Sunday, July 7, 2013

ಅಪರೂಪದ ಅಂಚೆ ಚೀಟಿ


ಮೇಲೂರು ಎಂ.ಆರ್.ಪ್ರಭಾಕರ್.

ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನಲ್ಲಿ ಅಪರೂಪದ ಅಂಚೆ ಚೀಟಿ ಸಂಗ್ರಹಕಾರರೊಬ್ಬರು ಇದ್ದಾರೆ. ವಿಭಿನ್ನ ಮತ್ತು ವಿಶಿಷ್ಟ ಬಗೆಯ ಅಂಚೆ ಚೀಟಿಗಳನ್ನು ಸಂಗ್ರಹಿಸಿದ್ದರಿಂದಲೇ ಅವರು ದೇಶ ವಿದೇಶಗಳಲ್ಲಿ ಹಲವಾರು ಪ್ರಶಸ್ತಿ-ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.
ಅವರ ಹೆಸರು ಮೇಲೂರು ಎಂ.ಆರ್.ಪ್ರಭಾಕರ್. ಅಂಚೆ ಚೀಟಿ ಸಂಗ್ರಹಣೆ ವಿಷಯ ಪ್ರಸ್ತಾಪಿಸಿದರೆ ಸಾಕು, ಅಂಚೆ ಚೀಟಿಗಳೊಂದಿಗೆ ತಾವು ಹೊಂದಿರುವ ನಂಟನ್ನೇ ಅವರು ಬಿಚ್ಚಿಡುತ್ತಾರೆ.
ಪುರಾತನ ಕಾಲದ ನೀರಾವರಿ ಪದ್ಧತಿ, ಬೇಸಾಯದ ವಿಧಾನ, ಸುಮಾರು ೧೨೦ ವರ್ಷಗಳ ಹಿಂದೆ ನೀರೆತ್ತಲು ಸ್ವಯಂ ಚಾಲಿತ ಯಂತ್ರ, ಕೃಷಿ ಪರಿಕರಗಳು ಸೇರಿದಂತೆ ಕಾಲಾನುಕ್ರಮದಲ್ಲಿ ವಿಶ್ವದ ಕೃಷಿ ಚರಿತ್ರೆ ಮತ್ತು ವರ್ತಮಾನವನ್ನು ಅಂಚೆ ಚೀಟಿಗಳ ಮೂಲಕ ವಿವರಣೆಗಳೊಂದಿಗೆ ಪ್ರದರ್ಶಿಸಿ ಸಿಂಗಾಪೂರ್, ಜಪಾನ್ ಮತ್ತು ಥಾಯ್ಲಾಂಡ್ ದೇಶಗಳಲ್ಲಿ ಪ್ರಶಸ್ತಿಗಳನ್ನು ಗಳಿಸಿದ್ದಾರೆ.
ಪ್ರಭಾಕರ್‌ ಅವರು ಅಂಚೆ ಚೀಟಿ ಸಂಗ್ರಹಣೆ ಜೊತೆ ನಾಣ್ಯ ನೋಟುಗಳ ಸಂಗ್ರಹಣೆ, ಸುಂದರ ಹಸ್ತಾಕ್ಷರ ಕಲೆ ಕ್ಯಾಲಿಗ್ರಫಿ ಮತ್ತು ಅಂಚೆ ಚೀಟಿಗಳನ್ನು ಬಳಸಿ ಕೊಲಾಜ್ ಚಿತ್ರಣಗಳ ವೈವಿದ್ಯಮಯ ಹವ್ಯಾಸವನ್ನು ಹೊಂದಿದ್ದಾರೆ.
 ೧೨೫೦ ಕ್ಕೂ ಹೆಚ್ಚು ಬಾರಿ ತಮ್ಮ ಸಂಗ್ರಹಣೆ ಪ್ರದರ್ಶಿಸಿದ್ದಾರೆ. ಎಸ್‌ಎಸ್‌ಎಲ್‌ಸಿಯವರೆಗೆ ವಿದ್ಯಾಭ್ಯಾಸ ಮಾಡಿರುವ ಅವರು  ಹಿಂದೂಸ್ಥಾನ ವಿಮಾನ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಲೇ ಅಂಚೆ ಚೀಟಿಗಳ ಪ್ರದರ್ಶನಕ್ಕಾಗಿ ವಿದೇಶಗಳಿಗೂ ಹೋಗಿ ಬಂದಿದ್ದಾರೆ.
