Thursday, September 24, 2009

ಹಲವುರೂಪ ಒಂದೇಗುಣ

ವ್ಯಾಯಾಮ ಮಾಡಿ ಆರೋಗ್ಯವಂತರಾಗಿ. ಆದರೆ ಬೆರ್ಚಪ್ಪನಷ್ಟು ಬೇಡ!

ಸೊಂಡಿಲ ಮೂಲಕ ಮಾತುಕತೆ!

ನಗು.. ನೀನಗು.. ಕಿರುನಗೆನಗು..

ತಲೆಬಾರ..(ಹೆಡ್ ವೇಯ್ಟ್!)

ಬ್ಯಾಲೆನ್ಸ್... ಬ್ಯಾಲೆನ್ಸ್...

ಸವಿನಿದ್ರೆ!

ಕೈಕೆಲಸ

ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ..

Wednesday, September 16, 2009

ನೆರೆರಾಜ್ಯದಿಂದ ಬಂದು ನಾರು ತಯಾರಿಸುವವರು

ಹೊಚ್ಚ ಹೊಸ ಸೈಕಲ್‌ನ ಚಕ್ರದ ಆಕ್ಸೆಲ್‌ನ ಸುತ್ತ ಬಹುಬಗೆಯ ಬಣ್ಣ ಬಣ್ಣದಿಂದ ಕೂಡಿದ ನಾರಿನ ರಿಂಗ್ ಹಾಕಿರುವುದನ್ನು ಗಮನಿಸಿದ್ದೀರಾ. ಅದರ ಮೂಲ ಯಾವುದು ಗೊತ್ತೆ? "ಕತ್ತಾಳೆಗಿಡ" ಅಂದರೆ ಆಶ್ಚರ್ಯವೇ? ಮೊದಲಬಾರಿ ಆ ಬಗ್ಗೆ ಕೇಳಿದಾಗ ನನಗೂ ಹಾಗೆಯೇ ಆಗಿತ್ತು.
ಅದೊಂದು ದಿನ ,"ನಮ್ಮ ತೋಟದ ಬೇಲಿಗೆ ಹಾಕಿರುವ ಕತ್ತಾಳೆ ಪಟ್ಟೆ ಕುಯ್ಯಲು ಬರುತ್ತಾರೆ" ಎಂದು ನನ್ನ ತಂದೆ ಸಣ್ಣದೊಂದು ಘೋಷಣೆ ಎಂಬಂತೆ ಮನೆಯಲ್ಲಿ ಹೇಳುತ್ತಿದ್ದುದು ಕೇಳಿಸಿತು. "ಈ ವರ್ಷವೂ ತಮಿಳವ್ರು ಬಂದಿದ್ದಾರಾ" ಎಂದು ಒಳಗಿದ್ದ ಅಮ್ಮ ವಿಚಾರಿಸಿದರು. "ಹೌದು, ನಮ್ಮ ಎದುರು ತೋಟದಲ್ಲಿ ಕ್ಯಾಂಪ್ ಮಾಡಿದ್ದಾರೆ" ಅಂದರು ಅಪ್ಪ.
ಬೆಳೆದ ಕೂದಲನ್ನು ನಾವು ಕತ್ತರಿಸಿಕೊಳ್ಳುವಂತೆ ಬೆಳೆದ ಕತ್ತಾಳೆ ಪಟ್ಟೆಗಳನ್ನು ತಮಿಳುನಾಡಿನಿಂದ ಬರುವ ಇವರು ಕತ್ತರಿಸಿ ನಾರು ಮಾಡಿ ಹಣ ಸಂಪಾದಿಸುತ್ತಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ನಮ್ಮ ಶಿಡ್ಲಘಟ್ಟಕ್ಕಂತೂ ಇವರ ತಂಡ ವರ್ಷಕ್ಕೊಮ್ಮೆ ಎಂಬಂತೆ ಬರುತ್ತದೆ. ಯಾರದೋ ತೋಟದಲ್ಲಿ ಒಂದಷ್ಟು ದಿನ ಬೀಡು ಬಿಟ್ಟಿದ್ದುಇಲ್ಲಿ ಬೆವರು ಚೆಲ್ಲಿ ಹೋಗುತ್ತಾರೆ. ನಾವು ಮಕ್ಕಳಿದ್ದಾಗಿಂದ ಕಂಡಿದ್ದು ಇದೆಲ್ಲ.




ಕತ್ತಾಳೆ ಕತ್ತರಿಸುವುದು ನೋಡಿದಷ್ಟು ಸುಲಭವಲ್ಲ.

