Monday, December 6, 2010

ಮನೆಮನೆಗೂ ಆವರಿಸಿದ ಅಮೃತಬಳ್ಳಿ


ಶಿಡ್ಲಘಟ್ಟದ ಗೌಡರಬೀದಿಯ ಗೃಹಿಣಿ ಶಿವಲೀಲಮ್ಮ ರಾಜಣ್ಣ ತಮ್ಮ ಕಾಂಪೌಂಡಿಗೆ ಹಬ್ಬಿಸಿರುವ ಅಮೃತಬಳ್ಳಿ ಸಸ್ಯ.


ಕಳೆದ ವರ್ಷ ಹೆಚ್೧ಎನ್೧ ಸೋಂಕು ತೀವ್ರ ಸ್ವರೂಪದಲ್ಲಿ ವ್ಯಾಪಿಸಿದ್ದ ಸಂದರ್ಭದಲ್ಲಿ ಬಹುತೇಕ ಮಂದಿ ಆಯುರ್ವೇದ, ಹೋಮಿಯೋಪಥಿ ವೈದ್ಯಕೀಯ ಚಿಕಿತ್ಸಾ ಪದ್ಧತಿಗಳ ಜೊತೆಗೆ ಗಿಡಮೂಲಿಕೆ ಔಷಧಿಗಳ ಬಗ್ಗೆಯೂ ಚರ್ಚಿಸುತ್ತಿದ್ದರು. ಅವುಗಳಲ್ಲಿ ಅಮೃತಬಳ್ಳಿ ಕೂಡ ಒಂದು. ಅಮೃತಬಳ್ಳಿ ಬಗ್ಗೆ ನಂಬಿಕೆ ಮೂಡಿಸಿಕೊಂಡಿದ್ದ ಕೆಲವರು ಅದರ ಬಗ್ಗೆ ಮೊಬೈಲ್‌ನಲ್ಲಿ ಎಸ್ಎಂಎಸ್ ಮತ್ತು ಇಮೇಲ್ ಸಂದೇಶಗಳನ್ನೂ ಸಹ ರವಾನಿಸಿದ್ದರು.

ಪ್ರಚಾರದ ಪ್ರಭಾವವೋ ಅಥವಾ ಬೇರೆ ಕಾರಣವೋ ನಿಖರವಾಗಿ ಗೊತ್ತಿಲ್ಲ. ಆದರೆ ನಮ್ಮೂರಿನ ಬಹುತೇಕ ಮನೆಗಳಲ್ಲಿ ಅಮೃತಬಳ್ಳಿಯನ್ನು ಬೆಳೆಸಲಾಗುತ್ತಿದೆ. ಸುಂದರ ಚಪ್ಪರದ ರೂಪದಲ್ಲಿ ಮನೆ ಸುತ್ತಮುತ್ತಲೂ ಅದು ಬೆಳೆಯುತ್ತಿದೆ.


ಶಿಡ್ಲಘಟ್ಟದ ಗೌಡರಬೀದಿಯ ಗೃಹಿಣಿ ಶಾಂತಮ್ಮಮುನಿಕೃಷ್ಣಪ್ಪ ಅವರ ಮನೆಯ ಮೇಲೆಲ್ಲಾ ಹಬ್ಬಿರುವ ಅಮೃತಬಳ್ಳಿ ಸಸ್ಯ.

ಗೌಡರ ಬೀದಿಯಲ್ಲಿರುವ ಶಿವಲೀಲಮ್ಮ ರಾಜಣ್ಣ ತಮ್ಮ ಮನೆ ಎದುರಿನ ಕಾಂಪೌಂಡ್ ಮೇಲೆ ಅಮೃತಬಳ್ಳಿ ಬೆಳೆಸಿದ್ದರೆ, ಅದೇ ಬೀದಿಯ ಶಾಂತಮ್ಮಮುನಿಕೃಷ್ಣಪ್ಪ ಮನೆ ಮೇಲೆಲ್ಲಾ ಪಸರಿಸುವಂತೆ ಬೆಳೆಸಿದ್ದಾರೆ. ಷರಾಫ್ ಬೀದಿಯ ಮುರಳಿ ಮನೆಯ ಎರಡು ಅಂತಸ್ತುಗಳಲ್ಲೂ ಅಮೃತಬಳ್ಳಿ ಹರಡಿದ್ದು ಆಕರ್ಷಕವಾಗಿದೆ. ಹೀಗೆ ಪಟ್ಟಣದ ರಾಘವೇಂದ್ರಸ್ವಾಮಿ ಗುಡಿ ಬೀದಿ, ವಾಸವಿ ರಸ್ತೆ, ಹೌಸಿಂಗ್ ಬೋರ್ಡ್ ಮುಂತಾದ ಕಡೆ ಅಮೃತಬಳ್ಳಿ ಬೆಳೆಸಿದ್ದಾರೆ.


ಶಿಡ್ಲಘಟ್ಟ ತಾಲ್ಲೂಕಿನ ಕಂಬದಹಳ್ಳಿಯ ಗೋವಪ್ಪನವರ ವೆಂಕಟರಾಯಪ್ಪನವರ ಕಾಂಪೋಂಡಿಗೆ ಹಬ್ಬಿರುವ ಅಮೃತಬಳ್ಳಿ ಸಸ್ಯ.

ಹೃದಯಾಕಾರದ ಎಲೆ ಹೊಂದಿರುವ ಅಮೃತಬಳ್ಳಿಯ ಸಸ್ಯಶಾಸ್ತ್ರೀಯ ಹೆಸರು ಟೈನೋಸ್ಪೋರಾ ಕಾರ್ಡಿಫೋಲಿಯಾ. ಎಲ್ಲಾ ವಾತಾವರಣದಲ್ಲೂ ಹುಲುಸಾಗಿ ಬೆಳೆಯುವ ಇದಕ್ಕೆ ಸಂಸ್ಕೃತದಲ್ಲಿ ಗುಡುಚಿ, ಮಧುಪುರಾನಿ, ಅಮ್ರಿತಾ, ಕುಂಡಲಿನಿ, ಚಾಕ್ರಲಕ್ಷನಿಕಾ ಮುಂತಾದ ಹೆಸರುಗಳಿಂದ ಕರೆಯುತ್ತಾರೆ.
"ಜ್ವರ, ಶೀತ, ಅಧಿಕ ರಕ್ತದೊತ್ತಡ, ನೋವು, ವಾತ, ಮೈಕೈನೋವು, ಕಾಮಾಲೆ, ರಕ್ತಹೀನತೆ, ಹೃದ್ರೋಗ, ದಡಾರ, ಉಗುರುಸುತ್ತು, ಅಲರ್ಜಿ, ಸುಟ್ಟಗಾಯ, ಋತುಸ್ರಾವದ ತೊಂದರೆ, ಎದೆ ಹಾಲು ಕೊರತೆ, ಗರ್ಭಿಣಿಯರ ನಂಜು, ಚರ್ಮರೋಗ ಮುಂತಾದ ಅನೇಕ ಕಾಯಿಲೆಗಳಿಗೆ ಔಷಧಿ ಅಮೃತಬಳ್ಳಿ. ಸಕ್ಕರೆ ಖಾಯಿಲೆಗೆ ಅಮೃತಬಳ್ಳಿ ಎಲೆ, ಬೇವಿನ ಎಲೆ, ಬಿಲ್ವಪತ್ರೆಗಳನ್ನು ಒಣಗಿಸಿ ಪುಡಿಮಾಡಿ ಪ್ರತಿದಿನ ಬೆಳಿಗ್ಗೆ ಒಂದು ಚಮಚ ನೀರಿನೊಂದಿಗೆ ಸೇವಿಸಿದರೆ ಆರೋಗ್ಯ ಉತ್ತಮಗೊಳ್ಳುತ್ತದೆ. ಇದರ ಕಾಂಡದ ಕಷಾಯ ಶೀತ, ಕೆಮ್ಮು ಹಾಗೂ ಜ್ವರಕ್ಕೆ ಔಷಧಿ. ಹಾವು, ಚೇಳುಗಳ ಕಡಿತಕ್ಕೆ ಇದರ ಕಾಂಡವನ್ನು ತೇಯ್ದು ಹಚ್ಚಿದರೆ ವಿಷ ಕಡಿಮೆಯಾಗುತ್ತದೆ" ಎಂದು ವನ ಔಷಧಿಗಳ ಬಗ್ಗೆ ಅರಿವಿರುವ ಸ.ರಘುನಾಥ ತಿಳಿಸಿದರು.


ಶಿಡ್ಲಘಟ್ಟದ ಷರಾಫ್ ಬೀದಿಯ ಮುರಳಿಯವರ ಮನೆಯ ಎರಡು ಮಹಡಿಗೂ ಹಬ್ಬಿರುವ ಅಮೃತಬಳ್ಳಿ ಸಸ್ಯ.

"ನಾವು ಮೂರು ವರ್ಷಗಳಿಂದ ಅಮೃತಬಳ್ಳಿ ಬೆಳೆಸುತ್ತಿದ್ದೇವೆ. ಮನೆ ಬಳಿ ಅಥವಾ ಹೂತೋಟಗಳಲ್ಲಿ ಈ ಸಸ್ಯವನ್ನು ಬೆಳೆಸುವುದರಿಂದ ಹಾವು ಬರುವುದಿಲ್ಲ. ಇದು ಮನೆಮದ್ದಾಗಿ ಸದಾಕಾಲ ಬಳಕೆಗೆ ಬರುತ್ತದೆ. ನಮ್ಮ ಯಜಮಾನರಿಗೆ ಸಕ್ಕರೆ ಖಾಯಿಲೆಯಿರುವುದರಿಂದ ಅವರು ಪ್ರತಿನಿತ್ಯ ಬೆಳಿಗ್ಗೆ ನಾಲ್ಕು ಎಲೆಗಳನ್ನು ತಿನ್ನುತ್ತಾರೆ. ಸಣ್ಣ ಪುಟ್ಟ ಖಾಯಿಲೆಗಳಿಗೆ ನಾವು ಔಷಧಿ ಅಂಗಡಿಗೆ ಹೋಗುವುದೇ ಇಲ್ಲ. ಇದರ ಚಿಕ್ಕ ಕಾಂಡವನ್ನು ನೆಟ್ಟರೆ ಸಾಕು ಬೆಳೆಯುತ್ತದೆ. ನಮ್ಮಿಂದ ಅನೇಕರು ತೆಗೆದುಕೊಂಡು ಹೋಗಿ ಬೆಳೆಸುತ್ತಿದ್ದಾರೆ” ಎಂದು ಗೌಡರಬೀದಿಯ ಗೃಹಿಣಿ ಶಿವಲೀಲಮ್ಮ ರಾಜಣ್ಣ ತಿಳಿಸಿದರು.

