Thursday, September 30, 2010

ಪಾರಂಪರಿಕ ವೃಕ್ಷಗಳ ತಾಣ ‘ವೆಂಕಟಾಪುರ’

ಸುತ್ತಲೂ ಏಳು ಬೆಟ್ಟ. ನಡುವೆ ಮೂರು ಕೆರೆ. ಮೊದಲ ಕೆರೆ ಕಟ್ಟೆ ಮೇಲೆ ಪುರಾತನ ಬೇವಿನ ಮರಗಳ ಸಾಲು. ಅವುಗಳಲ್ಲಿ ಒಂದು ಇನ್ನೂರು ವರ್ಷಕ್ಕೂ ಹಳೆಯದು. ಇದು ಕಥೆಯಲ್ಲ. ಮಲೆನಾಡಿನ ಪ್ರದೇಶವೊಂದರ ವರ್ಣನೆಯೂ ಅಲ್ಲ. ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ಎಸ್. ವೆಂಕಟಾಪುರದ ಸುತ್ತಲಿನ ಸುಂದರ ದೃಶ್ಯ.



ಇನ್ನೂರು ವರ್ಷಗಳ ಇತಿಹಾಸ ಹೊಂದಿರುವ ಬೇವಿನ ಮರ ಸಾಮಾನ್ಯವಾದುದ್ದೇನಲ್ಲ. ಜೈವಿಕ ವಿಜ್ಞಾನ ವೈವಿಧ್ಯ ಕಾಯ್ದೆ 2002ರ ಕಲಂ 63 (2) (ಜಿ) ಅನ್ವಯ ಕರ್ನಾಟಕ ಜೀವ ವೈವಿಧ್ಯ ಮಂಡಳಿಯೂ ಪರಂಪರೆ ಮರಗಳು (ಹೆರಿಟೇಜ್ ಟ್ರೀಸ್) ಎಂದು ಆಯ್ದುಕೊಂಡಿರುವ ರಾಜ್ಯದ ಹತ್ತು ಮರಗಳಲ್ಲಿ ಈ ವಿಶಿಷ್ಟ ರೀತಿಯ ಮರವೂ ಒಂದು. ಬಯಲುಸೀಮೆ ಮತ್ತು ಬರಡುಸೀಮೆ ಎಂದು ಕರೆಯಲ್ಪಡುವ ಜಿಲ್ಲೆಯಲ್ಲಿ ಈ ಅಪರೂಪದ ಮರ ಇರುವುದು ವಿಶೇಷ.

ಸುಮಾರು ಇಪ್ಪತ್ತು ಅಡಿ ಸುತ್ತಳತೆ ಹೊಂದಿರುವ ಈ ಮರವು ಎಸ್. ವೆಂಕಟಾಪುರ, ಪೂಸಗಾನದೊಡ್ಡಿ, ನೇರಳೇಮರದಹಳ್ಳಿ ಮತ್ತು ಎಸ್. ಗೊಲ್ಲಹಳ್ಳಿ ಎಂಬ ನಾಲ್ಕು ಗ್ರಾಮಗಳಿಗೆ ಸೇರಿದೆ. ಕೆರೆ ಕಟ್ಟೆಯು ಬೆಟ್ಟಗಳ ನಡುವೆ ನಿರ್ಮಾಣಗೊಂಡಿದೆ.


ಸಾಲು ಮರ ನೋಡುವುದೆ ಸೊಗಸು!

ಎಸ್. ವೆಂಕಟಾಪುರ ಗ್ರಾಮದ ಗದ್ದೆಗಳಿಗೆ ಈ ಕೆರೆಯೇ ನೀರಿನ ಮೂಲ. ಈ ಪರಂಪರೆಯ ವೃಕ್ಷದೊಂದಿಗೆ ಇನ್ನೂ ಹತ್ತು ಬೃಹತ್ ಗಾತ್ರದ ಬೇವಿನ ಮರಗಳಿವೆ. ಸುತ್ತಲೂ ಹೊಂಗೆ ತೋಪಿದೆ. ವೃಕ್ಷದ ಕೆಳಗೆ ಮುನೇಶ್ವರನ ಪುಟ್ಟ ದೇಗುಲವಿದೆ.

ಆದ್ದರಿಂದಲೇ ಈ ಕಟ್ಟೆಗೆ ಮುನಿಯಪ್ಪನ ಕಟ್ಟೆ ಎನ್ನಲಾಗುತ್ತದೆ. ಇಲ್ಲಿ ಗಂಗಮ್ಮ ಮತ್ತು ಅಕ್ಕಯ್ಯಗಾರು ಹೆಸರಿನ ಪುಟ್ಟ ಗುಡಿಗಳೂ ಇವೆ. ದೇಗುಲದ ಮುಂಭಾಗದಲ್ಲಿ ದೇವಕಣಿಗಲೆ ಮರವಿದೆ. ಕಟ್ಟೆ ಬಲಭಾಗದಲ್ಲಿ ಬಿಲ್ಲುಬಾಣ ಹಿಡಿದಿರುವ ಮೂವರು ವೀರರ ವೀರಗಲ್ಲು ಇದೆ. ಎಷ್ಟೇ ಬಿರುಬಿಸಿಲಿದ್ದರೂ; ಈ ಪ್ರದೇಶ ಮಾತ್ರ ಸದಾ ತಂಪಾಗಿರುತ್ತದೆ.