ಈ ಕತ್ತಾಳೆ ನಾರಿನಿಂದ ಎತ್ತು ಎಮ್ಮೆಗಳಿಗೆ ಕಟ್ಟಲು ಹಗ್ಗ, ಕೊರಳಕಣ್ಣಿ, ಮೂಗುದಾಣ, ರಥ ಎಳೆಯುವ ಮಿಣಿ, ಬಣ್ಣ ಬಳಿಯುವ ಬ್ರಷ್ ಇತ್ಯಾದಿ ತಯಾರಿಸುತ್ತಾರೆ. ಕಬ್ಬನ್ನು ಅರೆಯುವ ರೀತಿಯಲ್ಲಿಯೇ ಇರುವಂತಹ, ಡೀಸಲ್ ಎಂಜಿನ್‌ನಿಂದ ನಡೆಯುವ ಯಂತ್ರದಿಂದ ಕತ್ತಾಳೆಯಲ್ಲಿರುವ ನೀರಿನಾಂಶವನ್ನು ತೆಗೆದು ನಾರನ್ನು ಬಿಸಿಲಲ್ಲಿ ಒಣಗಿಸುತ್ತಾರೆ. ದುರ್ನಾತ ಬೀರುವ ಅದರ ತ್ಯಾಜ್ಯವನ್ನು ಏನು ಮಾಡುವರೆಂದು ಕುತೂಹಲದಿಂದ ಕೇಳಿದೆ. ಈ ತಂಡದ ಯಜಮಾನ ರಾಜಣ್ಣ, "ನಮಗೆ ಜಾಗ ಕೊಟ್ಟಿರುವ ಜಮೀನೋರು ಗೊಬ್ಬರ ಮಾಡ್ಕೊಂತಾರೆ. ಅದಕ್ಕೆ ಅವರು ನಮಗೆ ಜಾಗ ಕೊಟ್ಟಿರೋದು" ಎಂದು ಹೇಳಿದ. ಇದೊಂತರಹ ಪರಸ್ಪರ ಸಹಕಾರ. "ನೀ ನನಗಾದರೆ ನಾ ನಿನಗೆ" ಎಂಬಂತೆ.



ಬೇಲಿಯಂಚಿಗೆ ಯಾರಿಗೂ ಬೇಡವೆಂಬಂತೆ ಬೆಳೆದ ಕತ್ತಾಳೆಗೆ ಈಗ ಬೆಲೆ.


ಏಕ ದಳ ಸಸ್ಯ (ಅದು ನಮ್ಮ ರಾಜಕೀಯ "ದಳ"ದಂತಲ್ಲ) ಗುಂಪಿನ ಅಮರಿಲ್ಲಿಡೇಸಿ ಕುಟುಂಬಕ್ಕೆ ಸೇರಿದ ಕತ್ತಾಳೆ ಸಸ್ಯಗಳೆಲ್ಲ "ಅಗೇವ್" ಎಂದೇ ಪ್ರಸಿದ್ಧಿ. ಮೂಲತಃ ಮೆಕ್ಸಿಕೋ ದೇಶದ ಕತ್ತಾಳೆ, ಬಂಜರು ಪ್ರದೇಶಗಳು, ಉಷ್ಣವಲಯಗಳ ಪ್ರಮುಖ ಸಸ್ಯಜಾತಿ. ಇದರ ಬೆಳವಣಿಗೆಗೆ ಯಾವ ಶ್ರಮದ ಅಗತ್ಯವೂ ಇಲ್ಲ. ತನ್ನ ಪಾಡಿಗೆ ತಾನು ಬೆಳೆಯುತ್ತಾ ಗಟ್ಟಿಕಾಂಡವಾಗಿ ರೂಪುಗೊಳ್ಳುತ್ತದೆ. ಇದನ್ನು ಪೋರ್ಚುಗೀಸರು ೧೫ನೆಯ ಶತಮಾನದಲ್ಲಿ ಭಾರತಕ್ಕೆ ತಂದರು ಎಂದು ಹೇಳಲಾಗುತ್ತದೆ.
ಈ ಕತ್ತಾಳೆ ಎಂಬುದು ಕಲ್ಪವೃಕ್ಷವೇ ಸರಿ. ಇದರಿಂದ ನಾರು ತೆಗೆದು ಹಗ್ಗ, ಚೀಲ, ಬುಟ್ಟಿ ಮುಂತಾದವನ್ನು ತಯಾರಿಸುವುದಂತೂ ಸರಿ. ಅದರ ರಸದಿಂದ "ಹೆಕೊಜೆನಿನ್" ಎಂಬ ಔಷಧೀಯ ರಸವನ್ನು ದೊಡ್ಡ ಕಂಪನಿಗಳು ಉತ್ಪಾದಿಸುತ್ತಾರೆ. (ಇದು ನಮ್ಮ ಆಯುರ್ವೇದದಲ್ಲಿ ಯಾಕೆ ಪ್ರಸ್ತಾಪ ಆಗಿಲ್ಲ ಎನ್ನಲಿಕ್ಕೆ ಕಾರಣ ಗೊತ್ತಾಯಿತಲ್ಲ? ಅದು ನಮ್ಮವರಿಗೆ ಗೊತ್ತೇ ಇರಲಿಲ್ಲ.) ಇನ್ನು ಈ ರಸವನ್ನು ಕುದಿಸಿದರೆ ಮೇಲ್ಪದರದಲ್ಲಿ ಒಂದು ಬಗೆಯ ಅಂಟು ಬರುತ್ತದೆ. ಅದನ್ನೂ ದೊಡ್ಡ ಪ್ರಮಾಣದಲ್ಲಿ ನಿರಂತರ ಪೂರೈಸುವವರು ಸಿಕ್ಕರೆ ಉದ್ಯಮಗಳು ಖರೀದಿ ಮಾಡಿ ವ್ಯಾಕ್ಸ್ ಉತ್ಪಾದಿಸಬಹುದು.



