Thursday, July 30, 2009

ಚಿಲ್ಕಾ ಸರೋವರದಲ್ಲಿ ಹಕ್ಕಿಗಳಿಗೆ ಉಂಗುರಧಾರಣೆ

ಹಾರುತ್ತಿರುವ ಹಕ್ಕಿಗಳೇ... ನಿಮ್ಮ ಭಾಗ್ಯ ನಮಗಿಲ್ಲ...

ಬೆಂಗಳೂರಿನಿಂದ ರೈಲಿನಲ್ಲಿ ಕುಮಾರ್ ಮತ್ತು ನಾನು ಹೊರಟಾಗ ಮನಸ್ಸಿನ ತುಂಬಾ ಲಕ್ಷಾಂತರ ಹಕ್ಕಿಗಳ ಕಲರವ. ಏಕೆಂದರೆ ಹೊರಟಿದ್ದುದು ಒರಿಸ್ಸಾದ ಚಿಲ್ಕಾ ಸರೋವರಕ್ಕೆ. ಪ್ರಪಂಚದ ಎರಡನೆಯ ಅತಿದೊಡ್ಡ ಸಮುದ್ರ ಮತ್ತು ಸಿಹಿನೀರು ಬೆರೆತಂತಹ ಸರೋವರವಾದ ಚಿಲ್ಕಾ, ನೀರು ಹಕ್ಕಿಗಳಿಗೆ ಭಾರತದ ಅತಿ ದೊಡ್ಡ ಚಳಿಗಾಲದ ಆಶ್ರಯತಾಣ. ಪಕ್ಷಿವೀಕ್ಷಕರು ಇನ್ನೂರಕ್ಕೂ ಅಧಿಕ ಜಾತಿಯ ಹಕ್ಕಿಗಳನ್ನಿಲ್ಲಿ ಗುರುತಿಸಿರುವರು.ಜೆಟ್ ವಿಮಾನಕ್ಕೆ ಹಾರಲು ಕಲಿಸಿದ ಫ್ಲೆಮಿಂಗೋಗಳು.

ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ(ಬಿ ಎನ್ ಹೆಚ್ ಎಸ್) ಅವರು ನಡೆಸುವ "ಪಕ್ಷಿ ಶಾಸ್ತ್ರದ ಕುರಿತು ಅರಿಯುವ ಕಾರ್ಯಕ್ರಮ" ಎಂಬ ಕೋರ್ಸ್‌ನ ಭಾಗವಾದ ಹಕ್ಕಿಗಳಿಗೆ ಉಂಗುರ ತೊಡಿಸುವ ಕಾರ್ಯಕ್ಕೆ ನಾವು ಹೊರಟಿದ್ದೆವು. ಬಲುಗಾಂ ಎಂಬ ಪುಟ್ಟ ಊರಿನಲ್ಲಿ ಸಹಪಾಠಿಗಳೊಂದಿಗೆ ಸೇರಿಕೊಂಡೆವು. ಭಾರತದ ನಾನಾ ಭಾಗಗಳಿಂದ ಬಂದಿದ್ದ ನಮ್ಮೆಲ್ಲರಿಂದಾಗಿ ಮಿನಿ ಭಾರತವೇ ಬಲುಗಾಂನಲ್ಲಿ ಸೇರಿದಂತಿತ್ತು. ಬಲುಗಾಂನ ಹಿತ್ತಲಲ್ಲೇ ಇದೆ ಚಿಲ್ಕಾ ಸರೋವರ.ಒಂದು ದಿನವಿಡೀ ದೋಣಿಯಲ್ಲಿ ಕೂತು ಸರೋವರವನ್ನು ಸುತ್ತಾಡಿ ಹಕ್ಕಿಗಳನ್ನು ಗುರುತಿಸಲು ಪ್ರಯತ್ನಿಸಿದೆವು. ವಿಜ್ಞಾನಿಗಳಾದ ಡಾ.ದೀಪಕ್ ಮತ್ತು ಡಾ.ಬಾಲಚಂದ್ರನ್ ನಮಗೆ ಮಾರ್ಗದರ್ಶನ ಮಾಡುತ್ತಿದ್ದರು. ಕಿತ್ತಳೆ ಹಣ್ಣಿನಂತಿರುವ ನೀರಿನಂಚಿನ ಸೂರ್ಯ ಮತ್ತು ಭಾರತಕ್ಕೆ ಅತಿಥಿಗಳಾಗಿ ಬಂದಿರುವ ಲಕ್ಷಾಂತರ ಹಕ್ಕಿಗಳ ದರ್ಶನದಿಂದ ಮನಸ್ಸು ಪುಳಕಿತಗೊಂಡಿತು. ದೋಣಿ ಹತ್ತಿರ ಹೋದಂತೆ ಆಕಾಶಕ್ಕೆ ಕತ್ತಲು ಬರಿಸುವಂತೆ ಹಾರುವ ಆ ಬಾತುಗಳ ಸಂಖ್ಯೆ ಮತ್ತು ಶಕ್ತಿ ಅದ್ಭುತ.


ಚಿಲ್ಕಾದಲ್ಲಿ ಪಕ್ಷಿ ವೀಕ್ಷಣೆಗಾಗಿ ದೋಣಿಯಲ್ಲಿ ಪ್ರಯಾಣ.ಮರುದಿನ ನಮ್ಮ ಪ್ರಯಾಣ ಚಿಲ್ಕಾ ಸರೋವರದ ಮುಖ್ಯ ದ್ವೀಪವಾದ ನಲಬಾನಕ್ಕೆ. ಫ್ಲೆಮಿಂಗೋಗಳ ಹಾರಾಟವನ್ನು ಇಲ್ಲಿ ನಿಂತು ನೋಡುವುದೇ ಒಂದು ಭಾಗ್ಯ. ಆಕಾಶದಲ್ಲಿ ಗುಲಾಬಿ ಬಣ್ಣದ ಗೆರೆಯೆಳೆದಂತೆ ಹಾರುವ ಅವುಗಳ ಹಾರಾಟವೇ ಒಂದು ದೃಶ್ಯಕಾವ್ಯ.


ಬಿ.ಎನ್.ಹೆಚ್.ಎಸ್. ನಿಂದ ನಿಯೋಜಿತರಾದ ಕವಾಟಕರ( trappers) ಜೊತೆ ಹೋಗಿ ಬಲೆಗಳನ್ನು ಒಡ್ಡಿ ಬಂದೆವು. ಹಕ್ಕಿಗಳನ್ನು ಹಿಡಿಯಲು ದೇಶೀಯ ಬಲೆ, ಸಲಕರಣೆಗಳನ್ನೇ ಬಳಸಲಾಗುತ್ತದೆ. ಬಲೆಗಳನ್ನು ಒಡ್ಡುವುದು, ಅದರಿಂದ ಹಕ್ಕಿಗಳನ್ನು ಕೊಂಚವೂ ನೋವಾಗದಂತೆ ಬಿಡಿಸುವುದು ಎಲ್ಲ ನುರಿತ ಕೈಗಳಿಂದಲೇ ಆಗಬೇಕು. ಕತ್ತಲಾಗುತ್ತಿದ್ದಂತೆಯೇ ಹಕ್ಕಿಗಳು ಬಲೆಯಲ್ಲಿ ಬೀಳಲಾರಂಭಿಸಿದವು.