ವಿಶ್ವಶಾಂತಿ, ಸ್ನೇಹ ಸೌಹಾರ್ಧ ಮತ್ತು ಭಾವೈಕ್ಯದ ಸಂದೇಶವನ್ನೂ ಅಂಚೆ ಚೀಟಿಗಳ ಮೂಲಕ ನೀಡಿದ್ದಾರೆ. ಇದಲ್ಲದೇ ಸೈಕಲ್‌ನಲ್ಲಿ ಒಮ್ಮೆ ಭಾರತ ಪ್ರವಾಸ, ಮತ್ತೊಮ್ಮೆ ಕರ್ನಾಟಕ ಪರ್ಯಟನೆ ಮಾಡಿದ್ದಾರೆ. ಅಖಂಡ ಕೋಲಾರ ಜಿಲ್ಲೆಯನ್ನು ಪಾದಯಾತ್ರೆ ಮೂಲಕ ಸುತ್ತಿದ್ದಾರೆ.
 ಡಾ.ರಾಜ್‌ಕುಮಾರ್ ಅವರೊಂದಿಗೆ ಮೇಲೂರು ಎಂ.ಆರ್.ಪ್ರಭಾಕರ್.

 ಗಗನಯಾತ್ರಿ ರಾಕೇಶ್ ಶರ್ಮ ಅವರೊಂದಿಗೆ ಮೇಲೂರು ಎಂ.ಆರ್.ಪ್ರಭಾಕರ್.
 ಥಾಯ್‌ಲ್ಯಾಂಡ್, ಸಿಂಗಪೂರ್, ಕೊರಿಯಾ, ಕೆನಡಾ ದೇಶಗಳ ಪದಕಗಳು, ಕರ್ನಾಟಕ ಸಕಾರದ ಪರಿಸರ ಪ್ರಶಸ್ತಿ, ಬೆಳಗಾಂನ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ ಸೇರಿದಂತೆ ವಿವಿಧ ಪುರಸ್ಕಾರಗಳು ಪ್ರಭಾಕರ್ ಅವರ ಸಂಗ್ರಹಕ್ಕೆ ಸಂದಿವೆ.
 ಅವರ ಸಂಗ್ರಹದಲ್ಲಿನ ವಿವಿಧ ದೇಶಗಳ ನೂರಾರು ಅಂಚೆಚೀಟಿಗಳನ್ನು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ವಿವರಣೆಗಳೊಂದಿಗೆ ಜೋಡಿಸಿಟ್ಟು ಕಥಾನಕವನ್ನಾಗಿಸಿದ್ದಾರೆ. 
 ವಿಮಾನಯಾನ, ಮಕ್ಕಳ ಚಿತ್ರಕಲೆ, ವಿಶ್ವಸಂಸ್ಥೆ, ಒಲಿಂಪಿಕ್ ಗೇಮ್ಸ್, ವಿಶ್ವ ಅಂಗವಿಕಲರ ಕಲ್ಯಾಣ, ಅಂಚೆ ಸಾಮಗ್ರಿ, ಪತ್ರಿಕೋದ್ಯಮ, ಅಂಚೆ ಚೀಟಿ ಅವಿಷ್ಕರಿಸಿದ್ದ ಸರ್.ರೊಲ್ಯಾಂಡ್‌ಹಿಲ್, ಸ್ಕೌಟ್ಸ್ ಮತ್ತು ಗೈಡ್ಸ್, ಮಾಹಿತಿ ತಂತ್ರಜ್ಞಾನ, ಪ್ರಕೃತಿ, ಪರಿಸರ, ನೃತ್ಯ, ಸಂಗೀತ, ಸಿನೆಮಾ, ವಿಶ್ವಶಾಂತಿದೂತ ಬಾಪು, ವಾಸ್ತುಶಿಲ್ಪ, ಆರೋಗ್ಯ, ವಜ್ರ ಮುತ್ತು ರತ್ನ, ಪರಿಸರ ಸಂರಕ್ಷಣೆ, ವ್ಯವಸಾಯ, ಹಣ್ಣು ತರಕಾರಿ, ಕ್ರಮಿ ಕೀಟಗಳು, ಪತಂಗ, ರಕ್ತದಾನ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಅಂಚೆ ಚೀಟಿಗಳು ಮತ್ತು ಸುಂದರ ಅಕ್ಷರಗಳಲ್ಲಿ ವಿವರಣೆಯನ್ನು ಒದಗಿಸಿ ಮಾಹಿತಿ ಕೋಶವನ್ನಾಗಿಸಿದ್ದಾರೆ.