ಮುಳ್ಳು ತೆಗೆದ ಕತ್ತಾಳೆಗೆ ಈಗ ಸಂಸ್ಕಾರ


ಇಷ್ಟೆಲ್ಲ ಉಪಯುಕ್ತವಾಗಬಲ್ಲ ಕತ್ತಾಳೆಯನ್ನು ಕತ್ತರಿಸುವುದು ಬಹು ನಾಜೂಕಿನ ಕೆಲಸ. ಅವರು ಕತ್ತರಿಸುವುದು ನೋಡಿದರೆ, ಮಕ್ಕಳಾಟದಂತೆ ಕಾಣುತ್ತದೆ. ಆದರೆ ನಾವು ಹತ್ತಿರ ಹೋದರೆ ಮುಳ್ಳುಗಳು ಮೈಕೈಗೆಲ್ಲ ಮುತ್ತಿಕ್ಕಿ ಮಾತನಾಡಿಸುತ್ತವೆ! ಕತ್ತಾಳೆಯ ದುರ್ನಾತ ಬೀರುವ ತ್ಯಾಜ್ಯ ಮೈಕೈಯೆಲ್ಲಾ ತುರಿಕೆ, ಗುಳ್ಳೆಗಳನ್ನೆಬ್ಬಿಸುತ್ತವೆ. ಆದರೂ ಆ ಜನರಿಗೆ ಕತ್ತಾಳೆಯ ಸಹವಾಸ ಲೀಲಾಜಾಲ. ಶ್ರಮಜೀವನ ಅಂದರೆ ಇದೇ ತಾನೆ?




ನಾರಲ್ಲಿ ಅಳಿದುಳಿದ ನೀರಿನಾಂಶವೂ ಹೀಗೆ ಯಂತ್ರದ ಮೂಲಕ ಹಿಂಡಿ ಹಿಂಡಿ ಹೊರಕ್ಕೆ.


ಮಾವಿನ ಬೆಳೆ ಮುಗಿದ ಮೇಲೆ ನಮ್ಮೂರಿನಿಂದ ಹೊರಡುವ ಈ ಅಲೆಮಾರಿ ಜನ ಕಡಲೆಕಾಯಿ ಕೀಳುವ ಸಮಯದಲ್ಲಿ ಹಿರಿಯೂರು, ಚಳ್ಳಕೆರೆ, ಚಿತ್ರದುರ್ಗದ ಕಡೆ ತೆರಳುತ್ತಾರೆ. ಅಲ್ಲಿನ ಕತ್ತಾಳೆ ಕೂಡ ಈ ತಮಿಳು ವಲಸಿಗರ ಕೈಯಲ್ಲೇ ಮುಕ್ತಿ ಕಾಣಬೇಕು. ನಾವು ಗಡಿವಿವಾದ ಎಂದು ತಮಿಳ್ನಾಡು ಜತೆ ಕಚ್ಚಾಡುತ್ತಿರುವಾಗ ಕೆಳಸ್ತರದಲ್ಲಿ ಪರಸ್ಪರ ಅವಲಂಬಿತ ಬದುಕು ಸಹಬಾಳ್ವೆಗೆ ಮೂಕ ಸಾಕ್ಷಿ.


