Monday, April 23, 2012

ಬರಗಾಲದಲ್ಲೂ ಮೂಡಿವೆ ಚಿಗುರೆಲೆ

ಶಿಡ್ಲಘಟ್ಟ ತಾಲ್ಲೂಕಿನ ಪಟರೇನಹಳ್ಳಿ ಅರಣ್ಯ ಪ್ರದೇಶದ ಹುಣಸೆ ತೋಪಿನಲ್ಲಿ ಚಿಗುರೊಡೆದಿರುವ ಹುಣಸೆಮರ.

ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿ ಬಳಿಯಿರುವ ಪಟರೇನಹಳ್ಳಿ ಅರಣ್ಯ ಪ್ರದೇಶದ ಸುಮಾರು ೪೦ ಎಕರೆಯಷ್ಟು ಹುಣಸೆ ತೋಪಿನಲ್ಲಿ ಚಿಗುರೆಲೆಗಳು ಮೂಡಿವೆ. ಈ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ ಅವಘಡದಿಂದ ಒಣಹುಲ್ಲು ಸೇರಿದಂತೆ ಬಹಳಷ್ಟು ಮರಗಿಡಗಳಿಗೆ ಹಾನಿಯಾಗಿತ್ತು. ಪ್ರಕೃತಿಯ ನಿಯಮವೆಂಬಂತೆ ಈಗ ಒಣಗಿಡದಲ್ಲಿ ಚಿಗುರಿನ ಸಂಭ್ರಮ. ಕೆಲವು ಮರಗಳಲ್ಲಿ ಕೆಂಪು ಮಿಶ್ರಿತ ಚಿಗುರೆಲೆಗಳು ಮೂಡುತ್ತಿದ್ದರೆ, ಇನ್ನು ಕೆಲವು ಮರಗಳಲ್ಲಿ ಚಿಗುರಿನೊಂದಿಗೆ ಹೂಗಳೂ ಮೂಡಿದ್ದು ಮಕರಂದ ಹೀರುವ ದುಂಬಿಗಳು ಮತ್ತು ಮಧುಪಾನ ಮಾಡುವ ಸೂರಕ್ಕಿಗಳಿಗೆ ಸುಗ್ಗಿ ತಂದಿವೆ. ಆಲ, ಅರಳಿ ಮೊದಲಾದ ಕೆಂಪು ಚಿಗುರು ಬಿಡುವ ಸಸ್ಯಗಳ ಸಾಲಿನಲ್ಲಿ ಹುಣಸೆಯೂ ಒಂದು. ಹುಣಸೆಹಣ್ಣು ದುಬಾರಿಯಾಗಿರುವ ಕಾಲದಲ್ಲಿ ಬಡವರು ಹುಣಸೆ ಚಿಗುರನ್ನು ಆಶ್ರಯಿಸಿ ಕೆಲವು ದಿನಗಳ ಮಟ್ಟಿಗೆ ಹುಣಸೆಹಣ್ಣಿಗೆ ಆಗುವ ವೆಚ್ಚವನ್ನು ಉಳಿಸುತ್ತಾರೆ. ‘ಹುಣಸೆ ತವರಿಗೆ ಹೋಗಲ್ಲ’ ಎಂಬ ಮಾತು ಜನಪದರಲ್ಲಿದೆ. ಹುಣಸೆ ಕಾಯನ್ನು ಉದುರಿಸುತ್ತಿದ್ದಂತೆಯೇ ಎಲೆ ಉದುರುತ್ತದೆ. ಅದಾದ ಸ್ವಲ್ಪ ದಿನಗಳಿಗೇ ಚಿಗುರೆಲೆಗಳು ಮೂಡುತ್ತವೆ. ಚಿಗುರಿನೊಂದಿಗೇ ಹೂಗಳು ಮೂಡುತ್ತವೆ. ಅದರ ಹಿಂದೆಯೇ ಈಚುಗಳು ಮೂಡುತ್ತವೆ. ನಂತರ ಕಾಯಿಯಾಗುವ ಸರದಿ. ಹೀಗೆ ನಡೆಯುವ ಜೀವನ ಚಕ್ರದಲ್ಲಿ ಅದರ ತವರಿಗೆ ಹಿಂದಿರುಗುವ ಆಸೆ ಈಡೇರುವುದಿಲ್ಲವಂತೆ. ಹಿಂದೆ ದೂರದ ಊರುಗಳಿಗೆ ಹೋಗಲು ಇದ್ದ ತೊಂದರೆಗಳು ಮತ್ತು ರೈತರ ಮನೆಗಳಲ್ಲಿನ ಶ್ರಮ ಜೀವನದಲ್ಲಿ ಹೆಣ್ಣುಮಕ್ಕಳು ತವರಿಗೆ ಹಲವಾರು ವರ್ಷಗಳು ಹೋಗಲಾಗುತ್ತಿರಲಿಲ್ಲ. ಆಗ ಹುಣಸೆ ಮರಕ್ಕೆ ಅವರ ಜೀವನವನ್ನು ಹೋಲಿಸಿ ನುಡಿಗಟ್ಟನ್ನೇ ಸೃಷ್ಟಿಸಿದ್ದರು ಜನಪದರು.
ಹುಣಸೆ ಚಿಗುರು.

