Thursday, September 11, 2008

ಪುಟ್ಟ ಪುಟ್ಟ ವಿಮಾನಗಳು

ಚಿಕ್ಕಂದಿನಲ್ಲಿ ಏರೋಪ್ಲೇನ್ ಚಿಟ್ಟೆಗಳನ್ನು ಹಿಡಿಯುವುದೇ ಒಂದು ಆಟ. ಆಗೆಲ್ಲಾ ನಮ್ಮಜ್ಜಿ ತನ್ನ ಬಾಲ್ಯವನ್ನು ನೆನೆಯುತ್ತಿದ್ದರು. ಅವರು ಈ ಏರೋಪ್ಲೇನ್ ಚಿಟ್ಟೆಯನ್ನು ಹಿಡಿದು "ನಿಮ್ಮಪ್ಪನಿಗೆ ಸಾಲ ಕೊಟ್ಟಿದ್ದೀನಿ ಕಲ್ಲು ಹೊರು" ಎಂದು ಪುಟ್ಟ ಕಲ್ಲು ಚೂರನ್ನು ಕೊಟ್ಟರೆ ಈ ಚಿಟ್ಟೆ ತಮ್ಮ ಕಾಲುಗಳಿಂದ ಬಿಗಿಯಾಗಿ ಹಿಡಿಯುತ್ತಿತ್ತಂತೆ. ಅಜ್ಜಿಯೇ ಬೇಸರವಾಗಿ ಬಿಡುವವರೆಗೂ ಅವು ಕಲ್ಲನ್ನು ಹಿಡಿದುಕೊಂಡೇ ಇರುತ್ತಿತ್ತಂತೆ. ನನಗೆ ಆಗ ಈ ಕಥೆ ಕೇಳಿದಾಗೆಲ್ಲಾ ಈ ಚಿಟ್ಟೆ ಕಲ್ಲು ಹೊರುವುದರ ಬಗ್ಗೆ ಏನೂ ಅನಿಸುತ್ತಿರಲಿಲ್ಲ. ಆದರೆ ನನಗೆ ಹಿಡಿಯಲಾಗದ ಈ ವಿಪರೀತ ಚಟುವಟಿಕೆಯ ಚಿಟ್ಟೆಯನ್ನು ನಮ್ಮಜ್ಜಿ ಹೇಗೆ ಹಿಡಿಯುತ್ತಿದ್ದರು ಎಂಬ ದೊಡ್ಡ ಪ್ರಶ್ನೆ ಕಾಡುತ್ತಿತ್ತು. ಈ ಚಿಟ್ಟೆಗಳಂತೂ ಅತ್ಯಂತ ವೇಗವಾಗಿ ಹಾರಾಡುತ್ತಿರುತ್ತವೆ. ಇವಕ್ಕೆ ಆಗಸದಲ್ಲೇ ವೇಗವಾಗಿ ದಿಕ್ಕು ಬದಲಿಸುವ ಸಾಮರ್ಥ್ಯವಿದೆ. ಕ್ಯಾಮೆರಾ ಹಿಡಿದು ಅವುಗಳ ಹಿಂದೆ ಹೊರಟಾಗ ಅವು ಕೊಡುವ ಕಾಟಕ್ಕೆ ಸಿಟ್ಟು ಬರುವುದಂತೂ ನಿಜ.
ನಾನಂತೂ ಇವನ್ನು ಏರೋಪ್ಲೇನ್ ಚಿಟ್ಟೆಗಳೆಂದೇ ಕರೆಯುತ್ತೇನೆ. ರೂಢಿಯಲ್ಲಿ ಹಾತೆ, ಹಾಂತೆಗಳೆಂದೂ ಕರೆಯುವುದುಂಟು. ನನ್ನ ಕ್ಯಾಮೆರಾವನ್ನು ಇವು ತುಂಬಾ ಆಕರ್ಷಿಸಿದವು. ಈ ಏರೋಪ್ಲೇನ್ ಚಿಟ್ಟೆಗಳಿರುವುದು ಒಂದೇ ತರಹವೆಂದು ಭಾವಿಸಿದ್ದೆ. ಆದರೆ ಕ್ಯಾಮೆರಾ ಕಣ್ಣುಗಳಲ್ಲಿ ಅವುಗಳ ವೈವಿಧ್ಯ ಕಂಡು ಅಚ್ಚರಿಗೊಂಡೆ. ಹೆಚ್ಚೆಂದರೆ ಆರರಿಂದ ಎಂಟು ವಾರಗಳಷ್ಟು ಜೀವಿತಾವಧಿಯಿರುವ ಇವುಗಳು ಕೂರುವುದಕ್ಕಿಂತ ಬಾನಿನಲ್ಲಿರುವುದೇ ಹೆಚ್ಚು. ವಿಮಾನದಂತೆ ತನ್ನ ರೆಕ್ಕೆಗಳನ್ನು ಅಗಲವಾಗಿಟ್ಟುಕೊಂಡಿರುವುದರಿಂದ ಇದಕ್ಕೆ ಏರೋಪ್ಲೇನ್ ಚಿಟ್ಟೆಯೆಂಬ ಹೆಸರು ಬಂದಿರಬೇಕು. ಇಂಗ್ಲಿಷಿನಲ್ಲಿ ಇದನ್ನು 'ಡ್ರ್ಯಾಗನ್ ಫ್ಲೈ' ಎಂದು ಕರೆಯುತ್ತಾರೆ.