 ಮೈಸೂರ್ ಅರಸರು, ಟಿಪ್ಪೂ ಕಾಲದ ನಾಣ್ಯಗಳು, ಅಮೇರಿಕಾ, ರಶ್ಶಿಯಾ, ಫ್ರಾನ್ಸ್, ಇಂಗ್ಲಂಡ್, ಇಟಲಿ, ವಿಯಟ್ನಾಂ, ಜಕಸ್ಲೋವಿಯ, ಕೊಲಂಬಿಯ, ಬರ್ಮಾ, ಜಪಾನ್, ಕ್ರೋಷಿಯಾ, ಯಮೆನ್, ಗ್ರೀಸ್, ಬ್ರೆಜಿಲ್, ಸೌದಿ ಅರೆಬಿಯಾ ಸೇರಿದಂತೆ ವಿವಿಧ ದೇಶಗಳ ನಾಣ್ಯ ಮತ್ತು ನೋಟುಗಳ ವೈವಿಧ್ಯಮಯ ಸಂಗ್ರಹವೇ ಇವರಲ್ಲಿದೆ.


ಮೇಲೂರು ಎಂ.ಆರ್.ಪ್ರಭಾಕರ್ ಅವರು ತಮ್ಮ ಹಸ್ತಾಕ್ಷರದಲ್ಲಿ ರಚಿಸಿರುವ ’ಅಂಚೆ ಜಾನಪದ’ ಪುಸ್ತಕ.

’ಗ್ರಾಮಾಂತರ ಜನತೆಗಾಗಿ ಅಂಚೆ ಚೀಟಿ ಸಂಗ್ರಹಣೆ’ ಎಂಬ ಇವರ ಉಪಯುಕ್ತ ಪುಸ್ತಕವನ್ನು ಕನ್ನಡ ಸಾಹಿತ್ಯ ಪರಿಷತ್ತು ಹೊರತಂದಿದೆ. ಸ್ವತಃ ಅವರೇ ರಚಿಸಿರುವ ’ಅಂಚೆ ಜಾನಪದ’ ಪುಸ್ತಕವನ್ನು ಕರ್ನಾಟಕ ಜಾನಪದ ಅಕಾಡೆಮಿಯು ಪ್ರಕಟಿಸಿದೆ. ಜಾನಪದಕ್ಕೆ ಸಂಬಂಧಿಸಿದ ಅಂಚೆಚೀಟಿಗಳ ಸಂಗ್ರಹವುಳ್ಳ ಈ ಬಣ್ಣದ ಚಿತ್ರಗಳ ಪುಸ್ತಕವನ್ನು ಅವರ ಹಸ್ತಾಕ್ಷರ ಬಳಸಿಯೇ ಮುದ್ರಿಸಿರುವುದು ವಿಶೇಷವಾಗಿದೆ. ನಮ್ಮ ದೇಶದ ನೂರಾರು ಅಂಚೆಚೀಟಿಗಳನ್ನು ಜಾನಪದ ಪರಂಪರೆಗನುಗುಣವಾಗಿ ವರ್ಗೀಕರಿಸಿ ಪುಸ್ತಕದಲ್ಲಿ ಮುದ್ರಿಸಲಾಗಿದೆ.
