Friday, December 30, 2011

ಬ್ರಿಟಿಷ್ ಅಧಿಕಾರಿ ಕಂಡ "ಸಿಲಗುಟ್ಟ"


ಶಿಡ್ಲಘಟ್ಟದಲ್ಲಿ ಇನ್ನೂರು ವರ್ಷದ ಹಿಂದೆ ಸರ್ವೇಕ್ಷಣೆ ನಡೆಸಿದ್ದ ಬ್ರಿಟಿಷ್ ಅಧಿಕಾರಿ ಫ್ರಾನ್ಸಿಸ್ ಬುಕನನ್.


ರೇಷ್ಮೆ ಮತ್ತು ಹೈನುಗಾರಿಕೆಗೆ ಶಿಡ್ಲಘಟ್ಟ ತಾಲ್ಲೂಕು ಹೆಸರುವಾಸಿ ಎಂದು ಎಲ್ಲರೂ ಅಭಿಪ್ರಾಯಪಡುತ್ತಾರೆ. ಆದರೆ ಶಿಡ್ಲಘಟ್ಟ ಹೀಗಿರಲಿಲ್ಲ. ಇಲ್ಲಿನ ಜನರಿಗೆ ರೇಷ್ಮೆಯ ಗಂಧಗಾಳಿಯೂ ಇರಲಿಲ್ಲ. ಇಲ್ಲಿನ ಜನರು ತರಕಾರಿ ಬೆಳೆಯುವುದರಲ್ಲಿ, ಹತ್ತಿಯ ಬಟ್ಟೆಗಳನ್ನು ತಯಾರಿಸುವುದರಲ್ಲಿ ಸಿದ್ದಹಸ್ತರಾಗಿದ್ದರು. ಈ ಮಾತುಗಳನ್ನು ಹೇಳಿದವರು ಮೂಲನಿವಾಸಿಗಳಲ್ಲ, ಭಾರತೀಯ ಇತಿಹಾಸಕಾರರೂ ಅಲ್ಲ. ಈ ಪ್ರದೇಶದ ಕುರಿತು ಅತೀವ ಆಸಕ್ತಿಯಿಂದ ಅಧ್ಯಯನ ಮಾಡಿದ ಬ್ರಿಟಿಷ್ ಅಧಿಕಾರಿ ಫ್ರಾನ್ಸಿಸ್ ಬುಕನನ್ ಈ ವಿಷಯವನ್ನು ತಿಳಿಸಿದ್ದಾರೆ.
೧೮೦೭ರಲ್ಲಿ ಪ್ರಕಟವಾದ ಅವರ ಪುಸ್ತಕ “ಎ ಜರ್ನಿ ಫ್ರಮ್ ಮದ್ರಾಸ್ ಥ್ರೂ ದ ಕಂಟ್ರೀಸ್ ಆಫ್ ಮೈಸೂರ್, ಕೆನರಾ ಅಂಡ್ ಮಲಬಾರ್” ದಲ್ಲಿ ಗತಕಾಲದ ಶಿಡ್ಲಘಟ್ಟದ ಇತಿಹಾಸದ ಚಿತ್ರಣವನ್ನೇ ಅವರು ನೀಡಿದ್ದಾರೆ. ಈ ಪುಸ್ತಕವನ್ನು ಸರ್ಕಾರ ಇತ್ತೀಚೆಗೆ ಮುದ್ರಿಸಿದೆ.
ಭಾರತದ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ವೆಲ್ಲೆಸ್ಲಿಗೆ ವೈದ್ಯಾಧಿಕಾರಿಯಾಗಿದ್ದರು ಫ್ರಾನ್ಸಿಸ್ ಬುಕನನ್. ೧೭೯೯ರಲ್ಲಿ ಟಿಪ್ಪುಸುಲ್ತಾನನ ಮರಣದ ನಂತರ ಇವರಿಗೆ ಆಗಿನ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ವ್ಯಾಪ್ತಿಗೆ ಒಳಪಡುವ ದಕ್ಷಿಣ ಭಾರತವನ್ನು ಸರ್ವೇಕ್ಷಿಸುವ ಜವಾಬ್ದಾರಿಯನ್ನು ಇವರಿಗೆ ವಹಿಸಲಾಯಿತು.


ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಹಿಂದೆ ಬಳಸುತ್ತಿದ್ದ ಕೃಷಿ ಉಪಕರಣಗಳ ರೇಖಾ ಚಿತ್ರ.


