Thursday, July 30, 2009

ಚಿಲ್ಕಾ ಸರೋವರದಲ್ಲಿ ಹಕ್ಕಿಗಳಿಗೆ ಉಂಗುರಧಾರಣೆ

ಹಾರುತ್ತಿರುವ ಹಕ್ಕಿಗಳೇ... ನಿಮ್ಮ ಭಾಗ್ಯ ನಮಗಿಲ್ಲ...

ಬೆಂಗಳೂರಿನಿಂದ ರೈಲಿನಲ್ಲಿ ಕುಮಾರ್ ಮತ್ತು ನಾನು ಹೊರಟಾಗ ಮನಸ್ಸಿನ ತುಂಬಾ ಲಕ್ಷಾಂತರ ಹಕ್ಕಿಗಳ ಕಲರವ. ಏಕೆಂದರೆ ಹೊರಟಿದ್ದುದು ಒರಿಸ್ಸಾದ ಚಿಲ್ಕಾ ಸರೋವರಕ್ಕೆ. ಪ್ರಪಂಚದ ಎರಡನೆಯ ಅತಿದೊಡ್ಡ ಸಮುದ್ರ ಮತ್ತು ಸಿಹಿನೀರು ಬೆರೆತಂತಹ ಸರೋವರವಾದ ಚಿಲ್ಕಾ, ನೀರು ಹಕ್ಕಿಗಳಿಗೆ ಭಾರತದ ಅತಿ ದೊಡ್ಡ ಚಳಿಗಾಲದ ಆಶ್ರಯತಾಣ. ಪಕ್ಷಿವೀಕ್ಷಕರು ಇನ್ನೂರಕ್ಕೂ ಅಧಿಕ ಜಾತಿಯ ಹಕ್ಕಿಗಳನ್ನಿಲ್ಲಿ ಗುರುತಿಸಿರುವರು.



ಜೆಟ್ ವಿಮಾನಕ್ಕೆ ಹಾರಲು ಕಲಿಸಿದ ಫ್ಲೆಮಿಂಗೋಗಳು.

ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ(ಬಿ ಎನ್ ಹೆಚ್ ಎಸ್) ಅವರು ನಡೆಸುವ "ಪಕ್ಷಿ ಶಾಸ್ತ್ರದ ಕುರಿತು ಅರಿಯುವ ಕಾರ್ಯಕ್ರಮ" ಎಂಬ ಕೋರ್ಸ್‌ನ ಭಾಗವಾದ ಹಕ್ಕಿಗಳಿಗೆ ಉಂಗುರ ತೊಡಿಸುವ ಕಾರ್ಯಕ್ಕೆ ನಾವು ಹೊರಟಿದ್ದೆವು. ಬಲುಗಾಂ ಎಂಬ ಪುಟ್ಟ ಊರಿನಲ್ಲಿ ಸಹಪಾಠಿಗಳೊಂದಿಗೆ ಸೇರಿಕೊಂಡೆವು. ಭಾರತದ ನಾನಾ ಭಾಗಗಳಿಂದ ಬಂದಿದ್ದ ನಮ್ಮೆಲ್ಲರಿಂದಾಗಿ ಮಿನಿ ಭಾರತವೇ ಬಲುಗಾಂನಲ್ಲಿ ಸೇರಿದಂತಿತ್ತು. ಬಲುಗಾಂನ ಹಿತ್ತಲಲ್ಲೇ ಇದೆ ಚಿಲ್ಕಾ ಸರೋವರ.



ಒಂದು ದಿನವಿಡೀ ದೋಣಿಯಲ್ಲಿ ಕೂತು ಸರೋವರವನ್ನು ಸುತ್ತಾಡಿ ಹಕ್ಕಿಗಳನ್ನು ಗುರುತಿಸಲು ಪ್ರಯತ್ನಿಸಿದೆವು. ವಿಜ್ಞಾನಿಗಳಾದ ಡಾ.ದೀಪಕ್ ಮತ್ತು ಡಾ.ಬಾಲಚಂದ್ರನ್ ನಮಗೆ ಮಾರ್ಗದರ್ಶನ ಮಾಡುತ್ತಿದ್ದರು. ಕಿತ್ತಳೆ ಹಣ್ಣಿನಂತಿರುವ ನೀರಿನಂಚಿನ ಸೂರ್ಯ ಮತ್ತು ಭಾರತಕ್ಕೆ ಅತಿಥಿಗಳಾಗಿ ಬಂದಿರುವ ಲಕ್ಷಾಂತರ ಹಕ್ಕಿಗಳ ದರ್ಶನದಿಂದ ಮನಸ್ಸು ಪುಳಕಿತಗೊಂಡಿತು. ದೋಣಿ ಹತ್ತಿರ ಹೋದಂತೆ ಆಕಾಶಕ್ಕೆ ಕತ್ತಲು ಬರಿಸುವಂತೆ ಹಾರುವ ಆ ಬಾತುಗಳ ಸಂಖ್ಯೆ ಮತ್ತು ಶಕ್ತಿ ಅದ್ಭುತ.


ಚಿಲ್ಕಾದಲ್ಲಿ ಪಕ್ಷಿ ವೀಕ್ಷಣೆಗಾಗಿ ದೋಣಿಯಲ್ಲಿ ಪ್ರಯಾಣ.



ಮರುದಿನ ನಮ್ಮ ಪ್ರಯಾಣ ಚಿಲ್ಕಾ ಸರೋವರದ ಮುಖ್ಯ ದ್ವೀಪವಾದ ನಲಬಾನಕ್ಕೆ. ಫ್ಲೆಮಿಂಗೋಗಳ ಹಾರಾಟವನ್ನು ಇಲ್ಲಿ ನಿಂತು ನೋಡುವುದೇ ಒಂದು ಭಾಗ್ಯ. ಆಕಾಶದಲ್ಲಿ ಗುಲಾಬಿ ಬಣ್ಣದ ಗೆರೆಯೆಳೆದಂತೆ ಹಾರುವ ಅವುಗಳ ಹಾರಾಟವೇ ಒಂದು ದೃಶ್ಯಕಾವ್ಯ.


ಬಿ.ಎನ್.ಹೆಚ್.ಎಸ್. ನಿಂದ ನಿಯೋಜಿತರಾದ ಕವಾಟಕರ( trappers) ಜೊತೆ ಹೋಗಿ ಬಲೆಗಳನ್ನು ಒಡ್ಡಿ ಬಂದೆವು. ಹಕ್ಕಿಗಳನ್ನು ಹಿಡಿಯಲು ದೇಶೀಯ ಬಲೆ, ಸಲಕರಣೆಗಳನ್ನೇ ಬಳಸಲಾಗುತ್ತದೆ. ಬಲೆಗಳನ್ನು ಒಡ್ಡುವುದು, ಅದರಿಂದ ಹಕ್ಕಿಗಳನ್ನು ಕೊಂಚವೂ ನೋವಾಗದಂತೆ ಬಿಡಿಸುವುದು ಎಲ್ಲ ನುರಿತ ಕೈಗಳಿಂದಲೇ ಆಗಬೇಕು. ಕತ್ತಲಾಗುತ್ತಿದ್ದಂತೆಯೇ ಹಕ್ಕಿಗಳು ಬಲೆಯಲ್ಲಿ ಬೀಳಲಾರಂಭಿಸಿದವು.


ನಮ್ಮ "ರಿಂಗ್ ಮಾಸ್ಟರ್" ಡಾ.ಬಾಲಚಂದ್ರನ್ "ರಿಂಗಿಂಗ್" ಅಥವಾ "ಬ್ಯಾಂಡಿಂಗ್" ಎಂದು ಕರೆಯುವ ಈ ಉಂಗುರ ತೊಡಿಸುವ ಕ್ರಮ, ಉದ್ದೇಶಗಳ ಬಗ್ಗೆ ತಿಳಿಸುತ್ತಾ ಹೋದರು.


ಅಲ್ಯೂಮಿನಿಯಂ ಮಿಶ್ರಲೋಹದಿಂದ ತಯಾರಿಸಿದ ಅತಿ ಕಡಿಮೆ ತೂಕದ ಈ ಉಂಗುರಗಳನ್ನು ಪಕ್ಷಿತಜ್ಞರು ಹಕ್ಕಿಗಳನ್ನು ಅಭ್ಯಸಿಸಲು ಅವುಗಳ ಕಾಲಿಗೆ ತೊಡಿಸುತ್ತಾರೆ. ಈ ಉಂಗುರವು "ಸಿ" ಆಕಾರದಲ್ಲಿರುತ್ತದೆ. ಇದರ ಮೇಲೆ ಸಂಸ್ಥೆಯ ವಿಳಾಸ ಮತ್ತು ಸಂಖ್ಯೆ ಇರುತ್ತದೆ. ಹಕ್ಕಿಗಳ ಕಾಲಿಗೆ ಇದನ್ನು ತೊಡಿಸಿ ಪ್ಲೆಯರ್‌ನಿಂದ ಎರಡೂ ಅಂಚನ್ನು ಜೊತೆಗೂಡುವಂತೆ ಅದುಮಬೇಕು. ಬೆಸಸಂಖ್ಯೆಯ ವರ್ಷಗಳಲ್ಲಿ ಎಡಗಾಲಿಗೂ ಸಮಸಂಖ್ಯೆಯ ವರ್ಷಗಳಲ್ಲಿ ಬಲಗಾಲಿಗೂ ತೊಡಿಸುವುದು ರೂಢಿ. ಈ ಉಂಗುರ ತೊಡಿಸುವ ಉದ್ದೇಶ ಹಕ್ಕಿಗಳ ವಲಸೆ ಅಧ್ಯಯನ, ವಲಸೆಯ ದಾರಿ, ಸಂತಾನೋತ್ಪತ್ತಿ, ಬದುಕಿನ ಕಾಲಾವಧಿ ಅರಿಯುವುದೇ ಆಗಿದೆ. ಉಂಗುರ ಹಾಕಿ ಹಾರಿಬಿಟ್ಟ ಹಕ್ಕಿಯನ್ನು ಪುನಃ ಹಿಡಿದಾಗ ಉಂಗುರದ ಮೇಲಿನ ಸಂಸ್ಥೆಯ ವಿಳಾಸ ಮತ್ತು ಸಂಖ್ಯೆಯಿಂದ ಹಿಂದಿನ ವಿವರ ಪಡೆದು ಅಧ್ಯಯನ ಮಾಡಲು ಸಹಾಯವಾಗುತ್ತದೆ.



