Monday, June 24, 2013

ಪೊಲೀಸ್ ಅಧಿಕಾರಿಗೆ ಗಾಂಧಿ ಟೋಪಿ


ಶಿಡ್ಲಘಟ್ಟ ತಾಲ್ಲೂಕಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಚೌಡಸಂದ್ರದ ನಾರಾಯಣಪ್ಪ.

"ಶಿಡ್ಲಘಟ್ಟ ತಾಲ್ಲೂಕು ಕಂಬದಹಳ್ಳಿಯ ಮುನಿಶಾಮಪ್ಪ ಎಲ್ಲರೂ ನೋಡುತ್ತಿರುವಾಗಲೇ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ರ ತಲೆಯ ಮೇಲಿದ್ದ ಹ್ಯಾಟ್ ತೆಗೆದು ಗಾಂಧಿ ಟೋಪಿಯನ್ನು ಇಟ್ಟುಬಿಟ್ಟರು. ತಕ್ಷಣವೇ ಮಹಾತ್ಮ ಗಾಂಧೀಜಿಕಿ ಜೈ, ಸ್ವತಂತ್ರ್ಯ ಭಾರತ್ ಕೀ ಜೈ ಎಂಬ ಘೋಷಣೆಗಳು ಮೊಳಗಿದವು. ಮರುಕ್ಷಣವೇ ಪೊಲೀಸರು ಲಾಠೀ ಚಾರ್ಜ್ ಅಂದರು. ಸತ್ಯಾಗ್ರಹ ಮಾಡುತ್ತಿದ್ದವರನ್ನು ಚೆನ್ನಾಗಿ ಬಡಿದರು" ಎಂದು ತಮ್ಮ ಸ್ವಾತಂತ್ರ್ಯದ ಹೋರಾಟದ ನೆನಪುಗಳನ್ನು ತೆರೆದಿಟ್ಟರು ೯೩ ವರ್ಷದ  ಚೌಡಸಂದ್ರದ ನಾರಾಯಣಪ್ಪ.
 ‘ರೈಲ್ವೆ ಹಳಿಗಳ ಬಳಿ ಇದ್ದ ಕಲ್ಲುಗಳನ್ನು ಕೆಲವರು ಪೊಲೀಸರೆಡೆಗೆ ತೂರತೊಡಗಿದರು. ಫೈರ್ ಅಂದರು ಪೊಲೀಸರು. ಒಮ್ಮೆಗೇ ಢಮಾರ್ ಢಮಾರ್ ಎಂಬ ದೊಡ್ಡದಾದ ಸದ್ದು. ಸಬ್‌ಇನ್ಸ್‌ಪೆಕ್ಟರ್ ಸಿಡಿಸಿದ ಗುಂಡಿಗೆ ಇಬ್ಬರು ಸತ್ತರು. ನಮ್ಮನ್ನೆಲ್ಲಾ ಹಿಡಿದು ಜೈಲಿಗೆ ಹಾಕಿದರು. ಆನಂತರ ತಿಳಿಯಿತು ಪೊಲೀಸ್ ಪೇದೆಗಳು ಆಕಾಶಕ್ಕೆ ಗುಂಡು ಹಾರಿಸಿದ್ದರಂತೆ. ಅವರಿಗೂ ಸ್ವಾತಂತ್ರ್ಯದ ಹಂಬಲವಂತೆ. ಇಲ್ಲದಿದ್ದರೆ ಈ ಕಥೆ ಹೇಳಲು ನಾನು ಇರುತ್ತಿರಲಿಲ್ಲ ಮತ್ತು ಆ ದಿನ ನೂರಾರು ಹೆಣಗಳು ಉರುಳುತ್ತಿದ್ದವು. ಆದರೆ ಆ ದಿನ ಭಕ್ತರಹಳ್ಳಿಯ ಇಬ್ಬರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವ ತೆತ್ತಿದ್ದರು’.
 ನಾನಾಗ ಎರಡು ಮಕ್ಕಳ ತಂದೆ. ಅಷ್ಟಾಗಿ ವಿದ್ಯೆಯೂ ಇರಲಿಲ್ಲ. ಮಳ್ಳೂರಿನ ಪಾಪಣ್ಣ ನಮಗೆಲ್ಲಾ ಸತ್ಯಾಗ್ರಹ ಮಾಡಲು ಪ್ರೇರೇಪಿಸಿದರು. ಆಗ ಶಿಡ್ಲಘಟ್ಟದ ತಾಲ್ಲೂಕು ಕಚೇರಿಯ ಮುಂದೆ ಮುಷ್ಕರ ಪ್ರಾರಂಭಿಸಿದೆವು. ಸಂಜೆ ವೇಳೆಗೆ ಸೂರೇಗೌಡರು, ಕಂಪನಿ ಮುನಿವೆಂಕಟಪ್ಪ ಅವರ ಮನೆಗಳ ಬಳಿ ಸೇರುತ್ತಿದ್ದೆವು. ರಾತ್ರಿ ಹೊತ್ತಿಗೆ ನಮಗೆಲ್ಲಾ ಊಟ ಹಾಕುತ್ತಿದ್ದರು. ಸುಮಾರು ನೂರು ಜನ ಸೇರುತ್ತಿದ್ದೆವು. ಬಚ್ಚಹಳ್ಳಿಯ ಚಂಗಲರಾವ್ ಮುಂತಾದವರು ಭಾಷಣ ಮಾಡುತ್ತಿದ್ದರು. ೧೫ ದಿನಗಳಾದ ಮೇಲೆ ತುಮ್ಮನಹಳ್ಳಿಯಿಂದ ಅಲಂಕರಿಸಿದ ಎತ್ತುಗಳನ್ನು ಕಟ್ಟಿಕೊಂಡು ಅನ್ನದ ಗಾಡಿಗಳು ಬಂದವು. ಆಸ್ಪತ್ರೆ ಮೈದಾನದಲ್ಲಿ ನಮಗೆಲ್ಲಾ ಅನ್ನಸಂತರ್ಪಣೆ. ನಮ್ಮ ಹೋರಾಟ ತೀವ್ರಗೊಂಡಾಗ ರಿಸರ್ವ್ ವ್ಯಾನ್ ಬಂತು. ಆಗ ನಡೆದದ್ದು ಗೋಲೀಬಾರ್.
 ಹದಿನೈದು ದಿನಗಳ ಕಾಲ ಶಿಡ್ಲಘಟ್ಟ ಜೈಲಿನಲ್ಲಿ ಮತ್ತು ಒಂದು ತಿಂಗಳು ಮೂರು ದಿನ ಚಿಕ್ಕಬಳ್ಳಾಪುರದ ಜೈಲಿನಲ್ಲಿ ನಮ್ಮನ್ನು ಇಟ್ಟಿದ್ದರು. ಆಗ ಬಂತು ಸ್ವಾತಂತ್ರ್ಯ. ಮಧ್ಯರಾತ್ರಿಯ ಸ್ವಾತಂತ್ರ್ಯ. ೨೮೦ ಜನ ಇದ್ದೆವು. ನಮ್ಮ ಊರುಗಳಿಗೆ ವಾಪಸ್ ಕಳಿಸಿದರು. ನಮ್ಮ ಹೋರಾಟ ಸಾರ್ಥಕವಾದ ಭಾವದಿಂದ ಊರಿಗೆ ಮರಳಿದೆವು. ಹೋರಾಟ ಪ್ರಾರಂಭಿಸಿದಾಗ ನಮಗೆ ಇಷ್ಟು ಬೇಗ ಸ್ವಾತಂತ್ರ್ಯ ಸಿಗುವುದೆಂಬ ಕಲ್ಪನೆಯಿರಲಿಲ್ಲ. ಆದರೆ ನಮ್ಮ ಹೋರಾಟಕ್ಕೆ ಸಿಕ್ಕ ಫಲ ತೃಪ್ತಿ ತಂದಿತು.