"ಪ್ರತಿ ಮಂಗಳವಾರ ಮತ್ತು ಶುಕ್ರವಾರ ದೇವರ ಪೂಜೆಗಾಗಿ ಇಲ್ಲಿ ಜನ ಸೇರುತ್ತಾರೆ. ಪ್ರತಿ ವರ್ಷ ಏಪ್ರಿಲ್‌ನಲ್ಲಿ ನಾಲ್ಕು ಗ್ರಾಮಗಳ ಜನರು ಜಾತ್ರೆ ನಡೆಸುತ್ತಾರೆ. ಇಷ್ಟಾರ್ಥ ನೆರವೇರುತ್ತವೆ ಎಂಬ ನಂಬಿಕೆಯಿಂದ ಅನೇಕ ಕಡೆಗಳಿಂದ ಭಕ್ತರು ಆಗಮಿಸುತ್ತಾರೆ. ಕಟ್ಟೆ ಮೇಲಿರುವ ಮರಗಳ ಕಟ್ಟಿಗೆಗಳನ್ನು ಯಾರೂ ತೆಗೆದುಕೊಂಡು ಹೋಗಬಾರದು. ಕೆಡುಕಾಗುತ್ತದೆ ಎಂಬ ನಂಬಿಕೆ ಹಲವು ಜನರಲ್ಲಿದೆ" ಎಂದು ದೇವಾಲಯದ ಅರ್ಚಕ ಗುರುಮೂರ್ತಿ ತಿಳಿಸಿದರು.



"ಏಳು ಬೆಟ್ಟಗಳನ್ನು ನಲ್ಲಕೊಂಡಲು ಎನ್ನುತ್ತಾರೆ. ಇಲ್ಲಿರುವ ಮೂರು ಕೆರೆಗಳನ್ನು ಮೂವರು ವೇಶ್ಯೆಯರು ಕಟ್ಟಿಸಿದ್ದು. ತಿಪ್ಪಸಾನಿಕೆರೆ, ರಾಜಸಾನಿಕೆರೆ ಮತ್ತು ನಲ್ಲಸಾನಿಕೆರೆ ಎಂದು ಅವರ ಹೆಸರಿನಿಂದಲೇ ಕರೆಯಲ್ಪಡುತ್ತವೆ.ಈ ಬೆಟ್ಟಗಳಲ್ಲಿ ಚಿರತೆ, ಜಿಂಕೆ, ಮೊಲ, ಕರಡಿ, ನರಿ ಮುಂತಾದ ಪ್ರಾಣಿಗಳು ಇದ್ದವು. ತಿಪ್ಪಸಾನಿಕೆರೆ ಅಥವಾ ತಿಪ್ಪರಾಸಕೆರೆಯ ಕಟ್ಟೆ ಮೇಲಿರುವ ಬೇವಿನ ಮರಗಳನ್ನು ನಾನು ಚಿಕ್ಕಂದಿನಿಂದಲೇ ನೋಡಿದ್ದೇನೆ. ಕೆರೆಗಳನ್ನು ಕಟ್ಟಿದ ಮಹಾತಾಯಂದಿರೇ ಇವನ್ನೂ ನೆಟ್ಟಿರಬೇಕು" ಎನ್ನುತ್ತಾರೆ ಗ್ರಾಮದ 94ರ ವಯೋವೃದ್ಧ ನರಸರಾಮಪ್ಪ.



"ಇಲ್ಲಿ ಸುತ್ತ ಇರುವ ಬೆಟ್ಟಗಳೆಲ್ಲ ಚಾರಣಕ್ಕೆ ಯೋಗ್ಯವಾಗಿವೆ. ಒಂದೊಂದರಲ್ಲೂ ಒಂದೊಂದು ವಿಶೇಷವಿದೆ. ಪರಂಪರೆ ವೃಕ್ಷ ಎಂದು ಸರ್ಕಾರ ಹೆಸರಿಸಿರುವುದರಿಂದ ಪ್ರವಾಸೋದ್ಯಮ ಇಲಾಖೆ ಸೂಕ್ತವಾಗಿ ಕೆಲಸ ಮಾಡಿದರೆ ಈ ಪ್ರದೇಶದ ಅಭಿವೃದ್ಧಿ ಮತ್ತು ಸಂರಕ್ಷಣೆಯಾಗುತ್ತದೆ. ಸ್ಥಳೀಯರಿಗೆ ಉದ್ಯೋಗ ದೊರಕುತ್ತದೆ. ತಾಲ್ಲೂಕಿನ ಮೂಲೆಯಲ್ಲಿರುವ ಈ ಪ್ರದೇಶ ಮುಂದುವರೆಯಲು ಸಾಧ್ಯವಾಗುತ್ತದೆ" ಎಂದು ಹಿರಿಯ ಶಿಕ್ಷಕ ಕೆ.ಎನ್. ಲಕ್ಷ್ಮೀನರಸಿಂಹಯ್ಯ ಹೇಳುತ್ತಾರೆ.