ಇನ್ನೂರ ಇಪ್ಪತ್ತು ಮಿಲಿಯನ್ ವರ್ಷಗಳ ಹಿಂದೆ ಕಾರ್ಬೋನಿಫೆರಸ್ ಮತ್ತು ಪರ್ಮಿಯನ್ ಕಾಲಗಳ ಮಧ್ಯೆ ಜೀವಿಸಿದ್ದ ಮೂವತ್ತು ಇಂಚುಗಳಷ್ಟು ಅಗಲದ ಬೃಹತ್ ಗಾತ್ರದ ಏರೋಪ್ಲೇನ್ ಚಿಟ್ಟೆಯ ಪಳೆಯುಳಿಕೆ ದೊರಕಿದೆಯಂತೆ. ಇಷ್ಟು ಪುರಾತನ ಮೂಲ ಹೊಂದಿರುವ ಈ ಚಿಟ್ಟೆಗಳು, ಐದೂವರೆ ಸಾವಿರಕ್ಕೂ ಹೆಚ್ಚು ವಿಧಗಳಲ್ಲಿ ಪ್ರಪಂಚದಾದ್ಯಂತ ಇವೆ. ಅವುಗಳಲ್ಲಿ ಐದುನೂರಕ್ಕೂ ಹೆಚ್ಚು ರೀತಿಯವು ಭಾರತದಲ್ಲಿವೆ.

ಮುಂಗಾರು ಮುಗಿಯುತ್ತಿದ್ದಂತೆ ಹೆಚ್ಚಾಗಿ ಕಂಡುಬರುವ ಇವನ್ನು ಹತ್ತಿರದಿಂದ ಗಮನಿಸಿದರೆ, ಇವುಗಳ ಆಹಾರ ಮತ್ತು ಸಂತಾನಾಭಿವೃದ್ಧಿ ಕ್ರಿಯೆಗಳಲ್ಲಿ ಕುತೂಹಲವನ್ನುಂಟು ಮಾಡುವ ನಡವಳಿಕೆಗಳನ್ನು ಕಾಣಬಹುದು. ಇವುಗಳಿಗಿರುವ ಆರು ಕಾಲುಗಳುದ್ದಕ್ಕೂ ಮುಳ್ಳುಗಳಂತಿರುವ ರೋಮಗಳಿವೆ. ಇದರಿಂದಾಗಿ ಇವು ಆಕಾಶದಲ್ಲಿ ಹಾರಾಡುವಾಗಲೇ ಹಾರಾಡುವ ಕೀಟಗಳನ್ನು ಬಿಗಿಯಾಗಿ ಹಿಡಿದು ತಿನ್ನುತ್ತವೆ.

ಗಂಡು ಏರೋಪ್ಲೇನ್ ಚಿಟ್ಟೆಗಳು ತಮ್ಮ ವಾಸಪ್ರದೇಶವನ್ನು ಗುರುತಿಸಿಕೊಂಡಿರುತ್ತವೆ. ಅಲ್ಲಿ ಸುಳಿದಾಡುವ ಇತರೇ ಗಂಡು ಚಿಟ್ಟೆಗಳನ್ನು ಓಡಿಸುತ್ತವೆ. ತನ್ನ ವಾಸಪ್ರದೇಶವನ್ನು ಪ್ರವೇಶಿಸುವ ಹೆಣ್ಣನ್ನು ಗಂಡು ಒಲಿಸಿಕೊಳ್ಳುತ್ತದೆ. ಕೂಡುವುದಕ್ಕೆ ಮೊದಲು ಗಂಡು ಹೆಣ್ಣಿನ ಕುತ್ತಿಗೆಯ ಭಾಗವನ್ನು ತನ್ನ ಬಾಲದ ತುದಿಯಲ್ಲಿರುವ ಕೊಕ್ಕೆಯಂತಹ ಅಂಗದಿಂದ ಹಿಡಿಯುತ್ತದೆ. ಹೆಣ್ಣು ತನ್ನ ಮೈಯನ್ನು ಬಗ್ಗಿಸಿ ವೀರ್ಯಾಣುಗಳನ್ನು ತನ್ನ ಅಂಡಕೋಶಕ್ಕೆ ವರ್ಗಾಯಿಸುತ್ತದೆ. ಹೆಣ್ಣು ಚಿಟ್ಟೆ, ಮೊಟ್ಟೆಗಳನ್ನು ನೀರಿನ ಮೇಲೆ ಹಾರುತ್ತಾ ಹಾಕುತ್ತಾ ಹೋಗುತ್ತದೆ. ಮೊಟ್ಟೆಯಿಂದ ಹೊರಬರುವ ಲಾರ್ವಾಗಳು ನೀರಿನಲ್ಲಿಯೇ ಜೀವಿಸುತ್ತವೆ. ಏರೋಪ್ಲೇನ್ ಚಿಟ್ಟೆಗಳ ಮರಿಗಳಿಗೆ ನಯಾಡ್ಸ್ ಎಂದು ಹೆಸರು.

