Sunday, April 24, 2011

ಪಪ್ಪಾಯಿ ಮರದಲ್ಲಿ ಜೇನು ಸಾಕಾಣಿಕೆ


ಶಿಡ್ಲಘಟ್ಟ ತಾಲ್ಲೂಕಿನ ಇದ್ಲೂಡು ಗ್ರಾಮದ ರೈತ ಗೋಪಾಲಪ್ಪ ಮೂರ್ತಿ ಅವರ ತೋಟದ ಪಪಾಯ ಮರದಲ್ಲಿ ಜೇನು ಗೂಡು ಮಾಡಿಕೊಳ್ಳುವಂತೆ ಮಾಡಿರುವ ರಂಧ್ರವನ್ನು ತೋರಿಸುತ್ತಿರುವುದು

ಎಲ್ಲ ಕೀಟಗಳು ಅಲ್ಲದಿದ್ದರೂ ಕೆಲ ಕೀಟಗಳು ಉಪಯುಕ್ತ ಎಂದು ಹೇಳಲಾಗುತ್ತದೆ. ಪಠ್ಯಪುಸ್ತಕಗಳಲ್ಲಿ ಉಪಯುಕ್ತ ಕೀಟಗಳ ಬಗ್ಗೆ ವರ್ಣನೆ ಕೂಡ ಮಾಡಲಾಗುತ್ತಿದೆ. ಆದರೆ ಕೀಟಗಳ ಸದ್ಬಳಕೆ ವಿಷಯ ಪ್ರಸ್ತಾಪವಾದಾಗ, ಬಹುತೇಕ ಜನರಿಂದ ಹೆಚ್ಚಿನ ಆಸಕ್ತಿ ವ್ಯಕ್ತವಾಗುವುದಿಲ್ಲ. ಕೀಟಗಳು ಕಾಪಾಡುವುದು ಅಷ್ಟೇ ಅಲ್ಲ, ಅವುಗಳ ಸಂತತಿಯ ಬೆಳವಣಿಗೆಗೂ ಯಾರೂ ಮುಂದಾಗುವುದಿಲ್ಲ.
ಆದರೆ ಇದಕ್ಕೆ ಅಪವಾದ ಎಂಬಂತೆ ಶಿಡ್ಲಘಟ್ಟದ ಹೊರವಲಯದಲ್ಲಿರುವ ಇದ್ಲೂಡು ಗ್ರಾಮದ ರೈತರೊಬ್ಬರು ವಿಶಿಷ್ಟ ಪ್ರಯೋಗ ಕೈಗೊಳ್ಳುವುದರ ಮೂಲಕ ಕೀಟಗಳ ಸಾಕಾಣಿಕೆ ಮತ್ತು ಬಳಕೆಯಲ್ಲಿ ಹೆಚ್ಚಿನ ಆಸ್ಥೆ ತೋರುತ್ತಿದ್ದಾರೆ. ರೈತ ಗೋಪಾಲಪ್ಪ ಮೂರ್ತಿ ಅವರು ಪಪಾಯ ಮರದ ಕಾಂಡವನ್ನು ಜೇನು ಸಾಕಾಣಿಕಾ ಸ್ಥಳವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ.
ಟೊಳ್ಳಾಗಿರುವ ಪಪಾಯ ಮರದ ಕಾಂಡದ ಮೂರು ಕಡೆ ಸಣ್ಣ ರಂಧ್ರಗಳನ್ನು ಮಾಡಿದ್ದಾರೆ. ತುಡುವೆ ಜೇನಿಗೆ ಪ್ರಶಸ್ತ ಸ್ಥಳವಾದ್ದರಿಂದ ಜೇನು ನೊಣಗಳು ಅಲ್ಲಿ ಬಂದು ಸೇರಿಕೊಂಡಿವೆ.
ಸಾಮಾನ್ಯವಾಗಿ ಜೇನು ನೊಣಗಳ ಕುಟುಂಬಗಳು ಭಾಗವಾದಾಗ ರಾಣಿ ಜೇನು ತನ್ನ ಕೆಲ ಜೇನುನೊಣಗಳೊಂದಿಗೆ ಈ ರೀತಿಯ ಸೂಕ್ತ ಸ್ಥಳವನ್ನು ಗುರುತಿಸಿ ಗೂಡು ಮಾಡುತ್ತವೆ. ದಿನವೊಂದಕ್ಕೆ ೫೫೦ ರಿಂದ ೧೦೦೦ ಮೊಟ್ಟೆ ಇಡುವ ಸಾಮರ್ಥ್ಯ ತುಡುವೆ ರಾಣಿ ಜೇನು ನೊಣಕ್ಕಿದೆ. ಮಕರಂದ ಮತ್ತು ಪರಾಗ ಹೆಚ್ಚಿನ ಪ್ರಮಾಣದಲ್ಲಿ ದೊರಕುತ್ತಿದ್ದರೆ ರಾಣಿ ನೊಣವು ಹೆಚ್ಚಿನ ಸಂಖ್ಯೆಯಲ್ಲಿ ಮೊಟ್ಟೆಗಳನ್ನಿಡುತ್ತದೆ. ಇದರಿಂದ ಹುಳುಗಳ ಸಂಖ್ಯೆಯೂ ಹೆಚ್ಚಾಗುತ್ತದೆ.


