Thursday, August 22, 2013

ಸಾವಿನ ನೆರಳು...

 ಮೊಮ್ಮಕ್ಕಳಿಗೆ ತಾನು ವಾಯುಸೇನೆಯಲ್ಲಿದ್ದಾಗ ಪಡೆದ ಪದಕಗಳನ್ನು ತೋರಿಸುತ್ತಿರುವ ಶಿಡ್ಲಘಟ್ಟದ ಎಸ್.ವಿ.ಅಯ್ಯರ್.

"ಪಾಕಿಸ್ತಾನದ ಸರ್ಗೋದಾ ಬಳಿ ಭೂಮಿಯೊಳಗೆ ವಾಯು ನಿಲ್ದಾಣ ಇರುವುದು ಗೊತ್ತಾಯಿತು. ಅದಕ್ಕೆ  ಒಂದೇ  ದ್ವಾರವಿತ್ತು. ಬಾಂಬರ್ ಫೈಟರ್ ವಿಮಾನಗಳು ಒಳ ಮತ್ತು ಹೊರ ಹೋಗುತ್ತಿದ್ದುದು ಗೊತ್ತೇ ಆಗುತ್ತಿರಲಿಲ್ಲ. ಆಗ ವೈಮಾನಿಕ ದಳದ ಗಾಂಧಿ ಎಂಬ ಧೀರ ಅಧಿಕಾರಿ ತಮ್ಮ ಬಾಂಬರ್ ವಿಮಾನವನ್ನು ಅದರೊಳಗೆ ನುಗ್ಗಿಸಿಬಿಟ್ಟರು. ಮರುಕ್ಷಣವೇ ಎಲ್ಲವೂ ಬ್ಲಾಸ್ಟ್ ಆಯಿತು. ಗಾಂಧಿ ಹುತಾತ್ಮರಾದರು. ಪಾಕಿಸ್ತಾನದ ಜಂಘಾಬಲವೇ ಕುಸಿಯಿತು. ಇದೆಲ್ಲವೂ ನಡೆದದ್ದು ೧೯೬೫ರಲ್ಲಿ. ಆ ದಿನವನ್ನು ನೆನಪಿಸಿಕೊಂಡರೆ ಈಗಲೂ ರೋಮಾಂಚನವಾಗುತ್ತದೆ’. ಈ ದೃಶ್ಯ ಸಿನಿಮಾದ್ದಲ್ಲ, ಪುಸ್ತಕದಲ್ಲಿ ಓದಿದ್ದೂ ಅಲ್ಲ. ಈ ಘಟನೆ ವಿವರಿಸಿ, ಘಟನೆಗೆ ಸಾಕ್ಷಿಯಾದವರು ಶಿಡ್ಲಘಟ್ಟದ ಎಸ್.ವಿ.ಅಯ್ಯರ್. ಅವರ ಪೂರ್ತಿ ಹೆಸರು ಸುಬ್ರಮಣ್ಯಂ ವೆಂಕಟೇಶ ಅಯ್ಯರ್. ೧೯೬೫ ರ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ’ಏರ್ ಡಿಫೆನ್ಸ್ ಸೇಫ್ಟಿ ಆರ್ಗನೈಸೇಷನ್” ನಿಯಂತ್ರಣಾಧಿಕಾರಿಯಾಗಿದ್ದ  ಅವರ ಕಣ್ಣೆದುರೇ ಹಲವಾರು ಅಧಿಕಾರಿಗಳು, ಸೈನಿಕರು ಹುತಾತ್ಮರಾದರು. ’ಆಗಿನ ಯುದ್ಧದ ದೃಶ್ಯ ನೆನಪಿಸಿಕೊಂಡರೆ, ಸ್ನೇಹಿತರ ಜೊತೆಗಿನ ಭಾವನಾತ್ಮಕ ಸಂಬಂಧ, ಪ್ರೀತಿ ಮತ್ತು ವಿಶ್ವಾಸ ಎಲ್ಲವೂ ಕಣ್ಣೆದುರಿಗೆ ಬರುತ್ತವೆ. ಅವರು ನಗುನಗುತ್ತಲೇ ದೇಶಕ್ಕಾಗಿ ಪ್ರಾಣವನ್ನು ಅರ್ಪಿಸುತ್ತಿದ್ದರು" ಎನ್ನುವಾಗ ಅವರ ಕಣ್ಣಂಚಿನಲ್ಲಿ ನೀರು ಜಿನುಗುತ್ತದೆ.

 ಶಿಡ್ಲಘಟ್ಟದ ಎಸ್.ವಿ.ಅಯ್ಯರ್ ಅವರು ವಾಯುಸೇನೆಯಲ್ಲಿದ್ದಾಗ ಪಡೆದ ಪದಕಗಳು.