ಮರಗಳಿಗೆ ಕೊಡಲಿ?

ಹತ್ತು ಮರಗಳಿಂದ ಕೂಡಿರುವ ಈ ಸುಂದರ ಆವರಣಕ್ಕೆ ಕೆಲವರು ಕೆಡಕು ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮುನೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ನೆಪದಲ್ಲಿ ಐದು ಮರ ಕಡಿಯಲು ಚಿಂತನೆ ನಡೆಸಲಾಗುತ್ತಿದೆ ಎಂಬ ಗುಲ್ಲು ಎಲ್ಲೆಡೆ ಕೇಳಿ ಬರುತ್ತಿದೆ.
ಹತ್ತು ಮರಗಳ ಮೇಲೆ ಅಪಾರ ಭಕ್ತಿ ಮತ್ತು ಪ್ರೀತಿ ಹೊಂದಿರುವ ಇಲ್ಲಿನ ಗ್ರಾಮಸ್ಥರು ಯಾವುದೇ ಮರ ಕಡಿಯಬಾರದು. ಹಲವು ವರ್ಷಗಳಿಂದ ಇರುವ ಈ ಮರಗಳನ್ನು ಸಂರಕ್ಷಿಸಬೇಕು. ಉತ್ತಮ ಪರಿಸರದ ಜೀವಸೆಲೆಯಾಗಿರುವ ಮರಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎನ್ನುತ್ತಾರೆ.
ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಐದು ಮರ ಮಾರಲಾಗಿದೆಯಂತೆ. ಮುಂದಿನ ದಿನಗಳಲ್ಲಿ ಅವುಗಳನ್ನು ಕಡಿಯುತ್ತಾರಂತೆ. ಇದಕ್ಕೆ ನಾವು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.

Wednesday, September 22, 2010

ರೇಷ್ಮೆ ಗೂಡಿಗಿಂತ ಬದುಕು ಭಾರ!


ರೇಷ್ಮೆ ಗೂಡಿನ ಮೂಟೆಯನ್ನು ಸಮತೋಲನದಿಂದ ಕಾಯ್ದುಕೊಂಡು ಸಾಗುತ್ತಿರುವ ಕಾರ್ಮಿಕ


ಒಂದೆಡೆ ದೇಶ ಪ್ರಗತಿಯತ್ತ ಧಾವಿಸುತ್ತಿದೆ ಎಂದು ಸಂಭ್ರಮ ಪಡುತ್ತಿದ್ದರೆ, ಮತ್ತೊಂದೆಡೆ ಪ್ರಗತಿಯೂ ಅಲ್ಲ-ಸಂಭ್ರಮವೂ ಇಲ್ಲ ಎಂದು ಕೆಲವರು ಬಾಳುತ್ತಿದ್ದಾರೆ. ಸ್ವಾವಲಂಬಿ ದೇಶ ನಿರ್ಮಾಣದತ್ತ ಎಲ್ಲರೂ ಸಂತಸದಿಂದ ಮುನ್ನಡೆಯುತ್ತಿದ್ದರೆ, ಕೆಲವರು ಬಡತನದ ದಾಸ್ಯದಿಂದ ಹೊರಬರಲಾಗದೇ ಬದುಕನ್ನು ಸವೆಸುತ್ತಿದ್ದಾರೆ. ಸರ್ಕಾರಿ ಸೌಲಭ್ಯಗಳು ವಿಪುಲವಾಗಿದ್ದರೂ, ಅವುಗಳ ನೆರವಿಲ್ಲದೇ-ಸರ್ಕಾರದ ಆಶ್ರಯವಿಲ್ಲದೇ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ.


ಪಾದಗಳಿಗೆ ಚಪ್ಪಲಿಗಳನ್ನು ಹಾಕಿಕೊಳ್ಳದೇ ತಲೆಯ ಮೇಲೆ ಮೂಟೆ ಹೊತ್ತು ಸೈಕಲ್ಲಿನಲ್ಲಿ ಹೋಗುತ್ತಿರುವ ಕಾರ್ಮಿಕರು.


