Monday, January 26, 2009

ದ್ವಾರಪಾಲಕನ ಹೊಟ್ಟೆಯಲ್ಲಿ ಬಸವ!

ಛಂದ ಪುಸ್ತಕ ಪ್ರಕಟಿಸಿರುವ ಡಾ.ಕ್.ಎನ್.ಗಣೇಶಯ್ಯ ಅವರ ಕಥಾಸಂಕಲನ "ಶಾಲಭಂಜಿಕೆ" ಯಲ್ಲಿ ಒಂದು ಕತೆಯಿದೆ. ಅದು "ಎದೆಯಾಳದಿಂದೆದ್ದ ಗೋವು".
ಸೋಮನಾಥಪುರದ ಚನ್ನಕೇಶವ ದೇವಾಲಯದಲ್ಲಿನ ಉತ್ತರಕ್ಕಿರುವ ಗರ್ಭಗುಡಿಯ ಒಳಗಿನ ಕೃಷ್ಣನ ಮೂರ್ತಿಯ ಹೊಟ್ಟೆಯಲ್ಲಿ ಬಸವನ ಮುಖ ಎದ್ದು ಕಾಣುತ್ತದೆ. ವಿಕಾಸವಾದದ ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗ ಈ ಶಿಲ್ಪವನ್ನು ಉದಾಹರಿಸುತ್ತಿದ್ದ ಲೇಖಕರಿಗೆ ಅದನ್ನು ಕೆತ್ತಿದ ಶಿಲ್ಪಿಯ ಮೂಲ ತಿಳಿದುಬರುತ್ತದೆ. ಗೊಲ್ಲರವನಾದ ಶಿಲ್ಪಿ ತನ್ನ ಮೂಲವಂಶದ ಕಸುಬಿನ ಗುರುತಾದ ಗೋವನ್ನು ಕೃಷ್ಣನ ಎದೆಯಲ್ಲಿ ಅಡಗಿಸಿಟ್ಟಿರುವನು. 'ಆ ಶಿಲ್ಪ ನೋಡಿ ದೇವಾಲಯದ ಯಾವುದೇ ಗಂಡಸಿನ ಮೂರ್ತಿ ಮುಂದೆ ನಿಂತರೂ ಅವುಗಳ ಹೊಟ್ಟೆ ಮತ್ತು ಎದೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಬಸವನ ಮುಖ ಕಾಣಲು ಪ್ರಾರಂಭವಾಗುತ್ತದೆ' ಎಂದು ಹೇಳಿ ಲೇಖಕರು ನಮಗೆ ಯೋಚಿಸಲು ಹಚ್ಚುತ್ತಾರೆ.
ಗಣೇಶಯ್ಯನವರ ಕಥೆ ಓದಿ ನನ್ನ ಸಂಗ್ರಹದಲ್ಲಿದ್ದ ಹಳೆಯ ಚಿತ್ರವೊಂದನ್ನು ತೆಗೆದೆ. ಅದು ತಲಕಾಡಿನ ದೇವಾಲಯದ ದ್ವಾರಪಾಲಕನ ಚಿತ್ರ. ಅದರಲ್ಲೂ ಬಸವ ಹೊಟ್ಟೆಯಲ್ಲಿ ಪಡಿಮೂಡಿದ್ದಾನೆ. ಅದರ ಬಗ್ಗೆ ಯಾರಿಗಾದರೂ ತಿಳಿದರೆ, ತಿಳಿದಿದ್ದರೆ ದಯವಿಟ್ಟು ತಿಳಿಸಿ.