ಏರೋಪ್ಲೇನ್ ಚಿಟ್ಟೆಗಳ ತಲೆಯ ಹೆಚ್ಚು ಭಾಗವನ್ನು ಎರಡು ದೊಡ್ಡ ಕಣ್ಣುಗಳು ಆಕ್ರಮಿಸಿವೆ. ಇವನ್ನು ಸಂಯುಕ್ತ ಕಣ್ಣು(ಕಾಂಪೌಂಡ್ ಐಸ್)ಗಳೆನ್ನುತ್ತಾರೆ. ಒಮ್ಮಟೀಡಿಯಾ ಎಂಬ ಸೂಕ್ಷ್ಮ ವಸ್ತುಗಳು ಸೇರಿ ಈ ಸಂಯುಕ್ತ ಕಣ್ಣುಗಳಾಗುತ್ತವೆ. ಈ ಎಲ್ಲಾ ಒಮ್ಮಟೀಡಿಯಾಗಳು ಸೇರಿ ಒಟ್ಟಾರೆ ಚಿತ್ರವನ್ನು ಮಿದುಳಿಗೆ ವರ್ಗಾಯಿಸುತ್ತವೆ. ಇರುವೆಗಳಿಗೆ ಕೇವಲ ಹನ್ನೆರಡು ಒಮ್ಮಟೀಡಿಯಾಗಳಿದ್ದರೆ ಏರೋಪ್ಲೇನ್ ಚಿಟ್ಟೆಗಳಿಗೆ ಇಪ್ಪತ್ತು ಸಾವಿರಕ್ಕೂ ಅಧಿಕ ಒಮ್ಮಟೀಡಿಯಾಗಳಿರುತ್ತವೆ. ಅದರಿಂದಾಗಿಯೇ ಅವು ಆಕಾಶದಲ್ಲಿ ಹಾರುತ್ತಲೇ ಅಲ್ಲಿರುವ ಕೀಟಗಳನ್ನು ಹಿಡಿಯುವುದು ಸಾಧ್ಯವಾಗುತ್ತದೆ.

ಏರೋಪ್ಲೇನ್ ಚಿಟ್ಟೆಗಳ ಗುಂಪು ಭತ್ತದ ಗದ್ದೆಗಳ ಬಳಿಯೇನಾದರೂ ಕಂಡು ಬಂದರೆ ಮಳೆ ಬರುತ್ತದೆ ಎಂಬ ನಂಬಿಕೆಯಿದೆ. ಮನುಷ್ಯ ಸತ್ತ ನಂತರ ಅವನ ಆತ್ಮ ಈ ಚಿಟ್ಟೆಯ ರೂಪ ತಾಳುವುದೆಂಬ ಕಾಲ್ಪನಿಕ ಕಥೆಯೂ ಇದೆ. ಮಲೆಯಾಳಂ ಸಾಹಿತಿ ಮುಕುಂದನ್ ಅವರು ಈ ಕಥೆಯನ್ನು ತಮ್ಮ ಕಾದಂಬರಿಯಲ್ಲಿ ಬಳಸಿಕೊಂಡಿರುವರು.

ಭಾವುಕರಿಗೆ ಚಿಟ್ಟೆಯೆಂದರೆ ಒಂದು ರೀತಿಯ ಕಾವ್ಯಸ್ಪೂರ್ತಿ. ಆದರೆ ಅತ್ಯಾಧುನಿಕ ಕಾಲದಲ್ಲಿ ಭಾವನೆಗಳನ್ನೇ ಕಳೆದುಕೊಳ್ಳುತ್ತಿರುವ ಮನುಷ್ಯ ಚಿಟ್ಟೆಗಳಂಥ ಜೀವಿಗಳಿಗೆ ಬದುಕಲಾರದ ಸ್ಥಿತಿಯೊಡ್ಡಿದ್ದಾನೆಂಬುದು ಸರ್ವವಿಧಿತ ವಿಚಾರ.

