Sunday, November 27, 2011

ಕೀಟ ಲೋಕದ "ಚಾಣಕ್ಯ"

ಬಹು ಮಹಡಿ ಕಟ್ಟಡ ಕಟ್ಟಲು ವಿನ್ಯಾಸಕಾರ, ಎಂಜಿನಿಯರ್, ಕೂಲಿಕಾರ್ಮಿಕರು ಸೇರಿದಂತೆ ಹಲವು ಮಂದಿ ಪ್ರಯಾಸ ಪಡಬೇಕು. ಕೆಲ ದಿನಗಳ ಮಟ್ಟಿಗೆ ಸಣ್ಣಪುಟ್ಟ ಕಷ್ಟಗಳನ್ನು ಎದುರಿಸಬೇಕು. ಆದರೆ ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರಿನಲ್ಲಿ ಕಣಜವೊಂದು ಯಾರ ಸಹಾಯವೂ ಇಲ್ಲದೆ ಏಳುಮಹಡಿಗಳ ಪುಟ್ಟ ಮನೆಯೊಂದನ್ನು ಚೊಕ್ಕವಾಗಿ ಕಟ್ಟಿಕೊಂಡಿದೆ.
ಆಕರ್ಷಕ ಗುಣಗಳನ್ನು ಹೊಂದಿರುವ ಕಣಜ ಅಷ್ಟೇ ಅಪಾಯಕಾರಿಯೂ ಹೌದು. ಚೂಪಾದ ಸೂಜಿಯಂತೆ ಚುಚ್ಚುವ ಮುಳ್ಳುಗಳನ್ನು ಹೊಂದಿರುವ ಕಣಜ ಶಿಸ್ತು, ಸಂಯಮ ಮತ್ತು ಬದ್ಧತೆಯನ್ನೂ ಮೈಗೂಡಿಸಿಕೊಂಡಿರುತ್ತದೆ.



ಪುಟ್ಟದಾದ ಗೂಡನ್ನು ಕಟ್ಟಿಕೊಳ್ಳಲು ಸೂಕ್ತ ಮಣ್ಣು ಆಯ್ದುಕೊಳ್ಳುವ ಕಣಜ ತನ್ನ ಜೊಲ್ಲಿನಿಂದ ಅದನ್ನು ಮೆದುವಾಗಿಸುತ್ತದೆ. ಬಳಿಕ ಉಂಡೆಯ ರೂಪದಲ್ಲಿ ಕಟ್ಟಿ ಹೊತ್ತು ತಂದು ನಿರ್ದಿಷ್ಟ ಸ್ಥಳವೊಂದರಲ್ಲಿ ಗೂಡು ಕಟ್ಟಿಕೊಳ್ಳುತ್ತದೆ. ಈ ಕಾರಣದಿಂದಲೇ ಇದನ್ನು ’ಕೀಟಲೋಕದ ಕುಂಬಾರ’ ಎಂದು ಸಹ ಕರೆಯುತ್ತಾರೆ.
ಎಲ್ಲರೂ ತಮ್ಮ ವಾಸಕ್ಕಾಗಿ ಮನೆಗಳನ್ನು ಕಟ್ಟಿಕೊಂಡರೆ, ಕಣಜವು ತನ್ನ ಸಂತಾದ ಸುರಕ್ಷತೆಗಾಗಿ ಗೂಡು ಕಟ್ಟುತ್ತದೆ. ಮಣ್ಣನ್ನು ತಂದು ಗೂಡು ನಿರ್ಮಿಸುವ ಇದು ಅದರೊಳಗೆ ಮೊಟ್ಟೆಯನ್ನು ಇಡುತ್ತದೆ. ಬಳಿಕ ಕಂಬಳಿಹುಳುಗಳನ್ನು ಬೇಟೆಯಾಡುತ್ತದೆ. ಕಂಬಳಿ ಹುಳುಗಳನ್ನು ಸಾಯಿಸದೇ ಅವುಗಳನ್ನು ಎಚ್ಚರ ತಪ್ಪುವ ಹಾಗೆ ಮಾಡಿ, ಎರಡು ಅಥವಾ ಮೂರು ಹುಳುಗಳನ್ನು ಗೂಡಿನೊಳಗೆ ಸೇರಿಸಿ, ಗೂಡನ್ನು ಮಣ್ಣಿನಿಂದ ಮುಚ್ಚುತ್ತದೆ.