ಸಂಸ್ಕರಿಸಿದ ಎಳೆಗಳು ಎಳೆಯರ ಕಾವಲಿನಲ್ಲಿ ಎಳೆ ಬಿಸಿಲಿಗೆ.

Tuesday, September 8, 2009

ಕೇರಳದ ಅಲೆಪ್ಪಿಯಲ್ಲಿ ಇಂಡಿಯನ್ ಕಾಫಿ ಹೌಸ್


ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿ ಡೆಕ್ಕನ್ ಹೆರಾಲ್ಡ್ ಕಟ್ಟಡದ ಪಕ್ಕದ ಇಂಡಿಯನ್ ಕಾಫಿ ಹೌಸ್ ಎಲ್ಲರಿಗೂ ಚಿರಪರಿಚಿತ. ಚಿಕೋರಿ ರಹಿತ ಅಪ್ಪಟ ಕಾಫಿ, ಅದನ್ನು ತಂದುಕೊಡುವವರ ವೇಷಭೂಷಣ ನಮ್ಮನ್ನು ಆಕರ್ಷಿಸಿವೆ. ಕಳೆದ ಏಪ್ರಿಲ್‌ನಲ್ಲಿ ಈ ಇಂಡಿಯನ್ ಕಾಫಿ ಹೌಸ್ ಮುಚ್ಚುತ್ತಿದ್ದಾರೆ ಎಂದು ತಿಳಿದು ನೋವಾಯಿತು. ಇದು ಇತಿಹಾಸಕ್ಕೆ ಸರಿದುಹೋಯಿತೇ ಎಂಬ ಬೇಸರಕಾಡಿತು.

ಮೇ ತಿಂಗಳಲ್ಲಿ ಕೇರಳಕ್ಕೆ ಹೋಗಿದ್ದಾಗ ಅಲೆಪ್ಪಿಯ ರಸ್ತೆಯಲ್ಲಿ ನಡೆದುಹೋಗುವಾಗ ಇಂಡಿಯನ್ ಕಾಫಿ ಹೌಸ್ ಎಂಬ ಫಲಕ ಕಂಡು ಪುಳಕಿತನಾದೆ. ಹಳೆಯ ಕಾಲದ ಕಟ್ಟಡದ ಒಳಗೆ ಎರಡು ಮೂರು ಕೋಣೆಗಳು. ಅದರಲ್ಲಿ ಮರದ ಟೇಬಲು ಚೇರುಗಳು. ನನಗೆ ನಮ್ಮಲ್ಲಿ ಕಳೆದುಹೋದದ್ದು ಪರದೇಶದಲ್ಲೆಲ್ಲೋ ಸಿಕ್ಕಿದಂತಹ ಭಾವ.

ಬೆಂಗಳೂರಲ್ಲಿ ಹೇಳುತ್ತಿದ್ದ ರೀತಿ ಇಲ್ಲೂ ಕಟ್ಲೆಟ್ ಮತ್ತು ಕಾಫಿ ಕೇಳಿದೆ. ಅದೇ ರೀತಿಯ ವೇಷಭೂಷಣ. ಅಲ್ಲಿ ಸೊಂಟ ಮತ್ತು ಪೇಟದ ಮೇಲೆ ಕೆಂಪು ಪಟ್ಟಿ ಇದ್ದರೆ ಇಲ್ಲಿ ಹಸಿರು ಬಣ್ಣ.