ತುಡುವೆ ಜೇನುನೊಣಗಳ ಗೂಡಿನ ಪ್ರವೇಶದ್ವಾರ.

"ಕೇರಳದ ರೈತರೊಬ್ಬರು ಜೇನು ಸಾಕಾಣಿಕೆ ಮಾಡಿ ಅದರಿಂದ ಪರಾಗಸ್ಪರ್ಶ ಹೆಚ್ಚಾಗಿ ನಾಲಜಾನಿ ತಳಿಯ ಏಲಕ್ಕಿ ಬೆಳೆಯನ್ನು ೩ ಟನ್ ನಿಂದ ೧೨ ಟನ್ ಇಳುವರಿಗೆ ಏರಿಸಿದ್ದನ್ನು ಪತ್ರಿಕೆಯಲ್ಲಿ ಓದಿದ್ದೆ. ಅದರಿಂದ ಸ್ಫೂರ್ತಿಗೊಂಡು ಪಪಾಯ ಗಿಡವು ಕಾಯಿ ನಿಲ್ಲಿಸುವ ಸಮಯಕ್ಕೆ ಜೇನು ಗೂಡುಗಳನ್ನಾಗಿಸುವ ಪ್ರಯೋಗ ಕೈಗೊಂಡೆ. ಆದರೆ ರಾಣಿ ಜೇನನ್ನು ಕೂಡಿಟ್ಟು ಬಂಧಿಸಿ ಸಾಕುವುದು ನನಗಿಷ್ಟವಿಲ್ಲ. ಅವು ನಮ್ಮಂತೆ ಸ್ವಾಭಾವಿಕವಾಗಿ ಸ್ವಚ್ಛಂದವಾಗಿ ಬದುಕಬೇಕು. ಈಗ ಎರಡು ಗೂಡುಗಳಾಗಿವೆ. ಈ ಜೇನುಗಳಿಂದ ನಮ್ಮ ತೋಟದ ಬೆಳೆಗಳಷ್ಟೇ ಅಲ್ಲದೆ ಸುತ್ತಮುತ್ತಲಿನ ತೋಟಗಳ ಬೆಳೆಗಳಿಗೂ ಪರಾಗಸ್ಪರ್ಶ ನಡೆಯುತ್ತದೆ. ಮುಂದೆ ೫೦ ರಿಂದ ೧೦೦ ಪಪಾಯ ಮರಗಳನ್ನು ಬೆಳೆದು ಈ ಪ್ರಯೋಗವನ್ನು ಮುಂದುವರಿಸುವ ಉದ್ದೇಶವಿದೆ. ಮನೆ ಮುಂದೆ ಹಲವರು ಪಪಾಯ ಗಿಡವನ್ನು ಬೆಳೆಯುತ್ತಾರೆ. ಹಣ್ಣು ಬಿಡುವುದು ನಿಲ್ಲಿಸಿದ ಮೇಲೆ ಮರವನ್ನು ಅವರೂ ಈ ರೀತಿ ಜೇನು ನೊಣಗಳು ಸೇರಲು ಅವಕಾಶ ಮಾಡಿಕೊಡಬಹುದು" ಎನ್ನುತ್ತಾರೆ ಮೂರ್ತಿ.

Tuesday, April 19, 2011

ವಾಹನಗಳ ಸಂಚಾರದಿಂದ ರಾಗಿ ಕಾಳು!


ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ ಗ್ರಾಮದ ಬಳಿ ರಸ್ತೆ ಮೇಲೆ ಹಾಕಿರುವ ರಾಗಿತೆನೆಗಳು.

ಡಿಸೆಂಬರ್-ಜನವರಿ-ಫೆಬ್ರುವರಿ ತಿಂಗಳುಗಳಲ್ಲಿ ದ್ವಿಚಕ್ರ ವಾಹನ ಸವಾರರು ರಸ್ತೆ ಮೇಲೆ ಹೋಗಲು ಆತಂಕಪಡುತ್ತಾರೆ. ಅವರಿಗೆ ಮಳೆಯ ಭಯವೂ ಇಲ್ಲ. ಬಿಸಿಲಿನ ಕಾಟವೂ ಇಲ್ಲ. ಆದರೆ ರಸ್ತೆಯುದ್ದಕ್ಕೂ ಹರಡಿದ ರಾಗಿ ತೆನೆಗಳು ಗಲಿಬಿಲಿಗೊಳಿಸುತ್ತವೆ. ಭಯ ಮೂಡಿಸುತ್ತವೆ.

