Tuesday, June 5, 2012

ಹದಿನೆಂಟು ಕುಲ ಚಿಹ್ನೆಗಳಿಂದ ಕೂಡಿರುವ ದೇಶಮುದ್ರೆ ಗಂಟೆಬಟ್ಟಲು


 ಶಿಡ್ಲಘಟ್ಟ ತಾಲ್ಲೂಕಿನ ಬೈಯಪ್ಪನಹಳ್ಳಿಯ ಚನ್ನಪ್ಪ ಹದಿನೆಂಟು ಕುಲ ಚಿಹ್ನೆಗಳಿಂದ ಕೂಡಿರುವ ಬಸವ, ಲಿಂಗಮುದ್ರೆಯಿರುವ ದೇಶಮುದ್ರೆ ಗಂಟೆಬಟ್ಟಲನ್ನು ಪ್ರದರ್ಶಿಸುತ್ತಿರುವುದು.

ದೇಶದ ಮೂಲನಿವಾಸಿಗಳಾಗಿ ದ್ರಾವಿಡ ಸಂಸ್ಕೃತಿಯನ್ನು ಹೊಂದಿದವರು ಮತ್ತು ಶಿವನನ್ನು ತಮ್ಮ ಆರಾಧ್ಯ ದೈವವನ್ನಾಗಿ ಪಡೆದುಕೊಂಡು ಆದಿಶೈವಭಕ್ತರಾಗಿ ಬದುಕುತ್ತಿರುವವರು ಛಲವಾದಿ ಸಮುದಾಯದವರು. ಪುರಾತನ ಜನಾಂಗವಾದ ಛಲವಾದಿಗಳು ಇಂದಿಗೂ ಶಿವಭಕ್ತರಾಗಿ ಜೀವಿಸುತ್ತಿದ್ದು, ಆಚಾರ ನಡವಳಿಕೆಗಳಲ್ಲಿ ಶೈವ ಸಂಪ್ರದಾಯವನ್ನು ಬಿಡದೆ ಅನುಸರಿಸುತ್ತಿದ್ದಾರೆ. ಅದರ ಸ್ಪಷ್ಟ ಕುರುಹುಗಳು ಇಂದಿಗೂ ಅವರಲ್ಲಿ ಉಳಿದಿವೆ. ಹಿಂದೆ ಈ ದಲಿತ ಜನಾಂಗದವರು ಬಸವ, ಲಿಂಗಮುದ್ರೆಯಿರುವ ಗಂಟೆಬಟ್ಟಲನ್ನು, ಕಹಳೆ, ಸೂರ್ಯವಾದನ ಮತ್ತು ಚಂದ್ರವಾದನಗಳನ್ನು ನುಡಿಸಲು ಹಕ್ಕುದಾರಾಗಿದ್ದರಿಂದ ವಿವಿಧ ಶೈವ ಸಂಪ್ರದಾಯಗಳಲ್ಲಿ ಭಾಗಿಗಳಾಗುತ್ತಿದ್ದರು. ಕಾಲಕ್ರಮದಲ್ಲಿ ಈ ಸಂಪ್ರದಾಯಗಳು ಕಡಿಮೆಯಾದಂತೆ ಬಸವ, ಲಿಂಗಮುದ್ರೆಯಿರುವ ಗಂಟೆಬಟ್ಟಲುಗಳು ವಿರಳವಾದವು. ತಾಲ್ಲೂಕಿನ ಬೈಯಪ್ಪನಹಳ್ಳಿಯ ಚನ್ನಪ್ಪ ಇನ್ನೂ ತಮ್ಮ ಸಂಪ್ರದಾಯದ ಚಿಹ್ನೆಗಳು ಮತ್ತು ಕುರುಹಾದ ಬಸವ, ಲಿಂಗಮುದ್ರೆಯಿರುವ ಗಂಟೆಬಟ್ಟಲನ್ನು ಕಾಪಾಡಿಕೊಂಡು ಬಂದಿದ್ದಾರೆ. ‘೧೯೩೯ ರಲ್ಲಿ ಪಂಚಲೋಹದಿಂದ ತಯಾರಿಸಲಾದ ಸುಮಾರು ೧೦ ಕೆಜಿಗೂ ಹೆಚ್ಚು ತೂಕದ ಬಸವ, ಲಿಂಗಮುದ್ರೆಯಿರುವ ಗಂಟೆಬಟ್ಟಲನ್ನು ಬುರುಡುಗುಂಟೆಯ ವೀರಶೈವ ಹಿರಿಯ ನಾಗಣ್ಣ ಶೆಟ್ಟರು ಎಲರ ಒಳಿತಿಗಾಗಿ ಮಾಡಿಸಿಕೊಟ್ಟಿರುವುದಾಗಿ ಇದರ ಮೇಲೆ ಕೆತ್ತಲಾಗಿದೆ. ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದಿರುವ ಇದನ್ನು ನಮ್ಮ ಜನಾಂಗದ ಶುಭ ಕಾರ್ಯಗಳಲ್ಲಿ ಮೊದಲು ಪೂಜಿಸುತ್ತೇವೆ. ನಮ್ಮ ಜಿಲ್ಲೆಯಲ್ಲಿ ಅಲ್ಲಲ್ಲಿ ಕೆಲವರು ಇನ್ನೂ ಬಸವ, ಲಿಂಗಮುದ್ರೆಯಿರುವ ಗಂಟೆಬಟ್ಟಲನ್ನು ಉಳಿಸಿಕೊಂಡಿದ್ದಾರೆ’ ಎಂದು ಬೈಯಪ್ಪನಹಳ್ಳಿಯ ಚನ್ನಪ್ಪ ತಿಳಿಸಿದರು. 
