Thursday, June 27, 2013

’ದೇಶಭಕ್ತರ’ಹಳ್ಳಿಯಲ್ಲಿ ಈಗ ಪಾಕಪ್ರವೀಣರು!

ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯ ತೆಲುಗರ ಕೃಷ್ಣಪ್ಪ ಅವರ ತೋಟದಲ್ಲಿರುವ ಕ್ರಿ.ಶ. ೮೭೦ ರ ಶಿಲಾ ಶಾಸನದಲ್ಲಿ ಕೊರೆದ ಹಳೆಗನ್ನಡ ಲಿಪಿ ಮತ್ತು ವೀರನ ಚಿತ್ರವನ್ನು ಕೆತ್ತಿರುವುದು.

ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹುತಾತ್ಮರನ್ನು, ಹೋರಾಟಗಾರರನ್ನು ನೀಡಿರುವುದು ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮ. ಆಗಿನ ಕಾಲದಲ್ಲಿ ಈ ಗ್ರಾಮ ದೇಶಭಕ್ತರಹಳ್ಳಿ ಎಂದೇ ಪ್ರಸಿದ್ಧಿ ಗಳಿಸಿತ್ತು. ಸ್ವಾತಂತ್ರ್ಯ ಬಂದು ಒಂದು ತಲೆಮಾರೇ ಕಳೆದಿರುವ ಹೊತ್ತಿನಲ್ಲಿ ಗ್ರಾಮವು ಈಗ ಪಾಕಪ್ರವೀಣರ ತವರೂರು ಎಂದು ಖ್ಯಾತಿ ಗಳಿಸಿದೆ.
 ಭಕ್ತರಹಳ್ಳಿ ಗ್ರಾಮದ ಇತಿಹಾಸವನ್ನು ಸ್ಪಷ್ಟವಾಗಿ ತಿಳಿಪಡಿಸುವ ೧,೨೦೦ ವರ್ಷಗಳ ಹಿಂದಿನ ಶಿಲಾಶಾಸನವೊಂದಿದೆ. ಗ್ರಾಮದ ಹೊರವಲಯದಲ್ಲಿ ತೆಲುಗರ ಕೃಷ್ಣಪ್ಪ ಅವರ ತೋಟದಲ್ಲಿ ಪತ್ತೆಯಾಗಿರುವ ಕ್ರಿ.ಶ. ೮೭೦ ರ ಶಿಲಾ ಶಾಸನದಲ್ಲಿ ಕೊರೆದ ಹಳೆಗನ್ನಡ ಲಿಪಿಯು ಹೇಳುವಂತೆ, ’ಪಲ್ಲವ ನೊಳಂಬಾದಿರಾಜನ ಆಳ್ವಿಕೆಯಲ್ಲಿ ಕಕ್ಕರ ಎಂಬುವವನು ಮದಲೂರಿಗೆ ನುಗ್ಗಿ ಹಸುಗಳನ್ನು ಎಳೆದೊಯ್ಯುವಾಗ ತಿಂಗಣಿ ಮಾರನ ಮಗ ಮೇಲಿಯು ಅದನ್ನು ತಡೆದು ಹೋರಾಡಿ ವೀರಮರಣವನ್ನಪ್ಪಿದ. ಊರಿನ ಮಹಾಜನರು ಐದು ಕೊಳಗದಷ್ಟು ಬಿತ್ತುವ ಗದ್ದೆ ಮತ್ತು ಹೊಲವನ್ನು ಆತನ ಕುಟುಂಬದವರಿಗೆ ನೀಡಿದ್ದು, ಇದನ್ನು ಬೇರೆಯವರು ಅಪಹರಿಸಿದ್ದಲ್ಲಿ ಪಂಚಮಹಾಪಾತಕಗಳ ಪಾಪ ಸುತ್ತಿಕೊಳ್ಳುತ್ತದೆ’ ಎಂದು ಬರೆದು ವೀರನ ಚಿತ್ರವನ್ನೂ ಕೆತ್ತಲಾಗಿದೆ.


 ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯ ಗ್ರಾಮ ಪಂಚಾಯಿತಿ ಕಚೇರಿಯ ಆವರಣದಲ್ಲಿ ಭಕ್ತರಹಳ್ಳಿಯ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ಗಾಂಧಿ ಪ್ರತಿಮೆ ಮತ್ತು ಹೋರಾಟಗಾರರ ಹೆಸರಿನ ಫಲಕವನ್ನು ಸ್ಥಾಪಿಸಲಾಗಿದೆ.

 ಗ್ರಾಮದ ಹಸುಗಳನ್ನು ಕದ್ದವರೊಂದಿಗೆ ಹೋರಾಡಿ ಮರಣವನ್ನಪ್ಪಿದ ಹಿನ್ನೆಲೆಯುಳ್ಳ ಗ್ರಾಮದಲ್ಲಿ ಮುಂದೆ ಸ್ವಾತಂತ್ರ್ಯ ಹೋರಾಟಗಾರರು ಹುಟ್ಟಿದರು. ಗ್ರಾಮದ ಹಿರಿಯರಾದ ಬಂಡಿ ನಾರಾಯಣಪ್ಪನವರ ಮನೆಯು ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಿಗೆ ಕೇಂದ್ರ ಸ್ಥಾನವಾಗಿತ್ತು. ೧೯೪೭ರಲ್ಲಿ ಶಿಡ್ಲಘಟ್ಟದ ತಾಲ್ಲೂಕು ಕಚೇರಿಯ ಮೇಲೆ ರಾಷ್ಟ್ರಧ್ವಜ ಹಾರಿಸುವ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಪೊಲೀಸರು ನಡೆಸಿದ ಗೋಲೀಬಾರಿನಲ್ಲಿ ಭಕ್ತರಹಳ್ಳಿಯ ನಾರಾಯಣಪ್ಪನವರ ವೆಂಕಟರವಣಪ್ಪ ಮತ್ತು ಕುಂಬಾರು ದೊಡ್ಡ ನಾರಾಯಣಪ್ಪ ಎಂಬ ಇಬ್ಬರು ದೇಶಭಕ್ತರು ವೀರಮರಣವನ್ನಪ್ಪಿದರು. ಹಲವಾರು ಮಂದಿ ಜೈಲು ಪಾಲಾದರು. ಹೀಗಾಗಿ ಭಕ್ತರಹಳ್ಳಿಯು ಆಗ ’ದೇಶಭಕ್ತರಹಳ್ಳಿ’ ಎಂದೇ ಖ್ಯಾತಿಯಾಯಿತು.
 ’ಸರ್ಕಾರಿ ಲೆಕ್ಕದಲ್ಲಿ ಭಕ್ತರಹಳ್ಳಿಯ ಕೇವಲ ೧೩ ಮಂದಿ ಮಾತ್ರ ಸ್ವಾತಂತ್ರ್ಯ ಹೋರಾಟಗಾರರೆಂದು ಗುರುತಿಸಲ್ಪಟ್ಟಿದ್ದಾರೆ. ಆದರೆ ಹಲವಾರು ಮಂದಿ ಈ ಹೋರಾಟದಲ್ಲಿ ಭಾಗಿಯಾಗಿದ್ದರು. ಭಂಡಿ ನಾರಾಯಣಪ್ಪ, ನಾಗಮಂಗಲದ ವೆಂಕಟರಾಯಪ್ಪ, ಪಟೇಲ್ ಮುನಿಶಾಮಿಗೌಡ, ಬಿ.ವೆಂಕಟರಾಯಪ್ಪ, ಬಿ.ಆರ್.ಕೆ.ಆರಾಧ್ಯ, ನಾರಾಯಣಸ್ವಾಮಿ ಗೌಡ, ಎಚ್.ಕಾಳಪ್ಪ, ಬಿ.ಆಂಜನೇಯಗೌಡ, ಭಂಡಿ ಕ್ಯಾತಣ್ಣ, ತೋಟಿ ರಂಗಪ್ಪ, ಬಿ.ಎನ್.ಪುಟ್ಟಣ್ಣ, ಬಿ.ಎಸ್.ಬಚ್ಚೇಗೌಡ, ಡಿ.ಮಾರಪ್ಪ, ತಳವಾರ ನಾರಾಯಣಪ್ಪ, ನಾಯಕರ ಮುನಿಯಪ್ಪ ಮತ್ತಿತರರು ಭಕ್ತರಹಳ್ಳಿಯ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು.
 ಶಿಡ್ಲಘಟ್ಟ ಕ್ಷೇತ್ರದ ಮಾಜಿ ಶಾಸಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಭಕ್ತರಹಳ್ಳಿಯ ಬಿ.ವೆಂಕಟರಾಯಪ್ಪ ಸ್ವಾತಂತ್ರ್ಯ ಹೋರಾಟಗಾರರಿಗೆ ಸರ್ಕಾರ ನೀಡುವ ಪಿಂಚಣಿಯನ್ನೂ ಪಡೆಯುತ್ತಿರಲಿಲ್ಲ. ಅವರನ್ನು ಗೌರವಿಸುವ ಸಲುವಾಗಿ ನಾನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷನಾದಾಗ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಗಾಂಧಿ ಪ್ರತಿಮೆ ಹಾಗೂ ಭಕ್ತರಹಳ್ಳಿಯ ಸ್ವಾತಂತ್ರ್ಯ ಹೋರಾಟಗಾರರ ಹೆಸರಿನ ಫಲಕವನ್ನು ಹಾಕಿಸಿದೆ’ ಎಂದು ಗ್ರಾಮದ ಧೀಮಂತ ವ್ಯಕ್ತಿಗಳನ್ನು ನೆನೆಯುತ್ತಾರೆ ಹಿರಿಯರಾದ ವೆಂಕಟಮೂರ್ತಿಯವರು.
 ಸ್ವಾತಂತ್ರ್ಯ ಬಂದು ಆರು ದಶಕಗಳಾಗಿವೆ. ಗ್ರಾಮದಲ್ಲಿ ಓಡಾಡಿದರೆ ಈಗಲೂ ಸ್ವಾತಂತ್ರ್ಯ ಸಂಗ್ರಾಮದ ದಿನಗಳ ವಾಸನೆ ಬಡಿಯುತ್ತದೆ. ಆಗಿನ ದಿನಗಳನ್ನು ಮೆಲುಕು ಹಾಕುವಂಥ ಮತ್ತು ಸ್ವಾತಂತ್ರ್ಯ ಹೋರಾಟಗಾರರೊಡನೆ ಒಡನಾಟ ಇಟ್ಟುಕೊಂಡಿದ್ದ ಕೆಲವೇ ಮಂದಿ ಈಗ ಗ್ರಾಮದಲ್ಲಿ ಉಳಿದುಕೊಂಡಿದ್ದಾರೆ. ಹಳೆಯ ದಿನಗಳನ್ನು ಕೆದಕಿದರೆ ಸಾಕು, ಅವರು ಹಳೆಯ ನೆನಪುಗಳ ಸರಮಾಲೆಯನ್ನೇ ಬಿಚ್ಚಿಡುತ್ತಾರೆ.

ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯಲ್ಲಿ ೧೯೫೮ರಲ್ಲಿ ಜೈ ಭಾರತ್ ದೊಡ್ಡ ಪ್ರಮಾಣದ ಪ್ರಾಥಮಿಕ ಪತ್ತಿನ ವ್ಯವಸಾಯ ಸಂಘವನ್ನು ರೈತರ ಅಭ್ಯುದಯಕ್ಕಾಗಿ ಸ್ಥಾಪಿಸಲಾಗಿತ್ತು. ಆಗಿನ ಮುಖಂಡರಾದ ಎನ್.ವೆಂಕಟಸ್ವಾಮಿ, ಬಿ.ನಾರಾಯಣಸ್ವಾಮಿಗೌಡ, ಬಿ.ವೆಂಕಟರಾಯಪ್ಪ, ಎಂ.ಸುಬ್ಬರಾಯ, ಎಚ್.ಕಾಳಪ್ಪ, ಬಿ.ಮುನಿಶಾಮಿಗೌಡ, ಬಿ.ಎನ್.ಪುಟ್ಟಣ್ಣ, ಬಿ.ಆಂಜನೇಯಗೌಡ, ಬಿ.ಆರ್.ಕೆ.ಆರಾಧ್ಯ ಮತ್ತಿತರರಿದ್ದಾರೆ.