ಕಷ್ಟನಷ್ಟಗಳ ನಡುವೆಯೂ ಪುಟ್ಟ ಆಶಾಕಿರಣದೊಂದಿಗೆ ಜೀವನ ಸಾಗಿಸುತ್ತಿರುವ ಆ ಕೆಲವರಲ್ಲಿ ಶಿಡ್ಲಘಟ್ಟದ ರೇಷ್ಮೆ ಗೂಡು ಮಾರುಕಟ್ಟೆಯ ಕೂಲಿ ಕಾರ್ಮಿಕರು ಕೂಡ ಸೇರಿದ್ದಾರೆ.
ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ನಿತ್ಯವೂ ಲಕ್ಷಾಂತರ ರೂಪಾಯಿಯಲ್ಲಿ ವಹಿವಾಟು ನಡೆಯುತ್ತದೆ, ಆದರೆ ಕಾರ್ಮಿಕರ ಕೂಲಿಯು ದಿನಕ್ಕೆ ೧೫೦ ರೂಪಾಯಿಯ ಗಡಿ ದಾಟುವುದಿಲ್ಲ. ಪಾದಗಳಿಗೆ ಚಪ್ಪಲಿಯೂ ಹಾಕಿಕೊಳ್ಳದೇ ಕೆಲಸ ಮಾಡುವ ಈ ಶ್ರಮಿಕರು ತಲೆಯ ಮೇಲೆ ೩೦ ರಿಂದ ೫೦ ಕೆ.ಜಿಯಷ್ಟು ರೇಷ್ಮೆ ಗೂಡನ್ನು ಹೊರುತ್ತಾರೆ. ಸೈಕಲ್ಲಿನಲ್ಲೇ ಸಾಗುವ ಅವರು ತಲೆಯ ಮೇಲೆ ಮೂಟೆಯ ಸಮತೋಲನ ಕಾಯ್ದುಕೊಳ್ಳುವುದರ ಜೊತೆಗೆ ಅಪಘಾತಕ್ಕೀಡಾಗದಂತೆ ಎಚ್ಚರಿಕೆ ಸಹ ವಹಿಸಬೇಕು.



ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಿಂದ ಹೊರಬರುತ್ತಿರುವ ಕಾರ್ಮಿಕ

ಅಸಂಘಟಿತ ವಲಯದಲ್ಲಿರುವ ಈ ಕಾರ್ಮಿಕರಿಗೆ ಯಾವುದೇ ರೀತಿಯ ಸರ್ಕಾರಿ ಸೌಲಭ್ಯಗಳಿಲ್ಲ. ಚುನಾಯಿತ ಪ್ರತಿನಿಧಿಗಳು ನೀಡುವ ಭರವಸೆಗಳ ಹೊರತಾಗಿ ಅವರಿಗೆ ಏನೂ ಸಿಕ್ಕಿಲ್ಲ. ಅನಾರೋಗ್ಯ ಸೇರಿದಂತೆ ಯಾವುದೇ ಗಂಭೀರ ಸಮಸ್ಯೆ ಕಾಡಿದರೂ ಅವರು ದಿನದ ೧೫೦ ರೂಪಾಯಿಯಲ್ಲೇ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕೆ ಹೊರತು ಬೇರೆ ಮಾರ್ಗವಿಲ್ಲ.


ಎಷ್ಟೇ ತೊಂದರೆಯಿದ್ದರೂ ಮೂಟೆಯನ್ನು ಹೊತ್ತು ಜೀವನ ಸಾಗಬೇಕು.

"ನಾವು ಸುಮಾರು ೨೬೮ ಕಾರ್ಮಿಕರಿದ್ದೇವೆ. ನಿತ್ಯವೂ ೨೦ ರಿಂದ ೫೦ ಕೆಜಿ ತೂಕದವರೆಗೂ ಗೂಡನ್ನು ಹೊರುತ್ತೇವೆ. ಮಾರುಕಟ್ಟೆಯಲ್ಲಿ ಗೂಡು ಬರುವುದರ ಮೇಲೆ ನಮ್ಮ ಸಂಪಾದನೆ ಅವಲಂಬಿತವಾಗಿರುತ್ತದೆ. ದಿನಕ್ಕೆ ೧೫೦ ರೂಪಾಯಿ ಸಂಪಾದಿಸುತ್ತೇವೆ. ಆದರೆ ಸೈಕಲ್ ಬಾಡಿಗೆ, ಬಸ್ ಪ್ರಯಾಣ, ಹೋಟೆಲ್ ಊಟ ಎಲ್ಲ ಕಳೆದು ೭೫ ರಿಂದ ೧೦೦ ರೂಪಾಯಿ ಉಳಿಯುತ್ತದೆ. ಅಲ್ಪಸಂಪಾದನೆಯಲ್ಲೇ ಸಂಸಾರ ನಡೆಸಬೇಕು, ಮಕ್ಕಳಿಗೆ ಓದಿಸಬೇಕು, ಆಹಾರದ ಕೊರತೆ ಕಾಡದಂತೆ ನೋಡಿಕೊಳ್ಳಬೇಕು" ಎಂದು ಕಾರ್ಮಿಕ ದೊಡ್ಡತೇಕಹಳ್ಳಿ ವೆಂಕಟೇಶ್ ತಿಳಿಸಿದರು.


ಸೈಕಲ್ ಇರದಿದ್ದರೂ ಚಿಂತೆಯಿಲ್ಲ, ನಡೆದುಕೊಂಡೇ ಮೂಟೆ ಸಾಗಿಸುತ್ತಿರುವ ಕಾರ್ಮಿಕರು.

"ಸಂಸಾರದ ನಿತ್ಯ ಜಂಜಾಟವನ್ನು ಹೇಗಾದರೂ ತೂಗಿಸಬಹುದು. ಆದರೆ ಅಪಘಾತ ಅಥವಾ ಅನಾರೋಗ್ಯ ಕಾಡಿದ್ದಲ್ಲಿ ಔಷಧಿ ಕೊಳ್ಳಲು ಮತ್ತು ಆಸ್ಪತ್ರೆಗೆ ದಾಖಲಾಗಲು ಹಣವಿರುವುದಿಲ್ಲ. ಸರ್ಕಾರದ ಯಾವುದೇ ಯೋಜನೆಗೆ ಒಳಪಡದ ನಮಗೆ ಯಾವುದೇ ಸೌಕರ್ಯಗಳು ಸಹ ಸಿಗುವುದಿಲ್ಲ. ಬದುಕಲು ಸಾಲ ಮಾಡಬೇಕಾಗುತ್ತದೆ. ಆದರೆ ಸಾಲ ತೀರಿಸುವುದರಲ್ಲೇ ನಮ್ಮ ಬದುಕು ಕೊನೆಯಾಗುತ್ತದೆ" ಎಂದು ಅವರು ಅಳಲು ತೋಡಿಕೊಂಡರು.



"ದೇಹವನ್ನು ದಂಡಿಸಿ ಕೆಲಸ ಮಾಡುವ ಈ ಕಾರ್ಮಿಕರು ಬೇಗನೇ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ದೀರ್ಘ ಕಾಲದವರೆಗೆ ಬದಕುಲು ಆಗುವುದಿಲ್ಲ. ಪಿಂಚಣಿ, ಆರೋಗ್ಯ ವಿಮೆ, ಹೆರಿಗೆ ಭತ್ಯೆ, ವಿದ್ಯಾರ್ಥಿ ವೇತನ, ಭವಿಷ್ಯ ನಿಧಿ ಮುಂತಾದ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಹೋರಾಟದ ಮನೋಭಾವವನ್ನೇ ಕಳೆದುಕೊಂಡ ಸ್ಥಿತಿಯಲ್ಲಿರುವ ಈ ಕಾರ್ಮಿಕರು ನಿರಾಸೆಯಿಂದಲೇ ಜೀವನ ಸಾಗಿಸುತ್ತಿದ್ದಾರೆ" ಎಂದು ರಾಜ್ಯ ಹಮಾಲಿ ಕಾರ್ಮಿಕರ ಸಂಘದ ಕಾರ್ಯದರ್ಶಿ ಕೆ.ಮಹಾಂತೇಶ್ ಅಭಿಪ್ರಾಯಪಡುತ್ತಾರೆ.
"ಪ್ರತಿಯೊಬ್ಬ ಕಾರ್ಮಿಕನಿಗೂ ಸಂಖ್ಯೆ ನೀಡಲಾಗಿದೆ. ಗೂಡು ಮಾರುಕಟ್ಟೆಯಿಂದ ಹೊರಹೋಗುವಾಗ ಅವರಿಗೆ ಪಾಸು ನೀಡಿರುತ್ತೇವೆ. ಅವರು ಗೇಟ್ ಬಳಿ ಪಾಸ್ ನೀಡಿ ಹೊರಹೋಗಬೇಕು. ಬಹುತೇಕ ಕಾರ್ಮಿಕರಿಗೆ ಓದು-ಬರಹ ಗೊತ್ತಿಲ್ಲ. ಸರ್ಕಾರದಿಂದ ಸೌಲಭ್ಯಗಳಿವೆ, ಸದ್ಬಳಕೆ ಮಾಡಿಕೊಳ್ಳಬೇಕು ಎಂಬ ಪರಿವೆ ಅವರಿಗಿಲ್ಲ" ಎಂದು ರೇಷ್ಮೆ ಗೂಡು ಮಾರುಕಟ್ಟೆಯ ಅಧಿಕಾರಿ ರತ್ನಯ್ಯ ಶೆಟ್ಟಿ ಹೇಳುತ್ತಾರೆ.

Thursday, September 16, 2010

ಮಾಯವಾಗಿರುವ ಏತ ಇಲ್ಲಿ ಪ್ರತ್ಯಕ್ಷ!



ನಮ್ಮ ಜಿಲ್ಲೆಯಲ್ಲಿ ಕೊಳವೆಬಾವಿಗಳು ಸಾವಿರ ಅಡಿ ಆಳಕ್ಕೆ ಹೋದರೂ ನೀರು ಸಿಗುವುದಿಲ್ಲ. ಹರಸಾಹಸಪಟ್ಟರೂ ಒಂದು ಹನಿ ನೀರು ದೊರೆಯುವುದಿಲ್ಲ. ಕಪಿಲೆ, ಏತ, ಗೂಡೆ ಹಾಕುವುದು, ಪರ್ಷಿಯನ್ ವೀಲ್ ಮುಂತಾದವುಗಳು ಒಂದರ್ಥದಲ್ಲಿ ಅಸ್ತಿತ್ವವನ್ನೇ ಕಳೆದುಕೊಂಡಿವೆ. ಆದರೆ ನೀರು ಸಿಗುವುದಿಲ್ಲ ಎಂದು ಬೇಸತ್ತು ಕುಳಿತ ರೈತರಿಗೆ ಆಶಾಕಿರಣ ಎಂಬಂತೆ ಏತ ನೀರಾವರಿ ಕೃಷಿ ಕ್ಷೇತ್ರದಲ್ಲಿ ನಿಧಾನವಾಗಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳುತ್ತಿದೆ.
ಇದಕ್ಕೆ ಅಪ್ಪಟ ಉದಾಹರಣೆ, ಶ್ನಮ್ಮ ಊರು ಶಿಡ್ಲಘಟ್ಟದ ಹೊರವಲಯ ಅಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು ಮುಕ್ಕಾಲು ಎಕರೆ ಜಮೀನಿನಲ್ಲಿ ಸಹೋದರರು ಸದ್ಬಳಕೆ ಮಾಡುತ್ತಿರುವ ಏತ ನೀರಾವರಿ ಯೋಜನೆ. ಏತ ನೀರಾವರಿಯನ್ನು ವಿಶಿಷ್ಟ ರೀತಿಯಲ್ಲಿ ಬಳಕೆ ಮಾಡುವ ಅವರು ತರಕಾರಿ ಬೆಳೆಗಳನ್ನು ಬೆಳೆಸುತ್ತಾರೆ.
ಕೆರೆಯ ಇನ್ನೊಂದು ಬದಿಯಲ್ಲಿರುವ ಜಮೀನಿಗೆ ಮಧ್ಯೆ ಹಾದು ಹೋಗುವ ರಸ್ತೆಯ ಕೆಳಗಿನಿಂದ ತೂಬಿನ ಮೂಲಕ ಇವರ ಜಮೀನಿಗೆ ನೀರು ಬರುತ್ತದೆ. ಏತವನ್ನು ಬಳಸಿ ಇವರು ಜಮೀನಿಗೆ ನೀರು ಕಟ್ಟುತ್ತಾರೆ.



