Thursday, August 22, 2013

ಸಾವಿನ ನೆರಳು...

 ಮೊಮ್ಮಕ್ಕಳಿಗೆ ತಾನು ವಾಯುಸೇನೆಯಲ್ಲಿದ್ದಾಗ ಪಡೆದ ಪದಕಗಳನ್ನು ತೋರಿಸುತ್ತಿರುವ ಶಿಡ್ಲಘಟ್ಟದ ಎಸ್.ವಿ.ಅಯ್ಯರ್.

"ಪಾಕಿಸ್ತಾನದ ಸರ್ಗೋದಾ ಬಳಿ ಭೂಮಿಯೊಳಗೆ ವಾಯು ನಿಲ್ದಾಣ ಇರುವುದು ಗೊತ್ತಾಯಿತು. ಅದಕ್ಕೆ  ಒಂದೇ  ದ್ವಾರವಿತ್ತು. ಬಾಂಬರ್ ಫೈಟರ್ ವಿಮಾನಗಳು ಒಳ ಮತ್ತು ಹೊರ ಹೋಗುತ್ತಿದ್ದುದು ಗೊತ್ತೇ ಆಗುತ್ತಿರಲಿಲ್ಲ. ಆಗ ವೈಮಾನಿಕ ದಳದ ಗಾಂಧಿ ಎಂಬ ಧೀರ ಅಧಿಕಾರಿ ತಮ್ಮ ಬಾಂಬರ್ ವಿಮಾನವನ್ನು ಅದರೊಳಗೆ ನುಗ್ಗಿಸಿಬಿಟ್ಟರು. ಮರುಕ್ಷಣವೇ ಎಲ್ಲವೂ ಬ್ಲಾಸ್ಟ್ ಆಯಿತು. ಗಾಂಧಿ ಹುತಾತ್ಮರಾದರು. ಪಾಕಿಸ್ತಾನದ ಜಂಘಾಬಲವೇ ಕುಸಿಯಿತು. ಇದೆಲ್ಲವೂ ನಡೆದದ್ದು ೧೯೬೫ರಲ್ಲಿ. ಆ ದಿನವನ್ನು ನೆನಪಿಸಿಕೊಂಡರೆ ಈಗಲೂ ರೋಮಾಂಚನವಾಗುತ್ತದೆ’. ಈ ದೃಶ್ಯ ಸಿನಿಮಾದ್ದಲ್ಲ, ಪುಸ್ತಕದಲ್ಲಿ ಓದಿದ್ದೂ ಅಲ್ಲ. ಈ ಘಟನೆ ವಿವರಿಸಿ, ಘಟನೆಗೆ ಸಾಕ್ಷಿಯಾದವರು ಶಿಡ್ಲಘಟ್ಟದ ಎಸ್.ವಿ.ಅಯ್ಯರ್. ಅವರ ಪೂರ್ತಿ ಹೆಸರು ಸುಬ್ರಮಣ್ಯಂ ವೆಂಕಟೇಶ ಅಯ್ಯರ್. ೧೯೬೫ ರ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ’ಏರ್ ಡಿಫೆನ್ಸ್ ಸೇಫ್ಟಿ ಆರ್ಗನೈಸೇಷನ್” ನಿಯಂತ್ರಣಾಧಿಕಾರಿಯಾಗಿದ್ದ  ಅವರ ಕಣ್ಣೆದುರೇ ಹಲವಾರು ಅಧಿಕಾರಿಗಳು, ಸೈನಿಕರು ಹುತಾತ್ಮರಾದರು. ’ಆಗಿನ ಯುದ್ಧದ ದೃಶ್ಯ ನೆನಪಿಸಿಕೊಂಡರೆ, ಸ್ನೇಹಿತರ ಜೊತೆಗಿನ ಭಾವನಾತ್ಮಕ ಸಂಬಂಧ, ಪ್ರೀತಿ ಮತ್ತು ವಿಶ್ವಾಸ ಎಲ್ಲವೂ ಕಣ್ಣೆದುರಿಗೆ ಬರುತ್ತವೆ. ಅವರು ನಗುನಗುತ್ತಲೇ ದೇಶಕ್ಕಾಗಿ ಪ್ರಾಣವನ್ನು ಅರ್ಪಿಸುತ್ತಿದ್ದರು" ಎನ್ನುವಾಗ ಅವರ ಕಣ್ಣಂಚಿನಲ್ಲಿ ನೀರು ಜಿನುಗುತ್ತದೆ.

 ಶಿಡ್ಲಘಟ್ಟದ ಎಸ್.ವಿ.ಅಯ್ಯರ್ ಅವರು ವಾಯುಸೇನೆಯಲ್ಲಿದ್ದಾಗ ಪಡೆದ ಪದಕಗಳು.