 ’ಗ್ರಾಮೀಣ ಭಾಗದ ಜನರಿಗಾಗಿ ಅಂಚೆ ಚೀಟಿ ಮತ್ತು ನಾಣ್ಯ ನೋಟುಗಳ ಸಂಗ್ರಹದ ಮೂಲಕ  ಹಿರಿಮೆ ತಿಳಿಸಲೆಂದೇ ೧೯೭೮ರಲ್ಲಿ ಪ್ರಥಮ ಬಾರಿಗೆ ಮೇಲೂರಿನಲ್ಲಿ ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘವನ್ನು ಸ್ಥಾಪಿಸಿ ಪ್ರದರ್ಶನ ನಡೆಸಿದ್ದೆವು. ಈಗ ಈ ಸಂಘದಿಂದ ೧೨೫೦ ಪ್ರದರ್ಶನಗಳನ್ನು ಗ್ರಾಮೀಣ ಭಾಗಗಳಲ್ಲಿ ನಡೆಸಿದ್ದೇವೆ. ವಿಶ್ವಶಾಂತಿ, ಸ್ನೇಹ ಸೌಹಾರ್ಧತೆ, ಭಾವೈಕ್ಯದ ಸಂದೇಶವನ್ನು ಸಮಾಜಕ್ಕೆ ತಲುಪಿಸುವುದು, ಸಂಸ್ಕೃತಿ, ಪರಿಸರ ಪ್ರೇಮ ಹಾಗೂ ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಅಂಚೆ ಚೀಟಿಗಳ ಮೂಲಕ ಪರಿಚಯಿಸುವುದು ನನ್ನ ಮುಖ್ಯ ಉದ್ದೇಶ’ ಎಂದು ಮೇಲೂರು ಎಂ.ಆರ್.ಪ್ರಭಾಕರ್ ತಿಳಿಸಿದರು.

ಮೇಲೂರು ಎಂ.ಆರ್.ಪ್ರಭಾಕರ್   ಫೋನ್ ನಂ. ೯೭೩೧೭೩೩೩೦೩

Tuesday, July 2, 2013

ಮೂರು ಕೆರೆಗಳ ಕಥೆ


ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ಎಸ್.ವೆಂಕಟಾಪುರದ ಬಳಿಯಿರುವ ತಿಪ್ಪಸಾನಿ ಕೆರೆ ಮತ್ತು ಅದರ ಏರಿಯ ಮೇಲಿನ ಪಾರಂಪರಿಕ ಬೇವಿನ ವೃಕ್ಷದ ವಿಹಂಗಮ ನೋಟ.


 ಮಲೆನಾಡಷ್ಟೇ ಪ್ರವಸೋದ್ಯಮಕ್ಕೆ ಸೂಕ್ತ ಎಂದುಕೊಳ್ಳುವವರೂ ಅಚ್ಚರಿಗೊಳ್ಳುವಂತಹ ಪ್ರದೇಶಗಳು ಶಿಡ್ಲಘಟ್ಟ ತಾಲ್ಲೂಕಿನಲ್ಲಿವೆ. ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ಎಸ್.ವೆಂಕಟಾಪುರದ ಬಳಿ- ಸುತ್ತ ಏಳುಬೆಟ್ಟಗಳ ಸಾಲು. ನಡುವೆ ಮೂರು ಕೆರೆಗಳು ಇದ್ದು ಅತ್ಯಂತ ರಮಣೀಯ ದೃಶ್ಯಾವಳಿಗಳಿಂದ ಕೂಡಿದೆ.