ಮಧ್ಯಪ್ರದೇಶದ ಧಾರ್‌ನ ಮಹಾರಾಜರಿಂದ ೧೯೨೬ರಲ್ಲಿ ಮೊದಲ ಬಾರಿಗೆ ಹಕ್ಕಿಗಳಿಗೆ ಉಂಗುರವನ್ನು ತೊಡಿಸಲು ಭಾರತದಲ್ಲಿ ಪ್ರಾರಂಭಿಸಲಾಯಿತು. ಬಿ.ಎನ್.ಹೆಚ್.ಎಸ್. ಆಗ ಮಹಾರಾಜರಿಗೆ ೫೦೦ ಉಂಗುರಗಳನ್ನು ಸರಬರಾಜು ಮಾಡಿತ್ತು. ನಂತರ ಅಲ್ಲಲ್ಲಿ ಈ ಉಂಗುರ ಹಾಕುವ ಕಾರ್ಯ ನಡೆದರೂ ಅಧಿಕೃತವಾಗಿ ಶುರುವಾದದ್ದು ಡಾ.ಸಲೀಂ ಅಲಿಯವರ ನೇತೃತ್ವದಲ್ಲಿ ೧೯೫೯ ರಲ್ಲಿ ಅದರಲ್ಲೂ ಡಬ್ಲ್ಯು.ಎಚ್.ಓ.(WHO) ಸಹಭಾಗಿತ್ವದಲ್ಲಿ ಹಕ್ಕಿಗಳು ತಮ್ಮೊಂದಿಗೆ ರೋಗಾಣುಗಳನ್ನು ಹೊತ್ತು ತರುತ್ತವೆಯೋ ಎಂದು ಪರೀಕ್ಷಿಸಲು. ೧೯೮೭ ರಿಂದ ಹಕ್ಕಿಗಳ ವಲಸೆಯ ಅಧ್ಯಯನ ಮಾಡಲು ಉಂಗುರ ತೊಡಿಸಲು ಪ್ರಾರಂಭಿಸಲಾಯಿತು.



ಸಂಯುಕ್ತ ರಾಷ್ಟ್ರಗಳಲ್ಲಿ ಪ್ರತಿವರ್ಷ ನಾಲ್ಕು ಲಕ್ಷ ಹಕ್ಕಿಗಳಿಗೆ ಉಂಗುರ ತೊಡಿಸುತ್ತಾರೆ. ಭಾರತದಲ್ಲಿ ನಾಲ್ಕು ದಶಕಗಳಿಂದ ಐದು ಲಕ್ಷ ಹಕ್ಕಿಗಳಿಗೆ ಉಂಗುರ ತೊಡಿಸಲಾಗಿದೆ. ಇವುಗಳಲ್ಲಿ ಪುನಃ ಸಿಕ್ಕಂತಹ ಹಕ್ಕಿಗಳು ಶೇಕಡ ಒಂದರಷ್ಟು. ಇದಕ್ಕೆ ಕಾರಣ ಉಂಗುರ ತೊಡಿಸುವ ಪರಿಣಿತರು ಕಡಿಮೆ ಇರುವುದು ಮತ್ತು ಹಣದ ಕೊರತೆ. ಇದನ್ನು ನೀಗಿಸಲು ಬಿ.ಎನ್.ಹೆಚ್.ಎಸ್. ಈ ರೀತಿಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲಿದೆ.


ಹಿಡಿದ ಹಕ್ಕಿಯ ಹೆಸರು, ಕಾಲಿನ, ಕೊಕ್ಕಿನ ಮತ್ತು ರೆಕ್ಕೆಯ ಅಳತೆಗಳು, ತೂಕ, ಉಂಗುರದ ಸಂಖ್ಯೆ ಇತ್ಯಾದಿ ಮಾಹಿತಿಗಳನ್ನು ಬರೆದಿಟ್ಟುಕೊಳ್ಳಬೇಕು. ನಾವು ರಾತ್ರಿಯಿಡೀ ಇಪ್ಪತ್ತು ಜಾತಿಯ ೧೯೦ ಹಕ್ಕಿಗಳಿಗೆ ಉಂಗುರ ತೊಡಿಸಿದೆವು. ಹಕ್ಕಿಗಳ ತಲೆ ನಮ್ಮ ಎರಡು ಬೆರಳುಗಳ ಮಧ್ಯೆ ಬರುವಂತೆ ಅವುಗಳಿಗೆ ತೊಂದರೆಯಾಗದಂತೆ ಹಿಡಿಯಬೇಕು. ಉಂಗುರ ತೊಡಿಸಿದ ತಕ್ಷಣ ಅವುಗಳನ್ನು ಕತ್ತಲಲ್ಲೇ ಒಯ್ದು ಬಿಟ್ಟುಬಿಡಬೇಕು. ಹಕ್ಕಿಗಳನ್ನು ಹೆಚ್ಚುಹೊತ್ತು ಹಿಡಿದಿಡದೆ ಅಂಕಿ ಅಂಶಗಳನ್ನು ಬರೆಸಿ, ಉಂಗುರ ತೊಡಿಸಿ ನಂತರ ನಮಗೆಲ್ಲಾ ಮಾಹಿತಿ ನೀಡುತ್ತಾ ನಮ್ಮ ಕೈಲೇ ಹಕ್ಕಿಗಳನ್ನು ಜೋಪಾನವಾಗಿ ಬಿಡಿಸುವ ಡಾ.ಬಾಲು ಅವರ ಜಾಣ್ಮೆ ಅಪಾರ. ಹಿಂದಿನ ವರ್ಷ ಉಂಗುರ ತೊಡಿಸಿದ್ದಂತಹ ಎರಡು ಲೆಸ್ಸರ್ ಸ್ಯಾಂಡ್ ಪ್ಲೋವರ್‌ಗಳು ನಮಗೆ ಸಿಕ್ಕಿದ್ದವು. ಅವುಗಳ ತೂಕ, ಅಳತೆಗಳನ್ನು ಬರೆದುಕೊಂಡು ಬಿಟ್ಟೆವು.


ಕಾಡುಹಕ್ಕಿಗೆ ಕಾಲಿನ ತುದಿಯಲ್ಲಿ ಉಂಗುರ ತೊಡಿಸಿದೆ.
ಇದೆಲ್ಲ ನೀರುಹಕ್ಕಿಗಳಿಗೆ ಉಂಗುರ ತೊಡಿಸಿದ್ದಾದರೆ, ಮರುದಿನ ಕಾಡುಹಕ್ಕಿಗಳ ಸರದಿ. ಸೂರ್ಯೋದಯಕ್ಕೆ ಮುನ್ನವೇ ಕಾಡಿನಲ್ಲಿ ಬಲೆಗಳನ್ನು ಕಟ್ಟಿದೆವು. ಉಂಗುರ ತೊಡಿಸುವಲ್ಲಿ ವ್ಯತ್ಯಾಸವಿಷ್ಟೆ - ನೀರು ಹಕ್ಕಿಗಳಿಗಾದರೆ ಕಾಲು ನೀರಿನಲ್ಲಿ ಮುಳುಗುವುದರಿಂದ ಕೊಂಚ ಮೇಲೆ ಉಂಗುರ ತೊಡಿಸಿದರೆ ಕಾಡು ಹಕ್ಕಿಗಳಿಗೆ ಕಾಲಿನ ಕೆಳಭಾಗದಲ್ಲಿ ಹಾಕುವುದು.

ನೀರುಹಕ್ಕಿಗೆ ಉಂಗುರವನ್ನು ಕಾಲಿನ ಮೇಲ್ಭಾಗದಲ್ಲಿ ತೊಡಿಸಲಾಗಿದೆ.
ಹಕ್ಕಿಗಳ ವಲಸೆಗೆ ಮುಖ್ಯ ಕಾರಣಗಳು ಶೀತಲ ಹವಾಮಾನ ಮತ್ತು ಆಹಾರ. ನೂರಾರು ಕೆಲವೊಮ್ಮೆ ಸಾವಿರಾರು ಕಿಲೋಮೀಟರ್ ದೂರವನ್ನು ನಿಲ್ಲದೆ ಹಾರುವ ಇವುಗಳು ವಲಸೆಗೆ ಮುಂಚೆ ಮೈಯಲ್ಲಿ ಸಾಕಷ್ಟು ಕೊಬ್ಬನ್ನು ಶೇಖರಿಸಿಟ್ಟುಕೊಳ್ಳುತ್ತವೆ, ವಾಹನಕ್ಕೆ ಇಂಧನ ತುಂಬಿಸಿಟ್ಟುಕೊಂಡಂತೆ! ಅಚ್ಚರಿಯ ಸಂಗತಿಯೆಂದರೆ ಹಕ್ಕಿಗಳು ತಮ್ಮ ದಾರಿಯನ್ನು ನೆನಪಿಟ್ಟುಕೊಂಡು ಸಾವಿರಾರು ಕಿ.ಮೀ. ದೂರದ ಗಮ್ಯವನ್ನು ಕರಾರುವಕ್ಕಾಗಿ ತಲುಪುವ ಅವುಗಳ ಸಾಮರ್ಥ್ಯ.


ಹಕ್ಕಿಗಳ ತೂಕ, ರೆಕ್ಕೆ, ಕೊಕ್ಕು, ಕಾಲುಗಳ ಅಳತೆಗಳನ್ನು ಬರೆದಿಡಬೇಕು.
ನಾವು ಚಿಲ್ಕಾಗೆ ಹೋಗುವಷ್ಟರಲ್ಲಿಯೇ ಈ ವಲಸೆ ಹಕ್ಕಿಗಳ ಮಾರಣಹೋಮದ ಬಗ್ಗೆ ಪತ್ರಿಕೆಗಳಲ್ಲಿ ಓದಿ ನೋವುಂಟಾಗಿತ್ತು. ಅಲ್ಲಿನ ಸರ್ಕಾರ ಈಗೀಗ ಎಚ್ಚೆತ್ತುಕೊಳ್ಳುತ್ತಿದೆ. ಸರ್ಕಾರವನ್ನೇ ಪೂರ್ಣ ಅವಲಂಭಿಸದೆ ನಮ್ಮ ಕೊಕ್ಕರೆಬೆಳ್ಳೂರಿನಂತೆ ಸಾರ್ವಜನಿಕರೇ ನಮ್ಮಲ್ಲಿಗೆ ಬರುವ ಅತಿಥಿಗಳ ಸಂರಕ್ಷಣೆಗೆ ಮುಂದಾಗಬೇಕಿದೆ.


ಬಲೆಗಳೊಂದಿಗೆ ಹಾಗೂ ಹಿಡಿದ ಹಕ್ಕಿಗಳೊಂದಿಗೆ ಕವಾಟಕ.
ಕಡೆಯದಾಗಿ ನನಗೆ ಡಾ.ಬಾಲು ಅವರ ಮಾತುಗಳೇ ಕಿವಿಯಲ್ಲಿ ರಿಂಗಣಿಸುತ್ತಿವೆ - "ಸಾಮಾನ್ಯವಾಗಿ ಉಂಗುರವೆಂದರೆ ನಮಗೆ ತಿಳಿದಿರುವುದು ನಿಶ್ಚಿತಾರ್ಥದ ಉಂಗುರ. ಈಗ ಹಕ್ಕಿಗಳಿಗೆ ಉಂಗುರ ತೊಡಿಸಿರುವುದರಿಂದ ಅವುಗಳೂ ನಮ್ಮ ಜೀವನ ಸಂಗಾತಿಗಳಾಗಿವೆ. ಸೃಷ್ಟಿಯ ಅದ್ಭುತಗಳಾದ ಈ ಹಕ್ಕಿಗಳನ್ನು ನೋಡಿ ಆನಂದಿಸುವುದೇ ಅಲ್ಲದೆ ಅವುಗಳನ್ನೂ, ಅವುಗಳ ವಾಸಸ್ಥಾನಗಳನ್ನೂ ಉಳಿಸಿ ಬೆಳೆಸಲು ನಾವು ಶ್ರಮಿಸಬೇಕು".
ನಮ್ಮ ಟೀಮ್!
ನೀವುಗಳೂ ಹಕ್ಕಿಗಳೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತೀರಲ್ಲವೇ?