ಈಗ ಭಕ್ತರಹಳ್ಳಿ ಗ್ರಾಮ ಅಡುಗೆಭಟ್ಟರಿಂದ ಖ್ಯಾತಿ ಗಳಿಸಿದೆ. ಯಾವುದೋ ಒಂದು ಸಂದರ್ಭದಲ್ಲಿ ಗ್ರಾಮದ ವ್ಯಕ್ತಿಯೊಬ್ಬರು ಮದುವೆ ಮನೆಗಳಲ್ಲಿ ಅಡುಗೆ ಮಾಡುವ ಪರಿಣತಿ ಬೆಳೆಸಿಕೊಂಡರು. ಅವರ ಮಕ್ಕಳು ಕೂಡ ಅಡುಗೆ ಭಟ್ಟರಾದರು. ಅಷ್ಟಕ್ಕೇ ಸೀಮಿತರಾಗದೆ ಒಬ್ಬೊಬ್ಬರೂ ಒಂದೊಂದು ಅಡುಗೆ ಮಾಡುವ ಗುಂಪನ್ನು ಬೆಳೆಸಿಕೊಂಡಿದ್ದರ ಪರಿಣಾಮ ಈಗ ಈ ಗ್ರಾಮದಲ್ಲಿ ಸುಮಾರು ೨೦೦ ಮಂದಿ ಪಾಕಪ್ರವೀಣರಿದ್ದಾರೆ. ಸುತ್ತಮುತ್ತಲ ಗ್ರಾಮಗಳಲ್ಲದೆ, ದೂರದ ಊರುಗಳು, ಬೆಂಗಳೂರು ನಗರದವರೆಗೂ ಈ ಪಾಕ ಪ್ರವೀಣರು ತಮ್ಮ ಜನಪ್ರಿಯತೆ ಬೆಳೆಸಿಕೊಂಡಿದ್ದಾರೆ.  ತಾಲ್ಲೂಕಿನ ಹಲವಾರು ಮಂದಿ ನಿರುದ್ಯೋಗಿಗಳಿಗೆ ಉದ್ಯೋಗದಾತರಾಗಿದ್ದಾರೆ. ಕೃಷ್ಣಪ್ಪ ಅವರ ಬಿ.ವಿ.ಕೆ, ಕುಮಾರ್ ಅವರ ಎಸ್.ಆರ್.ಎಸ್, ಕೆಂಪೇಗೌಡ ಅವರ ಸಿ.ಎಸ್.ಪಿ, ಬೈರೇಗೌಡ ಅವರ ಬಿ.ಎಂ.ಬಿ, ಮುನೇಗೌಡ ಅವರ ಬಿ.ಎಂ.ಎಸ್ ಸಂಸ್ಥೆ ಮುಂತಾದ ಅಡುಗೆ ಕಾಂಟ್ರಾಕ್ಟರುಗಳು ಹೆಸರುವಾಸಿಯಾಗಿದ್ದಾರೆ. ಅವರಲ್ಲಿ ಕೆಲವರು ಸುಮಾರು ಎರಡು ಸಾವಿರ ಸಿಬ್ಬಂದಿಯೊಂದಿಗೆ ಹದಿನೈದು ಸಾವಿರ ಮಂದಿಗೆ ಅಡುಗೆ ಮಾಡಿರುವ ದಾಖಲೆಯೂ ಇದೆ. ಅಡುಗೆಗೆ ಸಂಬಂಧಿಸಿದ ಪಾತ್ರೆಗಳು, ಶಾಮಿಯಾನಾ ಮುಂತಾದವುಗಳನ್ನು ಹೊಂದಿರುವುದಲ್ಲದೆ ಬಾಡಿಗೆಗೆ ನೀಡುವ ವ್ಯವಸ್ಥೆಯನ್ನೂ ಇವರು ಹೊಂದಿದ್ದಾರೆ.

1 comment:

Badarinath Palavalli said...

ತುಂಬಾ ಒಳ್ಳೆಯ ಲೇಖನ.