ಶಿವನ ಮುಂದೆ ಬಸವ ಹಾಗೂ ಚಿಹ್ನೆಗಳಿಂದ ಕೂಡಿರುವ ದೇಶಮುದ್ರೆ ಗಂಟೆಬಟ್ಟಲು.

  ‘ಛಲವಾದಿ ಜನಾಂಗದವರು ಹದಿನೆಂಟು ಪಣಕ್ಕೆ ಸೇರಿದ ಶೆಟ್ಟಿಪಟ್ಟಣಸ್ಥರು. ಸಂಪ್ರದಾಯಸ್ಥ ವೀರಶೈವರೂ ಶೆಟ್ಟಿ ಬಣಜಿಗರಾದಿಯಾಗಿ ಅವರಲ್ಲಿನ ಜನನ ಮರಣ ಮತ್ತು ಎಲ್ಲಾ ಶುಭಕಾರ್ಯಗಳಿಗೆ ಛಲವಾದಿಯನ್ನು ಕರೆಯುತ್ತಾರೆ. ಅವರು ಲಿಂಗ, ಬಸವ ಸಮೇತದ ಗಂಟೆಬಟ್ಟಲಿನೊಡನೆ ಬರುತ್ತಾರೆ. ಅವರಿಂದ ಅವುಗಳ ಪ್ರಥಮ ಪೂಜೆ ಮಾಡಿಸುವ ರೂಢಿಯಿದೆ. ಅಲ್ಲದೆ ಮೆರವಣಿಗೆ, ಸ್ಮಶಾನಯಾತ್ರೆಗೂ ಗಂಟೆಬಟ್ಟಲಿನ ಛಲವಾದಿಯೂ ಮುಂದೆ ಹೋಗುವರು. ಹದಿನೆಂಟು ಪಣಗಳಾದ ಬಣಜಿಗ, ಒಕ್ಕಲಿಗ, ಗಾಣಿಗ, ರಂಗಾರೆ, ಲಾಡ, ಗುಜರಾತಿ, ಕಾಮಾಟಿ, ಜೈನ ಅಥವಾ ಕೋಮಟಿ, ಕುರುಬ, ಕುಂಬಾರ, ಅಗಸ, ಬೆಸ್ತ, ಪದ್ಮಸಾಲಿ, ನಾಯಿಂದ, ಉಪ್ಪಾರ, ಚಿತ್ರಗಾರ, ಗೊಲ್ಲ, ಛಲವಾದಿ ಎಂಬ ಪಣ ಸಮಾಜದ ಪಟ್ಟಿಯಲ್ಲಿ ಬಣಜಿಗರು ಹದಿನೆಂಟು ಪಣದ ಕುಲದವರ ನಾಯಕರಾಗಿರುತ್ತಾರೆ. ಆ ಕುಲದವರ ಕುಲ ಚಿಹ್ನೆಗಳಾದ ನೆಗಿಲು. ತಕ್ಕಡಿ, ಚಕ್ರ, ಕತ್ತರಿ, ಗುದ್ದಿ, ಕತ್ತಿ ಮುಂತಾದ ಹದಿನೆಂಟು ಕುಲ ಚಿಹ್ನೆಗಳಿಂದ ಕೂಡಿರುವ ಗಂಟೆ ಬಟ್ಟಲನ್ನು ‘ದೇಶಮುದ್ರೆ ಗಂಟೆಬಟ್ಟಲು’ ಎನ್ನುವರು. ಈ ಕುಲದವರ ಶುಭ ಕಾರ್ಯಕ್ರಮಗಳಲ್ಲಿ ಇದನ್ನು ಹೊರುವ ಅಧಿಕಾರವು ಛಲವಾದಿ ಕುಲಸ್ಥರದಾಗಿರುತ್ತದೆ. ಛಲವಾದಿಗಳು ಇಂದಿಗೂ ಈ ಕುಲಾಚಾರವನ್ನು ಹಲವು ಕಡೆ ನಡೆಸುತ್ತಾ ಬರುತ್ತಿದ್ದಾರೆ. ಪುರಾಣದಲ್ಲಿ ಶಿವನನ್ನು ಅವಮಾನಗಳಿಸಲು ದಕ್ಷಬ್ರಹ್ಮನು ಯಾಗ ಮಾಡಿ ಶಿವನನ್ನು ಆಹ್ವಾನಿಸಲಿಲ್ಲ. ಆಗ ತನ್ನ ತಂದೆಯಿಂದ ತನ್ನ ಗಂಡನು ಅವಮಾನಹೊಂದುವುದನ್ನು ಸಹಿಸದ ದಾಕ್ಷಾಯಿಣಿಯು