Saturday, October 31, 2009

ಅರಿಶಿನ ಕುಂಕುಮ - ಕನ್ನಡ ಡಿಂಡಿಮ

ನಮ್ಮ ಬಾವುಟ... ಕನ್ನಡದ ಬಾವುಟ...
ಅರಿಶಿನ ಕುಂಕುಮ ಬಣ್ಣದ ನಾಡ ಬಾವುಟ ಕನ್ನಡ ತಾಯಿಯ ಸುಮಂಗಲಿತನವನ್ನು ಪ್ರತಿನಿಧಿಸುತ್ತದೆ.
ಚಿನ್ನದ ಬೀಡು, ರೇಷ್ಮೆಯ ನಾಡನ್ನು ಸಂಪತ್ತಿನ ಪ್ರತಿನಿಧಿಯಾಗಿ ಹಳದಿ ಬಣ್ಣ ಸೂಚಿಸಿದರೆ... ಫಲವತ್ತಾದ ಕೆಂಪು ಮಣ್ಣು, ವೀರತ್ವ, ಔಧಾರ್ಯ ಮತ್ತು ಖನಿಜ ಸಂಪತ್ತನ್ನು ಕೆಂಪು ಬಣ್ಣ ಪ್ರತಿನಿಧಿಸುತ್ತದೆ.
ಎಲ್ಲಾ ರಾಜ್ಯಗಳಿಗೂ ತಮ್ಮದೇ ಆದ ಧ್ವಜವಿಲ್ಲ. ಆದರೆ ನಮಗೆಲ್ಲಿಂದ ಬಂತು? ೧೯೬೫ರಲ್ಲಿ ಮ.ರಾಮಮೂರ್ತಿಯವರು "ಕನ್ನಡ ಪಕ್ಷ"ವನ್ನು ಸ್ಥಾಪಿಸಿದ್ದರು. ಅವರ ಪಕ್ಷ ಮರೆಯಾದರೂ ಅವರ ಪಕ್ಷದ ಧ್ವಜ ನಮ್ಮೆಲ್ಲರ ನಾಡಿನ ಧ್ವಜವಾಯಿತು.
ಕರುನಾಡಿನ ಸೌಭಾಗ್ಯದ ಸಂಕೇತವಾದ ಈ ಧ್ವಜದ ಬಣ್ಣ ನಮ್ಮ ನಾಡಲ್ಲಿ ಎಲ್ಲೆಲ್ಲೂ ಇದೆ. ಹಕ್ಕಿಯಲ್ಲಿ, ಚಿಟ್ಟೆಯಲ್ಲಿ, ಹಣ್ಣಲ್ಲಿ, ಮಗುವಿನ ಕಣ್ಣಲ್ಲಿ, ಹೂವಲ್ಲಿ...ಎಲ್ಲೆಲ್ಲಿ ನೋಡಿದರೂ ನಾಡಬಾವುಟ.
ನಮ್ಮ ನಿಸರ್ಗದಲ್ಲಿನ ಈ ಬಣ್ಣಗಳನ್ನು ನೋಡುತ್ತಾ ನಾಡಿನ ಹಿರಿಮೆಯ ಬಗ್ಗೆ ಹೆಮ್ಮೆ ಪಡೋಣ ಮತ್ತು ಅದರ ಗರಿಮೆಯನ್ನು ಎಲ್ಲೆಡೆಯೂ ಸಾರೋಣ.ಅವಳಿ ಜವಳಿ.
ಐದು ಬೆರಳು ಒಗ್ಗೂಡಿದರೆ ಮುಷ್ಠಿ.
ಐದು ದಳದಲ್ಲೂ ಕನ್ನಡ ಬಣ್ಣದ ಸೃಷ್ಠಿ.ಏಳು ದಳ ಹೇಳುತ್ತಿದೆ "ಎದ್ದೇಳು ಕನ್ನಡಿಗ" ಎಂದು.ತೆರೆದಿದೆ ಮನೆ ಬಾ ಅತಿಥಿ...ನಾವು ಯಾರಿಗೂ ಕಮ್ಮಿ ಇಲ್ಲ.. ಕನ್ನಡಿಗರಂದ್ರೆ ಸುಮ್ನೆ ಅಲ್ಲ..ರಕ್ತಪುಷ್ಪ(ಬ್ಲಡ್ ಫ್ಲವರ್) ಕಣಕಣದಲ್ಲೂ ಕನ್ನಡತನವನ್ನು ಪ್ರತಿನಿಧಿಸುತ್ತಿದೆ.ಆಂಥೂರಿಯಮ್‌ನ ಬೊಗಸೆಯಲ್ಲೂ ಕನ್ನಡ ಬಣ್ಣ.ದಿಕ್ಕು ದಿಕ್ಕಲ್ಲೂ ಕನ್ನಡ ಕಹಳೆ ಮೊಳಗಿಸುವ ಹೂ.ದಾಸವಾಳದ ತಾಯ್ನಾಡ ಪ್ರೇಮ.ಕುಟುರನ ಕೊರಳಲ್ಲೂ ಕನ್ನಡ.. ಶಿರದ ಮೇಲೂ ಕನ್ನಡ.ಹಣ್ಣಲ್ಲೂ ಮಣ್ಣಿನ ಬಗ್ಗೆ ಅಭಿಮಾನ ಮೂಡಿದೆ.ಜೆಝಿಬಲ್ ಚಿಟ್ಟೆಯ ರೆಕ್ಕೆಯ ಮೇಲೆ ನಾಡಬಣ್ಣ.ಚಿಮ್ಮುತಿದೆ ಕನ್ನಡಮಕ್ಕಳಲ್ಲಿ ನಾಡನುಡಿಯ ಪ್ರೇಮ.ನೆರಳಾಗಿ, ದಾಹವನಿಂಗಿಸುವ ಜಲವಾಗಿ ಭಾರತ ಜನನಿಯ ತನುಜಾತೆ ನಮ್ಮನ್ನು ಸಲಹುತ್ತಿದ್ದಾಳೆ.ಕತ್ತಲ ಬಾಳಿಗೆ ಬೆಳಕಾಗಿರುವ ತಾಯಿ ಭುವನೇಶ್ವರಿಗೆ ನಮೋನಮಃ.