Saturday, July 25, 2009

ದೋಣಿಸಾಗಲಿ ಮುಂದೆ ಹೋಗಲಿ...

ನೀರಿಗೂ ಕೇರಳಕ್ಕೂ ಇರುವ ನಂಟು ವಿವರಣೆಗೆ ಮೀರಿದ್ದು. ಕಡಲು ಅವರ ಬದುಕಿನ ಅವಿಭಾಜ್ಯ ಅಂಗ. ಎಷ್ಟೆಂದರೂ ಪರಶುರಾಮ ಸೃಷ್ಟಿಗೆ ಸೇರಿದ ಭೂಪ್ರದೇಶ.
ಆ ನಾಡಿನ ಭಾಗ್ಯದ ಬಾಗಿಲನ್ನು ತೆರೆದದ್ದೂ ಈ ಸಮುದ್ರವೇ. ಆಕ್ರಮಣಕಾರರಾದ ಪೋರ್ಚುಗೀಸರು, ಡಚ್ಚರು ಮತ್ತು ಇಂಗ್ಲೀಷರಿಗೆ ಬಾಗಿಲು ತೆರೆದುಕೊಟ್ಟಿದ್ದು ಈ ಸಮುದ್ರವೇ.
ರಾಜ್ಯದ ಒಂದು ಪಾರ್ಶ್ವದಲ್ಲಿ ಪಶ್ಚಿಮಘಟ್ಟಗಳ ಪರ್ವತಶ್ರೇಣಿ, ಮತ್ತೊಂದು ಪಾರ್ಶ್ವದಲ್ಲಿ ಅರಬ್ಬೀಸಮುದ್ರ. ದೇಶದ ಬೇರೆ ಯಾವುದೇ ರಾಜ್ಯಕ್ಕೂ ಇಲ್ಲದ ನೈಸರ್ಗಿಕ ರಕ್ಷೆ. ಅವರ ಸಂಸ್ಕೃತಿ ಇನ್ನೂ ಇಡಿಯಾಗಿ, ಬಿಡಿಯಾಗಿ ಉಳಿದಿರುವುದಕ್ಕೆ ಅದೇ ಕಾರಣ.
ಗುಡ್ಡ, ಬೆಟ್ಟ, ಬಯಲು, ಕಣಿವೆ, ನದಿ, ಜಲಪಾತ, ತೊರೆ, ಸಮುದ್ರ ಕಿನಾರೆಗಳ ಮಧ್ಯೆ ಹೆಣೆದುಕೊಂಡಿರುವ ಇಲ್ಲಿನ ಬದುಕು ನಿಸರ್ಗಕ್ಕೆ ತುಂಬಾ ಹತ್ತಿರ. ಹಾಗಾಗಿಯೇ ಇದು ಪ್ರತಿಯೊಬ್ಬರಿಗೂ ಹತ್ತಿರ.
ನಮಗೆ ಕಾರು, ಬೈಕು, ಬಸ್ಸು ಇದ್ದಂತೆ ಅವರಿಗೆ ನಾನಾ ವಿಧದ ದೋಣಿಗಳಿವೆ. ಅದರ ಝಲಕ್ ಇಲ್ಲಿದೆ. "ದೋಣಿಸಾಗಲಿ ಮುಂದೆ ಹೋಗಲಿ..." ಎಂದು ಗುನುಗುನಿಸುತ್ತಾ ಒಂದು ಸುತ್ತು ಹಾಕೋಣ ಬನ್ನಿ...

ನೀರು - ಹಾಲು.

ಗಾಡಿ - ಬೀಡಿ.

ಓದು ಮತ್ತು ಸವಿನಿದ್ರೆ ಕೂಡ ಇಲ್ಲೇ.

ಊಟ ಆದರೇನು ಮೇವು ಆದರ‍ೇನು ಸಾಗಿಸುವುದು ದೋಣಿಯಲ್ಲೇ.

ಉದ್ದ ದೋಣಿಯಲ್ಲಿ ಉದ್ದುದ್ದ ಸಾಗಣೆ!

ಒಂದು, ಎರಡು... ಹಲವು

ಗ್ರೌಂಡ್ ಫ್ಲೋರ್, ಫಸ್ಟ್ ಫ್ಲೋರ್, ಸೆಕೆಂಡ್ ಫ್ಲೋರ್!

ಭಲೇ ಜೋಡಿ.

ವಿಹಾರಕ್ಕೆ, ಪ್ರವಾಸಿಗರಿಗಾಗಿ ದೋಣಿಗಳು.

ಬಸ್ ಸ್ಟಾಪ್ ಇದ್ದಂತೆ ಬೋಟ್ ಸ್ಟಾಪ್.

ಸ್ಪರ್ಧಾತ್ಮಕ ಜೀವನ.

Tuesday, July 21, 2009

ರೇಡಿಯೋ ಸಂದರ್ಶನ

ಆತ್ಮೀಯ ಬ್ಲಾಗ್ ಗೆಳೆಯರೆ,
ಲಂಡನ್ನಿನ ರಾಯಲ್ ಫೋಟೋಗ್ರಫಿ ಸೊಸೈಟಿಯ ಅಂತರರಾಷ್ಟ್ರೀಯ ಮನ್ನಣೆ ವಿಚಾರವಾಗಿ ಬೆಂಗಳೂರಿನ ಆಕಾಶವಾಣಿಯ ಯುವವಾಣಿ ಕಾರ್ಯಕ್ರಮದಲ್ಲಿ ಸುಮಂಗಲ ಮುಮ್ಮಿಗಟ್ಟಿ ಅವರು ನನ್ನನ್ನು ಸಂದರ್ಶಿಸಿದರು. ಈ ರೇಡಿಯೋ ಸಂದರ್ಶನವನ್ನು ನಿಮ್ಮೊಂದಿಗೆ ಹಂಚಿಕೊಳ್ಳವ ಆಸೆ. ಸಂದರ್ಶನವನ್ನು download ಮಾಡಿಕೊಂಡು ಕೇಳಲು ಈ ಕೆಳಗಿನ ಲಿಂಕನ್ನು ಕ್ಲಿಕ್ಕಿಸಿ.

http://rapidshare.com/files/258308419/Mallikarjun-_Radio_interview_.mp3.html

ನಾನು ಕಳಿಸಿಕೊಟ್ಟ ಆಡಿಯೋ ಪೈಲನ್ನು ಅಂತರಜಾಲದಲ್ಲಿ ನಮಗೆಲ್ಲರಿಗೂ ತಲುಪುವಂತೆ ಕೆಲವು ಬದಲಾವಣೆಗಳನ್ನು ಮಾಡಿಕೊಟ್ಟ ಗೆಳೆಯ ರಾಜೇಶ್ ಮಂಜುನಾಥ್‌ಗೆ ಈ ಮೂಲಕ ಧನ್ಯವಾದಗಳನ್ನು ತಿಳಿಸುತ್ತೇನೆ.

ಸಂದರ್ಶನ ಕೇಳಿದ ನಂತರ ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ಪ್ರತಿಕ್ರಿಯಿಸಿ...

Tuesday, July 14, 2009

ನಾಲ್ಕು ದಂತಗಳ ಆನೆ



ಅದ್ಭುತ ವನ್ಯಜೀವಿ ಛಾಯಾಗ್ರಾಹಕ ಆರ್ಮಾಂಡ್ ಡೆನಿಸ್ ಆಫ್ರಿಕ, ಆಸ್ಟ್ರೇಲಿಯ, ಏಷಿಯ ಮತ್ತು ದಕ್ಷಿಣ ಅಮೆರಿಕ ಖಂಡಗಳನ್ನು ಸುತ್ತಿ ಕಷ್ಟಕಾರ್ಪಣ್ಯಗಳನ್ನೆದುರಿಸಿ, ಬಿಬಿಸಿಗೆ ಅತ್ಯುತ್ತಮ ವನ್ಯಜೀವಿ ಚಿತ್ರಗಳನ್ನು ಚಿತ್ರಿಸಿಕೊಟ್ಟಿದ್ದಾನೆ. ಈತ ತನ್ನ ಆತ್ಮಚರಿತ್ರೆ "ಆನ್ ಸಫಾರಿ"ಯಲ್ಲಿ ನಾವೀಗ ಕಾಣಲು ಸಾಧ್ಯವಿಲ್ಲದ, ಮರೆಯಾಗುತ್ತಿರುವ ಜೀವಲೋಕವನ್ನು ಕ್ಯಾಮೆರಾದಷ್ಟೆ ಸೂಕ್ಷ್ಮವಾಗಿ ಅಕ್ಷರಗಳಲ್ಲಿ ಮೂಡಿಸಿದ್ದಾನೆ. ಅದೊಂದು ಬರೀ ಆತ್ಮಚರಿತ್ರೆಯಷ್ಟೇ ಆಗಿರದೆ ಕಣ್ಮರೆಯಾಗುತ್ತಿರುವ ಪ್ರಪಂಚವೊಂದರ ಅಪರೂಪದ ದಾಖಲೆಯೂ ಹೌದು. ನಾಲ್ಕು ದಂತಗಳ ಆನೆ, ಆತ ಕಂಡ ಜೀವಲೋಕದ ವಿಸ್ಮಯಗಳಲ್ಲೊಂದು. ಅದರ ಕಥನವನ್ನು ಆತನ ಕ್ಯಾಮೆರಾ ಕಣ್ಣಲ್ಲೇ ನೋಡಿ.

ನಾಲ್ಕು ದಂತಗಳ ಆನೆ

ಇಟುರಿ ಕಾಡಿನಲ್ಲಿ ಪುಟ್ನಂರ ಬಿಡಾರದಲ್ಲಿದ್ದಾಗ ನಾನು ಮೊದಲ ಬಾರಿ ನಾಲ್ಕು ದಂತಗಳಿರುವ ಆನೆ ಬಗ್ಗೆ ಕೇಳಿದ್ದು. ಪುಟ್ನಂ ಲಹರಿಯಲ್ಲಿದ್ದಾಗ ಆತನ ಮಾತನ್ನು ಗಂಭೀರವಾಗಿ ಪರಿಗಣಿಸುವುದೋ ಬೇಡವೋ ತಿಳಿಯಲಿಲ್ಲ. ಆ ಮಧ್ಯಾಹ್ನ ಐದೋ ಆರೋ ಪ್ರವಾಸಿಗರು ಬಂದಿದ್ದರು. ಅವರಲ್ಲಿ ಟೆಕ್ಸಾಸ್ ನ ಲಕ್ಷಾಧೀಶ್ವರನೊಬ್ಬನಿದ್ದ. ಅವನನ್ನು ಸಂತುಷ್ಟಗೊಳಿಸಲಾಗದೇ ಕಿರಿಕಿರಿಗೊಂಡ ಪುಟ್ನಂ ’ಆನೆಗಳ ರಾಜ’ ಎಂದು ಹೊಸ ವಿಷಯ ಹೇಳಿದ. ’ಅದೊಂದು ವಯಸ್ಸಾದ ಗಂಡಾನೆ. ಪಿಗ್ಮಿಗಳ ಪ್ರಕಾರ ಆನೆಗಳ ರಾಜ. ತುಂಬ ಬಲಶಾಲಿಯಾದ ಅದಕ್ಕೆ ನಾಲ್ಕು ದಂತಗಳು’ ಎಂದು ಪುಟ್ನಂ ಹೇಳಿದೊಡನೆಯೇ ಆ ಪ್ರವಾಸಿಯು ಆಶ್ಚರ್ಯಗೊಂಡು ಸಾಧ್ಯವೇ ಇಲ್ಲ ಎಂದುಬಿಟ್ಟ. ಅವನನ್ನು ಅಚ್ಚರಿಗೊಳಿಸಿದ ಸಂತೋಷದಿಂದ ಪುಟ್ನಂ ನಗುತ್ತಾ ಹೊರಗೆ ಹೋದ. ಆಗ ಗೊಂದಲಕ್ಕೊಳಗಾಗುವ ಸರದಿ ನನ್ನದಾಗಿತ್ತು!