  ಸುಮಾರು ೭೧ ರ ವಯೋಮಾನದ ಶಿಡ್ಲಘಟ್ಟದ ಎಸ್.ವಿ.ಅಯ್ಯರ್ ೧೯೬೩ ರಿಂದ ೧೯೭೮ ರವರೆಗೆ ಹದಿನೈದು ವರ್ಷಗಳ ಕಾಲ ದೇಶದ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದವರು. ಪಾಕಿಸ್ತಾನ ಮತ್ತು ಬಾಂಗ್ಲಾ ವಿಮೋಚನಾ ಯುದ್ಧಗಳಲ್ಲಿ ಭಾಗವಹಿಸಿದವರು. ಪ್ರತಿಷ್ಠಿತ ಜನರಲ್ ಸರ್ವಿಸ್ ಇಂಡಿಯಾ ಪದಕ, ಲಾಂಗ್ ಸರ್ವೀಸ್ ಪದಕ, ಸೈನ್ಯ ಸೇವಾ ಪದಕ, ೧೯೬೫ರ ಪಾಕಿಸ್ತಾನ ’ವಾರ್’ ಪದಕ, ಸಂಗ್ರಾಂ ಪದಕ, ಪಶ್ಚಿಮಿಸ್ಟಾರ್ ಪದಕ, ಬಾಂಗ್ಲಾ ಲಿಬರೇಷನ್ ವಾರ್ ಪದಕ, ಸ್ಕೌಟ್ಸ್ ಮತ್ತು ಗೈಡ್ಸ್ ಪದಕ ಸೇರಿದಂತೆ ಹಲವಾರು ಪದಕಗಳು ಅವರ ಸಾಧನೆಯ ದ್ಯೋತಕಗಳಾಗಿವೆ.
 ಪಾಲಮ್ ಏರ್‌ಬೇಸ್‌ನ ಏರ್ ಟ್ರಾಫಿಕ್ ಕಂಟ್ರೋಲ್‌ನಲ್ಲಿ ಕೆಲಸವನ್ನು ಆರಂಭಿಸಿದ ಅವರು ಬರ್ನಾಲ, ಜಮ್ಮು, ಶಿಲಾಂಗ್, ಗುಜರಾತ್‌ನ ಜಾಮ್‌ನಗರ್, ಅಸ್ಸಾಮ್‌ನ ಡಿಂಜಾನ್, ಜೋರಾತ್, ತೇಜ್‌ಪುರ್ ಮುಂತಾದ ಕಡೆ ಕಾರ್ಯನಿರ್ವಹಿಸಿದರು. ತರಬೇತಿಗೆಂದು ಪ್ರಪಂಚದ ಅತ್ಯಂತ ಶೀತಲ ಪ್ರದೇಶ ರಶಿಯಾದ ಸೈಬೀರಿಯಾ, ಯೂರೋಪ್‌ನ ಫ್ರಾನ್ಸ್, ಜರ್ಮನಿ ಹಾಗೂ ಇಂಗ್ಲೆಂಡ್‌ಗೆ ಕೂಡ ಹೋಗಿ ಬಂದಿದ್ದಾರೆ.
 "ಬರ್ನಾಲಾದಲ್ಲಿ ನಾವೆಲ್ಲರೂ ಭೂಮಿಯೊಳಗಿನ ಬಂಕರ್ ಒಳಗಡೆ ಅಡಗಿ ಕುಳಿತಿದ್ದೆವು. ಅದು ಹೇಗೋ ಪಾಕಿಸ್ತಾನದವರಿಗೆ ಗೊತ್ತಾಗಿಬಿಟ್ಟಿತು.  ಪಾಕಿಸ್ತಾನದವರು ೧೫  ಫೈಟರ್ಸ್ ವೈಮಾನಿಕ ಧಾಳಿ ನಡೆಸಿದವು. ಅವರ ಬಾಂಬ್ ಧಾಳಿಯಿಂದ ನಾನು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದೆ. ಆದರೆ ನಮ್ಮ ರೇಡಾರ್ ಸ್ಟೇಷನ್‌ಗೆ ಹಾನಿಯಾಯಿತು. ಯುದ್ಧ ಭೂಮಿಯಲ್ಲಿ ವಿಮಾನ ಹತ್ತಿದ ಪೈಲೆಟ್‌ಗೆ ಪುನಃ ನೆಲಕ್ಕೆ ಹಿಂತಿರುಗುವ ನಂಬಿಕೆ ಇರುವುದಿಲ್ಲ. ಆದರೆ ಪ್ರಾಣಾಪಾಯದ ಬಗ್ಗೆ ಕಿಂಚಿತ್ತೂ ಭಯವಿಲ್ಲದೆ ಪೈಲಟ್‌ಗಳು ವಿಮಾವೇರಿಕೊಂಡು ಯುದ್ಧಭೂಮಿಗೆ ಹೊರಟುಬಿಡುತ್ತಿದ್ದರು’ ಎಂದು ತಮ್ಮ ನೆನಪುಗಳನ್ನು ಹಂಚಿಕೊಂಡರು.

ಆಗ್ರಾದಲ್ಲಿ ಪೆರೇಡ್‌ಗೆಂದು ಸಿದ್ಧರಾಗಿದ್ದ ಎಸ್.ವಿ.ಅಯ್ಯರ್.

 ’ಯುದ್ಧಭೂಮಿಯತ್ತ ಯಾವ ವಿಮಾನ ಹಾರಬೇಕೆಂದು ನಿರ್ಧರಿಸುವ ನಿಯಂತ್ರಣಾ ಕಾರ್ಯಪಡೆಯಲ್ಲಿ ನಾನಿದ್ದೆ. ಯುದ್ಧಕ್ಕೆ ಹೊರಟ ಪೈಲೆಟ್‌ಗಳನ್ನು ಬೀಳ್ಕೊಡಲು ಬರುತ್ತಿದ್ದ ಅವರ ಕುಟುಂಬದವರ ಕಂಗಳಲ್ಲಿ ನೀರು ತುಂಬಿರುತ್ತಿತ್ತು. ಮುಖದಲ್ಲಿ ಆತಂಕದ ಭಾವ ಇರುತ್ತಿತ್ತು. ಸತ್ತಂತೆ ಬದುಕುವುದಕ್ಕಿಂತ ದೇಶಕ್ಕಾಗಿ ಹೋರಾಡುತ್ತಾ ಸಾಯುವುದರಲ್ಲಿ ಅರ್ಥವಿದೆ. ಸಾವನ್ನು ಅಂಗೈಯಲ್ಲಿ ಇರಿಸಿಕೊಂಡು ದೇಶಕ್ಕಾಗಿ ಹೋರಾಡುವವರು ನಾವು ಎಂದು ಮುಗುಳ್ನಕ್ಕು ಪೈಲಟ್‌ಗಳು ವಿಮಾನವನ್ನೇರುತ್ತಿದ್ದರು. ಆಪ್ತರ ಕ್ಷೇಮಕ್ಕಾಗಿ ಕುಟುಂಬದವರು ನಿಂತಲ್ಲೇ ಪ್ರಾರ್ಥಿಸುತ್ತಿದ್ದರು’ ಎಂದು ಅವರು ಹೇಳಿದರು.
’ನನ್ನ ಮೊದಲು ಮಗಳು ಬರ್ನಾಲದಲ್ಲಿ ಜನಿಸಿದರೆ, ಎರಡನೆಯವಳು ಜಮ್ಮುವಿನಲ್ಲಿ ಮತ್ತು ಮೂರನೆಯವಳು ಮೇಘಾಲಯದ ಶಿಲ್ಲಾಂಗ್‌ನಲ್ಲಿ ಜನಿಸಿದಳು. ೧೯೭೮ರಲ್ಲಿ ಶಿಡ್ಲಘಟ್ಟಕ್ಕೆ ಬಂದ ಮೇಲೆ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡೆ. ಆನೂರಿನಲ್ಲಿ ಯುವ ಸಮ್ಮೇಳನ ಆಯೋಜಿಸಿದೆ. ಕನ್ನಡಪರ ಸಂಘಟನೆಗಳ ಮೂಲಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದ್ದಲ್ಲದೆ, ಪತ್ರಕರ್ತನಾಗಿಯೂ ಕಾರ್ಯನಿರ್ವಹಿಸಿದೆ. ಪಟ್ಟಣಕ್ಕಾಗಿ ಕೋರ್ಟ್, ಕಾಲೇಜು ಮುಂತಾದ ಅಗತ್ಯಗಳಿಗಾಗಿ ಮುಖಂಡರ ಜೊತೆಗೆ ಓಡಾಡಿದೆ. ಈಚೆಗೆ ಶಿಕ್ಷಣ ಸಂಸ್ಥೆಯವರೊಬ್ಬರು ಕರೆದಾಗ, ನನ್ನ ಯುದ್ಧ ದಿನಗಳ ಅನುಭವಗಳನ್ನು ಮಕ್ಕಳೊಂದಿಗೆ ಹಂಚಿಕೊಂಡೆ. ದೇಶದ ಸೇನೆಯಲ್ಲಿ ದುಡಿಯುವುದು ಶ್ರೇಷ್ಠವಾದದ್ದು. ನೀವೂ ಸೇರಿ ಎಂದು ಅವರಿಗೆ ಮಾರ್ಗದರ್ಶನ ಮಾಡಿದೆ’ ಎಂದು ಅವರು ನೆನಪುಗಳ ಸುರುಳಿ ಬಿಚ್ಚಿಡುತ್ತಾ ಮುಂದುವರಿದರು........

Monday, August 19, 2013

ಪತ್ರಿಕೆ, ಪುಸ್ತಕದಲ್ಲೂ ಬೆಳೆದಿತ್ತು ರೇಷ್ಮೆ!

 ಆನೂರು ಎ.ಎಂ.ಮುನೇಗೌಡರು.

 ರೇಷ್ಮೆ ಉದ್ಯಮದಲ್ಲಿ ಸಣ್ಣಪುಟ್ಟ ಬದಲಾವಣೆ ಆದರೂ ನೆನಪಾಗುವುದೇ ಶಿಡ್ಲಘಟ್ಟ. ರೇಷ್ಮೆ ಕೃಷಿಕರ ಹಾಡು-ಪಾಡು, ನೂತನ ತಂತ್ರಜ್ಞಾನದ ಪರಿಚಯ, ಬೆಲೆ ಏರಿಕೆ ಮತ್ತು ಕುಸಿತ, ರಫ್ತು ಮತ್ತು ಆಮದು ಮುಂತಾದವುಗಳ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಅನಿಸಿಕೆ, ಅಭಿಪ್ರಾಯ ನೀಡತೊಡಗುತ್ತಾರೆ.
  ಆಸಕ್ತಿಮಯ ಸಂಗತಿಯೆಂದರೆ, ಈ ರೀತಿಯ ಚರ್ಚೆ ಸಂವಾದಗಳು ಇತ್ತೀಚಿನದಲ್ಲ. ಈ ಎಲ್ಲದಕ್ಕೂ ಸುಮಾರು ೫೦ ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ.  ಅದು ೬೦ ರ ದಶಕದ ಸಮಯ. ವೈಜ್ಞಾನಿಕ ರೇಷ್ಮೆ ಬೇಸಾಯ ಆಗ ತಾನೆ ಅಖಂಡ ಕೋಲಾರ ಜಿಲ್ಲೆಗೆ ಪರಿಚಯವಾಗಿತ್ತು. ರೈತರು ಹಿಂಜರಿಯುತ್ತಲೇ ವಾಣಿಜ್ಯ ಬೆಳೆಯಾಗಿ ರೇಷ್ಮೆಯನ್ನು  ಕಂಡುಕೊಳ್ಳುತ್ತಿದ್ದರು. 
ರೇಷ್ಮೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ರೈತರಲ್ಲಿ ಆತ್ಮವಿಶ್ವಾಸ ತುಂಬಲೆಂದೇ  ಶಿಡ್ಲಘಟ್ಟ ತಾಲ್ಲೂಕಿನ ವ್ಯಕ್ತಿಯೊಬ್ಬರು ಪುಸ್ತಕಗಳನ್ನು ಹೊರತಂದರು.
 ರೇಷ್ಮೆಯಿಂದ ಯಾವ ರೀತಿ ಆರ್ಥಿಕ ಸಬಲತೆ ಕಾಣಬಹುದು ಎಂಬುದು ಸೇರಿದಂತೆ ಯಾವುದೆಲ್ಲ ಪರಿಹಾರೋಪಾಯ ಕಂಡುಕೊಳ್ಳಬಹುದು ಎಂಬುದನ್ನು ಅವರು ಪುಸ್ತಕಗಳ ಮೂಲಕ ತಿಳಿಪಡಿಸುತ್ತಿದ್ದರು.  ಹಾಗೆಂದು ಅವರೇನೂ ಸಾಹಿತಿಯಾಗಿರಲಿಲ್ಲ. ಆದರೆ ಸಾಹಿತ್ಯದ ಕುರಿತು ತುಂಬ ಆಸಕ್ತಿ ಇತ್ತು. ರೇಷ್ಮೆ ಕೃಷಿ ಕುರಿತು ಮಾಹಿತಿ ಮತ್ತು ಮಾರ್ಗದರ್ಶನ ನೀಡಿದ್ದರು.
 ಶಿಡ್ಲಘಟ್ಟ ತಾಲ್ಲೂಕಿನ ಆನೂರು ಗ್ರಾಮದ ಎ.ಎಂ.ಮುನೇಗೌಡ. ಆನೂರಿನ ಪಟೇಲ ಮುನಿಶಾಮೇಗೌಡರ ಪುತ್ರ.ಆಗಿನ ಕಾಲದಲ್ಲೇ ಕೃಷಿಗೆ ಸಂಬಂಧಿಸಿದಂತೆ ಎಲ್.ಎಜಿ ಎಂಬ ಡಿಪ್ಲೊಮ ಗಳಿಸಿದ್ದರು.  ಸರ್ಕಾರಿ ಉದ್ಯೋಗ ತಿರಸ್ಕರಿಸಿದ್ದ ಅವರು ತಮ್ಮ ಕುಲ ವೃತ್ತಿಯಾದ ವ್ಯವಸಾಯವನ್ನೇ ನಂಬಿ ಗ್ರಾಮಕ್ಕೆ ಹಿಂದಿರುಗಿದ್ದರು. ದೊಡ್ಡ ಕುಟುಂಬದ ಹಿರಿಯರಾಗಿದ್ದ ಅವರು ಕುಟುಂಬದ ಜವಾಬ್ದಾರಿಯೊಂದಿಗೆ ಸಾಹಿತ್ಯಾಭಿಮಾನಿಯಾಗಿದ್ದರು. ಆವರು ಜಿಲ್ಲೆಯ ಹಿರಿಯ ಸಾಹಿತಿಗಳಲ್ಲೊಬ್ಬರಾದ ಸಂತೇಕಲ್ಲಹಳ್ಳಿಯ ಲಕ್ಷ್ಮೀನರಸಿಂಹಶಾಸ್ತ್ರಿಯವರ ಒಡನಾಟವನ್ನು ಹೊಂದಿದ್ದು, ಶಾಸ್ತ್ರಿಗಳ ಸಾಹಿತ್ಯ ಸೇವೆಗೆ ಆರ್ಥಿಕ ನೆರವನ್ನು ನೀಡುತ್ತಿದ್ದರು.