 ಶಿಡ್ಲಘಟ್ಟ ತಾಲ್ಲೂಕಿನ ಈ.ತಿಮ್ಮಸಂದ್ರದಿಂದ ಸಾದಲಿಗೆ ಹೋಗುವ ಮಾರ್ಗದ ಮಧ್ಯೆ ಸೂಳೆಕೆರೆಗಳೆಂದೇ ಪ್ರಸಿದ್ಧವಾದ ಮೂರು ಕೆರೆಗಳು ಕಾಣಸಿಗುತ್ತವೆ. ಅದರ ಸುತ್ತ ಆವರಿಸಿರುವ ಏಳು ಬೆಟ್ಟಗಳನ್ನು ನಲ್ಲಕೊಂಡಲು ಎಂದು ಕರೆಯುತ್ತಾರೆ. ಕಪ್ಪುಬಣ್ಣದ ಜಡೆಯನ್ನು ಹೆಣೆದಂತೆ ಅಥವಾ ಬೆಂಕಿಯಿಂದ ಸುಟ್ಟು ಕರಕಲಾದಂತೆ ಕಾಣುವ ಕಪ್ಪು ಬಣ್ಣದ ಕಲ್ಲುಗಳು ಈ ಬೆಟ್ಟಗಳ ಮೇಲೆ ಇರುವುದರಿಂದ ಇವಕ್ಕೆ ನಲ್ಲಕೊಂಡಲು ಎಂಬ ಹೆಸರು ಬಂದಿದೆ. ಇಲ್ಲಿರುವ ಮೂರು ಕೆರೆಗಳನ್ನು ಮೂವರು ವೇಶ್ಯೆಯರು ಕಟ್ಟಿಸಿದ್ದು, ತಿಪ್ಪಸಾನಿಕೆರೆ, ರಾಜಸಾನಿಕೆರೆ ಮತ್ತು ನಲ್ಲಸಾನಿಕೆರೆ ಎಂದು ಅವರ ಹೆಸರಿನಿಂದಲೇ ಇವು ಕರೆಯಲ್ಪಡುತ್ತವೆ.
 ಮೂವರೂ ವೇಶ್ಯೆಯರು ಅಕ್ಕತಂಗಿಯರಾಗಿದ್ದು ತಾವು ಗಳಿಸಿದ ಹಣ ಜನಸಾಮಾನ್ಯರ ಬದುಕಿಗೆ ಸದ್ವಿನಿಯೋಗ ಆಗಲೆಂದು ಕೆರೆಗಳನ್ನು ನಿರ್ಮಿಸಿದ್ದಾರೆ. ನಲ್ಲಸಾನಿಕೆರೆಗಿಂತ ಕೊಂಚ ಮೇಲ್ಭಾಗದಲ್ಲಿ ರಾಜಸಾನಿ ಕೆರೆಯಿದೆ. ಇದಕ್ಕಿಂತಲೂ ಕೊಂಚ ಮೇಲ್ಭಾಗದಲ್ಲಿ ತಿಪ್ಪಸಾನಿ ಕೆರೆಯಿದೆ. ಈ ಮೂರೂ ಕೆರೆಗಳು ಈಗಲೂ ಈ.ತಿಮ್ಮಸಂದ್ರ ಗ್ರಾಮ ಪಂಚಾಯಿತಿಯ ಹಲವಾರು ಹಳ್ಳಿಗಳ ಜನರಿಗೆ ವರದಾನವಾಗಿದ್ದು, ಕೃಷಿಗೆ ನೀರನ್ನು ಒದಗಿಸುತ್ತಿವೆ.
 ಕರ್ನಾಟಕ ಜೀವ ವೈವಿದ್ಯ ಮಂಡಳಿಯು ರಾಜ್ಯದ ಹತ್ತು ಮರಗಳನ್ನು ‘ಪರಂಪರೆ ಮರಗಳು’(ಹೆರಿಟೇಜ್ ಟ್ರೀಸ್) ಎಂದು ಜೈವಿಕ ವಿಜ್ಞಾನ ವೈವಿದ್ಯ ಕಾಯ್ದೆ ೨೦೦೨ರ ಕಲಂ ೬೩(೨)(ಜಿ) ಅನ್ವಯ ಘೋಷಿಸಿದೆ. ಈ ಹತ್ತು ಪರಂಪರೆ ಮರಗಳ ಪೈಕಿ ತಿಪ್ಪಸಾನಿ ಕೆರೆ ಏರಿಯ ಮೇಲಿರುವ ೨೦೦ ವರ್ಷಕ್ಕೂ ಹಳೆಯದಾದ ಬೇವಿನ ಮರವೂ ಸೇರಿದೆ.
