Sunday, September 28, 2008

ಗೀಜಗ

"ಅಣ್ಣ ನಮ್ ಹಳ್ಯಾಗೆ ಬಾವಿ ಒಳ್ಗೆ ಹಕ್ಕಿ ಗೂಡು ಮಾಡೈತೆ ಫೋಟೋ ತೆಗೀತೀಯಾ?" ಎಂದು ರಮೇಶ ಕರೆದ. ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಅವನ ಹಳ್ಳಿ. ಅಲ್ಲಿ ಹೋಗಿ ನೋಡಿದರೆ ಹಳೆ ಬಾವಿಯ ಸುತ್ತ ಜಿಗ್ಗು, ಮುಳ್ಳುಕಂಟಿಗಳು, ಲಾಂಟಾನಾ ಗಿಡಗಳು ತುಂಬಿಕೊಂಡು ಬಾವಿಯೇ ಕಾಣದಂತಿದೆ. ಆ ಬಾವಿಯ ಪಕ್ಕ ಬೆಳೆದ ಗಿಡಕ್ಕೆ ಗೀಜಗ ಹಕ್ಕಿಗಳು ಗೂಡುಗಳನ್ನು ನೇಯ್ದಿವೆ. ಅವು ಬಾವಿಯೊಳಕ್ಕೆ ನೇತಾಡುತ್ತಿದ್ದವು. ನಾವಿಬ್ಬರೂ ಸೇರಿ ಸ್ವಲ್ಪ ಲಾಂಟಾನಾ ಗಿಡವನ್ನು ಕತ್ತರಿಸಿ ಜಾಗ ಮಾಡಿ ನನ್ನ ಮರೆಯನ್ನಿಟ್ಟು, ಬಟ್ಟೆ ಹೊದ್ದಿಸಿದೆವು. ಮರೆಯೊಳಗೆ ಕೂತು ಅವನನ್ನು ಎರಡು ಮೂರು ಗಂಟೆ ಬಿಟ್ಟು ಬರಲು ಹೇಳಿಕಳಿಸಿದೆ. ಕ್ಯಾಮೆರಾವನ್ನು ಬಟ್ಟೆಯಲ್ಲಿದ್ದ ರಂಧ್ರದಲ್ಲಿ ತೂರಿಸಿ ನೋಡುತ್ತಾ ಕುಳಿತೆ.
ಗೀಜಗ ಹಕ್ಕಿಗಳ ವೈಶಿಷ್ಟ್ಯವೇನೆಂದರೆ, ಗಂಡು ಹಕ್ಕಿ ಗೂಡನ್ನು ಅರ್ಧ ನೇಯ್ದು ಹೆಣ್ಣಿಗೆ ತೋರಿಸುತ್ತದೆ. ಅದು ಹೆಣ್ಣಿಗೆ ಇಷ್ಟವಾದರೆ ಅವೆರಡೂ ಜೋಡಿಯಾಗುತ್ತವೆ, ಗೂಡನ್ನು ಪೂರ್ತಿ ಮಾಡಿ ಸಂಸಾರ ಸಾಗಿಸುತ್ತವೆ. ಅಕಸ್ಮಾತ್ ಇಷ್ಟವಾಗಲಿಲ್ಲವೋ ಗಂಡು ಮತ್ತೊಂದು ಗೂಡು ನೇಯಲು ಶುರುಮಾಡುತ್ತದೆ. ನಮಗೆ ಹತ್ತು ಬೆರಳುಗಳಿದ್ದರೂ ನೇಯಲು ಅಸಾಧ್ಯವಾದಂತಹ ಗೂಡನ್ನು ಪುಟ್ಟ ಇಕ್ಕಳದಂತಹ ಕೊಕ್ಕಿನಿಂದಲೇ ಈ ಪುಟ್ಟ ಹಕ್ಕಿ ನೇಯುವುದನ್ನು ನೋಡಿದರೆ ಇದರ ಸಾಮರ್ಥ್ಯಕ್ಕೆ ತಲೆದೂಗಲೇಬೇಕು. ಅದಕ್ಕೇ ಇದನ್ನು ನೇಕಾರ ಹಕ್ಕಿ ಎಂದೂ ಕರೆಯುತ್ತಾರೆ.
ಹಕ್ಕಿಯು ನಾರನ್ನು ತಂದು ತಂದು ತನ್ನ ಕೊಕ್ಕಿನಿಂದ ಸುಲಲಿತವಾಗಿ ಗೂಡು ಕಟ್ಟುವುದನ್ನು ನೋಡುತ್ತಾ ಕ್ಲಿಕ್ಕಿಸತೊಡಗಿದೆ. ನನ್ನ ಬಳಿ ಇದ್ದ ರೋಲ್ ಪೂರಾ ಖಾಲಿಯಾಯ್ತು. ಇನ್ನು ಅಲ್ಲಿದ್ದು ಅವಕ್ಕೆ ತೊಂದರೆ ಕೊಡುವುದು ಬೇಡವೆಂದು ನಿಧಾನವಾಗಿ ಹೊರಬಂದೆ. ಮೂರು ಗಂಟೆ ಕದಲದೇ ಕುಳಿತಿದ್ದರಿಂದಾಗಿ ಕಾಲು ಜೋಮು ಹಿಡಿದಿತ್ತು. ನಾನು ಹೊರಬಂದದ್ದು ನೋಡಿ ದೂರದಲ್ಲಿದ್ದ ರಮೇಶ ಓಡಿ ಬಂದ. ಆ ಹಳೇ ಬಾವಿಯೊಳಗೆ ಮೆಟ್ಟಿಲುಗಳಿದ್ದವು. ಬಗ್ಗಿ ನೋಡಿದೆವು. ದೊಡ್ಡ ನಾಗರಹಾವೊಂದು ನಿಧಾನವಾಗಿ ಒಳಗಿಳಿಯುತ್ತಿತ್ತು. "ಅಣ್ಣ ಅದು ನಿಮ್ಮ ಪಕ್ಕದಿಂದಲೇ ಹೋಗಿರುತ್ತೆ" ಎಂದ ರಮೇಶ. ನನ್ನ ಕೈಕಾಲು ತಣ್ಣಗಾಗತೊಡಗಿತು!