 ಆನೂರು ಎ.ಎಂ.ಮುನೇಗೌಡರ ರೈತರ ಕುರಿತಾದ ಪುಸ್ತಕ ’ಗ್ರಾಮೋದ್ಧಾರವಾಗುವುದೆಂದು?’.

ರೇಷ್ಮೆ ವ್ಯವಸಾಯದ ಬಗ್ಗೆ ರೈತರಿಗೆ ಸರ್ಕಾರ ಅರಿವು ಮೂಡಿಸುವ ಮುನ್ನವೇ ಮುನೇಗೌಡ ಅವರು "ರೇಷ್ಮೆ ಕೈಗಾರಿಕೆ" ಎಂಬ ದ್ವೈಮಾಸಿಕ ಪತ್ರಿಕೆ ತರುವ ಸಾಹಸಕ್ಕೆ ಕೈಹಾಕಿದರು. ಅವರಿಗೆ ಪತ್ರಿಕೋದ್ಯಮ ಮತ್ತು ಮುದ್ರಣದ ಬಗ್ಗೆ ಸಾಮಾನ್ಯ ಪರಿಚಯವೂ ಇರಲಿಲ್ಲ. ಆದರೆ ರೇಷ್ಮೆ ಬೇಸಾಯದ ಬಗ್ಗೆ ಅಪಾರವಾದ ತಿಳುವಳಿಕೆಯನ್ನು ಹೊಂದಿದ್ದರು. ಬೇರೆ ದೇಶಗಳಲ್ಲಿ ರೇಷ್ಮೆ ಕೃಷಿ ಹೇಗೆ ನಡೆದಿದೆ, ವ್ಯಾಪಿಸಿದೆ. ಅದರ ಸಾಧ್ಯಾಸಾಧ್ಯತೆಗಳೇನು ಎಂಬುದರ ಬಗ್ಗೆ ಸಮಗ್ರ ಮಾಹಿತಿ ಕಲೆಹಾಕಿದ್ದರು. ತಾವು ತಿಳಿದುಕೊಂಡ ವಿಷಯಗಳನ್ನು ರೈತರಿಗೆ ತಿಳಿಸಬೇಕೆಂಬ ಕಾಳಜಿ, ಕಳಕಳಿಯಿತ್ತು.   ಬೆಂಗಳೂರಿನ ಕಲಾಸಿಪಾಳ್ಯಂನ ಹಾಸನದ ವೆಂಕಟೇಶಯ್ಯ ಅವರ ಮುದ್ರಣಾಲಯದಲ್ಲಿ ಇವರ ಪತ್ರಿಕೆ ರೂಪುಗೊಳ್ಳುತ್ತಿತ್ತು. ಪತ್ರಿಕೆಯ ಕರಡು ತಿದ್ದುವುದು, ಭಾಷೆಯನ್ನು ಪರಿಷ್ಕರಿಸುವುದು ಮುಂತಾದ ಕೆಲಸಗಳನ್ನು ಶಾಸ್ತ್ರಿಗಳು ಮಾಡುತ್ತಿದ್ದರು. ೧೬ ಪುಟಗಳ ಈ ಮಾಸಪತ್ರಿಕೆಯ ಎಲ್ಲಾ ಲೇಖನಗಳನ್ನೂ ಗೌಡರೇ ಬರೆಯುತ್ತಿದ್ದರು. ಕೆಲ ಲೇಖನಗಳು ಇಂಗ್ಲಿಷ್ ನಲ್ಲಿದ್ದರೆ, ಕೆಲ ಲೇಖನಗಳನ್ನು ಸಚಿತ್ರವಾಗಿಯೂ ಪ್ರಕಟಿಸುತ್ತಿದ್ದರು. ಅದರ ಬ್ಲಾಕುಗಳ ತಯಾರಿಕೆಗಾಗಿ ಬಹಳಷ್ಟು ಹಣ ವ್ಯಯವಾಗುತ್ತಿತ್ತು. ಈ ಪತ್ರಿಕೆಗೆ ಚಂದಾದಾರರಿದ್ದರೋ ಇಲ್ಲವೋ ಎಂಬುದನ್ನು ಪರಿಗಣಿಸದೇ, ಯಾವುದೇ ಆರ್ಥಿಕ ಅಪೇಕ್ಷೆಯಿಲ್ಲದೆ ಕೆಲ ಕಾಲ ಪತ್ರಿಕೆ ಹೊರತಂದರು. ಆರ್ಥಿಕ ಮುಗ್ಗಟ್ಟಿನಿಂದ, ಜನರ ಮತ್ತು ಸರ್ಕಾರದ ಪ್ರೋತ್ಸಾಹದ ಕೊರತೆಯಿಂದಾಗಿ ಪತ್ರಿಕೆ ಕೊನೆಯುಸಿರೆಳೆಯಿತು. 
  ಆನೂರು ಎ.ಎಂ.ಮುನೇಗೌಡರು ಹೊರತರುತ್ತಿದ್ದ ದ್ವೈಮಾಸಿಕ ಪತ್ರಿಕೆ ’ರೇಷ್ಮೆ ಕೈಗಾರಿಕೆ’.

  ರೈತರ ಬದುಕಿನ ಬಗ್ಗೆ ಕಳಕಳಿ ಹೊಂದಿದ್ದ ಮುನೇಗೌಡರು ’ಗ್ರಾಮೋದ್ಧಾರವಾಗುವುದೆಂದು?’ ಸೇರಿದಂತೆ ಕೆಲವು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದರು. ೧೯೪೪-೪೫ ನೆಯ ವರ್ಷದಲ್ಲಿ ಗ್ರಾಮಾಭ್ಯುದಯ ಮತ್ತು ಒಕ್ಕಲಿಗರ ಪತ್ರಿಕೆಗಳಲ್ಲಿ ರೈತರ ಬಗ್ಗೆ ಇವರು ಬರೆದ ಲೇಖನಗಳನ್ನು ಒಟ್ಟುಗೂಡಿಸಿ ’ಗ್ರಾಮೋದ್ಧಾರವಾಗುವುದೆಂದು?’ ಪುಸ್ತಕ ಪ್ರಕಟಿಸಿದ್ದರು.  ಈ ಪುಸ್ತಕದ ಬಿನ್ನಹದಲ್ಲಿ, "ಗ್ರಾಮವಾಸಿಗಳು ಸಂಘಗಳನ್ನು ಏರ್ಪಡಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡು ತಮ್ಮ ಕಾಲಿನ ಮೇಲೆ ತಾವು ನಿಲ್ಲುವಂತಾಗಬೇಕು. ಪ್ರತಿಯೊಂದಕ್ಕೂ ಇತರರನ್ನೇ ನಂಬಿಕೊಂಡಿರುವುದು ಹಿಂದುಳಿದವರ ಲಕ್ಷಣ. ಇದು ತೊಲಗಿದಂತೆಲ್ಲಾ ರೈತನು ಅಭಿವೃದ್ಧಿ ಹೊಂದುತ್ತಿದ್ದಾರೆಂದು ತಿಳಿಯಬೇಕು. ಹೀಗಾಗಬೇಕಾದರೆ ರೈತನ ಹಿತಚಿಂತಕರೆಲ್ಲರೂ ರೈತನ ಅವಶ್ಯಕತೆಗಳ ನಿಜ ಸ್ವರೂಪವನ್ನು ತಿಳಿದು ನಡೆಯಬೇಕು. ಓದುಗರು ಸಾಹಿತ್ಯದೋಷಗಳನ್ನು ಮನ್ನಿಸಿ ರೈತನೊಬ್ಬನಿಂದ ಬರೆಯಲ್ಪಟ್ಟಿರುವ ಈ ಪುಸ್ತಕದಲ್ಲಿರುವ ವಿಷಯಗಳನ್ನು ಗಮನಿಸಬೇಕೆಂದು ವಿಜ್ಞಾಪನೆ’ ಎಂದು ಬರೆಯುತ್ತಾರೆ ಮುನೇಗೌಡರು.
 ಮುನೇಗೌಡರು ರೇಷ್ಮೆ ಬೇಸಾಯದ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ಕ್ರಿಯಾಶೀಲರಾಗಿದ್ದವರು. ರೇಷ್ಮೆ ಬೇಸಾಯ ಸುಣ್ಣಕಟ್ಟು ರೋಗ ಮತ್ತು ಹೂಜಿ ನೊಣಗಳ ಹಾವಳಿಯಿಂದಾಗಿ ಸೊರಗಿದಾಗ ಅದರಿಂದ ಪಾರಾಗುವ ಬಗ್ಗೆ ತಮ್ಮ ಆಲೋಚನೆಗಳನ್ನು ದಾಖಲಿಸುತ್ತಿದ್ದರು. ಆಗ ಸರ್ಕಾರದ ರೇಷ್ಮೆ ಇಲಾಖೆ ಮುನೇಗೌಡರ ಸೂಚನೆಗಳನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಮೈಸೂರಿನ ರೇಷ್ಮೆ, ಜಪಾನಿನ ರೇಷ್ಮೆ, ರೇಷ್ಮೆ ಕುರಿತ ಕವನಗಳು, ರೇಷ್ಮೆ ಇಲಾಖೆ, ರೇಷ್ಮೆ ಕೈಗಾರಿಕೆಯ ವಿವಿಧ ಕಸುಬುಗಳ ಹಾಗೂ ಸಮಸ್ಯೆಗಳ ಕುರಿತಂತೆ ವೈವಿಧ್ಯಮಯ ಲೇಖನಗಳನ್ನು ಇವರ ’ರೇಷ್ಮೆ ಕೈಗಾರಿಕೆ’ ರೇಷ್ಮೆ ಕೈಗಾರಿಕೆಯ ಪ್ರಗತಿಗೆ ಮೀಸಲಾದ ಏಕೈಕ ದ್ವೈಮಾಸಿಕ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಆನೂರು ಎ.ಎಂ.ಮುನೇಗೌಡರು ಹೊರತರುತ್ತಿದ್ದ ದ್ವೈಮಾಸಿಕ ಪತ್ರಿಕೆ ’ರೇಷ್ಮೆ ಕೈಗಾರಿಕೆ’.