"ಎಷ್ಟು ವರ್ಷವಾಯಿತು ಇದನ್ನು ತೆರೆದು" ಎಂದು ಅವರನ್ನು ವಿಚಾರಿಸಿದೆ. ೧೯೬೨ರಲ್ಲಿ ಅಂದರು. ಹಾಗೇ ಇದರ ಇತಿಹಾಸದ ಬಗ್ಗೆ ಕೇಳಿದೆ. ತಿಳಿದ ವಿಷಯ ಕುತೂಹಲಕರವಾಗಿತ್ತು.
ಇಂಡಿಯನ್ ಕಾಫಿಹೌಸ್‌ನ ವೈಷಿಷ್ಟ್ಯವೆಂದರೆ ಇಲ್ಲಿ ನೌಕರರೇ ಮಾಲೀಕರು!
ಬ್ರಿಟಿಷರು ಆಳುವಾಗ ೧೯೪೦ರಲ್ಲಿ ಕಾಫಿಬೋರ್ಡ್‌ನವರು ಮೊಟ್ಟಮೊದಲು ಇಂಡಿಯನ್ ಕಾಫಿಹೌಸ್ ಹೋಟೆಲುಗಳನ್ನು ಹಲವಾರು ಕಡೆ ಪ್ರಾರಂಭಿಸಿದರು. ಆದರೆ ೧೯೫೦ರಲ್ಲಿ ಕಾಫಿ ಬೋರ್ಡ್ ಹಲವು ಕಡೆ ಈ ಕಾಫಿ ಹೌಸ್‌ಗಳನ್ನು ಮುಚ್ಚುವುದು ಮತ್ತು ನೌಕರರನ್ನು ಕೆಲಸದಿಂದ ವಜಾಗೊಳಿಸುವ ತೀರ್ಮಾನ ತೆಗೆದುಕೊಂಡಿತು. ಆಗ ಕೇರಳದ ಕಮ್ಯೂನಿಸ್ಟ್ ನಾಯಕ ಎ.ಕೆ.ಗೋಪಾಲನ್ ನಂಬಿಯಾರ್‌ರ ನೇತೃತ್ವದಲ್ಲಿ ದೇಶದ ಇಂಡಿಯನ್ ಕಾಫಿಹೌಸ್‌ನ ನೌಕರರೆಲ್ಲ ಸಂಘಟಿತರಾದರು. ಇಂಡಿಯನ್ ಕಾಫಿ ಬೋರ್ಡ್ ನೌಕರರ ಸಹಕಾರಿ ಸಂಘ ಸ್ಥಾಪಿಸಿದರು. ತಮ್ಮಲ್ಲಿದ್ದ ಪೈಸೆ ಪೈಸೆ ಹಣ ಸಂಗ್ರಹಿಸಿ ಮೊಟ್ಟಮೊದಲು ೧೯೫೭ರಲ್ಲಿ ಬೆಂಗಳೂರಿನಲ್ಲಿ ಸಹಕಾರಿ ಸಂಘ ಸ್ಥಾಪಿಸಿ ನಂತರ ಇಂಡಿಯನ್ ಕಾಫಿಹೌಸ್ ಪ್ರಾರಂಭಿಸಿದರು. ಆನಂತರ ದಿಲ್ಲಿ, ತ್ರಿಷೂರ್ ಹೀಗೆ ನಾನಾ ಕಡೆ ಇಂಡಿಯನ್ ಕಾಫಿಹೌಸ್‌ಗಳು ತಲೆಯೆತ್ತಿದವು.
ಈಗ ಕೇರಳದಲ್ಲಿ ತ್ರಿಷೂರ್‌ನಿಂದ ತಿರುವನಂತಪುರದವರೆಗೂ ೫೧ ಇಂಡಿಯನ್ ಕಾಫಿಹೌಸ್‌ಗಳಿವೆ.
ಎಲ್ಲೆಡೆಯೂ ಅದೇ ಗುಣಮಟ್ಟದ ಚಿಕೋರಿರಹಿತ ರುಚಿಕರ ಕಾಫಿ, ತಿಂಡಿ ಮತ್ತು ನಗುಮೊಗದ ಗಂಜಿಹಾಕಿ ಇಸ್ತ್ರಿಮಾಡಿದ ಬಿಳಿ ಸಮವಸ್ತ್ರ ಹಾಗೂ ಪೇಟ ಧರಿಸಿದ ನೌಕರರು(ಮಾಲೀಕರು) ಜೊತೆಯಲ್ಲಿ ಉತ್ತಮ ಸೇವೆ.
ಕೇರಳದಿಂದ ವಾಪಸ್ ಬಂದಮೇಲೆ ಒಂದು ಸಂತಸದ ಸುದ್ದಿ ತಿಳಿಯಿತು. ಚರ್ಚ್‌ಸ್ಟ್ರೀಟ್‌ನಲ್ಲಿರುವ ಬ್ರಿಗೆಡ್ ಗಾರ್ಡನ್ ಟವರ್ಸ್‌ನಲ್ಲಿ ಇಂಡಿಯನ್ ಕಾಫಿ ಹೌಸ್ ಮತ್ತೆ ಪ್ರಾರಂಭಿಸಿದ್ದಾರಂತೆ.
ಇನ್ನೇಕೆ ತಡ ಒಂದು ಕಪ್ ಹಬೆಯಾಡುವ ಬಿಸಿಬಿಸಿ ಕಾಫಿ ಸೇವಿಸೋಣ ಬನ್ನಿ.
ಈ ಚಿತ್ರಲೇಖನ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಕಳೆದ ತಿಂಗಳು ಶಿವು ಮತ್ತು ನಾನು ಸ್ನೇಕ್ ಬೋಟ್ ಸ್ಪರ್ಧೆ ನೋಡಲು ಕೇರಳದ ಅಲೆಪ್ಪಿಗೆ ಹೋದಾಗ ಇಂಡಿಯನ್ ಕಾಫಿಹೌಸ್‌ಗೆ ಹೋಗಿದ್ದೆವು. ಸುಧಾ ವಾರಪತ್ರಿಕೆಯನ್ನು ಅಲ್ಲಿನವರ ಚಿತ್ರ ಅದರಲ್ಲಿ ಪ್ರಕಟವಾಗಿರುವುದನ್ನು ತೋರಿಸಿದೆವು. ಅವರ ಖುಷಿ ಹೇಳತೀರದು. ನಮಗೋ ರಾಜಮರ್ಯಾದೆ! ಭಾಷೆ ಬರದಿದ್ದರೂ ಚಿತ್ರವನ್ನು ನೋಡಿ ಆನಂದಪಟ್ಟರು. ಅವರ ಮ್ಯಾನೇಜರ್‌ನಿಂದ ಹಿಡಿದು ಎಲ್ಲರೂ ಕೈಬದಲಿಸಿಕೊಂಡು ನೋಡಿದರು. ಕಡೆಗೆ ಕೇಳಲೋ ಬೇಡವೋ ಎನ್ನುವಂತೆ "ನಮಗೀ ಪುಸ್ತಕ ಕೊಡುತ್ತೀರಾ" ಎಂದು ಕೇಳಿದರು. ಕೊಟ್ಟು ಬಂದೆ.