Saturday, November 20, 2010

’ವರದ’ನಾಯಕನಹಳ್ಳಿ ಸಹಕಾರ ಸಂಘ

‘ಸಿಲ್ಕ್’ ಮತ್ತು ‘ಮಿಲ್ಕ್’ಗೆ ಖ್ಯಾತಿ ಗಳಿಸಿರುವ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸಾವಿರಾರು ಕುಟುಂಬಗಳು ರೇಷ್ಮೆ ಮತ್ತು ಹೈನುಗಾರಿಕೆ ಮೇಲೆ ಅವಲಂಬಿತವಾಗಿವೆ. ಹೈನುಗಾರಿಕೆ ಅಭಿವೃದ್ಧಿ ಮಾಡುವಲ್ಲಿ ಸಹಕಾರಿ ಸಂಘಗಳ ಪಾತ್ರವೂ ವಿಶೇಷ. ಕೆಲ ಸಹಕಾರಿ ಸಂಘಗಳು ಹೈನುಗಾರಿಕೆ ಚಟುವಟಿಕೆಗಳಿಗೆ ಮಾತ್ರವೇ ಸೀಮಿತವಾಗಿದ್ದರೆ ಇನ್ನೂ ಕೆಲ ಸಂಘಗಳು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿವೆ.ಆ ಕೆಲವೇ ಸಂಘಗಳಲ್ಲಿ ನಮ್ಮ ತಾಲ್ಲೂಕಿನ ವರದನಾಯಕನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘ ಕೂಡ ಒಂದು. ದೈನಂದಿನ ಚಟುವಟಿಕೆಗಳ ಜೊತೆಗೆ ಶಾಲಾ ಮಕ್ಕಳಿಗಾಗಿ ಹಾಲು ಪೂರೈಕೆ, ಗ್ರಾಮದಲ್ಲಿ ಬೀದಿದೀಪಗಳನ್ನು ಅಳವಡಿಸುವುದು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹಣಕಾಸು ನೆರವು ನೀಡುವುದು ಮುಂತಾದ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವುದರ ಜೊತೆಗೆ ಗ್ರಾಮೀಣಾಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದೆ.
"ಸಂಘ ಸ್ಥಾಪನೆಗೊಂಡು ೩೫ ವರ್ಷಗಳು ಕಳೆದಿವೆ. ೧೬ ಲೀಟರ್ ಹಾಲಿನ ಶೇಖರಣೆಯಿಂದ ಆರಂಭಗೊಂಡ ಸಂಘ ಈಗ ೮೦೦ ಲೀಟರಿನಷ್ಟು ಹಾಲನ್ನು ಪ್ರತಿ ದಿನ ಸಂಗ್ರಹಿಸುತ್ತಿದೆ. ಸಹಕಾರಿ ಸಂಘಗಳ ಲೆಕ್ಕ ಪರಿಶೋಧಕರಿಂದ ಪ್ರತಿ ವರ್ಷವೂ ‘ಬಿ’ ಗ್ರೇಡ್ ಪಡೆಯುತ್ತಿದ್ದೇವೆ. ಹಾಲಿನ ಅಳತೆ ನಿಖರವಾಗಿ ದಾಖಲಿಸಲು ಕಂಪ್ಯೂಟರೀಕೃತ ಅಳತೆ ವ್ಯವಸ್ಥೆ ಮಾಡಿದ್ದೇವೆ. ರಾಸುಗಳಿಗೆ ಆರೋಗ್ಯ ತಪಾಸಣೆ, ವೈದ್ಯರಿಂದ ಚಿಕಿತ್ಸೆ, ರಾಸುಗಳಿಗೆ ನೀಡಬೇಕಾದ ಪೌಷ್ಠಿಕ ಆಹಾರ ಹಾಗೂ ಪಾಲನೆ ಬಗ್ಗೆ ಕಾರ್ಯಗಾರ, ಪಶು ಆಹಾರ ಸರಬರಾಜು, ಮೇವಿನ ಬೀಜ ವಿತರಣೆ ಮತ್ತು ಶುದ್ಧ ಹಾಲು ನೀಡುವ ಗ್ರಾಹಕರನ್ನು ಗುರುತಿಸಿ ಬಹುಮಾನ ನೀಡುತ್ತೇವೆ" ಎಂದು ಸಂಘದ ಅಧ್ಯಕ್ಷ ವಿ.ಬಿ.ಅಮರನಾಥ್ ತಿಳಿಸಿದರು.
ಆರಂಭದಲ್ಲಿ ಚೀಮನಹಳ್ಳಿ ಹಾಗೂ ತಾತಹಳ್ಳಿಯಿಂದ ಉತ್ಪಾದಕರು ಬರುತ್ತಿದ್ದರು. ಈಗ ಅಲ್ಲೆಲ್ಲಾ ಸಹಕಾರ ಸಂಘಗಳು ಸ್ಥಾಪನೆಯಾದ್ದರಿಂದ ಕೇವಲ ವರದನಾಯಕನಹಳ್ಳಿಗೆ ಮಾತ್ರ ಈ ಸಂಘ ಸೀಮಿತವಾಗಿದೆ. ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದಿದ ಈ ಸಂಘವು ಉಳಿತಾಯದ ರೂಪದಲ್ಲಿ ಬ್ಯಾಂಕಿನಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಜಮೆ ಮಾಡಿದ್ದು ಆರ್ಥಿಕವಾಗಿ ಸುಸ್ಥಿತಿಯಲ್ಲಿದೆ.
"ಕಳೆದ ೮ ವರ್ಷಗಳಿಂದ ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಬಿಸಿಯೂಟದ ಜೊತೆ ಮಜ್ಜಿಗೆಗಾಗಿ ಸಂಘದವರು ಹಾಲು ಒದಗಿಸುತ್ತಿದ್ದಾರೆ. ರಾಷ್ಟ್ರೀಯ ಹಬ್ಬಗಳಂದು ಶಾಲಾ ಮಕ್ಕಳಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸುವುದರ ಜೊತೆ ಬಡ ವಿದ್ಯಾರ್ಥಿಗಳಿಗೆ ಪಠ್ಯ ಸಾಮಗ್ರಿಗಳನ್ನು ವಿತರಿಸುತ್ತಾರೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವುದರ ಜೊತೆಗೆ ಶಾಲೆಯ ಅಗತ್ಯಗಳಿಗೆ ಸ್ಪಂದಿಸುತ್ತಾರೆ" ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹೆಚ್.ವಿ.ವೆಂಕಟರೆಡ್ಡಿ ತಿಳಿಸುತ್ತಾರೆ.
"ಗ್ರಾಮದಲ್ಲಿ ಓಡಾಡಲು ಅನುಕೂಲವಾಗುವಂತೆ ಅಗತ್ಯವಾದ ಸಿಎಫ್ಎಲ್ ಬೀದಿ ದೀಪಗಳ ಅಳವಡಿಕೆ. ಆರ್ಥಿಕವಾಗಿ ಅಶಕ್ತ ಕುಟುಂಬದವರಿಗೆ ಅನಾರೋಗ್ಯ ಕಂಡು ಬಂದಾಗ ಅವರ ತುರ್ತು ಅಗತ್ಯಕ್ಕೆ ೨೦೦೦ ದಿಂದ ೪೦೦೦ ರೂಗಳವರೆಗೆ ನೆರವು ನೀಡುವುದರ ಜೊತೆಗೆ ಗ್ರಾಮದ ಜಾತ್ರೆ ಹಾಗೂ ಉತ್ಸವಗಳಿಗೆ ಸಂಘದವರು ಹಾಲು ಮತ್ತು ಮಜ್ಜಿಗೆ ವ್ಯವಸ್ಥೆ ಮಾಡುತ್ತಾರೆ. ಗ್ರಾಮದ ಜನಪದ ಕಲೆಗಳ ಪ್ರೋತ್ಸಾಹಕ್ಕಾಗಿ ನೆರವು ನೀಡುವರು. ಈ ಬಾರಿ ಶಾಲೆ ಹಾಗೂ ಎಲ್ಲ ಗ್ರಾಮಸ್ಥರೂ ಒಂದೇ ಸ್ಥಳದಲ್ಲಿ ರಾಷ್ಟ್ರೀಯ ಹಬ್ಬದಾಚರಣೆ ಮಾಡಬೇಕೆಂಬ ಉದ್ದೇಶದಿಂದ ಧ್ವಜ ಸ್ತಂಬ ಮತ್ತು ಕಲ್ಲಿನ ವೇದಿಕೆ ನಿರ್ಮಿಸುತ್ತಿದ್ದಾರೆ" ಎಂದು ಹೇಳುತ್ತಾರೆ ಗ್ರಾಮದ ಹಿರಿಯ ಗೋಪಾಲಪ್ಪ.

Thursday, November 11, 2010

ಕಾಡು ಹೂಗಳ ಕಾರುಬಾರು...


ಕ್ಯಾಸಿಯಾಮರ

ಶಿಡ್ಲಘಟ್ಟದ ಹೊರವಲಯದ ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ರೇಷ್ಮೆ ವಿಸ್ತರಾಣಾಧಿಕಾರಿಗಳ ಕಚೇರಿ ಮುಂದೆ ಕ್ಯಾಸಿಯಾಮರ ಹಳದಿ ಬಣ್ಣದ ಹೂಗಳನ್ನು ಅರಳಿಸಿಕೊಂಡು ದಾರಿ ಹೋಕರ ಕಣ್ಮನ ತಣಿಸುತ್ತಿದೆ.
ಈ ಕಚೇರಿಯ ಆವರಣದಲ್ಲಿ ಎರಡು ಮರಗಳಿವೆ. ಟೆಕೋಮಾ ಅಥವಾ ಟಿಬೆಬುಯಾ ಎಂದು ಕರೆಯುವ ಮರ ಬೇಸಿಗೆಯಲ್ಲಿ ಯುಗಾದಿ ಹಬ್ಬದ ಸಮಯದಲ್ಲಿ ಎಲೆಯನ್ನೆಲ್ಲಾ ಉದುರಿಸಿಕೊಂಡು ಹಳದಿ ಹೂಗಳನ್ನು ಮರದ ತುಂಬಾ ಅರಳಿಸಿ ಕಂಗೊಳಿಸುತ್ತದೆ. ಇನ್ನೊಂದು ಮರವಾದ ಸೀಮೆ ತಂಗಡಿ ವಿಜಯದಶಮಿ ಸಮಯದಲ್ಲಿ ಮರದ ತುಂಬಾ ಹಳದಿ ಬಣ್ಣದ ಹೂವನ್ನು ಅರಳಿಸಿ ಹೊನ್ನಿನ ಹೂ ಚೆಲ್ಲುವಂತೆ ಭಾಸವಾಗುತ್ತದೆ.
ಮರದ ಕೆಳಗೆ ಬಿದ್ದ ಹೂವಿನಿಂದ ನೆಲವೆಲ್ಲ ಶೃಂಗಾರಗೊಂಡಿದೆ. ಮಳೆ ಕಡಿಮೆ ಇರುವ ಪ್ರದೇಶದಿಂದ ಮಳೆ ಹೆಚ್ಚು ಇರುವ ಪ್ರದೇಶಗಳಲ್ಲಿ ಬೆಳೆಯಬಲ್ಲ ಈ ಮರ ಸೌಂದರ್ಯದ ಪ್ರತೀಕವಾಗಿದೆ. ಆಂಗ್ಲ ಭಾಷೆಯಲ್ಲಿ ಕ್ಯಾಸಿಯಾ ಎಂದು ಕರೆಯುವ ಇದರ ದಟ್ಟ ಹಳದಿ ಬಣ್ಣದ ಚಿಕ್ಕ ಹೂಗಳು ಆಕರ್ಷಕವಾಗಿವೆ. ಹೂದಾನಿಯಲ್ಲಿ ಸಿಂಗರಿಸಿಟ್ಟರೆ ವಾರಕ್ಕೂ ಹೆಚ್ಚು ಕಾಲ ಬಾಡುವುದಿಲ್ಲ.
ತಂಗಡಿ, ಸೀಮೆತಂಗಡಿ ಮತ್ತು ಕಕ್ಕೆ ಗಿಡಗಳ ಹೂಗಳು ಒಂದೇ ರೀತಿಯಿದ್ದರೂ ಎಲ್ಲವೂ ಬೇರೆ ಬೇರೆ. ಸೌಂದರ್ಯವಷ್ಟೇ ಅಲ್ಲದೆ ಆಯುರ್ವೇದದ ಔಷಧಿ ತಯಾರಿಕೆಯಲ್ಲೂ ಇದರ ಹೂ, ಎಲೆ ಹಾಗೂ ತೊಗಟೆ ಬಳಕೆಗೆ ಬರುತ್ತದೆ.


ಅರಳಿರುವ ಕಾಡು ತುಂಬೆ ಹೂಗಳು.

ಶಿಡ್ಲಘಟ್ಟದ ಹೊರವಲಯದಲ್ಲಿ ಅಮ್ಮನಕೆರೆ ಏರಿಯ ಮೇಲೆ ರಸ್ತೆಯ ಎರಡೂ ಬದಿಯಲ್ಲಿ ಕೆಂಪು ಕೆಂಪಾದ ಪುಟ್ಟ ಪುಟ್ಟ ಹೂಗಳು ಅರಳಿ ಪ್ರಯಾಣಿಗರ ಕಣ್ಮನ ತಣಿಸುತ್ತಿವೆ. ಇಷ್ಟು ದಿನ ಕಳೆ ಗಿಡಗಳಂತೆ ಕಂಡುಬರುತ್ತಿದ್ದ ಗಿಡಗಳಲ್ಲಿ ಈಗ ಹೂಗಳು ಅರಳಿ ಹಸಿರಿನ ಹಿನ್ನೆಲೆಯಲ್ಲಿ ಆಕರ್ಷಕವಾಗಿ ಕಾಣುತ್ತಿದೆ.


ಕಾಡು ತುಂಬೆ ಹೂ

ಪಿ.ಲಂಕೇಶರ "ಕೆಂಪಾದವೋ ಎಲ್ಲ ಕೆಂಪಾದವೋ..." ಹಾಡಿನ ಸಾಲುಗಳನ್ನು ನೆನೆಪಿಸುವಂತೆ ಅರಳಿರುವ ಈ ಹೂವನ್ನು "ಕಾಡು ತುಂಬೆ", "ಹಾಲು ಬಳ್ಳಿ" ಎಂದು ಕರೆಯುವರು. ಇಂಗ್ಲೀಷಿನಲ್ಲಿ ಇದನ್ನು ರೆಡ್ ಸ್ಟಾರ್ ಗ್ಲೋರಿ ಎನ್ನುತ್ತಾರೆ. ಸುಮಾರು ೩ ರಿಂದ ೪ ಸೆಮೀ ಉದದ ಕೆಂಪು ಹೂಗಳಿಂದ ಹಳದಿ ಬಣ್ಣದ ಪರಾಗರೇಣುಗಳು ಹೊರಬಂದು ಅತ್ಯಂತ ಸುಂದರವಾಗಿರುತ್ತವೆ. ಉತ್ತರ ಮೆಕ್ಸಿಕೋ ಮತ್ತು ಅರಿಜೋನಾ ಮೂಲದ ಈ ಸಸ್ಯ ಈಗ ಭಾರದ್ದೇ ಆಗಿಹೋಗಿದೆ. ಸಾಧಾರಣವಾಗಿ ಮಳೆ ಮುಗಿಯುವ ಸಮಯದಲ್ಲಿ ಅಂದರೆ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೂ ಈ ಹೂಗಳು ಅರಳುತ್ತವೆ. ಈ ಹೂಗಳನ್ನು ಕಂಡು ರೈತರು ಮಳೆ ಮುಗಿಯಿತೇ ಎಂದು ಆತಂಕ ಅನುಭವಿಸುವಂತಾಗಿದೆ.ಈ ಹೂವಿನ ಜತೆಯಲ್ಲೇ ತಂಗಡಿ, ದತ್ತೂರಿ, ಮುಟ್ಟಿದರೆ ಮುನಿ, ಲಾಂಟಾನಾ, ಮಾರ್ನಿಂಗ್ ಗ್ಲೋರಿ, ತುಂಬೆ, ಸಿಲ್ವರ್ ಕಾಕ್ಸ್‌ಕೂಂಬ್, ಉತ್ತರಂಗಿ ಮುಂತಾದ ಹೂಗಳೂ ಅಲ್ಲಲ್ಲಿ ಅರಳಿರುವುದರಿಂದ ನಾನಾ ವಿಧದ ಬಣ್ಣ ಬಣ್ಣದ ಚಿಟ್ಟೆಗಳು ಮಕರಂದ ಹೀರಲು ಹಾರಾಡುತ್ತಿರುತ್ತವೆ.