 "೧೯೭೮ ರಲ್ಲಿ ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯರಾಗಿದ್ದ ನಾನು ಮತ್ತು ಮುನೇಗೌಡರು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಸಂತೇಕಲ್ಲಹಳ್ಳಿ ಗ್ರಾಮದಲ್ಲಿ "ರೇಷ್ಮೆ ವ್ಯವಸಾಯದ ಆಗುಹೋಗುಗಳ" ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ರೇಷ್ಮೆ ಬೆಳೆಯುತ್ತಿದ್ದ ರೈತರಿಗಾಗಿ ನಡೆಸಿದ್ದೆವು. ಆಗ ಸುಣ್ಣಕಟ್ಟು ರೋಗ ಬಂದರೆ ಗೂಡುಗಳಿರುವ ದಡಿಗಳಿಗೆ ಮೆಣಸಿನಕಾಯಿ ಕಟ್ಟುತ್ತಿದ್ದೆವು. ಯಾವಾಗ ಬೈವೋಲ್ಟೀನ್ ಗೂಡು ಬೆಳೆಯಲು ಪ್ರಾರಂಭಿಸಿದೆವೊ ಈ ರೋಗ ನಮ್ಮನ್ನು ತರಿದುಹಾಕಿತು. ಹೂಜಿ ನೊಣ ಬಂದದ್ದು ಬಾಂಗ್ಲಾದೇಶದಿಂದ. ಇದರಿಂದ ಆಗುತ್ತಿದ್ದ ತೊಂದರೆಗಳು ಮತ್ತು ರೋಗಗಳನ್ನು ತಡೆಯಲು ಸರ್ಕಾರಿ ಅಧಿಕಾರಿಗಳು ಸೂಚಿಸಿದ್ದ ಫಾರ್ಮಲಿನ್ ದ್ರಾವಣದಿಂದ ರೈತರಿಗೆ ಆಗುತ್ತಿದ್ದ ಆರೋಗ್ಯ ತೊಂದರೆಗಳು, ಉತ್ತಮ ಗುಣಮಟ್ಟದ ಮೊಟ್ಟೆಗಳನ್ನು ಗ್ರೇನೇಜ್‌ನಿಂದ ಪಡೆಯುವುದರ ಬಗ್ಗೆ ಆ ದಿನ ಚರ್ಚಿಸಿದೆವು. ಈಗಿನಂತೆ ಸರ್ಕಾರಿ ಗೂಡಿನ ಮಾರುಕಟ್ಟೆ ಆಗ ಇರಲಿಲ್ಲ. ರೀಲರುಗಳು ಸಾಲ, ಲಾಭದ ಗೂಡು ಎಂದು ರೈತರ ಶೋಷಣೆ ನಡೆಸುತ್ತಿದ್ದ ಕಾಲವದು. ಅದರ ವಿರುದ್ಧವೂ ದನಿ ಎತ್ತಿ ಮುನೇಗೌಡರು ಮಾತನಾಡಿದರು. ನಾನು ನಮ್ಮ ಹಳ್ಳಿಯಿಂದ ಎತ್ತಿನ ಗಾಡಿಯಲ್ಲಿ ರೇಷ್ಮೆಗೂಡನ್ನು ಶಿಡ್ಲಘಟ್ಟಕ್ಕೆ ಸಾಗಿಸುತ್ತಿದ್ದೆ. ತಮಾಷೆಯೆಂದರೆ, ರೀಲರುಗಳ ವಿರುದ್ಧ ಮಾತನಾಡಿದೆನೆಂದು ಕೆಲಕಾಲ ನನ್ನ ಗೂಡನ್ನು ಯಾರೂ ಕೊಳ್ಳುತ್ತಿರಲಿಲ್ಲ. ಬೇರೆಯವರನ್ನು ಕಳಿಸಿ ಮಾರಿಸುತ್ತಿದ್ದೆ" ಎಂದು ಮುನೇಗೌಡರೊಂದಿಗಿನ ದಿನಗಳನ್ನು ಡಾ.ಶೇಷಶಾಸ್ತ್ರಿ ನೆನೆಯುತ್ತಾರೆ.

Tuesday, August 13, 2013

ಶಿಡ್ಲಘಟ್ಟದ ವಿರೂಪಾಕ್ಷಪ್ಪ ಹೈಸ್ಕೂಲಿನ ದಿನಗಳು...


 ಶಿಡ್ಲಘಟ್ಟದ ಪ್ರಥಮ ಪುರಸಭಾ ಅಧ್ಯಕ್ಷ ಬಿ.ವಿರೂಪಾಕ್ಷಪ್ಪ ಅವರು ಪಟ್ಟಣದಲ್ಲಿ ಹೈಸ್ಕೂಲು ಕಟ್ಟಡದ ಅಡಿಗಲ್ಲು ಸ್ಥಾಪನಾ ಮಹೋತ್ಸವವನ್ನು ನೆರವೇರಿಸಲು ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಸಮ್ಮತಿಸಿದ್ದಕ್ಕೆ ವಂದನೆಯ ರೂಪದಲ್ಲಿ ಅರ್ಪಿಸಿದ್ದ ಬಿನ್ನವತ್ತಳೆ.

 ಮೈಸೂರು ಸಂಸ್ಥಾನದ ಶ್ರೀಮನ್‌ಮಹಾರಾಜರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್, ಜಿ.ಸಿ.ಬಿ., ಜಿ.ಸಿ.ಎಸ್.ಐ., ಅವರ ದಿವ್ಯಸನ್ನಿಧಾನಂಗಳಲ್ಲಿ ಶಿಡ್ಲಘಟ್ಟ ಬೇವಿನಮರದ ಬಸಪ್ಪನವರ ಮಗ ವಿರೂಪಾಕ್ಷಪ್ಪ ಸಮರ್ಪಿಸಿದ ... ಎಂದು ಆರಂಭವಾಗುವ ರೇಷ್ಮೆಯ ಬಟ್ಟೆಯ ಮೇಲೆ ಮುದ್ರಿಸಲಾದ ಬಿನ್ನವತ್ತಳೆ ಶಿಡ್ಲಘಟ್ಟದ ಇತಿಹಾಸವನ್ನು ಮೈಸೂರು ಸಂಸ್ಥಾನದ ಆಡಳಿತಾವಧಿಗೆ ಕೊಂಡೊಯ್ಯುತ್ತದೆ. ಜೊತೆಯಲ್ಲಿ ಶಿಡ್ಲಘಟ್ಟದಲ್ಲಿ ಮೊದಲ ಪ್ರೌಢಶಾಲೆ ಸ್ಥಾಪನೆಯಾದ ಬಗ್ಗೆ ವಿವರಗಳೂ ಸಿಗುತ್ತದೆ.
 ಶಿಡ್ಲಘಟ್ಟ ತಾಲ್ಲೂಕಿನ ಪ್ರಪ್ರಥಮ ಪ್ರೌಢಶಾಲೆ ಕಟ್ಟಡ ಅಡಿಗಲ್ಲು ಸ್ಥಾಪನಾ ಮಹೋತ್ಸವವನ್ನು ನೆರವೇರಿಸಲು ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಸಮ್ಮತಿಸಿದ್ದಕ್ಕೆ ಶಿಡ್ಲಘಟ್ಟ ಪುರಸಭೆಯ ಪ್ರಥಮ ಅಧ್ಯಕ್ಷ ಬಿ.ವಿರೂಪಾಕ್ಷಪ್ಪ ಅವರು ವಂದನೆಯ ರೂಪದಲ್ಲಿ ಅರ್ಪಿಸಿದ್ದ ಬಿನ್ನವತ್ತಳೆಯಿದು.


 ಶಿಡ್ಲಘಟ್ಟದ ಪ್ರಥಮ ಪುರಸಭಾ ಅಧ್ಯಕ್ಷ ಬಿ.ವಿರೂಪಾಕ್ಷಪ್ಪ.

 ಸ್ವಾತಂತ್ರ್ಯ ಪೂರ್ವದ ದಿನಗಳಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಬಹುತೇಕ ಮಂದಿ ಶಿಕ್ಷಣಕ್ಕೆ ಚಿಕ್ಕಬಳ್ಳಾಪುರಕ್ಕೆ ಹೋಗಬೇಕಾಗಿತ್ತು. ಒಪ್ಪೊತ್ತಿನ ಊಟ ಮಾಡಿಕೊಂಡು ರೈಲನ್ನೇರಿ ಶಾಲೆಗೆ ಹೋಗುತ್ತಿದ್ದ ಮಕ್ಕಳು ರಾತ್ರಿ ನಂತರವಷ್ಟೇ ಹಿಂತಿರುಗುತ್ತಿದ್ದರು.  ಒಮ್ಮೆ ರೈಲಿಗೆ ಹತ್ತುವ ವೇಳೆ ವಿದ್ಯಾರ್ಥಿಯೊಬ್ಬ ರೈಲಿನಡಿ ಸಿಲ್ಲುಕಿ ಮೃತಪಟ್ಟಾಗ, "ನಮ್ಮೂರಿನಲ್ಲಿ ಪ್ರೌಢಶಾಲೆ ಇದ್ದಿದ್ದರೆ ಈ ಅನಾಹುತವೇ ಸಂಭವಿಸುತ್ತಿರಲಿಲ್ಲ್" ಎಂಬ ಮಾತು ಹಲವರಿಂದ ಕೇಳಿ ಬಂತು. ಹೇಗಾದರೂ ಮಾಡಿ ಶಿಡ್ಲಘಟ್ಟದಲ್ಲಿ  ಪ್ರೌಢಶಾಲೆಯೊಂದನ್ನು ಸ್ಥಾಪಿಸಲೇಬೇಕು ಎಂದು ಪಣತೊಟ್ಟ ಬ್ರಿಟಿಷ್ ಆಡಳಿತದ ಪುರಸಭೆಯ ಉಪಾಧ್ಯಕ್ಷರಾಗಿದ್ದ ಬಿ.ವಿರೂಪಾಕ್ಷಪ್ಪ ಅವರು ಪ್ರೌಢಶಾಲೆ ಕಟ್ಟಡಕ್ಕಾಗಿ ೩೦ ಸಾವಿರ ರೂಪಾಯಿ ದಾನ ನೀಡಿದರು. ಕೋಲಾರ ಜಿಲ್ಲಾ ಬೋರ್ಡ್ ಕೂಡ ೧೦ ಸಾವಿರ ರೂಪಾಯಿ ನೀಡಿತ್ತು.
 ದೇಶ ಸ್ವಾತಂತ್ರ್ಯಗೊಳ್ಳಲು ಇನ್ನೂ ಎರಡು ತಿಂಗಳು ಬಾಕಿಯಿರುವಾಗಲೇ ಶಿಡ್ಲಘಟ್ಟದ ಮೊದಲ ಪ್ರೌಢಶಾಲೆ ಆರಂಭಗೊಂಡಿತು. ೧೯೪೭ ರ  ಜೂನ್ ೧೧ ರಂದು ಆರಂಭಗೊಂಡ ಪ್ರೌಢಶಾಲೆ ನಡೆಸಲು ಬಿ.ವಿರೂಪಾಕ್ಷಪ್ಪ ಅವರು ತಮ್ಮ ಮನೆಯನ್ನೇ ಬಿಟ್ಟುಕೊಟ್ಟಿದ್ದರು. ಅದಕ್ಕೆ ಸರ್ಕಾರ "ವಿರೂಪಾಕ್ಷಪ್ಪ ಹೈಸ್ಕೂಲ್" ಎಂದೇ ಹೆಸರಿಸಿತ್ತು. ಸುಮಾರು ನಾಲ್ಕು ವರ್ಷಗಳ ಕಾಲ ಅವರ ಮನೆಯಲ್ಲೇ ಪ್ರೌಢಶಾಲೆ ನಡೆಯಿತು. ಬಿನ್ನವತ್ತಳೆಯಲ್ಲಿ ದಾಖಲಾಗಿರುವ ಮಾಹಿತಿ ಪ್ರಕಾರ ೧೯೫೧ ರಲ್ಲಿ ಅವರ ಮನೆಯಲ್ಲಿ ನಡೆಯುತ್ತಿದ್ದ ಪ್ರೌಢಶಾಲೆಯಲ್ಲಿ ೧೬೯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು.
  ಕೆಲ ದಾನಿಗಳ ಸಹಾಯ ಪಡೆದು ೧೩ ಎಕರೆ ಒಂದು ಗುಂಟೆ ಜಮೀನನ್ನು ಖರೀದಿಸಿ ಅದನನ್ನು ದಾನ ಮಾಡಿದ ಬಿ.ವಿರೂಪಾಕ್ಷಪ್ಪ ಅವರು ಮೈಸೂರು ಮಹಾರಾಜರಿಂದ ೧೯೫೧ ರ ಆಗಸ್ಟ್ ೧೩ ರಂದು ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಬಿ.ವಿರೂಪಾಕ್ಷಪ್ಪ ಅವರು ತಮ್ಮ ಪತ್ನಿ ಸೂಗಮ್ಮ ಹೆಸರಿನಲ್ಲಿ ಪಟ್ಟಣದಲ್ಲಿ ಹೆರಿಗೆ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರಕ್ಕೆ ೧೦ ಸಾವಿರ ರೂಪಾಯಿ ನೀಡಿದ್ದರು.