ರಸ್ತೆಯಲ್ಲಿ ರಾಗಿ ಹಾಕಿದ್ದಾಗ ವಾಹನ ಚಾಲಕರು ತೆನೆ ಹರಡಿರುವುದು, ತಿರುವಿರುವುದು, ಗುಡ್ಡೆಹಾಕುವವರನ್ನು ಗಮನಿಸಿ ವಾಹನವನ್ನು ಚಲಿಸಬೇಕಾಗುತ್ತದೆ. ನಿಧಾನವಾಗಿ ಸಾಗಬೇಕು. ಬ್ರೇಕ್ ಹಾಕಿದರೆ ವಾಹನದ ಚಕ್ರಗಳು ಜಾರುವ ಸಂಭವವೇ ಹೆಚ್ಚು ಇರುತ್ತದೆ.

ರೈತರ ಜಮೀನಿನಲ್ಲಿದ್ದ ಕಣವು ರಸ್ತೆಗೆ ಬಂದದ್ದು ಹೇಗೆ ಎಂದು ತಿಳಿಯಲು ಪ್ರಯತ್ನಿಸಿದರೆ ಆಗುತ್ತಿರುವ ಸಾಮಾಜಿಕ ಬದಲಾವಣೆಯ ಸ್ಥೂಲ ಪರಿಚಯವೂ ಆಗುತ್ತದೆ.

’ಒಮ್ಮೆ ಕಣ ಮಾಡಲು ಸುಮಾರು ೧೦ ಸಾವಿರ ಲೀಟರ್ ನೀರು ಖರ್ಚಾಗುತ್ತದೆ. ಕನಿಷ್ಠ ೮ ರಿಂದ ೧೦ ಮಂದಿ ರೈತರು ಒಗ್ಗಟ್ಟಾಗಿ ಒಬ್ಬರ ಜಮೀನಿನಲ್ಲಿ ಜಾಗವನ್ನು ಆಯ್ದು ಕಣ ಸಿದ್ದಪಡಿಸಬೇಕು. ಅಲ್ಲಿರುವ ಕೂಳೆಯನ್ನು(ಗಿಡ ಗಂಟಿಗಳನ್ನು) ಚೆಕ್ಕಿ, ನೀರು ಹಾಕಿ ನೆನೆಸಿ, ಎತ್ತುಗಳ ಬಂತಿ ಕಟ್ಟಿ ತುಳಿಸಬೇಕು. ನಂತರ ಎಟ್ಟ ಹೊಡೆಸಿ ಸಮತಟ್ಟು ಮಾಡಬೇಕು. ಒಣಗಿದ ಮೇಲೆ ಸಗಣಿಯನ್ನು ತುಂಬೆ ಕುಚ್ಚಿನಿಂದ ಸಾರಿಸಿ ಆರಲು ಬಿಡಬೇಕು. ಆಗ ಕಣ ಸಿದ್ದವಾದಂತೆ. ಇನ್ನು ರಾಗಿ ಕಟ್ಟುಗಳನ್ನು ತಂದು ಗುಂಡು ಕಟ್ಟಿ ಹೊಡೆಯಬೇಕು’ ಎಂದು ರೈತರು ಕಣದ ಬಗ್ಗೆ ವಿವರಣೆ ನೀಡುತ್ತಾರೆ.


ಶಿಡ್ಲಘಟ್ಟ ತಾಲ್ಲೂಕಿನ ಹಳೇಹಳ್ಳಿ ಗ್ರಾಮದಲ್ಲಿ ಕಂಡು ಬಂದ ಕಣದಲ್ಲಿ ಎತ್ತಿಗೆ ಗುಂಡುಕಟ್ಟಿ ಕಾಳುಮಾಡುವ ದೃಶ್ಯ.

’ಆದರೆ ಈಗ ನೀರಿಲ್ಲ, ಎತ್ತುಗಳಿಲ್ಲ ಮತ್ತು ರೈತರಲ್ಲಿ ಒಗ್ಗಟ್ಟಿಲ್ಲ. ರಾಜಕೀಯವಾಗಿ ಗ್ರಾಮಗಳು ಒಡೆದಿವೆ. ರೈತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿವೆ. ಒಂದಾಗಿ ಕೆಲಸ ಮಾಡುವ ಒಗ್ಗಟ್ಟು ಕಳೆದುಕೊಂಡಿದ್ದೇವೆ. ೫೦ ರಿಂದ ೬೦ ಮೂಟೆಗೂ ಹೆಚ್ಚು ರಾಗಿ ಬೆಳೆಯುವವರು ಕಣ ಮಾಡಿಕೊಳ್ಳುತ್ತಾರೆ. ಬಡತನ ಮತ್ತು ಕಾರ್ಮಿಕರಿಗೆ ಹಣ ನೀಡಲಾಗದ ಕಾರಣ ರಾಗಿ ತೆನೆ ಕಣಗಳನ್ನು ರಸ್ತೆಯ ಮೇಲೆ ಮಾಡುತ್ತೇವೆ. ವಾಹನಗಳ ಸಂಚಾರದಿಂದ ರಾಗಿ ತೆನೆಗಳಿಂದ ಕಾಳುಗಳು ಹೊರಬರುತ್ತವೆ. ಅವುಗಳನ್ನು ನಾವು ಸಂಗ್ರಹಿಸುತ್ತೇವೆ’ ಎಂದು ಅವರು ಹೇಳುತ್ತಾರೆ.