ಸ್ಥಳವರ್ಣನೆ, ನಕ್ಷೆ, ಸ್ವರೂಪ, ಇತಿಹಾಸ, ಪ್ರಾಚೀನ ಅವಶೇಷ, ಸ್ಥಳೀಯರ ನಡವಳಿಕೆ, ಪದ್ಧತಿ, ಧರ್ಮ, ಆಹಾರ, ಉತ್ಪಾದನೆ, ಬೆಳೆ, ಕೃಷಿ, ತರಕಾರಿ, ಗೊಬ್ಬರ, ಪ್ರವಾಹ, ಸಾಕು ಪ್ರಾಣಿಗಳು, ಜಮೀನು, ಗಡಿರೇಖೆ, ಕಲೆ, ವಾಣಿಜ್ಯ ಮುಂತಾದವುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ದಾಖಲಿಸಿದ್ದಾರೆ. ಇವರು ತಯಾರಿಸಿದ ವರದಿಗಳು ಮತ್ತು ದಾಖಲಾತಿಗಳು ಈಗಲೂ ಲಂಡನ್ನಿನ ಲೈಬ್ರರಿಯಲ್ಲಿ ಸಂರಕ್ಷಿಸಲಾಗಿದೆ. ಈ ಸರ್ವೇಕ್ಷಣಾ ಕಾರ್ಯದಲ್ಲಿ ಇವರು ಶಿಡ್ಲಘಟ್ಟಕ್ಕೂ ಬಂದಿದ್ದರು. ತಮ್ಮ ಪುಸ್ತಕದಲ್ಲಿ ಶಿಡ್ಲಘಟ್ಟವನ್ನು ಸಿಲಗುಟ್ಟ(Silagutta) ಎಂದು ಕರೆದಿದ್ದಾರೆ. ಎರಡು ಶತಮಾನಗಳ ಹಿಂದಿನ ಶಿಡ್ಲಘಟ್ಟವನ್ನು ಬುಕನನ್ ಅತ್ಯಂತ ಆಪ್ತವಾಗಿ ಪರಿಚಯಿಸಿದ್ದಾರೆ.
‘ಜುಲೈ ೧೩ ರ ಬೆಳಿಗ್ಗೆ ಸಿಲಗುಟ್ಟಕ್ಕೆ ಬಂದೆ. ಮಳೆ ಹೆಚ್ಚಾಗಿ ಬಿದ್ದಿದ್ದರಿಂದ ಜನರು ರಾಗಿ ಬಿತ್ತುವುದರಲ್ಲಿ ಮಗ್ನರಾಗಿದ್ದರು. ಪಶ್ಚಿಮದಿಂದ ಬೀಸುವ ಗಾಳಿಯ ಆರ್ಭಟ ಒಂದೆಡೆಯಾದರೆ, ಆಗಾಗ ಬೀಳುವ ಮಳೆ ಇನ್ನೊಂದೆಡೆ. ಇಲ್ಲಿ ಕಲ್ಲು ಬಂಡೆಗಳಿಲ್ಲದೆ ಭೂಮಿ ಫಲವತ್ತಾಗಿದೆ. ಸಿಲಗುಟ್ಟ ಪಟ್ಟಣದಲ್ಲಿ ಕೇವಲ ೫೦೦ ಮನೆಗಳಿವೆ. ಅದರಲ್ಲಿ ಕೆಲವರು ನೇಕಾರರಿದ್ದಾರೆ. ಇದು ಅತ್ಯಂತ ಸುಂದರವಾದ ಪ್ರದೇಶವಾಗಿದೆ. ಇಲ್ಲಿ ಎರಡು ಸುಂದರವಾದ ಕೆರೆಗಳಿವೆ. ಕೆರೆಗಳ ಅಂಚಿನಲ್ಲಿ ಉದ್ಯಾನವನಗಳಿವೆ’ ಎಂದು ತಮ್ಮ ಪುಸ್ತಕದಲ್ಲಿ ವರ್ಣಿಸಿದ್ದಾರೆ.
‘ಕೃಷಿಯನ್ನೇ ನಂಬಿರುವ ಮೊರಸು ಅಥವಾ ಒಕ್ಕಲಿಗರು, ಮುಸಲ್ಮಾನರು, ಸಾದರು, ಬ್ರಾಹ್ಮಣರು, ಶೈವರು, ತೆಲುಗು ಮಾತನಾಡುವ ಬಣಜಿಗರು, ನಗರ್ತರು, ಸಾತಾನಾನರು ಇಲ್ಲಿ ವಾಸವಾಗಿದ್ದಾರೆ. ಸಿಲಗುಟ್ಟದಲ್ಲಿ ಒರಟಾದ ದಪ್ಪದ ಹತ್ತಿಯ ಕೋರಾ ಬಟ್ಟೆಗಳನ್ನು ನೇಕಾರರು ತಯಾರಿಸುತ್ತಾರೆ. ನೇಕಾರರು ಪದ್ಮಶಾಲಿ ಕುಲದವರು.
ಸಿಲಗುಟ್ಟದ ವ್ಯಾಪಾರಸ್ಥರು ಅಡಿಕೆ ಮತ್ತು ಕರಿ ಮೆಣಸನ್ನು ಕಟೀಲು ಮತ್ತು ನಗರದಿಂದ ತರುತ್ತಾರೆ. ಇಲ್ಲಿ ಸುತ್ತಮುತ್ತ ಬೆಳೆದ ತಂಬಾಕು ಮತ್ತು ನೇಯ್ದ ಬಟ್ಟೆಗಳನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಾರೆ. ಮೆಣಸು ಮತ್ತು ಅಡಿಕೆಯನ್ನು ವಾಲಾಜಪೇಟೆಯಲ್ಲಿ ಮಾರುತ್ತಾರೆ. ಸಮುದ್ರದ ಮಾರ್ಗದಿಂದ ಮದ್ರಾಸಿಗೆ ಬರುತ್ತಿದ್ದ ರೇಷ್ಮೆಯನ್ನೂ ತಂದು ಬೆಂಗಳೂರು, ಬಳ್ಳಾರಿ, ಆದೋನಿಗಳಲ್ಲಿ ಮಾರಾಟ ಮಾಡುತ್ತಾರೆ. ಅಲ್ಲಿ ಹತ್ತಿಯ ನೂಲನ್ನು ಹಾಗೂ ಕಂಬಳಿಗಳನ್ನು ಕೊಳ್ಳುತ್ತಾರೆ.
ಸಿಲಗುಟ್ಟ ತರಕಾರಿಗಳನ್ನು ಬೆಳೆಯುವುದರಲ್ಲಿ ಅತ್ಯಂತ ಹೆಸರುವಾಸಿ. ಗೋದಿ, ಅರಶಿನ, ಈರುಳ್ಳಿ, ಮೆಣಸಿನಕಾಯಿ, ಬೆಳ್ಳುಳ್ಳಿ, ಜೋಳ, ಕೊತ್ತಂಬರಿ ಬೆಳೆಯುವರು. ದನಗಳನ್ನು ಸಾಕಿದ್ದಾರೆ. ಇಲ್ಲಿ ಒಂದು ಎಕರೆಗೆ ಆರು ಕಂಡುಗ ರಾಗಿ ಬೆಳೆಯುತ್ತಾರೆ. ನೀರನ್ನು ಬಾವಿಯಿಂದ ತೆಗೆಯಲು ಇಲ್ಲಿ ಸಣ್ಣ ಏತವನ್ನೇ ಬಳಸುವರು. ನೀರು ೩೫ ಅಡಿ ಆಳಕ್ಕೆ ಹೋದರೂ ಇದರಿಂದ ನೀರೆತ್ತಬಹುದು’ ಎಂಬ ಚಿತ್ರಣವನ್ನು ನೀಡಿದ್ದಾರೆ.


ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಹಿಂದೆ ನೀರನ್ನು ಬಾವಿಯಿಂದ ಎತ್ತಲು ಬಳಸುತ್ತಿದ್ದ ಏತದ ರೇಖಾಚಿತ್ರ.