* * * *

ಪುಟ್ನಂ ಜತೆ ಕೆಲವರು ಪಿಗ್ಮಿಗಳಿದ್ದರು. ಇವರು ಕಾಡಿನ ಒಳಭಾಗದಿಂದ ಬಂದವರಾಗಿದ್ದರು. ಎಂದಿನಂತೆ ಪುಟ್ನಂ ಅವರ ಭಾಷೆಯಲ್ಲೇ ಹರಟುತ್ತಾ, ಅವರನ್ನು ನಗಿಸುತ್ತಾ ಕುಳಿತಿದ್ದ. ನಾನೂ ಅವರೊಂದಿಗೆ ಸೇರಿಕೊಂಡೆ. ಮಾತನಾಡುತ್ತಾ ನಾಲ್ಕು ದಂತಗಳ ಆನೆಯ ಬಗ್ಗೆ ಕೇಳಿದೆ. ಅದನ್ನು ಕೇಳಿದೊಡನೆಯೇ ಎಲ್ಲರೂ ಬಾಯಿ ಹೊಲಿದುಕೊಂಡಂತೆ ಕೂತುಬಿಟ್ಟರು. ಪಿಗ್ಮಿಗಳಲ್ಲೇ ಹಿರಿಯ ಬಾಯಿಬಿಟ್ಟ. ’ನಾವು ಅದನ್ನು ನೋಡಿದ್ದೇವೆ. ನಮ್ಮವರನ್ನು ಕೊಂದಿದೆ. ನಮ್ಮ ಬೇಟೆ ಹಾಳುಮಾಡಿದೆ. ಬೇರೆ ಆನೆಗಳಿಗೆ ತಿಳಿಯದಿದ್ದು ಅದಕ್ಕೆ ತಿಳಿಯುತ್ತದೆ. ನಮ್ಮ ಭರ್ಜಿಗಳಿಂದ ಅದನ್ನು ಕೊಲ್ಲಲು ಸಾಧ್ಯವಿಲ್ಲ’ ಎಂದು ಅವನು ಹೇಳುತ್ತಿದ್ದಂತೆಯೇ ಪುಟ್ನಂ ಬಿಟ್ಟು ಉಳಿದವರು ನಗತೊಡಗಿದರು. ಅದರಿಂದ ಇವರನ್ನು ನಂಬುವುದೋ ಬಿಡುವುದೋ ತಿಳಿಯಲಿಲ್ಲ.

* * * *

ಪುಟ್ನಂ ಒಬ್ಬನೇ ಇದ್ದಾಗ, ’ಈ ಆನೆಯನ್ನು ನೀನು ನೋಡಿದ್ದೀಯಾ?’ ಎಂದು ಕೇಳಿದೆ. ಅದಕ್ಕೆ ಆತ, ’ಈ ಕಾಡಲ್ಲಿ ನಾನು ನೋಡದಿರುವುದು ಬಹಳಷ್ಟಿದೆ. ನನಗೆ ಗೊತ್ತಿರುವುದಿಷ್ಟೆ. ಪಿಗ್ಮಿಗಳು ಇರುವುದನ್ನಷ್ಟೆ ನಂಬುತ್ತಾರೆ. ಅಷ್ಟು ಸುಲಭವಾಗಿ ಭಯಪಡದ ಅವರು ಈ ಆನೆಗೆ ಭಯಪಡುತ್ತಾರೆ’ಎಂದನು.ಅಂದಿನಿಂದ ನನಗೆ ನಾಲ್ಕು ದಂತಗಳ ಆನೆಯದೇ ಯೋಚನೆ. ಎರಡು ಬಾರಿ ಅದು ನನ್ನ ಕನಸಿನಲ್ಲೂ ಬಂದಿತ್ತು! ಎಷ್ಟೇ ಕಷ್ಟವಾದರೂ, ಹಣ ಖರ್ಚಾದರೂ ಅದನ್ನು ಕಂಡುಹಿಡಿದು ಅದರ ಬಗ್ಗೆ ಫಿಲ್ಮ್ ಮಾಡಲೇಬೇಕೆಂದು ತೀರ್ಮಾನಿಸಿದೆ. ಅಮೆರಿಕದಲ್ಲಿ ಆ ಫಿಲ್ಮ್ ಮಾಡಬಹುದಾದ ಸಂಚಲನೆ ಊಹಿಸಲು ರೋಮಾಂಚನವಾಗುತ್ತದೆ. ಪುಟ್ನಂಗೆ ಇದರ ಬಗ್ಗೆ ಕೇಳಿದಾಗ ಇದು ಬೇಡ ಬಿಡು ಎಂದ. ಆದರೂ ಛಲ ಬಿಡದೆ ಪಿಗ್ಮಿಗಳ ಬಳಿ ಅದರ ಮಾಹಿತಿ ಸಂಗ್ರಹಿಸತೊಡಗಿದೆ. ನಾಲ್ಕು ದಂತಗಳ ಆನೆಯು ಮನುಷ್ಯರಂತೆ ಮಾತನಾಡುತ್ತದೆ ಎಂಬಂಥ ಅನೇಕ ದಂತ ಕಥೆಗಳಿದ್ದವು! ಅದು ಎಲ್ಲಿರುತ್ತದೆ ಎಂದಾಗ, ಕಾಡಿನ ಮಧ್ಯದಲ್ಲಿದೆ, ಹಲವಾರು ದಿನ ನಡೆಯಬೇಕು ಅನ್ನುತ್ತಿದ್ದರು. ವಿಚಿತ್ರವೆಂದರೆ ಎಲ್ಲರೂ ಪೂರ್ವದ ಕಡೆಗೇ ಕೈತೋರುತ್ತಿದ್ದರು.

ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಆ ಆನೆ ಇರುವ ಜಾಗ ಪುಟ್ನಂ ಶಿಬಿರದಿಂದ ೮೦ ರಿಂದ ೯೦ ಮೈಲು ದೂರದಲ್ಲಿರುವ ಜೌಗು ಭೂಮಿಯೆಂದು ಅಂದಾಜಿಸಿದೆ. ಪಿಗ್ಮಿಗಳಾರೂ ನನ್ನೊಡನೆ ಬರಲೊಪ್ಪಲಿಲ್ಲ. ನನ್ನಲ್ಲಿರುವ ಅಷ್ಟೂ ತಂಬಾಕನ್ನು ಕೊಡುವೆನೆಂದು ಆಮಿಷ ತೋರಿಸಿದಾಗ ಧೈರ್ಯವಂತರಾದ ಮೂವರು ಬರಲೊಪ್ಪಿದರು. ಹುಚ್ಚೋ, ಧೈರ್ಯವೊ, ಮೂರ್ಖತನವೋ ಅಂತೂ ಪುಟ್ನಂಗೆ ಹೇಳಿ ಹೊರಟುಬಿಟ್ಟೆ.
* * *
ಮೂರೂವರೆ ದಿನಗಳು ಪಿಗ್ಮಿಗಳಷ್ಟೇ ವೇಗವಾಗಿ ನಡೆದೆ. ಹಣ್ಣು, ಇಂಗಿಸಿದ ಹಾಲು ಮತ್ತು ಚಾಕೊಲೇಟ್ ಗಳಷ್ಟೇ ನಮ್ಮ ಆಹಾರವಾಗಿತ್ತು. ರಾತ್ರಿ ಎಲೆಗಳ ಗುಡಾರದಲ್ಲಿ ಮಲಗುತ್ತಿದ್ದೆವು. ನಾಲ್ಕನೇ ದಿನ ನನ್ನ ಶಕ್ತಿ, ಉತ್ಸಾಹವೆಲ್ಲಾ ಕುಂದತೊಡಗಿತ್ತು. ಅಷ್ಟರಲ್ಲಿ ಮರಗಳು ಕಡಿಮೆಯಾಗಿ ಭೂಮಿಯ ತೇವಾಂಶ ಕಂಡುಬಂತು. ಅಲ್ಲಲ್ಲಿ ಹಸಿಯಾದ ಆನೆಯ ಸಗಣಿಯೂ ಕಾಣಿಸಿತು. ಒಂದು ಸಣ್ಣ ಝರಿಯ ಪಕ್ಕ ನಿಂತೆವು. ಅಷ್ಟರಲ್ಲಿ ನನಗೆ ಸನ್ನೆ ಮಾಡಿ ಪಿಗ್ಮಿಗಳು ಪೊದೆಗಳ ಮಧ್ಯೆ ಆನೆಗಳ ಹೆಜ್ಜೆ ಜಾಡನ್ನು ಹಿಡಿದು ಶಬ್ದ ಮಾಡದೇ ಮುನ್ನಡೆದರು. ಆನೆ ತುಳಿದು ಹೋದ ಹುಲ್ಲು, ಮುರಿದ ಗಿಡಗಳನ್ನು ತೋರಿಸಿದರು. ’ಇದು ನಾಲ್ಕು ದಂತದ ಆನೆಯಾ?’ ಎಂದು ಕೇಳಿದೆ. ’ನೋಡೋಣ’ ಎಂದು ಪಿಸುಗುಟ್ಟಿ ಮುನ್ನಡೆದರು. ಹೀಗೇ ಆರು ಗಂಟೆಗಳು ನಡೆದ ಮೇಲೆ ನಮಗೆ ಆನೆ ಸಿಕ್ಕಿತು. ಎಂಟು ಆನೆಗಳೊಂದಿಗಿದ್ದ ಈ ವಯಸ್ಸಾದ ಆನೆಗೆ ಎರಡು ದಂತಗಳಿದ್ದವು. ಪಿಗ್ಮಿಗಳು ಹಲ್ಲು ಗಿಂಜುತ್ತಾ ನನ್ನೆಡೆಗೆ ನೋಡಿ, ’ಇದು ಅದಲ್ಲ. ಆನೆಗಳ ರಾಜ ನಾವು ಬರುವುದು ತಿಳಿದು ಹೊರಟು ಹೋಗಿದೆ’ ಅಂದರು. ಒಂದು ವಾರ ಸಮಯ ಹಾಳುಮಾಡಿದ ಮೇಲೆ, ನಾಲ್ಕು ದಂತಗಳ ಆನೆಯು ಸುಳ್ಳು ಎಂದು ನನಗೆ ಮನದಟ್ಟಾಯಿತು. ನಾನು ವಾಪಸಾದುದರಿಂದ ಪುಟ್ನಂ ಕೂಡ ಸಮಾಧಾನಗೊಂಡಂತೆ ಕಂಡ. ಆ ನಂತರ ಕಾಂಗೋದ ಇತರ ಭಾಗಗಳಲ್ಲಿ ಫಿಲ್ಮ್ ತೆಗೆಯಲು ಹೊರಟುಬಿಟ್ಟೆ.
* * *
ಇದಾಗಿ ಕೆಲ ತಿಂಗಳ ನಂತರ ಪಿಗ್ಮಿಗಳ ನಾಡಿಗೆ ವಾಪಸಾದೆ. ಅಷ್ಟರಲ್ಲಿ ನಾಲ್ಕು ದಂತಗಳ ಆನೆಯನ್ನು ಮರೆತೇಬಿಟ್ಟಿದ್ದೆ. ಬೇರೇನೋ ಕೆಲಸಕ್ಕಾಗಿ ಕಾಡಿನ ಅಂಚಿನಲ್ಲಿರುವ ಬುಟೆಂಬೊ ಎಂಬಲ್ಲಿಗೆ ಬಂದೆ. ಅಲ್ಲಿ ಬುಟೆಂಬೊ ಹೋಟೆಲ್ ಎಂಬ ವಸತಿಗೃಹವೊಂದು ಬಿಟ್ಟರೆ ಇನ್ನೇನೂ ಅನುಕೂಲಗಳಿಲ್ಲ. ಅದು ಬೆಲ್ಜಿಯಂನ ವೃದ್ಧರೊಬ್ಬರ ಒಡೆತನದಲ್ಲಿತ್ತು. ಅಲ್ಲಿ ನಾನೊಬ್ಬನೇ ಕುಳಿತಿದ್ದೆ. ಬೆಲ್ಜಿಯಂ ಮೂಲದ ನಾಲ್ಕು ಜನ ನನ್ನ ಪಕ್ಕದ ಮೇಜಿನ ಸುತ್ತ ಕೂತು ಕುಡಿಯುತ್ತಿದ್ದರು. ಅವರು ಫ್ಲೆಮಿಷ್ ಭಾಷೆಯಲ್ಲಿ ಮಾತನಾಡುತ್ತಿದ್ದರಿಂದ ನನ್ನ ಕಿವಿ ಚುರುಕಾಯಿತು. ಏಕೆಂದರೆ ಅದು ನನ್ನ ಬಾಲ್ಯದ ಭಾಷೆ. ಅಷ್ಟೇ ಅಲ್ಲದೆ ಅವರು ನಾಲ್ಕು ದಂತಗಳ ಆನೆ ಎಂದು ಹೇಳಿ ನಗುತ್ತಿದ್ದರು.
ತಕ್ಷಣವೇ ಅವರ ಬಳಿ ಹೋಗಿ ನನ್ನನ್ನು ಪರಿಚಯಿಸಿಕೊಂಡು ಆನೆಯ ಕುರಿತು ವಿಚಾರಿಸಿದೆ.ಅವರಲ್ಲೊಬ್ಬ, "ಅದೇನು ಮುಖ್ಯವಾದ ವಿಷಯವಲ್ಲ. ರಸ್ತೆಯ ಕೊನೆಯ ಕಚೇರಿಗೆ ಹೋಗಿದ್ದೆ. ದಂತಗಳನ್ನು ಮಾರಲು ಆಫ್ರಿಕನ್ ಒಬ್ಬ ಬಂದಿದ್ದ. ಇಲ್ಲಿ ಆನೆಯನ್ನು ಕೊಂದದ್ದಕ್ಕೆ ಸರ್ಕಾರಕ್ಕೆ ತೆರಿಗೆ ಕಟ್ಟಬೇಕು. ತೆರಿಗೆ ಕದಿಯಲು ಆಫ್ರಿಕನ್ ಆ ನಾಲ್ಕೂ ದಂತಗಳು ಒಂದೇ ಆನೆಯದ್ದೆಂದು ವಾದಿಸುತ್ತಿದ್ದ. ಕೋಪಗೊಂಡ ದಲ್ಲಾಳಿ ಎರಡು ಆನೆಗಳ ತೆರಿಗೆ ಮುರಿದುಕೊಂಡು ಉಳಿದ ಹಣ ಕೊಟ್ಟು ಅವನನ್ನು ಹೊರದಬ್ಬಿದ" ಎಂದು ಹೇಳಿದ. ಕುತೂಹಲದಿಂದ ನಾನು ಮಾರನೇ ದಿನವೇ ಆ ಕಚೇರಿಗೆ ಹೋದೆ. ಅಲ್ಲಿಯ ದಲ್ಲಾಳಿ ಗ್ರೀಕ್ ಮೂಲದವನು. ದಲ್ಲಾಳಿಯು ಕೊಂಡಿದ್ದ ದಂತಗಳನ್ನು ನಿನ್ನೆಯೇ ಲಾರಿಯಲ್ಲಿ ಉಗ್ರಾಣಕ್ಕೆ ಕಳಿಸಿದ್ದ. ಅಲ್ಲಿಂದ ಅದು ಹಡಗಿನಲ್ಲಿ ಬೆಲ್ಜಿಯಂಗೆ ಸಾಗಿಸುತ್ತಾರೆ. ಅವನಿಂದ ತಿಳಿದುಬಂದ ಮಾಹಿತಿಯ ಪ್ರಕಾರ ದಂತಗಳು ಎಂಟು ಅಡಿಗಳಷ್ಟಿದ್ದು, ಬಣ್ಣ ಮಾಸಿಹೋಗಿತ್ತು ಮತ್ತು ಬಹಳ ಸಣ್ಣವಿದ್ದವು. ಅದನ್ನು ತಂದ ಆಫ್ರಿಕನ್ ಬಗ್ಗೆ ದಲ್ಲಾಳಿಗೆ ಗೊತ್ತಿರಲಿಲ್ಲ. ಆದರೂ ಅದೊಂದು ಚಿಕ್ಕ ಹಳ್ಳಿಯಾದ್ದರಿಂದ ಅವನನ್ನು ಪತ್ತೆಹಚ್ಚಿದೆ.

ಆ ಯುವಕನ ಹೆಸರು ಮೊಂಬೆಲಿ. ಹಳ್ಳಿಯ ಕೊನೆಯಲ್ಲಿ ಅವನ ಗುಡಿಸಲಿತ್ತು. ಮನೆಯ ಮುಂದೆ ಕುಳಿತಿದ್ದ ಅವನನ್ನು ದಂತದ ಕುರಿತಾಗಿ ಮಾತನಾಡಿಸಿದಾಗ, ಬಂಧಿಸಲು ಬಂದಿರಬಹುದೆಂದು ಭಾವಿಸಿ ಹೆದರಿದ. ಅವನಿಗೆ ಸಿಗರೇಟ್ ಕೊಟ್ಟು ಪುಸಲಾಯಿಸಿದೆ. "ನಾಲ್ಕು ದಂತಗಳ ಆನೆಯ ವಿಷಯ ನಿಜವೊ ಸುಳ್ಳೋ, ಸರಿಯಾಗಿ ಹೇಳು" ಎಂದು ಕೇಳಿದೆ. ಅವನು,"ಇಲ್ಲ, ನಾನು ಸುಳ್ಳು ಹೇಳುತ್ತಿಲ್ಲ. ಅದೊಂದು ದೊಡ್ಡ ಆನೆ. ಸತ್ತು ಬಹಳ ದಿನಗಳಾಗಿತ್ತು. ಅದರ ನಾಲ್ಕು ದಂತಗಳನ್ನು ನಾನೇ ತಂದಿದ್ದು" ಎಂದ. ಆ ಆನೆ ಬಿದ್ದಿದ್ದ ಜಾಗವನ್ನು ಪಶ್ಚಿಮಕ್ಕೆ ಕೈತೋರುತ್ತಾ ಜೌಗು ಪ್ರದೇಶದ ವಿವರಣೆ ನೀಡಿದ. ನಾನು ಪಿಗ್ಮಿಗಳೊಂದಿಗೆ ಹೋಗಿದ್ದ ಜಾಗವನ್ನೇ ಅದು ಹೋಲುತ್ತಿತ್ತು. ಆ ಸ್ಥಳಕ್ಕೆ ಪುನಃ ಹೋಗಲು ಸಾಧ್ಯವೇ ಎಂದು ಕೇಳಿದೆ. ಅದು ತುಂಬಾ ದೂರ, ಹುಡುಕಲು ಕಷ್ಟವೆನ್ನುತ್ತಿದ್ದ ಮೊಂಬೆಲಿಯನ್ನು ನನ್ನ ಟ್ರಕ್ ಹಿಂಬದಿಗೆ ಕರೆದೊಯ್ದು ಅಲ್ಲಿದ್ದ ಎಣ್ಣೆಯ ಚಿಮಣಿ ದೀಪ, ಬ್ಯಾಟರಿ ಚಾಲಿತ ಟಾರ್ಚ್ ಮತ್ತು ನನ್ನ ಕೈಗಡಿಯಾರ ತೋರಿಸಿದೆ. ಈ ಮೂರು ವಸ್ತುಗಳಿಗೆ ಕಾಂಗೋದ ಆಫ್ರಿಕನ್ನರು ಬಹಳ ಹಂಬಲಿಸುವರೆಂದು ನನಗೆ ಗೊತ್ತು. ಅವನನ್ನು ಹತ್ತಿರ ಕರೆದು, "ನೋಡು ಮೊಂಬೆಲಿ, ಆ ಆನೆಯ ತಲೆ ನನಗೆ ಬೇಕೇ ಬೇಕು. ನಾನೀಗ ಉತ್ತರ ದಿಕ್ಕಿಗೆ ಹೋಗುತ್ತಿದ್ದೇನೆ. ನಾನು ಬರುವಷ್ಟರಲ್ಲಿ ನೀನು ತಂದಿಟ್ಟಿದ್ದರೆ ಈ ಮೂರೂ ವಸ್ತುಗಳನ್ನು ಕೊಡುತ್ತೇನೆ" ಎಂದಾಗ ಅವನ ಮುಖ ಅರಳಿತು. "ಹುಡುಕಿ ತಂದುಕೊಡುತ್ತೇನೆ" ಅಂದ.

ಮೊಂಬೆಲಿಯನ್ನು ನಂಬಬಹುದಾದರೂ ಬರಿಯ ಆನೆಯ ತಲೆಬುರುಡೆ ಸಿಕ್ಕರೆ ಸಾಲದು, ಅದರ ಜೊತೆ ಅದರ ದಂತಗಳನ್ನೂ ಸಂಪಾದಿಸಬೇಕು. ಅಬ್ಬಾದಲ್ಲಿರುವ ಉಗ್ರಾಣದ ಮಾಲೀಕರಿಗೆ ಪತ್ರ ಬರೆದೆ. ಆ ನಾಲ್ಕೂ ದಂತಗಳ ವಿವರ, ಹಾಗು ಮಾರುಕಟ್ಟೆಯ ಬೆಲೆಗಿಂತ ಹೆಚ್ಚು ಹಣವನ್ನು ನಮೂದಿಸಿ, ಬುಟೆಂಬೋದ ಅಂಚೆ ಕಚೇರಿಗೆ ಅದನ್ನು ತಲುಪಿಸಿ ಹಣ ಪಡೆದುಕೊಳ್ಳಬೇಕೆಂದು ಕೋರಿ ಬರೆದೆ. ಇಷ್ಟು ಮಾಡಿ ನಾನು ಉತ್ತರಕ್ಕೆ ಹೊರಟೆ.