‘ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿಗೆ ಸೇರಿದ ಜಾಗದಲ್ಲಿ ದೀರ್ಘ ಬಾಳಿಕೆಯ ಸರ್ವಋತು ಕಣಗಳನ್ನು ನಿರ್ಮಿಸಬಹುದು. ಇದರಿಂದ ರಸ್ತೆಕಣಗಳಿಂದ ಆಗುವ ಪ್ರಾಣಾಪಾಯಗಳನ್ನು ತಪ್ಪಿಸಬಹುದು. ಗ್ರಾಮಗಳ ಬಳಿ ಅಗಲವಾದ ಬಂಡೆಗಳಿದ್ದಲ್ಲಿ ಕಲ್ಲು ಒಡೆಯುವವರಿಂದ ಅದನ್ನು ಸಾರ್ವಕಾಲಿಕ ಕಣಗಳನ್ನಾಗಿ ಮಾರ್ಪಡಿಸಬಹುದು. ಈಗ ಡೀಸಲ್ ಚಾಲಿತ ಬೀಜ ಮಾಡುವ ಯಂತ್ರಗಳೂ ಬಂದಿವೆ. ಅದನ್ನು ಪಂಚಾಯಿತಿ ವತಿಯಿಂದ ತರಿಸಿ ರೈತರಿಗೆ ಕಡಿಮೆ ದರದಲ್ಲಿ ಬಾಡಿಗೆಗೆ ನೀಡಿ ಕಾಳು ಮಾಡಿಕೊಳ್ಳಲು ಅನುವು ಮಾಡಿಕೊಡಬಹುದು’ ಎಂದು ವರದನಾಯಕನಹಳ್ಳಿಯ ರೈತ ಜಯರಾಂ ಪರ್ಯಾಯ ವ್ಯವಸ್ಥೆಯ ಬಗ್ಗೆ ತಿಳಿಸಿದರು.

Friday, April 15, 2011

ಹುಣಿಸೆ ನೆಕ್ಲೆಟ್


ಶಿಡ್ಲಘಟ್ಟದ ಶಾಲೆಯೊಂದರಲ್ಲಿ ಸಾಹಿತಿ ಸ.ರಘುನಾಥ್ ಮಕ್ಕಳಿಗೆ ಹುಣಿಸೆ ನೆಕ್ಲೆಟ್ ತಿನಿಸನ್ನು ತಯಾರಿಸುವುದನ್ನು ವಿವರಿಸಿ ವಿತರಿಸಿದರು.

‘ಹುಣಿಸೆ ನೆಕ್ಲೆಟ್’. ಇದೆಂಥಹ ವಿಚಿತ್ರ ವಸ್ತು ಎಂದು ಅಚ್ಚರಿಗೊಳ್ಳುತ್ತಿದ್ದ ಮಕ್ಕಳಿಗೆಲ್ಲ ‘ಮೊದಲು ಇದನ್ನು ತಿನ್ನಿ. ನಂತರ ಇದರ ಬಗ್ಗೆ ತಿಳಿಸುತ್ತೇನೆ’ ಎಂದು ಸಾಹಿತಿ ಸ.ರಘುನಾಥ್ ಕಪ್ಪು ಬಣ್ಣದ ಚಾಕೋಲೇಟ್‌ನಂತಹ ಸಣ್ಣ ಉಂಡೆಗಳನ್ನು ನೀಡಿದರು. ತಿಂದ ಮಕ್ಕಳೆಲ್ಲರ ಮುಖವರಳಿತ್ತು. ಬಾಯಿಚಪ್ಪರಿಸುತ್ತಾ ಇನ್ನೊಂದು ಬೇಕೆಂದು ದಂಬಾಲು ಬಿದ್ದರು.
ಶಾಲೆಯ ಮಕ್ಕಳಿಗೆ ಜಾಹೀರಾತು ನೀಡಿ ಆಕರ್ಷಿಸುವ ರಾಸಾಯನಿಕ ಬೆರೆತ ತಿಂಡಿ ತಿನಿಸುಗಳ ಬದಲು ಶಾಲೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ತಿಂಡಿ ತಿನಿಸುಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡುತ್ತಾ ಸಾಹಿತಿ ಸ.ರಘುನಾಥ್ ಮಕ್ಕಳಿಗೆ ತಿಂಡಿಗಳ ರುಚಿ ತೋರಿಸಿದರು.