Thursday, October 22, 2009

ಹುಳುಮಾನವನ ಕೀಟಕೋಟಲೆಗಳು


ಈ ಬಾರಿಯ ಕೇರಳ ಪ್ರವಾಸ ತುಂಬ ಸುಸ್ತು ಮಾಡಿತ್ತು. ಕರ್ರಗೆ ಸೀದ ಬಾಳೆಕಾಯಿ ತರಹ ಆಗಿದ್ದೆ.
ಅಂಗಡಿಗೆ ಬಂದು ಉಸ್ಸಪ್ಪಾ... ಅನ್ನುವಷ್ಟರಲ್ಲಿ ವೆಂಕಟರಮಣನ ಫೋನ್..
"ಕೇರಳ ಬಿಡ್ತಾ?"
"ಅಂಗಡಿಗೆ ಬಂದಿದ್ದೀನಪ್ಪ"
"ಸ್ವಲ್ಪ ಅರ್ಜೆಂಟ್... ನಮ್ಮನೇಗೆ ಬರ್ತೀರಾ?"
ಅವರ ಮನೆ ಅಂಗಡಿಗೆ ತುಂಬಾ ಹತ್ತಿರ. ನಾಲ್ಕು ಹೆಜ್ಜೆಯಷ್ಟೇ.
"ಸುಸ್ತಾಗಿದ್ದೀನಿ. ನೀನೇ ಬಾ" ಅಂದೆ.
"ಇಲ್ಲ. ಅರ್ಜೆಂಟ್ ಬನ್ನಿ" ಅನ್ನುತ್ತಾ ಫೋನಿಟ್ಟ.
ಹೋದೆ.
"ನೋಡಿ ನಮ್ಮ ಸೋನು ಈ ಡಬ್ಬದಲ್ಲಿ ಹುಳುಗಳನ್ನು ಹಿಡಿದಿಟ್ಟಿದ್ದಾಳೆ" ಎನ್ನುತ್ತಾ ಡಬ್ಬವನ್ನು ಮುಂದಿಟ್ಟ.
ಅವನ ಮಗಳು ಸೋನು ಒಂದು ರಟ್ಟಿನ ಡಬ್ಬಿಯಲ್ಲಿ ಹುಳಗಳನ್ನಿಟ್ಟಿದ್ದಳು. ಅದರಲ್ಲಿ ಕೆಲವಾಗಲೇ ಗೊಟಕ್ ಅಂದಿದ್ದವು!
"ನೋಡಿ ಮಲ್ಲಿ ಅಂಕಲ್‌ಗೆ ಕೊಡ್ಬೇಕು ಅಂತ ತಂದಿಟ್ಟಿದ್ದಾಳೆ" ಎಂದು ವೆಂಕಟರಮಣ ಅಂದಾಗ ನಂಗೇ ಒಂಥರಾ ಆಯ್ತು.
"ಸೋನು ಹಾಗಿಲ್ಲಾ ಎಲ್ಲಾ ಹುಳ ಮನೆಗೆ ತರ‍್ಬೇಡ. ಅವು ಊಟ ಇಲ್ದೆ ಸಾಯ್ತವೆ. ಅದೆಲ್ಲಿದೆ ಅಂತ ನನಗೆ ಹೇಳು ಸಾಕು" ಎಂದು ಆ ಪುಟ್ಟ ಪೊರಿಗೆ ಹೇಳಿದೆ.
ಸೋನು ಒಬ್ಬಳೇ ಅಲ್ಲ, ಅವಳಣ್ಣ ಹರೀಶ, ಅವರಕ್ಕಪಕ್ಕದ ಮನೆಯ ಹುಡುಗರು ಸ್ಟ್ಯಾನ್ಲಿ, ವ್ರೆಸ್ಲಿ ಎಲ್ಲ ಸಿಕ್ಕಸಿಕ್ಕ ಹುಳುಗಳನ್ನು ನನ್ನ ಅಂಗಡಿಗೇ ತಂದುಬಿಡುತ್ತಾರೆ.
"ಸಹವಾಸದಿಂದ ಸನ್ಯಾಸಿ ಕೆಟ್ಟ" ಎಂಬ ಗಾದೆಮಾತು ಏನೇನು ಅರ್ಥ ಕೊಡುತ್ತದೋ ಗೊತ್ತಿಲ್ಲ. ಆದರೆ, ನನ್ನ ಸಂಪರ್ಕಕ್ಕೆ ಬಂದವರು ಮಾತ್ರ ಸ್ವಲ್ಪ ಸ್ವಲ್ಪ ಹಾಳಾಗಿದ್ದಾರೆ!
ಇದಕ್ಕೆಲ್ಲ ಕಾರಣ ಆ ದಿನ ನಡೆದ ಘಟನೆ...
* * * * *
ಆ ದಿನ ಯಾವುದೋ ಹಬ್ಬವಿತ್ತು.
ಅಂಗಡಿಯಲ್ಲಿದ್ದ ನನಗೆ ಫೋನ್ ಮಾಡಿ, "ಯಾವುದೋ ಹೊಸ ತರಹದ ಹುಳ ನಮ್ಮ ಮನೆ ಗೋಡೆ ಮೇಲಿದೆ ಬನ್ನಿ" ಎಂದು ಸ್ನೇಹಿತ ವೆಂಕಟರಮಣ ಕರೆದ.
ಇವರಿಗೆ ಹುಳು ನೋಡಿದ ತಕ್ಷಣ ನಾನೇ ಏಕೆ ನೆನಪಾಗುತ್ತೀನೋ?!
ಶಾಲೆಗೆ ರಜೆಯಿದ್ದುದರಿಂದ ಅವರ ಮನೆ ಬಳಿ ಮಕ್ಕಳ ಗುಂಪು ಸೇರಿತ್ತು. ವೆಂಕಟರಮಣನ ಮಕ್ಕಳು ಮತ್ತು ಅಕ್ಕಪಕ್ಕದ ಮನೆಯವರ ಮಕ್ಕಳು ಎಲ್ಲ ನನ್ನನ್ನು ಅನಕೊಂಡ ಹಾವು ಹಿಡಿಯಲು ಬಂದಿರುವನಂತೆ ಕುತೂಹಲದಿಂದ ನೋಡುತ್ತಿದ್ದರು. ಆ ಸಂದರ್ಭಕ್ಕೆ ತಕ್ಕಂತೆ ನಾನೂ ಸಹ ಒಂದು ಪ್ಲಾಸ್ಟಿಕ್ ಡಬ್ಬವನ್ನು ಹಿಡಿದುಕೊಂಡು ಹೋಗಿದ್ದೆ.