ಅಲೆಪ್ಪಿಯಲ್ಲೇ ಬೀಚ್ ಮುಂಭಾಗದಲ್ಲಿ ಇನ್ನೊಂದು ಇಂಡಿಯನ್ ಕಾಫಿ ಹೌಸ್ ಇದೆ. ಅಲ್ಲಿಗೂ ಹೋಗಿದ್ದೆವು. ಅದರ ವಿನ್ಯಾಸ ನವೀನವಾಗಿದೆ.

Thursday, September 3, 2009

ಕಾರ್ ಕಾರ್.. ಎಲ್ನೋಡಿ ಕಾರ್...!

ಆಗ ತಾನೆ ಅಂಗಡಿ ತೆಗೆದಿದ್ದೆ. ಬಂದಿದ್ದ ಐಟಮ್ಸ್ ಜೋಡಿಸಿಡುತ್ತಿದ್ದೆ.
"ಟೆನ್ ಪ್ಯಾಕೆಟ್ಸ್ ಗ್ಲೂಕೋಸ್" ಎಂದು ಗಡುಸು ಧ್ವನಿ ಕೇಳಿತು. "ಯಾರಪ್ಪ ಇದು... ಪೆಹೆಲಾ ಬೋಣಿ ಪಂಚಕಲ್ಯಾಣಿ..." ಅಂದುಕೊಳ್ಳುತ್ತಾ ನೋಡಿದೆ.
ಎತ್ತರದ ವ್ಯಕ್ತಿ. ಜೀನ್ಸ್ ಟೀಶರ್ಟ್. ಊರಿಗೆ ಹೊಸಬನ್ಂತಿದ್ದಾನೆ. ರಸ್ತೆಯಲ್ಲಿ ಕಾರನ್ನೂ ನಿಲ್ಲಿಸಿದ್ದಾನೆ. ಅದು ರೇಸ್ ಕಾರು!
ಗ್ಲೂಕೋಸ್ ಕವರಿನಲ್ಲಿ ಜೋಡಿಸುತ್ತಿದ್ದೆ. ಆಗವನು, "ಅರ್ಜೆಂಟ್, ಅರ್ಜೆಂಟ್.." ಅಂದ.
"ಕಾರ್ rally...?" ಎಂದು ಪ್ರಶ್ನಿಸಿದೆ.
"ಎಸ್ ಎಸ್ ಕೆ-೧೦೦೦ rally" ಅಂದ.
* * * *
ಶನಿವಾರ. ಕೆ-೧೦೦೦ rallyಯ ಮೂರನೆ ದಿನ ಹಾಗೂ ಕಡೆಯ ದಿನ. ಎರಡು ದಿನದಿಂದಲೂ ಸಂಜೆ ವೇಳೆ ಮಳೆ ಬಿದ್ದಿತ್ತು. ಮೋಡ ಮುಸುಕಿತ್ತು. ಫೋಟೋ ತೆಗೆಯಲಾಗದಿದ್ರೂ ನೋಡಿಯಾದ್ರೂ ಬರೋಣವೆಂದು ಅಜಿತ್ ಜೊತೆ ಹೊರಟೆ.
ಅವರ ಕ್ಯಾಂಪ್ ಇದ್ದದ್ದು ದ್ಯಾವಪ್ಪನ ಗುಡಿ ಬಳಿ. ಆಗಲೇ ಶುರುವಾಗಿದ್ದರಿಂದ ಅಲ್ಲೆಲ್ಲಾ ಖಾಲಿ ಇತ್ತು. ಎಂಡ್ ಪಾಯಿಂಟ್‌ಗೆ ಹೋಗೋಣವೆಂದುಕೊಂಡು ಅಬ್ಲೂಡು ಬಳಿ ಹೋದರೆ ಪೋಲೀಸರು ಬಿಡಲಿಲ್ಲ. ನನ್ನ ಕ್ಯಾಮೆರಾ ನೋಡಿ ಎಸ್.ಐ., "ಇಲ್ಲಿ ಬೇಡ್ರೀ. ನಿಮ್ಮೊಬ್ಬರನ್ನು ಬಿಟ್ರೆ ಬೇರೆಯವರನ್ನೂ ಬಿಡಬೇಕಾಗುತ್ತೆ. ಶೆಟ್ಟಳ್ಳಿ ಹತ್ರ ಹೋಗಿ. ಅಲ್ಲಿ ಚೆನ್ನಾಗಿ ತೆಗೀಬಹುದು" ಅಂದರು.