  ಸುಮಾರು ೭೧ ರ ವಯೋಮಾನದ ಶಿಡ್ಲಘಟ್ಟದ ಎಸ್.ವಿ.ಅಯ್ಯರ್ ೧೯೬೩ ರಿಂದ ೧೯೭೮ ರವರೆಗೆ ಹದಿನೈದು ವರ್ಷಗಳ ಕಾಲ ದೇಶದ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದವರು. ಪಾಕಿಸ್ತಾನ ಮತ್ತು ಬಾಂಗ್ಲಾ ವಿಮೋಚನಾ ಯುದ್ಧಗಳಲ್ಲಿ ಭಾಗವಹಿಸಿದವರು. ಪ್ರತಿಷ್ಠಿತ ಜನರಲ್ ಸರ್ವಿಸ್ ಇಂಡಿಯಾ ಪದಕ, ಲಾಂಗ್ ಸರ್ವೀಸ್ ಪದಕ, ಸೈನ್ಯ ಸೇವಾ ಪದಕ, ೧೯೬೫ರ ಪಾಕಿಸ್ತಾನ ’ವಾರ್’ ಪದಕ, ಸಂಗ್ರಾಂ ಪದಕ, ಪಶ್ಚಿಮಿಸ್ಟಾರ್ ಪದಕ, ಬಾಂಗ್ಲಾ ಲಿಬರೇಷನ್ ವಾರ್ ಪದಕ, ಸ್ಕೌಟ್ಸ್ ಮತ್ತು ಗೈಡ್ಸ್ ಪದಕ ಸೇರಿದಂತೆ ಹಲವಾರು ಪದಕಗಳು ಅವರ ಸಾಧನೆಯ ದ್ಯೋತಕಗಳಾಗಿವೆ.
 ಪಾಲಮ್ ಏರ್‌ಬೇಸ್‌ನ ಏರ್ ಟ್ರಾಫಿಕ್ ಕಂಟ್ರೋಲ್‌ನಲ್ಲಿ ಕೆಲಸವನ್ನು ಆರಂಭಿಸಿದ ಅವರು ಬರ್ನಾಲ, ಜಮ್ಮು, ಶಿಲಾಂಗ್, ಗುಜರಾತ್‌ನ ಜಾಮ್‌ನಗರ್, ಅಸ್ಸಾಮ್‌ನ ಡಿಂಜಾನ್, ಜೋರಾತ್, ತೇಜ್‌ಪುರ್ ಮುಂತಾದ ಕಡೆ ಕಾರ್ಯನಿರ್ವಹಿಸಿದರು. ತರಬೇತಿಗೆಂದು ಪ್ರಪಂಚದ ಅತ್ಯಂತ ಶೀತಲ ಪ್ರದೇಶ ರಶಿಯಾದ ಸೈಬೀರಿಯಾ, ಯೂರೋಪ್‌ನ ಫ್ರಾನ್ಸ್, ಜರ್ಮನಿ ಹಾಗೂ ಇಂಗ್ಲೆಂಡ್‌ಗೆ ಕೂಡ ಹೋಗಿ ಬಂದಿದ್ದಾರೆ.
 "ಬರ್ನಾಲಾದಲ್ಲಿ ನಾವೆಲ್ಲರೂ ಭೂಮಿಯೊಳಗಿನ ಬಂಕರ್ ಒಳಗಡೆ ಅಡಗಿ ಕುಳಿತಿದ್ದೆವು. ಅದು ಹೇಗೋ ಪಾಕಿಸ್ತಾನದವರಿಗೆ ಗೊತ್ತಾಗಿಬಿಟ್ಟಿತು.  ಪಾಕಿಸ್ತಾನದವರು ೧೫  ಫೈಟರ್ಸ್ ವೈಮಾನಿಕ ಧಾಳಿ ನಡೆಸಿದವು. ಅವರ ಬಾಂಬ್ ಧಾಳಿಯಿಂದ ನಾನು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದೆ. ಆದರೆ ನಮ್ಮ ರೇಡಾರ್ ಸ್ಟೇಷನ್‌ಗೆ ಹಾನಿಯಾಯಿತು. ಯುದ್ಧ ಭೂಮಿಯಲ್ಲಿ ವಿಮಾನ ಹತ್ತಿದ ಪೈಲೆಟ್‌ಗೆ ಪುನಃ ನೆಲಕ್ಕೆ ಹಿಂತಿರುಗುವ ನಂಬಿಕೆ ಇರುವುದಿಲ್ಲ. ಆದರೆ ಪ್ರಾಣಾಪಾಯದ ಬಗ್ಗೆ ಕಿಂಚಿತ್ತೂ ಭಯವಿಲ್ಲದೆ ಪೈಲಟ್‌ಗಳು ವಿಮಾವೇರಿಕೊಂಡು ಯುದ್ಧಭೂಮಿಗೆ ಹೊರಟುಬಿಡುತ್ತಿದ್ದರು’ ಎಂದು ತಮ್ಮ ನೆನಪುಗಳನ್ನು ಹಂಚಿಕೊಂಡರು.

ಆಗ್ರಾದಲ್ಲಿ ಪೆರೇಡ್‌ಗೆಂದು ಸಿದ್ಧರಾಗಿದ್ದ ಎಸ್.ವಿ.ಅಯ್ಯರ್.

