Saturday, June 15, 2013

ಅಂಚೆ ಚೀಟಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ

 ೫೦ ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯ ಅವರ ಅಂಚೆಚೀಟಿ.

 ಸಾಮಾನ್ಯವಾಗಿ ಯಾವುದೇ ಪ್ರಸಿದ್ಧ ಸಂಸ್ಥೆ ಅಥವಾ ವ್ಯಕ್ತಿಗೆ ನೂರು ವರ್ಷ ತುಂಬಿದಾಗ ವಿಶೇಷ ಅಂಚೆ ಚೀಟಿಯನ್ನು ಹೊರತರಲಾಗುತ್ತದೆ. ಕರ್ನಾಟಕಕ್ಕೆ ಇಂತಹ ಗೌರವ ತಂದುಕೊಟ್ಟವರಲ್ಲಿ ವಿಖ್ಯಾತ ಎಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ಮೊದಲಿಗರು.
 ಜೀವಂತವಿರುವಾಗಲೇ ವ್ಯಕ್ತಿಗಳ ಗೌರವಾರ್ಥ ಅಂಚೆ ಚೀಟಿ ಹೊರತರುವುದು ಭಾರತದಲ್ಲಂತೂ ಬಹಳ ಅಪರೂಪ. ೧೯೬೦ರ ಸೆಪ್ಟೆಂಬರ್ ೧೫ ರಂದು ಸರ್.ಎಂ.ವಿ. ಅವರಿಗೆ ನೂರು ವರ್ಷ ತುಂಬಿದ ದಿನದಂದೇ ಕೇಂದ್ರ ಸರ್ಕಾರ ಅವರ ಗೌರವಾರ್ಥ ಅಂಚೆ ಚೀಟಿಯನ್ನು ಹೊರತಂದಿತು. ವಿಶೇಷ ಅಂಚೆ ಚೀಟಿ ಸರಣಿಯಲ್ಲಿ ಕರ್ನಾಟಕಕ್ಕೆ ಲಭಿಸಿದ ಮೊದಲ ಅಂಚೆ ಚೀಟಿಯಿದು.
 ತಾವಿರುವಾಗಲೇ ತಮ್ಮ ಮೇಲೆ ಬಿಡುಗಡೆಯಾದ ಅಂಚೆ ಚೀಟಿಯನ್ನು ಕಂಡ ಅಪರೂಪದ ಭಾಗ್ಯಶಾಲಿ ಸರ್.ಎಂ.ವಿ. ೧೫ ಪೈಸೆ ಮುಖಬೆಲೆಯ ಈ ಅಂಚೆ ಚೀಟಿಯು ಅಶೋಕಸ್ತಂಭ ಜಲಚಿಹ್ನೆಯನ್ನು ಹೊಂದಿದ್ದು ಕಂದು ಮತ್ತು ಕ್ಯಾರಮೈನ್ ಮಿಶ್ರವರ್ಣದಲ್ಲಿ ಮುದ್ರಿತವಾಗಿದೆ.

 
 ಚಿಕ್ಕಬಳ್ಳಾಪುರ ತಾಲ್ಲೂಕು ಮುದ್ದೇನಹಳ್ಳಿಯಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯನವರ ಸಮಾಧಿ.

 ಚಿಕ್ಕಬಳ್ಳಾಪುರ ತಾಲ್ಲೂಕಿನ ಮ್ದುದೇನಹಳ್ಳಿ ಗ್ರಾಮದಲ್ಲಿ ಸೆಪ್ಟೆಂಬರ್ ೧೫, ೨೦೧೦ರಂದು  ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ೧೫೦ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಬಿಡುಗಡೆಯಾದ ವಿಶೇಷ ಅಂಚೆ ಲಕೋಟೆ.