ಅಲ್ಲಿಂದ ಹೊರಟು ಮಲ್ಲಳ್ಳಿ ಮುಖಾಂತರ ಶೆಟ್ಟಳ್ಳಿಗೆ ಬಂದೆವು. ಅಲ್ಲಿ ಬೈಕ್ ಬಿಟ್ಟು ಅಡ್ಡ ದಾರಿ ಹಿಡಿದೆವು. ತೋಟಗಳ ಮುಖಾಂತರ ಹಾದು ರ‍್ಯಾಲಿಯ ರಸ್ತೆಗೆ ಬಂದೆವು. ಅಲ್ಲಿ ಆಗಲೇ ಸಾಕಷ್ಟು ಜನ ಜಮಾಯಿಸಿದ್ದರು.
* * * *
ಐಎನ್‌ಆರ್‌ಸಿ(ಇಂಡಿಯನ್ ನ್ಯಾಷನಲ್ rally ಚಾಂಪಿಯನ್‌ಷಿಪ್)ಯ ಎರಡನೇ ಲೆಗ್ ಆಗಿರುವ ಈ rallyಯನ್ನು ನಡೆಸಿದ ಸಂಘಟಕರು ಕರ್ನಾಟಕ ಮೋಟಾರ್ ಸ್ಪೋರ್ಟ್ಸ್ ಅಸೋಸಿಯೇಷನ್, ಐಎಂಜಿ ಹಾಗೂ ಪ್ರೋ ಸ್ಪೋರ್ಟ್ಸ್ ಪ್ರಮೋಷನ್.
ಚಿಕ್ಕಬಳ್ಳಾಪುರ ಜಿಲ್ಲೆಯ ನಮ್ಮೂರು ಶಿಡ್ಲಘಟ್ಟದಲ್ಲಿ ಮಲ್ಬರಿ, ಸಿಲ್ಕ್ ಮತ್ತು ಕ್ಲೇ ಎಂದು ಮೂರು ಸ್ಟೇಜ್‌ಗಳನ್ನು ನಿರ್ಮಿಸಲಾಗಿತ್ತು.
ಸುಮಾರು ೬೦ ಮಂದಿ rallyಯನ್ನು ಆರಂಭಿಸಿದರಾದರೂ, ಬಹುತೇಕ ಚಾಲಕರು ಇಲ್ಲಿ ಸವಾಲು ಎದುರಿಸಲು ವಿಫಲರಾದರು.
ಮಳೆ ಬಿದ್ದಿದ್ದರಿಂದ ಕಾರು ಓಡಿಸುವುದು ಅಷ್ಟು ಸುಲಭವಿರಲಿಲ್ಲ. ಚಕ್ರಗಳು ಸ್ಕಿಡ್ ಆಗುತ್ತಿತ್ತು.
ಆದರೂ ದೇಶದ ಹೆಸರಾಂತ ರೇಸಿಂಗ್ ತಂಡವಾದ ಟೀಮ್ ಎಂಆರ್‌ಎಫ್ ೩೫ನೇ ಕರ್ನಾಟಕ-೧೦೦೦ rallyಯಲ್ಲಿ ಮೆರೆಯಿತು.
ಎಂಆರ್‌ಎಫ್ ತಂಡದ ಅರ್ಜುನ್ ಬಾಲು ಹಾಗೂ ಸುಜಿತ್‌ಕುಮಾರ್ ಮೊದಲ ಸ್ಥಾನ ಪಡೆದರೆ, ಎಂಆರ್‌ಎಫ್‌ನವರೇ ಆದ ಗೌರವ್‌ಗಿಲ್ ಮತ್ತು ಮೂಸಾಶರೀಫ್ ಎರಡನೇ ಸ್ಥಾನ ಪಡೆದರು.