ಬಿಳಿ ಬಣ್ಣದ ಗೋಡೆ ಮೇಲೆ ಹಸಿರು ಹುಳು. ಕಬಂಧ ಬಾಹುಗಳಂತೆ ಅದಕ್ಕೆ ಹತ್ತಾರು ಕೈಗಳು ಮತ್ತು ಅದರ ಮೇಲೆಲ್ಲಾ ರೋಮಗಳು. ನೋಡಿದೊಡನೆಯೇ ನನ್ನ ರೋಮಗಳೂ ನಿಮಿರಿ ನಿಂತಿತು.
ಪ್ರತಿ ಕಂಬಳಿ ಹುಳಕ್ಕೂ ತನ್ನದೇ ಆದ ಆಹಾರ ಸಸ್ಯವಿರುತ್ತೆ. ಏಕಪತ್ನಿ ವ್ರತಸ್ಥರಂತೆ ಇವು ಏಕ ಸಸ್ಯ ವ್ರತಸ್ಥರು. ಈಗ ಇದರ ಆಹಾರ ಸಸ್ಯ ಯಾವುದು? ಅಲ್ಲೇ ಹತ್ತಿರದಲ್ಲಿ ಅಂದರೆ ಅವರ ಮನೆ ಬಾಗಿಲ ಪಕ್ಕದಲ್ಲಿ ಮನಿಪ್ಲಾಂಟ್ ಮತ್ತು ಪನ್ನೀರೆಲೆಯ ಗಿಡಗಳನ್ನು ಬೆಳೆಸಿದ್ದರು. ಆದರೆ ಆ ಗಿಡಗಳಲ್ಲಿ ಯಾವುದೇ ಹುಳಗಳಿರಲಿಲ್ಲ. ಆದರೂ ಪುಸ್ತಕದಲ್ಲಿ ಹುಡುಕಿದರಾಯ್ತು ಅಂದುಕೊಂಡು ಪ್ಲಾಸ್ಟಿಕ್ ಡಬ್ಬದಲ್ಲಿ ಈ ಎರಡೂ ಗಿಡಗಳ ಎರಡೆರಡು ಎಲೆಗಳನ್ನು ಹಾಕಿದೆ. ಒಂದು ಎಲೆ ಮೇಲೆ ಮೆಲ್ಲನೆ ಹುಳುವನ್ನು ಹತ್ತಿಸಿಕೊಂಡು ಮಕ್ಕಳಿಗೆಲ್ಲಾ ತೋರಿಸಿದೆ.
"ಇದನ್ನೇನ್ಮಾಡ್ತೀರ ಅಂಕಲ್?"
"ಫೋಟೋ ತೆಗೀತೀರಾ?"
ಅದು ಕಚ್ಚುತ್ತಾ?"...
ಟುಂಯ್.. ಟುಂಯ್.. ಎಂದು ಬಾಣ ಬಂದಂತೆ ಪ್ರಶ್ನೆಗಳು ತೂರಿ ಬಂದವು.
"ಈ ಹುಳು ಎಲೆ ತಿನ್ನುತ್ತೆ. ಆಮೇಲೆ ಗೂಡು ಕಟ್ಟಿಕೊಳ್ಳುತ್ತೆ. ಅದಕ್ಕೆ ಪ್ಯೂಪ ಅನ್ನುತ್ತಾರೆ. ಅದರಿಂದ ಚಿಟ್ಟೆ ಆಚೆ ಬರುತ್ತೆ. ಅದು ಆಚೆ ಬಂದಮೇಲೆ ನಿಮಗೆ ತೋರಿಸ್ತೀನಿ" ಎಂದು ಹೇಳಿ ಬಂದೆ.ಮನೆಗೆ ಹೋಗಿ ಚಿಟ್ಟೆಗಳ ಪುಸ್ತಕದಲ್ಲಿ ಹುಡುಕಿದೆ. ಸಿಕ್ಕಿತು. ಈ ಹುಳು Common Baron ಚಿಟ್ಟೆಯ ಕಂಬಳಿಹುಳು. ಇದರ ಆಹಾರ ಸಸ್ಯ ಮಾವು! ನನಗೆ ಅಚ್ಚರಿಯಾಯ್ತು. ಏಕೆಂದರೆ ಆ ಹುಳು ಸಿಕ್ಕ ಸ್ಥಳದ ಬಳಿ ಮಾವಿನ ಗಿಡವಿರಲಿಲ್ಲ.
ವೆಂಕಟರಮಣನಿಗೆ ಫೋನ್ ಮಾಡಿದೆ.
"ನಿಮ್ಮನೆ ಹತ್ರ ಮಾವಿನ ಗಿಡ ಇದ್ಯಾ?" ಎಂದು ಕೇಳಿದೆ.
"ನಮ್ಮನೆ ಮುಂದೆ ಕಾಲುದಾರಿ ಇದ್ಯಲ್ಲ. ಅದರಾಚೆ ಗಿಡಗಳು ಬೆಳ್ಸಿದ್ದೀವಲ್ಲ. ಅದ್ರಲ್ಲಿ ಮಾವಿನ ಗಿಡವೂ ಇದೆ. ಸ್ವಲ್ಪ ದೊಡ್ಡದಾಗಿದೆ" ಅಂದ.
ಆ ಗಿಡದಿಂದ ಇಳಿದು ಕಾಲುದಾರಿಯನ್ನು ದಾಟಿ, ಅದ್ರಲ್ಲೂ ಎಷ್ಟೊಂದು ಚಕ್ರಗಳು(ವಾಹನಗಳು) ಶೂ ಚಪ್ಪಲಿಗಳನ್ನು ತಪ್ಪಿಸಿಕೊಂಡು ಬಂದು ಮನೆಗೋಡೆ ಹತ್ತುವುದು ಈ ಹುಳು ಕೈಲಿ ಆಗುತ್ತಾ? ಸಾಧ್ಯವಾ?

"ಮಿಸ್ಸಿಂಗ್ ಲಿಂಕ್" ಹುಡುಕಲೇಬೇಕು ಎಂದು ಮತ್ತೆ ಅವರ ಮನೆ ಬಳಿ ಹೋದೆ. ಅಲ್ಲಿ ಸಿಕ್ಕಿತು ಈ ತಪ್ಪಿಹೋಗಿದ್ದ ಸಂಗತಿ!
ಹಬ್ಬ ಅಲ್ವಾ, ಅವರ ಮನೆ ಬಾಗಿಲಿಗೆ ಮಾವಿನ ತೋರಣ ಕಟ್ಟಿದ್ದರು. ಅದರಿಂದ ಬಂದ ಹುಳು ಗೋಡೆ ಹತ್ತಿರಬೇಕು.
"ಈ ಮಾವಿನ ಎಲೆ ಯಾವ ಗಿಡದ್ದು" ಎಂದು ವಿಚಾರಿಸಿದೆ.
"ಅಲ್ಲೇ ಇದೆಯಲ್ಲ ಆ ಗಿಡದ್ದು" ಅಂದರು.
ಆ ಗಿಡದ ಬಳಿ ಹೋಗಿ ಹುಡುಕಿದೆ. ಅಷ್ಟರಲ್ಲಿ ಹುಡುಗರೂ ನನಗೆ ಜೊತೆಯಾದರು. ಆ ಗಿಡದಲ್ಲಿ ಏಳೆಂಟು ಹುಳುಗಳಿದ್ದವು. ನಾನು ಎರಡನ್ನು ಮಾತ್ರ ಕೆಲಮಾವಿನ ಎಲೆಗಳೊಂದಿಗೆ ಡಬ್ಬದಲ್ಲಿ ಹಾಕಿ ತಂದೆ.
ಪ್ರತಿದಿನ ಅವಕ್ಕೆ ಫ್ರೆಶ್ ಮಾವಿನೆಲೆಯ ಮೃಷ್ಟಾನ್ನ ಭೋಜನ!
"ಅಂಕಲ್ ಚಿಟ್ಟೆ ಬಂತಾ?" ಎನ್ನುತ್ತಾ ಒಬ್ಬರಾದ ಮೇಲೊಬ್ಬರು ಹುಡುಗರು ಧಾಳಿಮಾಡತೊಡಗಿದರು.
"ಬಂದ ಮೇಲೆ ನಾನೇ ನಿಮ್ಮನ್ನು ಕರೀತೀನ್ರೋ. ಅದುವರೆಗೂ ಕಾಟ ಕೊಡ್ಬೇಡಿ" ಎಂದು ಹೇಳಿ ಸಾಗಹಾಕಿದೆ.