 ಬಿ.ವಿರೂಪಾಕ್ಷಪ್ಪ ಅವರ ಸಮಾಜ ಸೇವೆಗಾಗಿ ಮೈಸೂರು ಸಂಸ್ಥಾನದ ವತಿಯಿಂದ ಜಯಚಾಮರಾಜ ಒಡೆಯರ್ ಅವರು ನೀಡಿದ್ದ ಗಂಡುಬೇರುಂಡ ಲಾಂಛನವಿರುವ ಬಂಗಾರದ ಪದಕ.

ಬಿ.ವಿರೂಪಾಕ್ಷಪ್ಪ ಅವರ ಸಮಾಜ ಸೇವೆಗಾಗಿ ಮೈಸೂರು ಸಂಸ್ಥಾನದ ವತಿಯಿಂದ ಜಯಚಾಮರಾಜ ಒಡೆಯರ್ ಅವರು ಗಂಡುಬೇರುಂಡ ಲಾಂಛನವಿರುವ ನಾಲ್ಕೂವರೆ ತೊಲದ ಬಂಗಾರದ ಪದಕ ಮತ್ತು ಒಂದೂವರೆ ಕೆಜಿ ತೂಕದ ಮೈಸೂರು ಸಂಸ್ಥಾನದ ಲಾಂಛನವಿರುವ ಬೆಳ್ಳಿತಟ್ಟೆಯನ್ನು ನೀಡಿ ಗೌರವಿಸಿದ್ದರು.
ಪ್ರೌಢಶಾಲೆ ಕಟ್ಟಡ ನಿರ್ಮಾಣಗೊಂಡು ಉದ್ಘಾಟನೆಯಾಗುವ ವೇಳೆಗೆ ಮೈಸೂರು ಸಂಸ್ಥಾನ ತನ್ನ ಅಧಿಕಾರವನ್ನು ಕಳೆದುಕೊಂಡಿತ್ತು. ವಿಧಾನಸಭೆ ಚುನಾವಣೆಗಳು ನಡೆದವು. ಆಗಿನ ಮುಖ್ಯಮಂತ್ರಿ ಕೆ.ಹನುಮಂತಯ್ಯ ಅವರು ೧೯೫೪ರ  ಜೂನ್ ೫ ರಂದು ಪಟ್ಟಣದ "ವಿರೂಪಾಕ್ಷಪ್ಪ ಹೈಸ್ಕೂಲ್" ಕಟ್ಟಡವನ್ನು ಉದ್ಘಾಟಿಸಿದರು.

ಮೈಸೂರು ಮಹಾರಾಜರಿಂದ ಅಡಿಗಲ್ಲು ಹಾಕಲ್ಪಟ್ಟ ತಾಲ್ಲೂಕಿನಲ್ಲಿ ಮೊದಲ ಪ್ರೌಢಶಾಲೆ ಕಟ್ಟಡದ ಶಂಕುಸ್ಥಾಪನಾ ಕಲ್ಲು.

 "ಆಗಿನ ಹಿರಿಯರ ಸಾಮಾಜಿಕ ಕಳಕಳಿಯಿಂದ ಪಟ್ಟಣದಲ್ಲಿ ಪ್ರಾರಂಭಗೊಂಡ ಏಕೈಕ ಪೌಢಶಾಲೆಯಲ್ಲಿ ಓದಿ ಹಲವಾರು ಮಂದಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅದೇ ಸ್ಥಳದಲ್ಲಿ ಈಗ ಪದವಿಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜು, ನೆಹರೂ ಕ್ರೀಡಾಂಗಣ ಮತ್ತು ಪುರಸಭೆಗೆ ಆದಾಯ ತರುವ ಅಂಗಡಿ ಮಳಿಗೆಗಳು ನಿರ್ಮಾಣಗೊಂಡಿವೆ. 
ಮೊದಲಿದ್ದ "ಶ್ರೀ ವಿರೂಪಾಕ್ಷಪ್ಪ ಹೈಸ್ಕೂಲ್" ಎಂಬ ಹೆಸರು ಪ್ರೌಢಶಾಲೆಯ ಪ್ರಾಂಶುಪಾಲರ ಕೊಠಡಿಯ ಗೋಡೆಯಲ್ಲಿ ಶಂಕುಸ್ಥಾಪನಾ ಫಲಕದಲ್ಲಿ ಮಾತ್ರ ಉಳಿದಿದೆ. ಈಗ ತಾಲ್ಲೂಕಿನಲ್ಲಿ ಹಲವಾರು ಪ್ರೌಢಶಾಲೆಗಳಿವೆ, ಕಾಲೇಜುಗಳಿವೆ, ವಾಹನ ಸೌಕರ್ಯಗಳಿವೆ. ವಿದ್ಯೆ, ಆರೋಗ್ಯ ಮತ್ತು ಆಹಾರದ ಕೊರತೆಯಿದ್ದ ಕಾಲದಲ್ಲಿ ತಾಲ್ಲೂಕಿನ ಏಳ್ಗೆಗಾಗಿ ಶ್ರಮಿಸಿದವರನ್ನು ನೆನೆಯಬೇಕು" ಎಂದು ವಿರೂಪಾಕ್ಷಪ್ಪ ಹೈಸ್ಕೂಲ್‌ನ ವಿದ್ಯಾರ್ಥಿ ಮತ್ತು ನಿವೃತ್ತ ಪ್ರಾಧ್ಯಾಪಕ ಆರ್.ಆಂಜನೇಯ ಹೇಳುತ್ತಾರೆ.


 ಮೈಸೂರು ಸಂಸ್ಥಾನದ ವತಿಯಿಂದ ಜಯಚಾಮರಾಜ ಒಡೆಯರ್ ಅವರು  ಒಂದೂವರೆ ಕೆಜಿ ತೂಕದ ಮೈಸೂರು ಸಂಸ್ಥಾನದ ಗಂಡುಬೇರುಂಡ ಲಾಂಛನವಿರುವ ಬೆಳ್ಳಿತಟ್ಟೆ.