ಮಾರ್ನಿಂಗ್ ಗ್ಲೋರಿ


ಉತ್ತರಂಗಿಈ ಬೆಡಗಿನ ಸಿರಿಗಳು ಕೇವಲ ಕೆಲ ದಿನಗಳು ಮಾತ್ರ ಅರಳಿ ತಮ್ಮ ಚೆಲುವಿನಿಂದ ನೋಡುಗರ ಮನತಣಿಸಿ ಅನೇಕ ಚಿಟ್ಟೆ ಹಾಗೂ ದುಂಬಿಗಳ ಹೊಟ್ಟೆಯನ್ನೂ ತುಂಬಿಸಿ ತಾವು ಬಂದ ಕೆಲಸ ಮುಗಿಯಿತೆಂಬಂತೆ ಮಾಯವಾಗುತ್ತವೆ.


ಮುಟ್ಟಿದರೆ ಮುನಿಮೊದಲು ಪ್ರತಿ ಮನೆಯ ಹಿಂದೆ ಅಥವಾ ಮುಂದೆ ಹೂದೋಟವಿದ್ದೇ ಇರುತ್ತಿತ್ತು. ಇಂಥಹ ಹೂ ಬಳ್ಳಿಗಳನ್ನು ಬೇಲಿಗೆ ಹಬ್ಬಿಸುತ್ತಿದ್ದರು. ಮನೆಗೆ ಸುಂದರ ವಾತಾವರಣವನ್ನು ಇವು ಕಲ್ಪಿಸುತ್ತಿದ್ದವು. ಆದರೆ ಆಧುನಿಕತೆ ಬೆಳೆದಂತೆ ಮನೆ ಮುಂದಿನ ಆವರಣದಲ್ಲಿ ಇಂಥ ಕಾಡು ಹೂ ಬಳ್ಳಿ ಕಾಣೆಯಾಗುತ್ತಿವೆ. ಮುಡಿಗೇರದೆ ಗುಡಿಸೇರದೆ ತನ್ನಷ್ಟಕ್ಕೆ ತಾನರಳಿ ಅಳಿದುಹೋಗುವ ಈ ಸುಂದರ ಸುಮಗಳನ್ನು ಸ್ಪರ್ಷಿಸುವ ಅದೃಷ್ಟ ಪಾತರಗಿತ್ತಿಗಳಂತೆ ನಮ್ಮ ಕಣ್ಣಿಗೂ ಇರಲಿ.


ತುಂಬೆ


ಹಳದಿ ಕಾಡುತುಂಬೆಹೂತಂಗಡಿ

Thursday, November 4, 2010

ಶಿಡ್ಲಘಟ್ಟದಲ್ಲೊಂದು ವಿಶಿಷ್ಟ ಕೃಷಿ ಪ್ರಯೋಗ


ಶಿಡ್ಲಘಟ್ಟ ತಾಲ್ಲೂಕು ಹಿತ್ತಲಹಳ್ಳಿಯ ರೈತ ಎಚ್.ಜಿ.ಗೋಪಾಲಗೌಡ ತಮ್ಮ ತೋಟದಲ್ಲಿ ಬೆಳೆದಿರುವ ಮಿಶ್ರ ಬೆಳೆ

ಹವಾಮಾನ ಮತ್ತು ಪರಿಸರಕ್ಕೆ ಅನುಗುಣವಾಗಿ ಕೃಷಿ ಚಟುವಟಿಕೆ ಕೈಗೊಳ್ಳಬೇಕು. ವಿಜ್ಞಾನಿಗಳ ಹಾಗೆ ಚಿಂತನೆ ನಡೆಸಿ, ಉತ್ತಮ ಬೆಳೆ ಬೆಳೆಯಬೇಕು ಎಂದು ಮೇಲಿಂದ ಮೇಲೆ ರೈತರಿಗೆ ಸಲಹೆ ನೀಡಲಾಗುತ್ತದೆ. ಕೆಲ ಸಂದರ್ಭಗಳಲ್ಲಿ ಸರ್ಕಾರದಿಂದ ಪ್ರೋತ್ಸಾಹ ಕೂಡ ನೀಡಲಾಗುತ್ತದೆ. ಆದರೆ ಇದ್ಯಾವುದರ ಮೇಲೆಯೂ ಅವಲಂಬಿತರಾಗದೇ ತಾಲ್ಲೂಕಿನ ರೈತರೊಬ್ಬರು ವಿಶಿಷ್ಟ ರೀತಿಯ ಪ್ರಯೋಗ ಕೈಗೊಂಡಿದ್ದಾರೆ.

ನಮ್ಮ ತಾಲ್ಲೂಕಿನ ಹಿತ್ತಲಹಳ್ಳಿಯ ಕೃಷಿಕ ಎಚ್.ಜಿ.ಗೋಪಾಲಗೌಡ ಅವರು ಕೇವಲ ಮಳೆಯನ್ನೇ ನಂಬಿ ತಮ್ಮ ಮೂರೂವರೆ ಎಕರೆ ಜಮೀನಿನಲ್ಲಿ ಮಿಶ್ರ ಬೆಳೆ ಬೆಳೆದು ಯಶಸ್ವಿಯಾಗಿದ್ದಾರೆ. ಮಾವು, ರಾಗಿ, ಕಡಲೆಕಾಯಿ, ಹಿಪ್ಪುನೇರಳೆ, ಅವರೆ, ಬೆಂಡೆ, ಹಲಸಂದೆ, ಸಾಸಿವೆ, ತೊಗರಿ, ಚೆಂಡುಹೂ ಮತ್ತು ಬದುಗಳಲ್ಲಿ ಸಿಲ್ವರ್ ಗಿಡಗಳನ್ನು ಬೆಳೆದಿದ್ದಾರೆ. ಗುಂಡಿಗಳಲ್ಲಿ ಕೃಷಿ ತ್ಯಾಜ್ಯವನ್ನು ತುಂಬಿ, ಸಾವಯವ ಗೊಬ್ಬರ ಬಳಸಿ ಬೆಳೆ ಬೆಳೆಯುತ್ತಿದ್ದಾರೆ."ಮೂರು ವರ್ಷಗಳ ಹಿಂದೆ ಈ ಜಮೀನಿನಲ್ಲಿ ನೀಲಗಿರಿ ಮರಗಳಿದ್ದವು. ಅದರಿಂದ ಕಡಿಮೆಆದಾಯ ಬರುತ್ತಿತ್ತು. ಹೀಗಾಗಿ ಎರಡು ವರ್ಷಗಳ ಹಿಂದೆ ಮಿಶ್ರ ಬೆಳೆಯ ಪ್ರಯೋಗ ಕೈಗೊಂಡೆ. ಮೊದಲ ವರ್ಷ ಉತ್ತಮ ಫಲ ಸಿಗಲಿಲ್ಲ. ಆದರೆ ಕಳೆದ ವರ್ಷ ೪೦ ಕ್ವಿಂಟಾಲ್ ರಾಗಿ, ನಾಲ್ಕು ರೇಷ್ಮೆ ಬೆಳೆಗಾಗುವಷ್ಟು ಹಿಪ್ಪುನೇರಳೆಸೊಪ್ಪು, ೨ ಚೀಲ ಕಡಲೆಕಾಯಿ, ಒಂದು ಚೀಲ ಅವರೆಕಾಯಿ, ೨ ತಿಂಗಳ ಕಾಲ ಮನೆ ಬಳಕೆಗಾಗುವಷ್ಟು ತರಕಾರಿ ಬೆಳೆದೆ. ಜಮೀನಿನ ಫಲವತ್ತತೆಗೆ ರೇಷ್ಮೆ ತ್ಯಾಜ್ಯ, ಕುರಿ ತ್ಯಾಜ್ಯ, ಸಗಣಿ, ಗಂಜಲ, ಬಯೋಗ್ಯಾಸ್ ಸ್ಲರಿ ಬಳಕೆ ಮಾಡಿರುವೆ. ಆದಷ್ಟೂ ಸಾಗುವಳಿ ವೆಚ್ಚ ಕಡಿಮೆ ಮಾಡುವುದರಿಂದ ಆದಾಯ ಹೆಚ್ಚುತ್ತದೆ" ಎಂದು ಗೋಪಾಲಗೌಡ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ."ಜಮೀನಿನ ಸುತ್ತ ೩ ಅಡಿ ಆಳ ಮತ್ತು ಅಗಲದ ಗುಣಿ ಮಾಡಿರುವುದರಿಂದ ದನಗಳ ಕಾಟವಿಲ್ಲ ಮತ್ತು ಮಳೆ ನೀರು ಇಂಗುತ್ತದೆ. ನಮ್ಮ ಜಮೀನಿನಲ್ಲಿ ಬಿದ್ದ ಮಳೆನೀರು ಒಂದು ತೊಟ್ಟೂ ಪೋಲಾಗದಂತೆ ಜಮೀನಿನ ಏರು ತಗ್ಗನ್ನು ಅನುಸರಿಸಿ ಮಧ್ಯೆ ಮಧ್ಯೆ ಗುಣಿ ಮಾಡಿದ್ದೇವೆ. ಇದರಿಂದಾಗಿ ಜಮೀನಿನ ಪಕ್ಕದಲ್ಲೇ ನೀಲಗಿರಿ ತೋಪಿದ್ದರೂ ಜಮೀನಿಗೆ ತೊಂದರೆಯಾಗಿಲ್ಲ. ಇದಲ್ಲದೆ ಜಮೀನಿನ ಒಂದು ಭಾಗದಲ್ಲಿ ೨೫ ಮೀಟರ್ ಉದ್ದ ಅಗಲ ಮತ್ತು ೪ ಮೀಟರ್ ಆಳದ ಕೃಷಿಹೊಂಡ ನಿರ್ಮಿಸಿದ್ದೇವೆ. ಪಕ್ಕದಲ್ಲಿ ಕಾಲುವೆಯಿದ್ದು ಮಳೆ ನೀರು ಹರಿದು ಹೋಗುವಾಗ ಹೊಂಡದಲ್ಲಿ ಬಂದು ಇಂಗುತ್ತದೆ" ಎಂದು ಅವರು ನೀರಿನ ಸದ್ಭಕೆಯ ತಂತ್ರವನ್ನು ವಿವರಿಸುತ್ತಾರೆ."ಗೋಪಾಲಗೌಡರು ಕಡಿಮೆ ನೀರು ಬಳಸಿ ಸಾವಯವ ಪದ್ಧತಿಯಲ್ಲಿ ಉತ್ತಮ ಹಿಪ್ಪುನೇರಳೆ ಸೊಪ್ಪನ್ನು ಬೆಳೆಯುತ್ತಾರೆ. ಗುಣಮಟ್ಟದ ರೇಷ್ಮೆ ಗೂಡನ್ನೂ ಬೆಳೆಯುತ್ತಾರೆ. ಮಿಶ್ರ ಬೆಳೆ, ರಾಂಬುಲೆಟ್ ಕುರಿ ಸಾಕಣೆ, ಕಡಿಮೆ ವೆಚ್ಚ ಮಾಡಿ ಹೆಚ್ಚು ಇಳುವರಿ ಪಡೆಯುವ ಇವರ ಮಾದರಿ ವಿಧಾನ ಹಾಗೂ ಸಾಧನೆ ಗುರುತಿಸಿ ರಾಜ್ಯ ಸರ್ಕಾರ ಕಳೆದ ವರ್ಷ ಕೃಷಿ ಪಂಡಿತ ಪ್ರಶಸ್ತಿ ನೀಡಿ ಗೌರವಿಸಿದೆ. ಚೀನಾ ಮತ್ತು ಹಾಂಕಾಂಗ್ ದೇಶಗಳು ಮತ್ತು ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿನ ಕೃಷಿ ಪದ್ಧತಿಯನ್ನು ಅಧ್ಯಯನ ಮಾಡಿದ್ದಾರೆ. ಸಿರಿ ರೈತಕೂಟದ ಅಧ್ಯಕ್ಶರಾಗಿ ಇತರ ರೈತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಇಂಥಹ ರೈತರಿರುವುದು ಜಿಲ್ಲೆಗೇ ಹೆಮ್ಮೆ" ಎಂದು ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಶಿವರಾಂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.ಗೋಪಾಲಗೌಡರ ಪೋನ್ ನಂ: ೯೪೪೮೧೩೮೩೯೭

Friday, October 29, 2010

ಗೆಣಸಿಗೂ ಬರುತ್ತಿದೆ ಬೇಡಿಕೆ!!

ಬಗೆಬಗೆಯ ತರಕಾರಿಗಳು ಜನರಿಗೆ ಬೇರೆ ಬೇರೆ ಕಾರಣಕ್ಕೆ ಇಷ್ಟವಾಗುತ್ತವೆ. ಬ್ರಿಟೀಷರ ಬಳುವಳಿಯಾಗಿ ಭಾರತಕ್ಕೆ ಬಂದಿರುವ ತರಕಾರಿಯೊಂದು ಶಿಡ್ಲಘಟ್ಟದಲ್ಲಿ ಈಗ ಜನಪ್ರಿಯತೆ ಪಡೆಯುತ್ತಿದೆ. ಜನತೆ ಸ್ವಇಚ್ಛೆಯಿಂದ ಹಿತ್ತಲಿನಲ್ಲಿ, ಹೂತೋಟಗಳಲ್ಲಿ ಮತ್ತು ಮನೆಯ ಮುಂದೆ ರಸ್ತೆ ಬದಿಯಲ್ಲಿ ಬೆಳೆಸುತ್ತಿರುವ ತರಕಾರಿ ಮರಗೆಣಸು. ಇದಕ್ಕೆಲ್ಲ ಅತ್ಯುತ್ತಮ ಉದಾಹರಣೆಯಾಗಿ ರೇಷ್ಮೆ ಗೂಡು ಮಾರುಕಟ್ಟೆ ಸಮೀಪ ಮರಗೆಣಸಿನ ಗಿಡವೊಂದು ಹುಲುಸಾಗಿ ಬೆಳೆದಿದೆ.


ಶಿಡ್ಲಘಟ್ಟದ ರೇಷ್ಮೆ ಗೂಡು ಮಾರುಕಟ್ಟೆಯ ಬಳಿಯ ರಮ್ಯದರ್ಶನ್ ಹೋಟೆಲ್ ಮಾಲೀಕ ಕೃಷ್ಣ ಬೆಳೆದಿರುವ ಮರಗೆಣಸಿನ ಗಿಡ.


ಭಾರತೀಯ ಭಾಷೆಗಳಲ್ಲಿ ಈ ಗಿಡವನ್ನು ತಾಪಿಯೋಕ, ಟಾಪಿಯೋಕ ಎನ್ನುವರು. ಗಿಡವು ಸಣ್ಣ ಮರದಂತಿದ್ದು ಉಬ್ಬಿದ ಬೇರುಗಳು ಸಿಹಿಗೆಣಸನ್ನು ಹೋಲುವುದರಿಂದ ಮರಗೆಣಸು ಎನ್ನುವರು. ತಮಿಳಿನಲ್ಲಿ ಮರವಳ್ಳಿ ಕಿಳಂಗು, ಮಲಯಾಳಂನಲ್ಲಿ ಮರಚೀನಿ ಎನ್ನುತ್ತಾರೆ. ದಕ್ಷಿಣ ಅಮೆರಿಕ ಮೂಲದ ಮರಗೆಣಸು ಭಾರತದಲ್ಲಿ ಅಸ್ಸಾಂ, ಬಂಗಾಳ, ತಮಿಳುನಾಡು, ಕೇರಳ ಮತ್ತು ಕರ್ನಾಟಕ ಹೊರತುಪಡಿಸಿದರೆ ಬೇರೆಲ್ಲೂ ಬಳಕೆಯಲ್ಲಿಲ್ಲ.
ಕೇರಳವನ್ನು ಮರಗೆಣಸಿನ ಕಣಜವೆನ್ನುತ್ತಾರೆ. ಅವರು ಇದರಿಂದ ಅನೇಕ ರೀತಿಯ ಖಾದ್ಯಗಳನ್ನು ತಯಾರಿಸುತ್ತಾರೆ ಹಾಗೂ ಉತ್ತಮ ರೀತಿಯಲ್ಲಿ ಸದ್ಭಳಕೆ ಮಾಡುತ್ತಾರೆ. ತುಂಡು ಮಾಡಿ, ಹಿಟ್ಟಿನ ರೂಪ ನೀಡಿ ತಿಂಗಳುಗಟ್ಟಲೇ ದಾಸ್ತಾನು ಮಾಡುತ್ತಾರೆ. ರೊಟ್ಟಿ, ಪುಟ್ಟು, ಆಪ್ಪಂ, ಪಲ್ಯ, ಕೂಟು, ಬಜ್ಜಿ, ಬೋಂಡ, ಹಪ್ಪಳ, ವಡೆ, ಚಿಪ್ಸ್ ಇತ್ಯಾದಿ ಅನೇಕ ವ್ಯಂಜನಗಳನ್ನು ತಯಾರಿಸುವುದಅಲ್ಲಿ ಅವರು ನಿಸ್ಸೀಮರು.


ಮರಗೆಣಸು ಮತ್ತು ಅದರಿಂದ ತಯಾರಿಸಿರುವ ಚಿಪ್ಸ್.

"ನಾನಿದನ್ನು ಹತ್ತು ವರ್ಷಗಳ ಹಿಂದೆ ಕೇರಳದಿಂದ ತಂದು ನೆಟ್ಟಿದ್ದೆ. ಇಂದು ಇದು ಹುಲುಸಾಗಿ ಬೆಳೆಯುತ್ತಿದೆ. ಆರು ತಿಂಗಳಿಗೊಮ್ಮೆ ಗೆಣಸುಗಡ್ಡೆ ಕೀಳುತ್ತೇವೆ. ಮನೆಯಲ್ಲಿ ಬಳಸುವುದರ ಜೊತೆಗೆ ಹೋಟೆಲಿನಲ್ಲೂ ಬಳಸುತ್ತೇವೆ. ಇದರ ರುಚಿ ನೋಡಿ ಅನೇಕರು ತೆಗೆದುಕೊಂಡು ಹೋಗಿದ್ದಾರೆ. ಇದರ ಕಾಂಡದ ತುಂಡು ನೆಟ್ಟರೆ ಸಾಕು ಬೆಳೆಯುತ್ತದೆ" ಎಂದು ರಮ್ಯ ದರ್ಶನ್ ಹೋಟೆಲ್ ಮಾಲೀಕ ಕೃಷ್ಣ ವಿವರಿಸಿದರು.
"ಮೊದಲು ಇದನ್ನು ತೋಟಗಳ ಬದುಗಳಲ್ಲಿ ಮಣ್ಣಿನ ಸವೆತ ತಡೆಯಲು ಬೆಳೆಯುತ್ತಿದ್ದರು. ನೆರೆಯ ರಾಜ್ಯಗಳಂತೆ ಇದನ್ನು ಆಹಾರ ಮತ್ತು ವಾಣಿಜ್ಯ ಬೆಳೆಯಾಗಿ ಪರಿಗಣಿಸಿ ನಮ್ಮ ರೈತರೂ ಆರ್ಥಿಕ ಲಾಭ ಮಾಡಿಕೊಳ್ಳಬಹುದು. ಇದಕ್ಕೆ ಹೆಚ್ಚು ನೀರು ಬೇಕಾಗುವುದಿಲ್ಲ. ಸಾರವಿರುವ ಜಮೀನಿನಲ್ಲಿ ಒಂದು ಗಿಡ ೧೦ ರಿಂದ ೧೫ ಕೆಜಿ ಇಳುವರಿ ನೀಡುತ್ತದೆ. ಬಟ್ಟೆಗೆ ಹಾಕುವ ಗಂಜಿ ಹಾಗೂ ಸಬ್ಬಕ್ಕಿ ತಯಾರಿಸಲೂ ಇದನ್ನು ಬಳಸಲಾಗುತ್ತದೆ. ಇದರ ಸೊಪ್ಪು ದನ ಮೇಕೆಗಳಿಗೆ ಆಹಾರ ಕೂಡ. ಹಂದಿ ಸಾಕಣೆ ಮಾಡುವವರಿಗೂ ಇದು ಉಪಯುಕ್ತ’ ಎನ್ನುತ್ತಾರೆ ಪ್ರಗತಿಪರ ರೈತ ಹಿತ್ತಲಹಳ್ಳಿಯ ಗೋಪಾಲಗೌಡ.

Saturday, October 23, 2010

ಕಾಯಕದಲ್ಲಿ ಅಂಚೆಯಣ್ಣ


ಅಂಚೆಯಣ್ಣನ ಜ್ಞಾಪಕಾರ್ಥವಾಗಿ ೧೯೭೭ರಲ್ಲಿ ಬಿಡುಗಡೆಯಾದ ೨೫ ಪೈಸೆ ಮುಖಬೆಲೆಯ ಅಂಚೆಚೀಟಿ.

ಸಣ್ಣ ಊರಾಗಲಿ, ಗ್ರಾಮವಾಗಲಿ ಅಂಚೆಯಣ್ಣನ ವೃತ್ತಿ ಕೇವಲ ಟಪಾಲು ಬಟವಾಡೆಯಲ್ಲ. ಮದುವೆ, ಹೆರಿಗೆ, ಫಲಿತಾಂಶ, ಕೋರ್ಟು ವಾರಂಟು, ಸಾವು, ರೋಗ, ವೃದ್ಧಾಪ್ಯ ವೇತನ ಎಲ್ಲವನ್ನೂ ಮನೆಮನೆಗೆ ಹಂಚುವ ಆತ ಅಂತರಂಗದ ಸದಸ್ಯ. ಕಾಗದಗಳ ಕಟ್ಟು ಸೈಕಲ್ ಕ್ಯಾರಿಯರ್‌ಗೆ ಸಿಕ್ಕಿಸಿಕೊಂಡು ಸೈಕಲ್‌ನಲ್ಲಿ ಹೊರಟು ಕಾಗದಗಳನ್ನು ವಿತರಿಸುವ ಆತ ಒಂದರ್ಥದಲ್ಲಿ ಸಮಾಜದ ಚಲನಶೀಲ ಬಂಧು.


ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರದ ವಾಸಿ ಹೆಚ್.ಕೆ.ರಮೇಶ್ ಹಳ್ಳಿಹಳ್ಳಿ ತಿರುಗಿ ಪತ್ರ ರವಾನಿಸುವುದು.


ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರದ ಹೆಚ್.ಕೆ.ರಮೇಶ್ ಇಂಥ ಚಲನಶೀಲ ಪೋಸ್ಟ್‌ಮನ್‌ಗಳಲ್ಲಿ ಒಬ್ಬರು. ಇವರು ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ಶಾಖಾ ಪೋಸ್ಟ್ ಮಾಸ್ಟರ್. ಆದರೆ ಅವರ ಕಾರ್ಯ ಎಲ್ಲವನ್ನೂ ಒಳಗೊಂಡಿದೆ. ಟಪಾಲು ಸ್ವೀಕಾರ, ಠಸ್ಸೆ ಹೊಡೆಯುವುದು, ರವಾನೆ, ಹಂಚಿಕೆ ಎಲ್ಲವೂ ಅವರೇ ಮಾಡಬೇಕು. ಜೊತೆಯಲ್ಲಿ ಕವರ್, ಕಾರ್ಡ್, ಸ್ಟಾಂಪ್, ಉಳಿತಾಯ ಖಾತೆ, ಮನಿ ಆರ್ಡರ್, ರಿಜಿಸ್ಟರ್ ಪೋಸ್ಟ್ ಸೇರಿದಂತೆ ಎಲ್ಲವನ್ನೂ ನಿಭಾಯಿಸಬೇಕು.

ಇವರ ಕಾರ್ಯವ್ಯಾಪ್ತಿಗೆ ಕುಂದಲಗುರ್ಕಿ, ದೊಡ್ಡದಾಸೇನಹಳ್ಳಿ, ಚಿಕ್ಕದಾಸೇನಹಳ್ಳಿ, ಚಿಕ್ಕಪಾಪನಹಳ್ಳಿ, ಬಸವನಪರ್ತಿ, ಗೊಲ್ಲಹಳ್ಳಿ, ಸಿದ್ದಾಪುರ, ಗಂಗಾಪುರ ಮತ್ತು ರೊಪ್ಪಾರ್ಲಹಳ್ಳಿ ಬರುತ್ತವೆ. ಬೆಳಿಗ್ಗೆ ಶಿಡ್ಲಘಟ್ಟದ ಕಚೇರಿಯಲ್ಲಿ ಟಪಾಲುಗಳನ್ನು ಪಡೆದು ಕುಂದಲಗುರ್ಕಿಗೆ ಹೋಗಿ ಅಲ್ಲಿಂದ ಸೈಕಲ್ ಏರಿ ತಮ್ಮ ೧೦ ಕಿಮೀ ವ್ಯಾಪ್ತಿಯ ಹಳ್ಳಿಗಳಿಗೆ ತೆರಳಿ ಪತ್ರ ರವಾನಿಸಬೇಕು.


ಭಾರತೀಯ ಅಂಚೆಯು ೧೫೦ ವರ್ಷ ಪೂರೈಸಿದ ನೆನಪಿಗಾಗಿ ೨೦೦೪ರಲ್ಲಿ ಬಿಡುಗಡೆಯಾದ ಅಂಚೆ ಲಕೋಟೆ.

"೩೦೦ ರೂಗಳಿಗೆ ಒಪ್ಪಂದದ ಮೇರೆಗೆ ೧೯೮೬ರಲ್ಲಿ ಕೆಲಸಕ್ಕೆ ಸೇರಿದೆ. ಈಗ ೩೦೦೦ ರೂ ಸಂಬಳ ಬರುತ್ತಿದೆ. ಸೌಲಭ್ಯಗಳಿಗೆ ಸಂಬಂಧಿಸಿದಂತೆ ದೇಶದಾದ್ಯಂತ ಹಲವು ಬಾರಿ ಮುಷ್ಕರಗಳು ನಡೆದರೂ ಹೆಚ್ಚು ಪ್ರಯೋಜನವಾಗಲಿಲ್ಲ. ನಾನಂತೂ ನನ್ನ ಕಾಯಕವನ್ನು ಮುಂದುವರೆಸಿದ್ದೇನೆ" ಎಂದು ಎಚ್.ಕೆ.ರಮೇಶ್ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ.

"ಒಮ್ಮೆ ದೊಡ್ಡದಾಸೇನಹಳ್ಳಿಯ ಶಶಿಕಲಾ ಮತ್ತು ಮಂಜುನಾಥ್ ಎಂಬುವವರಿಗೆ ರಿಜಿಸ್ಟರ್ ಪೊಸ್ಟ್ ಬಂದಿತ್ತು. ಮಧ್ಯಾಹ್ನ ಟಪಾಲು ಪಡೆದು ಹೋಗಿ ಅವರಿಗೆ ತಲುಪಿಸುವಷ್ಟರಲ್ಲಿ ಸಂಜೆಯಾಗಿತ್ತು. ಮಾರನೇ ದಿನವೇ ಅವರಿಗೆ ಸಂದರ್ಶನವಿತ್ತು. ಈಗ ಸಾರಿಗೆ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಜನರು ನನ್ನ ಸೇವೆಯಿಂದ ತೃಪ್ತರಾಗಿದ್ದಾರೆ ಎಂದು ನೊಡಿದಾಗ ಸಂತೋಷವಾಗುತ್ತದೆ. ತಡವಾದರೂ ಪರವಾಗಿಲ್ಲ. ಆ ದಿನವೇ ಸಂಬಂಧಪಟ್ಟವರಿಗೆ ಕಾಗದ ನೀಡಲು ಪ್ರಯತ್ನಿಸುತ್ತೇನೆ" ಎನ್ನುತ್ತಾರೆ ರಮೇಶ್.


ಒಂದು ಲಕ್ಷ ಪೋಸ್ಟ್ ಕಚೇರಿಗಳು ಸ್ಥಾಪನೆಯಾದ ಸವಿನೆನಪಿಗೆ ೧೯೬೮ ರಲ್ಲಿ ಬಿಡುಗಡೆಯಾದ ಅಂಚೆ ಲಕೋಟೆ.

"ಹತ್ತಾರು ಕಿಮೀ ಸೈಕಲ್ ತುಳಿದು ಹಳ್ಳಿ ಹಳ್ಳಿಗೂ ಪತ್ರ ರವಾನಿಸಿ ಹಿಂತಿರುಗಿ ಬರುವಷ್ಟರಲ್ಲಿ ಕತ್ತಲಾಗಿರುತ್ತದೆ. ಊರಿಗೆ ಬರುವ ಬಸ್ ತಪ್ಪಿದರೆ ಸರಹೊದ್ದಿನಲ್ಲಿ ಹಳ್ಳಿಯಲ್ಲಿರುವ ಮನೆಗೆ ನಡೆದು ಬರಬೇಕು. ಇವರ ಕಷ್ಟ ನೋಡಿದರೆ ಯಾರಿಗೂ ಈ ವೃತ್ತಿ ಕೈಗೊಳ್ಳಲು ಇಷ್ಟವಾಗದು. ಸರ್ಕಾರ ಅಂಥವರಿಗೆ ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಕೊಡುವ ಸೌಲಭ್ಯಗಳನ್ನು ನೀಡಬೇಕು" ಎನ್ನುತ್ತಾರೆ ಹನುಮಂತಪುರದ ನಾಗಭೂಷಣ್.

Saturday, October 9, 2010

ಅವಸಾನದ ಅಂಚಿನಲ್ಲಿ ಲಾಳ ಹಾಕುವ ವೃತ್ತಿ

ಜಾನಪದ ಕಲೆಗಳಂತೆ ಗ್ರಾಮೀಣ ಪ್ರದೇಶದ ಹಲವು ಕಸುಬುಗಳು ಹಾಗೂ ಉಪಕಸುಬುಗಳು ನಿರೀಕ್ಷಿತ ಎಂಬಂತೆ ಬದಲಾಗುತ್ತಿವೆ. ಕೆಲವು ಅವಸಾನದ ಅಂಚಿನಲ್ಲಿದ್ದರೆ, ಇನ್ನೂ ಕೆಲವು ಈಗಾಗಲೇ ಅಸ್ತಿತ್ವ ಕಳೆದುಕೊಂಡಿವೆ. ಅಂಥವುಗಳಲ್ಲಿ ಎತ್ತುಗಳಿಗೆ ಲಾಳ ಹಾಕುವ ವೃತ್ತಿಯೂ ಒಂದು. ಅತ್ಯಾಧುನಿಕ ಸ್ವರೂದಲ್ಲಿ ಹಲವು ಬದಲಾವಣೆಗಳಾದರೂ ಮತ್ತು ಹಲವು ಅಡತಡೆಗಳು ಎದುರಾದರೂ ಈ ವೃತ್ತಿ ಮಾತ್ರ ಇನ್ನೂ ಜೀವಂತವಾಗಿದೆ.


ಶಿಡ್ಲಘಟ್ಟದಲ್ಲಿ ಹಳೇ ರೈಲ್ವೆ ನಿಲ್ದಾಣದ ಬಳಿ ಎತ್ತಿನ ಕಾಲುಗಳಿಗೆ ಹೊಡೆಯುವ ಲಾಳಗಳನ್ನ ಸಿದ್ಧಪಡಿಸುತ್ತಿರುವ ಸಯ್ಯದ್ ರಝಾಕ್.

ಜನರಿಗೆ ಓಡಾಡಲು ಚಪ್ಪಲಿಗಳಿದ್ದಂತೆ ಎತ್ತುಗಳಿಗೆ ಲಾಳಗಳು. ೨೦-೩೦ ದಿನಗಳಿಗೊಮ್ಮೆ ಹೊಸ ಲಾಳ ಹಾಕಿಸಬೇಕು. ಲಾಳಗಳನ್ನು ಸಮರ್ಪಕವಾಗಿ ಹಾಕಲು ಪರಿಣಿತರಿಂದ ಮಾತ್ರ ಸಾಧ್ಯ. ಆ ಪರಿಣತಿ ಸಾಧಿಸಿರುವ ಸೂಲಿಬೆಲೆಯ ಸೈಯದ್ ರಜಾಕ್ ಅವರಿಗಾಗಿ ಎತ್ತಿನ ಒಡೆಯರು ಕಾಯುತ್ತಾರೆ. ಪಟ್ಟಣದ ಹಳೆಯ ರೈಲು ನಿಲ್ದಾಣದ ಬಳಿ ಕಾಯುವ ಜನರು ತಮ್ಮ ಎತ್ತುಗಳಿಗೆ ಹಾಕಿಸಿದ ನಂತರವೇ ಮುಂದಿನ ಕೃಷಿ ಚಟುವಟಿಕೆ ಮತ್ತು ಇತರ ಕಾರ್ಯಗಳತ್ತ ಗಮನಹರಿಸುತ್ತಾರೆ.

ಎತ್ತುಗಳಿಗೆ ಲಾಳ ಹಾಕುವುದು ಸಾಮಾನ್ಯ ಸಂಗತಿಯೇನಲ್ಲ. ಮೊದಲು ಎತ್ತನ್ನು ಒಂದು ಕಡೆ ಮಲಗಿಸಲಾಗುತ್ತದೆ. ಅದರ ಕಾಲಿಗೆ ಹಗ್ಗ ಬಿಗಿದು, ಮೂರು ಜನ ಹಿಡಿದು ಒಂದು ಕಡೆಯಿಂದ ಚಕ್ಕನೆ ಎಳೆಯುವುದರ ಮೂಲಕ ಮಗುವಿನಂತೆ ಮಲಗಿಸಬಲ್ಲ ಚಾಕಚಕ್ಯತೆ ಎಂಥವರನ್ನೂ ಅಚ್ಚರಿಗೊಳಿಸುತ್ತದೆ. ನಂತರ ಸವೆದಿರುವ ಲಾಳಗಳನ್ನು ಮತ್ತು ಅದರ ಮೊಳೆಗಳನ್ನು ಕಿತ್ತು ಬಿಡಿಸುತ್ತಾರೆ. ಒರಟಾದ ಪಾದಗಳನ್ನು ಉಜ್ಜಿ ಹೊಸ ಲಾಳವನ್ನಿಟ್ಟು ಮೊಳೆ ಹೊಡೆಯುತ್ತಾರೆ. ಮೊಳೆ ಹೊಡೆಯುವಾಗ ಕೊಂಚ ಎಚ್ಚರ ತಪ್ಪಿದರೂ ಎತ್ತಿಗೆ ಗಾಯವಾಗುತ್ತದೆ.


ಎತ್ತನ್ನು ಮಲಗಿಸಿ ಕಾಲಿಗೆ ಲಾಳ ಹೊಡೆಯುತ್ತಿರುವುದು.

"ಮೊದಲೆಲ್ಲಾ ಎತ್ತುಗಳನ್ನು ತುಂಬ ಸಾಕುತಿದ್ದರು. ಈಗ ಬಹಳ ಕಡಿಮೆ. ಕೆಲ ದಿನಗಳು ಬೋಣಿಯೇ ಆಗುವುದಿಲ್ಲ. ಒಂದು ಎತ್ತಿನ ನಾಲ್ಕು ಕಾಲುಗಳಿಗೆ ಲಾಳ ಹೊಡೆಯಲು ೨೦೦ ರೂ ಪಡೆಯುತ್ತೇನೆ. ಅದರಲ್ಲಿ ಲಾಳದ ಸಾಮಾನಿನ ಖರ್ಚು ೧೨೦ ರೂಪಾಯಿ ಬರುತ್ತದೆ. ೪೦ ವರ್ಷಗಳಿಂದ ಇದೇ ವೃತ್ತಿಯನ್ನು ಮಾಡುತ್ತಿದ್ದೇನೆ. ಪಟ್ಟಣದಲ್ಲಿ ರೇಷ್ಮೆಗಾಗಿ ನೀರಿನ ಗಾಡಿಗಳು ಇರುವುದರಿಂದ ನಮಗೆ ಕೆಲಸ ಸಿಗುತ್ತಿದೆ. ಸಂಪಾದನೆ ಕಡಿಮೆಯಾದರೂ ಕಲಿತ ವೃತ್ತಿಯನ್ನು ಬಿಡಲಾಗದು" ಎನ್ನುತ್ತಾರೆ ಸೈಯದ್ ರಝಾಕ್.


ಲಾಳ ಹೊಡೆಯಲು ಬಳಸುವ ಉಪಕರಣಗಳು.


"ಈಗ ಎತ್ತುಗಳನ್ನು ಸಾಕುವುದು ಕಷ್ಟ. ಹಳ್ಳಿಗಳಲ್ಲಿ ಕೆಲಸಗಾರರ ಅಭಾವದಿಂದ ಟಿಲ್ಲರ್ ಮತ್ತು ಟ್ರಾಕ್ಟರ್‌ಗಳ ಬಳಕೆ ಹೆಚ್ಚಾಗಿದೆ. ಮೊದಲು ನಮ್ಮ ಗ್ರಾಮದಲ್ಲಿ ೭೫ ಜೊತೆ ಎತ್ತುಗಳಿದ್ದವು. ಆದರೆ ಈಗ ಕೇವಲ ೧೦ ಜೊತೆಯಿವೆ. ಒಟ್ಟು ಕುಟುಂಬದಲ್ಲಿ ಎತ್ತುಗಳನ್ನು ಸಾಕುವವರೇ ಒಬ್ಬರು ಇರುತ್ತಿದ್ದರು. ಅವರನ್ನು ಎತ್ತುಗಳಪ್ಪ ಎಂದು ಕರೆಯುತ್ತಿದ್ದರು. ಆದರೆ ಈಗ ಒಟ್ಟು ಕುಟುಂಬವೂ ಇಲ್ಲ. ಪರಿಸರಕ್ಕೆ ಅನುಕೂಲವಾಗುವಾಗಿರುವ ಎತ್ತುಗಳ ಸಾಕಣಿಕೆಯೂ ಕಡಿಮೆ" ಎಂದು ಚೌಡಸಂದ್ರದ ರೈತ ನಂಜುಡಪ್ಪ ತಿಳಿಸಿದರು.