ಹುಳ ಪ್ಯೂಪ ಆಯ್ತು. ಒಂದು ವಾರಕ್ಕೆ ಚಿಟ್ಟೆ ಹೊರಕ್ಕೆ ಬಂತು. ಅದನ್ನು ಫೋಟೋ ತೆಗೆದೆ. ಡಬ್ಬದಲ್ಲಿಟ್ಟುಕೊಂಡು ತಂದು ಹುಡುಗರಿಗೆ ತೋರಿಸಿ ಹಾರಲು ಬಿಟ್ಟೆ. ಎಲ್ಲರೂ ತಮಗೇ ಹಾರಲು ಬಂದಂತೆ ಕುಣಿದಾಡಿದರು.
ಈಗ ಈ ಹುಡುಗರಲ್ಲೇ ಸ್ಪರ್ಧೆ ಏರ್ಪಟ್ಟಿದೆ! ಯಾವ ಆಕಾರದ ಎಂಥಹ ಹುಳು ಸಿಕ್ಕರೂ ತಂದು ನನ್ನ ಮುಂದಿಡುತ್ತಿದ್ದಾರೆ!
"ಹಾಗೆಲ್ಲ ತರಬೇಡ್ರೋ. ಅದೆಲ್ಲಿದೆ ಅಂತ ನನಗೆ ಬಂದು ಹೇಳಿ ಸಾಕು" ಎಂದು ಹೇಳಿ ಹೇಳಿ ಸಾಕಾಗಿದೆ.
ವೆಂಕಟರಮಣನ ಫೋನ್... "ನಮ್ಮ ಪಕ್ಕದ್ಮನೆಯವ್ರು ಹೇಳ್ತಿದ್ರು, ಈ ಎಲ್ಲ ಹುಳು, ಮಕ್ಕಳು, ಪಿಳ್ಳೆಗಳನ್ನೆಲ್ಲ ಅವರ ಅಂಗಡಿಗೆ ಕಳಿಸಿಬಿಡೋಣ ಅಂತ. ಹೆಂಗೆ...?"
ಹುಳುಗಳ ಶಾಪ... ಈ ಮಕ್ಕಳ ಅಮ್ಮಂದಿರ ಶಾಪ...
ಈಗ ನನ್ನ ಈ ಪಾಡನ್ನು ಪಡಿಪಾಟಲನ್ನು ಯಾರಿಗೆ ಹೇಳುವುದು...
ಓ my God see my ಪಾಡ್..!

Thursday, October 15, 2009

ಇದು ಸುಂದರ ಜೇಡ!


"ಸ್ಪೈಡರ್‌ಮ್ಯಾನ್... ಸ್ಪೈಡರ್‌ಮ್ಯಾನ್...ಸಿಂಪ್ಲಿ ನೈಬರ್‌ಹುಡ್ ಸ್ಪೈಡರ್‌ಮ್ಯಾನ್.."ತನ್ನ ಅಂಗೈಯಿಂದ ಸರ್ರಂತ ನೂಲನ್ನು ಹೊರ ಸೂಸುತ್ತಾ, ಎತ್ತರದ ಕಟ್ಟಡಕ್ಕೆ ಅದು ಅಂಟಿಕೊಳ್ಳುತ್ತಿದ್ದಂತೆ ಹಾರುತ್ತಾ ಸಾಗುವ ಈ ವಿಶಿಷ್ಟ ಪಾತ್ರವನ್ನು ನೋಡಿ ನಾವೆಲ್ಲಾ ಬೆರಗಾಗಿದ್ದೇವೆ.ಮ್ಯಾಕ್ರೋಲೆನ್ಸ್‌ನಲ್ಲಿ ಜೇಡವೊಂದನ್ನು ನೋಡುತ್ತಾ ಫೋಟೋ ತೆಗೆಯುವಾಗ ಇದೇ ಬೆರೆಗಾಯ್ತು. ನೋಡನೋಡುತ್ತಿದ್ದಂತೆಯೇ ತನ್ನ ದೇಹದ ಕೆಳಭಾಗದಿಂದ ಸುಯ್ಯನೇ ದಾರವನ್ನು ಹಾರಿಬಿಟ್ಟಿತು. ಅದರ ಹೊಟ್ಟೆಯಲ್ಲಿರುವ ರೇಷ್ಮೆಗ್ರಂಥಿ ಸ್ರವಿಸುವ ದ್ರವ ಗಾಳಿ ತಾಕಿದೊಡನೆ ಗಟ್ಟಿಯಾಗುತ್ತದೆ. ನುಗ್ಗಿ ಬಂದ ಆ ದಾರ ಸ್ವಲ್ಪ ದೂರದಲ್ಲಿದ್ದ ಗಿಡದ ಎಲೆಗೆ ತಗುಲಿತು. ತಕ್ಷಣ ಈ ಗಿಡದಿಂದ ಜೇಡ ದಾರದ ಮೂಲಕ ಸರ್ರನೆ ಸಾಗಿ ನಾನು ಕಣ್ಮುಚ್ಚಿ ಬಿಡುವುದರೊಳಗೆ ಆ ಗಿಡದ ಎಲೆಯ ಮೇಲಿತ್ತು.

ನೇಯುವುದರಲ್ಲಿ ಸಾಹಸಿಯಾದ ಜೇಡ ಪ್ರಕೃತಿಯ ನೇಕಾರನೇ ಸರಿ. ಇದರ ಬಲೆಯ ದಾರ ಕೂದಲೆಳೆಗಿಂತ ಸಣ್ಣದಿದ್ದರೂ ಅಷ್ಟೇ ಸಣ್ಣದಾದ ಉಕ್ಕಿನ ದಾರಕ್ಕಿಂತ ಗಟ್ಟಿ.


ಈ ಸಾಹಸಿ ಜೇಡ ಅನೇಕ ಸಾಹಸಿಗಳಿಗೆ ಪ್ರೇರಣೆಯೂ ನೀಡಿದೆ. ಬಹಳ ಹಿಂದೆ ಸ್ಕಾಟ್ಲೆಂಡಿನ ರಾಜ ರಾಬರ್ಟ್ ಬ್ರೂಸ್ ಇಂಗ್ಲೆಂಡಿನ ಮೇಲೆ ಧಾಳಿ ಮಾಡಿದನಂತೆ. ಒಂದಲ್ಲ ಎರಡಲ್ಲ.. ಆರು ಬಾರಿ ದಂಡೆತ್ತಿ ಹೋದರೂ ಗೆಲ್ಲಲಾಗಲಿಲ್ಲ. ಸಾಕಷ್ಟು ಜನ, ಶಕ್ತಿ ಕಳೆದುಕೊಂಡು ನಿರಾಶನಾಗಿ ಒಂದು ಕಡೆ ಕುಳಿತು ಆತ್ಮಾವಲೋಕನ ಮಾಡಿಕೊಳ್ಳುವಾಗ ಅವನು ಜೇಡವೊಂದನ್ನು ಗಮನಿಸಿದನಂತೆ. ಅದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಬಲೆ ಹೆಣೆಯುವ ಪ್ರಯತ್ನದಲ್ಲಿತ್ತು. ಮೊದಲ ಪ್ರಯತ್ನ.. ದಾರ ತುಂಡಾಯಿತು. ಎರಡು, ಮೂರು...ಊಹೂಂ... ಆರು ಬಾರಿ ಸೋಲಾಯಿತು. ಆದರೂ ಅದು ಅಷ್ಟೇ ಉತ್ಸಾಹದಿಂದ ಏಳನೇ ಬಾರಿ ಪ್ರಯತ್ನಿಸಿತು. ಗೆದ್ದಿತು. ಅದನ್ನು ನೋಡುತ್ತಾ ರಾಜನಿಗೂ ಉತ್ಸಾಹ ಮೂಡಿ ಬಂತು. ಮತ್ತೊಮ್ಮೆ ತನ್ನ ಶಕ್ತಿ, ಜನ, ಆಯುಧಗಳನ್ನೆಲ್ಲಾ ಸೇರಿಸಿಕೊಂಡ. ಯುದ್ಧದಲ್ಲಿ ಜಯಶಾಲಿಯೂ ಆದ.