‘ಇತಿಹಾಸ ನಮ್ಮ ಪೂರ್ವಜರ ಸಾಮಾಜಿಕ, ಆರ್ಥಿಕ ಹಾಗೂ ಮಾನವೀಯ ಗುಣಗಳನ್ನು ಪರಿಚಯಿಸುತ್ತದೆ. ಕಾಲ ಬದಲಾದಂತೆ ಎದುರಾಗುವ ಸಂದಿಗ್ದಗಳು ಮತ್ತು ಸವಾಲುಗಳನ್ನು ಎದುರಿಸಲು ಹಾಗೂ ತಪ್ಪುಗಳನ್ನು ತಿದ್ದಿಕೊಳ್ಳಲು ಇತಿಹಾಸವನ್ನು ಅವಲೋಕಿಸುತ್ತಿರಬೇಕು. ಬುಕನನ್ ಬರಹದಿಂದ ನಮ್ಮ ಹಿಂದಿನವರ ಕೃಷಿ, ನೀರಿನ ಸದ್ಭಳಕೆ, ವ್ಯಾಪಾರದ ಚತುರತೆ, ಧಾರ್ಮಿಕ ಪದ್ಧತಿ ಎಲ್ಲ ತಿಳಿಯುತ್ತದೆ’ ಎನ್ನುತ್ತಾರೆ ಶಾಸನತಜ್ಞ ಡಾ.ಶೇಷಶಾಸ್ತ್ರಿ.

Wednesday, December 21, 2011

ಪುಸ್ತಕ ಬಿಡುಗಡೆ ಸಮಾರಂಭ

ಡಿಸೆಂಬರ್ ೧೮ ರ ಭಾನುವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನವಕರ್ನಾಟಕ ಪ್ರಕಾಶನ ಸಂಸ್ಥೆಯವರು ಡಾ.ಎನ್.ಎಸ್.ಲೀಲಾ ಅವರ ವರ್ಣ ಮಾಯಾಜಾಲ ಮತ್ತು Mystery, Magic and Music of Colours ಹಾಗೂ ನನ್ನ, ಚಿಟ್ಟೆಗಳು ಮತ್ತು Butterflies ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಅಧ್ಯಕ್ಷತೆಯನ್ನು ಪ್ರೊ.ಕೆ.ಜಗನ್ನಾಥರಾವ್ ವಹಿಸಿದ್ದರು. ಪ್ರೊ.ಎಂ.ಆರ್.ನಾಗರಾಜು ಮತ್ತು ಕುಮಾರಿ ಅಭಿಜ್ಞ ಕೃತಿಗಳ ಪರಿಚಯವನ್ನು ಮಾಡಿಕೊಟ್ಟರು.
ಫೋಟೋಗಳನ್ನು ಕ್ಲಿಕ್ಕಿಸಿದ್ದು ಗೆಳೆಯ ಅಜಿತ್ ಕೌಂಡಿನ್ಯ.





















Sunday, November 27, 2011

ಕೀಟ ಲೋಕದ "ಚಾಣಕ್ಯ"

ಬಹು ಮಹಡಿ ಕಟ್ಟಡ ಕಟ್ಟಲು ವಿನ್ಯಾಸಕಾರ, ಎಂಜಿನಿಯರ್, ಕೂಲಿಕಾರ್ಮಿಕರು ಸೇರಿದಂತೆ ಹಲವು ಮಂದಿ ಪ್ರಯಾಸ ಪಡಬೇಕು. ಕೆಲ ದಿನಗಳ ಮಟ್ಟಿಗೆ ಸಣ್ಣಪುಟ್ಟ ಕಷ್ಟಗಳನ್ನು ಎದುರಿಸಬೇಕು. ಆದರೆ ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರಿನಲ್ಲಿ ಕಣಜವೊಂದು ಯಾರ ಸಹಾಯವೂ ಇಲ್ಲದೆ ಏಳುಮಹಡಿಗಳ ಪುಟ್ಟ ಮನೆಯೊಂದನ್ನು ಚೊಕ್ಕವಾಗಿ ಕಟ್ಟಿಕೊಂಡಿದೆ.
ಆಕರ್ಷಕ ಗುಣಗಳನ್ನು ಹೊಂದಿರುವ ಕಣಜ ಅಷ್ಟೇ ಅಪಾಯಕಾರಿಯೂ ಹೌದು. ಚೂಪಾದ ಸೂಜಿಯಂತೆ ಚುಚ್ಚುವ ಮುಳ್ಳುಗಳನ್ನು ಹೊಂದಿರುವ ಕಣಜ ಶಿಸ್ತು, ಸಂಯಮ ಮತ್ತು ಬದ್ಧತೆಯನ್ನೂ ಮೈಗೂಡಿಸಿಕೊಂಡಿರುತ್ತದೆ.



ಪುಟ್ಟದಾದ ಗೂಡನ್ನು ಕಟ್ಟಿಕೊಳ್ಳಲು ಸೂಕ್ತ ಮಣ್ಣು ಆಯ್ದುಕೊಳ್ಳುವ ಕಣಜ ತನ್ನ ಜೊಲ್ಲಿನಿಂದ ಅದನ್ನು ಮೆದುವಾಗಿಸುತ್ತದೆ. ಬಳಿಕ ಉಂಡೆಯ ರೂಪದಲ್ಲಿ ಕಟ್ಟಿ ಹೊತ್ತು ತಂದು ನಿರ್ದಿಷ್ಟ ಸ್ಥಳವೊಂದರಲ್ಲಿ ಗೂಡು ಕಟ್ಟಿಕೊಳ್ಳುತ್ತದೆ. ಈ ಕಾರಣದಿಂದಲೇ ಇದನ್ನು ’ಕೀಟಲೋಕದ ಕುಂಬಾರ’ ಎಂದು ಸಹ ಕರೆಯುತ್ತಾರೆ.
ಎಲ್ಲರೂ ತಮ್ಮ ವಾಸಕ್ಕಾಗಿ ಮನೆಗಳನ್ನು ಕಟ್ಟಿಕೊಂಡರೆ, ಕಣಜವು ತನ್ನ ಸಂತಾದ ಸುರಕ್ಷತೆಗಾಗಿ ಗೂಡು ಕಟ್ಟುತ್ತದೆ. ಮಣ್ಣನ್ನು ತಂದು ಗೂಡು ನಿರ್ಮಿಸುವ ಇದು ಅದರೊಳಗೆ ಮೊಟ್ಟೆಯನ್ನು ಇಡುತ್ತದೆ. ಬಳಿಕ ಕಂಬಳಿಹುಳುಗಳನ್ನು ಬೇಟೆಯಾಡುತ್ತದೆ. ಕಂಬಳಿ ಹುಳುಗಳನ್ನು ಸಾಯಿಸದೇ ಅವುಗಳನ್ನು ಎಚ್ಚರ ತಪ್ಪುವ ಹಾಗೆ ಮಾಡಿ, ಎರಡು ಅಥವಾ ಮೂರು ಹುಳುಗಳನ್ನು ಗೂಡಿನೊಳಗೆ ಸೇರಿಸಿ, ಗೂಡನ್ನು ಮಣ್ಣಿನಿಂದ ಮುಚ್ಚುತ್ತದೆ.