ಹುಣಿಸೆ ನೆಕ್ಲೆಟ್

‘ಹಳೆಯ ಹುಣಿಸೆ ಹಣ್ಣು, ಉಪ್ಪು ಅಥವಾ ಸೈಂಧವ ಲವಣ, ಕಾಳು ಮೆಣಸಿನ ಪುಡಿ, ಶುಂಟಿ ಪುಡಿ, ಹಳೆ ಬೆಲ್ಲ ಮಿಶ್ರಣ ಮಾಡಿ ಚೆನ್ನಾಗಿ ಕುಟ್ಟಿ ಸಣ್ಣ ಸಣ್ಣ ಉಂಡೆ ಮಾಡಿಕೊಂಡರೆ ಹುಣಿಸೆ ನೆಕ್ಲೆಟ್ ತಯಾರಾಗುತ್ತದೆ. ಹುಣಿಸೆಹಣ್ಣಿನಿಂದ ಮಾಡಿರುವುದರಿಂದ ಮತ್ತು ಮಕ್ಕಳು ಕಡ್ಡಿಗೆ ಚುಚ್ಚಿಕೊಂಡು ಇದನ್ನು ನೆಕ್ಕುವುದರಿಂದ ಇದಕ್ಕೆ ‘ಹುಣಿಸೆ ನೆಕ್ಲೆಟ್’ ಎಂದು ಹೆಸರಿಟ್ಟಿದ್ದೇನೆ. ಇದು ಜೀರ್ಣಕಾರಿ. ಹೆಚ್ಚು ಜೊಲ್ಲು ಉತ್ಪಾದನೆ ಮಾಡುವುದರಿಂದ ತಿಂದದ್ದು ಜೀರ್ಣವಾಗುತ್ತದೆ. ದವಡೆಗೆ ವ್ಯಾಯಾಮ ಕೂಡ. ವಾಂತಿ ಮತ್ತು ತಲೆಸುತ್ತು ಕಡಿಮೆ ಮಾಡುವ ಪಿತ್ತಾಹರ ಗುಣವನ್ನೂ ಹೊಂದಿದೆ. ರಾಸಾಯನಿಕ ಬೆರೆತ ಚಾಕ್ಲೇಟಿಗಿಂತ ಹುಣಿಸೆ ನೆಕ್ಲೆಟ್ ಅತ್ಯುತ್ತಮ’ ಎಂದು ಸ.ರಘುನಾಥ್ ಅವರು ತಿಳಿಸಿದರು.

Saturday, April 9, 2011

ಕನ್ನಮಂಗಲದ ಸರ್ಕಾರಿ ಶಾಲೆ - ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನ ಹೆಚ್ಚಿಸಲು ಪ್ರಯತ್ನ


ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಬರೆದುಕೊಟ್ಟ ಸುದ್ಧಿ ಮುಖ್ಯಾಂಶಗಳನ್ನು ಓದುತ್ತಿರುವ ವಿದ್ಯಾರ್ಥಿ.


ಪ್ರಾರ್ಥನಾ ಸಮಯದಲ್ಲಿ ಬಹುತೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳು ಪತ್ರಿಕೆಗಳಲ್ಲಿನ ಮುಖ್ಯಾಂಶಗಳು ಮತ್ತು ಸುಭಾಷಿತಗಳನ್ನು ಓದುವುದು ಸಾಮಾನ್ಯ. ಈ ನಿಯಮ ಚಾಚು ತಪ್ಪದೇ ಪಾಲಿಸಲಾಗುತ್ತದೆ. ಆದರೆ ಇದಕ್ಕಿಂತ ಭಿನ್ನವಾದ ಪ್ರಯೋಗಗಳನ್ನು ಕೆಲ ಶಾಲೆಗಳು ಮಾಡುತ್ತವೆ. ಅಂಥವುಗಳಲ್ಲಿ ತಾಲ್ಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಒಂದು. ಸುದ್ದಿ ವಾಚನವಷ್ಟೇ ಮತ್ತು ಮಾಹಿತಿ ಸಂಗ್ರಹಣೆಯಷ್ಟೇ ಅಲ್ಲ, ಅದೇ ಸುದ್ದಿ-ಮಾಹಿತಿಯನ್ನು ಬಳಸಿಕೊಂಡು ಮಕ್ಕಳಲ್ಲಿ ಸಾಮಾನ್ಯಜ್ಞಾನ ಹೆಚ್ಚಿಸಲು ಶಾಲೆಯ ಶಿಕ್ಷಕರು ಪ್ರಯತ್ನ ನಡೆಸಿದ್ದಾರೆ.

