಚಿ" ಎಂದು ಕರೆಯುತ್ತಾರೆ. ಈ ಕಡುಕೆಂಪು ಬಣ್ಣ ತಮ್ಮ ಸನ್ಯಾಸತ್ವದ ಸಂಕೇತ ಎಂದು ಇವರು ಹೇಳುತ್ತಾರೆ.
ತಮ್ಮ ಬಳಿ ಜಪಮಾಲೆಯೊಂದನ್ನು ಇಟ್ಟುಕೊಂಡು ಲಾಮಾಗಳು ಯಾವಾಗಲೂ ಜಪ ಮಾಡುತ್ತಿರುತ್ತಾರೆ. ಚಕ್ರ ತಿರುಗಿಸುವುದೂ ಕೂಡ ಇವರ ಪ್ರಾರ್ಥನೆಯ ಒಂದು ಅಂಗ. ಈ ಚಕ್ರಗಳು ನಾನಾ ಆಕಾರಗಳಲ್ಲಿ ಕಂಡುಬರುತ್ತವೆ.