 ’ಯುದ್ಧಭೂಮಿಯತ್ತ ಯಾವ ವಿಮಾನ ಹಾರಬೇಕೆಂದು ನಿರ್ಧರಿಸುವ ನಿಯಂತ್ರಣಾ ಕಾರ್ಯಪಡೆಯಲ್ಲಿ ನಾನಿದ್ದೆ. ಯುದ್ಧಕ್ಕೆ ಹೊರಟ ಪೈಲೆಟ್‌ಗಳನ್ನು ಬೀಳ್ಕೊಡಲು ಬರುತ್ತಿದ್ದ ಅವರ ಕುಟುಂಬದವರ ಕಂಗಳಲ್ಲಿ ನೀರು ತುಂಬಿರುತ್ತಿತ್ತು. ಮುಖದಲ್ಲಿ ಆತಂಕದ ಭಾವ ಇರುತ್ತಿತ್ತು. ಸತ್ತಂತೆ ಬದುಕುವುದಕ್ಕಿಂತ ದೇಶಕ್ಕಾಗಿ ಹೋರಾಡುತ್ತಾ ಸಾಯುವುದರಲ್ಲಿ ಅರ್ಥವಿದೆ. ಸಾವನ್ನು ಅಂಗೈಯಲ್ಲಿ ಇರಿಸಿಕೊಂಡು ದೇಶಕ್ಕಾಗಿ ಹೋರಾಡುವವರು ನಾವು ಎಂದು ಮುಗುಳ್ನಕ್ಕು ಪೈಲಟ್‌ಗಳು ವಿಮಾನವನ್ನೇರುತ್ತಿದ್ದರು. ಆಪ್ತರ ಕ್ಷೇಮಕ್ಕಾಗಿ ಕುಟುಂಬದವರು ನಿಂತಲ್ಲೇ ಪ್ರಾರ್ಥಿಸುತ್ತಿದ್ದರು’ ಎಂದು ಅವರು ಹೇಳಿದರು.
’ನನ್ನ ಮೊದಲು ಮಗಳು ಬರ್ನಾಲದಲ್ಲಿ ಜನಿಸಿದರೆ, ಎರಡನೆಯವಳು ಜಮ್ಮುವಿನಲ್ಲಿ ಮತ್ತು ಮೂರನೆಯವಳು ಮೇಘಾಲಯದ ಶಿಲ್ಲಾಂಗ್‌ನಲ್ಲಿ ಜನಿಸಿದಳು. ೧೯೭೮ರಲ್ಲಿ ಶಿಡ್ಲಘಟ್ಟಕ್ಕೆ ಬಂದ ಮೇಲೆ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡೆ. ಆನೂರಿನಲ್ಲಿ ಯುವ ಸಮ್ಮೇಳನ ಆಯೋಜಿಸಿದೆ. ಕನ್ನಡಪರ ಸಂಘಟನೆಗಳ ಮೂಲಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದ್ದಲ್ಲದೆ, ಪತ್ರಕರ್ತನಾಗಿಯೂ ಕಾರ್ಯನಿರ್ವಹಿಸಿದೆ. ಪಟ್ಟಣಕ್ಕಾಗಿ ಕೋರ್ಟ್, ಕಾಲೇಜು ಮುಂತಾದ ಅಗತ್ಯಗಳಿಗಾಗಿ ಮುಖಂಡರ ಜೊತೆಗೆ ಓಡಾಡಿದೆ. ಈಚೆಗೆ ಶಿಕ್ಷಣ ಸಂಸ್ಥೆಯವರೊಬ್ಬರು ಕರೆದಾಗ, ನನ್ನ ಯುದ್ಧ ದಿನಗಳ ಅನುಭವಗಳನ್ನು ಮಕ್ಕಳೊಂದಿಗೆ ಹಂಚಿಕೊಂಡೆ. ದೇಶದ ಸೇನೆಯಲ್ಲಿ ದುಡಿಯುವುದು ಶ್ರೇಷ್ಠವಾದದ್ದು. ನೀವೂ ಸೇರಿ ಎಂದು ಅವರಿಗೆ ಮಾರ್ಗದರ್ಶನ ಮಾಡಿದೆ’ ಎಂದು ಅವರು ನೆನಪುಗಳ ಸುರುಳಿ ಬಿಚ್ಚಿಡುತ್ತಾ ಮುಂದುವರಿದರು........

2 comments:

sunaath said...

ನಮ್ಮ ಸೈನಿಕರ ಬಗೆಗೆ ಹೆಮ್ಮೆ ಎನಿಸುತ್ತಿದೆ. ಲೇಖನಕ್ಕಾಗಿ ಧನ್ಯವಾದಗಳು.

balasubramanya said...

ನಮ್ಮ ದೇಶಕ್ಕೆ ಮಹತ್ವದ ಸೇವೆ ಸಲ್ಲಿಸಿ ಸಮಾಜ ಸೇವೆ ಮಾಡುವ ಇವರ ಕಾರ್ಯ ಅನುಕರಣೀಯ, ಶ್ರೀಯುತ ಶಿಡ್ಲಘಟ್ಟದ ಎಸ್.ವಿ.ಅಯ್ಯರ್. ರವರಿಗೆ ನನ್ನ ಗೌರವ ಪೂರ್ವಕ ನಮನಗಳು