ನನ್ನ ಸ್ನೇಹಿತ ಅಜಿತ್ ತನ್ನ ಮನೆ ಬಳಿ ಸಿಕ್ಕ ಮೂರ್ನಾಕು ಜೇಡಗಳನ್ನು ಒಂದು ಡಬ್ಬದಲ್ಲಿ ಹಾಕಿಟ್ಟಿದ್ದ. ಎರಡು ದಿನ ಬಿಟ್ಟು ನೋಡಿದಾಗ ಒಂದೇ ಜೇಡವಿದೆ! ಇದು ಹೇಗಾಯ್ತು ಎಂದು ಗಮನಿಸಿದಾಗ ಮಿಕ್ಕ ಜೇಡಗಳನ್ನು ಈ ಜೇಡ ಕಬಳಿಸಿ ಅವಶೇಷಗಳನ್ನು ಉಳಿಸಿದೆ. ಜೇಡ ತನ್ನ ಬಲೆಯಲ್ಲಿ ಬಿದ್ದ ಕೀಟಗಳನ್ನು ತಿನ್ನುವುದಲ್ಲದೆ ತನ್ನ ಕುಲದವರನ್ನೂ ಬಿಡುವುದಿಲ್ಲ. ಈ ಸ್ವಜಾತಿ ಭಕ್ಷಣೆಯ ಗುಣದಿಂದಲೇ ಇವುಗಳಲ್ಲಿ ಒಟ್ಟು ಕುಟುಂಬ ಎಂಬುದಿಲ್ಲ.


ಇದರ ದೇಹ ಎರಡು ಭಾಗಗಳನ್ನು ಒಳಗೊಂಡಿದೆ. ಈ ಎರಡನ್ನೂ ಸೇರಿಸುವ ಕುತ್ತಿಗೆಯಂತಹ ಅಂಗವಿರುತ್ತದೆ. ಬೇರೆ ಕೀಟಗಳಿಗೆ ಆರು ಕಾಲುಗಳಿದ್ದರೆ ಜೇಡಕ್ಕೆ ಎಂಟು ಕಾಲುಗಳು. ಕೀಟಗಳಿಗಿರುವಂತಹ ತಲೆಯ ಮೇಲಿನ ಸ್ಪರ್ಶಾಂಗ ಜೇಡಕ್ಕಿಲ್ಲ. ಎರಡು ಸಾಲುಗಳಲ್ಲಿರುವ ಎಂಟು ಕಣ್ಣುಗಳು ಇದರ ವೈಶಿಷ್ಟ್ಯ. ಗಂಡಿಗಿಂತ ಹೆಣ್ಣು ಜೇಡ ಗಾತ್ರದಲ್ಲಿ ದೊಡ್ಡದು ಮತ್ತು ಸಾಮಾನ್ಯವಾಗಿ ಹೆಣ್ಣು ಜೇಡವೇ ಬಲೆಯನ್ನು ನೇಯುತ್ತದೆ. ಕೀಟಗಳಿಗೆ ಅಂಟುವ ಜೇಡನ ಬಲೆ ಜೇಡನಿಗೆ ಮಾತ್ರ ಅಂಟದು.೩೫೦ ಮಿಲಿಯನ್ ವರ್ಷಗಳಿಂದಲೂ ಇರುವ ಈ ಜೇಡದ ಬಗ್ಗೆ ಗ್ರೀಕ್ ದೇಶದ ದಂತಕಥೆಯೊಂದಿದೆ. ಒಂದಾನೊಂದು ಕಾಲದಲ್ಲಿ "ಅರಾಕ್ನಿ" ಎಂಬ ಸುಂದರ ತರುಣಿ ರೇಷ್ಮೆ ಎಳೆಗಳಿಂದ ಬಟ್ಟೆಗಳನ್ನು ನೇಯುವುದರಲ್ಲಿ ಪ್ರವೀಣೆಯಂತೆ. ತನ್ನ ಕಲೆಯ ಬಗ್ಗೆ ಅಹಂಕಾರದಿಂದಿದ್ದ ಅವಳನ್ನು ಜ್ಞಾನದೇವತೆ ಅಥೀನೆ ಶಪಿಸಿದಳಂತೆ. ಈ ಶಾಪದಿಂದ ಅರಾಕ್ನಿ ಜೇಡವಾದಳು. ಈಕೆಯ ಹೆಸರಿಂದ ಜೇಡಗಳಿರುವ ವರ್ಗಕ್ಕೆ ಅರಾಕ್ನೈಡ್ ಅನ್ನುವರು. ಜೇಡಗಳ ಕುರಿತಾದ ಅಧ್ಯಯನಕ್ಕೆ ಅರಾಕ್ನಾಲಜಿ ಎನ್ನುತ್ತಾರೆ.ಜೇಡಗಳ ಪ್ರಣಯವೇ ವಿಶೇಷ. ಅದರ ಮಿಲನವೆಂದರೆ ಗಂಡು ಜೇಡದ ಮರಣವೆಂದೇ ಅರ್ಥ. ಗಂಡು ಜೇಡವು ಮಿಲನದ ನಂತರ ಹೆಣ್ಣು ಜೇಡದಿಂದ ಪಾರಾಗಲು ಓಡುತ್ತದೆ. ಇಲ್ಲದಿದ್ದರೆ ಹೆಣ್ಣುಜೇಡಕ್ಕೆ ಅದು ಆಹಾರವಾಗುತ್ತದೆ. ಕೆಲವೊಮ್ಮೆ ಗಂಡು ಹೆಣ್ಣಿಗೆ ಆಹಾರ ತಂದುಕೊಟ್ಟು ನಂತರ ಸೇರುವುದುಂಟು. ಆದರೂ ಸರಸವೆಂದರೆ ಸಾವೇ!ಹೆಣ್ಣು ಜೇಡ ಒಂದು ಬಾರಿಗೆ ನೂರಾರು ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಗಳನ್ನಿಡುವುದಕ್ಕಾಗಿಯೇ ಅದು ರೇಷ್ಮೆಯ ಚೀಲವನ್ನು ತಯಾರಿಸುತ್ತದೆ.