ನಮ್ಮ "ರಿಂಗ್ ಮಾಸ್ಟರ್" ಡಾ.ಬಾಲಚಂದ್ರನ್ "ರಿಂಗಿಂಗ್" ಅಥವಾ "ಬ್ಯಾಂಡಿಂಗ್" ಎಂದು ಕರೆಯುವ ಈ ಉಂಗುರ ತೊಡಿಸುವ ಕ್ರಮ, ಉದ್ದೇಶಗಳ ಬಗ್ಗೆ ತಿಳಿಸುತ್ತಾ ಹೋದರು.


ಅಲ್ಯೂಮಿನಿಯಂ ಮಿಶ್ರಲೋಹದಿಂದ ತಯಾರಿಸಿದ ಅತಿ ಕಡಿಮೆ ತೂಕದ ಈ ಉಂಗುರಗಳನ್ನು ಪಕ್ಷಿತಜ್ಞರು ಹಕ್ಕಿಗಳನ್ನು ಅಭ್ಯಸಿಸಲು ಅವುಗಳ ಕಾಲಿಗೆ ತೊಡಿಸುತ್ತಾರೆ. ಈ ಉಂಗುರವು "ಸಿ" ಆಕಾರದಲ್ಲಿರುತ್ತದೆ. ಇದರ ಮೇಲೆ ಸಂಸ್ಥೆಯ ವಿಳಾಸ ಮತ್ತು ಸಂಖ್ಯೆ ಇರುತ್ತದೆ. ಹಕ್ಕಿಗಳ ಕಾಲಿಗೆ ಇದನ್ನು ತೊಡಿಸಿ ಪ್ಲೆಯರ್‌ನಿಂದ ಎರಡೂ ಅಂಚನ್ನು ಜೊತೆಗೂಡುವಂತೆ ಅದುಮಬೇಕು. ಬೆಸಸಂಖ್ಯೆಯ ವರ್ಷಗಳಲ್ಲಿ ಎಡಗಾಲಿಗೂ ಸಮಸಂಖ್ಯೆಯ ವರ್ಷಗಳಲ್ಲಿ ಬಲಗಾಲಿಗೂ ತೊಡಿಸುವುದು ರೂಢಿ. ಈ ಉಂಗುರ ತೊಡಿಸುವ ಉದ್ದೇಶ ಹಕ್ಕಿಗಳ ವಲಸೆ ಅಧ್ಯಯನ, ವಲಸೆಯ ದಾರಿ, ಸಂತಾನೋತ್ಪತ್ತಿ, ಬದುಕಿನ ಕಾಲಾವಧಿ ಅರಿಯುವುದೇ ಆಗಿದೆ. ಉಂಗುರ ಹಾಕಿ ಹಾರಿಬಿಟ್ಟ ಹಕ್ಕಿಯನ್ನು ಪುನಃ ಹಿಡಿದಾಗ ಉಂಗುರದ ಮೇಲಿನ ಸಂಸ್ಥೆಯ ವಿಳಾಸ ಮತ್ತು ಸಂಖ್ಯೆಯಿಂದ ಹಿಂದಿನ ವಿವರ ಪಡೆದು ಅಧ್ಯಯನ ಮಾಡಲು ಸಹಾಯವಾಗುತ್ತದೆ.ಮಧ್ಯಪ್ರದೇಶದ ಧಾರ್‌ನ ಮಹಾರಾಜರಿಂದ ೧೯೨೬ರಲ್ಲಿ ಮೊದಲ ಬಾರಿಗೆ ಹಕ್ಕಿಗಳಿಗೆ ಉಂಗುರವನ್ನು ತೊಡಿಸಲು ಭಾರತದಲ್ಲಿ ಪ್ರಾರಂಭಿಸಲಾಯಿತು. ಬಿ.ಎನ್.ಹೆಚ್.ಎಸ್. ಆಗ ಮಹಾರಾಜರಿಗೆ ೫೦೦ ಉಂಗುರಗಳನ್ನು ಸರಬರಾಜು ಮಾಡಿತ್ತು. ನಂತರ ಅಲ್ಲಲ್ಲಿ ಈ ಉಂಗುರ ಹಾಕುವ ಕಾರ್ಯ ನಡೆದರೂ ಅಧಿಕೃತವಾಗಿ ಶುರುವಾದದ್ದು ಡಾ.ಸಲೀಂ ಅಲಿಯವರ ನೇತೃತ್ವದಲ್ಲಿ ೧೯೫೯ ರಲ್ಲಿ ಅದರಲ್ಲೂ ಡಬ್ಲ್ಯು.ಎಚ್.ಓ.(WHO) ಸಹಭಾಗಿತ್ವದಲ್ಲಿ ಹಕ್ಕಿಗಳು ತಮ್ಮೊಂದಿಗೆ ರೋಗಾಣುಗಳನ್ನು ಹೊತ್ತು ತರುತ್ತವೆಯೋ ಎಂದು ಪರೀಕ್ಷಿಸಲು. ೧೯೮೭ ರಿಂದ ಹಕ್ಕಿಗಳ ವಲಸೆಯ ಅಧ್ಯಯನ ಮಾಡಲು ಉಂಗುರ ತೊಡಿಸಲು ಪ್ರಾರಂಭಿಸಲಾಯಿತು.ಸಂಯುಕ್ತ ರಾಷ್ಟ್ರಗಳಲ್ಲಿ ಪ್ರತಿವರ್ಷ ನಾಲ್ಕು ಲಕ್ಷ ಹಕ್ಕಿಗಳಿಗೆ ಉಂಗುರ ತೊಡಿಸುತ್ತಾರೆ. ಭಾರತದಲ್ಲಿ ನಾಲ್ಕು ದಶಕಗಳಿಂದ ಐದು ಲಕ್ಷ ಹಕ್ಕಿಗಳಿಗೆ ಉಂಗುರ ತೊಡಿಸಲಾಗಿದೆ. ಇವುಗಳಲ್ಲಿ ಪುನಃ ಸಿಕ್ಕಂತಹ ಹಕ್ಕಿಗಳು ಶೇಕಡ ಒಂದರಷ್ಟು. ಇದಕ್ಕೆ ಕಾರಣ ಉಂಗುರ ತೊಡಿಸುವ ಪರಿಣಿತರು ಕಡಿಮೆ ಇರುವುದು ಮತ್ತು ಹಣದ ಕೊರತೆ. ಇದನ್ನು ನೀಗಿಸಲು ಬಿ.ಎನ್.ಹೆಚ್.ಎಸ್. ಈ ರೀತಿಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲಿದೆ.