ಕೋಲಾರ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು ದೆಹಲಿಯಲ್ಲಿ ಆಗಿನ ಪ್ರಧಾನಿ ರಾಜೀವ್‌ಗಾಂಧಿಯವರನ್ನು ಭೇಟಿ ಮಾಡಿ ತೆಗೆಸಿಕೊಂಡ ಛಾಯಾಚಿತ್ರ.

ರಾಜೀವ್ ಗಾಂಧಿ ಪ್ರಧಾನಿಯಾದಾಗ ನಮ್ಮ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರನ್ನು ದೆಹಲಿಗೆ ಕರೆಸಿ ಗೌರವಿಸಿದರು. ಮೇಲೂರು ಸುಬ್ಬಣ್ಣ, ಮಳ್ಳೂರು ಮುನಿನಾಗಪ್ಪ, ಭಕ್ತರಹಳ್ಳಿ ಬಚ್ಚೇಗೌಡ, ಬಚ್ಚಹಳ್ಳಿ ಚಂಗಲರಾವ್, ಚೌಡಸಂದ್ರ ರಾಮಪ್ಪ, ಮೇಲೂರು ಸಂಜೀವಪ್ಪ, ಹುಜಗೂರು ಹನುಮಂತರಾಯಪ್ಪ, ಮಳ್ಳೂರು ಮುನಿಯಪ್ಪ, ಅಪ್ಪೇಗೌಡನಹಳ್ಳಿ ಪಿಳ್ಳಪ್ಪ ಮುಂತಾದವರು ದೆಹಲಿಗೆ ಹೋಗಿದ್ದೆವು. ಇವರಲ್ಲಿ ಬಹುತೇಕ ಮಂದಿ ಈಗಿಲ್ಲ’ ಎನ್ನುತ್ತಾ ತಮ್ಮ ಗತಕಾಲದ ನೆನಪುಗಳನ್ನು  ಹಂಚಿಕೊಂಡರು.
 

No comments: