Friday, September 9, 2011

ಬಾತುಕೋಳಿಗಳಿಂದ ಬದುಕು


ಶಿಡ್ಲಘಟ್ಟದ ಅಮ್ಮನಕೆರೆಯಲ್ಲಿ ಬಾತು ಮರಿಗಳನ್ನು ಸಾಕುತ್ತಿರುವ ಸುಗಟೂರಿನ ಕೃಷ್ಣಪ್ಪ.

ಶಿಡ್ಲಘಟ್ಟದ ಹೊರವಲಯದಲ್ಲಿರುವ ಅಮ್ಮನಕೆರೆಗೆ ಈಚೆಗೆ ಬಿದ್ದ ಮಳೆಯಿಂದಾಗಿ ನೀರು ಬಂದಿದೆ. ಅದರೊಂದಿಗೆ ನೂರಾರು ಬಾತುಗಳು ಕೂಡ ಆಗಮಿಸಿದೆ. ಆದರೆ ಬಾತುಗಳು ಎಲ್ಲೋ ದೂರದ ಹಿಮಪ್ರದೇಶಗಳಿಂದ ಬಂದವಲ್ಲ. ಇಲ್ಲಿನವರೇ ಮಾಂಸಕ್ಕಾಗಿ ಸಾಕಲು ಬಿಟ್ಟಿರುವುದು.
“ಬಾ..ಬಾ..ಬಾಬಾ...ಬಾ...” ಎಂದು ಲಯಬದ್ದವಾಗಿ ಕೂಗಿದೊಡನೆಯೇ ಪ್ರಭಾತ್ ಪೇರಿಯಲ್ಲಿ ಪಾಲ್ಗೊಂಡ ಶಾಲಾ ಮಕ್ಕಳು ಮಾರ್ಚ್ ಫಾಸ್ಟ್ ಮಾಡುವ ಹಾಗೆ ಒಂದರ ಹಿಂದೊಂದು ತಮ್ಮ ಜಲಪಾದಗಳಲ್ಲಿ ಪುಟ್ಟಪುಟ್ಟ ಹೆಜ್ಜೆಯಿಡುತ್ತಾ ಮಾಲಿಕನ ಹತ್ತಿರ ಧಾವಿಸುತ್ತವೆ.
ಕೋಲಾರದ ಬಳಿಯ ಸುಗಟೂರಿನಿಂದ ಆಗಮಿಸಿರುವ ೨೫ ಜನರ ಕುಟುಂಬ ಕೆರೆಯ ಅಂಚಿನಲ್ಲಿ ಟೆಂಟ್ ಹಾಕಿಕೊಂಡು ಬೀಡು ಬಿಟ್ಟಿದೆ. ಇವರ ಕಾಯಕ ಬಾತುಗಳನ್ನು ಮೇಯಿಸುವುದು. ಕೆಲ ವರ್ತಕರು ಮರಿಗಳನ್ನು ಮತ್ತು ಅವಕ್ಕೆ ಆಹಾರವನ್ನು ಇವರಿಗೆ ಒದಗಿಸುತ್ತಾರೆ. ಅವುಗಳನ್ನು ಸಾಕಿ ಬೆಳೆಸಿ ವಾಪಸ್ ನೀಡಿದಾಗ ಕೆಜಿಗೆ ಇಂತಿಷ್ಟು ಎಂಬಂತೆ ಹಣ ನೀಡುತ್ತಾರೆ.



"ನಮ್ಮಲ್ಲಿ ಆರು ದಿನಗಳ ೨೫೦ ಬಾತು ಮರಿಗಳಿವೆ ಮತ್ತು ಒಂದು ತಿಂಗಳು ವಯಸ್ಸಿನ ೨೦೦ ಮರಿಗಳಿವೆ. ಇವಕ್ಕೆ ರಾಗಿ, ರಾಗಿ ಹಿಟ್ಟು, ರೇಷ್ಮೆ ಹುಳವನ್ನು ಆಹಾರವಾಗಿ ನೀಡುತ್ತೇವೆ. ನಮಗೆ ಮರಿಗಳನ್ನು ಒದಗಿಸಿರುವ ಮಾಲೀಕರು ಮೇವನ್ನೂ ಕೊಟ್ಟಿದ್ದಾರೆ. ಸುಮಾರು ಒಂದೂವರೆ ತಿಂಗಳು ಮೇಯಿಸಿದ ಮೇಲೆ ಇವು ಒಂದೊಂದೂ ಒಂದೂ ಮುಕ್ಕಾಲು ಕೇಜಿ ತೂಗುತ್ತವೆ. ಕೇಜಿಗೆ ಇದರ ಮಾಂಸ ರೂ.೯೦ ಕ್ಕೆ ಮಾರಾಟವಾಗುತ್ತದೆ. ನಮಗೆ ಸಾಕುವುದಕ್ಕೆ ಕೂಲಿ ಸಿಗುತ್ತದೆ" ಎಂದು ಸುಗಟೂರಿನ ಕೃಷ್ಣಪ್ಪ ಹೇಳುತ್ತಾರೆ.



"ಬಾತುಗಳೆಲ್ಲ ನೀರಲ್ಲಿ ಗುಂಪಾಗಿ ಈಜುವಾಗ ನೀರೆಲ್ಲ ಹಳದಿ ಬಣ್ಣವಾಗಿರುವಂತೆ, ಚಂದದ ಚಿತ್ತಾರದಂತೆ ಕೆರೆಯ ಕಟ್ಟೆಯ ಮೇಲಿಂದ ಕಾಣುತ್ತದೆ. ಮುದ್ದಾದ ಬಾತುಮರಿಗಳನ್ನು ನೋಡುವುದೇ ಚೆನ್ನ. ಇವುಗಳ ಆಯಸ್ಸು ಅತ್ಯಂತ ಕಡಿಮೆ ಎಂದು ತಿಳಿದು ಮನಸ್ಸಿಗೆ ಬೇಸರವುಂಟಾಗುತ್ತದೆ. ಕೆರೆಯ ಏರಿಯ ಮೇಲೆ ವಾಹನದಲ್ಲಿ ಹೋಗುವಾಗ ಇವುಗಳನ್ನು ನೋಡದೇ ನಾನು ಹೋಗುವುದೇ ಇಲ್ಲ" ಎನ್ನುತ್ತಾರೆ ಉಪನ್ಯಾಸಕ ಅಜಿತ್ ಕೌಂಡಿನ್ಯ.

3 comments:

sunaath said...

ಏನ್ ಮುದ್ದಾದ ಬಾತು ಮರಿ ಇದೆಯಲ್ರೀ! ಫೋಟೋ ನೋಡಿ ತುಂಬಾ ತುಂಬಾ ಸಂತೋಷ ಆಯ್ತು.

sunaath said...

ನೀವು ತೆಗೆದ ಚಿತ್ರವನ್ನು ನಿಮ್ಮ ಅನುಮತಿ ಇಲ್ಲದೆ desktopಗೆ ಹಾಕಿಕೊಂಡಿದ್ದೇನೆ. ದಯವಿಟ್ಟು ಕ್ಷಮಿಸಿ.

ಮನದಾಳದಿಂದ............ said...

ಮಲ್ಲಿ ಸರ್,
ಮುದ್ದಾದ ಬಾತುಮರಿಗಳ ಚಿತ್ರ. ಮಾಹಿತಿಗೆ ಧನ್ಯವಾದಗಳು.