Sunday, September 21, 2008

ಮುನ್ನಾರ್ ನ ಮೋಹಕ ಭೂದೃಶ್ಯಗಳು

ದೂರದ ಬೆಟ್ಟದ ಮೇಲೆ ಮನೆ. ಮನೆಯ ಹಿಂದೆ ಗೆರೆ ಎಳೆದಂತಿರುವ ನೀಲಗಿರಿ ಮರಗಳು. ಬೆಳಗಿನ ೬-೩೦. ಅರುಣನ ಹೊಂಗಿರಣ ಇವುಗಳ ಮೇಲೆ ಸಿಂಪಡಿಸಿದಂತಿದ್ದ ದೃಶ್ಯಕಾವ್ಯ. ಈ ನಿಸರ್ಗದ ಕಲಾಕೃತಿ ಸೆರೆಹಿಡಿಯಬೇಕೆಂದಿದ್ದರೆ ಕೇರಳದ ಮುನ್ನಾರ್ ಗೆ ಬನ್ನಿ. ಚುಮು ಚುಮು ನಸುಕಿನಲ್ಲಿ ಹಾಸಿಗೆ ಬಿಟ್ಟು ಮೇಲೇಳುವುದು ತುಸು ತಡವಾದರೆ ಸೂರ್ಯ ಮೇಲೆದ್ದು ಕೆಲಸ ಕೆಡಿಸಿಬಿಡುತ್ತಾನೆ. ಎಲ್ಲೆಲ್ಲೂ ಬೆಟ್ಟಂಬೆಳಗು. ಪ್ರಕೃತಿ ನೀಡುವ ಕೆಲವೇ ಕ್ಷಣಗಳಲ್ಲಿ ನಾವು ಹುಷಾರಾಗಿ ಬೇಗ ಬೇಗ ಕ್ಯಾಮೆರಾದಲ್ಲಿ ಸೆರೆ ಹಿಡಿದಿಡಬೇಕಷ್ಟೆ.
ಮುನ್ನಾರ್ ನಲ್ಲಿ ಮೋಡಗಳು ಟಾರ್ಚ್ ರೀತಿ ಕೆಲಸ ಮಾಡುತ್ತವೆ. ಒಮ್ಮೆ ಒಂದು ಬೆಟ್ಟದ ಮೇಲೆ ಇನ್ನೊಮ್ಮೆ ಇನ್ನೊಂದು ಬೆಟ್ಟದ ಮೇಲೆ ಟಾರ್ಚ್ ಲೈಟ್. ದೇವೀಕುಲಂ ಬೆಟ್ಟದ ಮೇಲಿನ ದೇವಸ್ಥಾನದ ಮೇಲೆ ಟಾರ್ಚ್ ಬೆಳಕು ಬೀಳಲೆಂದು ಕಾದಿದ್ದು ಸಾರ್ಥಕ ಕ್ಷಣ.
ಹಾಗೆಯೇ ಒಂದು ಚಿಕ್ಕ ಸಿಲ್ವರ್ ಮರದ ಮೇಲೆ ಬಿದ್ದಾಗ ಸಿಕ್ಕಿದ್ದು ಅದೃಷ್ಟದ ಕ್ಷಣ.
ಅಲ್ಲಿ ಲೋಕ್ಹಾರ್ಟ್ ಗ್ಯಾಪ್ ಮತ್ತು ರಾಕ್ ಕೇವ್ ಬಳಿ ನಿಂತಾಗ ದೂರದಲ್ಲೊಂದು ಸುಂದರ ಮನೆ ಕಾಣುತ್ತದೆ.
ವಾರೆವ್ಹಾ! ಟಾಟಾ ಟೀ ಎಸ್ಟೇಟ್ ನಲ್ಲೊಂದು ಒಣಗಿ ನಿಂತ ಒಂಟಿ ಮರವಿದೆ. ಇನ್ನೊಂದು ಕೋನ ಹುಡುಕುತ್ತ ಟೀ ಗಿಡದ ಮಧ್ಯೆ ನುಸುಳುವಷ್ಟರಲ್ಲಿ ಮೇಘರಾಜ ಆಗಸವನ್ನು ಮುಚ್ಚುವ ಹವಣಿಕೆಯಲ್ಲಿದ್ದ. ಸಿಕ್ಕಷ್ಟೇ ಭಾಗ್ಯ. ನೀಲಗಗನದಲ್ಲಿ ನನಗೆ ಸಿಕ್ಕ ಒಂಟಿ ಮರದ ಸಿಲೌಟ್ ಹೇಗಿದೆ ನೋಡಿ.
ಮುನ್ನಾರ್ ನ ಹವಾಮಾನ ಹೇಗೆಂದರೆ ಅಲ್ಲಿ ಮಳೆ ಬೀಳಲು ಋತು ಬೇಕಿಲ್ಲ. ಆದರೆ ಮಳೆಗಾಲ ಮುಗಿದ ಮೇಲೆ ಹೋಗುವುದೊಳ್ಳೆಯದು. ಆಗ ನೀಲಗಿರಿ ತಾಹ್ರ್(ಬೆಟ್ಟದ ಮೇಕೆ)ಗಳನ್ನೂ ಕ್ಯಾಮೆರಾದಲ್ಲಿ ಶೂಟ್ ಮಾಡಬಹುದು.