ಕಣಜದ ಮರಿಗಳು ಮೊಟ್ಟೆಯಿಂದ ಹೊರ ಬರುವ ವೇಳೆಗೆ ಸಿದ್ಧ ಆಹಾರದ ರೂಪದಲ್ಲಿ ಕಂಬಳಿಹುಳುಗಳನ್ನು ನೀಡುತ್ತದೆ. ಇಂಥ ಪ್ರಕ್ರಿಯೆ ಕೀಟ ಜಗತ್ತಿನಲ್ಲಿ ಅಪರೂಪದ ಸಂಗತಿ. ಕಣಜಗಳು ನಿರ್ಮಿಸಿದ ಹಲವು ಪುಟ್ಟ ಪುಟ್ಟ ಗೂಡುಗಳನ್ನು ಕೊತ್ತನೂರು ಗ್ರಾಮದಲ್ಲಿ ಕಾಣಬಹುದು.
ಕಣಜದ ಮುಳ್ಳು ಜೇನಿಗಿಂತ ವಿಷಕಾರಿ. ಕಣಜ ಕಚ್ಚಿದ ಸ್ಥಳದಲ್ಲಿ ಉರಿ, ನೋವು ಹಾಗೂ ಚಳುಕು ಉಂಟಾಗುತ್ತದೆ. ತನ್ನ ಮರಿಗಾಗಿ ಕಣಜವು ಮುಳ್ಳಿನಿಂದ ಚುಚ್ಚಿ ಕಂಬಳಿಹುಳುಗಳನ್ನು ಎಚ್ಚರ ತಪ್ಪಿಸುತ್ತದೆಯೇ ಹೊರತು ಅವುಗಳನ್ನು ಸಾಯಿಸುವುದಿಲ್ಲ. ಸತ್ತದ್ದನ್ನು ಜೀವಂತಗೊಳಿಸುವ ಶಕ್ತಿ ಕಣಜಕ್ಕೆ ಇದೆ ಎಂದು ಭಾವಿಸಿ ಬಹುತೇಕ ಮಂದಿ ಅವುಗಳನ್ನು ಸಂಜೀವಿನಿ ಹುಳು ಎಂದು ಕರೆಯುತ್ತಾರೆ. ತೆಲುಗಿನಲ್ಲಿ ಇದನ್ನು ಕಂದಿರಿಗ ಎನ್ನುತ್ತಾರೆ. ಅತ್ಯಂತ ಸುಂದರವಾದ ಸಣ್ಣ ನಡುವಿನ ಈ ಕೀಟವನ್ನು ಜನಪದ ಮತ್ತು ಶಿಷ್ಟ ಸಾಹಿತ್ಯದಲ್ಲಿ ಹೆಣ್ಣಿನ ನಡುವನ್ನು ಬಣ್ಣಿಸುವಾಗ ಹೋಲಿಕೆಯಾಗಿ ಕೊಡುತ್ತಾರೆ. ಆದರೆ ಕಚ್ಚಿಸಿಕೊಂಡವರಿಗೆ ಮಾತ್ರ ಇದರ ಸೌಂದರ್ಯ ಹಿತವಲ್ಲ. ಇತ್ತೀಚೆಗೆ ಕಂದಿರಿಗ ಎಂಬ ತೆಲುಗು ಸಿನಿಮಾ ಕೂಡ ಬಂದಿರುವುದರಿಂದ ಈ ಕಣಜದ ಕೀರ್ತಿ ಎಷ್ಟು ದೊಡ್ಡದು ಎಂಬುದು ತಿಳಿಯುತ್ತದೆ!

Friday, September 16, 2011

ಹಸಿರ ಸೊಬಗಲ್ಲಿ ಮೇಲೂರು ಗ್ರಾಮ ಪಂಚಾಯಿತಿ


ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನಲ್ಲಿ ಹಸುರಿನ ಮರಗಿಡಗಳ ನಡುವೆ ಟೆರ್ರಾಕೋಟಾ ಕೆಂಪು ಬಣ್ಣದ ಆಕರ್ಷಕ ಗ್ರಾಮ ಪಂಚಾಯಿತಿಯ ಕಟ್ಟಡ.

ಗ್ರಾಮ ಪಂಚಾಯಿತಿ ಕಚೇರಿ ಎಂದ ಕೂಡಲೇ ತಟ್ಟನೇ ನೆನಪಾಗುವಂತದ್ದು ಕಿರಿದಾದ ಕಟ್ಟಡ ಮತ್ತು ಮೇಜುಕುರ್ಚಿಗಳು. ಕಚೇರಿ ಎದುರು ಸ್ವಲ್ಪ ಜಾಗ ಮತ್ತು ಆಗಾಗ್ಗೆ ಬಣಗುಡುವಂತಹ ವಾತಾವರಣ. ಆದರೆ ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿ ಕಚೇರಿಗೆ ಒಮ್ಮೆ ಭೇಟಿ ನೀಡಿದರೆ, ಗ್ರಾಮ ಪಂಚಾಯಿತಿ ಕುರಿತ ಹಳೆಯ ಕಲ್ಪನೆ ಮತ್ತು ಭಾವನೆಯೇ ಹೊರಟುಹೋಗುತ್ತದೆ. ಕಾರಣ, ಕಚೇರಿ ಸುತ್ತಮುತ್ತಲೂ ಹಸಿರು ಮತ್ತು ಮನಸ್ಸಿಗೆ ಮುದ ನೀಡುವಂತಹ ಹಿತವಾದ ವಾತಾವರಣ.
ಕಚೇರಿ ಸುತ್ತಲೂ ಗಿಡಮರಗಳನ್ನು ಬೆಳೆಸಲಾಗಿದೆ. ಒಪ್ಪವಾಗಿ ಕತ್ತರಿಸಿ ಬೇಲಿ ಗಿಡಗಳಿಗೆ ವಿಶಿಷ್ಟ ಆಕಾರ ನೀಡಲಾಗಿದೆ. ಮೆತ್ತನೆಯ ಹುಲ್ಲುಹಾಸು, ಅದರ ಬಳಿಯೇ ಕೆಂಪು ಬಣ್ಣದ ಕಟ್ಟಡ ಆಕರ್ಷಕವಾಗಿ ಕಾಣುತ್ತದೆ. ಹಸಿರು ವಾತಾವರಣದ ಜೊತೆಗೆ ಗ್ರಾಮ ಪಂಚಾಯಿತಿಯವರು ಸೌರವಿದ್ಯುತ್ ಸೌಲಭ್ಯ ಕೂಡ ಕಲ್ಪಿಸಿದ್ದಾರೆ.
ಗ್ರಾಮ ಪಂಚಾಯಿತಿ ಕಚೇರಿ, ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ, ಅಂಗನವಾಡಿ ಮತ್ತು ಗ್ರಂಥಾಲಯ ಒಂದೇ ಆವರಣದಲ್ಲಿ ಗಿಡಮರಗಳ ಮಧ್ಯದಲ್ಲಿ ಇರುವುದು ವಿಶೇಷ. ಪಂಚಾಯಿತಿ ಕಚೇರಿಯೊಳಗೆ ಗಣಕಯಂತ್ರ ಕೊಠಡಿ, ಅಧಿಕಾರಿಗಳು ಮತ್ತು ಅಧ್ಯಕ್ಷರ ಕೊಠಡಿ ಮತ್ತು ಸಭಾಂಗಣವು ವಿಶಾಲವಾಗಿದೆ.