 ೫೦ ವರ್ಷಗಳ ನಂತರ ಸರ್.ಎಂ.ವಿ ಅವರ ೧೫೦ ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ(೨೦೧೦ರಲ್ಲಿ) ಸರ್.ಎಂ.ವಿಶ್ವೇಶ್ವರಯ್ಯ ಅವರ ಸ್ಮರಣಾರ್ಥ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಐದು ರೂಗಳ ಮುಖಬೆಲೆಯ ವಿಶೇಷ ಅಂಚೆ ಲಕೋಟೆಯು ಸರ್.ಎಂ.ವಿ ಅವರ ಚಿತ್ರವಿರುವ ವಿಶೇಷ ಸೀಲ್, ಅವರು ವಾಸಿಸಿದ ಮನೆ ಹಾಗೂ ಅವರ ಭಾವಚಿತ್ರವನ್ನದು ಒಳಗೊಂಡಿದೆ.

 ಸರ್.ಎಂ.ವಿಶ್ವೇಶ್ವರಯ್ಯನವರ ಸೊಸೆ ಶಕುಂತಲಾ ಕೃಷ್ಣಮೂರ್ತಿ(ಬಲಭಾಗದಲ್ಲಿ ಕುಳಿತವರು).

 ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನಲ್ಲಿ ೧೯೭೮ರ ಗಣರಾಜ್ಯೋತ್ಸವದಂದು ಬಿಡುಗಡೆಯಾದ ವಿಶೇಷ ಅಂಚೆ ಲಕೋಟೆ.

೧೯೭೮ರಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ರೇಷ್ಮೆ ಕುರಿತಂತೆ ವಿಶೇಷ ಅಂಚೆ ಮುದ್ರೆಯನ್ನು ಬಿಡುಗಡೆ ಮಾಡಲಾಗಿತ್ತು. ಮೊಟ್ಟ ಮೊದಲ ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘ ಸ್ಥಾಪನೆಯಾಗಿತ್ತು. ರೂರಾಪೆಕ್ಸ್(ರೂರಲ್ ಫಿಲಾಟಲಿ ಎಕ್ಸಿಬಿಷನ್) ನಡೆದ ಜ್ಞಾಪಕಾರ್ಥವಾಗಿ ವಿಶೇಷ ಅಂಚೆ ಲಕೋಟೆ ಹಾಗೂ ಮುದ್ರೆ(ಕ್ಯಾನ್ಸಲೇಷನ್) ಯನ್ನು ಅಂಚೆ ಇಲಾಖೆ ಹೊರತಂದಿತ್ತು. ಜಿಲ್ಲೆಯ ವಿಖ್ಯಾತ ಎಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ಅವರ ನಂತರ ಅಂಚೆ ಇಲಾಖೆಯಿಂದ ಮೇಲೂರಿನ ರೂರಾಪೆಕ್ಸ್ ಈ ಗೌರವಕ್ಕೆ ಪಾತ್ರವಾಗಿದೆ.
"೧೯೭೮ರ ಗಣರಾಜ್ಯೋತ್ಸವದಂದು ಮೊಟ್ಟಮೊದಲ ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘವನ್ನು ಮೇಲೂರಿನಲ್ಲಿ ಪ್ರಾರಂಭಿಸಿದೆವು. ಕೃಷಿಗೆ ಸಂಬಂಧಿಸಿದ ಅಂಚೆ ಚೀಟಿಗಳದ್ದೇ ಪ್ರದರ್ಶನ ಏರ್ಪಡಿಸಿದ್ದೆವು. ವಿವಿಧ ದೇಶಗಳ ವೈವಿದ್ಯಮಯ ಅಂಚೆಚೀಟಿಗಳನ್ನು ಪ್ರದರ್ಶಿಸಿದ್ದೆವು. ಹೆಚ್ಚೆಚ್ಚು ರೇಷ್ಮೆ ಬೆಳೆಯಿರಿ ಎಂಬುದು ನಮ್ಮ ಧ್ಯೇಯವಾಕ್ಯವಾಗಿತ್ತು. ಅಂಚೆ ಇಲಾಖೆಯವರು ಈ ಕಾರ್ಯವನ್ನು ಗೌರವಿಸಿ ವಿಶೇಷ ಅಂಚೆ ಲಕೋಟೆಯನ್ನು ಅಂದು ಹೊರತಂದರು. ಇದು ನಮ್ಮ ಶಿಡ್ಲಘಟ್ಟ ತಾಲ್ಲೂಕಿಗೇ ಸಂದ ಗೌರವವಾಗಿತ್ತು. ಕೃಷಿಕನೇ ಭಾರತದ ಬೆನ್ನೆಲುಬು ಎಂಬ ಘೋಷ ವಾಕ್ಯ, ಕೃಷಿಕನ ಚಿತ್ರ ಹಾಗೂ ರೂರಾಪೆಕ್ಸ್ ಪ್ರಾರಂಭಿಸಿದ ದಿನ ಒಂದು ಬದಿಯಲ್ಲಿ ಮುದ್ರಿಸಿದ್ದರೆ, ಇನ್ನೊಂದು ಬದಿಯಲ್ಲಿ ಅಂಚೆ ಚೀಟಿಯ ಮೇಲೆ ಮೇಲೂರು ಅಂಚೆ ಕಚೇರಿಯ ಮುದ್ರೆ, ರೇಷ್ಮೆ ಹುಳು, ಹಿಪ್ಪುನೇರಳೆ ಎಲೆ, ಗೂಡಿನ ಚಿತ್ರ ಮತ್ತು ಹೆಚ್ಚು ರೇಷ್ಮೆ ಬೆಳೆಯಿರಿ ಎಂದಿರುವ ಮುದ್ರೆ ಒತ್ತಲಾಗಿತ್ತು. ಇದು ಅಂಚೆ ಇತಿಹಾಸದಲ್ಲಿ ದಾಖಲಾದ ಮೌಲಿಕ ವಸ್ತು" ಎಂದು ರೂರಾಪೆಕ್ಸ್ ಸಂಸ್ಥಾಪಕ ಎಂ.ಆರ್.ಪ್ರಭಾಕರ್ ತಿಳಿಸಿದರು.