Wednesday, September 17, 2008

ಬಣ್ಣದ ಮಿಡತೆಯ ಅಂಟಿನ ಹಿಡಿತ

'ಮೆಲ್ಲಗೆ ಹೋಗೋ ಮಾರಾಯಾ!' ಎಳೆ ಮೊಗ್ಗಿನ ಮೇಲೆ ಎಳೆ ಮಿಡತೆಗಳು.
ಎಂದಾದರೂ ಬಿಡುವಾದಾಗ ಈ ದಿನಗಳಲ್ಲಿ ಯಾವುದೇ ಎಕ್ಕದ ಗಿಡದ ಬಳಿ ಹೋಗಿ ನೋಡಿ. ನಿಮಗೆ ಬಣ್ಣದ ಮಿಡತೆಗಳು ಕಾಣಸಿಗುತ್ತವೆ. "ಪೆಯಿಂಟೆಡ್ ಗ್ರಾಸ್ ಹಾಪ್ಪರ್"(ಬಣ್ಣದ ಮಿಡತೆ) ಎಂದು ಇಂಗ್ಲೀಷ್ ನಲ್ಲಿ ಕರೆಯುವ ಈ ಮಿಡತೆಯ ವೈಜ್ಞಾನಿಕ ಹೆಸರು poekilocerusPictus. ಇದು ಆಹಾರಕ್ಕೆಂದು ಎಕ್ಕವನ್ನು ಆಶ್ರಯಿಸುತ್ತದೆ. ಹಳದಿ ಬಣ್ಣದ ಮರಿಗಳಿಗೆ ಕೆಂಪು ಮತ್ತು ಕಪ್ಪು ಚುಕ್ಕೆಗಳಿರುತ್ತವೆ. ಪೊರೆ ಕಳಚಿಕೊಂಡು ಅವು ಬೆಳೆದಂತೆಲ್ಲಾ ನೀಲಿ ಮತ್ತು ಗಾಢ ಹಳದಿ ಬಣ್ಣಕ್ಕೆ ತಿರುಗುತ್ತವೆ. ಈ ಮಿಡತೆಗಳ ಕಣ್ಣು ಕೋರೈಸುವ ಬಣ್ಣಗಳಿಗೆ ಎಕ್ಕದಲ್ಲಿನ ವಿಷವಸ್ತುಗಳು ಕಾರಣ. ಹಕ್ಕಿಗಳ ಆಕ್ರಮಣದಿಂದ ಬಣ್ಣಗಳು ಕೊಂಚಮಟ್ಟಿಗೆ ರಕ್ಷಣೆಯನ್ನೂ ಕೊಡುತ್ತವೆ. ಇವು ನಡೆಯುವುದೂ ಇಲ್ಲ ಓಡುವುದೂ ಇಲ್ಲ. ಏನಿದ್ದರೂ ಹೈಜಂಪ್ ಲಾಂಗ್ ಜಂಪ್ ಗಳಷ್ಟೆ! ದೇಹದ ಇಪ್ಪತ್ತರಷ್ಟು ಉದ್ದಕ್ಕೆ ಅವು ಜಿಗಿಯಬಲ್ಲವು. ಆದರೆ ಭಾರೀ ಸೋಮಾರಿ. ಕಿವಿಗಳಿಲ್ಲ. ಆದರೆ ಹೊಟ್ಟೆಯ ಕೆಳಗೆ, ಎರಡೂ ರೆಕ್ಕೆಗಳಡಿಯಲ್ಲಿ ಟಿಂಪ್ಯಾನಂ ಎಂಬ ಅಂಗದಿಂದ ಅವು ಕೇಳಿಸಿಕೊಳ್ಳುತ್ತವೆ. 'ಬಿತ್ತು ಬಿತ್ತೂ...!' ತುಸು ಬೆಳೆದ ಮಿಡತೆಗಳೂ ಭಾರ. ಅವ್ನ್ನು ಹೊತ್ತ ಮೊಗ್ಗೂ ಭಾರ.
ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಬಿಟ್ಟು ಪ್ರಪಂಚದಾದ್ಯಂತ ಕಂಡುಬರುವ ಮಿಡತೆಗಳು ೧೮,೦೦೦ ಬಗೆಗಳಿವೆ. ಸಂಪೂರ್ಣ ಶಾಖಾಹಾರಿಗಳು. ಈ ಚಿತ್ರದ ಮಿಡತೆಗಳು ಏಕಸಸ್ಯ ವ್ರತಸ್ಥ. ಇನ್ನುಳಿದ ಮಿಡತೆಗಳಿಗೆ ಯಾವುದೇ ಸಸ್ಯವಾದರೂ ಸೈ! ಅವು ವಾಣಿಜ್ಯ ಬೆಳೆಗಳಿಗೆ ದಾಳಿಮಾಡಿ ದೇಶಗಳನ್ನೇ ಬೆತ್ತಲುಗೊಳಿಸಿದ ಅನೇಕ ಉದಾಹರಣೆಗಳಿವೆ. ಡಬಲ್ ಡೆಕ್ಕರ್, ಟ್ರಿಬಲ್ ಡೆಕ್ಕರ್, ಇವುಗಳ ಹವ್ಯಾಸವೇ ಹಾಗೆ...
ಚಳಿಗಾಲದಲ್ಲಿ ಹೆಣ್ಣು ಮಿಡತೆ ಮಣ್ಣಿನಲ್ಲಿ ಎರಡು ಮೊಟ್ಟೆಗಳ ಗುಚ್ಚಗಳನ್ನಿಡುತ್ತದೆ. ಒಂದೊಂದರಲ್ಲೂ ೫೦ ರಿಂದ ೧೦೦ ಮೊಟ್ಟೆಗಳಿರುತ್ತವೆ. ರಕ್ಷಣೆಗೆಂದು ಅಂಟಾದ ದ್ರವವನ್ನು ಮೊಟ್ಟೆಗಳ ಮೇಲೆ ಸ್ರವಿಸುತ್ತದೆ. ಮಣ್ಣಿನ ತೇವಾಂಶದಿಂದಲೂ ಅದು ರಕ್ಷಿಸುತ್ತದೆ. ಮೇ ಜೂನ್ ತಿಂಗಳಲ್ಲಿ ಮೊಟ್ಟೆಯಿಂದ ಹೊರ ಬಂದ ಮರಿಗೆ ರೆಕ್ಕೆಯಿರುವುದಿಲ್ಲ. ಚೆನ್ನಾಗಿ ತಿಂದು ಆರೇಳು ಬಾರಿ ಪೊರೆ ಕಳಚಿ ೪೦ ರಿಂದ ೬೦ ದಿನಗಳೊಳಗೆ ದೊಡ್ಡದಾಗುತ್ತದೆ. ಮುಂಗಾರಿನಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. 'ವರುಷಕೊಂದು ಹೊಸತು ಜನ್ಮ...' ಎಂಬ ಕವಿವಾಣಿಯಂತೆ ಇದರ ಬಾಳು ಒಂದು ವರ್ಷ. ಅದೇ ತಾನೇ ಹಳೆಯ ಶರೀರದ ಕವಚ ಬಿಟ್ಟು ಹೊರಬಂದ ಮಿಡತೆ.
ಮಿಡತೆಯನ್ನು ಹಿಡಿಯುವುದು ಕಷ್ಟ. ಆದರೂ ಹಿಡಿದಾಗ ಕಂದುಬಣ್ಣದ ರಸವನ್ನು ಉಗುಳುತ್ತವೆ. ವಿಜ್ಞಾನಿಗಳ ಪ್ರಕಾರ ಅದು ಇರುವೆಯಂತಹ ಕೀಟಗಳಿಂದ ರಕ್ಷಣೆಗಾಗಿ. ಮಿಡತೆಯ ಅತಿ ದೊಡ್ಡ ಶತ್ರು ನೊಣ. ನೊಣಗಳು ಮಿಡತೆಯ ಮೊಟ್ಟೆಯ ಬಳಿಯೇ ಮೊಟ್ಟೆಯಿಡುತ್ತವೆ. ಹೊರಬಂದ ಮರಿ ನೊಣಗಳು ಮಿಡತೆ ಮೊಟ್ಟೆಗಳನ್ನು ಕಬಳಿಸುತ್ತವೆ. ಇತರ ಶತ್ರುಗಳೆಂದರೆ, ಮೈನಾ ಹಕ್ಕಿ, ಹಾವು, ಇಲಿ ಮತ್ತು ಜೇಡ. ಇನ್ನೊಂದು ಭಾಯಾನಕ ಶತ್ರು 'ಶೂ'. ಅಂದರೆ ನಮ್ಮ ಪಾದರಕ್ಷೆ! ನಾನಾ ಆಕಾರ, ಗಾತ್ರಗಳಲ್ಲಿರುವ ಇವುಗಳಿಂದ ತುಳಿಸಿಕೊಂಡ ಯಾವ ಮಿಡತೆ ತಾನೆ ಬದುಕುಳಿಯಲು ಸಾಧ್ಯ?

Thursday, September 11, 2008

ಪುಟ್ಟ ಪುಟ್ಟ ವಿಮಾನಗಳು

ಚಿಕ್ಕಂದಿನಲ್ಲಿ ಏರೋಪ್ಲೇನ್ ಚಿಟ್ಟೆಗಳನ್ನು ಹಿಡಿಯುವುದೇ ಒಂದು ಆಟ. ಆಗೆಲ್ಲಾ ನಮ್ಮಜ್ಜಿ ತನ್ನ ಬಾಲ್ಯವನ್ನು ನೆನೆಯುತ್ತಿದ್ದರು. ಅವರು ಈ ಏರೋಪ್ಲೇನ್ ಚಿಟ್ಟೆಯನ್ನು ಹಿಡಿದು "ನಿಮ್ಮಪ್ಪನಿಗೆ ಸಾಲ ಕೊಟ್ಟಿದ್ದೀನಿ ಕಲ್ಲು ಹೊರು" ಎಂದು ಪುಟ್ಟ ಕಲ್ಲು ಚೂರನ್ನು ಕೊಟ್ಟರೆ ಈ ಚಿಟ್ಟೆ ತಮ್ಮ ಕಾಲುಗಳಿಂದ ಬಿಗಿಯಾಗಿ ಹಿಡಿಯುತ್ತಿತ್ತಂತೆ. ಅಜ್ಜಿಯೇ ಬೇಸರವಾಗಿ ಬಿಡುವವರೆಗೂ ಅವು ಕಲ್ಲನ್ನು ಹಿಡಿದುಕೊಂಡೇ ಇರುತ್ತಿತ್ತಂತೆ. ನನಗೆ ಆಗ ಈ ಕಥೆ ಕೇಳಿದಾಗೆಲ್ಲಾ ಈ ಚಿಟ್ಟೆ ಕಲ್ಲು ಹೊರುವುದರ ಬಗ್ಗೆ ಏನೂ ಅನಿಸುತ್ತಿರಲಿಲ್ಲ. ಆದರೆ ನನಗೆ ಹಿಡಿಯಲಾಗದ ಈ ವಿಪರೀತ ಚಟುವಟಿಕೆಯ ಚಿಟ್ಟೆಯನ್ನು ನಮ್ಮಜ್ಜಿ ಹೇಗೆ ಹಿಡಿಯುತ್ತಿದ್ದರು ಎಂಬ ದೊಡ್ಡ ಪ್ರಶ್ನೆ ಕಾಡುತ್ತಿತ್ತು. ಈ ಚಿಟ್ಟೆಗಳಂತೂ ಅತ್ಯಂತ ವೇಗವಾಗಿ ಹಾರಾಡುತ್ತಿರುತ್ತವೆ. ಇವಕ್ಕೆ ಆಗಸದಲ್ಲೇ ವೇಗವಾಗಿ ದಿಕ್ಕು ಬದಲಿಸುವ ಸಾಮರ್ಥ್ಯವಿದೆ. ಕ್ಯಾಮೆರಾ ಹಿಡಿದು ಅವುಗಳ ಹಿಂದೆ ಹೊರಟಾಗ ಅವು ಕೊಡುವ ಕಾಟಕ್ಕೆ ಸಿಟ್ಟು ಬರುವುದಂತೂ ನಿಜ.
ನಾನಂತೂ ಇವನ್ನು ಏರೋಪ್ಲೇನ್ ಚಿಟ್ಟೆಗಳೆಂದೇ ಕರೆಯುತ್ತೇನೆ. ರೂಢಿಯಲ್ಲಿ ಹಾತೆ, ಹಾಂತೆಗಳೆಂದೂ ಕರೆಯುವುದುಂಟು. ನನ್ನ ಕ್ಯಾಮೆರಾವನ್ನು ಇವು ತುಂಬಾ ಆಕರ್ಷಿಸಿದವು. ಈ ಏರೋಪ್ಲೇನ್ ಚಿಟ್ಟೆಗಳಿರುವುದು ಒಂದೇ ತರಹವೆಂದು ಭಾವಿಸಿದ್ದೆ. ಆದರೆ ಕ್ಯಾಮೆರಾ ಕಣ್ಣುಗಳಲ್ಲಿ ಅವುಗಳ ವೈವಿಧ್ಯ ಕಂಡು ಅಚ್ಚರಿಗೊಂಡೆ. ಹೆಚ್ಚೆಂದರೆ ಆರರಿಂದ ಎಂಟು ವಾರಗಳಷ್ಟು ಜೀವಿತಾವಧಿಯಿರುವ ಇವುಗಳು ಕೂರುವುದಕ್ಕಿಂತ ಬಾನಿನಲ್ಲಿರುವುದೇ ಹೆಚ್ಚು. ವಿಮಾನದಂತೆ ತನ್ನ ರೆಕ್ಕೆಗಳನ್ನು ಅಗಲವಾಗಿಟ್ಟುಕೊಂಡಿರುವುದರಿಂದ ಇದಕ್ಕೆ ಏರೋಪ್ಲೇನ್ ಚಿಟ್ಟೆಯೆಂಬ ಹೆಸರು ಬಂದಿರಬೇಕು. ಇಂಗ್ಲಿಷಿನಲ್ಲಿ ಇದನ್ನು 'ಡ್ರ್ಯಾಗನ್ ಫ್ಲೈ' ಎಂದು ಕರೆಯುತ್ತಾರೆ.

ಇನ್ನೂರ ಇಪ್ಪತ್ತು ಮಿಲಿಯನ್ ವರ್ಷಗಳ ಹಿಂದೆ ಕಾರ್ಬೋನಿಫೆರಸ್ ಮತ್ತು ಪರ್ಮಿಯನ್ ಕಾಲಗಳ ಮಧ್ಯೆ ಜೀವಿಸಿದ್ದ ಮೂವತ್ತು ಇಂಚುಗಳಷ್ಟು ಅಗಲದ ಬೃಹತ್ ಗಾತ್ರದ ಏರೋಪ್ಲೇನ್ ಚಿಟ್ಟೆಯ ಪಳೆಯುಳಿಕೆ ದೊರಕಿದೆಯಂತೆ. ಇಷ್ಟು ಪುರಾತನ ಮೂಲ ಹೊಂದಿರುವ ಈ ಚಿಟ್ಟೆಗಳು, ಐದೂವರೆ ಸಾವಿರಕ್ಕೂ ಹೆಚ್ಚು ವಿಧಗಳಲ್ಲಿ ಪ್ರಪಂಚದಾದ್ಯಂತ ಇವೆ. ಅವುಗಳಲ್ಲಿ ಐದುನೂರಕ್ಕೂ ಹೆಚ್ಚು ರೀತಿಯವು ಭಾರತದಲ್ಲಿವೆ.

ಮುಂಗಾರು ಮುಗಿಯುತ್ತಿದ್ದಂತೆ ಹೆಚ್ಚಾಗಿ ಕಂಡುಬರುವ ಇವನ್ನು ಹತ್ತಿರದಿಂದ ಗಮನಿಸಿದರೆ, ಇವುಗಳ ಆಹಾರ ಮತ್ತು ಸಂತಾನಾಭಿವೃದ್ಧಿ ಕ್ರಿಯೆಗಳಲ್ಲಿ ಕುತೂಹಲವನ್ನುಂಟು ಮಾಡುವ ನಡವಳಿಕೆಗಳನ್ನು ಕಾಣಬಹುದು. ಇವುಗಳಿಗಿರುವ ಆರು ಕಾಲುಗಳುದ್ದಕ್ಕೂ ಮುಳ್ಳುಗಳಂತಿರುವ ರೋಮಗಳಿವೆ. ಇದರಿಂದಾಗಿ ಇವು ಆಕಾಶದಲ್ಲಿ ಹಾರಾಡುವಾಗಲೇ ಹಾರಾಡುವ ಕೀಟಗಳನ್ನು ಬಿಗಿಯಾಗಿ ಹಿಡಿದು ತಿನ್ನುತ್ತವೆ.

ಗಂಡು ಏರೋಪ್ಲೇನ್ ಚಿಟ್ಟೆಗಳು ತಮ್ಮ ವಾಸಪ್ರದೇಶವನ್ನು ಗುರುತಿಸಿಕೊಂಡಿರುತ್ತವೆ. ಅಲ್ಲಿ ಸುಳಿದಾಡುವ ಇತರೇ ಗಂಡು ಚಿಟ್ಟೆಗಳನ್ನು ಓಡಿಸುತ್ತವೆ. ತನ್ನ ವಾಸಪ್ರದೇಶವನ್ನು ಪ್ರವೇಶಿಸುವ ಹೆಣ್ಣನ್ನು ಗಂಡು ಒಲಿಸಿಕೊಳ್ಳುತ್ತದೆ. ಕೂಡುವುದಕ್ಕೆ ಮೊದಲು ಗಂಡು ಹೆಣ್ಣಿನ ಕುತ್ತಿಗೆಯ ಭಾಗವನ್ನು ತನ್ನ ಬಾಲದ ತುದಿಯಲ್ಲಿರುವ ಕೊಕ್ಕೆಯಂತಹ ಅಂಗದಿಂದ ಹಿಡಿಯುತ್ತದೆ. ಹೆಣ್ಣು ತನ್ನ ಮೈಯನ್ನು ಬಗ್ಗಿಸಿ ವೀರ್ಯಾಣುಗಳನ್ನು ತನ್ನ ಅಂಡಕೋಶಕ್ಕೆ ವರ್ಗಾಯಿಸುತ್ತದೆ. ಹೆಣ್ಣು ಚಿಟ್ಟೆ, ಮೊಟ್ಟೆಗಳನ್ನು ನೀರಿನ ಮೇಲೆ ಹಾರುತ್ತಾ ಹಾಕುತ್ತಾ ಹೋಗುತ್ತದೆ. ಮೊಟ್ಟೆಯಿಂದ ಹೊರಬರುವ ಲಾರ್ವಾಗಳು ನೀರಿನಲ್ಲಿಯೇ ಜೀವಿಸುತ್ತವೆ. ಏರೋಪ್ಲೇನ್ ಚಿಟ್ಟೆಗಳ ಮರಿಗಳಿಗೆ ನಯಾಡ್ಸ್ ಎಂದು ಹೆಸರು.

ಏರೋಪ್ಲೇನ್ ಚಿಟ್ಟೆಗಳ ತಲೆಯ ಹೆಚ್ಚು ಭಾಗವನ್ನು ಎರಡು ದೊಡ್ಡ ಕಣ್ಣುಗಳು ಆಕ್ರಮಿಸಿವೆ. ಇವನ್ನು ಸಂಯುಕ್ತ ಕಣ್ಣು(ಕಾಂಪೌಂಡ್ ಐಸ್)ಗಳೆನ್ನುತ್ತಾರೆ. ಒಮ್ಮಟೀಡಿಯಾ ಎಂಬ ಸೂಕ್ಷ್ಮ ವಸ್ತುಗಳು ಸೇರಿ ಈ ಸಂಯುಕ್ತ ಕಣ್ಣುಗಳಾಗುತ್ತವೆ. ಈ ಎಲ್ಲಾ ಒಮ್ಮಟೀಡಿಯಾಗಳು ಸೇರಿ ಒಟ್ಟಾರೆ ಚಿತ್ರವನ್ನು ಮಿದುಳಿಗೆ ವರ್ಗಾಯಿಸುತ್ತವೆ. ಇರುವೆಗಳಿಗೆ ಕೇವಲ ಹನ್ನೆರಡು ಒಮ್ಮಟೀಡಿಯಾಗಳಿದ್ದರೆ ಏರೋಪ್ಲೇನ್ ಚಿಟ್ಟೆಗಳಿಗೆ ಇಪ್ಪತ್ತು ಸಾವಿರಕ್ಕೂ ಅಧಿಕ ಒಮ್ಮಟೀಡಿಯಾಗಳಿರುತ್ತವೆ. ಅದರಿಂದಾಗಿಯೇ ಅವು ಆಕಾಶದಲ್ಲಿ ಹಾರುತ್ತಲೇ ಅಲ್ಲಿರುವ ಕೀಟಗಳನ್ನು ಹಿಡಿಯುವುದು ಸಾಧ್ಯವಾಗುತ್ತದೆ.

ಏರೋಪ್ಲೇನ್ ಚಿಟ್ಟೆಗಳ ಗುಂಪು ಭತ್ತದ ಗದ್ದೆಗಳ ಬಳಿಯೇನಾದರೂ ಕಂಡು ಬಂದರೆ ಮಳೆ ಬರುತ್ತದೆ ಎಂಬ ನಂಬಿಕೆಯಿದೆ. ಮನುಷ್ಯ ಸತ್ತ ನಂತರ ಅವನ ಆತ್ಮ ಈ ಚಿಟ್ಟೆಯ ರೂಪ ತಾಳುವುದೆಂಬ ಕಾಲ್ಪನಿಕ ಕಥೆಯೂ ಇದೆ. ಮಲೆಯಾಳಂ ಸಾಹಿತಿ ಮುಕುಂದನ್ ಅವರು ಈ ಕಥೆಯನ್ನು ತಮ್ಮ ಕಾದಂಬರಿಯಲ್ಲಿ ಬಳಸಿಕೊಂಡಿರುವರು.

ಭಾವುಕರಿಗೆ ಚಿಟ್ಟೆಯೆಂದರೆ ಒಂದು ರೀತಿಯ ಕಾವ್ಯಸ್ಪೂರ್ತಿ. ಆದರೆ ಅತ್ಯಾಧುನಿಕ ಕಾಲದಲ್ಲಿ ಭಾವನೆಗಳನ್ನೇ ಕಳೆದುಕೊಳ್ಳುತ್ತಿರುವ ಮನುಷ್ಯ ಚಿಟ್ಟೆಗಳಂಥ ಜೀವಿಗಳಿಗೆ ಬದುಕಲಾರದ ಸ್ಥಿತಿಯೊಡ್ಡಿದ್ದಾನೆಂಬುದು ಸರ್ವವಿಧಿತ ವಿಚಾರ.

Monday, September 8, 2008

ತೇಜಸ್ವಿಯವರ ಜನ್ಮದಿನ

ಇಂದು ಪೂರ್ಣಚಂದ್ರ ತೇಜಸ್ವಿ ಅವರ ಜನ್ಮ ದಿನ. ಗೆಳೆಯ ಅಜಿತ್.ಎಸ್.ಕೌಂಡಿನ್ಯ ಅವರ ಬಗ್ಗೆ ಕವನ ಬರೆದಿದ್ದಾನೆ. ೨೦೦೨ ರ ಏಪ್ರಿಲ್ ತಿಂಗಳಲ್ಲಿ ತೇಜಸ್ವಿಯವರ ಮನೆಗೆ ಹೋಗಿದ್ದಾಗ ಅವರ ಫೋಟೋ ತೆಗೆದಿದ್ದೆ. ನನ್ನ ಚಿತ್ರ, ಅಜಿತನ ಕವನ - ಇದು ತೇಜಸ್ವಿಯವರಿಗೆ ನಮ್ಮ ನುಡಿ-ಚಿತ್ರ ನಮನ.


ತೇಜಸ್ಸಿನ ತೇಜಸ್ವಿ

ಹಿಡಿದದ್ದು ಕೈಯಲ್ಲೊಂದು ಕೋವಿ
ಕುತ್ತಿಗೆಗೆ ನೇತುಬಿದ್ದದ್ದು ಕ್ಯಾಮೆರ
ಬಿಳಿ ಕುರುಚಲು ಈ ಗಡ್ಡಧಾರಿ
ಹಿಡಿದ ದಾರಿ ಶಿಕಾರಿ

ಅಲೆದಾಡುತ ಕಾಡೆಲ್ಲಾ
ಮುಂದೆ ಮುಂದೆ ಕಿವಿ
ಹಿಂದೆ ಗುರು ತೇಜಸ್ವಿ

ಮನೆ ಹಿಂದೆಯೇ ಇದ್ದ ಕೆರೆ
ಇವರಿಗೆ ಪಕ್ಷಿವೀಕ್ಷಣೆಯ ತಾಣ
ಭಾದ್ರಾ ನದಿ ದಂಡೆಯಲಿ
ಮೀನಿಗೆ ಗಾಳದ ಬಾಣ

'ನಿರುತ್ತರ'ದ ನಾಯಕ
ಕರ್ವಾಲೊ, ಪರಿಸರದ ಕಥೆ, ಮಾಯಾಲೋಕ,
ರಚಿಸಿದ್ದಾರೆ ಅದೆಷ್ಟೋ
ಕಥೆ, ಕಾದಂಬರಿ ನಾಟಕ

ಮೂಕಾಗಿದೆ ನೀವಿಲ್ಲದ ಮೂಡಿಗೆರೆ
ಎಷ್ಟು ಚಂದ ನೀವು ಮರಳಿ ಬಂದರೆ!