Saturday, August 18, 2012

ಚೌಕಟ್ಟಿನ ಆಚೆಗೆ ಇತಿಹಾಸ ಚಿತ್ರಪಟ...

 ಶಿಡ್ಲಘಟ್ಟದಲ್ಲಿ ಪುರಸಭೆ ರಚನೆಯಾದ ನಂತರ ಆಯ್ಕೆಯಾದ ಪುರಸಭಾ ಸದಸ್ಯರ ಭಾವಚಿತ್ರ.

ಇಂದು ವಿಶ್ವಛಾಯಾಗ್ರಾಹಕರ ದಿನ. ಶಿಡ್ಲಘಟ್ಟದ ತಾಲ್ಲೂಕಿನ ಇತಿಹಾಸದ ದಾಖಲೆಯಂತೆ ಕಾಣುವ ಕೆಲವು ಅಪರೂಪದ ಕಪ್ಪು-ಬಿಳುಪಿನ ಛಾಯಾಚಿತ್ರಗಳು ಹಲವು ಕಥೆಗಳನ್ನು ಹೇಳುತ್ತವೆ. ಅಲಲ್ಲಿ ಕೆಲವು ಆಸಕ್ತರ ಸಂಗ್ರಹಗಳಲ್ಲಿ ಭದ್ರವಾಗಿರುವ ಈ ಛಾಯಾಚಿತ್ರಗಳು ಅಂದಿನ ದಿನಗಳ ನೆನಪುಗಳನ್ನು ಮೆಲುಕು ಹಾಕಲು ನೆರವಾಗುತ್ತವೆ.
 ಶಿಡ್ಲಘಟ್ಟಕ್ಕೆ ಜಯಚಾಮರಾಜೇಂದ್ರ ಒಡೆಯರ್ ಬಂದಿದ್ದರು, ನಮ್ಮ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯ, ಡಿ.ದೇವರಾಜ ಅರಸ್ ಮುಂತಾದ ಗಣ್ಯರು ಭೇಟಿ ನೀಡಿದ್ದರು. ಹೀಗೆ ಹಲವು ಗಣ್ಯರು ಇಲ್ಲಿಗೆ ಆಗಮಿಸಿದ್ದರ ಕುರುಹಾಗಿ ದಾಖಲಾಗಿರುವ ಛಾಯಾಚಿತ್ರಗಳಿವೆ. ಆಗಿನ ಸಾಮಾಜಿಕ ಜೀವನವನ್ನು ಕಣ್ಣೆದುರು ತರುವ ಆಗಿನವರ ಉಡುಪುಗಳು, ಸಾಂಘಿಕ ಜೀವನ, ಸಾಮಾಜಿಕ ಸೇವೆ ತಿಳಿಸಿಕೊಡುವ ಈ ಚಿತ್ರಗಳು ಹೊಸಬರಿಗೆ ಅಪರೂಪದ ದಾಖಲಾತಿಯಾದರೆ, ಹಳಬರಿಗೆ ನೆನಪುಗಳ ನೇವರಿಕೆ.
 ಶಿಡ್ಲಘಟ್ಟ ಪುರಸಭೆ ಘೋಷಣೆಯಾದ ನಂತರ ಮೊಟ್ಟಮೊದಲ ಬಾರಿಗೆ ಆಯ್ಕೆಯಾದ ಪುರಸಭಾ ಸದಸ್ಯರ ಚಿತ್ರದಲ್ಲಿ ಪೇಟ, ಶಲ್ಯ, ಪೈಜಾಮ, ಕೋಟು, ಠೀವಿ, ಗತ್ತುಗಳನ್ನು ಛಾಯಾಚಿತ್ರ ಚೌಕಟ್ಟಿನಾಚೆಗೂ ಹರಿಬಿಡುತ್ತದೆ. ಮೈಸೂರು ಸಂಸ್ಥಾನದ ಪುರಸಭೆಗಳ ಕೈಪಿಡಿ ೧೯೫೩ ರ ಮಾಹಿತಿ ಪ್ರಕಾರ, ಆಗಿನ ಕೋಲಾರ ಜಿಲ್ಲೆಯ ಶಿಡ್ಲಘಟ್ಟ ಟೌನ್ ಮುನಿಸಿಪಾಲಿಟಿ  ಜನಸಂಖ್ಯೆ ೯೨೨೯, ಅಧ್ಯಕ್ಷ ಬಿ.ವಿರೂಪಾಕ್ಷಪ್ಪ, ಸಿಬ್ಬಂದಿ ಸಂಖ್ಯೆ ೩೨. ಆಗ ಟೌನಿನಲ್ಲಿ ನೀರಿಗಾಗಿ ನಲ್ಲಿ ವ್ಯವಸ್ಥೆಯಿರಲಿಲ್ಲ. ಆದರೆ ೧೫೦ ಬೀದಿ  ದೀಪಗಳಿದ್ದವು.
‘ಈ ಪುರಸಭೆಯು ೧೯೫೧ರ ಟೌನ್ ಮುನಿಸಿಪಲ್ ಕಾಯ್ದೆ ಮೇಲೆ ರಚನೆಯಾಗಿದೆ. ೧೫ ಜನ ಸದಸ್ಯರಿದ್ದಾರೆ. ಬಿ.ವಿರೂಪಾಕ್ಷಪ್ಪ ಅಧ್ಯಕ್ಷರಾಗಿಯೂ, ಜಿ.ಚೌಡಪ್ಪ ಉಪಾಧ್ಯಕ್ಷರಾಗಿಯೂ ಚುನಾಯಿತರಾಗಿದ್ದಾರೆ. ಇಲ್ಲಿ ಎರಡು ಸಾವಿರ ಮನೆಗಳಿವೆ.  ಬಿ.ವಿರೂಪಾಕ್ಷಪ್ಪನವರ  ನಾಮಾಂಕಿತದಲ್ಲಿ ವಿರೂಪಾಕ್ಷಪ್ಪ ಪ್ರೌಢಶಾಲೆ ಇರುತ್ತದೆ. ಬಿ.ವಿರೂಪಾಕ್ಷಪ್ಪನವರು ಪ್ರೌಢಶಾಲೆಗಾಗಿ ೧೩ ಎಕರೆ ಸ್ಥಳವನ್ನು, ಕಟ್ಟಡದ ನಿಧಿಗಾಗಿ ೩೦ ಸಾವಿರ ರೂಪಾಯಿಗಳನ್ನು ದಾನ ಮಾಡಿದ್ದಾರೆ. ತಾಲ್ಲೂಕು  ಕಚೇರಿ ಬಳಿ  ಪ್ರೌಢಶಾಲೆ ಕಟ್ಟಡವು ಕಟ್ಟಲಾಗುತ್ತಿದೆ. ಹೆರಿಗೆ ಆಸ್ಪತ್ರೆ ಕಟ್ಟಡಕ್ಕಾಗಿ ಈಗಾಗಲೇ ಹತ್ತು ಸಾವಿರ ರೂಪಾಯಿಗಳವರೆಗೆ ಸಾರ್ವಜನಿಕರಿಂದ ಚಂದಾ ವಸೂಲಾಗಿದೆ ಮತ್ತು ಹೆರಿಗೆ ಆಸ್ಪತ್ರೆ ಮಂಜೂರು ಮಾಡಲು ಸರ್ಕಾರವನ್ನು ಪ್ರಾರ್ಥಿಸಿಕೊಳ್ಳಲಾಗಿದೆ. ಈ ಆಸ್ಪತ್ರೆಗೆ ಬಿ.ವಿರೂಪಾಕ್ಷಪ್ಪನವರು ಹತ್ತು ಸಾವಿರ  ರೂಪಾಯಿ ನೀಡುವ ವಾಗ್ದಾನ ಮಾಡಿದ್ದು, ಈಗಾಗಲೇ ಐದು ಸಾವಿರ ರೂಪಾಯಿ ಕೊಟ್ಟಿದ್ದಾರೆ’ ಎಂದು ಕೈಪಿಡಿಯಲ್ಲಿ ಮುದ್ರಿಸಲಾಗಿದೆ.


 ಶಿಡ್ಲಘಟ್ಟದಲ್ಲಿ ೧೯೫೬ರಲ್ಲಿ ರಾಷ್ಟ್ರಭಾಷೆಯಾದ ಹಿಂದಿಯನ್ನು ಮಕ್ಕಳಿಂದ ಹಿರಿಯರವರೆಗೂ ಉಚಿತವಾಗಿ ಕಲಿಸುತ್ತಿದ್ದ  ಕೆಲಸವನ್ನು ಹಿಂದಿ ಪ್ರಚಾರ ಸಮಿತಿ ಮಾಡುತ್ತಿದ್ದು, ಹಿಂದಿ ಕಲಿಯುತ್ತಿದ್ದವರ ಚಿತ್ರವಿದು. ಹಿಂದಿ ಕಲಿಸುತ್ತಿದ್ದ ಹಿಂದಿ ಪಂಡಿತರಾದ ಎಚ್.ವಿ.ರಾಮಚಂದ್ರರಾವ್ ಚಿತ್ರದಲ್ಲಿದ್ದಾರೆ.


೧೯೫೬ರಲ್ಲಿ ರಾಷ್ಟ್ರಭಾಷೆಯಾದ ಹಿಂದಿಯನ್ನು ಮಕ್ಕಳಿಂದ ಹಿರಿಯರವರೆಗೂ ಉಚಿತವಾಗಿ ಕಲಿಸುವ ಕೆಲಸವನ್ನು ಶಿಡ್ಲಘಟ್ಟದ ಹಿಂದಿ ಪ್ರಚಾರ ಸಮಿತಿ ಮಾಡುತ್ತಿತ್ತು. ಸ್ವಾತಂತ್ರ್ಯ ಬಂದು ಕೆಲವೇ ವರ್ಷಗಳಾಗಿತ್ತು. ರಾಷ್ಟ್ರೀಯತೆ ತಿಳಿಸುವ ಉದ್ದೇಶದಿಂದ ಹಿಂದಿ ಪಂಡಿತರಾಗಿದ್ದ ಎಚ್.ವಿ.ರಾಮಚಂದ್ರರಾವ್ ಅವರ ನೇತೃತ್ವದಲ್ಲಿ ಹಿಂದಿ ತರಗತಿಗಳನ್ನು ನಡೆಸುತ್ತಿದ್ದರು. ಮುಂದೆ ಎಚ್.ವಿ.ರಾಮಚಂದ್ರರಾವ್ ಆಕಾಶವಾಣಿ ನಿರ್ದೇಶಕರಾದರು. ೨೦೦೨ರಲ್ಲಿ  ಶಿಡ್ಲಘಟ್ಟದಲ್ಲಿ ನಡೆದ ತಾಲ್ಲೂಕು ಸಾಹಿತ್ಯ ಸಮ್ಮೇಳನಕ್ಕೆ ಇವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು.ರಾಜ್ಯದ  ಮುಖ್ಯಮಂತ್ರಿಗಳಾಗಿದ್ದ ಕೆಂಗಲ್‌ಹನುಮಂತಯ್ಯ ಮತ್ತು ಡಿ.ದೇವರಾಜ ಅರಸ್ ೧೯೭೦ರಲ್ಲಿ ಶಿಡ್ಲಘಟ್ಟಕ್ಕೆ ಭೇಟಿ ನೀಡಿದ್ದರು.

ಕೆಪಿಸಿಸಿ ಅಧ್ಯಕ್ಷರೂ, ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಶಿಡ್ಲಘಟ್ಟದ ಕೆ.ಕೊಂಡಪ್ಪನವರ ಮನೆಗೆ ೧೯೭೦ರಲ್ಲಿ ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿ ಕೆಂಗಲ್‌ಹನುಮಂತಯ್ಯ ಮತ್ತು ಕಾಂಗ್ರೆಸ್ ಪಕ್ಷ ಇಬ್ಬಾಗವಾದ ಮೇಲೆ ೧೯೭೨ರಲ್ಲಿ ಮುಖ್ಯಮಂತ್ರಿಯಾದ ಡಿ.ದೇವರಾಜ ಅರಸ್ ಬಂದಿದ್ದರು. ಅವರ ಸರಳತೆ ಈ ಛಾಯಾಚಿತ್ರದಲ್ಲಿ ಕಾಣಬಹುದು.
 ‘ಈಗ ಮುಖ್ಯಮಂತ್ರಿ ಊರಿಗೆ ಬರುತ್ತಾರೆ ಅಂದರೆ ಸಾಮಾನ್ಯ ಜನರು ಹತ್ತಿರದಿಂದ ನೋಡಲಾಗದ ಸ್ಥಿತಿ ಇರುತ್ತದೆ. ಆಗ ನಮ್ಮ ದೊಡ್ಡಪ್ಪ ಕೆ.ಕೊಂಡಪ್ಪನವರನ್ನು ಭೇಟಿಯಾಗಲು ಕೆಂಗಲ್‌ಹನುಮಂತಯ್ಯ ಮತ್ತು ಡಿ.ದೇವರಾಜ ಅರಸ್ ಅವರು ಬಂದಿದ್ದಾಗ ನಮಗೆ ಕುಟುಂಬದ ಸ್ನೇಹಿತರೊಬ್ಬರು ಬಂದಂತೆ ಅನಿಸಿತ್ತು. ಮೊಟ್ಟಮೊದಲು ಪುರಸಭೆಯು ರಚನೆಯಾದಾಗ ನಮ್ಮ ದೊಡ್ಡಪ್ಪ ಸದಸ್ಯರಾಗಿದ್ದರು. ಆಗಿನ ನೆನಪನ್ನು ಮರುಕಳಿಸುವ ಶಿಡ್ಲಘಟ್ಟದ ಇತಿಹಾಸವನ್ನು ತಿಳಿಸುವ ಕೆಲವು ಛಾಯಾಚಿತ್ರಗಳನ್ನು ಜೋಪಾನವಾಗಿಟ್ಟುಕೊಂವಿದ್ದೇನೆ’ ಎನ್ನುತ್ತಾರೆ ಕೊಂಡಪ್ಪನವರ ಸಂಬಂಧಿ ವೇಣುಗೋಪಾಲ್.