ಯಾಗದ ಅಗ್ನಿಗೆ ಆಹುತಿಯಾಗಿ ಪ್ರಾಣವನ್ನು ತ್ಯಜಿಸಿದಾಗ ಶಿವನ ಕೋಪಕ್ಕೆ ಜನಿಸಿದ್ದು ಛಲದಂಕಮಲ್ಲ, ಮಹಾಕಾಳಿ ಮತ್ತು ವೀರಭದ್ರ. ಇವರು ದಕ್ಷಬ್ರಹ್ಮನನ್ನು ಸಂಹರಿಸಿದರು. ಯಜ್ಞಕೊಂಡದಲ್ಲಿ ಅಸುನೀಗಿದ ತನ್ನ ಪತ್ನಿಯ ಎಲ್ಲಾ ಕರ್ಮಕಾರ್ಯಗಳನ್ನು ಶಿವನ ಅಣತಿಯಂತೆ ಛಲದಂಕಮಲ್ಲನು ಮಾಡಿದನು. ಇದರಿಂದ ತೃಪ್ತಗೊಂಡ ಶಿವನು ನಂದಿಯ ಮುಂಭಾಗದಲ್ಲಿ ಗಂಟೆಬಟ್ಟಲು, ಲಿಂಗಮುದ್ರೆಗಳನ್ನು ಸ್ಥಾಪಿಸಿ ಅವುಗಳನ್ನು ಛಲದಂಕಮಲ್ಲನ ವಂಶಜರು ಹಿಡಿಯಬೇಕೆಂದು ಆಶೀರ್ವದಿಸಿದನು ಎಂದು ಪುರಾಣದಿಂದ ತಿಳಿದುಬರುತ್ತದೆ. ಇಂದಿಗೂ ಆ ವಂಶಸ್ಥರು ಈ ಕಾರ್ಯವನ್ನು ಮಾಡುತ್ತಿದ್ದಾರೆ. ಪುರಾಣ ಪ್ರಸಿದ್ಧ ಛಲದಂಕಮಲ್ಲನ ವಂಶಸ್ಥರನ್ನು ಛಲವಾದಿ ಜನಾಂಗವೆಂದು ಕರೆಯುವರು. ಈ ಜನಾಂಗದವರು ಆಂಧ್ರಪ್ರದೇಶ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಕೇರಳ ಮುಂತಾದ ರಾಜ್ಯಗಳಲ್ಲಿ ನೆಲೆಸಿದ್ದಾರೆ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯಲ್ಲಿ ಈ ಜನಾಂಗದವರನ್ನು ಹಲವು ಹೆಸರುಗಳಿಂದ ಕರೆಯುತ್ತಾರೆ. ಸಲಾದೋಳ್ಳು, ಚಲುವಾದುಲು, ಮಾಲೋಳ್ಳು, ಹೊಲೆಯರು, ಬಲಗೈಯವರು, ಆದಿಕರ್ನಾಟಕ, ಆದಿದ್ರಾವಿಡ-ಮುಂತಾದ ಹೆಸರುಗಳಿಂದ ಪ್ರಾದೇಶಿಕವಾಗಿ ಕರೆಯುತ್ತಾರೆ. ಆದರೆ ಎಲ್ಲಾ ಹೊಲೆಯರು ಛಲವಾದಿಗಳಲ್ಲ, ಆದರೆ ಛಲವಾದಿಗಳೆಲ್ಲ ಹೊಲೆಯರೆ ಆಗಿದ್ದಾರೆ. ಇವರನ್ನು ಪ್ರಾದೇಶಿಕವಾಗಿ ’ಸಲಾದೋಳ್ಳು’ಎಂದು ಕರೆಯುವುದು ರೂಢಿ ಯಾಗಿದೆ’ ಎನ್ನುತ್ತಾರೆ ಛಲವಾದಿಗಳ ಬಗ್ಗೆ ಸಂಶೋಧನೆ ಮಾಡಿ ಡಾಕ್ಟರೇಟ್ ಗಳಿಸಿರುವ ಉಪನ್ಯಾಸಕ ಡಾ.ಜಿ.ಶ್ರೀನಿವಾಸಯ್ಯ.