ಗ್ರಾಮ ಪಂಚಾಯಿತಿ ಕಟ್ಟಡದ ಆವರಣದಲ್ಲಿರುವ ಹಸಿರು ಉದ್ಯಾನ ಮತ್ತು ಹೂಗಿಡಗಳು.

"ಎಚ್.ಎಂ.ಕೃಷ್ಣಮೂರ್ತಿ ಅವರು ಪ್ರಧಾನರಾಗಿದ್ದ ಕಾಲದಲ್ಲಿ ಡಿಸೆಂಬರ್ ೧೯೯೦ ರಲ್ಲಿ ಪಂಚಾಯಿತಿ ಕಟ್ಟಡದ ಶಂಕುಸ್ಥಾಪನೆಯನ್ನು ಮಾಡಿ ಕಟ್ಟಡವನ್ನು ಕಟ್ಟಲಾಗಿತ್ತು. ಹಿಂದೆ ಹತ್ತಿರದಲ್ಲಿ ಕುಂಟೆ ಇದುದರಿಂದಾಗಿ ಕಟ್ಟಡ ಬಿರುಕು ಬಿಟ್ಟು ಶಿಥಿಲವಾಗತೊಡಗಿತ್ತು. ೨೦೦೯ರಲ್ಲಿ ನಾನು ಗ್ರಾಮ ಪಂಚಾಯಿತಿ ಅಧ್ಯಕ್ಷನಾದ ಅವಧಿಯಲ್ಲಿ ನವೀಕರಣ ಮಾಡಲಾಯಿತು. ಗ್ರಾಮದ ರಾಜ್‌ಕುಮಾರ್ ಸಂಘದ ಸದಸ್ಯರು ಕಟ್ಟಡಕ್ಕೆ ಟೆರ್ರಾಕೋಟ ಬಣ್ಣವೇ ಇರಬೇಕು ಎಂದು ಕಟ್ಟಡದ ಅಂದಚಂದಕ್ಕಾಗಿ ಬಣ್ಣಗಳ ಆಯ್ಕೆಯನ್ನು ಮಾಡಿದರು. ಹಸಿರು ಪರಿಸರವನ್ನು ನಿರ್ಮಿಸಲು ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು ನೆರವಾದರು. ಪಂಚಾಯಿತಿಗೆ ನಿಶ್ಚಿತ ವರಮಾನವಿದ್ದರೆ ಮಾತ್ರ ಇವೆಲ್ಲವುಗಳ ನಿರ್ವಹಣೆ ಸಾಧ್ಯವೆಂದು ಐದು ಅಂಗಡಿಗಳನ್ನು ಕಟ್ಟಿದೆವು. ಈಗ ಅದರಿಂದ ತಿಂಗಳಿಗೆ ೭,೫೦೦ ರೂಪಾಯಿ ಬಾಡಿಗೆ ಬರುತ್ತಿದೆ. ರುದ್ರಭೂಮಿಯಲ್ಲಿ ಅರ್ಧ ಎಕರೆಯಷ್ಟು ಮುಳ್ಳು ಹಾಗೂ ಕಳ್ಳಿಗಿಡ ಆವರಿಸಿತ್ತು. ಅವನ್ನು ಸ್ವಚ್ಛಗೊಳಿಸಿ ೪೦ ಸಸಿಗಳನ್ನು ನೆಡಿಸಿದ್ದೆವು. ಈಗ ಅವು ಮರಗಳಾಗಿವೆ. ಅಲ್ಲಿ ಕೈಕಾಲು ತೊಳೆಯಲು ನೀರಿನ ಸಿಸ್ಟರ್ನ್ ಕೂಡ ಇರಿಸಿದ್ದೇವೆ. ನಮ್ಮ ಪಂಚಾಯಿತಿಯಲ್ಲಿ ಕಸ ವಿಲೇವಾರಿಗೆಂದೇ ಟಿಲ್ಲರನ್ನು ಹೊಂದಿದ್ದೇವೆ" ಎಂದು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ.ಮಂಜುನಾಥ್ ತಿಳಿಸಿದರು.



"ಹಿಂದಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ.ಉಮೇಶ್ ಅವರ ಅವಧಿಯಲ್ಲಿ ಪ್ಲಾಸ್ಟಿಕ್ ರಹಿತ ಪಂಚಾಯಿತಿಯನ್ನಾಗಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ನಿಷೇಧಿಸಿದೆವು. ವಿದ್ಯುತ್ ಉಳಿತಾಯ ಮಾಡಲು ಮೊದಲಿದ್ದ ಟ್ಯೂಬ್‌ಲೈಟುಗಳ ಬದಲಿಗೆ ಈಗ ಸಿಎಫ್ಎಲ್ ಬಲ್ಬ್‌ಗಳನ್ನು ಅಳವಡಿಸುತ್ತಿದ್ದೇವೆ. ಮೇಲೂರಿನ ಆಸ್ಪತ್ರೆ ಆವರಣದಲ್ಲಿರುವ ಸ್ಥಳದಲ್ಲಿ ಗಿಡಗಳನ್ನು ನೆಡಲು ಯೋಜನೆ ಹಮ್ಮಿಕೊಂಡಿದ್ದೇವೆ. ನಮ್ಮ ಗ್ರಾಮದಿಂದ ಚೌಡಸಂದ್ರದವರೆಗೂ ರಸ್ತೆಬದಿ ತಂಪಾದ ನೆರಳು ನೀಡುವ ಮರಗಳಿವೆ. ಅದೇ ಮಾದರಿಯಲ್ಲಿ ಗಂಗನಹಳ್ಳಿಗೆ ಹೋಗುವ ರಸ್ತೆಯ ಎರಡು ಬದಿಗಳಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನೂ ರೂಪಿಸಿದ್ದೇವೆ" ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಸ್.ಮಂಜುನಾಥ್ ಹೇಳಿದರು.


ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ಸಿಬ್ಬಂದಿ.

Friday, September 9, 2011

ಬಾತುಕೋಳಿಗಳಿಂದ ಬದುಕು


ಶಿಡ್ಲಘಟ್ಟದ ಅಮ್ಮನಕೆರೆಯಲ್ಲಿ ಬಾತು ಮರಿಗಳನ್ನು ಸಾಕುತ್ತಿರುವ ಸುಗಟೂರಿನ ಕೃಷ್ಣಪ್ಪ.

ಶಿಡ್ಲಘಟ್ಟದ ಹೊರವಲಯದಲ್ಲಿರುವ ಅಮ್ಮನಕೆರೆಗೆ ಈಚೆಗೆ ಬಿದ್ದ ಮಳೆಯಿಂದಾಗಿ ನೀರು ಬಂದಿದೆ. ಅದರೊಂದಿಗೆ ನೂರಾರು ಬಾತುಗಳು ಕೂಡ ಆಗಮಿಸಿದೆ. ಆದರೆ ಬಾತುಗಳು ಎಲ್ಲೋ ದೂರದ ಹಿಮಪ್ರದೇಶಗಳಿಂದ ಬಂದವಲ್ಲ. ಇಲ್ಲಿನವರೇ ಮಾಂಸಕ್ಕಾಗಿ ಸಾಕಲು ಬಿಟ್ಟಿರುವುದು.
“ಬಾ..ಬಾ..ಬಾಬಾ...ಬಾ...” ಎಂದು ಲಯಬದ್ದವಾಗಿ ಕೂಗಿದೊಡನೆಯೇ ಪ್ರಭಾತ್ ಪೇರಿಯಲ್ಲಿ ಪಾಲ್ಗೊಂಡ ಶಾಲಾ ಮಕ್ಕಳು ಮಾರ್ಚ್ ಫಾಸ್ಟ್ ಮಾಡುವ ಹಾಗೆ ಒಂದರ ಹಿಂದೊಂದು ತಮ್ಮ ಜಲಪಾದಗಳಲ್ಲಿ ಪುಟ್ಟಪುಟ್ಟ ಹೆಜ್ಜೆಯಿಡುತ್ತಾ ಮಾಲಿಕನ ಹತ್ತಿರ ಧಾವಿಸುತ್ತವೆ.
ಕೋಲಾರದ ಬಳಿಯ ಸುಗಟೂರಿನಿಂದ ಆಗಮಿಸಿರುವ ೨೫ ಜನರ ಕುಟುಂಬ ಕೆರೆಯ ಅಂಚಿನಲ್ಲಿ ಟೆಂಟ್ ಹಾಕಿಕೊಂಡು ಬೀಡು ಬಿಟ್ಟಿದೆ. ಇವರ ಕಾಯಕ ಬಾತುಗಳನ್ನು ಮೇಯಿಸುವುದು. ಕೆಲ ವರ್ತಕರು ಮರಿಗಳನ್ನು ಮತ್ತು ಅವಕ್ಕೆ ಆಹಾರವನ್ನು ಇವರಿಗೆ ಒದಗಿಸುತ್ತಾರೆ. ಅವುಗಳನ್ನು ಸಾಕಿ ಬೆಳೆಸಿ ವಾಪಸ್ ನೀಡಿದಾಗ ಕೆಜಿಗೆ ಇಂತಿಷ್ಟು ಎಂಬಂತೆ ಹಣ ನೀಡುತ್ತಾರೆ.



"ನಮ್ಮಲ್ಲಿ ಆರು ದಿನಗಳ ೨೫೦ ಬಾತು ಮರಿಗಳಿವೆ ಮತ್ತು ಒಂದು ತಿಂಗಳು ವಯಸ್ಸಿನ ೨೦೦ ಮರಿಗಳಿವೆ. ಇವಕ್ಕೆ ರಾಗಿ, ರಾಗಿ ಹಿಟ್ಟು, ರೇಷ್ಮೆ ಹುಳವನ್ನು ಆಹಾರವಾಗಿ ನೀಡುತ್ತೇವೆ. ನಮಗೆ ಮರಿಗಳನ್ನು ಒದಗಿಸಿರುವ ಮಾಲೀಕರು ಮೇವನ್ನೂ ಕೊಟ್ಟಿದ್ದಾರೆ. ಸುಮಾರು ಒಂದೂವರೆ ತಿಂಗಳು ಮೇಯಿಸಿದ ಮೇಲೆ ಇವು ಒಂದೊಂದೂ ಒಂದೂ ಮುಕ್ಕಾಲು ಕೇಜಿ ತೂಗುತ್ತವೆ. ಕೇಜಿಗೆ ಇದರ ಮಾಂಸ ರೂ.೯೦ ಕ್ಕೆ ಮಾರಾಟವಾಗುತ್ತದೆ. ನಮಗೆ ಸಾಕುವುದಕ್ಕೆ ಕೂಲಿ ಸಿಗುತ್ತದೆ" ಎಂದು ಸುಗಟೂರಿನ ಕೃಷ್ಣಪ್ಪ ಹೇಳುತ್ತಾರೆ.



"ಬಾತುಗಳೆಲ್ಲ ನೀರಲ್ಲಿ ಗುಂಪಾಗಿ ಈಜುವಾಗ ನೀರೆಲ್ಲ ಹಳದಿ ಬಣ್ಣವಾಗಿರುವಂತೆ, ಚಂದದ ಚಿತ್ತಾರದಂತೆ ಕೆರೆಯ ಕಟ್ಟೆಯ ಮೇಲಿಂದ ಕಾಣುತ್ತದೆ. ಮುದ್ದಾದ ಬಾತುಮರಿಗಳನ್ನು ನೋಡುವುದೇ ಚೆನ್ನ. ಇವುಗಳ ಆಯಸ್ಸು ಅತ್ಯಂತ ಕಡಿಮೆ ಎಂದು ತಿಳಿದು ಮನಸ್ಸಿಗೆ ಬೇಸರವುಂಟಾಗುತ್ತದೆ. ಕೆರೆಯ ಏರಿಯ ಮೇಲೆ ವಾಹನದಲ್ಲಿ ಹೋಗುವಾಗ ಇವುಗಳನ್ನು ನೋಡದೇ ನಾನು ಹೋಗುವುದೇ ಇಲ್ಲ" ಎನ್ನುತ್ತಾರೆ ಉಪನ್ಯಾಸಕ ಅಜಿತ್ ಕೌಂಡಿನ್ಯ.