‘ಸಾಮಾನ್ಯವಾಗಿ ನಾವು ಬೀಟ್ರೂಟ್ ಬೆಳೆಯುತ್ತೇವೆ. ವರ್ಷಕ್ಕೆ ಮೂರು ಬೆಳೆ ತೆಗೆಯುತ್ತೇವೆ. ಬೆಳಿಗ್ಗೆ ೬ ಗಂಟೆಗೆ ನೀರೆತ್ತಲು ಪ್ರಾರಂಭಿಸಿದರೆ ಮಧ್ಯಾಹ್ನ ೨ ಗಂಟೆಯವರೆಗೆ ಮುಂದುವರೆಯುತ್ತದೆ. ನೀರಿನ ಹರಿವು ಕಡಿಮೆಯಿದ್ದರೆ ಸಂಜೆ ೬ ಗಂಟೆಯಾಗುತ್ತದೆ. ವಾರದಲ್ಲಿ ಮೂರು ಅಥವಾ ನಾಲ್ಕು ದಿನಕ್ಕೊಮ್ಮೆ ನೀರು ಹರಿಸುತ್ತೇವೆ. ಬೇಸಿಗೆಯಲ್ಲಿ ನೀರು ಇರುವುದಿಲ್ಲ. ಗಾಳಿಯ ಕಾಲದಲ್ಲೂ ಕಷ್ಟ. ನೀರು ಆವಿಯಾಗುತ್ತದೆ. ಗಿಡಗಂಟೆಗಳು ಬೆಳೆದು ಕಾಲುವೆಗಳಲ್ಲಿ ನೀರು ಹರಿಯದಿದ್ದಾಗ ಗಿಡಗಳನ್ನೆಲ್ಲಾ ಸವರುತ್ತೇವೆ. ಅಲ್ಲಿ ಹಾವುಗಳು ಸೇರಿಕೊಂಡಿರುತ್ತವೆ’ ಎಂದು ತಮ್ಮ ಕೆಲಸವನ್ನು ಬಣ್ಣಿಸುವ ಕಿರಿಯ ಸಹೋದರ ಮುನಿರಾಜ ಏತ ನೀರಾವರಿ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ.



‘ಇದು ನಮ್ಮ ತಾತನ ಕಾಲದಿಂದಲೂ ಬಂದ ಬಳುವಳಿ. ನೀರಾವರಿಗೆಂದೇ ನಾವು ಜನರೇಟರ್ ಬಳಸಬಹುದು. ಆದರೆ ನಮಗೆ ನಮ್ಮ ಸ್ವಶಕ್ತಿ ಮೇಲೆ ನಂಬಿಕೆಯಿದೆ. ಸ್ವಾಭಿನಾಮ ಮತ್ತು ಸ್ವಶಕ್ತಿಯಿಂದ ಬದುಕುವ ಇರಾದೆ ಹೊಂದಿರುವ ನಮಗೆ ಏತ ನೀರಾವರಿಯಿಂದ ತುಂಬ ಸಹಾಯವಾಗುತ್ತಿದೆ’ ಎನ್ನುತ್ತಾರೆ ಹಿರಿಯ ಸಹೋದರ ಮಂಜುನಾಥ್.