ಹಿಡಿದ ಹಕ್ಕಿಯ ಹೆಸರು, ಕಾಲಿನ, ಕೊಕ್ಕಿನ ಮತ್ತು ರೆಕ್ಕೆಯ ಅಳತೆಗಳು, ತೂಕ, ಉಂಗುರದ ಸಂಖ್ಯೆ ಇತ್ಯಾದಿ ಮಾಹಿತಿಗಳನ್ನು ಬರೆದಿಟ್ಟುಕೊಳ್ಳಬೇಕು. ನಾವು ರಾತ್ರಿಯಿಡೀ ಇಪ್ಪತ್ತು ಜಾತಿಯ ೧೯೦ ಹಕ್ಕಿಗಳಿಗೆ ಉಂಗುರ ತೊಡಿಸಿದೆವು. ಹಕ್ಕಿಗಳ ತಲೆ ನಮ್ಮ ಎರಡು ಬೆರಳುಗಳ ಮಧ್ಯೆ ಬರುವಂತೆ ಅವುಗಳಿಗೆ ತೊಂದರೆಯಾಗದಂತೆ ಹಿಡಿಯಬೇಕು. ಉಂಗುರ ತೊಡಿಸಿದ ತಕ್ಷಣ ಅವುಗಳನ್ನು ಕತ್ತಲಲ್ಲೇ ಒಯ್ದು ಬಿಟ್ಟುಬಿಡಬೇಕು. ಹಕ್ಕಿಗಳನ್ನು ಹೆಚ್ಚುಹೊತ್ತು ಹಿಡಿದಿಡದೆ ಅಂಕಿ ಅಂಶಗಳನ್ನು ಬರೆಸಿ, ಉಂಗುರ ತೊಡಿಸಿ ನಂತರ ನಮಗೆಲ್ಲಾ ಮಾಹಿತಿ ನೀಡುತ್ತಾ ನಮ್ಮ ಕೈಲೇ ಹಕ್ಕಿಗಳನ್ನು ಜೋಪಾನವಾಗಿ ಬಿಡಿಸುವ ಡಾ.ಬಾಲು ಅವರ ಜಾಣ್ಮೆ ಅಪಾರ. ಹಿಂದಿನ ವರ್ಷ ಉಂಗುರ ತೊಡಿಸಿದ್ದಂತಹ ಎರಡು ಲೆಸ್ಸರ್ ಸ್ಯಾಂಡ್ ಪ್ಲೋವರ್‌ಗಳು ನಮಗೆ ಸಿಕ್ಕಿದ್ದವು. ಅವುಗಳ ತೂಕ, ಅಳತೆಗಳನ್ನು ಬರೆದುಕೊಂಡು ಬಿಟ್ಟೆವು.


ಕಾಡುಹಕ್ಕಿಗೆ ಕಾಲಿನ ತುದಿಯಲ್ಲಿ ಉಂಗುರ ತೊಡಿಸಿದೆ.
ಇದೆಲ್ಲ ನೀರುಹಕ್ಕಿಗಳಿಗೆ ಉಂಗುರ ತೊಡಿಸಿದ್ದಾದರೆ, ಮರುದಿನ ಕಾಡುಹಕ್ಕಿಗಳ ಸರದಿ. ಸೂರ್ಯೋದಯಕ್ಕೆ ಮುನ್ನವೇ ಕಾಡಿನಲ್ಲಿ ಬಲೆಗಳನ್ನು ಕಟ್ಟಿದೆವು. ಉಂಗುರ ತೊಡಿಸುವಲ್ಲಿ ವ್ಯತ್ಯಾಸವಿಷ್ಟೆ - ನೀರು ಹಕ್ಕಿಗಳಿಗಾದರೆ ಕಾಲು ನೀರಿನಲ್ಲಿ ಮುಳುಗುವುದರಿಂದ ಕೊಂಚ ಮೇಲೆ ಉಂಗುರ ತೊಡಿಸಿದರೆ ಕಾಡು ಹಕ್ಕಿಗಳಿಗೆ ಕಾಲಿನ ಕೆಳಭಾಗದಲ್ಲಿ ಹಾಕುವುದು.

ನೀರುಹಕ್ಕಿಗೆ ಉಂಗುರವನ್ನು ಕಾಲಿನ ಮೇಲ್ಭಾಗದಲ್ಲಿ ತೊಡಿಸಲಾಗಿದೆ.
ಹಕ್ಕಿಗಳ ವಲಸೆಗೆ ಮುಖ್ಯ ಕಾರಣಗಳು ಶೀತಲ ಹವಾಮಾನ ಮತ್ತು ಆಹಾರ. ನೂರಾರು ಕೆಲವೊಮ್ಮೆ ಸಾವಿರಾರು ಕಿಲೋಮೀಟರ್ ದೂರವನ್ನು ನಿಲ್ಲದೆ ಹಾರುವ ಇವುಗಳು ವಲಸೆಗೆ ಮುಂಚೆ ಮೈಯಲ್ಲಿ ಸಾಕಷ್ಟು ಕೊಬ್ಬನ್ನು ಶೇಖರಿಸಿಟ್ಟುಕೊಳ್ಳುತ್ತವೆ, ವಾಹನಕ್ಕೆ ಇಂಧನ ತುಂಬಿಸಿಟ್ಟುಕೊಂಡಂತೆ! ಅಚ್ಚರಿಯ ಸಂಗತಿಯೆಂದರೆ ಹಕ್ಕಿಗಳು ತಮ್ಮ ದಾರಿಯನ್ನು ನೆನಪಿಟ್ಟುಕೊಂಡು ಸಾವಿರಾರು ಕಿ.ಮೀ. ದೂರದ ಗಮ್ಯವನ್ನು ಕರಾರುವಕ್ಕಾಗಿ ತಲುಪುವ ಅವುಗಳ ಸಾಮರ್ಥ್ಯ.


ಹಕ್ಕಿಗಳ ತೂಕ, ರೆಕ್ಕೆ, ಕೊಕ್ಕು, ಕಾಲುಗಳ ಅಳತೆಗಳನ್ನು ಬರೆದಿಡಬೇಕು.
ನಾವು ಚಿಲ್ಕಾಗೆ ಹೋಗುವಷ್ಟರಲ್ಲಿಯೇ ಈ ವಲಸೆ ಹಕ್ಕಿಗಳ ಮಾರಣಹೋಮದ ಬಗ್ಗೆ ಪತ್ರಿಕೆಗಳಲ್ಲಿ ಓದಿ ನೋವುಂಟಾಗಿತ್ತು. ಅಲ್ಲಿನ ಸರ್ಕಾರ ಈಗೀಗ ಎಚ್ಚೆತ್ತುಕೊಳ್ಳುತ್ತಿದೆ. ಸರ್ಕಾರವನ್ನೇ ಪೂರ್ಣ ಅವಲಂಭಿಸದೆ ನಮ್ಮ ಕೊಕ್ಕರೆಬೆಳ್ಳೂರಿನಂತೆ ಸಾರ್ವಜನಿಕರೇ ನಮ್ಮಲ್ಲಿಗೆ ಬರುವ ಅತಿಥಿಗಳ ಸಂರಕ್ಷಣೆಗೆ ಮುಂದಾಗಬೇಕಿದೆ.


ಬಲೆಗಳೊಂದಿಗೆ ಹಾಗೂ ಹಿಡಿದ ಹಕ್ಕಿಗಳೊಂದಿಗೆ ಕವಾಟಕ.
ಕಡೆಯದಾಗಿ ನನಗೆ ಡಾ.ಬಾಲು ಅವರ ಮಾತುಗಳೇ ಕಿವಿಯಲ್ಲಿ ರಿಂಗಣಿಸುತ್ತಿವೆ - "ಸಾಮಾನ್ಯವಾಗಿ ಉಂಗುರವೆಂದರೆ ನಮಗೆ ತಿಳಿದಿರುವುದು ನಿಶ್ಚಿತಾರ್ಥದ ಉಂಗುರ. ಈಗ ಹಕ್ಕಿಗಳಿಗೆ ಉಂಗುರ ತೊಡಿಸಿರುವುದರಿಂದ ಅವುಗಳೂ ನಮ್ಮ ಜೀವನ ಸಂಗಾತಿಗಳಾಗಿವೆ. ಸೃಷ್ಟಿಯ ಅದ್ಭುತಗಳಾದ ಈ ಹಕ್ಕಿಗಳನ್ನು ನೋಡಿ ಆನಂದಿಸುವುದೇ ಅಲ್ಲದೆ ಅವುಗಳನ್ನೂ, ಅವುಗಳ ವಾಸಸ್ಥಾನಗಳನ್ನೂ ಉಳಿಸಿ ಬೆಳೆಸಲು ನಾವು ಶ್ರಮಿಸಬೇಕು".
ನಮ್ಮ ಟೀಮ್!
ನೀವುಗಳೂ ಹಕ್ಕಿಗಳೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತೀರಲ್ಲವೇ?

34 comments:

ಸಿಮೆಂಟು ಮರಳಿನ ಮಧ್ಯೆ said...

ಹುಡುಕಾಟದವರೆ...

ನಾನು ಸಿಂಗಾಪುರದ ಪಕ್ಷಿಧಾಮದಲ್ಲಿ ಹಕ್ಕಿಗಳ ಕಾಲಲ್ಲಿ ಉಂಗುರ ನೋಡಿದ್ದೆ..
ಅಲ್ಲಿನವರ ಉತ್ತರ ಸಮಾಧಾನವಾಗಿರಲಿಲ್ಲ...

ತುಂಬಾ ಉಪಯುಕ್ತ ಮಾಹಿತಿ,...
ಸುಂದರವಾದ ಬರವಣಿಗೆ...
ಮನಸೂರೆಗೊಳ್ಳುವ ಫೋಟೊಗಳು.. ಅದ್ಭುತವಾಗಿವೆ...

ಆಸಕ್ತರಿಗೆ ಒಂದು ಕೈಪೀಡಿಯಂತಿದೆ ನಿಮ್ಮ ಬ್ಲಾಗ್...

ನಿವ್ಯಾಕೆ ಇವೆಲ್ಲವನ್ನೂ ಪುಸ್ತಕರೂಪದಲ್ಲಿ ತರಬಾರದು...?
ಶಾಲಾ, ಕಾಲೇಜು ಮತ್ತು ಆಸಕ್ತರಿಗೆ ಒಂದು ಉತ್ತಮ ಮಾಹಿತಿಸಿಗುತ್ತದೆ...

ನಿಮ್ಮ ಹುಡುಕಾಟಕ್ಕೆ ಹೃದಯ ಪೂರ್ವಕ ಅಭಿನಂದನೆಗಳು..

Guru's world said...

ಅಹಾ ...ಅದ್ಬುತ.....ತುಂಬ ಚೆನ್ನಾಗಿ ಇದೆ.. ಹಕ್ಕಿಗಳಿಗೆ ಉಂಗುರ ತೊಡಿಸುವ ಹಾಗು ಅದರ ಬಗ್ಗೆ ತಿಳಿದುಕೊಳ್ಳುವ ಬಗೆ....
ನಾನು ಇದರಬಗ್ಗೆ NGO ನಲ್ಲಿ, ಹಾಗೆ ಡಿಸ್ಕವರಿ ನಲ್ಲಿ ನೋಡಿದ್ದೇ... ನಿಮ್ಮ ಫೋಟೋ ಸಹಿತ,,, ಲೇಖನ ತುಂಬ ಮಾಹಿತಿಗಳನ್ನು ತಿಳಿಸಿತು..... ಒಳ್ಳೆ ಹವ್ಯಾಸಗಳನ್ನು ಇಟ್ಟುಕೊಂಡ ಇದ್ದೀರಾ.. ಸರ್...
ಖಂಡಿತ ನಮಗೂ ಪಕ್ಷಿಗಳ ಜೊತೆಯಲ್ಲಿ,, ಉಂಗುರದ ನಿಶ್ಚಿತಾರ್ಥ ಮಾಡಿಸಿಕೊಳ್ಳುವ ase ಆಗಿದೆ

ಪಾಚು-ಪ್ರಪಂಚ said...

ಮಲ್ಲಿಕಾರ್ಜುನ್ ಅವರೇ,

ಚಂದದ ಚಿತ್ರಗಳೊಂದಿಗೆ ಎಷ್ಟು ಉಪಯುಕ್ತ ಮಾಹಿತಿ ತಿಳಿಸಿದ್ದೀರಿ. ಟೀವಿಯಲ್ಲಿ ನೋಡಿದ್ದಷ್ಟೇ, ಅದರೂ ಇಷ್ಟೊಂದು ವಿಷಯ ತಿಳಿದಿರಲಿಲ್ಲ.

ಪ್ರಕಾಶ್ ಹೆಗಡೆಯವರು ತಿಳಿಸಿದಂತೆ ನಿಮ್ಮ ಹವ್ಯಾಸ ಪುಸ್ತಕ ರೂಪ ಪಡೆದರೆ ಇನ್ನಷ್ಟು ಅನುಕೂಲ..

ನಿಮ್ಮ ಹವ್ಯಾಸ, ಬರವಣಿಗೆ, ಚಂದದ ಫೋಟೋಗಳಿಗೆ ಅಭಿನಂದನೆಗಳು.

ನಮ್ಮನೆ.. SWEET HOME..... said...

ನಿಮ್ಮ ಸಾಹಸ, ಆಸಕ್ತಿಗಳಿಗೆ,
ಸುಂದರ ಫೋಟೊ, ಲೇಖನಕ್ಕೆ.. ಅಭಿನಂದನೆಗಳು..

ನಿಮ್ಮ ಬ್ಲಾಗ್‍ನ ಪ್ರಾಣಿ, ಪಕ್ಷೀ,ಕೀಟಗಳ ಫೋಟೊಲೇಖನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ...

ಬಹಳಷ್ಟು ವಿಧ್ಯಾರ್ಥಿಗಳಿಗೆ ಸಹಾಯವಾಗುತ್ತದೆ...

ಚಿತ್ರಾ said...

ಮಲ್ಲಿಕಾರ್ಜುನ್,
ನಿಮ್ಮೊಂದಿಗೆ ನಮ್ಮನ್ನೂ ವಿಶ್ವಪ್ರಸಿದ್ಧ 'ಚಿಲ್ಕಾ ' ಸರೋವರಕ್ಕೆ ಕರೆದೊಯ್ದು, ಹಕ್ಕಿಗಳಿಗೆ ಉಂಗುರ ತೊಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಿದ್ದಕ್ಕೆ
ಉಂಗುರ ತೊಡಿಸುವ ಕಾರಣ , ವಿಧಾನಗಳನ್ನು ಚಿತ್ರ ಸಹಿತ ವಿವರಿಸಿದ್ದಕ್ಕೆ ನಿಮಗೆ ಅನಂತ ಧನ್ಯವಾದಗಳು.
ಪರಿಸರ ಹಾಗು ಜೀವ ಸಂಕುಲದ ರಕ್ಷಣೆಯ ಬಗ್ಗೆ ನಾವಿನ್ನು ಎಚ್ಚೆತ್ತುಕೊಳ್ಳ ಬೇಕಷ್ಟೇ .ಈ ಎಚ್ಚರ ಆದಷ್ಟೂ ಬೇಗ ಆಗಲಿ ಎಂದು ಹಾರೈಸೋಣ !

ರಾಜೀವ said...

ಸಕ್ಕತ್ ಸರ್. ಪ್ರಕೃತಿಯ ಮಡಿಲಲ್ಲಿ ಕೆಲಸ ಮಾಡುವುದೇ ಒಂದು ಸುಖಾನುಭವ.

"ದೇಶ ಸುತ್ತಿ ಸಾಯಿ, ಕೋಶ ಓದಿ ಸಾಯಿ" ಎಂಬ ಮಾತನ್ನು ಕೇಳಿದ್ದೆ. ನೀವು ಮೊದಲನೆಯದನ್ನ ಚೆನ್ನಾಗೇ ಮಾಡುತ್ತಿದ್ದೀರ. ಹೀಗೇ ಮಾಡುತ್ತಿರಿ. ನಮಗೂ ತಿಳಿಸುತ್ತಿರಿ. ಧನ್ಯವಾದ.

ಚಿಕ್ಕ ಚಿಕ್ಕ ಹಕ್ಕಿಗಳ ಕಾಲುಗಳಿಗೆ ಉಂಗುರಗಳನ್ನು ತೊಡಿಸಿದರೆ, ಅದು ಬೆಳೆಯುವುದು ಹೇಗೆ? ಉಂಗುರ ತೊಂದರೆಯಾಗುವುದಿಲ್ಲವೇ?

suresh kota said...

ಅಲ್ರೀ, ನೀವೂ ಹಕ್ಕಿಗಳ ಥರಾನೇ ಯಾವಾಗ್ಲೂ ಎಲ್ಲೆಲ್ಲೋ ಹಾರ್ಕೊಂಡಿರ್ತೀರಲ್ಲಾ.
ಲೈಫ್ ಅಂದ್ರೆ ನಿಮ್ದು ಕಣ್ರೀ..:)

suresh kota said...

ನಿಮ್ ಕೈಗೂ ಉಂಗುರ ಹಾಕ್ಕೊಂಡಿದ್ದೀರಾ?

Sumana said...

ನಾವು ಎರಡೂವರೆ ವರ್ಷ ಒರಿಸ್ಸಾದಲ್ಲಿ ಇದ್ರೂ ಚಿಲ್ಕ ಲೇಕ್ ನೋಡಲು ಆಗದ ನಿರಾಶೆ ನಿಮ್ಮ ಚಿತ್ರ ಲೇಖನ ನೋಡಿ ದೂರವಾಯ್ತು. ಉಂಗುರ ಧಾರಣೆಯ ಬಗ್ಗೆ ಕೇಳಿದ್ದೆ.. ಆದ್ರೆ ನೀವು ನೀಡಿದ ಮಾಹಿತಿ ತುಂಬಾ ಚೆನ್ನಾಗಿದೆ. ಅಪರೂಪದ ಚಿತ್ರಗಳು ಮಲ್ಲಿಕಾರ್ಜುನ್.... ನಿಮ್ಮ ಅಭಿಯಾನಗಳು ಹೀಗೆ ಯಶಸ್ವಿಯಾಗಲೆಂಬ ಹಾರೈಕೆ ನನ್ನದು.

GANADHAL said...

ಮಲ್ಲಿ,

ಎಕ್ಸಲೆಂಟ್ ಫೋಟೋಗ್ರಫಿ. ನಿಮ್ಮ ಅನುಭವ ಕೂಡ. ಒಂದು ಬೇಸರ ಏನೂ ಅಂದ್ರೆ, ನಾನು ಒರಿಸ್ಸಾಗೆ ಹೋದರೂ ಚಿಲ್ಕಾ ನೋಡೋಕೆ ಆಗ್ಲಿಲ್ಲ ಎನ್ನುವುದು.
ಈ ವರ್ಷದ ಆರಂಭದಲ್ಲಿ ಒರಿಸ್ಸಾದ ಭುವನೇಶ್ವರದಲ್ಲಿ ಒಂದು 'ರಾಷ್ಟ್ರೀಯ ಭತ್ತ ಸಂರಕ್ಷಕರ' ಕಾರ್ಯಾಗಾರವಿತ್ತು. ಆಗ ಏಳು ದಿನ ಭುವನೇಶ್ವರದಲ್ಲಿ ಉಳಿದಿದ್ದೆ. ಹತ್ತಾರು ಹಳ್ಳಿಗಳನ್ನು ಸುತ್ತಾಡಿ ಒಂದಷ್ಟು ಭತ್ತ ಸಂರಕ್ಷಕರನ್ನು ಭೇಟಿಯಾಗಿ ಬಂದೆ. ಚಿಲ್ಕಾ ಗೆ ಹೋಗಬೇಕೆಂಬ ಯೋಜನೆ ಸಿದ್ಧವಾಗಿತ್ತು. ಅತ್ತ ಮುಂಬೈನಲ್ಲಿ ಉಗ್ರರ ದಾಳಿ ಸುದ್ದಿ ಕೇಳಿ ಎಲ್ಲ ಬಂದ್ ಮಾಡಿಬಿಟ್ಟೆ. ನಿಮ್ಮ ಫೋಟೋ ನೋಡಿದ ಮೇಲೆ ಅಲ್ಲಿಗೆ ಹೋಗಲೇ ಬೇಕು ಅಂತ ತೀರ್ಮಾನ ಮಾಡಿದ್ದೇನೆ. ಸಾಧ್ಯವಾದರೆ ಗುರುಗಳಾದ ನಾಗೇಶಹೆಗಡೆಯವರನ್ನು ಕರೆದುಕೊಂಡು. ಏಕೆಂದರೆ ಚಿಲ್ಕಾ ಬಗ್ಗೆ ಅವರು ಸಾಕಷ್ಟು ತಿಳಿದುಕೊಂಡಿದ್ದಾರೆ.
ನಿಮ್ಮ ವರದಿ, ಚಿತ್ರಗಳಿಗೆ ತುಂಬಾ ಥ್ಯಾಂಕ್ಸ್
ಗಾಣಧಾಳು ಶ್ರೀಕಂಠ

PaLa said...

ಒಳ್ಳೇ ಮಾಹಿತಿ ಪೂರ್ಣ ಬರಹ, ಹಕ್ಕಿಗೆ ಉಂಗುರ ತೊಡಿಸುವ ಬಗ್ಗೆ ಸವಿವರವಾದ ಲೇಖನ.. ಇದು ನಿಮ್ಮ ಮೊದಲ ಅನುಭವವೇ? ಈ ಬಾರಿ ಹೋದಾಗ ಹಿಂದೆ ಉಂಗುರ ತೊಡಿಸಿಕೊಂಡ ಹಕ್ಕಿಯಾವುದಾದರೂ ಸಿಕ್ಕಿತ್ತೇ? ಎಲ್ಲಾ ಬಗೆಯ ಹಕ್ಕಿಗಳಿಗೂ ಒಂದೇ ರೀತಿಯ ಉಂಗುರ ತೊಡಿಸುವುದೇ ಮತ್ತು ಈ ಉಂಗುರದ ಅಂದಾಜು ತೂಕವೆಷ್ಟು?

shivu said...

ಮಲ್ಲಿಕಾರ್ಜುನ್,

ಹಕ್ಕಿಗಳಿಗೆ ಉಂಗುರ ತೊಡಿಸುವ ಅದನ್ನು ಸಂರಕ್ಷಿಸುವ ವಿಚಾರವನ್ನು ಪೋಟೋಗಳ ಸಹಿತ ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ಇಂಥ ವಿಚಾರಗಳು ಪ್ರತಿಯೊಬ್ಬರಿಗೂ ಒಂದು ಒಂದು ಮಾರ್ಗದರ್ಶನದಂತಿದೆ.

ನನಗೆ ತಿಳಿದಂತೆ ನಿಮ್ಮ ಬ್ಲಾಗಿನ ಅನೇಕ ಲೇಖನಗಳು ಚಿಟ್ಟೆಗಳು, ಹುಳುಗಳು, ಪಕ್ಷಿಗಳು ಇತ್ಯಾದಿಗಳ ಬಗ್ಗೆ ಪಕ್ಕಾ ಮಾಹಿತಿ ಮತ್ತು ಫೋಟೋಗಳ ಸಹಿತ ಒಳ್ಳೇ ಮಾಹಿತಿಯನ್ನು ಕೊಡುತ್ತಿವೆ. ಇದು ಕೇವಲ ಬ್ಲಾಗಿಗರ ಮಟ್ಟಕ್ಕೆ ಮಾತ್ರ ಸೀಮಿತವಾಗದೆ ನಮ್ಮ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ, ಇಂಥ ವಿಚಾರಗಳಲ್ಲಿ ಆಸಕ್ತಿಯುಳ್ಳವರಿಗೆ ಸಿಗಲು ನೀವ್ಯಾಕೆ ಇದನ್ನು ಪುಸ್ತಕ ರೂಪದಲ್ಲಿ ಕೊಡಲು ಪ್ರಯತ್ನಿಸಬಾರದು. ಇವತ್ತೇ ನಿಮ್ಮ ಹಳೇ ಲೇಖನವನ್ನೆಲ್ಲಾ ಗಂಭೀರವಾಗಿ ಪರಿಶೀಲಿಸಿ.

ಒಳ್ಳೆಯದಾಗಲಿ.

RAMU said...

ಹಕ್ಕಿಗಳ ಬಗ್ಗೆ, ಅವುಗಳ ಜೀವನ ಚಿತ್ರ, ಅದಕ್ಕಾಗಿ ನೀವು ಮಡಿದ ಸಾಹಸ ಮತ್ತು ಅವುಗಳ ಉಳಿವಿನ ಜಾಗೃತಿಯ ಬಗ್ಗೆ ಚೀನಾಗಿ ವಿವರಿಸಿದ್ದಿರಾ.
ಧನ್ಯವಾದಗಳು.

--
RAMU M
9480427376

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಕಾಶ್ ಸರ್,
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ಪುಸ್ತಕ? ಇದು ಸಾಧ್ಯವಾ? ಈ ಚಿತ್ರಗಳನ್ನು ಪ್ರಿಂಟ್ ಮಾಡಲು(ಪುಸ್ತಕ) ಸಾಧ್ಯವಾ?

ಮಲ್ಲಿಕಾರ್ಜುನ.ಡಿ.ಜಿ. said...

ಗುರು ಅವರೆ,
ಧನ್ಯವಾದಗಳು. ಹಕ್ಕಿಗಳೊಂದಿಗಿನ ಒಡನಾಟ ಸದಾ ಮುದಕೊಡುವಂತಹುದು ಅಲ್ವೇ?

ಮಲ್ಲಿಕಾರ್ಜುನ.ಡಿ.ಜಿ. said...

ಪಾಚು-ಪ್ರಪಂಚದಲ್ಲಿ ತೋರಿಸುವಷ್ಟು ವಿವಿಧ ಸ್ಥಳಗಳನ್ನು ತೋರಿಸಲು ನನಗೆ ಅಸಾಧ್ಯ. ನಿಮ್ಮ ಬ್ಲಾಗ್ ಅಷ್ತು ಚೆನ್ನಾಗಿರುತ್ತದೆ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ಪುಸ್ತಕ...ಗೊತ್ತಿಲ್ಲ .. ನನ್ನ ಚಿತ್ರಲೇಖನಗಳು ಪುಸ್ತಕ ರುಪದಲ್ಲಿ ಬರಬಹುದಾ ಎಂಬ ಕಲ್ಪನೆ ಹೊಸದು... ನೊಡೋಣ!

ಮಲ್ಲಿಕಾರ್ಜುನ.ಡಿ.ಜಿ. said...

"ನಮ್ಮನೆ" ಮೇಡಂ,
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ನನ್ನ ಚಿತ್ರ ಲೇಖನಗಳು ಪುಸ್ತಕವಾದರೆ ನಿಜಕ್ಕೂ ಚೆನ್ನಾಗಿರುತ್ತಾ?

ಮಲ್ಲಿಕಾರ್ಜುನ.ಡಿ.ಜಿ. said...

ಚಿತ್ರಾ ಮೇಡಂ,
ನೀವು ಬರೆದಂತೆ ನಮಗೆಲ್ಲಾ ಕಾಳಜಿ ಮೂಡಬೇಕಿದೆ. ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ರಾಜೀವ ಅವರೆ,
ಉಂಗುರ ಸಡಿಲವಾಗಿರುತ್ತದೆ. ಅಂದರೆ loose ಆಗಿ ಆಡುತ್ತಿರುವಂತಿರುತ್ತೆ. ಬಿಗಿಯಾಗಿರುವುದಿಲ್ಲ. ಹಾಗೂ ಹಗುರವಾಗಿರುವುದರಿಂದ ತೊಂದರೆಯಾಗದು.

ಮಲ್ಲಿಕಾರ್ಜುನ.ಡಿ.ಜಿ. said...

ಸುರೇಶ್ ಕೋಟ ಅವರೆ,
ನಿಮ್ಮ ಹಾರೈಕೆ ಹೀಗೇ ಇರಲಿ. ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಸುಮನಾ ಮೇಡಂ,
ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.

ಮಲ್ಲಿಕಾರ್ಜುನ.ಡಿ.ಜಿ. said...

ಗಾಣದಾಳು ಶ್ರೀಕಂಠ ಅವರೆ,
ನಾನು ಚಿಲ್ಕಾಗೆ ಹೋಗುವ ಮುಂಚೆ ನಾಗೇಶ್ ಹೆಗಡೆಯವರನ್ನು ಭೇಟಿ ಮಾಡಿ ಮಾಹಿತಿ ಪಡೆದಿದ್ದೆ. ಅವರು MSc ಮಾಡುವಾಗ ಚಿಲ್ಕಾದಲ್ಲಿ ಅಲ್ಲಿನ ಮಣ್ಣಿನ ಬಗ್ಗೆ ಸಂಶೋಧನೆ ಮಾಡಿದ್ದರು. ನಾನಲ್ಲಿ 6 ದಿನವಿದ್ದರೂ ಭುವನೇಶ್ವರಕ್ಕೆ, ಪುರಿ ದೇವಸ್ಥಾನಕ್ಕೆ, ಕೊನಾರ್ಕ್ ದೇವಾಲಯಕ್ಕೆ ಹೋಗಲಾಗಲಿಲ್ಲ. ಅಷ್ಟು ದೂರ ಹೋಗಿ ಇವೆಲ್ಲ ನೋಡದೆ ಬಂದೆನೆಂಬ ಅಳುಕು ಕಾಡುತ್ತಿದೆ.

ಮಲ್ಲಿಕಾರ್ಜುನ.ಡಿ.ಜಿ. said...

ಪಾಲಚಂದ್ರ,
ನಿಮ್ಮ ಊಹೆ ಸರಿ. ಇದು ನನ್ನ ಮೊದಲ ಅನುಭವ. ನಾನು ಲೇಖನದಲ್ಲಿ ಬರೆದಿರುವೆನಲ್ಲ - ನಮಗೆ ಹಿಂದಿನ ವರ್ಷ ಉಂಗುರ ತೊಡಿಸಿದ್ದ ಎರಡು ಹಕ್ಕಿಗಳು ಸಿಕ್ಕಿದ್ದವು ಅಂತ. ಇರಲಿ.
BNHs ಅವರ ಬಳಿ ವಿವಿಧ ರೀತಿಯ ಉಂಗುರಗಳಿವೆ(A, AB, B, C, F, L, K and Z). ಅವುಗಳ diameter ಬೇರೆಬೇರೆ ಇರುತ್ತವೆ. ವಿವಿಧ ಹಕ್ಕಿಗಳ ಕಾಲುಗಳಿಗೆ ಹೊಂದುವಂತದ್ದು ಹಾಕಬೇಕು.
ಉಂಗುರದ ತೂಕ weigh ಮಾಡಿಲ್ಲ. ಕಡಿಮೆ ಅಂದರೆ ಕೆಲ ಗ್ರಾಂ ಇರಬಹುದು. ಕೈಯಲ್ಲಿ ಹಿಡಿದಾಗ ತುಂಬ ಹಗುರವಾಗಿತ್ತು.

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ನೀವು ಹೇಳಿದಂತೆ ಚಿತ್ರಲೇಖನಗಳನ್ನು ಓಟ್ಟು ಮಾಡಿದುತ್ತಿದ್ದೇನೆ. ನೋಡೋಣ ಏನಾಗುತ್ತದೆಯೊ?!

ಮಲ್ಲಿಕಾರ್ಜುನ.ಡಿ.ಜಿ. said...

ರಾಮು ಅವರೆ,
ಧನ್ಯವಾದಗಳು. ಹೀಗೇ ಪ್ರೋತ್ಸಾಹಿಸುತ್ತಿರಿ.

Dr. B.R. Satynarayana said...

ಮಲ್ಲಿಕಾರ್ಜುನ್ ಚಿಲ್ಕಾ ಸರೋವರಕ್ಕೆ ನಿಮ್ಮ ಅದ್ಭುತಯಾನದ ಬಗ್ಗೆ ಓದಿ ಖುಷಿಯಾಯಿತು. ಫೋಟೋಗಳು ಮುದ ನೀಡಿದವು. ಅದರಲ್ಲೂ ಆ ಸೂರ್ಯೋದಯ (ಸೂರ್ಯಾಸ್ತ?) ಫೋಟೋ ನನಗೆ ತುಂಬಾ ಹಿಡಿಸಿತು.
ಇಲ್ಲಿ ಗೆಎರಡು ವರ್ಷಗಳ ಹಿಂದೆ ಓರಿಸ್ಸಾ ಪ್ರವಾಸಕ್ಕೆ ಹೋಗಿದ್ದಾಗ ನಾವೂ ಚಿಲ್ಕಾ ಸರೋವರಕ್ಕೆ ಹೋಗಿದ್ದೆವು. ಆದರೆ ನಿಮ್ಮಷ್ಟು ಚೆಂದದ ಫೊಟೋಗಳನ್ನು ತೆಗೆಯಲು ಸಾಧ್ಯವಾಗಿರಲಿಲ್ಲ.

sunaath said...

ಮಲ್ಲಿಕಾರ್ಜುನ,
ಈ ಲೇಖನವು ನನಗೆ ತುಂಬಾ ಸಂತೋಷವನ್ನು ನೀಡಿತು. ನೀವು ಮಾಡಿದ ಈ ಕಾರ್ಯ ಹಾಗೂ ಬರೆದ ಈ ಲೇಖನ ಪ್ರಶಂಸನೀಯ.
ಶುಭಮಸ್ತು!

PARAANJAPE K.N. said...

ಫೋಟೋ-ಲೇಖನ ಅದ್ಭುತವಾಗಿದೆ. ಹೊಸ ವಿಚಾರ ತಿಳಿಸಿದ್ದೀರಿ. ನಿಮ್ಮ ಅನುಭವ ಹ೦ಚಿಕೊ೦ಡಿದ್ದಕ್ಕೆ ಅಭಿನ೦ದನೆಗಳು

Deepasmitha said...

ಮಲ್ಲಿಕಾರ್ಜುನ್ ಅವರೆ, ಹಕ್ಕಿಗಳಿಗೆ ಉಂಗುರು ತೊಡಿಸುವ ಮಾಹಿತಿ ತುಂಬ ಉಪಯುಕ್ತ. ಇನ್ನು ನಿಮ್ಮ ಫೋಟೋಗಳ ಬಗ್ಗೆ ಹೆಚ್ಚೇನು ಬರೆಯುವ ಅಗತ್ಯವಿಲ್ಲ. ನಾವೂ ಕೂಡ ಮೂರು ವರ್ಷದ ಹಿಂದೆ ಒರಿಸ್ಸಾ ಪ್ರವಾಸ ಮಾಡಿದಾಗ ಚಿಲ್ಕಾ ಸರೋವರಕ್ಕೂ ಭೇಟಿ ನೀಡಿದ್ದೆವು. ಫಿಲ್ಮ್ ಕ್ಯಾಮರಾ ಕೈಕೊಟ್ಟು ತೆಗೆದ ಒಂದು ಚಿತ್ರವೂ ಬರಲಿಲ್ಲ. ಆದರೆ ವೀಡಿಯೋ ಇದೆ. ಅದನ್ನು edit ಮಾಡಿ youtubeಗೆ ಹಾಕುವ ಯೋಜನೆ ಇದೆ

ಬಾಲು said...

ನಿಜಕ್ಕೂ ನಂಗೆ ಇಲ್ಲಿ ತನಕ ಗೊತ್ತಿದ್ದಿದ್ದು ನಿಶ್ಚಿತಾರ್ಥ ದ ಉಂಗುರ ಮಾತ್ರ!!! ಅಧ್ಭುತವಾದ ವಿಷಯ ತಿಳಿಸಿದಕ್ಕೆ ತುಂಬಾ ಧನ್ಯವಾದಗಳು. ಹೀಗೆ ಹೆಚ್ಚಚ್ಚು ಹುಡುಕಾಡಿ, ಮಾಹಿತಿಗಳನ್ನ ತಿಳಿಸುತ್ತಾ ಇರಿ.

ಆಮೇಲೆ ಪ್ರಕಾಶ್ ಅವರು ಹೇಳಿದಂತೆ ಪುಸ್ತಕದ ಬಗ್ಗೆ ಯೋಚಿಸಿ, ಅವರ ಮಾತಿಗೆ ನನ್ನದು ಸಹಮತವಿದೆ.

guruve said...

ಬಹಳ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಾ ಧನ್ಯವಾದಗಳು, ಈ ಉಂಗುರಧಾರಣೆ ಬಗ್ಗೆ ಕೇಳಿದ್ದೆ, ಆದರೆ ಇಷ್ಟೋಂದು ಮಾಹಿತಿ ತಿಳಿದಿರಲಿಲ್ಲ. ಮುಂದೆ ಯಾವಾಗಲಾದರೂ ಹೋದರೆ ತಿಳಿಸಿ, ನನಗೂ ಇದರಲ್ಲಿ ಭಾಗಿಯಾಗುವ ಭಾಗ್ಯ ದೊರಕಲಿ.. :)

ರೂpaश्री said...

ಮಲ್ಲಿಕಾರ್ಜುನ್ ಅವರೆ,
ಚಿಲ್ಕಾ ಸರೋವರ ಮತ್ತೆ ಪಕ್ಷಿಗಳಿಗೆ ಬ್ಯಾಂಡ್ ಹಾಕಿ ಅಧ್ಯಯನ ನಡೆಸುವುದರ ಬಗ್ಗೆ ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದೀರ. ಎಲ್ಲಾ ಫೋಟೊಗಳು ಮನಸೂರೆಗೊಂಡವು. ನಿಮ್ಮ ಆಸಕ್ತಿಗೆ ಅಭಿನಂದನೆಗಳು!!

Harihara Sreenivasa Rao said...

maahiti aparoopaddgagide.Saleem Ali avaru kannadigarembudu namma hemme.haageyee nemma bagegoo.kokkare bellurinalliyoo intaha vyavasthe edeye? ennu munde ee shubah kaaryakke nannanuoo seerisikolli.pryasha N.hegade yavaru intaha karyagalannu kygondirabahudendu nanna anisike. innashtu intaha chitragalannu odagisi. Nimma anubhavagala pustaka beega baralendu haaryisuve

ವಿನುತ said...

ಈ ಬಗ್ಗೆ ತಿಳಿದಿರಲಿಲ್ಲ ಮಲ್ಲಿಕಾರ್ಜುನ್ ಅವರೇ. ನಿಮ್ಮ ಸಚಿತ್ರ ಮಾಹಿತಿ ತು೦ಬಾ ಚೆನ್ನಾಗಿದೆ ಹಾಗೂ ಉಪಯುಕ್ತವಾಗಿದೆ. ನಿಮ್ಮ ಬ್ಲಾಗಿನಲ್ಲಿ ಏನಾದರೊ೦ದು ವಿಶೇಷವಿರುತ್ತದೆ. ಭೇಟಿ ನೀಡದಿದ್ದರೆ ಕಳೆದುಕೊ೦ಡ೦ತೆಯೇ ಸರಿ.