ಪತ್ರಿಕೆಗಳು ಯಾವುದೇ ಪಠ್ಯಪುಸ್ತಕಕ್ಕಿಂತ ಹೆಚ್ಚಿನ ಮಾಹಿತಿ ನೀಡಬಲ್ಲವು. ಉಪಯುಕ್ತ ಆಗಬಲ್ಲವು. ಭಾಷೆಯ ಹಾಗೂ ಜ್ಞಾನದ ಬೆಳವಣಿಗೆಗೆ ಸಂಬಂಧಿಸಿದಂತೆ ವಿವಿಧ ಆಯಾಮಗಳನ್ನು ಪರಿಶೀಲಿಸಲು ಅನುಕೂಲವಾಗಲಿದೆ. ಪ್ರಚಲಿತ ವಿಷಯಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡುತ್ತದೆ. ಈ ಕಾರಣಕ್ಕಾಗಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತೇವೆ ಎಂದು ಶಾಲೆಯ ಶಿಕ್ಷಕರು ಹೇಳುತ್ತಾರೆ.

ಶಾಲೆಯಲ್ಲಿ ಪ್ರಾರ್ಥನೆ ಪ್ರಕ್ರಿಯೆ ಆರಂಭಿಸುವ ಶಿಕ್ಷಕರು ಪತ್ರಿಕೆಗಳಿಂದ ಸುದ್ದಿ ಮುಖ್ಯಾಂಶಗಳನ್ನು ಆರಿಸಿಕೊಳ್ಳುತ್ತಾರೆ. ಮುಖ್ಯಾಂಶದ ಜೊತೆಗೆ ಸುದ್ದಿಯ ತಿರುಳನ್ನು ಪುಸ್ತಕವೊಂದರಲ್ಲಿ ಬರೆಯುತ್ತಾರೆ. ಪ್ರಾರ್ಥನೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅದನ್ನು ಓದುತ್ತಾರೆ. ಸುದ್ದಿಗೆ ಸಂಬಂಧಿಸಿದಂತೆ ಶಿಕ್ಷಕರು ಸಣ್ಣಪುಟ್ಟ ಮಾಹಿತಿ ನೀಡುತ್ತಾರೆ. ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನ ಪರೀಕ್ಷಿಸಲು ಶಿಕ್ಷಕರು ಸುದ್ದಿಗೆ ಸಂಬಂಧಿಸಿದ ಸರಳ ಪ್ರಶ್ನೆಗಳನ್ನು ಕೇಳುತ್ತಾರೆ. ವಿದ್ಯಾರ್ಥಿಗಳು ನೀಡುವ ಉತ್ತರದ ಮೇಲೆ ಸುದ್ದಿಯ ಗ್ರಹಿಕೆ ಅರಿವಿಗೆ ಬರುತ್ತದೆ.
ಈ ಪ್ರಕ್ರಿಯೆ ಇಷ್ಟಕ್ಕೆ ಕೊನೆಗೊಳ್ಳುವುದಿಲ್ಲ. ಶಾಲೆಯ ಕಪ್ಪುಹಲಗೆಯ ಮೇಲೆ ಶಿಕ್ಷಕರು ಬರೆಯುವ ಸುದ್ದಿ ಮುಖ್ಯಾಂಶಗಳನ್ನು ಮತ್ತು ಸುಭಾಷಿತಗಳನ್ನು ವಿದ್ಯಾರ್ಥಿಗಳು ತಮ್ಮ ಪುಸ್ತಕದಲ್ಲಿ ಬರೆದುಕೊಳ್ಳುತ್ತಾರೆ. ಒಂದು ವಾರದ ನಂತರ ಎಲ್ಲ ಸುದ್ದಿ-ಮಾಹಿತಿ ಆಧರಿಸಿ ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಗುತ್ತದೆ.ಶಾಲೆಯ ಕಪ್ಪು ಹಲಗೆಯ ಮೇಲೆ ಶಿಕ್ಷಕರೊಬ್ಬರು ಬರೆಯುತ್ತಿರುವ ಸುದ್ದಿ ಮತ್ತು ಸುಭಾಷಿತವನ್ನು ಬರೆದುಕೊಳ್ಳುತ್ತಿರುವ ವಿದ್ಯಾರ್ಥಿಗಳು.