ಶಿಡ್ಲಘಟ್ಟದಲ್ಲಿ ಗ್ರಾಮೀಣ ಅಂಚೆ ಚೀಟಿ ಸಂಗ್ರಹಕಾರರ ಸಂಘದ ಒಂದು ಸಾವಿರದ ಪ್ರದರ್ಶನವನ್ನು ವೀಕ್ಷಿಸುತ್ತಿರುವ ಆಸಕ್ತರು.


 ‘ಇದಾದ ನಂತರ ನಾವು ಹಿಂತಿರುಗಿ ನೋಡಲೇ ಇಲ್ಲ. ಶಾಲಾ, ಕಾಲೇಜುಗಳು, ವಿವಿಧ ಗ್ರಾಮಗಳು, ಊರುಗಳು ಮೊದಲಾದೆಡೆ ಅಂಚೆ ಚೀಟಿ ಪ್ರದರ್ಶಿಸುತ್ತಾ ಒಂದು ಸಾವಿರದ ಅಂಚೆ ಚೀಟಿ ಪ್ರದರ್ಶನವನ್ನು ಶಿಡ್ಲಘಟ್ಟದ ವಾಸವಿ ಕಲ್ಯಾಣಮಂಟಪದಲ್ಲಿ ಜನವರಿ ೧, ೨೦೦೦ರಂದು ನಡೆಸಿದೆವು. ಗ್ರಾಮಾಂತರದಲ್ಲಿಯೂ ಈ ವಿಶ್ವಮಾನ್ಯ ಹವ್ಯಾಸವನ್ನು ಪ್ರಚಾರಗೊಳಿಸಬೇಕು. ಇದರಿಂದಲೂ ಪ್ರಾಪಂಚಿಕ ಜ್ಞಾನ, ಇತಿಹಾಸ, ಕಲೆ, ಕ್ರೀಡೆ ಮುಂತಾದವುಗಳನ್ನು ಅರಿಯಬಹುದು. ನಮ್ಮ ಕಲೆ ಸಂಸ್ಕೃತಿಯ ಪ್ರದರ್ಶನವೂ ಇದರಿಂದ ಸಾಧ್ಯವಿದೆ’ ಎನ್ನುತ್ತಾರೆ ಅವರು.

No comments: