Tuesday, March 23, 2010

ಜಗದ ತುಂಬ ಜೀರುಂಡೆ

ತೆಲುಗಿನಲ್ಲಿ "ಕೀಚುರಾಳ್ಳು" ಎಂಬ ಸಿನಿಮಾ ಇದೆ. ಇದರಲ್ಲಿ ಯುವಕರ ಕಿರುಚಾಟ, ಗದ್ದಲ, ಶಕ್ತಿಯ ವ್ಯಯದ ಬಗ್ಗೆ ತಿಳಿಸುವ ಸಂದೇಶವಿದೆ. ಇಂಗ್ಲೀಷ್‌ನಲ್ಲಿ ಬೀಟಲ್ ಎಂದು ಕರೆಯುವ ಜೀರುಂಡೆಯನ್ನು ತೆಲುಗಲ್ಲಿ ಕೀಚುರಾಳ್ಳು ಎಂದು ಕರೆಯುತ್ತಾರೆ. ನಮ್ಮಲ್ಲೂ ಗ್ರಾಮೀಣ ಭಾಗದಲ್ಲಿ ಹಿರಿಯರು ಮಕ್ಕಳ ಗಲಾಟೆ ಅತಿಯಾದಾಗ ಜೀರುಂಡೆ ತರಹ ಉಪಯೋಗವಿಲ್ಲದೆ ಕಿರುಚಬೇಡಿ ಎಂದು ಗದರುವುದುಂಟು.




ಜೀರುಂಡೆ ಅಂದರೆ ಶಬ್ದ ಮಾಡುವ ಕೀಟವೆಂದಲ್ಲ. ಅವುಗಳಲ್ಲಿ ಎಲ್ಲವೂ ಶಬ್ದ ಮಾಡುವುದಿಲ್ಲ. ಇವು ಹೀಗೇ ಎಂದು ಒಂದೇ ಮಾತಿನಲ್ಲಿ ಹೇಳುವ ಹಾಗಿಲ್ಲ. ಕಾರಣ ಇವುಗಳ ಅಗಾಧ ಸಂಖ್ಯೆ ಮತ್ತು ವೈವಿಧ್ಯತೆ.






ಈ ಭೂಮಿಯಲ್ಲಿ ಒಂದೂಮುಕ್ಕಾಲು ದಶಲಕ್ಷ ಜೀವಿಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಈ ಜೀವರಾಶಿಯಲ್ಲಿ ಶೇ.೬೦% ರಷ್ಟು ಕೀಟಗಳಿವೆ. ಅದರಲ್ಲಿ ಮೂರನೇ ಒಂದು ಭಾಗದಷ್ಟು ಈ ಜೀರುಂಡೆಗಳಿವೆ. ಜಗತ್ತಿನ ಸಸ್ಯ ವೈವಿಧ್ಯತೆಗಿಂತ ಹೆಚ್ಚಿನ ವಿಧದ ಜೀರುಂಡೆಗಳಿವೆ ಅಂದರೆ ಇದರ ಸಂಖ್ಯೆ, ವೈವಿಧ್ಯತೆ, ಬಣ್ಣ, ಆಹಾರ, ರೂಪಗಳನ್ನು ಊಹಿಸುವುದೂ ಅಸಾಧ್ಯ. ವಿಜ್ಞಾನಿಗಳ ಪ್ರಕಾರ ಇನ್ನೂ ಲಕ್ಷಾಂತರ ವಿಧದ ಜೀರುಂಡೆಗಳನ್ನು ಗುರುತಿಸಿಯೇ ಇಲ್ಲ. ನನ್ನಿಂದ, ನನಗಾಗಿ, ನನ್ನದೇ ಈ ಭೂಮಿ ಎನ್ನುವ ಮಾನವ ಇವುಗಳ ಮುಂದೆ ಎಷ್ಟೊಂದು ಅಲ್ಪಸಂಖ್ಯಾತನಲ್ಲವೇ? ನಮ್ಮ ಪರಿಸರವನ್ನು ಜೀವಂತವಾಗಿರಿಸಲು ಮತ್ತು ಚಲನಶೀಲವಾಗಿರಿಸುವಲ್ಲಿ ಇವುಗಳ ಪಾಲು ಅಗಾಧ.




ಕೋಲಿಯೋಪ್ಟೆರಾ ವರ್ಗಕ್ಕೆ ಸೇರಿರುವ ಈ ಜೀರುಂಡೆಗಳಿಗೆ ಆಮೆಗಳಿಗಿರುವಂತೆ ಗಡುಸಾಗಿರುವ ಬೆನ್ನಿನ ಕವಚವಿರುತ್ತದೆ. ಏರೋಪ್ಲೇನ್ ಚಿಟ್ಟೆಗಳಿಗಿದ್ದಂತೆ ಇವಕ್ಕೂ ನಾಲ್ಕು ರೆಕ್ಕೆಗಳಿತ್ತಂತೆ. ಜೀವ ವಿಕಾಸದಲ್ಲಿ ಮುಂಭಾಗದ ರೆಕ್ಕೆಗಳು ರಕ್ಷಣಾ ಕವಚವಾಗಿ ಮಾರ್ಪಟ್ಟಿದೆ. ಈ ಕವಚದ ಕೆಳಗೆ ರೆಕ್ಕೆಗಳಿವೆ. ರೆಕ್ಕೆ ಮತ್ತು ಕವಚದ ನಡುವೆ ತಂಪಾದ ಗಾಳಿಯನ್ನು ಶೇಖರಿಸಿಟ್ಟುಕೊಂಡು ಮರುಭೂಮಿಯಲ್ಲಿ ಮತ್ತು ನೀರಿನೊಳಗೆ ಬದುಕುವ ಜೀರುಂಡೆಗಳಿವೆ. ಅನೇಕ ವಿಧದ ಆಹಾರವನ್ನು ರೂಢಿಸಿಕೊಂಡು ಎಲ್ಲಾ ಬಗೆಯ ಭೂ ವಾತಾವರಣಕ್ಕೆ ಒಗ್ಗಿಕೊಂಡಿವೆ.






ಉಷ್ಣವಲಯದ ಕಾಡುಗಳಲ್ಲಿ ವಿಜ್ಞಾನಿಗಳು ಎತ್ತರೆತ್ತರ ಮರಗಳ ಮೇಲ್ಪದರದಲ್ಲಿ ವಾಸಿಸುವ ಜೀವಿಗಳ ಆಧ್ಯಯನ ಕೈಗೊಂಡಿದ್ದರು. ಹೊಗೆ ಹಾಕಿದಾಗ ಮಳೆ ಬಂದಂತೆ ತಿಳಿಯದ, ಹೆಸರಿರಿಸದ ಜೀವಿಗಳು ಸಿಕ್ಕಿದವು. ಅವುಗಳಲ್ಲಿ ಹೆಚ್ಚೂ ಕಡಿಮೆ ಎಲ್ಲವೂ ಜೀರುಂಡೆಗಳೇ! ೦.೨೫ ಮಿ.ಮೀಟರ್‌ನಿಂದ ೧೫೦ ಮಿ.ಮೀಟರ್ ಉದ್ದದ ಕಪ್ಪು, ಕೆಂಪು, ಹಳದಿ, ಕಂದು, ಹೊಳೆಯುವ, ಮಿನುಗುವ ಥರಾವರಿ ಜೀರುಂಡೆಗಳ ಮೋಹಕ ಲೋಕವಿದು.







ಚಿಟ್ಟೆಗಳಂತೆ ಇದರದ್ದೂ ಮೊಟ್ಟೆ, ಲಾರ್ವ, ಪ್ಯೂಪ ಮತ್ತು ಜೀರುಂಡೆ ಎಂಬ ನಾಲ್ಕು ಹಂತದ ಬದುಕು. ಮೊಟ್ಟೆಗಳಿಂದ ಹೊರಬಂದ ಇದರ ಲಾರ್ವಾಗಳದ್ದು ತಿನ್ನುವುದಷ್ಟೇ ಕೆಲಸ. ಕೊಳೆತ ಪದಾರ್ಥಗಳನ್ನು ಗಲೀಜು ಇತ್ಯಾದಿ ತ್ಯಾಜ್ಯಗಳನ್ನು ತಿಂದು ಕೆಲವು ಮಾನವನಿಗೆ ಉಪಕಾರಿಯಾಗಿವೆ. ಮರ, ಕಾಳು, ಬೆಳೆಗಳನ್ನೆಲ್ಲ ತಿನ್ನುವ ಕೆಲ ಅಪಕಾರಿಗಳೂ ಇವೆ. ಇದೇ ರೀತಿ ಬೆಳೆದ ಜೀರುಂಡೆಗಳೂ ಪರಾಗಸ್ಪರ್ಶ ಮತ್ತು ಹಾನಿಕಾರಕ ಕೀಟಗಳನ್ನು ಭಕ್ಷಿಸುವುದರಿಂದ ಕೆಲವು ಸಹಾಯ ಮಾಡಿದರೆ, ಇನ್ನು ಕೆಲವನ್ನು ಕೊಲ್ಲಲು ರೈತರು ರಾಸಾಯನಿಕಗಳನ್ನು ಸಿಂಪಡಿಸುವರು.


ಆಸ್ಟ್ರೇಲಿಯಾದಲ್ಲಿ ಜೀರುಂಡೆಗಳ ಸಂಗ್ರಹಾಲಯವಿದೆ. ಅಂಚೆಚೀಟಿಯಂತೆ ಜೀರುಂಡೆಗಳ ಸಂಗ್ರಹಣೆ ಮಾಡುತ್ತಾರೆ. ಅಪರೂಪದ್ದನ್ನು ಮಾರುತ್ತಾರೆ. ಕೆಲವನ್ನು ಔಷಧಿಗೆ ಬಳಸಿದರೆ ಒಡವೆ ತಯಾರಿಸಲು ಇನ್ನು ಕೆಲವು ಬಳಕೆಯಾಗುತ್ತವೆ. ಉತ್ತರ ದ್ರುವದಿಂದ ಹಿಡಿದು ಉಷ್ಣವಲಯದ ಕಾಡಿನವರೆಗೂ ಎಲ್ಲೆಲ್ಲೂ ಇರುವ ಇಷ್ಟೊಂದು ವೈವಿಧ್ಯತೆ ಹೊಂದಿರುವ ಜೀರುಂಡೆಗಳ ಜಗತ್ತಿನಲ್ಲಿ ನಾವಿದ್ದೇವೆಯೇ ಹೊರತು ನಮ್ಮದೇ ಈ ಜಗತ್ತು ಎಂಬುದು ಕೇವಲ ಭ್ರಮೆ!







Monday, March 15, 2010

ವೀರಕೆಂಪಣ್ಣನ ಧೀರನಡಿಗೆ



ಕುರಿಸಾಕಾಣಿಕೆಯಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಆನೂರಿನ ವೀರಕೆಂಪಣ್ಣ .


ಪಿಯುಸಿ ಪಾಸಾಗಿದ್ದ ಹದಿನೆಂಟರ ಯುವಕ ಕೃಷಿ ಪ್ರದರ್ಶನದಲ್ಲಿ ಕುರಿಗಳನ್ನು ನೋಡಿದ. ತಾನೂ ತಂದು ಸಾಕಬೇಕೆಂದು ಆಸೆಪಟ್ಟ. ಆದರೆ ಉತ್ಸಾಹ ಮತ್ತು ಬಿಸಿರಕ್ತವಿರುವೆಡೆ ಹಣವಿರಬೇಕಲ್ಲ. ಹಣ ಹೊಂಚಿ ಎರಡು ಕುರಿ ತರುವಷ್ಟರಲ್ಲಿ ಐದು ವರ್ಷ ಕಳೆದಿತ್ತು. ಇದೆಲ್ಲಾ ನಡೆದು ಮೂವತ್ತೈದು ವರ್ಷಗಳಾಗಿವೆ. ಈಗ ಈತನ ಕಣ್ಮುಂದೆ ಸಾವಿರದ ಮುನ್ನೂರು ‍ರಾಂಬೊಲೇಟ್, ಡಾರ್ಸೆಟ್, ಬನ್ನೂರು ಮುಂತಾದ ಕುರಿಗಳಿವೆ. ಈತನೇ ಕುರಿಸಾಕಾಣಿಕೆಯಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಆನೂರಿನ ವೀರಕೆಂಪಣ್ಣ. ಇವರ ಈ ಸಾಧನೆಗೆ ಆಧುನಿಕ ತಂತ್ರಜ್ಞಾನ, ಆಹಾರ ವಿಜ್ಞಾನ, ತಳಿಯ ಅಭಿವೃದ್ಧಿ ವಿಧಾನಗಳನ್ನು ಅಳವಡಿಸಿಕೊಂಡಿರುವುದಲ್ಲದೆ, ಪರಿಶ್ರಮ, ಸಂಶೋಧನಾ ಪ್ರವೃತ್ತಿ ಮತ್ತು ಪ್ರಯೋಗಶೀಲತೆಯೇ ಕಾರಣ.


೧೯೭೮ರಲ್ಲಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಕುರಿ ಸಂವರ್ಧನ ಕೇಂದ್ರದಲ್ಲಿ ಒಂದು ಕಾರಿಡಾಲ್ ತಳಿ ಖರೀದಿಸಿ, ಆ ಟಗರಿನಿಂದ ಸ್ಥಳೀಯ ಬನ್ನೂರು ಕುರಿಗಳಿಗೆ ಸಂವರ್ಧನೆ ಮಾಡಿ ಹೊಸ ತಳಿಗಳನ್ನು ಸಾಕಲು ಪ್ರಾರಂಭಿಸಿದರು. ೧೯೮೦ರಲ್ಲಿ ಚಳ್ಳಕೆರೆ ಕುರಿ ಅಭಿವೃದ್ಧಿ ಕೇಂದ್ರದಲ್ಲಿ ಆಗ ತಾನೆ ಆಮದು ಮಾಡಿದ ಟಗರನ್ನು ವೀಕ್ಷಿಸಿ, ತಮಗೂ ಕುರಿ ಸಾಕುವ ಅನುಭವವಿರುವುದರಿಂದ ವಿದೇಶದಿಂದ ತರಿಸಿದ ಮೂಲ ತಳಿ ನೀಡಬೇಕೆಂದು ಕೇಳಿಕೊಂಡರು. ಅಲ್ಲಿಯ ತಜ್ಞರು ಈ ತಳಿಗಳನ್ನು ವೃದ್ಧಿ ಮಾಡುವ ಕಾರ್ಯ ತಳಿ ವರ್ಧಕರಿಗೆ ಮಾತ್ರ ಗೊತ್ತು ಎಂದು ಹೇಳಿ ಇವರನ್ನು ತಿರಸ್ಕರಿಸಿದರು. ಇದನ್ನು ಸವಾಲಾಗಿ ಸ್ವೀಕರಿಸಿದ ಕೆಂಪಣ್ಣ ದೆಹಲಿಯ ಕೃಷಿ ಭವನದಲ್ಲಿರುವ ಕುರಿ ಸಂಗೋಪನಾ ಜಂಟಿ ನಿರ್ದೇಶಕರನ್ನು ಭೇಟಿ ಮಾಡಿ ತಮ್ಮ ಅನುಭವವನ್ನು ತಿಳಿಸಿ ತಮಗೂ ಒಂದು ಆಮದಾಗಿರುವ ಮೂಲ ತಳಿ ಟಗರನ್ನು ನೀಡಬೇಕೆಂದು ಕೋರಿದರು. ಇವರ ಆಸಕ್ತಿ, ಅನುಭವ, ಜ್ಞಾನವನ್ನು ಪರೀಕ್ಷಿಸಿ ವಿದೇಶದಿಂದ ಆಮದು ಮಾಡಿದ ಮೂರು ಟಗರುಗಳನ್ನು ಮತ್ತು ೨೫ ಮೂಲ ತಳಿ ಮೆರೀನೋ ಹೆಣ್ಣು ಕುರಿ ಮತ್ತು ಹತ್ತು ಟಗರುಗಳನ್ನು ಚಳ್ಳಕೆರೆ ಮತ್ತು ತಮಿಳುನಾಡಿನ ಕೊಯಿಮತ್ತೂರಿನ ಫಾರಂನಿಂದ ನೀಡಲು ಆದೇಶಿಸಿದರು. ಇವರಿಗೆ ತರಬೇತಿ ನೀಡಲೂ ಆದೇಶಿಸಿದರು. ಇಕ್ರಿಸೆಟ್‌ನಿಂದ ಕುದುರೆ ಮಸಾಲೆಯನ್ನು ಬಿತ್ತನೆಗೆ ತರಿಸಿ ನಾಲ್ಕು ಎಕರೆ ಪ್ರದೇಶದ ನೀರಾವರಿ ಮೇವು ಬೆಳೆದರು. ೧೯೮೫ರಲ್ಲಿ ಆಸ್ಟ್ರೇಲಿಯಾದ ಕುರಿ ತಳಿ ಸಂವರ್ಧಕರಿಂದ ರಾಜ್ಯದ ರಾಣೇಬೆನ್ನೂರಿನಲ್ಲಿ ತರಬೇತಿ ಪಡೆದರು.






ಕುರಿಗಳಿಗೆ ಬರುವ ರೋಗ ಪರೀಕ್ಷಿಸುವುದು, ಕಾಲಕಾಲಕ್ಕೆ ಲಸಿಕೆ ಹಾಕುವುದು, ಮೇವನ್ನು ಸಣ್ಣ ಸಣ್ಣಗೆ ಕತ್ತರಿಸಿ, ಕುರಿಗಳನ್ನು ಕೊಟ್ಟಿಗೆಗಳಲ್ಲಿ ಸಾಕುವ ಪದ್ಧತಿ ಪ್ರಾರಂಭಿಸಿದರು. ವೈದ್ಯರು, ವಿಜ್ಞಾನಿಗಳು ಬೇಕೆಂದಾಗ ಸಿಗುವುದಿಲ್ಲ. ಹಾಗಾಗಿ ಅನಿವಾರ್ಯತೆಯಿಂದ ತಾನೇ ಕುರಿ ವಿಜ್ಞಾನಿ ಮತ್ತು ವೈದ್ಯನಾಗಬೇಕಾಯಿತು ಎನ್ನುತ್ತಾರೆ ಕುರಿಗಳ ರೋಗಗಳನ್ನು ನೋಡಿದ ತಕ್ಷಣ ಕಂಡುಹಿಡಿಯಬಲ್ಲ ಈ ತಜ್ಞ ಕೆಂಪಣ್ಣ. ಆಹಾರ ಪದ್ಧತಿ, ರೋಗಗಳಿಗೆ ಬಳಸುವ ಔಷಧಿ, ತಳಿಸಂವರ್ಧನೆಗಳಲ್ಲಿ ಅನೇಕ ಪ್ರಯೋಗಗಳನ್ನು ಕೈಗೊಂಡು ಇವರು ಸಫಲತೆ ಸಾಧಿಸಿದ್ದಾರೆ. ಕೊಟ್ಟಗೆಯಲ್ಲೇ ಆಹಾರ ನೀಡುವುದು ಮತ್ತು ಪ್ರತಿ ಜಾತಿಯ ಕುರಿಗಳನ್ನು ಸ್ವಚ್ಛವಾದ ಗಾಳಿ ಬೆಳಕು ಬರುವ ಕೊಟ್ಟಿಗೆಗಳನ್ನು ನಿರ್ಮಿಸಿರುವುದನ್ನು ನೋಡಿದರೆ ಇವರು ಯಾವ ತಜ್ಞರಿಗೂ ಕಡಿಮೆಯಿಲ್ಲ ಎನ್ನಬಹುದು.
ಇವರ ಪಿತ್ರಾರ್ಜಿತ ೨ ಎಕರೆ ಜಮೀನನ್ನು ೧೧ ಎಕರೆವರೆಗೂ ವಿಸ್ತರಿಸಿ ಹೆಚ್ಚಿನ ಪಾಲು ಕುರಿ ಮೇವಿಗಾಗಿ ಉತ್ತಮ ಮೇವಿನ ತಳಿಗಳನ್ನು ಬೆಳೆಸಿದ್ದಾರೆ. ಪ್ರತಿ ಮುಂಗಾರಿನಲ್ಲಿ ದೊಡ್ಡ ದೊಡ್ಡ ಟ್ಯಾಂಕ್‌ಗಳಲ್ಲಿ ಸೈಲೇಜ್ ಮಾಡಿ ಶೇಖರಿಸಿಡುವುದು ಇವರ ವೈಶಿಷ್ಟ್ಯ.






ಶಿಡ್ಲಘಟ್ಟ ತಾಲ್ಲೂಕಿನ ಆನೂರಿನ ವೀರಕೆಂಪಣ್ಣನವರ ದಷ್ಟಪುಷ್ಟ ವಿದೇಶಿ ತಳಿ ಕುರಿಗಳು .



ರೈತರಿಗೆ, ಸ್ವಸಹಾಯ ಸಂಘದ ಸದಸ್ಯರುಗಳಿಗೆ, ಹೊರ ರಾಜ್ಯದ ರೈತರಿಗೆ, ಪಶುಸಂಗೋಪನಾ ಕಾಲೇಜಿನ ವಿದ್ಯಾರ್ಥಿಗಳಿಗೆ ಕುರಿ ಸಾಕುವ ತರಬೇತಿ ನೀಡುತ್ತಾರೆ. ಕುರಿಗಳ ಆರೋಗ್ಯ, ಮೂಲ ತಳಿಗಳ ಬಗ್ಗೆ ವಹಿಸಬೇಕಾದ ಎಚ್ಚರಿಕೆ, ಯಾವ ತಿಂಗಳಲ್ಲಿ ಸಂತಾನ ಕ್ರಿಯೆ ಮಾಡಿಸಬೇಕು, ಆಹಾರ, ಲಸಿಕೆ, ರೋಗಗಳನ್ನು ಕಂಡುಹಿಡಿಯುವುದು, ರಕ್ತ ಪರೀಕ್ಷೆ ಇತ್ಯಾದಿಗಳ ಬಗ್ಗೆ ತರಬೇತಿ ನೀಡುತ್ತಾರೆ. ಇವರ ಫಾರಂಗೆ ದೇಶ ವಿದೇಶಗಳಿಂದ ರೈತರು, ಅಧಿಕಾರಿಗಳು ಹೇಗೆ ಇವರು ಕುರಿ ಸಾಕಾಣಿಕೆ ಮಾಡಿ ತಳಿ ಅಭಿವೃದ್ಧಿ ಮಾಡುತ್ತಿದ್ದಾರೆಂದು ಅರಿಯಲು ಭೇಟಿ ನೀಡುತ್ತಾರೆ.
೧೯೯೫ರಲ್ಲಿ ಭಾರತ ಸರ್ಕಾರದ ಬೆಸ್ಟ್ ಶೀಪ್ ಬ್ರೀಡರ್ ಪ್ರಮಾಣಪತ್ರ ಗಳಿಸಿರುವ ಇವರು ಭಾರತದ ಪಶುಗಳ ಪ್ರದರ್ಶನದಲ್ಲಿ ತಮ್ಮ ತಳಿಗಳನ್ನು ಪ್ರದರ್ಶಿಸಿ ಬಹುಮಾನಗಳನ್ನು ಪಡೆದ್ದಿದಾರೆ. ಆಂದ್ರ ಸರ್ಕಾರದ ತಳಿ ವರ್ಧಕ ರೈತ ಪ್ರಮಾಣ ಪತ್ರ, ರಾಜ್ಯ ಸರ್ಕಾರದ ೨೦೦೭ರ ಕೃಷಿ ಪಂಡಿತ್ ಪ್ರಶಸ್ತಿ, ೨೦೦೮ರಲ್ಲಿ ಜಗಜೀವನರಾಂ ಕಿಸಾನ್ ಪುರಸ್ಕಾರಗಳು ಇವರ ಸಾಧನೆಗೆ ಸಂದಿವೆ. ಭಾರತ ಸರ್ಕಾರದ ಕುರಿ, ಮೇಕೆ ಮತ್ತು ಮೊಲ ಅಭಿವೃದ್ಧಿಯ ಕೇಂದ್ರ ಸಲಹಾ ಸಮಿತಿ ಸದಸ್ಯ ಹಾಗೂ ರಾಜ್ಯ ಸರ್ಕಾರದ ಪಶು ವೈದ್ಯ ವಿಶ್ವವಿದ್ಯಾನಿಲಯದ ಎಜುಕೇಷನ್ ಕೌನ್ಸಿಲ್ ಸದಸ್ಯರೂ ಆಗಿದ್ದಾರೆ.
ಮನೆಯಲ್ಲಿ ಕುರಿ, ಮೇಕೆಗಳಿದ್ದರೆ ಬ್ಯಾಂಕಿನಲ್ಲಿ ಹಣವಿದ್ದಂತೆ. ವಿದ್ಯಾವಂತ ಯುವಕರು ಕೈಗೊಳ್ಳಬಹುದಾದ ಲಾಭದಾಯಕ ಉದ್ದಿಮೆಯಿದು. ರೈತರು ತಮ್ಮ ಶಕ್ತ್ಯಾನುಸಾರ ಕುರಿ ಸಾಕುವುದರಿಂದ ಅವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎನ್ನುತ್ತಾರೆ ವೀರಕೆಂಪಣ್ಣ(೯೪೪೯೭೩೦೫೬೩;೯೯೮೬೦೦೦೮೩೩).