‘ನೀರಸ ಪ್ರಕ್ರಿಯೆ ರೂಪದಲ್ಲಿದ್ದ ಪತ್ರಿಕೆಗಳ ಓದುವಿಕೆಯನ್ನು ಅರ್ಥಪೂರ್ಣಗೊಳಿಸಲು ಪ್ರಯತ್ನಿಸಿದೆವು. ಪಠ್ಯಪುಸ್ತಕದ ಜೊತೆಗೆ ಸಾಮಾನ್ಯ ಜ್ಞಾನದ ಬಗ್ಗೆಯು ವಿದ್ಯಾರ್ಥಿಗಳು ಅರಿವು ಹೊಂದಿರಬೇಕು ಎಂಬುದು ನಮ್ಮ ಉದೇಶವಾಗಿತ್ತು. ಈ ಎಲ್ಲ ಚಟುವಟಿಕೆಗಳಿಗೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನೂತನ ಪ್ರಯೋಗಳಲ್ಲಿ ಯಶಸ್ವಿಯಾಗಿದ್ದೇವೆ ಎಂಬ ಸಂತಸ ನಮಗಿದೆ’ ಎಂದು ಶಿಕ್ಷಕರು ತಿಳಿಸಿದರು.
‘ಶಾಲೆಯ ಮುಖ್ಯ ಶಿಕ್ಷಕರು ಸೇರಿದಂತೆ ಎಂಟು ಮಂದಿ ಸಹಶಿಕ್ಷಕರಿದ್ದೇವೆ. ನಾವು ‘ಪ್ರಜಾವಾಣಿ’ಯನ್ನು ನಿತ್ಯ ಓದುತ್ತೇವೆ. ಶಾಲೆಯ ಪ್ರದರ್ಶನ ಫಲಕದ ಮೇಲೆ ವಿಜ್ಞಾನ ವಿಶೇಷ, ಕರ್ನಾಟಕ ದರ್ಶನ, ಕೃಷಿ, ವೈಜ್ಞಾನಿಕಾ ವಿಸ್ಮಯದ, ಶೈಕ್ಷಣಿಕ ಮಹತ್ವದ ಲೇಖನದ ಪ್ರತಿಯನ್ನು ಅಂಟಿಸುತ್ತೇವೆ’ ಎಂದು ಅವರು ಹೇಳಿದರು.

Saturday, April 2, 2011

ಧರೆಗಿಳಿದ ಕೈಲಾಸ

ಒಂದೊಂದೇ ಕಲ್ಲನ್ನು ಕೆತ್ತಿ ಜೋಡಿಸಿ ನಿರ್ಮಾಣವಾದ ದೇವಾಲಯವಲ್ಲ. ಬೆಲೆಬಾಳುವ ರತ್ನವನ್ನು ನಾಜೂಕಾಗಿ ಕೆತ್ತಿ ಆಭರಣ ತಯಾರಿಸಿದಂತೆ ಇಡೀ ಚಾರಂದ್ರಿ ಬೆಟ್ಟವನ್ನೇ ಕೊರೆದು ನಿರ್ಮಿಸಿರುವ ದೇವಾಲಯವಿದು. ಪ್ರಪಂಚದ ಏಕಶಿಲಾ ರಚನೆಗಳಲ್ಲೇ ಉತ್ಕೃಷ್ಟವಾದ ಇದು ಕೈಲಾಸನಾಥ ದೇವಾಲಯ. ಎಲ್ಲೋರದ ಈ ಕೈಲಾಸನಾಥ ದೇವಾಲಯವನ್ನು ಬೆಟ್ಟವನ್ನು ಮೇಲಿನಿಂದ ಕೆತ್ತುತ್ತಾ ತಳದವರೆಗೂ ಬಂದು ಕೈಲಾಸದ ರೂಪ ಕೊಟ್ಟಿರುವುದು ವಿಶೇಷ.ಅಜಂತ ಚಿತ್ರಕಲೆಗೆ ಹೆಸರಾದಂತೆ ವಾಸ್ತುಶಿಲ್ಪಕ್ಕೆ ಹೆಸರಾದದ್ದು ಎಲ್ಲೋರ. ಮಹಾರಾಷ್ಟ್ರದಲ್ಲಿನ ಎಲ್ಲೋರದ ಬೆಟ್ಟದಲ್ಲಿ ೩೩ ಗುಹೆಗಳನ್ನು ಎರಡೂವರೆ ಕಿಮೀ ಉದ್ದ ಕೊರೆಯಲಾಗಿದ್ದು ಇಲ್ಲಿ ಬೌದ್ಧ, ಹಿಂದೂ ಹಾಗೂ ಜೈನ ಗುಹೆಗಳಿವೆ. ಕ್ರಿ.ಶ.೪೦೦ ರಿಂದ ೬೦೦ ರವರೆಗೂ ಬೌದ್ಧಗವಿಗಳನ್ನು, ೬೦೦ ರಿಂದ ೮೦೦ ರವರೆಗೂ ಹಿಂದೂ ಗುಹೆಗಳನ್ನು, ೮೦೦ರ ನಂತರ ಜೈನ ಗುಹೆಗಳನ್ನು ಕೊರೆಯಲಾಗಿದೆ. ಬೌದ್ಧ ಧರ್ಮದ ಅನಂತರ ಪ್ರಾಶಸ್ತ್ಯಕ್ಕೆ ಬಂದ ಶೈವಧರ್ಮದ ಪ್ರತೀಕವಾಗಿದೆ ಕೈಲಾಸನಾಥ ದೇವಾಲಯ.ಕನ್ನಡಿಗರಾದ ರಾಷ್ಟ್ರಕೂಟರ ದೊರೆ ಮೊದಲನೆ ಕೃಷ್ಣ ಕಟ್ಟಿಸಿದ ಈ ದೇವಾಲಯದ ನಿರ್ಮಾಣದಲ್ಲಿ ನೂರಾರು ವಾಸ್ತು ಶಿಲ್ಪಿಗಳು ಮತ್ತು ಕಲಾವಿದರ ಶ್ರಮವಿದೆ. ಆಲಯದ ಶೈಲಿಯಲ್ಲಿ ದ್ರಾವಿಡ ಸಂಪ್ರದಾಯದ ಛಾಪು ಕಂಡುಬರುತ್ತದೆ. ಸುಮಾರು ೨೦೭ ಮೀ ಉದ್ದ ೩೬ ಮೀ ಅಗಲವಾದ ದೊಡ್ಡ ಬಂಡೆಯನ್ನು ಕಡೆದು ನಿರ್ಮಿಸಿರುವ ಎರಡಂತಸ್ತಿನ ರಚನೆಯಿದು. ಇದರಲ್ಲಿ ಪ್ರಧಾನ ಆಲಯ, ಕೈಸಾಲೆ, ನಂದಿಮಂಟಪ ಮತ್ತು ಗೋಪುರವಿದೆ. ಅತ್ಯುತ್ತಮ ಮೂರ್ತಿ ಶಿಲ್ಪಗಳು, ಅಲಂಕಾರಿಕ ಶಿಲ್ಪಗಳೂ ಇಲ್ಲಿವೆ.ಈ ದೇವಾಲಯದ ಒಳಭಾಗದ ಉತ್ತಮ ಭಿತ್ತಚಿತ್ರಗಳಿದ್ದವು. ಈಗ ಅವುಗಳಲ್ಲಿ ಉಳಿದಿರುವುದು ಕೆಲವು ಮಾತ್ರ. ನಂದಿ ಮಂಟಪದ ಎರಡು ಭಾಗಗಳಲ್ಲಿ ರಾಮಾಯಣ ಮತ್ತು ಮಹಾಭಾರತದ ಕಥಾನಕಗಳನ್ನು ಸುಂದರವಾಗಿ ಕೊರೆಯಲಾಗಿದೆ. ರಾವಣ ಕೈಲಾಸಪರ್ವತವನ್ನು ಎತ್ತುವ ಪ್ರಸಂಗದ ಶಿಲ್ಪ ಇಲ್ಲಿ ಅತ್ಯಂತ ಪ್ರಸಿದ್ಧ. ಶಿವಪಾರ್ವತಿಯರಿರುವ ಕೈಲಾಸ ಪರ್ವತವನ್ನು ರಾವಣನ ಪ್ರಯತ್ನದಿಂದ ಪರ್ವತ ಅಲುಗಾಡಿದಾಗ ಪರ್ವತವಾಸಿಗಳಲ್ಲಾಗುವ ಆತಂಕವನ್ನು ಶಿಲ್ಪದಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ.ಕರ್ನಾಟಕದ ಮಳಖೇಡದಿಂದ ಆಳಿದ ಗರುಡಲಾಂಛನರಾದ ರಾಷ್ಟ್ರಕೂಟರು ಪಂಪ, ಪೊನ್ನರಂಥ ಕವಿಗಳನ್ನು ಪೋಷಿಸಿದವರು. ಕನ್ನಡದ ಕವಿರಾಜ ಮಾರ್ಗ ಕೃತಿಯೂ ಇವರ ಕಾಲದ್ದೇ. ಖ್ಯಾತ ಗಣಿತಕಾರ ಮಹಾವೀರಾಚಾರ್ಯ, ಸಂಸ್ಕೃತ ವ್ಯಾಕರಣಕಾರ ಶಾಕಟಾಯನ, ಜೈನ ವಿದ್ವಾಂಸ ಜಿನಸೇನ, ವೀರಸೇನ, ಗುಣಭದ್ರ ಇವರ ಕಾಲದವರು. ಎಲಿಫೆಂಟಾದ ಗುಹೆಗಳು, ಎಲ್ಲೋರದ ಕೈಲಾಸನಾಥ ದೇವಾಲಯ ಈ ಕನ್ನಡ ದೊರೆಗಳ ಉತ್ಕೃಷ್ಟ ಕೊಡುಗೆಯಾಗಿದೆ.