2 comments:

Mallikarjuna.D.G. said...

ನಾಗೇಶ್ ಹೆಗಡೆಯವರ ಪ್ರತಿಕ್ರಿಯೆ:
ಚೆನ್ನಾಗಿದೆ ಅಜ್ಜಿ ಸಾಲ ಕೊಟ್ಟ ಕತೆ. ಆದರೆ ಕಲ್ಲನ್ನು ಬಿಗಿಯಾಗಿ ಹಿಡಿದು ಅದು ನೆಲಮಟ್ಟದಲ್ಲಿಯೇ ಕೂರುತ್ತದೆಯೇ ಎಂಬುದರ ಬಗ್ಗೆ ವಿವರ ಕೊಟ್ಟಿದ್ದರೆ ಚೆನ್ನಾಗಿತ್ತು. ಅವು ಅದೇ ತಾನೆ ಗೊದಮೊಟ್ಟೆಯಿಂದ ಹೊರಬಂದು ಹೊಸ ರೆಕ್ಕೆಯನ್ನು ಒಣಗಿಸುತ್ತ ನನ್ನ ತೋಟದಲ್ಲಿರುವ ಪುಟ್ಟ ಟ್ಯಾಂಕ್ ಕಟ್ಟೆಗೆ ಆತುಕೊಂಡು ಕೂತಿರುವುದನ್ನು ನಾನು ನಡುರಾತ್ರಿಯಲ್ಲಿ ನೋಡಿದ್ದೇನೆ. ಆಗ ಅವನ್ನು ಸುಲಭವಾಗಿ ಹಿಡಿದು ಪಾರದರ್ಶಕ ಜಾಡಿಯಲ್ಲಿ ಹಾಕಿ ಮರುದಿನ ಎಲ್ಲೆಂದರಲ್ಲಿ ಇಟ್ಟು ಚಿತ್ತ ತೆಗೆಯಬಹುದು. ಗಂಡು ಹೆಣ್ಣು ತಮ್ಮ ಉದ್ದ ಬಾಲವನ್ನು ಕಮಾನಿನಂತೆ ಬೆಸೆದು ಮಿಲನದ ಬೆಸುಗೆಯಲ್ಲಿ ಮೈಮರೆತಿರುವ ಚಿತ್ರವನ್ನು ಡಿಜಿ ಹಾಕಿರುತ್ತಾರೆ ಎಂದು ಸ್ಕ್ರೋಲ್ ಮಾಡುತ್ತ ಹೋದರೆ ನಿರಾಸೆ ಕಾದಿತ್ತು. ಮುಂದೆಂದಾದರೂ ಅಂತ ಚಿತ್ರ ಸಿಕ್ಕರೆ ಬ್ಲಾಗಿಲಲ್ಲಿ ತಳ್ಳಿಬಿಡಿ. ವಿವರಣೆ ಚೆನ್ನಾಗಿದೆ. ನಮ್ಮ ಮಲೆನಾಡಿನ ಶಿರಸಿ ಕಡೆ ಇವಕ್ಕೆ 'ಪೀಟಿ' ಎನ್ನುತ್ತಾರೆ.
ತೆಳ್ಳನ್ನ ಉದ್ದನ್ನ ದೇಹದ ಇವು ಛಂಗೆಂದು ಜಿಗಿದು ವೇಗವಾಗಿ ಸಾಗುವುದನ್ನು ನೋಡಿದರೆ ಪೀಟಿ ಉಷಾ ನೆನಪೇ ಬರುತ್ತದೆ.

shivu K said...

ಸಣ್ಣ ಏರೋಪ್ಲೇನುಗಳ ಜೊತೆಗೆ ಅಜ್ಜಿ ಸಾಲ ಕೊಟ್ಟ ಕತೆಯನ್ನು ಸಾಲವಾಗಿ ಪಡೆದುಕೊಂಡಿದ್ದೀರ. ಅದಕ್ಕಾಗಿ ನಿಮ್ಮಜ್ಜಿಗೆ ನೀವೇನು ಕೊಟ್ರಿ? ನೀವೇನೂ ಕೊಡಬೇಕಾಗಿಲ್ಲ ನಿಮ್ಮದು ಅವರಿಗೆ ಬೇಕಾಗು ಇಲ್ಲ. ಬೇಕಾಗಿರೋದೆಲ್ಲಾ ನಿಮಗೆ ಹಾಗು ನಮಗೆ! ಅವರಿಂದ ಇನ್ನಷ್ಟು ಮತ್ತಷ್ಟು ಸಾಲ ವಸೂಲಿ ಮಾಡ್ತ ಇರಿ. ನಮಗೂ ಈ ರೀತಿ ಸಾಲ ಕೊಡ್ತಾ ಇರಿ.

ಶಿವು.ಕೆ.