Monday, January 19, 2009

ಕೆಮ್ಮಣ್ಣುಗುಂಡಿಯ ಉಸಿರು - ಹಸಿರು ಶೋಲಾ

ಚಿಕ್ಕಮಗಳೂರು ಜಿಲ್ಲೆಯ ಕೆಮ್ಮಣ್ಣುಗುಂಡಿ ನಮ್ಮ ಪ್ರಮುಖ ಗಿರಿಧಾಮಗಳಲ್ಲೊಂದು. ರಮ್ಯನೋಟಗಳ ದರ್ಶನ ಮಾಡಿಸುವ ಗಿರಿಶಿಖರಗಳು, ನಿತ್ಯಹರಿದ್ವರ್ಣ ಶೋಲಾ ಅರಣ್ಯಗಳು ಮತ್ತು ಜಲಪಾತಗಳು ಇಲ್ಲಿನ ಪ್ರಮುಖ ಆಕರ್ಷಣೆ.
ಶೋಲಾಕಾಡುಗಳು ಹುಲ್ಲುಗಾವಲಿನಿಂದ ಸುತ್ತುವರಿದ ದ್ವೀಪಗಳು. ತಮ್ಮದೇ ಆದ ಜೀವವೈವಿಧ್ಯದಿಂದ ತುಂಬಿರುವ ಶೋಲಾ ಕಾಡುಗಳು ಪಶ್ಚಿಮ ಘಟ್ಟಗಳ ವಿಶಿಷ್ಟ ಜೀವಾಶ್ರಯ.
ಕೆಮ್ಮಣ್ಣುಗುಂಡಿಯಲ್ಲಿರುವ "ಶಂಕರ ಶೋಲಾ" ಅತ್ಯುತ್ತಮ ಶೋಲಾ ಕಾಡೆಂಬ ಕೀರ್ತಿಗೆ ಪಾತ್ರವಾಗಿದೆ. ಸದಾ ಹಸಿರಿರುವ ಈ ಕಾಡಿನಲ್ಲಿ ಗಗನಚುಂಬಿ ವೃಕ್ಷಗಳು ಅಷ್ಟಾಗಿರುವುದಿಲ್ಲ. ಚಿಕ್ಕಚಿಕ್ಕ ಮರಗಳು ಕೊಂಬೆಗಳನ್ನು ಚಾಚಿ ಕೊಡೆಯಂತೆ ಹರಡಿದ ಮೇಲ್ಚಾವಣಿ ಈ ಕಾಡಿನ ಮುಖ್ಯ ಲಕ್ಷಣ.
ಮಾನವನ ದುರಾಸೆಯ ಫಲವಾಗಿ ಇತರೆ ಕಾಡುಗಳಂತೆ ಹಿಂದೊಮ್ಮೆ ದಟ್ಟವಾಗಿ ಹರಡಿದ್ದ ಶೋಲಾ ಕಾಡುಗಳೂ ಕ್ಷೀಣಿಸತೊಡಗಿವೆ. ಗಣಿಗಾರಿಕೆಯಿಂದ ಸಮೃದ್ಢ ಶೋಲಾ ಅರಣ್ಯಕ್ಕೆ ಈಗಾಗಲೇ ಸಾಕಷ್ಟು ಪೆಟ್ಟುಬಿದ್ದಿದೆ. ಅಗ್ನಿಯ ಕೆನ್ನಾಲಿಗೆಗೆ ಪ್ರತಿವರ್ಷ ಶೋಲಾ ಅರಣ್ಯ ಬಲಿಯಾಗುತ್ತಿದೆ.
ಶೋಲಾ ಅರಣ್ಯದ ನಾಶದಿಂದ ಹವಾಮಾನದ ಮೇಲೆ ಗಂಭೀರ ಪರಿಣಾಮ ಬೀರುವುದರ ಜೊತೆಗೆ ನೀರಿನ ಆಸರೆಗೆ ತೀವ್ರ ಪೆಟ್ಟುಬೀಳುತ್ತದೆ.
ವೈವಿಧ್ಯಮಯ ಜೀವರಾಶಿಗೆ ನೆಲೆಯಾದ ನಿಸರ್ಗದ ವಿಶಿಷ್ಟ ಕೊಡುಗೆಗಳಲ್ಲಿ ಒಂದಾದ ಶೋಲಾ ಅರಣ್ಯದ ರಕ್ಷಣೆ ಮಾಡಬೇಕಾದುದು ಅತ್ಯಗತ್ಯ.
ಹಸಿರನ್ನು ಉಳಿಸುವತ್ತ ನಮ್ಮೆಲ್ಲರ ಹೆಜ್ಜೆ ಸಾಗಲಿ...