ಕಣಜದ ಮರಿಗಳು ಮೊಟ್ಟೆಯಿಂದ ಹೊರ ಬರುವ ವೇಳೆಗೆ ಸಿದ್ಧ ಆಹಾರದ ರೂಪದಲ್ಲಿ ಕಂಬಳಿಹುಳುಗಳನ್ನು ನೀಡುತ್ತದೆ. ಇಂಥ ಪ್ರಕ್ರಿಯೆ ಕೀಟ ಜಗತ್ತಿನಲ್ಲಿ ಅಪರೂಪದ ಸಂಗತಿ. ಕಣಜಗಳು ನಿರ್ಮಿಸಿದ ಹಲವು ಪುಟ್ಟ ಪುಟ್ಟ ಗೂಡುಗಳನ್ನು ಕೊತ್ತನೂರು ಗ್ರಾಮದಲ್ಲಿ ಕಾಣಬಹುದು.
ಕಣಜದ ಮುಳ್ಳು ಜೇನಿಗಿಂತ ವಿಷಕಾರಿ. ಕಣಜ ಕಚ್ಚಿದ ಸ್ಥಳದಲ್ಲಿ ಉರಿ, ನೋವು ಹಾಗೂ ಚಳುಕು ಉಂಟಾಗುತ್ತದೆ. ತನ್ನ ಮರಿಗಾಗಿ ಕಣಜವು ಮುಳ್ಳಿನಿಂದ ಚುಚ್ಚಿ ಕಂಬಳಿಹುಳುಗಳನ್ನು ಎಚ್ಚರ ತಪ್ಪಿಸುತ್ತದೆಯೇ ಹೊರತು ಅವುಗಳನ್ನು ಸಾಯಿಸುವುದಿಲ್ಲ. ಸತ್ತದ್ದನ್ನು ಜೀವಂತಗೊಳಿಸುವ ಶಕ್ತಿ ಕಣಜಕ್ಕೆ ಇದೆ ಎಂದು ಭಾವಿಸಿ ಬಹುತೇಕ ಮಂದಿ ಅವುಗಳನ್ನು ಸಂಜೀವಿನಿ ಹುಳು ಎಂದು ಕರೆಯುತ್ತಾರೆ. ತೆಲುಗಿನಲ್ಲಿ ಇದನ್ನು ಕಂದಿರಿಗ ಎನ್ನುತ್ತಾರೆ. ಅತ್ಯಂತ ಸುಂದರವಾದ ಸಣ್ಣ ನಡುವಿನ ಈ ಕೀಟವನ್ನು ಜನಪದ ಮತ್ತು ಶಿಷ್ಟ ಸಾಹಿತ್ಯದಲ್ಲಿ ಹೆಣ್ಣಿನ ನಡುವನ್ನು ಬಣ್ಣಿಸುವಾಗ ಹೋಲಿಕೆಯಾಗಿ ಕೊಡುತ್ತಾರೆ. ಆದರೆ ಕಚ್ಚಿಸಿಕೊಂಡವರಿಗೆ ಮಾತ್ರ ಇದರ ಸೌಂದರ್ಯ ಹಿತವಲ್ಲ. ಇತ್ತೀಚೆಗೆ ಕಂದಿರಿಗ ಎಂಬ ತೆಲುಗು ಸಿನಿಮಾ ಕೂಡ ಬಂದಿರುವುದರಿಂದ ಈ ಕಣಜದ ಕೀರ್ತಿ ಎಷ್ಟು ದೊಡ್ಡದು ಎಂಬುದು ತಿಳಿಯುತ್ತದೆ!