 ಈ ಪರಂಪರೆಯ ವೃಕ್ಷದೊಂದಿಗೆ ಇನ್ನೂ ಹತ್ತು ಬೃಹತ್ ಗಾತ್ರದ ಬೇವಿನ ಮರಗಳಿವೆ. ಸುತ್ತಲೂ ಹೊಂಗೆ ತೋಪಿದೆ. ವೃಕ್ಷದ ಕೆಳಗೆ ಮುನೇಶ್ವರನ ಪುಟ್ಟ ದೇಗುಲವಿದೆ. ಆದರಿಂದಲೇ ಈ ಕಟ್ಟೆಯನ್ನು ಮುನಿಯಪ್ಪನ ಕಟ್ಟೆ ಎಂದು ಕರೆಯುತ್ತಾರೆ. ಇಲ್ಲಿ ಗಂಗಮ್ಮ ಮತ್ತು ಅಕ್ಕಯ್ಯಗಾರು ಎಂದು ಕರೆಯುವ ಪುಟ್ಟ ಗುಡಿಗಳೂ ಇವೆ. ದೇಗುಲದ ಮುಂಭಾಗದಲ್ಲಿ ದೇವಕಣಿಗಲೆ ಮರವಿದೆ. ಕಟ್ಟೆಯ ಬಲಭಾಗದಲ್ಲಿ ಬಿಲ್ಲುಬಾಣಗಳನ್ನು ಹಿಡಿದಿರುವ ಮೂವರು ವೀರರ ವೀರಗಲ್ಲೊಂದಿದೆ. ಎಷ್ಟೇ ಬಿರುಬಿಸಿಲಿದ್ದರೂ ಈ ಪ್ರದೇಶ ಮಾತ್ರ ಸದಾ ತಂಪಾಗಿರುತ್ತದೆ.
 ‘ಈ ಬೆಟ್ಟಗಳಲ್ಲಿ ಚಿರತೆ, ಜಿಂಕೆ, ಮೊಲ, ಕರಡಿ, ನರಿ ಮುಂತಾದ ಪ್ರಾಣಿಗಳು ವಾಸವಾಗಿದ್ದವು. ತಿಪ್ಪಸಾನಿಕೆರೆ ಅಥವಾ ತಿಪ್ಪರಾಸಕೆರೆಯ ಕಟ್ಟೆಯ ಮೇಲಿರುವ ಬೇವಿನ ಮರಗಳನ್ನು ನಾನು ಚಿಕ್ಕಂದಿನಿಂದಲೇ ನೋಡ್ದಿದೇನೆ. ಕೆರೆಗಳನ್ನು ಕಟ್ಟಿದ ಮಹಾತಾಯಿಯರೇ ಇವನ್ನೂ ನೆಟ್ಟಿರಬೇಕು.
 ರಾಜಸಾನಿ ಕೆರೆಯ ಬಗ್ಗೆ ನಮ್ಮಲ್ಲಿ ಒಂದು ಜನಪದ ಕತೆಯಿದೆ. ರಾಜಸಾನಿಯು ತನ್ನ ಸಹೋದರಿ ಕಟ್ಟಿಸಿದ್ದ ನಲ್ಲಸಾನಿಕೆರೆಗಿಂತ ದೊಡ್ಡದಾದ ಕೆರೆಯನ್ನು ತನ್ನ ಹೆಸರಿನಲ್ಲಿ ಕಟ್ಟಿಸಲು ತೀರ್ಮಾನಿಸಿ ಬೆಟ್ಟಗುಡ್ಡಗಳ ನಡುವಿನ ಸುಂದರ ಪ್ರದೇಶವನ್ನು ಆಯ್ಕೆ ಮಾಡಿಕೊಂಡು ತನ್ನಲ್ಲಿದ್ದ ಹಣವನ್ನೆಲ್ಲಾ ವೆಚ್ಚಮಾಡಿದಳು. ಆದರೆ ಇನ್ನೂ ಕೆಲಸ ಬಾಕಿ ಉಳಿದಿರುತ್ತದೆ. ಕೆರೆ ಕೆಲಸದಲ್ಲಿ ತೊಡಗಿದ್ದ ಒಡ್ಡರು ‘ಮೂರು ತೂಮುಡು(ಒಂದು ತೂಮುಡು ಅಂದರೆ ನಾಲ್ಕು ಸೇರು) ರೂಕಲು(ನಾಣ್ಯಗಳು)’ ಕೊಟ್ಟರೆ ಕೆಲಸ ಮುಗಿಸುತ್ತೇವೆನ್ನುತ್ತಾರೆ. ಅದನ್ನು ಪೂರೈಸಲು ಆಕೆ ಬಚ್ಚನಹಳ್ಳಿಯ ಮೇಕೆಗಳ ಯಜಮಾನನ ಸಹಾಯ ಯಾಚಿಸುತ್ತಾಳೆ.