Tuesday, January 13, 2009

ಮುತ್ತಿನ ಮಣಿಗಳು

ಮುತ್ತು ಅಷ್ಟು ಸುಲಭದ ತುತ್ತಲ್ಲ! ಇದರ ಸೃಷ್ಟಿಯಾಗುವುದೇ ಬಲು ವಿಶಿಷ್ಟವಾಗಿ. ನೀರಿನಲ್ಲಿರುವ ಕಪ್ಪೆಚಿಪ್ಪಿನೊಳಗೆ ಕೆಲವೊಮ್ಮೆ ಯಾವುದಾದರೂ ಪರೋಪಜೀವಿ ಅಥವಾ ಇನ್ನೇನಾದರೂ ಮರಳಿನಂಥ ಹೊರ ಪದಾರ್ಥ ಸೇರಿಕೊಂಡುಬಿಡುತ್ತದೆ. ಅದರ ಮೇಲೆ ಆ ಚಿಪ್ಪಿನ ಜೀವಿ ಸ್ರವಿಸುವ ಸುಣ್ಣವೇ ಕಾಲಕ್ರಮದಲ್ಲಿ ಮುತ್ತಾಗುತ್ತದೆ.
ಚಳಿಗಾಲದಲ್ಲಿ ಮುತ್ತಿನ ಹಾರ ಸೃಷ್ಟಿಯಾಗುವುದು ಇನ್ನೊಂದು ವೈಶಿಷ್ಟ್ಯ. ಆದರೆ ಇದು ನೀರ ಹನಿಯ ಮುತ್ತು. ಜೇಡರ ಬಲೆ ಇಬ್ಬನಿಯಲ್ಲಿ ಮಿಂದು ಮುತ್ತಿನ ಪದಕವಾಗುತ್ತದೆ.
ಒಣಹವೆಯ ರಾತ್ರಿಗಳಲ್ಲಿ ಮಣ್ಣು, ಬಂಡೆಗಳು ತಂಪುಗೊಳ್ಳಲಾರಂಭಿಸಿದಾಗ ನೆಲದ ಅತಿ ಸಮೀಪದ ಗಾಳಿಯೂ ತಂಪಾಗುತ್ತದೆ. ಅದರಲ್ಲಿನ ನೀರಾವಿ ತಣ್ಣನೆಯ ನೆಲ ಬಂಡೆಗಳ ಸಂಪರ್ಕ ಹೊಂದಿ ಸಾಂದ್ರೀಕರಿಸಿ ಸಸ್ಯಗಳ, ಜೇಡರಬಲೆಯ ಮೇಲೆ ಸೂಕ್ಷ್ಮ ಹನಿಗಳಂತೆ ಕೂರುತ್ತದೆ. ನೀರಾವಿ ಹೀಗೆ ಹನಿಗಳಾಗುವ ಉಷ್ಣತೆಗೆ ತುಷಾರಬಿಂದು(ಡಿವ್ ಪಾಯಿಂಟ್) ಎಂದು ಹೆಸರು.
ಮುತ್ತಿನ ಸೇತುವೆ...

Wednesday, January 7, 2009

ಮಂಜಿನ ಮುಂಜಾವಿನ ಅನುಭವ

ಚುಮುಚುಮು ಚಳಿಯ ಮುಂಜಾವಿನಲ್ಲಿ ವಾಕಿಂಗು ಹೊರಟಾಗ ದಟ್ಟ ಮಂಜು ಕವಿದಿತ್ತು. ವಾಹನಗಳು ದೀಪ ಹಾಕಿಕೊಂಡು ಹೋಗಬೇಕಾದ ಪರಿಸ್ಥಿತಿ. ಶಾಲು, ಸ್ವೆಟರ್, ಟೊಪ್ಪಿಗಳಿಂದ ಬಂಧಿತರಾಗದಿದ್ದರೆ ಚಳಿ ತರುವ ನಡುಕ ನಿಲ್ಲುವುದಿಲ್ಲ!

ದೂರದಲ್ಲಿ ಹೋಗುತ್ತಿರುವ ಎತ್ತಿನಗಾಡಿ ಮಂಜನ್ನು ಸಾಗಿಸುತ್ತಿರುವಂತೆ ಭಾಸವಾಗುತ್ತದೆ.

ಬಿಳಲುಗಳನ್ನು ಚಾಚಿನಿಂತ ಆಲದಮರ ಮಂಜಿನ ಮರದಂತೆ ಕಾಣುವುದು ಒಂದು ದೃಶ್ಯಕಾವ್ಯ.

ಈ ಮಂಜನ್ನು ಭೂಮಟ್ಟದ ಮೋಡವೆನ್ನಬಹುದು. ಈ ಚಳಿಗಾಲದ ರಾತ್ರಿಗಳಲ್ಲಿ ಭೂಮಿಯ ಉಷ್ಣತೆಯನ್ನು ರಕ್ಷಿಸುವ ಮೋಡದ ಮುಸುಕು ಇರುವುದಿಲ್ಲ. ಆಗ ಭೂಮಿಯಿಂದ ಹೊರಬಿದ್ದ ಶಾಖ ವಾತಾವರಣದಲ್ಲಿ ಸೇರಿಹೋಗುತ್ತದೆ. ಭೂಮಿ ಬೇಗ ಬೇಗ ತಂಪುಗೊಂಡು ತನಗೆ ಹತ್ತಿರದ ಗಾಳಿಯನ್ನೂ ತಂಪುಮಾಡುತ್ತದೆ. ಮಂಜುಂಟಾಗುವುದು ಹೀಗೆ.

ಮಂಜಿನ ಮುಂಜಾವನ್ನು ಅನುಭವಿಸುತ್ತ ನಡೆಯುವುದೆಂದರೆ ಚಳಿಗೆ ಸೆಡ್ಡು ಹೊಡೆದಂತೆ ಅನ್ನಿಸುತ್ತದೆ. ಚಳಿಗೆ ಮುದುಡದೆ ಮಂಜಿನೊಂದಿಗೆ ಮೌನವಾಗಿ ಮಾತನಾಡುತ್ತ ಅದನ್ನು ಅನುಭವಿಸದಿದ್ದರೆ ಚೈತ್ರ ಮುನಿದೀತೇನೊ?