‘ಆಗಾಗ್ಗೆ ಅಮ್ಮ ಹೇಳುತ್ತಿರುತ್ತಾರೆ. ಆಗ ನೀರೆತ್ತುವ ಬಾನೆ ದೊಡ್ಡದಿತ್ತು, ಒಬ್ಬ ಮಹಿಳೆ ಒತ್ತುಕೊಟ್ಟರೆ ಇನ್ನೊಬ್ಬ ಮಹಿಳೆ ನೀರೆತ್ತುವ ಕೆಲಸ ಮಾಡುತ್ತಿದ್ದರಂತೆ. ಪುರುಷರದು ನೀರು ಕಟ್ಟುವ ಕೆಲಸ. ಆಗ ನೀರೂ ಚೆನ್ನಾಗಿತ್ತು ಮನುಷ್ಯರೂ ಗಟ್ಟಿಮುಟ್ಟಾಗಿದ್ದರು. ಈಗ ಎರಡೂ ಇಲ್ಲ ಎಂದು ಕೆಲವೊಮ್ಮೆ ಅವರು ಬೇಸರ ವ್ಯಕ್ತಪಡಿಸುತ್ತಾರೆ’ ಎಂದು ಅವರು ಹೇಳಿದರು.



ಏತದ ಮೂಲಕ ಮೇಲೆ ಬರುವ ನೀರಿನ ಪ್ರಮಾಣ ಕೊಳವೆ ಬಾವಿಗಳಿಗಿಂದ ಕಡಿಮೆ. ಆದರೆ ಮೇಲೆ ಬಂದ ನೀರು ಪೋಲಾಗದೆ ಉಪಯೋಗವಾಗುತ್ತದೆ. ಈ ಯಂತ್ರಗಳಿಂದ ಬರುವ ಸ್ವಲ್ಪ ಪ್ರಮಾಣದ ನೀರನ್ನು ಕಟ್ಟುವವನು ಪೋಲಾಗದಂತೆ ಮಡಾಯಿಗಳನ್ನು ತಿರುವಲು ಸಾಧ್ಯವಾಗುತ್ತದೆ’ ಎಂದು ಹೇಳುವ ಅವರು ನೀರಿನ ಉಳಿತಾಯದ ಬಗ್ಗೆಯೂ ಮಾತನಾಡುತ್ತಾರೆ.

Thursday, September 9, 2010

ನೆನಪಿನ ಗಣಿ ಈ ತುಂಬುಗೆನ್ನೆಯ ದೀಪ . . . !

ನಮ್ಮ ತಾಲ್ಲೂಕಿನ ಕನ್ನಮಂಗಲ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಇತರೆ ಪುಟ್ಟ ಮಕ್ಕಳೊಂದಿಗೆ ಒಂದು ಮಗು ತನ್ನ ವಿಶೇಷ ನೆನಪಿನ ಶಕ್ತಿಯಿಂದ ಗಮನ ಸೆಳೆಯುತ್ತಿದೆ. ಆ ಮಗುವಿನ ಹೆಸರು ದೀಪ. ದೀಪ ಜ್ಞಾನದ ಅನ್ವರ್ಥವೂ ಹೌದು. ಅಂತೆಯೇ ಈ ೪ ವರ್ಷದ ಮಗುವಿನ ಜ್ಞಾನದಾಹವೂ ವಿಶಿಷ್ಟವಾದುದು.


ಕನ್ನಮಂಗಲದ ಅಂಗನವಾಡಿ ಕೇಂದ್ರದಲ್ಲಿ ಓದುತ್ತಿರುವ ದೀಪಾ.

ಭಾರತದ ಪ್ರಥಮ ಮಹಿಳಾ ಪ್ರಧಾನಿ ಯಾರು? ಷಟ್ಪದಿಯ ಬ್ರಹ್ಮ ಯಾರು? ಕುವೆಂಪುರವರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕೃತಿ ಯಾವುದು? ನಮಗೆ ಸ್ವಾತಂತ್ರ್ಯ ಬಂದ ವರ್ಷ ಯಾವುದು? ಭೂಮಿಗೆ ಗುರುತ್ವಾಕರ್ಷಣ ಬಲ ಇದೆ ಎಂದು ಕಂಡು ಹಿಡಿದವರು ಯಾರು? ಮುಂತಾದ ಪ್ರಶ್ನೆಗಳಿಗೆ ಕಾಲೇಜು ಓದಿರುವ ಯುವಕರೇ ಉತ್ತರ ಕೊಡಲು ತೊದಲುವಾಗ, ಈ ಹುಡುಗಿ ಯಾವುದೇ ಭಯವಿಲ್ಲದೇ ಇಂಥಹ ೫೦-೬೦ ಪ್ರಶ್ನೆಗಳಿಗೆ ಸರಾಗವಾಗಿ ಉತ್ತರ ನೀಡುತ್ತಾಳೆ.
ಹೀಗೆ ಈ ಮಗುವಿನ ನೆನಪಿನ ಶಕ್ತಿಯನ್ನು ಸಮರ್ಥವಾಗಿ ಉಪಯೋಗಿಸಲು ತರಬೇತಿ ನೀಡುತ್ತಿರುವವರು ಆಶಾ ಕಾರ್ಯಕರ್ತೆಯಾಗಿರುವ ದೀಪಳ ಅಮ್ಮ ವೆಂಕಟಲಕ್ಷ್ಮಮ್ಮ ಹಾಗೂ ವೈರ್ಮನ್ ಆಗಿರುವ ಅಪ್ಪ ಎಂ.ರಾಮಕೃಷ್ಣಪ್ಪ. ಇವರಿಬ್ಬರೂ ಶೈಕ್ಷಣಿಕವಾಗಿ ಪದವೀಧರರಾಗಿದ್ದು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ.
"ನನಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸ್ಪರ್ಧಿಸಿ ಒಳ್ಳೆಯ ಕೆಲಸ ಪಡೆಯುವ ಆಸೆಯಿತ್ತು. ಆದರೆ ಕಾರಣಾಂತರಗಳಿಂದ ಈ ಆಸೆ ಈಡೇರಲಿಲ್ಲ. ಹೀಗಾಗಿ ನನ್ನ ಆಸೆಯನ್ನು ಮಗಳು ಈಡೇರಿಸಬಹುದೇ ಎಂಬ ಆಸೆಯಿದೆ. ಸರ್ಕಾರಿ ಶಾಲೆಯಲ್ಲಿಯೇ ವಿದ್ಯಾಭ್ಯಾಸವನ್ನು ಮಾಡಿ ಭವಿಷ್ಯದಲ್ಲಿ ಐ.ಎ.ಎಸ್ ಅಧಿಕಾರಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಲಿ" ಎನ್ನುವ ವೆಂಕಟಲಕ್ಷ್ಮಮ್ಮ ತಾಯಿಯೇ ಮೊದಲ ಗುರು ಎಂಬಂತೆ ತನ್ನ ಮಗಳಿಗೆ ಕತೆಗಳೊಂದಿಗೆ ಸಾಮಾನ್ಯ ಜ್ಞಾನದ ವಿಚಾರಗಳನ್ನು ಧಾರೆಯೆರೆಯುತ್ತಿದ್ದಾರೆ.