ಆನೂರಿನ ವೀರಕೆಂಪಣ್ಣನವರಿಗೆ ಕೇಂದ್ರ ಕೃಷಿ ಮಂತ್ರಿ ಶರತ್ ಪವಾರ್ "ಹಾರ್ವೆಸ್ಟ್ ಆಫ್ ಹೋಪ್" ಕಾಫಿ ಟೇಬಲ್ ಪುಸ್ತಕ ಮತ್ತು ಪ್ರಮಾಣ ಪತ್ರವನ್ನು ನವದೆಹಲಿಯ ವಿಜ್ಞಾನ ಭವನದಲ್ಲಿ ಫೆಬ್ರವರಿ ೨೬ರಂದು ಪ್ರಧಾನ ಮಾಡಿದರು.


ವೀರಕೆಂಪಣ್ಣನವರಿಗೆ ಕೇಂದ್ರ ಕೃಷಿ ಮಂತ್ರಿ ಶರತ್ ಪವಾರ್ "ಹಾರ್ವೆಸ್ಟ್ ಆಫ್ ಹೋಪ್" ಕಾಫಿ ಟೇಬಲ್ ಪುಸ್ತಕ ಮತ್ತು ಪ್ರಮಾಣ ಪತ್ರವನ್ನು ನವದೆಹಲಿಯ ವಿಜ್ಞಾನ ಭವನದಲ್ಲಿ ಫೆಬ್ರವರಿ ೨೬ರಂದು ಪ್ರಧಾನ ಮಾಡಿದ್ದಾರೆ.
ಭಾರತದ ನೂರೊಂದು ಮಂದಿ ಮಾದರಿ ರೈತರ ಯಶೋಗಾಥೆಯಿರುವ "ಹಾರ್ವೆಸ್ಟ್ ಆಫ್ ಹೋಪ್" ಕಾಫಿ ಟೇಬಲ್ ಪುಸ್ತಕದಲ್ಲಿ ಕರ್ನಾಟಕದ ಏಳು ಮಂದಿ ರೈತರು ಸ್ಥಾನ ಪಡೆದಿದ್ದಾರೆ. ಕುರಿ, ಕೋಳಿ, ಬತ್ತ, ಹೂವು, ಹಣ್ಣು, ತೋಟಗಾರಿಕೆ ಇತ್ಯಾದಿ ಅನೇಕ ಕೃಷಿ ವಿಧಗಳಲ್ಲಿ ಇತರರಿಗೆ ಮಾದರಿಯಾಗಿರುವ ನೂರೊಂದು ರೈತರನ್ನು ಗುರುತಿಸಿ ಮೊಟ್ಟಮೊದಲ ಬಾರಿಗೆ ರೈತರ ಬಗ್ಗೆ ನಬಾರ್ಡ್‌ನವರ ಪ್ರಾಯೋಜಕತ್ವದಲ್ಲಿ ಕಾಫಿ ಟೇಬಲ್ ಪುಸ್ತಕ ಹೊರತಂದಿದ್ದಾರೆ.
ಈ ಪುಸ್ತಕವು ದೇಶದ ಕೆಲವೇ ಕೆಲವು ರೈತರ ಕುರಿತಾಗಿದೆ. ಅವರು ತಮ್ಮ ಪರಿಶ್ರಮ, ದೃಢನಿಷ್ಠೆ ಮತ್ತು ಉತ್ಸಾಹಗಳಿಂದ ಭಾರತದ ಕೃಷಿಯ ಕಥೆಯನ್ನು ಪುನರ್ರಚಿಸುತ್ತಿದ್ದಾರೆ. ಬದಲಾವಣೆ, ಸಂಶೋಧನೆ, ಧೈರ್ಯ ಮತ್ತು ಉದ್ಯಮಶೀಲತೆಯಲ್ಲಿ ಮಾದರಿಯಾಗಿದ್ದಾರೆ. ಇಂತಹ ರೈತರ ಕುರಿತಾದ ಪುಸ್ತಕಗಳ ಪ್ರಾರಂಭವಿದು ಎಂದು ಕೃಷಿ ಮತ್ತು ಸಹಕಾರ ಖಾತೆಯ ಮುಖ್ಯ ಕಾರ್ಯದರ್ಶಿ ಎನ್.ಕೆ.ದಾಸ್ ಪುಸ್ತಕದ ಬೆನ್ನುಡಿಯಲ್ಲಿ ಬರೆದಿದ್ದಾರೆ.