Thursday, September 30, 2010

ಪಾರಂಪರಿಕ ವೃಕ್ಷಗಳ ತಾಣ ‘ವೆಂಕಟಾಪುರ’

ಸುತ್ತಲೂ ಏಳು ಬೆಟ್ಟ. ನಡುವೆ ಮೂರು ಕೆರೆ. ಮೊದಲ ಕೆರೆ ಕಟ್ಟೆ ಮೇಲೆ ಪುರಾತನ ಬೇವಿನ ಮರಗಳ ಸಾಲು. ಅವುಗಳಲ್ಲಿ ಒಂದು ಇನ್ನೂರು ವರ್ಷಕ್ಕೂ ಹಳೆಯದು. ಇದು ಕಥೆಯಲ್ಲ. ಮಲೆನಾಡಿನ ಪ್ರದೇಶವೊಂದರ ವರ್ಣನೆಯೂ ಅಲ್ಲ. ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ಎಸ್. ವೆಂಕಟಾಪುರದ ಸುತ್ತಲಿನ ಸುಂದರ ದೃಶ್ಯ.ಇನ್ನೂರು ವರ್ಷಗಳ ಇತಿಹಾಸ ಹೊಂದಿರುವ ಬೇವಿನ ಮರ ಸಾಮಾನ್ಯವಾದುದ್ದೇನಲ್ಲ. ಜೈವಿಕ ವಿಜ್ಞಾನ ವೈವಿಧ್ಯ ಕಾಯ್ದೆ 2002ರ ಕಲಂ 63 (2) (ಜಿ) ಅನ್ವಯ ಕರ್ನಾಟಕ ಜೀವ ವೈವಿಧ್ಯ ಮಂಡಳಿಯೂ ಪರಂಪರೆ ಮರಗಳು (ಹೆರಿಟೇಜ್ ಟ್ರೀಸ್) ಎಂದು ಆಯ್ದುಕೊಂಡಿರುವ ರಾಜ್ಯದ ಹತ್ತು ಮರಗಳಲ್ಲಿ ಈ ವಿಶಿಷ್ಟ ರೀತಿಯ ಮರವೂ ಒಂದು. ಬಯಲುಸೀಮೆ ಮತ್ತು ಬರಡುಸೀಮೆ ಎಂದು ಕರೆಯಲ್ಪಡುವ ಜಿಲ್ಲೆಯಲ್ಲಿ ಈ ಅಪರೂಪದ ಮರ ಇರುವುದು ವಿಶೇಷ.

ಸುಮಾರು ಇಪ್ಪತ್ತು ಅಡಿ ಸುತ್ತಳತೆ ಹೊಂದಿರುವ ಈ ಮರವು ಎಸ್. ವೆಂಕಟಾಪುರ, ಪೂಸಗಾನದೊಡ್ಡಿ, ನೇರಳೇಮರದಹಳ್ಳಿ ಮತ್ತು ಎಸ್. ಗೊಲ್ಲಹಳ್ಳಿ ಎಂಬ ನಾಲ್ಕು ಗ್ರಾಮಗಳಿಗೆ ಸೇರಿದೆ. ಕೆರೆ ಕಟ್ಟೆಯು ಬೆಟ್ಟಗಳ ನಡುವೆ ನಿರ್ಮಾಣಗೊಂಡಿದೆ.


ಸಾಲು ಮರ ನೋಡುವುದೆ ಸೊಗಸು!

ಎಸ್. ವೆಂಕಟಾಪುರ ಗ್ರಾಮದ ಗದ್ದೆಗಳಿಗೆ ಈ ಕೆರೆಯೇ ನೀರಿನ ಮೂಲ. ಈ ಪರಂಪರೆಯ ವೃಕ್ಷದೊಂದಿಗೆ ಇನ್ನೂ ಹತ್ತು ಬೃಹತ್ ಗಾತ್ರದ ಬೇವಿನ ಮರಗಳಿವೆ. ಸುತ್ತಲೂ ಹೊಂಗೆ ತೋಪಿದೆ. ವೃಕ್ಷದ ಕೆಳಗೆ ಮುನೇಶ್ವರನ ಪುಟ್ಟ ದೇಗುಲವಿದೆ.

ಆದ್ದರಿಂದಲೇ ಈ ಕಟ್ಟೆಗೆ ಮುನಿಯಪ್ಪನ ಕಟ್ಟೆ ಎನ್ನಲಾಗುತ್ತದೆ. ಇಲ್ಲಿ ಗಂಗಮ್ಮ ಮತ್ತು ಅಕ್ಕಯ್ಯಗಾರು ಹೆಸರಿನ ಪುಟ್ಟ ಗುಡಿಗಳೂ ಇವೆ. ದೇಗುಲದ ಮುಂಭಾಗದಲ್ಲಿ ದೇವಕಣಿಗಲೆ ಮರವಿದೆ. ಕಟ್ಟೆ ಬಲಭಾಗದಲ್ಲಿ ಬಿಲ್ಲುಬಾಣ ಹಿಡಿದಿರುವ ಮೂವರು ವೀರರ ವೀರಗಲ್ಲು ಇದೆ. ಎಷ್ಟೇ ಬಿರುಬಿಸಿಲಿದ್ದರೂ; ಈ ಪ್ರದೇಶ ಮಾತ್ರ ಸದಾ ತಂಪಾಗಿರುತ್ತದೆ.
"ಪ್ರತಿ ಮಂಗಳವಾರ ಮತ್ತು ಶುಕ್ರವಾರ ದೇವರ ಪೂಜೆಗಾಗಿ ಇಲ್ಲಿ ಜನ ಸೇರುತ್ತಾರೆ. ಪ್ರತಿ ವರ್ಷ ಏಪ್ರಿಲ್‌ನಲ್ಲಿ ನಾಲ್ಕು ಗ್ರಾಮಗಳ ಜನರು ಜಾತ್ರೆ ನಡೆಸುತ್ತಾರೆ. ಇಷ್ಟಾರ್ಥ ನೆರವೇರುತ್ತವೆ ಎಂಬ ನಂಬಿಕೆಯಿಂದ ಅನೇಕ ಕಡೆಗಳಿಂದ ಭಕ್ತರು ಆಗಮಿಸುತ್ತಾರೆ. ಕಟ್ಟೆ ಮೇಲಿರುವ ಮರಗಳ ಕಟ್ಟಿಗೆಗಳನ್ನು ಯಾರೂ ತೆಗೆದುಕೊಂಡು ಹೋಗಬಾರದು. ಕೆಡುಕಾಗುತ್ತದೆ ಎಂಬ ನಂಬಿಕೆ ಹಲವು ಜನರಲ್ಲಿದೆ" ಎಂದು ದೇವಾಲಯದ ಅರ್ಚಕ ಗುರುಮೂರ್ತಿ ತಿಳಿಸಿದರು."ಏಳು ಬೆಟ್ಟಗಳನ್ನು ನಲ್ಲಕೊಂಡಲು ಎನ್ನುತ್ತಾರೆ. ಇಲ್ಲಿರುವ ಮೂರು ಕೆರೆಗಳನ್ನು ಮೂವರು ವೇಶ್ಯೆಯರು ಕಟ್ಟಿಸಿದ್ದು. ತಿಪ್ಪಸಾನಿಕೆರೆ, ರಾಜಸಾನಿಕೆರೆ ಮತ್ತು ನಲ್ಲಸಾನಿಕೆರೆ ಎಂದು ಅವರ ಹೆಸರಿನಿಂದಲೇ ಕರೆಯಲ್ಪಡುತ್ತವೆ.ಈ ಬೆಟ್ಟಗಳಲ್ಲಿ ಚಿರತೆ, ಜಿಂಕೆ, ಮೊಲ, ಕರಡಿ, ನರಿ ಮುಂತಾದ ಪ್ರಾಣಿಗಳು ಇದ್ದವು. ತಿಪ್ಪಸಾನಿಕೆರೆ ಅಥವಾ ತಿಪ್ಪರಾಸಕೆರೆಯ ಕಟ್ಟೆ ಮೇಲಿರುವ ಬೇವಿನ ಮರಗಳನ್ನು ನಾನು ಚಿಕ್ಕಂದಿನಿಂದಲೇ ನೋಡಿದ್ದೇನೆ. ಕೆರೆಗಳನ್ನು ಕಟ್ಟಿದ ಮಹಾತಾಯಂದಿರೇ ಇವನ್ನೂ ನೆಟ್ಟಿರಬೇಕು" ಎನ್ನುತ್ತಾರೆ ಗ್ರಾಮದ 94ರ ವಯೋವೃದ್ಧ ನರಸರಾಮಪ್ಪ."ಇಲ್ಲಿ ಸುತ್ತ ಇರುವ ಬೆಟ್ಟಗಳೆಲ್ಲ ಚಾರಣಕ್ಕೆ ಯೋಗ್ಯವಾಗಿವೆ. ಒಂದೊಂದರಲ್ಲೂ ಒಂದೊಂದು ವಿಶೇಷವಿದೆ. ಪರಂಪರೆ ವೃಕ್ಷ ಎಂದು ಸರ್ಕಾರ ಹೆಸರಿಸಿರುವುದರಿಂದ ಪ್ರವಾಸೋದ್ಯಮ ಇಲಾಖೆ ಸೂಕ್ತವಾಗಿ ಕೆಲಸ ಮಾಡಿದರೆ ಈ ಪ್ರದೇಶದ ಅಭಿವೃದ್ಧಿ ಮತ್ತು ಸಂರಕ್ಷಣೆಯಾಗುತ್ತದೆ. ಸ್ಥಳೀಯರಿಗೆ ಉದ್ಯೋಗ ದೊರಕುತ್ತದೆ. ತಾಲ್ಲೂಕಿನ ಮೂಲೆಯಲ್ಲಿರುವ ಈ ಪ್ರದೇಶ ಮುಂದುವರೆಯಲು ಸಾಧ್ಯವಾಗುತ್ತದೆ" ಎಂದು ಹಿರಿಯ ಶಿಕ್ಷಕ ಕೆ.ಎನ್. ಲಕ್ಷ್ಮೀನರಸಿಂಹಯ್ಯ ಹೇಳುತ್ತಾರೆ.

ಮರಗಳಿಗೆ ಕೊಡಲಿ?

ಹತ್ತು ಮರಗಳಿಂದ ಕೂಡಿರುವ ಈ ಸುಂದರ ಆವರಣಕ್ಕೆ ಕೆಲವರು ಕೆಡಕು ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮುನೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ನೆಪದಲ್ಲಿ ಐದು ಮರ ಕಡಿಯಲು ಚಿಂತನೆ ನಡೆಸಲಾಗುತ್ತಿದೆ ಎಂಬ ಗುಲ್ಲು ಎಲ್ಲೆಡೆ ಕೇಳಿ ಬರುತ್ತಿದೆ.
ಹತ್ತು ಮರಗಳ ಮೇಲೆ ಅಪಾರ ಭಕ್ತಿ ಮತ್ತು ಪ್ರೀತಿ ಹೊಂದಿರುವ ಇಲ್ಲಿನ ಗ್ರಾಮಸ್ಥರು ಯಾವುದೇ ಮರ ಕಡಿಯಬಾರದು. ಹಲವು ವರ್ಷಗಳಿಂದ ಇರುವ ಈ ಮರಗಳನ್ನು ಸಂರಕ್ಷಿಸಬೇಕು. ಉತ್ತಮ ಪರಿಸರದ ಜೀವಸೆಲೆಯಾಗಿರುವ ಮರಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎನ್ನುತ್ತಾರೆ.
ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಐದು ಮರ ಮಾರಲಾಗಿದೆಯಂತೆ. ಮುಂದಿನ ದಿನಗಳಲ್ಲಿ ಅವುಗಳನ್ನು ಕಡಿಯುತ್ತಾರಂತೆ. ಇದಕ್ಕೆ ನಾವು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.

Wednesday, September 22, 2010

ರೇಷ್ಮೆ ಗೂಡಿಗಿಂತ ಬದುಕು ಭಾರ!


ರೇಷ್ಮೆ ಗೂಡಿನ ಮೂಟೆಯನ್ನು ಸಮತೋಲನದಿಂದ ಕಾಯ್ದುಕೊಂಡು ಸಾಗುತ್ತಿರುವ ಕಾರ್ಮಿಕ


ಒಂದೆಡೆ ದೇಶ ಪ್ರಗತಿಯತ್ತ ಧಾವಿಸುತ್ತಿದೆ ಎಂದು ಸಂಭ್ರಮ ಪಡುತ್ತಿದ್ದರೆ, ಮತ್ತೊಂದೆಡೆ ಪ್ರಗತಿಯೂ ಅಲ್ಲ-ಸಂಭ್ರಮವೂ ಇಲ್ಲ ಎಂದು ಕೆಲವರು ಬಾಳುತ್ತಿದ್ದಾರೆ. ಸ್ವಾವಲಂಬಿ ದೇಶ ನಿರ್ಮಾಣದತ್ತ ಎಲ್ಲರೂ ಸಂತಸದಿಂದ ಮುನ್ನಡೆಯುತ್ತಿದ್ದರೆ, ಕೆಲವರು ಬಡತನದ ದಾಸ್ಯದಿಂದ ಹೊರಬರಲಾಗದೇ ಬದುಕನ್ನು ಸವೆಸುತ್ತಿದ್ದಾರೆ. ಸರ್ಕಾರಿ ಸೌಲಭ್ಯಗಳು ವಿಪುಲವಾಗಿದ್ದರೂ, ಅವುಗಳ ನೆರವಿಲ್ಲದೇ-ಸರ್ಕಾರದ ಆಶ್ರಯವಿಲ್ಲದೇ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ.