ಮಲಗಿ ಫೋಟೋ ತೆಗೆಯುವ ಪರಿ!

ಪ್ರಥಮ ಸ್ಥಾನ ಪಡೆದ ಅರ್ಜುನ್‌ಬಾಲು ಮತ್ತು ಸುಜಿತ್‌ಕುಮಾರ್ ಕಾರು.


ಎಷ್ಟು ಎತ್ತರ?



ದ್ವಿತೀಯ ಸ್ಥಾನ ಪಡೆದ ಗೌರವ್‌ಗಿಲ್ ಮತ್ತು ಮೂಸಾಶರೀಫ್ ಕಾರು.



ಈ ಜಂಪ್ ಸರಿಯಾಗಿ ಸೆರೆಹಿಡಿಯಬೇಕು!


ಓಹೋ..! ಸಾಕಾ..! ಅತ್ತೆ, ಸೊಸೆ, ಮಗು, ಪಕ್ಕದ್ಮನೆಯಕ್ಕ, ಅವರ ಮಗು...


ಏನೇನ್ ಫೋಟೋ ತೆಗ್ದು ಯಾವ್ ಪೇಪರ್ನಾಗೆ ಹಾಕ್ತಾರೋ...?


ಜಿಪ್ಸಿ ಜಂಪ್!


ಹಿಂಬದಿಯಲ್ಲೂ ಫೋಟೋ!


ಹೆಂಗೆ ಈ ಡ್ರೈವರ್ರು ಮತ್ತು ನ್ಯಾವಿಗೇಟರ್ರು?


ದೊಡ್ಡೊವ್ರು ಕಾರ್ ನೋಡಿದ್ರೆ, ಮಗುಗೆ ತನ್ನದೇ ಲೋಕ. ಆನಂದಮಯ ಈ ಜಗಹೃದಯ...


ನೆಲಕ್ಕೆ ಪ್ಯಾರೆಲಲ್!


ಭೂಸ್ಪರ್ಶ.


ಇದು ಎಂಥಾ ಲೋಕವಯ್ಯಾ..?


ನಾವು ಬಟ್ಟೆ ಗಲೀಜಾಗುತ್ತೆ ಅಂತ ಹೀಗೆ ಕೂತಿರೋದಷ್ಟೆ, ತಪ್ಪು ತಿಳ್ಕೋಬೇಡ್ರಿ!


ಬಾಲಜಗತ್ತು.


ಡಬಲ್‌ಡೆಕ್ಕರ್.


ವೀಡಿಯೋ ಕಟಿಂಗ್ಸ್!


ಎಲ್ಲಮ್ಮೀ ಇನ್ನೂ ಬರ್ಲಿಲ್ಲ?


ಆಹಾ! ಸೂಪರ್ ಜಂಪ್!


ಜೋರಾಗಿ... ಇನ್ನೂ ಜೋರಾಗಿ...!


ಪಾಪ! ಪೋಲಿಸ್ ಟೋಪಿ!


ನೆಲದಿಂದ ಎಷ್ಟು ಎತ್ತರ?


ಗುಣಿಯಲ್ಲಿ ಬಿದ್ದ ಗೋವಿಂದನನ್ನು ಎಳೆಯಲು ಪ್ರಯತ್ನ!


ಸಕತ್ ಸಕತ್ ಜಂಪ್!