ವಿಜ್ಞಾನಿಗಳಿಗೆ ಮಾತ್ರ ಸೀಮಿತವಾಗಿದ್ದ ವಿಜ್ಞಾನ ಭವನದಲ್ಲಿ ಮೊದಲ ಬಾರಿ ರೈತರನ್ನು ಕರೆದು ಸನ್ಮಾನಿಸಿದ್ದು ಅದರಲ್ಲೂ ಕರ್ನಾಟಕದಿಂದ ಏಳು ಜನ ಆಯ್ಕೆಯಾಗಿದ್ದುದು ಹೆಮ್ಮೆಯೆನಿಸಿದೆ ಎಂದು ವೀರಕೆಂಪಣ್ಣ ತಿಳಿಸಿದರು. ರೈತಾಪಿ ಜನ ವ್ಯವಸಾಯ ಬಿಟ್ಟು ಬೇರೆ ಉದ್ಯೋಗಕ್ಕೆ ವಲಸೆ ಹೋಗುತ್ತಿದ್ದಾರೆ. ದೇಶಕ್ಕೆ ಆಹಾರದ ಭದ್ರತೆ ಒದಗಿಸುವ ನಿಟ್ಟಿನಲ್ಲಿ ರೈತರ ಸಾಧನೆಗಳನ್ನು ಗುರುತಿಸುತ್ತಿದ್ದಾರೆ. ಹತ್ತು ಮಂದಿ ರೈತರ ಸಾಧನೆಯ ವೀಡಿಯೋ ಮಾಡಿ ವಿವಿಧ ಭಾಷೆಗಳಲ್ಲಿ ತಯಾರಿಸಿ ದೇಶಾದ್ಯಂತ ವಿತರಿಸಲಿದ್ದಾರೆ. ಆ ವೀಡಿಯೋದಲ್ಲಿ ನನ್ನ ಬಗ್ಗೆಯೂ ಇರುವುದು ಸಂತಸ ತಂದಿದೆ. ನಮ್ಮ ಸುತ್ತಮುತ್ತಲ ರೈತರನ್ನು ಉತ್ತೇಜಿಸಬೇಕು ಮತ್ತು ದೇಶಕ್ಕೆ ಆಹಾರ ಒದಗಿಸುವ ರೈತರ ಕಷ್ಟಕ್ಕೆ ಸರ್ಕಾರ ಎಲ್ಲ ರೀತಿಯಲ್ಲೂ ಸ್ಪಂದಿಸುವುದಾಗಿ ಮಂತ್ರಿಗಳು ತಿಳಿಸಿದರು ಎಂದು ಅವರು ತಮ್ಮ ದೆಹಲಿಯ ಅನುಭವವನ್ನು ವಿವರಿಸಿದರು.


ಆನೂರಿನ ವೀರಕೆಂಪಣ್ಣ ಭಾರತದ ನೂರೊಂದು ಮಂದಿ ಮಾದರಿ ರೈತರ ಯಶೋಗಾಥೆಯಿರುವ "ಹಾರ್ವೆಸ್ಟ್ ಆಫ್ ಹೋಪ್" ಕಾಫಿ ಟೇಬಲ್ ಪುಸ್ತಕ ಮತ್ತು ಪ್ರಮಾಣ ಪತ್ರ ಪ್ರದರ್ಶಿಸುತ್ತಿರುವುದು.