ಪಾದಗಳಿಗೆ ಚಪ್ಪಲಿಗಳನ್ನು ಹಾಕಿಕೊಳ್ಳದೇ ತಲೆಯ ಮೇಲೆ ಮೂಟೆ ಹೊತ್ತು ಸೈಕಲ್ಲಿನಲ್ಲಿ ಹೋಗುತ್ತಿರುವ ಕಾರ್ಮಿಕರು.


ಕಷ್ಟನಷ್ಟಗಳ ನಡುವೆಯೂ ಪುಟ್ಟ ಆಶಾಕಿರಣದೊಂದಿಗೆ ಜೀವನ ಸಾಗಿಸುತ್ತಿರುವ ಆ ಕೆಲವರಲ್ಲಿ ಶಿಡ್ಲಘಟ್ಟದ ರೇಷ್ಮೆ ಗೂಡು ಮಾರುಕಟ್ಟೆಯ ಕೂಲಿ ಕಾರ್ಮಿಕರು ಕೂಡ ಸೇರಿದ್ದಾರೆ.
ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ನಿತ್ಯವೂ ಲಕ್ಷಾಂತರ ರೂಪಾಯಿಯಲ್ಲಿ ವಹಿವಾಟು ನಡೆಯುತ್ತದೆ, ಆದರೆ ಕಾರ್ಮಿಕರ ಕೂಲಿಯು ದಿನಕ್ಕೆ ೧೫೦ ರೂಪಾಯಿಯ ಗಡಿ ದಾಟುವುದಿಲ್ಲ. ಪಾದಗಳಿಗೆ ಚಪ್ಪಲಿಯೂ ಹಾಕಿಕೊಳ್ಳದೇ ಕೆಲಸ ಮಾಡುವ ಈ ಶ್ರಮಿಕರು ತಲೆಯ ಮೇಲೆ ೩೦ ರಿಂದ ೫೦ ಕೆ.ಜಿಯಷ್ಟು ರೇಷ್ಮೆ ಗೂಡನ್ನು ಹೊರುತ್ತಾರೆ. ಸೈಕಲ್ಲಿನಲ್ಲೇ ಸಾಗುವ ಅವರು ತಲೆಯ ಮೇಲೆ ಮೂಟೆಯ ಸಮತೋಲನ ಕಾಯ್ದುಕೊಳ್ಳುವುದರ ಜೊತೆಗೆ ಅಪಘಾತಕ್ಕೀಡಾಗದಂತೆ ಎಚ್ಚರಿಕೆ ಸಹ ವಹಿಸಬೇಕು.ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಿಂದ ಹೊರಬರುತ್ತಿರುವ ಕಾರ್ಮಿಕ

ಅಸಂಘಟಿತ ವಲಯದಲ್ಲಿರುವ ಈ ಕಾರ್ಮಿಕರಿಗೆ ಯಾವುದೇ ರೀತಿಯ ಸರ್ಕಾರಿ ಸೌಲಭ್ಯಗಳಿಲ್ಲ. ಚುನಾಯಿತ ಪ್ರತಿನಿಧಿಗಳು ನೀಡುವ ಭರವಸೆಗಳ ಹೊರತಾಗಿ ಅವರಿಗೆ ಏನೂ ಸಿಕ್ಕಿಲ್ಲ. ಅನಾರೋಗ್ಯ ಸೇರಿದಂತೆ ಯಾವುದೇ ಗಂಭೀರ ಸಮಸ್ಯೆ ಕಾಡಿದರೂ ಅವರು ದಿನದ ೧೫೦ ರೂಪಾಯಿಯಲ್ಲೇ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕೆ ಹೊರತು ಬೇರೆ ಮಾರ್ಗವಿಲ್ಲ.


ಎಷ್ಟೇ ತೊಂದರೆಯಿದ್ದರೂ ಮೂಟೆಯನ್ನು ಹೊತ್ತು ಜೀವನ ಸಾಗಬೇಕು.

"ನಾವು ಸುಮಾರು ೨೬೮ ಕಾರ್ಮಿಕರಿದ್ದೇವೆ. ನಿತ್ಯವೂ ೨೦ ರಿಂದ ೫೦ ಕೆಜಿ ತೂಕದವರೆಗೂ ಗೂಡನ್ನು ಹೊರುತ್ತೇವೆ. ಮಾರುಕಟ್ಟೆಯಲ್ಲಿ ಗೂಡು ಬರುವುದರ ಮೇಲೆ ನಮ್ಮ ಸಂಪಾದನೆ ಅವಲಂಬಿತವಾಗಿರುತ್ತದೆ. ದಿನಕ್ಕೆ ೧೫೦ ರೂಪಾಯಿ ಸಂಪಾದಿಸುತ್ತೇವೆ. ಆದರೆ ಸೈಕಲ್ ಬಾಡಿಗೆ, ಬಸ್ ಪ್ರಯಾಣ, ಹೋಟೆಲ್ ಊಟ ಎಲ್ಲ ಕಳೆದು ೭೫ ರಿಂದ ೧೦೦ ರೂಪಾಯಿ ಉಳಿಯುತ್ತದೆ. ಅಲ್ಪಸಂಪಾದನೆಯಲ್ಲೇ ಸಂಸಾರ ನಡೆಸಬೇಕು, ಮಕ್ಕಳಿಗೆ ಓದಿಸಬೇಕು, ಆಹಾರದ ಕೊರತೆ ಕಾಡದಂತೆ ನೋಡಿಕೊಳ್ಳಬೇಕು" ಎಂದು ಕಾರ್ಮಿಕ ದೊಡ್ಡತೇಕಹಳ್ಳಿ ವೆಂಕಟೇಶ್ ತಿಳಿಸಿದರು.


ಸೈಕಲ್ ಇರದಿದ್ದರೂ ಚಿಂತೆಯಿಲ್ಲ, ನಡೆದುಕೊಂಡೇ ಮೂಟೆ ಸಾಗಿಸುತ್ತಿರುವ ಕಾರ್ಮಿಕರು.

"ಸಂಸಾರದ ನಿತ್ಯ ಜಂಜಾಟವನ್ನು ಹೇಗಾದರೂ ತೂಗಿಸಬಹುದು. ಆದರೆ ಅಪಘಾತ ಅಥವಾ ಅನಾರೋಗ್ಯ ಕಾಡಿದ್ದಲ್ಲಿ ಔಷಧಿ ಕೊಳ್ಳಲು ಮತ್ತು ಆಸ್ಪತ್ರೆಗೆ ದಾಖಲಾಗಲು ಹಣವಿರುವುದಿಲ್ಲ. ಸರ್ಕಾರದ ಯಾವುದೇ ಯೋಜನೆಗೆ ಒಳಪಡದ ನಮಗೆ ಯಾವುದೇ ಸೌಕರ್ಯಗಳು ಸಹ ಸಿಗುವುದಿಲ್ಲ. ಬದುಕಲು ಸಾಲ ಮಾಡಬೇಕಾಗುತ್ತದೆ. ಆದರೆ ಸಾಲ ತೀರಿಸುವುದರಲ್ಲೇ ನಮ್ಮ ಬದುಕು ಕೊನೆಯಾಗುತ್ತದೆ" ಎಂದು ಅವರು ಅಳಲು ತೋಡಿಕೊಂಡರು."ದೇಹವನ್ನು ದಂಡಿಸಿ ಕೆಲಸ ಮಾಡುವ ಈ ಕಾರ್ಮಿಕರು ಬೇಗನೇ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ದೀರ್ಘ ಕಾಲದವರೆಗೆ ಬದಕುಲು ಆಗುವುದಿಲ್ಲ. ಪಿಂಚಣಿ, ಆರೋಗ್ಯ ವಿಮೆ, ಹೆರಿಗೆ ಭತ್ಯೆ, ವಿದ್ಯಾರ್ಥಿ ವೇತನ, ಭವಿಷ್ಯ ನಿಧಿ ಮುಂತಾದ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಹೋರಾಟದ ಮನೋಭಾವವನ್ನೇ ಕಳೆದುಕೊಂಡ ಸ್ಥಿತಿಯಲ್ಲಿರುವ ಈ ಕಾರ್ಮಿಕರು ನಿರಾಸೆಯಿಂದಲೇ ಜೀವನ ಸಾಗಿಸುತ್ತಿದ್ದಾರೆ" ಎಂದು ರಾಜ್ಯ ಹಮಾಲಿ ಕಾರ್ಮಿಕರ ಸಂಘದ ಕಾರ್ಯದರ್ಶಿ ಕೆ.ಮಹಾಂತೇಶ್ ಅಭಿಪ್ರಾಯಪಡುತ್ತಾರೆ.
"ಪ್ರತಿಯೊಬ್ಬ ಕಾರ್ಮಿಕನಿಗೂ ಸಂಖ್ಯೆ ನೀಡಲಾಗಿದೆ. ಗೂಡು ಮಾರುಕಟ್ಟೆಯಿಂದ ಹೊರಹೋಗುವಾಗ ಅವರಿಗೆ ಪಾಸು ನೀಡಿರುತ್ತೇವೆ. ಅವರು ಗೇಟ್ ಬಳಿ ಪಾಸ್ ನೀಡಿ ಹೊರಹೋಗಬೇಕು. ಬಹುತೇಕ ಕಾರ್ಮಿಕರಿಗೆ ಓದು-ಬರಹ ಗೊತ್ತಿಲ್ಲ. ಸರ್ಕಾರದಿಂದ ಸೌಲಭ್ಯಗಳಿವೆ, ಸದ್ಬಳಕೆ ಮಾಡಿಕೊಳ್ಳಬೇಕು ಎಂಬ ಪರಿವೆ ಅವರಿಗಿಲ್ಲ" ಎಂದು ರೇಷ್ಮೆ ಗೂಡು ಮಾರುಕಟ್ಟೆಯ ಅಧಿಕಾರಿ ರತ್ನಯ್ಯ ಶೆಟ್ಟಿ ಹೇಳುತ್ತಾರೆ.