ತನ್ನ ತಂದೆ ತಾಯಿಯೊಂದಿಗೆ ದೀಪಾ.

ವಿವಿಧ ವೇದಿಕೆಗಳಲ್ಲಿ ಈ ಮಗು ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ಹಲವಾರು ಗಣ್ಯರ ಪ್ರಶಂಸೆಗೆ ಕೂಡ ಪಾತ್ರವಾಗಿದೆ. ಸ್ನೇಹ ಯುವಕರ ಸಂಘ ಹಾಗೂ ಸ.ಹಿ.ಪ್ರಾ.ಶಾಲೆ ಕನ್ನಮಂಗಲ ಇವರ ಸಂಯುಕ್ತಾಶ್ರಯದಲ್ಲಿ ನಡೆದ ೭ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ತನ್ನ ನೆನಪಿನ ಶಕ್ತಿಯ ಪ್ರದರ್ಶನದ ಮೂಲಕ ಸಾಹಿತಿ ಹರಿಹರಪ್ರಿಯ, ಮಾಜಿ ಸಚಿವ ಹಾಗೂ ಶಾಸಕ ವಿ.ಮುನಿಯಪ್ಪ, ಶಿಕ್ಷಣ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಶ್ರೀನಿವಾಸ್ ಹಾಗೂ ನಿವೃತ್ತ ಉಪನಿರ್ದೇಶಕ ಸಿ.ಬಿ. ಹನುಮಂತಪ್ಪ ಅವರ ಪ್ರಶಂಸೆಗೆ ಪಾತ್ರಳಾಗಿದ್ದಾಳೆ.
"ಈ ಮಗುವಿನ ರೀತಿ ಎಲ್ಲ ಮಕ್ಕಳಲ್ಲಿಯೂ ಯಾವುದೋ ಒಂದು ಪ್ರತಿಭೆ ಸುಪ್ತವಾಗಿರುತ್ತದೆ. ಅದನ್ನು ಹೊರತರಲು ಪೋಷಕರು ಸಹಕಾರ ನೀಡಬೇಕು" ಎಂದು ಅಂಗನವಾಡಿ ಕಾರ್ಯಕರ್ತೆಯಾದ ಎನ್. ಪದ್ಮಾವತಿ ತಿಳಿಸುತ್ತಾರೆ. ದೀಪ ಶಿಶುಗೀತೆ, ಕಥೆ ಹಾಗೂ ನೃತ್ಯದಂತಹ ಚಟುವಟಿಕೆಗಳಲ್ಲೂ ಉತ್ಸಾಹದಿಂದ ಭಾಗವಹಿಸುತ್ತಾಳೆ ಎಂದು ಇವರು ಗುರುತಿಸಿದ್ದಾರೆ.
"ಇಂಥಹ ಮಕ್ಕಳ ಪ್ರತಿಭೆಯನ್ನು ಸರ್ಕಾರ ಹಾಗೂ ಸಮುದಾಯ ಗುರುತಿಸಿ ಪುರಸ್ಕರಿಸಿ ಪ್ರೋತ್ಸಾಹಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರತಿಭೆಗಳು ಹೆಚ್ಚೆಚ್ಚು ಹೊರಹೊಮ್ಮುತ್ತವೆ" ಎಂದು ಅಭಿಪ್ರಾಯಪಡುತ್ತಾರೆ ಕನ್ನಮಂಗಲ ಸ.ಹಿ.ಪ್ರಾ.ಶಾಲೆಯ ಸಹಶಿಕ್ಷಕ ಎಸ್.ಕಲಾಧರ್.