ಎಲ್ಲಾ ಜೇಡಗಳಲ್ಲೂ ವಿಷವಿರುತ್ತದೆ. ಆದರೆ ಮಾನವನ ಚರ್ಮವನ್ನು ಅವುಗಳ ಕೊಂಡಿ ಬೇಧಿಸಲು ಅಸಾಧ್ಯ. ಕೆಲವು ದೊಡ್ಡ ಜೇಡಗಳು ಮಾತ್ರ ಮಾನವನಿಗೆ ಅಪಾಯಕಾರಿ. ಜೇಡ ತನ್ನ ಬಲೆಗೆ ಬಿದ್ದ ಕೀಟವನ್ನು ವಿಷಪೂರಿತವಾದ ತನ್ನ ಕೊಂಡಿಯಿಂದ ಚುಚ್ಚಿ ಸಾಯಿಸುತ್ತದೆ. ಇದರ ಬಾಯಿ ದ್ರವ ಆಹಾರವನ್ನು ಸೇವಿಸಲು ಮಾತ್ರ ಸಮರ್ಥವಾಗಿರುವುದರಿಂದ ಸತ್ತ ಕೀಟದ ಮೈಯೊಳಗಿನ ದ್ರವವನ್ನು ಹೀರಿ ಹೊರ ಮೈಯನ್ನು ಹಾಗೇ ಬಿಡುತ್ತದೆ.


ನ್ಯೂಯಾರ್ಕ್‌ನ ಕಮ್ಮಿಂಗ್ ಎಂಬಲ್ಲಿ ೧೮೯೮ನೇ ಇಸವಿಯಲ್ಲಿ ಒಂದು ವಿಚಿತ್ರ ಘಟನೆ ನಡೆಯಿತು. ಚಾರ್ಲ್ಸ್ ಎಂಬುವವರು ತಮ್ಮ ಉಗ್ರಾಣವನ್ನು ಸ್ವಚ್ಛಗೊಳಿಸುವಾಗ ಒಂದು ಮೂಲೆಯಲ್ಲಿ ಜೇಡವೊಂದು ಕಾಣಿಸಿತು. ಅದನ್ನು ಸಾಯಿಸಲು ಹೋದ ಅವರು ಅದು ಮೊಟ್ಟೆಯಿಟ್ಟಿರುವುದನ್ನು ಕಂಡು ಮನಸ್ಸು ಬದಲಾಯಿಸಿ ವಾಪಸಾದರು. ಮರುದಿನ ಹೋಗಿ ನೋಡಿದಾಗ ಅವರಿಗೆ ಆಘಾತ ಕಾದಿತ್ತು. ಜೇಡ ಮೊಟ್ಟೆಯಿಟ್ಟಿದ್ದ ಸ್ಥಳದ ಬಳಿ ಹಾವೊಂದು ಮಲಗಿತ್ತು. ಜೇಡ ಪರದಾಡುತ್ತಿತ್ತು. ಆದರೂ ಇವರು ಏನೂ ಮಾಡದೆ ವಾಪಸಾದರು. ಕುತೂಹಲದಿಂದ ಬೆಳಿಗ್ಗೆ ಹೋಗಿ ನೋಡಿದರೆ ಹಾವು ಸತ್ತಿದೆ! ಹತ್ತಿರದಿಂದ ಪರಿಶೀಲಿಸಿದಾಗ ಜೇಡ ತನ್ನ ನೂಲಿನೆಳೆಯನ್ನು ಹಾವಿನ ಬಾಯಿ ಕುತ್ತಿಗೆ ಎಲ್ಲಾ ಸುತ್ತಿಬಿಟ್ಟಿದೆ. ಈ ಸಾಹಸಿ ಜೇಡನನ್ನು ಮನಸ್ಸಿನಲ್ಲೇ ಅವರು ಅಭಿನಂದಿಸಿದರು.


ಇಂಥಹ ಜೇಡ ಕೀಟಗಳನ್ನು ಭಕ್ಷಿಸುತ್ತಾ ತಾನೂ ಆಹಾರವಾಗುತ್ತಾ ಜೀವಜಾಲದ ಅಮೂಲ್ಯ ಕೊಂಡಿಯಾಗಿದೆ. ಇದುವರೆಗೂ ಭಾರತದಲ್ಲಿ ೧೫೦೦ ಜಾತಿಯ ಜೇಡಗಳನ್ನು ಗುರುತಿಸಿದ್ದಾರೆ.


ಎಲ್ಲೆಲ್ಲೂ ನೀನೇ... ಎಲ್ಲೆಲ್ಲೂ ನೀನೇ... ಅನ್ನುವಂತೆ ಬೇಡ ಬೇಡ ಅಂದರೂ ಜೇಡ ಎಲ್ಲೆಲ್ಲೂ ಕಾಣಿಸುತ್ತದೆ!ಮರದ ಮೇಲೆ, ತೊಗಟೆ ಮೇಲೆ, ಎಲೆ ಕೆಳಗೆ, ಕೊಂಬೆಗಳಲ್ಲಿ, ಹೂಗಳ ಮೇಲೆ, ಕಲ್ಲಿನ ಕೆಳಗೆ, ಮುರಿದುಬಿದ್ದ ಮರದಡಿ, ಕಸಕಡ್ಡಿಗಳಲ್ಲಿ, ನೀರಬಳಿ, ಹುಲ್ಲಿನಲ್ಲಿ, ಪೊದೆಯಲ್ಲಿ... ಇಷ್ಟೆಲ್ಲ ಏಕೆ ನಮ್ಮ ಮನೆಗಳಲ್ಲೂ ಇವೆ. ಇದನ್ನೆಲ್ಲ ಓದಿದ ಮೇಲೆ ಮನದೊಳಗೂ... ಬಲೆ ಹೆಣೆದ ಜೇಡ!


ಅಷ್ಟಪಾದ

ಸರ್ವಾಂತರ್ಯಾಮಿ ಜೇಡ

ಕೆಂಪುಬಣ್ಣದ ಜೇಡ

Thursday, October 8, 2009

ವಿಶ್ವರೂಪಿ ಅಂಚೆ ಚಿತ್ರಣ

"ನಮ್ಮೆಲ್ಲರ ಅಕ್ಕರೆಯ ಅಂಚೆಯಣ್ಣ ಅಥವಾ ’ಪೋಸ್ಟ್ ಮ್ಯಾನ್’ ಬರೇ ಒಂದು ಟಪಾಲು ಬಟವಾಡೆಯ ವೃತ್ತಿಯವನಾಗಿರುವುದಿಲ್ಲ. ಅವನು ಮನುಷ್ಯರಿಂದ ಮನುಷ್ಯರಿಗೆ ಅದೇನನ್ನೋ ದಾಟಿಸುವ ಮಾರುವೇಷದ ದೇವರಾಗಿರುತ್ತಾನೆ. ಸಣ್ಣ ಊರುಗಳಲ್ಲಂತೂ ಅವನು ಪ್ರತಿ ಮನೆಯ ಅಂತರಂಗದ ಸದಸ್ಯ. ಎಸ್ಸೆಸ್ಸೆಲ್ಸಿ ರಿಸಲ್ಟು, ಹೆರಿಗೆ, ಮದುವೆ, ಕೋರ್ಟು ವಾರಂಟು, ಸಾವು, ರೋಗ, ರುಜಿನ ಎಲ್ಲವನ್ನೂ ’ನಿರಪೇಕ್ಷ ಯೋಗ’ದಲ್ಲಿ ಹಂಚಿಕೊಂಡು ಮನೆಯಿಂದ ಮನೆಗೆ ದಾಟಿಸುತ್ತಲೇ ಇರುವ, ಬೆವರೊರೆಸಿಕೊಂಡು ಓಡುತ್ತಾ ಕಾಗದಗಳ ಕಟ್ಟನ್ನು ಕ್ಯಾರಿಯರಿಗೆ ಅಥವಾ ಹ್ಯಾಂಡಲ್ಲಿಗೆ ಸಿಕ್ಕಿಸಿಕೊಂಡು ಸೈಕಲ್ ಏರುತ್ತಿರುವಾಗಲೇ ಯಾರನ್ನೋ ಕಂಡು ಫಕ್ಕನೆ ನಿಲ್ಲಿಸಿ ಕಾಗದ ಹುಡುಕಿ ಕೊಡುವ ನೆಂಟ. ಸಮಾಜದ ಒಳಬಾಳು ಅಂತ ಕರೀತೇವಲ್ಲ ಅಂಥ ಒಳಬಾಳಿನ ಚಲನಶೀಲ ಸದಸ್ಯ."

-ಜಯಂತ್ ಕಾಯ್ಕಿಣಿ.


ನವದೆಹಲಿಯಲ್ಲಿ ೩೦-೧೨-೧೯೮೨ ರಂದು ನಡೆದ ರಾಷ್ಟ್ರೀಯ ಅಂಚೆ ಚೀಟಿ ಪ್ರದರ್ಶನದಲ್ಲಿ ಬಿಡುಗಡೆಯಾದ ಈ ವಿಶೇಷ ಅಂಚೆಚೀಟಿಯಲ್ಲಿ ಭಾರತದ ಸ್ವತಂತ್ರ ಪೂರ್ವ ಮತ್ತು ಸ್ವತಂತ್ರ ನಂತರದ ಎರಡೂ ಅಂಚೆಚೀಟಿಗಳ ಚಿತ್ರಗಳಿವೆ.

ಅಕ್ಟೋಬರ್ ೯ ವಿಶ್ವ ಅಂಚೆ ದಿನ. ಅಂಚೆ ಚೀಟಿ ನಮ್ಮ ಸಂಸ್ಕೃತಿ, ಇತಿಹಾಸ, ಬೌಗೋಳಿಕ, ಜೀವವೈವಿಧ್ಯ, ವಾಸ್ತುಶಿಲ್ಪ, ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವದ ಪ್ರತಿನಿಧಿ. ನನ್ನ ಸಂಗ್ರಹದಿಂದ ಆಯ್ದು ಕೆಲವು ಅಂಚೆಚೀಟಿಗಳು ಮತ್ತು ಚಿತ್ರಗಳನ್ನು ಜೋಡಿಯಾಗಿ ನೀಡುವ ಪ್ರಯತ್ನ ಮಾಡಿರುವೆ.

ನಮ್ಮ ನಾಡಿನ ಕೀರ್ತಿಯನ್ನು ಉನ್ನತವಾಗಿಟ್ಟಿರುವ ಗೊಮ್ಮಟನ ಮೂರ್ತಿ ಅಂಚೆಚೀಟಿಯಲ್ಲಿ ಕಾಣಿಸಿಕೊಂಡದ್ದು ೯-೨-೧೯೮೧ ರಂದು.


ವನ್ಯಜೀವಿ ಸಂರಕ್ಷಣೆ ಎಂಬ ವಿಷಯವಿಟ್ಟುಕೊಂಡು ೭-೧೦-೧೯೬೩ ರಲ್ಲಿ ಐದು ಅಂಚೆಚೀಟಿಗಳನ್ನು ಬಿಡುಗಡೆಮಾಡಿದರು. ಅವುಗಳಲ್ಲಿ ನಮ್ಮ ಗಜರಾಜನೂ ಒಬ್ಬ.ಉಳುವಾಯೋಗಿಯಾದ ರೈತನ ಚಿತ್ರ ಅಂಚೆ ಚೀಟಿಯಲ್ಲಿ ಬಂದದ್ದು ೩೦-೧೨-೧೯೫೯ರಂದು.