Thursday, September 16, 2010

ಮಾಯವಾಗಿರುವ ಏತ ಇಲ್ಲಿ ಪ್ರತ್ಯಕ್ಷ!ನಮ್ಮ ಜಿಲ್ಲೆಯಲ್ಲಿ ಕೊಳವೆಬಾವಿಗಳು ಸಾವಿರ ಅಡಿ ಆಳಕ್ಕೆ ಹೋದರೂ ನೀರು ಸಿಗುವುದಿಲ್ಲ. ಹರಸಾಹಸಪಟ್ಟರೂ ಒಂದು ಹನಿ ನೀರು ದೊರೆಯುವುದಿಲ್ಲ. ಕಪಿಲೆ, ಏತ, ಗೂಡೆ ಹಾಕುವುದು, ಪರ್ಷಿಯನ್ ವೀಲ್ ಮುಂತಾದವುಗಳು ಒಂದರ್ಥದಲ್ಲಿ ಅಸ್ತಿತ್ವವನ್ನೇ ಕಳೆದುಕೊಂಡಿವೆ. ಆದರೆ ನೀರು ಸಿಗುವುದಿಲ್ಲ ಎಂದು ಬೇಸತ್ತು ಕುಳಿತ ರೈತರಿಗೆ ಆಶಾಕಿರಣ ಎಂಬಂತೆ ಏತ ನೀರಾವರಿ ಕೃಷಿ ಕ್ಷೇತ್ರದಲ್ಲಿ ನಿಧಾನವಾಗಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳುತ್ತಿದೆ.
ಇದಕ್ಕೆ ಅಪ್ಪಟ ಉದಾಹರಣೆ, ಶ್ನಮ್ಮ ಊರು ಶಿಡ್ಲಘಟ್ಟದ ಹೊರವಲಯ ಅಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು ಮುಕ್ಕಾಲು ಎಕರೆ ಜಮೀನಿನಲ್ಲಿ ಸಹೋದರರು ಸದ್ಬಳಕೆ ಮಾಡುತ್ತಿರುವ ಏತ ನೀರಾವರಿ ಯೋಜನೆ. ಏತ ನೀರಾವರಿಯನ್ನು ವಿಶಿಷ್ಟ ರೀತಿಯಲ್ಲಿ ಬಳಕೆ ಮಾಡುವ ಅವರು ತರಕಾರಿ ಬೆಳೆಗಳನ್ನು ಬೆಳೆಸುತ್ತಾರೆ.
ಕೆರೆಯ ಇನ್ನೊಂದು ಬದಿಯಲ್ಲಿರುವ ಜಮೀನಿಗೆ ಮಧ್ಯೆ ಹಾದು ಹೋಗುವ ರಸ್ತೆಯ ಕೆಳಗಿನಿಂದ ತೂಬಿನ ಮೂಲಕ ಇವರ ಜಮೀನಿಗೆ ನೀರು ಬರುತ್ತದೆ. ಏತವನ್ನು ಬಳಸಿ ಇವರು ಜಮೀನಿಗೆ ನೀರು ಕಟ್ಟುತ್ತಾರೆ.‘ಸಾಮಾನ್ಯವಾಗಿ ನಾವು ಬೀಟ್ರೂಟ್ ಬೆಳೆಯುತ್ತೇವೆ. ವರ್ಷಕ್ಕೆ ಮೂರು ಬೆಳೆ ತೆಗೆಯುತ್ತೇವೆ. ಬೆಳಿಗ್ಗೆ ೬ ಗಂಟೆಗೆ ನೀರೆತ್ತಲು ಪ್ರಾರಂಭಿಸಿದರೆ ಮಧ್ಯಾಹ್ನ ೨ ಗಂಟೆಯವರೆಗೆ ಮುಂದುವರೆಯುತ್ತದೆ. ನೀರಿನ ಹರಿವು ಕಡಿಮೆಯಿದ್ದರೆ ಸಂಜೆ ೬ ಗಂಟೆಯಾಗುತ್ತದೆ. ವಾರದಲ್ಲಿ ಮೂರು ಅಥವಾ ನಾಲ್ಕು ದಿನಕ್ಕೊಮ್ಮೆ ನೀರು ಹರಿಸುತ್ತೇವೆ. ಬೇಸಿಗೆಯಲ್ಲಿ ನೀರು ಇರುವುದಿಲ್ಲ. ಗಾಳಿಯ ಕಾಲದಲ್ಲೂ ಕಷ್ಟ. ನೀರು ಆವಿಯಾಗುತ್ತದೆ. ಗಿಡಗಂಟೆಗಳು ಬೆಳೆದು ಕಾಲುವೆಗಳಲ್ಲಿ ನೀರು ಹರಿಯದಿದ್ದಾಗ ಗಿಡಗಳನ್ನೆಲ್ಲಾ ಸವರುತ್ತೇವೆ. ಅಲ್ಲಿ ಹಾವುಗಳು ಸೇರಿಕೊಂಡಿರುತ್ತವೆ’ ಎಂದು ತಮ್ಮ ಕೆಲಸವನ್ನು ಬಣ್ಣಿಸುವ ಕಿರಿಯ ಸಹೋದರ ಮುನಿರಾಜ ಏತ ನೀರಾವರಿ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ.‘ಇದು ನಮ್ಮ ತಾತನ ಕಾಲದಿಂದಲೂ ಬಂದ ಬಳುವಳಿ. ನೀರಾವರಿಗೆಂದೇ ನಾವು ಜನರೇಟರ್ ಬಳಸಬಹುದು. ಆದರೆ ನಮಗೆ ನಮ್ಮ ಸ್ವಶಕ್ತಿ ಮೇಲೆ ನಂಬಿಕೆಯಿದೆ. ಸ್ವಾಭಿನಾಮ ಮತ್ತು ಸ್ವಶಕ್ತಿಯಿಂದ ಬದುಕುವ ಇರಾದೆ ಹೊಂದಿರುವ ನಮಗೆ ಏತ ನೀರಾವರಿಯಿಂದ ತುಂಬ ಸಹಾಯವಾಗುತ್ತಿದೆ’ ಎನ್ನುತ್ತಾರೆ ಹಿರಿಯ ಸಹೋದರ ಮಂಜುನಾಥ್.‘ಆಗಾಗ್ಗೆ ಅಮ್ಮ ಹೇಳುತ್ತಿರುತ್ತಾರೆ. ಆಗ ನೀರೆತ್ತುವ ಬಾನೆ ದೊಡ್ಡದಿತ್ತು, ಒಬ್ಬ ಮಹಿಳೆ ಒತ್ತುಕೊಟ್ಟರೆ ಇನ್ನೊಬ್ಬ ಮಹಿಳೆ ನೀರೆತ್ತುವ ಕೆಲಸ ಮಾಡುತ್ತಿದ್ದರಂತೆ. ಪುರುಷರದು ನೀರು ಕಟ್ಟುವ ಕೆಲಸ. ಆಗ ನೀರೂ ಚೆನ್ನಾಗಿತ್ತು ಮನುಷ್ಯರೂ ಗಟ್ಟಿಮುಟ್ಟಾಗಿದ್ದರು. ಈಗ ಎರಡೂ ಇಲ್ಲ ಎಂದು ಕೆಲವೊಮ್ಮೆ ಅವರು ಬೇಸರ ವ್ಯಕ್ತಪಡಿಸುತ್ತಾರೆ’ ಎಂದು ಅವರು ಹೇಳಿದರು.ಏತದ ಮೂಲಕ ಮೇಲೆ ಬರುವ ನೀರಿನ ಪ್ರಮಾಣ ಕೊಳವೆ ಬಾವಿಗಳಿಗಿಂದ ಕಡಿಮೆ. ಆದರೆ ಮೇಲೆ ಬಂದ ನೀರು ಪೋಲಾಗದೆ ಉಪಯೋಗವಾಗುತ್ತದೆ. ಈ ಯಂತ್ರಗಳಿಂದ ಬರುವ ಸ್ವಲ್ಪ ಪ್ರಮಾಣದ ನೀರನ್ನು ಕಟ್ಟುವವನು ಪೋಲಾಗದಂತೆ ಮಡಾಯಿಗಳನ್ನು ತಿರುವಲು ಸಾಧ್ಯವಾಗುತ್ತದೆ’ ಎಂದು ಹೇಳುವ ಅವರು ನೀರಿನ ಉಳಿತಾಯದ ಬಗ್ಗೆಯೂ ಮಾತನಾಡುತ್ತಾರೆ.

Thursday, September 9, 2010

ನೆನಪಿನ ಗಣಿ ಈ ತುಂಬುಗೆನ್ನೆಯ ದೀಪ . . . !

ನಮ್ಮ ತಾಲ್ಲೂಕಿನ ಕನ್ನಮಂಗಲ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಇತರೆ ಪುಟ್ಟ ಮಕ್ಕಳೊಂದಿಗೆ ಒಂದು ಮಗು ತನ್ನ ವಿಶೇಷ ನೆನಪಿನ ಶಕ್ತಿಯಿಂದ ಗಮನ ಸೆಳೆಯುತ್ತಿದೆ. ಆ ಮಗುವಿನ ಹೆಸರು ದೀಪ. ದೀಪ ಜ್ಞಾನದ ಅನ್ವರ್ಥವೂ ಹೌದು. ಅಂತೆಯೇ ಈ ೪ ವರ್ಷದ ಮಗುವಿನ ಜ್ಞಾನದಾಹವೂ ವಿಶಿಷ್ಟವಾದುದು.


ಕನ್ನಮಂಗಲದ ಅಂಗನವಾಡಿ ಕೇಂದ್ರದಲ್ಲಿ ಓದುತ್ತಿರುವ ದೀಪಾ.

ಭಾರತದ ಪ್ರಥಮ ಮಹಿಳಾ ಪ್ರಧಾನಿ ಯಾರು? ಷಟ್ಪದಿಯ ಬ್ರಹ್ಮ ಯಾರು? ಕುವೆಂಪುರವರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕೃತಿ ಯಾವುದು? ನಮಗೆ ಸ್ವಾತಂತ್ರ್ಯ ಬಂದ ವರ್ಷ ಯಾವುದು? ಭೂಮಿಗೆ ಗುರುತ್ವಾಕರ್ಷಣ ಬಲ ಇದೆ ಎಂದು ಕಂಡು ಹಿಡಿದವರು ಯಾರು? ಮುಂತಾದ ಪ್ರಶ್ನೆಗಳಿಗೆ ಕಾಲೇಜು ಓದಿರುವ ಯುವಕರೇ ಉತ್ತರ ಕೊಡಲು ತೊದಲುವಾಗ, ಈ ಹುಡುಗಿ ಯಾವುದೇ ಭಯವಿಲ್ಲದೇ ಇಂಥಹ ೫೦-೬೦ ಪ್ರಶ್ನೆಗಳಿಗೆ ಸರಾಗವಾಗಿ ಉತ್ತರ ನೀಡುತ್ತಾಳೆ.
ಹೀಗೆ ಈ ಮಗುವಿನ ನೆನಪಿನ ಶಕ್ತಿಯನ್ನು ಸಮರ್ಥವಾಗಿ ಉಪಯೋಗಿಸಲು ತರಬೇತಿ ನೀಡುತ್ತಿರುವವರು ಆಶಾ ಕಾರ್ಯಕರ್ತೆಯಾಗಿರುವ ದೀಪಳ ಅಮ್ಮ ವೆಂಕಟಲಕ್ಷ್ಮಮ್ಮ ಹಾಗೂ ವೈರ್ಮನ್ ಆಗಿರುವ ಅಪ್ಪ ಎಂ.ರಾಮಕೃಷ್ಣಪ್ಪ. ಇವರಿಬ್ಬರೂ ಶೈಕ್ಷಣಿಕವಾಗಿ ಪದವೀಧರರಾಗಿದ್ದು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ.
"ನನಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸ್ಪರ್ಧಿಸಿ ಒಳ್ಳೆಯ ಕೆಲಸ ಪಡೆಯುವ ಆಸೆಯಿತ್ತು. ಆದರೆ ಕಾರಣಾಂತರಗಳಿಂದ ಈ ಆಸೆ ಈಡೇರಲಿಲ್ಲ. ಹೀಗಾಗಿ ನನ್ನ ಆಸೆಯನ್ನು ಮಗಳು ಈಡೇರಿಸಬಹುದೇ ಎಂಬ ಆಸೆಯಿದೆ. ಸರ್ಕಾರಿ ಶಾಲೆಯಲ್ಲಿಯೇ ವಿದ್ಯಾಭ್ಯಾಸವನ್ನು ಮಾಡಿ ಭವಿಷ್ಯದಲ್ಲಿ ಐ.ಎ.ಎಸ್ ಅಧಿಕಾರಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಲಿ" ಎನ್ನುವ ವೆಂಕಟಲಕ್ಷ್ಮಮ್ಮ ತಾಯಿಯೇ ಮೊದಲ ಗುರು ಎಂಬಂತೆ ತನ್ನ ಮಗಳಿಗೆ ಕತೆಗಳೊಂದಿಗೆ ಸಾಮಾನ್ಯ ಜ್ಞಾನದ ವಿಚಾರಗಳನ್ನು ಧಾರೆಯೆರೆಯುತ್ತಿದ್ದಾರೆ.ತನ್ನ ತಂದೆ ತಾಯಿಯೊಂದಿಗೆ ದೀಪಾ.

ವಿವಿಧ ವೇದಿಕೆಗಳಲ್ಲಿ ಈ ಮಗು ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ಹಲವಾರು ಗಣ್ಯರ ಪ್ರಶಂಸೆಗೆ ಕೂಡ ಪಾತ್ರವಾಗಿದೆ. ಸ್ನೇಹ ಯುವಕರ ಸಂಘ ಹಾಗೂ ಸ.ಹಿ.ಪ್ರಾ.ಶಾಲೆ ಕನ್ನಮಂಗಲ ಇವರ ಸಂಯುಕ್ತಾಶ್ರಯದಲ್ಲಿ ನಡೆದ ೭ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ತನ್ನ ನೆನಪಿನ ಶಕ್ತಿಯ ಪ್ರದರ್ಶನದ ಮೂಲಕ ಸಾಹಿತಿ ಹರಿಹರಪ್ರಿಯ, ಮಾಜಿ ಸಚಿವ ಹಾಗೂ ಶಾಸಕ ವಿ.ಮುನಿಯಪ್ಪ, ಶಿಕ್ಷಣ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಶ್ರೀನಿವಾಸ್ ಹಾಗೂ ನಿವೃತ್ತ ಉಪನಿರ್ದೇಶಕ ಸಿ.ಬಿ. ಹನುಮಂತಪ್ಪ ಅವರ ಪ್ರಶಂಸೆಗೆ ಪಾತ್ರಳಾಗಿದ್ದಾಳೆ.
"ಈ ಮಗುವಿನ ರೀತಿ ಎಲ್ಲ ಮಕ್ಕಳಲ್ಲಿಯೂ ಯಾವುದೋ ಒಂದು ಪ್ರತಿಭೆ ಸುಪ್ತವಾಗಿರುತ್ತದೆ. ಅದನ್ನು ಹೊರತರಲು ಪೋಷಕರು ಸಹಕಾರ ನೀಡಬೇಕು" ಎಂದು ಅಂಗನವಾಡಿ ಕಾರ್ಯಕರ್ತೆಯಾದ ಎನ್. ಪದ್ಮಾವತಿ ತಿಳಿಸುತ್ತಾರೆ. ದೀಪ ಶಿಶುಗೀತೆ, ಕಥೆ ಹಾಗೂ ನೃತ್ಯದಂತಹ ಚಟುವಟಿಕೆಗಳಲ್ಲೂ ಉತ್ಸಾಹದಿಂದ ಭಾಗವಹಿಸುತ್ತಾಳೆ ಎಂದು ಇವರು ಗುರುತಿಸಿದ್ದಾರೆ.
"ಇಂಥಹ ಮಕ್ಕಳ ಪ್ರತಿಭೆಯನ್ನು ಸರ್ಕಾರ ಹಾಗೂ ಸಮುದಾಯ ಗುರುತಿಸಿ ಪುರಸ್ಕರಿಸಿ ಪ್ರೋತ್ಸಾಹಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರತಿಭೆಗಳು ಹೆಚ್ಚೆಚ್ಚು ಹೊರಹೊಮ್ಮುತ್ತವೆ" ಎಂದು ಅಭಿಪ್ರಾಯಪಡುತ್ತಾರೆ ಕನ್ನಮಂಗಲ ಸ.ಹಿ.ಪ್ರಾ.ಶಾಲೆಯ ಸಹಶಿಕ್ಷಕ ಎಸ್.ಕಲಾಧರ್.