ಬುಟೆಂಬೊಗೆ ನಾನು ವಾಪಸಾಗುವಷ್ಟರಲ್ಲಿ ನಾಲ್ಕು ತಿಂಗಳಾಗಿತ್ತು. ಮೊಂಬೆಲಿಯ ಗುಡಿಸಲಲ್ಲಿ ಯಾರೂ ಇರಲಿಲ್ಲ. ಅವರಿವರನ್ನು ವಿಚಾರಿಸಿದಾಗ ಐದಾರು ವಾರಗಳ ಹಿಂದೆ ಸ್ಟಾನ್ಲೆವೆಲ್ಲೆಗೆ ಕೆಲಸ ಮಾಡಲು ಹೋದನೆಂದು ತಿಳಿಸಿದರು. ಆನೆಯ ತಲೆಯನ್ನು ಮನೆಯಲ್ಲಿ ಇಟ್ಟಿರಬಹುದೆಂದು ಅವನ ಮನೆಯನ್ನು ಹುಡುಕಿದೆ. ಆದರೆ ಏನೂ ಸಿಗಲಿಲ್ಲ. ಅಕ್ಕಪಕ್ಕದವರಿಂದಲೂ ಏನೂ ತಿಳಿಯಲಿಲ್ಲ. ನಾಲ್ಕು ದಂತಗಳ ಆನೆಯು ತನ್ನ ನಿಗೂಢತೆಯನ್ನು ಉಳಿಸಿಕೊಳ್ಳುವಂತೆ ಕಾಣುತ್ತಿದೆ.

ಬುಟೆಂಬೊದಲ್ಲಿ ನನಗೆ ಸ್ವಲ್ಪ ಪರಿಚಯವಿದ್ದ ರಿನೌಡ್ ಎನ್ನುವ ಬೆಲ್ಜಿಯಂ ಆಡಳಿತಾಧಿಕಾರಿಯಿದ್ದ. ಅವನ ಬಳಿ ಏನಾದರೂ ಮೊಂಬೆಲಿ ಕೊಟ್ಟಿದ್ದರೆ ಎಂದುಕೊಂಡು ಹೋಗಿ ಕೇಳಿದೆ. ಮೊಂಬೆಲಿ ಅಲ್ಲಿಗೆ ಹೋಗಿದ್ದನಂತೆ. ಕೊಳೆತು, ಹುಳಬಿದ್ದು, ಕೆಟ್ಟವಾಸನೆ ಬೀರುತ್ತಿದ್ದ ಅದನ್ನು ತಂದಿದ್ದಕ್ಕಾಗಿ ಅವನನ್ನು ಬೈದು ಹೊರಗಟ್ಟಿದರಂತೆ. ಕೊನೆಗೂ ಅದನ್ನು ಕಳೆದುಕೊಂಡೆ ಎಂದು ದುಃಖವಾಯಿತು. ತಲೆಬುರುಡೆ ಇರದೇ ದಂತಗಳನ್ನು ನೋಡಿ ಯಾರೂ ನಂಬುವುದಿಲ್ಲ. ಆದರೂ ಅಂಚೆ ಕಛೇರಿಗೆ ಹೋದೆ. ಅಲ್ಲಿಯೂ ನನ್ನ ಅದೃಷ್ಟ ಕೈಕೊಟ್ಟಿತ್ತು. ಉಗ್ರಾಣದಿಂದ ಪತ್ರವಷ್ಟೇ ಬಂದಿತ್ತು. "ನಾವು ನೀವು ತಿಳಿಸಿದ್ದ ದಂತಗಳನ್ನು ಗುರುತಿಸಿದ್ದೇವೆ. ಆದರೆ ನಿಮ್ಮ ಪತ್ರ ಬರುವಷ್ಟರಲ್ಲಿ ಅದನ್ನು ಬೆಲ್ಜಿಯಂನ ಉಗ್ರಾಣಕ್ಕೆ ಕಳಿಸಿದ್ದೇವೆ. ನಿಮಗೆ ಬೇಕಿದ್ದರೆ ಆಂಟ್ ವರ್ಪ್ ನಲ್ಲಿನ ನಮ್ಮ ಕೇಂದ್ರ ಕಚೇರಿಯನ್ನು ಸಂಪರ್ಕಿಸಬಹುದು" ಎಂದು ಬರೆದಿದ್ದರು. ಇದರಿಂದ ಏನೂ ಪ್ರಯೋಜನವಿಲ್ಲವೆಂದು ಸುಮ್ಮನೆ ಕಾಲೆಳೆದುಕೊಂಡು ರಿನೌಡ್ ನ ಕಚೇರಿಯ ಬಳಿ ಬಂದೆ. ಅಲ್ಲಿದ್ದ ಮಣ್ಣಿನ ರಾಶಿಯಿಂದ ಏನೊ ಬೆಳ್ಳಗೆ ಕಾಣಿಸಿತು. ಮೂಳೆಯ ರಾಶಿಯನ್ನು ಮಣ್ಣಲ್ಲಿ ಮುಚ್ಚಿದಂತೆ ಅದು ಕಾಣಿಸುತ್ತಿತ್ತು. ಕುತೂಹಲದಿಂದ ಕೋಲಿನಲ್ಲಿ ಕೆದಕಿದೆ. ನನ್ನ ಅದೃಷ್ಟ ವಾಪಸ್ ಬಂದಂತಿತ್ತು. ಅದೊಂದು ದೊಡ್ಡ ಆನೆಯ ತಲೆಬುರುಡೆಯಾಗಿತ್ತು. ರಿನೌಡ್ ಓಡಿಸಿದಾಗ ಮೊಂಬೆಲಿ ಅದನ್ನು ಅಲ್ಲೇ ರಸ್ತೆಯ ಪಕ್ಕದಲ್ಲಿ ಹಾಕಿ ಮಣ್ಣು ಮುಚ್ಚಿದ್ದಾನೆ ಎಂದು ಊಹಿಸಿದೆ. ತಕ್ಷಣವೇ ಅಂಚೆ ಕಚೇರಿಗೆ ಓಡಿದೆ. ನನ್ನ ತಂದೆ ತಾಯಿಗಳು ಆಂಟ್ ವರ್ಪಿನಲ್ಲಿರುವುದರಿಂದ, ಆ ದಂತಗಳ ವಿವರಣೆ ಕೊಟ್ಟು ಉಗ್ರಾಣಕ್ಕೆ ಹೋಗಿ ಅದನ್ನು ಕೊಂಡುಕೊಳ್ಳುವಂತೆ ನನ್ನ ತಂದೆಗೆ ತಂತಿ ಕಳಿಸಿದೆ. ಸನಿಕೆಯನ್ನು ಟ್ರಕ್ ನಲ್ಲಿಟ್ಟುಕೊಂಡು ಆ ಜಾಗಕ್ಕೆ ಹೋದೆ. ಕೆಟ್ಟವಾಸನೆ ಬೀರುತ್ತಿದ್ದರೂ ಲೆಕ್ಕಿಸದೆ ಉಸಿರು ಬಿಗಿಹಿಡಿದುಕೊಂಡು ಮಣ್ಣನ್ನು ತೆಗೆದೆ. ಆ ತಲೆ ಬುರುಡೆ ತುಂಬಾ ದೊಡ್ಡದಾಗಿತ್ತು. ರಸ್ತೆಗೆ ತಲೆ ಬುರುಡೆಯನ್ನು ಎಳೆದು ಪರಿಶೀಲಿಸಿದೆ. ದಂತಗಳಿರುವ ನಾಲ್ಕು ಗೂಡುಗಳನ್ನು ನೋಡಿ ಹಿಗ್ಗಿಹೋದೆ. ಇನ್ನುಳಿದದ್ದು ಯುರೋಪ್ ಗೆ ಹೋಗಿ ದಂತಗಳನ್ನು ಪಡೆದು ನಾಲ್ಕು ದಂತಗಳ ಆನೆಯೆಂಬುದಿತ್ತು ಎಂಬುದನ್ನು ಸಾಬೀತುಪಡಿಸುವುದು. ಈಗ ಈ ಬೃಹತ್ ಗಾತ್ರದ ತಲೆ ಬುರುಡೆಯನ್ನು ಸಾಗಿಸುವುದೇ ನನ್ನ ಮುಂದಿರುವ ಸವಾಲು.


ಅದನ್ನು ನೀರಿಳಿಯದ ದಪ್ಪ ಕ್ಯಾನ್ವಾಸ್ ಬಟ್ಟೆಯಲ್ಲಿ ಸುತ್ತಿ ಟ್ರಕ್ ಮೇಲಿರಿಸಿದೆ. ಹೋಗುವಾಗ ಮರದ ಕೊಂಬೆಯೊಂದಕ್ಕೆ ಬಡಿದು ನೀರಿನ ಹಳ್ಳದಲ್ಲಿ ಹೋಗಿ ಬಿತ್ತು. ಅದನ್ನು ಟ್ರಕ್ಕಿನಲ್ಲಿ ನನ್ನ ಹಿಂಬದಿಯೇ ಇರಿಸಿದೆ. ಅದರ ವಾಸನೆಯಿಂದ ಯಾರೂ ಮುಂದೆ ಬರದೇ ನಾನೇ ಟ್ರಕ್ ಓಡಿಸಬೇಕಾಯಿತು. ತೊಂದರೆ ಅಲ್ಲಿಗೇ ನಿಲ್ಲಲಿಲ್ಲ. ಒಂದು ಸಂಜೆ ಸಹರಾ ಮರುಭೂಮಿಯ ಅಂಚಿನಲ್ಲಿ ಶಿಬಿರ ಹಾಕಿದ್ದೆವು. ಗಾಳಿ ಆಡಲೆಂದು ಟ್ರಕ್ ನ ಬಾಗಿಲನ್ನು ತೆಗೆದಿದ್ದೆವು. ಬೆಳದಿಂಗಳ ರಾತ್ರಿಯಲ್ಲಿ ಮೂರು ಕತ್ತೆಕಿರುಬಗಳು ದಾಳಿ ಮಾಡಿದವು. ನಾವು ಎದ್ದು ಓಡಿಸುವಷ್ಟರಲ್ಲಿ ಆನೆಯ ತಲೆಯ ಹಿಂಭಾಗವನ್ನು ಒಂದಷ್ಟು ತಿಂದು ಹಾಕಿದ್ದವು. ಅದನ್ನು ಸುತ್ತಿ, ಹಗ್ಗ ಕಟ್ಟಿ, ಬಾಗಿಲನ್ನು ಭದ್ರಪಡಿಸಿದೆ. ಮುಂದೆ ಸಹರಾದಲ್ಲಿ ಸಾಗಿ ಮೊರೊಕ್ಕೊ ಮೂಲಕ ಸ್ಪೇನ್, ನಂತರ ಫ್ರಾನ್ಸ್ ಮತ್ತು ಅಲ್ಲಿಂದ ಆಂಟ್ ವರ್ಪ್ ತಲುಪುವಷ್ಟರಲ್ಲಿ ಸಾಕಾಗಿಹೋಗಿತ್ತು.


ಹಲವಾರು ತಿಂಗಳುಗಳಾದ ಮೇಲೆ ಊರಿಗೆ ಹೋಗಿದ್ದರಿಂದ ನನಗೆ ಅದ್ದೂರಿ ಸ್ವಾಗತ ಕಾದಿತ್ತು. ನನಗೆ ದಂತಗಳದ್ದೇ ಚಿಂತೆ. ಆದರೆ ನನ್ನ ತಂದೆ ದಂತಗಳನ್ನು ನ್ಯೂಯಾರ್ಕ್ ನ ನೈಸರ್ಗಿಕ ಇತಿಹಾಸದ ವಸ್ತುಸಂಗ್ರಹಾಲಯಕ್ಕೆ ಕಳಿಸಿಬಿಟ್ಟಿದ್ದರು. ಆನೆಯ ತಲೆ ಬುರುಡೆಯನ್ನು ಹಡಗಿನಲ್ಲಿ ಚೆನ್ನಾಗಿ ಬಿಗಿದು ಕಟ್ಟಿ ನ್ಯೂಯಾರ್ಕ್ ಗೆ ಸಾಗಿಸಿದೆ. ಅಲ್ಲಿಗೆ ಹೋದ ಕೂಡಲೇ ದಂತಗಳು ಸುರಕ್ಷಿತವಾಗಿರುವುದನ್ನು ಫೋನ್ ಮಾಡಿ ಖಚಿತಪಡಿಸಿಕೊಂಡೆ. ನನ್ನ ಸರಕನ್ನು ಟ್ಯಾಕ್ಸಿಯಲ್ಲಿ ವಸ್ತುಸಂಗ್ರಹಾಲಯಕ್ಕೆ ತೆಗೆದುಕೊಂಡು ಹೋದೆ. ವಸ್ತುಸಂಗ್ರಹಾಲಯದ ನಿರ್ದೇಶಕರಾದ ಡಾ.ಜೇಮ್ಸ್ ಕ್ಲಾರ್ಕ್ ರನ್ನು ಭೇಟಿಯಾದೆ. ಅವರ ಕಚೇರಿಯಲ್ಲಿ ದಂತಗಳನ್ನು ನೋಡಿದಾಗ ಇಟುರಿ ಕಾಡಿನ ರಾಜ ಎಂದು ಈ ಆನೆಯನ್ನು ಪಿಗ್ಮಿಗಳು ಹೇಳುತ್ತಿದ್ದುದು ನೆನಪಾಯಿತು.


ಕಟ್ಟಿದ್ದ ತಲೆ ಬುರುಡೆಯನ್ನು ಬಿಚ್ಚಿ ನೆಲದ ಮೇಲಿಟ್ಟೆವು. ಮೂರು ದಂತಗಳು ಗೂಡುಗಳಲ್ಲಿ ಸರಿಯಾಗಿ ಕೂತಿದ್ದರಿಂದ ಅವು ಅದರದ್ದೇ ಎಂದು ಖಾತ್ರಿಯಾಯಿತು. ಆದರೆ ನಾಲ್ಕನೆಯದು ಸೇರಲಿಲ್ಲ. ತಕ್ಷಣ ಏನೋ ಹೊಳೆದಂತಾಗಿ ಅದನ್ನು ಒಳಮುಖವಾಗಿ ತಿರುಗಿಸಿ ಸೇರಿಸಿದಾಗ ಸೇರಿಕೊಂಡಿತು. ಮೂರು ದಂತಗಳು ಹೊರಮುಖವಾಗಿ ಚಾಚಿಕೊಂಡಿದ್ದರೆ ಒಂದು ಒಳಮುಖವಾಗಿರುತ್ತದೆ. ಇಲ್ಲದಿದ್ದರೆ, ಅದು ಒಂದಕ್ಕೊಂದು ಉಜ್ಜುತ್ತದೆ.

ಆನೆಯ ತಲೆ ಬುರುಡೆ ಮತ್ತು ದಂತಗಳು ಹೊಂದಿಕೆಯಾದರೂ ಇಟುರಿ ಕಾಡಿನ ರಾಜನ ರಹಸ್ಯವನ್ನು ಬಿಡಿಸಿದೆ ಎಂಬ ನಂಬಿಕೆ ಮೂಡುತ್ತಿಲ್ಲ. ಹಾಗೂ ಹೀಗೂ ನಾಲ್ಕು ದಂತಗಳ ಆನೆಯ ಹುಡುಕಾಟವಂತೂ ಮುಗಿಯಿತು!

Wednesday, July 8, 2009

ಎರವೀಕುಲಂ ಅಭಯಾರಣ್ಯ

ಕೇರಳದಲ್ಲಿ ಹಾದು ಹೋಗುವ ಪಶ್ಚಿಮಘಟ್ಟದಲ್ಲಿ ಮುನ್ನಾರ್ ನಿಂದ ೧೫ ಕಿ.ಮೀ. ದೂರದಲ್ಲಿದೆ ಎರವೀಕುಲಂ ರಾಷ್ಟ್ರೀಯ ಅಭಯಾರಣ್ಯ.
ಬ್ರಿಟಿಷ್ ಪ್ಲಾಂಟರುಗಳ ಬೇಟೆಯ ಮೋಜಿಗೆ ಈಡಾಗಿದ್ದ ಎರವೀಕುಲಂ ಮತ್ತು ರಾಜಮಲೈ ಸುತ್ತಲಿನ ಕಾಡನ್ನು ೧೯೭೫ರಲ್ಲಿ ಅಭಯಾರಣ್ಯವೆಂದು ಘೋಷಿಸಲಾಯಿತು.

ಇಲ್ಲಿ ಅನೈಮುಡಿ ಎಂಬ ಪಶ್ಚಿಮಘಟ್ಟದಲ್ಲೇ ಅತಿ ಎತ್ತರದ (೨೬೯೦ಮೀ) ಪರ್ವತವಿದೆ. "ನೀಲಗಿರಿ ಥಾರ್" ನ ವಾಸಸ್ಥಾನವಿದು. "ವರೈ ಆಡು"(ಬೆಟ್ಟದ ಆಡು) ಎಂದು ಸ್ಥಳೀಯರು ಇದನ್ನು ಕರೆಯುವರು. ಈ ನೀಲಗಿರಿ ಥಾರ್ ಇಲ್ಲಿ ಬಿಟ್ಟರೆ ಬೇರೆಲ್ಲೂ ಇಲ್ಲ. ಜಾರುವ, ಕಡಿದಾದ ಬೆಟ್ಟಗುಡ್ಡಗಳ ಮೇಲೆ ಇವು ನಿರಾಯಾಸವಾಗಿ ನಡೆದಾಡುವುದು ನೋಡಲು ಬಲು ಚಂದ.

ಇವು ಕಡಿದಾದ ಬಂಡೆಗಳ ಮೇಲೆ ವೇಗವಾಗಿ ಓಡಾಡುವುದನ್ನು ನೋಡಿ, "ಇದರ ಕಾಲಲ್ಲಿ ಏನಾದರೂ ಅಯಸ್ಕಾಂತ ಶಕ್ತಿಯಿರಬಹುದಾ?" ಎಂದು ಅನ್ನಿಸದಿರದು.

ಬೆಟ್ಟದ ಜೀವ.

ಪ್ರವಾಸಿಗರು ನೀಡುವ ತೊಂದರೆಗಳು.

ಹನ್ನೆರಡು ವರ್ಷಕ್ಕೊಮ್ಮೆ ಅರಳುವ "ನೀಲಕುರುಂಜಿ" ಪುಷ್ಪ ಇಲ್ಲಿನ ಮತ್ತೊಂದು ವೈಶಿಷ್ಟ್ಯ. ಈ ನೀಲಿ ಹೂಗಳಿಂದಾಗಿಯೇ ನೀಲಗಿರಿ ಎಂಬ ಹೆಸರು ಬಂದಿರುವುದು.