ಮಂಗೋಲಿಯಾ ದೇಶದ ಈ ಅಂಚೆಚೀಟಿಯಲ್ಲಿ ಅಣಬೆ ಬೆಳೆದಿದೆ.ಹೈದರಾಬಾದಿನ ಹೊರಭಾಗದಲ್ಲಿರುವ ಗೋಲ್ಕೊಂಡ ಕೋಟೆಯಲ್ಲಿ ಒಂದು ತುದಿಯಲ್ಲಿ ನಿಂತು ಚಪ್ಪಾಳೆ ತಟ್ಟಿದರೆ ಇನ್ನೊಂದು ತುದಿಯಲ್ಲಿ ಕೇಳಿಸುತ್ತದೆ. ಈ ಕೋಟೆಯಲ್ಲಿನ ನೀರು ಸರಬರಾಜು ಮತ್ತು ಗಾಳಿ ಬೆಳಕಿನ ವ್ಯವಸ್ಥೆಯನ್ನು ನೋಡಲಾದರೂ ಒಮ್ಮೆ ಅಲ್ಲಿಗೆ ಹೋಗಿ ಬರಬೇಕು. ಈ ಅಂಚೆಚೀಟಿ ೩೧-೧೨-೨೦೦೨ ರಂದು ಬಿಡುಗಡೆಯಾಗಿದೆ.
ತಿರುಪತಿಯಿಂದ ೧೨ ಕಿಮೀ ದೂರದಲ್ಲಿರುವ ಚಂದ್ರಗಿರಿಕೋಟೆ ಒಂದು ಕಾಲದಲ್ಲಿ ವಿಜಯನಗರದ ಅರಸರ ರಾಜಧಾನಿಯಾಗಿತ್ತು. ಈಗ ಪ್ರತಿದಿನ ಸಂಜೆ ಶಬ್ದ ಮತ್ತು ಬೆಳಕಿನ ವ್ಯವಸ್ಥೆಯನ್ನು ಅಳವಡಿಸಿ ಪ್ರವಾಸಿಗರು ರಾಜರ ದಿನಗಳನ್ನು ಮೆಲುಕು ಹಾಕುವಂತೆ ಮಾಡಿದ್ದಾರೆ. ಇದರ ಅಂಚೆಚೀಟಿ ಬಿಡುಗಡೆಯಾದದ್ದು ೩೧-೧೨-೨೦೦೨ ರಂದು.
ಭಾರತ ಮತ್ತು ಜಪಾನ್ ರಾಜತಾಂತ್ರಿಕ ಸಂಬಂಧದ ೫೦ನೇ ವಾರ್ಷಿಕೋತ್ಸವದ ಸವಿನೆನಪಿಗೆ ೨೬-೪-೨೦೦೨ ರಂದು ಈ ಅಂಚೆಚೀಟಿ ಬಿಡುಗಡೆ ಮಾಡಿದ್ದಾರೆ. ನಮ್ಮ ಕೇರಳದ ಕಥಕ್ಕಳಿ ಮತ್ತು ಜಪಾನಿನ ಪುರಾತನ ನಾಟಕ ಪ್ರಕಾರವಾದ ಕಬುಕಿ ಒಂದೆಡೆ ಸೇರಿಸಿರುವರು. ಭಾಷೆ ಬೇರೆಯಾದರೂ ಭಾವವೊಂದೇ.
ಬೋರಿಬಂದರಿನಿಂದ ಥಾನೆವರೆಗೂ ೩೪ ಕಿಮೀ ದೂರವನ್ನು ಮೊಟ್ಟಮೊದಲ ಭಾರತೀಯ ರೈಲು ಬಿಸಿಹಬೆಯುಗುಳುತ್ತಾ ಪಯಣಿಸಿದ್ದು ೧೬-೪-೧೮೫೩ ರಂದು. ಅಂದು ಶುರುವಾದ ಪಯಣ ಬಲು ದೂರ ಸಾಗಿದೆ. ಈಗ ೭೦೦೦ ಸ್ಟೇಷನ್‌ಗಳು, ೬೩೦೦೦ ಕಿಮೀ ಉದ್ದದ ಈ ಮಾರ್ಗವು ೧೬ ಲಕ್ಷ ಜನರಿಗೆ ಅನ್ನದಾತ. ಭಾರತೀಯ ರೈಲ್ವೆಯ ೧೫೦ನೇ ವರ್ಷದ ವಾರ್ಷಿಕೋತ್ಸವದ ಸವಿನೆನಪಿಗಾಗಿ ೧೬-೪-೨೦೦೨ ರಂದು ಆ ಹಳೆಯ ದಿನಗಳನ್ನು ನೆನಪಿಸುವ ಈ ಅಂಚೆ ಚೀಟಿ ಬಿಡುಗಡೆಯಾಯಿತು.
ಟಾನಿ ಕ್ಯಾಸ್ಟರ್ ಎಂಬ ಈ ಚಿಟ್ಟೆ ಅಂಚಿಚೀಟಿಯಾದದ್ದು ೩೦-೪-೨೦೦೦ ರಂದು.ಅಮೆರಿಕ ಅಂಚೆಚೀಟಿಯಲ್ಲಿ ಗೂಬೆ ರಾರಾಜಿಸುತ್ತಿದೆ.
ಹಾರುತ್ತಿರುವ ಬೆಳ್ಳಕ್ಕಿಯ ಚಿತ್ರ ಅಂಚೆಚೀಟಿಯಲ್ಲಿ ಬಂದದ್ದು ೧೫-೭-೧೯೭೯ ರಂದು.ಶುಭಾಶಯ ಪತ್ರಗಳ ವಿನಿಮಯ ಬಹುಕಾಲದಿಂದ ನಡೆದು ಬಂದಿದೆ. ದೀಪಾವಳಿ, ಹೋಳಿ, ಪೊಂಗಲ್, ವಿಜಯದಶಮಿ, ಈದ್, ಕ್ರಿಸ್‌ಮಸ್, ಹೊಸವರ್ಷ, ರಕ್ಷಾಬಂಧನ, ಪ್ರೇಮಿಗಳದಿನ... ಶುಭಾಶಯ ಪತ್ರವನ್ನು ನೆನಪಿಸುವ ಹಾರುತ್ತಿರುವ ಚಿಟ್ಟೆಗಳ ಅಂಚೆಚೀಟಿ ಪ್ರಕಟವಾದದ್ದು ೧೮-೧೨-೨೦೦೧ ರಂದು.
ತಿರುಪತಿಯ ತಿರುಮಲ ದೇವಸ್ಥಾನದ ಬಂಗಾರದ ಗೋಪುರವನ್ನು "ಆನಂದ ನಿಲಯಮ್ ವಿಮಾನಂ" ಎನ್ನುವರು. ೭೦೦ ವರ್ಷಗಳಷ್ಟು ಹಳೆಯದಾದ ಇದರ ಸವಿನೆನಪಿಗಾಗಿ ೧೧-೧೦-೨೦೦೨ ರಂದು ಅಂಚೆಚೀಟಿ ಬಿಡುಗಡೆಯಾಗಿದೆ.
೨೦೦೧-೨೦೦೨ ಪುಸ್ತಕಗಳ ವರ್ಷ. "ಎಲ್ಲರಿಗೂ ಪುಸ್ತಕ ಮತ್ತು ಎಲ್ಲವೂ ಪುಸ್ತಕಕ್ಕಾಗಿ". ಇದರ ಸವಿನೆನಪಿಗೆ ೨೮-೧-೨೦೦೨ ರಂದು ಈ ಅಂಚೆಚೀಟಿ ಬಿಡುಗಡೆಯಾಯಿತು.
"ಪಕ್ಷಿ ಪಿತಾಮಹ" ಡಾ.ಸಲೀಂ ಅಲಿ ಅವರ ನೂರನೇ ಜನ್ಮದಿನದ ನೆನಪಿಗೆ ೧೨ ನವೆಂಬರ್ ೧೯೯೬ ರಂದು ಈ ಅಂಚೆ ಚೀಟಿ ಬಿಡುಗಡೆಯಾಯಿತು. ಅವರೊಂದಿಗೆ ಪೇಯಿಂಟೆಡ್ ಸ್ಟಾರ್ಕ್ ಹಕ್ಕಿಗಳೂ ಇವೆ.
೧೯೭೨ನೇ ಇಸವಿಯಲ್ಲಿ ಮ್ಯೂನಿಚ್‌ನಲ್ಲಿ ನಡೆದ ೨೦ನೇ ಒಲಂಪಿಕ್ ಗೇಮ್ಸ್ ನೆನಪಿಸಲು ಅದೇ ವರ್ಷ ಆಗಸ್ಟ್ ೧೦ರಂದು ಈ ಅಂಚೆಚೀಟಿ ಬಿಡುಗಡೆಯಾಯಿತು."ಮೈಸೂರು ಹುಲಿ" ಟಿಪ್ಪುಸುಲ್ತಾನನ ಅಂಚೆಚೀಟಿ ಬಿಡುಗಡೆಯಾದದ್ದು ೧೫-೭-೧೯೭೪ ರಂದು.
ಕಡಲ ತೀರದ ಭಾರ್ಗವ ಡಾ.ಕೋಟ ಶಿವರಾಮ ಕಾರಂತರದ್ದು ಹತ್ತು ನೂರು ಮುಖಗಳು. ಒಂದು ಜನಾಂಗವನ್ನೇ ಪ್ರೇರೇಪಿಸಿದಂತಹ ವ್ಯಕ್ತಿತ್ವ. ಅಂಚೆ ಇಲಾಖೆ ೧೦-೧೦-೨೦೦೩ ರಂದು ಅವರ ಭಾವಚಿತ್ರವಿರುವ ಅಂಚೆಚೀಟಿ ಬಿಡುಗಡೆಮಾಡಿ ಅವರಿಗೆ ಗೌರವ ಸೂಚಿಸಿದೆ. ಈ ಅಕ್ಟೋಬರ್ ೧೦ ಅವರ ಜನ್ಮದಿನ. ನಾವೆಲ್ಲರೂ ಅವರನ್ನು ನೆನೆಯುತ್ತಾ ಗೌರವ ಅರ್ಪಿಸೋಣ.