Wednesday, February 16, 2011

ಗ್ರಾಮಸ್ಥರಿಂದ ಪೂಜೆ, ಪುರಸ್ಕಾರ - ಹುಣಸೆಮರದಲ್ಲಿ ರಸಸ್ರಾವ!!

ಹುಣಸೆ ಮರವನ್ನು ಪೂಜಿಸಿ ಅಚ್ಚರಿಯಿಂದ ವೀಕ್ಷಿಸುತ್ತಿರುವ ಗ್ರಾಮಸ್ಥರು.


ಅದು ಬೃಹತ್ ಹುಣಸೆ ಮರ. ಅದರ ಖಾಂಡವೊಂದರಿಂದ ರಸಸ್ರಾವ. ರಸ ಉತ್ಪತ್ತಿಯಾಗುತ್ತಿದೆ. ಸ್ಥಳದಲ್ಲಿ ಬುರುಗು ಬುರುಗಾಗಿ ನೊರೆಯಿದೆ. ಇದನ್ನು ಕಂಡು ಅಚ್ಚರಿಗೊಂಡ ಕೃಷ್ಣೇಗೌಡ ತಮ್ಮ ಗ್ರಾಮದ ಜನರಿಗೆ ವಿಷಯ ತಿಳಿಸಿದರು.
ಕೆಲವೇ ನಿಮಿಷಗಳಲ್ಲಿ ಮರದ ಸುತ್ತ ನೆರೆದ ಗ್ರಾಮಸ್ಥರು ಒಂದೊಂದಾಗಿ ಅಭಿಪ್ರಾಯಗಳನ್ನು ಹಂಚಿಕೊಳ್ಳತೊಡಗಿದರು. ಒಬ್ಬೊಬ್ಬರದು ಒಂದೊಂದು ಅಭಿಪ್ರಾಯ. ‘ಇದೇನೋ ಮಾಯೆ, ಇಲ್ಲದ್ದಿದರೆ ಹುಣಸೆಮರದಿಂದ ರಸ ಬರುವುದಿಲ್ಲ’ ಎಂದು ಒಬ್ಬರು ಹೇಳಿದರೆ, ‘ಮರದ ಬಳಿ ನಾಗರ ಹಾವು ವಾಸವಿದೆ. ರಸಸ್ರಾವಕ್ಕೆ ಹಾವು ಕಾರಣ’ ಎಂದು ಮತ್ತೊಬ್ಬರು ಹೇಳಿದರು. ಈ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಕೆಲವರು ಅರಿಶಿನ ಕುಂಕುಮ ತಂದು ಮರಕ್ಕೆ ಪೂಜೆ ಆರಂಭಿಸಿಬಿಟ್ಟರು.

ಈ ಘಟನೆ ನಡೆದದ್ದು ಶಿಡ್ಲಘಟ್ಟ ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ. ಕುಂಟೆಯ ಹಿಂಬದಿಯಲ್ಲಿರುವ ಹುಣಸೆಮರದಲ್ಲಿ ನೀರು ಸೋರಿದಂತೆ ರಸಸ್ರಾವವಾಗುತ್ತ್ದಿದುದು ಗ್ರಾಮಸ್ಥರ ಅಚ್ಚರಿ ಮತ್ತು ಕುತೂಹಲಕ್ಕೆ ಕಾರಣವಾಗಿತ್ತು.

ಸಾಮಾನ್ಯವಾಗಿ ಹುಣಸೆ ಖಾಂಡವು ಒತ್ತು ಕಣ ರಚನೆಯನ್ನು ಹೊಂದಿದ್ದು ಬಹಳ ಗಡುಸಾಗಿರುತ್ತದೆ. ಅದಕ್ಕಾಗಿಯೇ ಇದನ್ನು ಗಾಡಿಯ ಗುಂಬ, ಗಾಣಗಳ ಭಾಗ, ಒನಕೆ, ಕೊಡತಿ ಮುಂತಾದವುಗಳ ತಯಾರಿಕೆಯಲ್ಲಿ ಹಾಗೂ ರೇಷ್ಮೆ ನೂಲು ಬಿಚ್ಚಾಣಿಕೆಯಲ್ಲಿ ಸೌದೆಯಾಗಿ ಮತ್ತು ಇದಲಿನ ರೂಪದಲ್ಲಿ ಬಳಕೆಯಾಗುತ್ತದೆ. ಇಂತಹ ಮರದಲ್ಲಿ ದ್ರವರೂಪದ ಉತ್ಪತ್ತಿ ಆಗುವುದಾದರೂ ಹೇಗೆ ಎಂಬುದು ಜನರ ಪ್ರಶ್ನೆಯಾಗಿತ್ತು.


ಶಿಡ್ಲಘಟ್ಟ ತ್ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ ಹುಣಸೆ ಮರದ ಖಾಂಡವೊಂದರಿಂದ ದ್ರವ ಸೋರುತ್ತಿರುವುದು.


ಈ ವಿಷಯವಾಗಿ ಜಿಕೆವಿಕೆ ಸಸ್ಯ ರೋಗ ಶಾಸ್ತ್ರ ವಿಭಾಗದ ಪ್ರೊಫೆಸರ್ ಎಸ್.ಸಿ.ಚಂದ್ರಶೇಖರ್ ಅವರನ್ನು ಸಂಪರ್ಕಿಸಿದಾಗ, ‘ಇದು ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕು ಅಷ್ಟೆ. ಮರದ ತೊಗಟೆಯಲ್ಲಿರುವ ಸಕ್ಕರೆ ಅಂಶಕ್ಕೆ ಸೋಂಕು ತಗುಲಿದಾಗ ಅದು ಹುದುಗಿ (ಫರ್ಮೆಂಟ್) ನೊರೆಯುಂಟಾಗುತ್ತದೆ. ನಮಗೆ ನೆಗಡಿಯಾದಾಗ ಮೂಗಿನಲ್ಲಿ ನೀರು ಸೋರುವಂತಹ ಕ್ರಿಯೆಗೆ ಇದನ್ನು ಹೋಲಿಸಬಹುದು ಅಥವಾ ದೇಹದ ಪ್ರತಿರೋಧಕ ಕ್ರಿಯೆ ಎನ್ನಬಹುದು. ಬೇವು ಮತ್ತು ಹುಣಸೆ ಮರಗಳಲ್ಲಿ ಈ ರೀತಿ ಸೋಂಕು ಆಗುತ್ತದೆ. ನಮಗೆ ಗಾಯ ವಾಸಿಯಾಗುವಂತೆ ಅವುಗಳಲ್ಲೂ ಒಳಗಡೆಯಿಂದ ಮರದ ತೊಗಟೆ ಬೆಳೆದು ಸೋಂಕು ವಾಸಿಯಾಗುತ್ತದೆ. ಒಂದು ವೇಳೆ ಸೋಂಕು ಹೆಚ್ಚಾಗಿದ್ದರೆ ಆ ರಂಬೆ ಸಾಯುತ್ತದೆ’ ಎಂದರು.