Wednesday, July 1, 2009

ಭೂಮಿಯೊಳಗೊಂದು ಪಯಣ

ಗುಹೆಯ ಪ್ರವೇಶಕ್ಕೆ ಮುನ್ನ ಮಂದಸ್ಮಿತ ಬುದ್ಧ.
ಕಣ್ಣು ಮಬ್ಬುಕತ್ತಲಿಗೆ ಹೊಂದಿಕೊಳ್ಳುತ್ತಿತ್ತು. ಅಲ್ಲಲ್ಲಿ ಹಳದಿ ದೀಪಗಳು. ನಾವಿದ್ದದ್ದು ನೆಲದೊಳಗೆ ೮೦ ಅಡಿ ಆಳದ ಗುಹೆಯಲ್ಲಿ. ಇದ್ದಕ್ಕಿದ್ದಂತೆ ಆ ದೀಪಗಳೂ ಮಾಯ. ಗವ್ ಎನ್ನುವ ಕಗ್ಗತ್ತಲು. ನಮ್ಮ ಕಾಲು ನೆಲಕ್ಕಂಟಿಬಿಟ್ಟಿತ್ತು. ಸ್ವರ ಗಂಟಲೊಳಗೇ ಪರದಾಡುತ್ತಿತ್ತು. ಸಾವರಿಸಿಕೊಂಡ ಗೈಡ್ ತನ್ನ ಟಾರ್ಚ್ ಹೊತ್ತಿಸಿದ. ಆ ಕಪ್ಪು ಕತ್ತಲಿಗೆ ಇದು ಯಾವ ಲೆಕ್ಕ. "ಜನರೇಟರ್ ಆನ್ ಮಾಡುತ್ತಾರೆ ಸ್ವಲ್ಪ ಹೊತ್ತು ಇರಿ" ಅಂದ. ನಿಮಗೆ ಜೂಲ್ಸ್ ವರ್ನ್ ನ "ಎ ಜರ್ನಿ ಟು ದ ಸೆಂಟರ್ ಆಫ್ ದ ಅರ್ಥ್" ಕಾದಂಬರಿ ನೆನಪಾಯಿತೇ?
ಭೂಗರ್ಭದಲ್ಲಿ ಒಂದೂವರೆ ಕಿಲೋಮೀಟರು ಉದ್ದ ೮೦ ರಿಂದ ೧೦೦ ಅಡಿ ಆಳದಲ್ಲಿ ಓಡಾಡುವುದು ಕಾಲ್ಪನಿಕ ಕಾದಂಬರಿಯ ಘಟನಾವಳಿಗಳಲ್ಲ. ಸತ್ಯಸಂಗತಿ. ವಿಶಾಲವಾದ ಭೂಮಿ ನಮ್ಮ ತಲೆ ಮೇಲಿನ ಶಿಲಾ ಛಾವಣಿಯ ಮೇಲೆ ಇರುವ ಸಂಗತಿಯೇ ರೋಚಕ.
ಈ ಅದ್ಭುತ ಅನುಭವಕ್ಕಾಗಿ ಕರ್ನೂಲ್ ಜಿಲ್ಲೆಯಲ್ಲಿರುವ ಬೇಲಂ ಗುಹೆಯೊಳಗೆ ಪ್ರವೇಶ ಮಾಡೋಣ ಬನ್ನಿ.
ಬೇಲಂ ಗುಹೆಯ ಪ್ರವೇಶದ್ವಾರ.
ಗುಹೆಯೆಂದೊಡನೆ ಯಾವುದೋ ಬೆಟ್ಟ ಗುಡ್ಡದೊಳಗೊ ಇರುವುದಲ್ಲ. ಥೇಟ್ ಬಾವಿಯೊಳಕ್ಕಿಳಿದಂತೆ ಭೂಗರ್ಭದೊಳಕ್ಕೆ ಇಳಿಯುವುದು. ಜೂಲ್ಸ್ ವರ್ನ್ ನ ಕಾದಂಬರಿಯಲ್ಲಿ ಪ್ರೊ.ಹಾರ್ಡ್ ವಿಗ್, ಹ್ಯಾರಿ ಮತ್ತು ಹ್ಯಾನ್, ಸ್ನೇಫೆಲ್ಸ್ ಪರ್ವತದಲ್ಲಿನ ಜ್ವಾಲಾಮುಖಿಯ ಬಾಯೊಳಗಿಳಿದು ಭೂಗರ್ಭದೊಳಗೆ ಪ್ರಯಾಣಿಸುತ್ತಾರೆ.
ಇಲ್ಲಿ ನಾವು ಪ್ರವೇಶಿಸುವ ಬಾಯಿಯ ಸುತ್ತ ಕಡಪಾ ಕಲ್ಲನ್ನು ಅಲಂಕಾರಿಕವಾಗಿ ಜೋಡಿಸಿದ್ದಾರೆ. ಪ್ರವೇಶಿಸುತ್ತಿದ್ದಂತೆಯೇ ಮೊದಲು ಸಿಗುವ ವಿಶಾಲ ಆವರಣಕ್ಕೆ ೧೯೮೨ ರಿಂದ ೮೪ ರವರೆಗೂ ಈ ಗುಹೆಗಳ ಆಳ ಉದ್ದಗಳ ದಾಖಲೆ ಮಾಡಿದ ಡೇನಿಯಲ್ ಗೇಬರ್ ನ ಹೆಸರಿಟ್ಟಿದ್ದಾರೆ. ಇಲ್ಲಿಂದ ಮುಂದೆ ನಮ್ಮ ಕಣ್ಣು ಮತ್ತು ಮನಸ್ಸು ಅಂಧಕಾರಕ್ಕೆ ಹೊಂದಿಕೊಳ್ಳಬೇಕು. ಸಣ್ಣ, ಎತ್ತರದ, ತಗ್ಗು, ಆಳ, ಅಗಲ ಹೀಗೆ ನಾನಾ ರೀತಿಯಲ್ಲಿ ಊಹೆಗೆ ನಿಲುಕದಂತೆ ಗುಹೆ ನಮ್ಮ ಮುಂದೆ ತೆರೆದುಕೊಳ್ಳುತ್ತಾ ಹೋಗುತ್ತದೆ.

ಚಿನ್ನದ ಬಣ್ಣದ ಹಸುವಿನ ಕೆಚ್ಚಲು.
ಅಲ್ಲಲ್ಲಿ ದೀಪಗಳು, ಗಾಳಿಯಾಡಲು ಕೊಳವೆಗಳನ್ನು ಜೋಡಿಸಿಟ್ಟಿದ್ದಾರೆ. ಕೃತಕ ನೀರು ಚಿಲುಮೆಯನ್ನೂ ಮಾಡಿದ್ದಾರೆ. ನೆಲದಲ್ಲಿ ಅಲ್ಲಲ್ಲೇ ಜಿನುಗುವ ನೀರಿನಿಂದಾಗಿ ಕೆಸರು ಕಾಲಿಗೆಲ್ಲಾ ಮೆತ್ತಿಕೊಂಡರೂ ನಿಗೂಢ ಲೋಕದಲ್ಲಿ ವಿಹರಿಸುತ್ತಿರುವ ನಮಗೆ ಅದು ಗೌಣವಾಗುತ್ತದೆ.

ಯಾವ ಶಿಲ್ಪಿ ಕಡೆದ ದ್ವಾರವೋ!
ಸುತ್ತಮುತ್ತ ಕಣ್ಣಾಡಿಸುತ್ತಾ ಹೋದಂತೆ ನಮ್ಮ ಮನಸ್ಸಿನ ಊಹಾ ಸಾಮರ್ಥ್ಯಕ್ಕೆ ಅನುಗುಣವಾಗಿ ನಾನಾ ಆಕಾರಗಳು, ರೂಪಗಳು ಕಾಣುತ್ತವೆ. ಗುಹೆಯ ಮೇಲ್ಭಾಗದಲ್ಲಿ ಜಿನುಗುವ ನೀರಿನಿಂದಾದ ಸುಣ್ಣದಂಶದ ಸಂಗ್ರಹ ಮತ್ತು ಗುಹೆಯ ನೆಲದ ಮೇಲೆ ಕೂಡ ಬೀಳುವ ಸುಣ್ಣದ ಅಂಶಗಳಿಂದ ಈ ಆಕೃತಿಗಳು ಪಡಿಮೂಡಿವೆ. ಹಾವು, ಹಲ್ಲಿ, ಹಸುವಿನ ಕೆಚ್ಚಲು, ಶಿವನ ಜಟೆ, ಆಲದ ಬಿಳಲುಗಳು, ಆತ್ಮಲಿಂಗ, ಶಿಲಾಯುಗದ ಚಿತ್ರಗಳು, ಉಗುರಿನಿಂದ ಪರಚಿದಂತೆ ಇತ್ಯಾದಿ. ಮರದ ತೊಗಟೆ, ತರಕಾರಿ, ಎಲೆ ಹೀಗೆ ಎಲ್ಲೆಲ್ಲೂ ಗಣೇಶನನ್ನು ಕಾಣುವ ನಮಗೆ ಇಲ್ಲಿ ಹಲವು ರೀತಿಯ ಗಣೇಶನನ್ನು ಕಾಣಬಹುದು. ನಮ್ಮ ಊಹಾ ಸಾಮರ್ಥ್ಯಕ್ಕೆ ಸವಾಲೆಸೆಯುವ ಆಕಾರಗಳು ಮತ್ತು ಗುಹಾವಿನ್ಯಾಸ ನಮ್ಮನ್ನು ಹೊಸ ಲೋಕಕ್ಕೆ ಕೊಂಡೊಯ್ಯುತ್ತವೆ.

ಹೆಜ್ಜೆ ಹೆಜ್ಜೆಗೂ ಅನೂಹ್ಯ ರೂಪ ಪಡೆದುಕೊಳ್ಳುವ ದಾರಿ.
ಇಲ್ಲಿನ ಆಕಾರ ವಿನ್ಯಾಸಗಳನ್ನು ನೋಡಿ ಹಲವು ಹೆಸರುಗಳಿಂದ ಕೆಲ ಪ್ರದೇಶಗಳನ್ನು ಗುರುತಿಸಿದ್ದಾರೆ. ಕೋಟಿಲಿಂಗ, ಮಂಟಪ, ಸನ್ಯಾಸಿಯ ಹಾಸಿಗೆ, ಸಿಂಹದ್ವಾರ ಇತ್ಯಾದಿ. ಪಾತಾಳಗಂಗೆ ಎಂಬಲ್ಲಿ ನೀರು ಲಿಂಗಾಕೃತಿಯ ಕಲ್ಲಿನ ಮೇಲಿಂದ ಬೀಳುತ್ತದೆ. ಈ ಪಾತಾಳಗಂಗೆಗೆ ತುಂಬಾ ಕಿರಿದಾದ ಸ್ಥಳದ ಮೂಲಕ ಇಳಿದು ಹೋಗಬೇಕು. ಸ್ಥೂಲವಾಗಿರುವವರು ಹಿಡಿಸುವುದಿಲ್ಲ! ತಮಾಷೆಯೆಂದರೆ ಅಲ್ಲಿ ಸಿಟ್ಟಾಗಿದ್ದ ಸ್ಥೂಲವ್ಯಕ್ತಿಯೊಬ್ಬರು ಈ ಸ್ಥಳವನ್ನು ಅಗಲ ಮಾಡಬೇಕೆಂದು ಆಗ್ರಹಿಸುತ್ತಿದ್ದರು. ತನ್ನ ದೇಹ ಪ್ರಕೃತಿಯನ್ನು ಕಿರಿದಾಗಿಸದೇ ಪ್ರಕೃತಿಯನ್ನೇ ತನಗಾಗಿ ವಿಕೃತಿಗೊಳಿಸಬೇಕೆನ್ನುವ ಇವರ ವಾದಕ್ಕೆ ಏನೆನ್ನುವುದು?

ಈ ಚಿತ್ರವಿಚಿತ್ರವಾದ ಗುಹಾರಚನೆಗೆ ಚಿತ್ರಾವತಿ ನದಿಯೇ ಕಾರಣವೆನ್ನುತ್ತಾರೆ. ಆದರೆ ಎಷ್ಟು ವರ್ಷಗಳ ಹಿಂದೆ ಎಂಬುದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ. ಬೌದ್ಧ ಸನ್ಯಾಸಿಗಳು ಇಲ್ಲಿ ಧ್ಯಾನ ಮಾಡಿದ್ದರಂತೆ. ಈಗಂತೂ ಆಂಧ್ರದ ಪ್ರವಾಸೋದ್ಯಮ ಇಲಾಖೆ ಚೆನ್ನಾಗಿ ಅಭಿವೃದ್ಧಿಪಡಿಸಿದೆ. ಶಬ್ದ ಮಾಡದೆ ಮೌನದಿಂದ ಗುಹೆಯಲ್ಲಿ ಸುತ್ತಾಡಿದರೆ ಅದರ ಅನುಭೂತಿಯೇ ಬೇರೆ.

ಪಾತಾಳಗಂಗೆ.

ಛಾವಣಿ ತುಂಬಾ ವಿವಿಧ ಆಕೃತಿಗಳು.

ದುರ್ಗಮ ದಾರಿ.

ನಾವಿರುವುದು ಭೂಮಿಯೊಳಗೆ, ನಮ್ಮ ಮೇಲೆ ವಿಸ್ತಾರವಾದ ಭೂಮಿ ಹರಡಿದೆ ಎಂಬ ಅರಿವೇ ರೋಮಾಂಚನಗೊಳಿಸುವಂತದ್ದು. ಅಕಸ್ಮಾತ್ ಕುಸಿದರೆ ಎಂಬ ಊಹೆ ಮಾತ್ರ ಭಾಯಾನಕ!
ದಾರಿ - ದೂರ : ಬೆಂಗಳೂರಿನಿಂದ ಬೇಲಂ ಗುಹೆಗಳಿಗೆ ೨೮೦ ಕಿ.ಮೀ. ದೂರ. ಅನಂತಪುರಕ್ಕೆ ಹೋಗಿ ಅಲ್ಲಿಂದ ತಾಡಪತ್ರಿ ಮುಖಾಂತರ ಹೋಗಬಹುದು.