Sunday, August 21, 2011

ಐರಿಸ್‌ಫ್ಲೆಕ್ಸ್‌ನಿಂದ ಪ್ರಾರಂಭವಾದ ಪಯಣ...


ಶಿಡ್ಲಘಟ್ಟ ತಾಲ್ಲೂಕಿನ ಮೊಟ್ಟ ಮೊದಲ ಫೋಟೋ ಸ್ಟುಡಿಯೋ.


‘ಐರಿಸ್‌ಫ್ಲೆಕ್ಸ್’ ಮತ್ತು ‘ಹ್ಯಾಕೋಫ್ಲೆಕ್ಸ್’ ಎಂಬ ಹೆಸರುಗಳನ್ನು ಕೇಳಿದರೆ ಈಗಿನ ಛಾಯಾಗ್ರಾಹಕರು ವಿಚಿತ್ರವಾಗಿ ನೋಡುತ್ತಾರೆ. ಆದರೆ ಅರವತ್ತರ ದಶಕದ ಪ್ರಾರಂಭದಲ್ಲಿ ಶಿಡ್ಲಘಟ್ಟದಲ್ಲಿ ಜನರ ಮಂದಹಾಸಕ್ಕೆ ಬೆಳಕು ಚೆಲ್ಲಿ ನೆಗೆಟೀವ್‌ಗಳಲ್ಲಿ ಸೆರೆಹಿಡಿದು ಕಪ್ಪುಬಿಳುಪು ಚಿತ್ರಗಳನ್ನಾಗಿಸಿದ್ದ ಕ್ಯಾಮೆರಾಗಳಿವು.
ತಾಲ್ಲೂಕಿನ ಮುತ್ತೂರಿನ ವಿ.ವೆಂಕೋಬರಾವ್ ಶಿಡ್ಲಘಟ್ಟದ ಅಶೋಕ ರಸ್ತೆಯಲ್ಲಿ ೧೯೬೪ ರ ಸೆಪ್ಟೆಂಬರ್ ತಿಂಗಳಿನಲ್ಲಿ ಡೀಲಕ್ಸ್ ಫೋಟೋ ಸ್ಟುಡಿಯೋ ಪ್ರಾರಂಭಿಸಿದಾಗ ಬಳಸಿದ್ದ ಕ್ಯಾಮೆರಾಗಳು ‘ಐರಿಸ್‌ಫ್ಲೆಕ್ಸ್’ ಮತ್ತು ‘ಹ್ಯಾಕೋಫ್ಲೆಕ್ಸ್’. ಈ ಕ್ಯಾಮೆರಾಗಳ ಬೆಲೆ ಆಗ ರೂ.೧,೫೦೦. ಇವುಗಳ ನಂತರ ಯಾಷಿಕಾ ಡಿ ಎಂಬ ರೂ.೨,೦೦೦ ಬೆಲೆಯ ಕ್ಯಾಮೆರಾ ಹಾಗೂ ಕ್ಯಾನನ್ ಕ್ಯೂ ಎಲ್೧೭ ಎಂಬ ರೂ.೩,೦೦೦ ಬೆಲೆಯ ಕ್ಯಾಮೆರಾಗಳನ್ನು ಬಳಸುತ್ತಿದ್ದರು.
ಆಗ ಪೋಟೋ ತೆಗೆಯುವವರು ವಿರಳವಾಗಿದ್ದ ತಾಲ್ಲೂಕಿನಲ್ಲಿ ಕ್ಯಾಮೆರಾ, ಫಿಲಂ ಸಂಸ್ಕರಣೆ, ಪ್ರಿಂಟ್ ಹಾಕುವುದನ್ನು ಕಲಿತ ವೆಂಕೋಬರಾವ್ ಮೊಟ್ಟಮೊದಲ ಸ್ಟುಡಿಯೋ ಸ್ಥಾಪಿಸಿದರು.



ಶಿಡ್ಲಘಟ್ಟದಲ್ಲಿ ಡೀಲಕ್ಸ್ ಸ್ಟುಡಿಯೋ ಪ್ರಾರಂಭಿಸಿದ ವಿ.ವೆಂಕೋಬರಾವ್.

‘ನನಗೆ ಫೋಟೋ ಸಂಸ್ಕರಣೆಯನ್ನು ಕಲಿಸಿಕೊಟ್ಟವರು ಆಗ ಪುರಸಭೆಯಲ್ಲಿ ಬಿಲ್ ಕಲೆಕ್ಟರ್ ಆಗಿದ್ದ ನಿರಂಜನ್ ಸಿಂಗ್. ೧೬ ರೂಗಳ ಬಾಡಿಗೆ ನೀಡಿ ೧೨೦ ರೂಗಳ ಬಂಡವಾಳದೊಂದಿಗೆ ೧೯೬೪ರ ಸೆಪ್ಟೆಂಬರ್ ೧೨ರಂದು ಸ್ಟುಡಿಯೋ ಪ್ರಾರಂಭಿಸಿದೆ. ಆಗ ದಿನವೆಲ್ಲಾ ಕುಳಿತರೂ ೫ ರೂ ವ್ಯಾಪಾರವಾಗುತ್ತಿರಲಿಲ್ಲ. ಕಪ್ಪುಬಿಳುಪಿನ ೩ ಪಾಸ್ಪೋರ್ಟ್ ಚಿತ್ರಗಳಿಗೆ ೩ ರೂಗಳು ಪಡೆಯುತ್ತಿದ್ದೆ. ಗ್ರೂಪ್ ಫೋಟೋ ತೆಗೆಯಲೆಂದೇ ೫,೦೦೦ ರೂಗಳ ಫೀಲ್ಡ್ ಕ್ಯಾಮೆರಾ ತಂದಿದ್ದೆ. ದಕ್ಷಿಣ ಭಾರತೀಯ ಛಾಯಾಗ್ರಾಹಕರ ಸಂಘದ ಸದಸ್ಯತ್ವವನ್ನೂ ಪಡೆದಿದ್ದೆ. ಅದರ ಚುನಾವಣೆ ಮತ್ತು ಸಭೆಗೆ ಮದ್ರಾಸಿಗೆ ಹೋಗಿಬರುತ್ತಿದ್ದೆ’ ಎಂದು ೭೪ ವರ್ಷದ ವಿ.ವೆಂಕೋಬರಾವ್ ತಮ್ಮ ಫೋಟೋಗ್ರಫಿ ಪ್ರಾರಂಭದ ದಿನಗಳ ಬಗ್ಗೆ ತಿಳಿಸಿದರು.