 ಬಚ್ಚನಹಳ್ಳಿಯ ಮೇಕೆಗಳ ಯಜಮಾನ ಬಂದು ತಾನು ಕೊಡೆವೆನೆಂದು ತಿಳಿಸಿದಾಗ ಒಡ್ಡರು ಕೆಲಸ ಮುಗಿಸಿಕೊಡುತ್ತಾರೆ. ಆದರೆ ಬುದ್ಧಿವಂತನಾದ ಯಜಮಾನ ಗುದ್ದಲಿಯ ಕೋಲು ತೆಗೆದು ಅದರ ತೂಮು(ತೂತು) ತುಂಬಾ ಹಣ ತುಂಬಿ ಅಳೆದು ಅವರಿಗೆ ಕೊಡುತ್ತಾನೆ. ತಾವು ಮೋಸಹೋದೆವೆಂದು ಅರಿವಾದ ಒಡ್ಡರು, ‘ಈ ಕೆರೆಯಲ್ಲಿ ನೀರು ನಿಲ್ಲದಿರಲಿ’ ಎಂದು ಶಪಿಸಿದರು. ಈಗಲೂ ಸರ್ಕಾರದಿಂದ ಹಲವಾರು ಬಾರಿ ದುರಸ್ತಿ ಕಾರ್ಯ ನಡೆದರೂ ರಾಜಸಾನಿ ಕೆರೆಯಲ್ಲಿ ಹೆಚ್ಚು ದಿನ ನೀರು ನಿಲ್ಲುವುದಿಲ್ಲ. ಎಲ್ಲ ನೀರು ನಲ್ಲಸಾನಿಕೆರೆಗೆ ಹರಿದು ಹೋಗುತ್ತದೆ’ ಎನ್ನುತ್ತಾರೆ ಎಸ್.ವೆಂಕಟಾಪುರ ಗ್ರಾಮದ ಹಿರಿಯರಾದ ನರಸರಾಮಪ್ಪ.
 ‘ಈ ಕೆರೆಗಳ ಪಕ್ಕದಲ್ಲೇ ಇರುವ ಬೆಟ್ಟಗಳ ಸಾಲು ಚಾರಣ ಪ್ರಿಯರಿಗೆ ಸೂಕ್ತವಾಗಿದೆ. ಕೆರೆಗೆ ಆತುಕೊಂಡಂತಿರುವ ಬೆಟ್ಟದ ಮೇಲೆ ಬೊಂಬೆಗಳಂತೆ ನಿಂತ ಕಲ್ಲುಬಂಡೆಗಳು ಆಕರ್ಷಕವಾಗಿವೆ. ಅದಕ್ಕೆಂದೇ ಇಲ್ಲಿನ ಜನರು ಇದನ್ನು ಬೊಮ್ಮಲಕೊಂಡ ಎನ್ನುತ್ತಾರೆ. ಹಿಂದೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಪರಿಸರಕ್ಕೆ ಮಾತ್ರ ಸೀಮಿತವಾಗಿದ್ದ ಜಾಲಾರಿ ಮರಗಳು ಇಲ್ಲಿ ಯಥೇಚ್ಛವಾಗಿದ್ದವು. ಈಗ ಸಣ್ಣ ಪುಟ್ಟ ಮರಗಳು ಮತ್ತು ಔಷಧೀಯ ಸಸ್ಯಗಳನ್ನು ಕಾಣಬಹುದು. ಈ ಬೆಟ್ಟಗಳಲ್ಲಿ ಹಲವಾರು ಗುಹೆಗಳಿವೆ. ಜಿಂಕೆ, ನವಿಲು, ಕಾಡುಹಂದಿ, ಮೊಲ ಮುಂತಾದ ಪ್ರಾಣಿಗಳೂ ಇಲ್ಲಿ ವಾಸಿಸುತ್ತವೆ’ ಎಂದು ಅವರು ತಿಳಿಸಿದರು.