ವೆಂಕೋಬರಾವ್ ತಮ್ಮ ಹಿಂದಿನ ದಿನಗಳ ಚಿತ್ರಗಳನ್ನು ಪ್ರದರ್ಶಿಸುತ್ತಿರುವುದು.

‘೧೯೮೯ರಲ್ಲಿ ಸ್ಟುಡಿಯೋದ ಬೆಳ್ಳಿಹಬ್ಬವನ್ನು ಆಚರಿಸಿದ್ದೆ. ಆಗ ತಹಶೀಲ್ದಾರರಾಗಿದ್ದ ಟಿ.ಎನ್.ರೆಡ್ಡಿ, ಬೆಂಗಳೂರಿನ ಎಂಪೈರ್ ಸ್ಟುಡಿಯೋದ ಗುರ್ರಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನನ್ನ ಛಾಯಾಚಿತ್ರದ ಗುರುಗಳಾದ ನಿರಂಜನ್ ಸಿಂಗ್ ಮತ್ತು ನನ್ನ ಸಹಾಯಕರಾಗಿ ದುಡಿದಿದ್ದ ಪಿ.ವಿ.ರಾಜೇಂದ್ರಪ್ರಸಾದ್ ಅವರನ್ನು ಸನ್ಮಾನಿಸಲಾಗಿತ್ತು. ಆಗ ತಾಲ್ಲೂಕಿನಲ್ಲೇ ಮೊಟ್ಟ ಮೊದಲಬಾರಿಗೆ ೭೫ ಸಾವಿರ ರೂಗಳ ವೀಡಿಯೋ ಕ್ಯಾಮೆರಾ ತಂದಿದ್ದೆ. ಸುಮಾರು ೪೩ ವರ್ಷಗಳ ಕಾಲ ನಡೆಸಿದ್ದ ಸ್ಟುಡಿಯೋ ಇದ್ದ ಕಟ್ಟಡ ರಸ್ತೆ ಅಗಲೀಕರಣದಿಂದ ಕೆಡವಲಾಯಿತು. ಮಕ್ಕಳು ಕೂಡ ತಮ್ಮದೇ ಸ್ಟುಡಿಯೋಗಳನ್ನು ಮಾಡಿಕೊಂಡಿದ್ದರಿಂದ ಈಗ ಮನೆಯಲ್ಲಿಯೇ ಇರುವಂತಾಗಿದೆ’ ಎನ್ನುತ್ತಾರೆ ವೆಂಕೋಬರಾವ್.
‘ಈಗ ನಮ್ಮ ತಾಲ್ಲೂಕಿನಲ್ಲಿ ೪೫ ಸ್ಟುಡಿಯೋಗಳಿವೆ. ಡಿಜಿಟಲ್ ಕಾಲ ಬಂದ ಮೇಲೆ ಅನೇಕರು ಛಾಯಾಗ್ರಾಹಕರಾಗಿದ್ದಾರೆ. ಈಗ ಫೋಟೋ ತೆಗೆಯುವುದು, ಪ್ರಿಂಟ್ ಹಾಕಿಸುವುದು ಸುಲಭವಾಗಿದೆ. ಕಪ್ಪು ಬಿಳುಪು ಚಿತ್ರವನ್ನು ಕ್ಯಾಬಿನೆಟ್ ಆಕಾರದ ಚಿತ್ರವನ್ನು ಕಟ್ಟು ಹಾಕಿಸಿ ಮನೆಗೆ ಬಂದವರೆಲ್ಲರಿಗೂ ಕಾಣುವ ಸ್ಥಳದಲ್ಲಿ ನೇತು ಹಾಕಿ ಹೆಮ್ಮೆ ಪಟ್ಟುಕೊಳ್ಳುತ್ತಿದ್ದ ಕಾಲದಲ್ಲಿ ಮೊಟ್ಟ ಮೊದಲು ತಾಲ್ಲೂಕಿನಲ್ಲಿ ಸ್ಟುಡಿಯೋ ಪ್ರಾರಂಭಿಸಿದ್ದ ವೆಂಕೋಬರಾವ್ ಅವರು ಈ ವೃತ್ತಿಬಾಂಧವರಿಗೆಲ್ಲಾ ಮಾದರಿಯಾಗಿದ್ದಾರೆ’ ಎಂದು ತಾಲ್ಲೂಕು ಛಾಯಾಗ್ರಾಹಕ ಸಂಘದ ಅಧ್ಯಕ್ಷ ರೂಪಸಿ ರಮೇಶ್ ಹೇಳುತ್ತಾರೆ.

Saturday, July 30, 2011

"ಕ್ಲಿಕ್" ಪುಸ್ತಕ ಬಿಡುಗಡೆಯ ಚಿತ್ರಗಳು

ಸಹೃದಯವಂತ ಸ್ನೇಹಿತರೆ,
"ಕ್ಲಿಕ್" ಪುಸ್ತಕದ ಬಿಡುಗಡೆಗೆ ಕಾರ್ಯಕ್ರಮದ ಯಶಸ್ಸಿಗೆ ಹಾರೈಸಿದ ನಿಮಗೆಲ್ಲರಿಗೂ ಅನಂತ ಧನ್ಯವಾದಗಳು. ಸಮಾರಂಭದ ಚಿತ್ರಗಳನ್ನು ಗೆಳೆಯರಾದ ಶಿವು.ಕೆ., ಕರಗಪ್ಪ, ಗೋಪಾಲ್ ಮತ್ತು ಪ್ರಕಾಶ್ ಹೆಗಡೆ ತೆಗೆದಿದ್ದಾರೆ. ಆ ಚಿತ್ರಗಳಲ್ಲಿ ಕೆಲವು ಇಲ್ಲಿವೆ.ಅವರಿಗೂ ಧನ್ಯವಾದಗಳು. ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ಇರಲಿ.
-ಮಲ್ಲಿಕಾರ್ಜುನ.ಡಿ.ಜಿ.ಶಿಡ್ಲಘಟ್ಟ