 ಹುಣಸೆ ಮರವನ್ನು ದುಡಿಮೆಗೆ ಹೋಲಿಸುವುದರೊಂದಿಗೆ ಹಲವಾರು ಉಪಯುಕ್ತತೆಗೆ ಬಳಸಲಾಗುತ್ತದೆ. ಹುಣಸೆ ಕಾಯಿಯಲ್ಲಿ ತೊಕ್ಕನ್ನು ತಯಾರಿಸುತ್ತಾರೆ. ಜೀರಿಗೆ, ಮೆಣಸು, ಉಪ್ಪು, ಇಂಗು, ಹುಣಸೆ ಹಣ್ಣಿನೊಂದಿಗೆ ಬೆರೆಸಿ ಪಿತ್ತಕ್ಕೆ ಔಷಧಿ ತಯಾರಿಸಲಾಗುತ್ತದೆ. ಹುಣಸೆ ಚಿಗುರು ಒಗರು ಮತ್ತು ಹುಳಿಯ ರುಚಿ ಹೊಂದಿರುತ್ತದೆ. ಮಾವಿನ ಕಾಯಿಯ ಓಟೆ ಮೂಡುವ ಸಮಯದಲ್ಲಿ ಹುಣಸೆ ಚಿಗುರಲು ಪ್ರಾರಂಭವಾಗುತ್ತದೆ. ಇದರ ಕೆಂಪನೆಯ ಚಿಗುರು ನೋಡಲು ಬಲು ಆಕರ್ಷಕವಾಗಿರುತ್ತದೆ. ಈಗಲೂ ಗ್ರಾಮೀಣ ಭಾಗದಲ್ಲಿ ಹುಣಸೆ ಚಿಗುರನ್ನು ವಿವಿಧ ಅಡುಗೆಗಳಲ್ಲಿ ಬಳಸುತ್ತಾರೆ. ಅವರೆಬೇಳೆ ಹುಣಸೆ ಚಿಗುರಿನ ತೊವ್ವೆ, ಆಲೂಗಡ್ಡೆ ಬದನೆಕಾಯಿ ಹುಣಸೆಚಿಗುರಿನ ಹುಳಿ, ನುಗ್ಗೆಕಾಯಿಯ ಉಷ್ಣದ ಅಂಶವನ್ನು ಕಡಿಮೆ ಮಾಡಲು ಬೇಳೆಯೊಂದಿಗೆ ಹುಣಸೆ ಚಿಗುರು ಹಾಕಿ ಸಾರು ತಯಾರಿಸುತ್ತಾರೆ. ಹುಣಸೆ ಚಿಗುರನ್ನು ಒಣಗಿಸಿಟ್ಟುಕೊಂಡೂ ಬಳಸುತ್ತಾರೆ. ಹುಣಸೆ ಚಿಗುರನ್ನು ಸ್ವಲ್ಪ ಎಣ್ಣೆಯಲ್ಲಿ ಕರಿದು ಒಗ್ಗರಣೆ ಹಾಕಿ ಅನ್ನದೊಂದಿಗೆ ಕಲಸಿ ತಿನ್ನುತ್ತಾರೆ. ತುಪ್ಪದಲ್ಲಿ ಹುರಿದರೆ ಇದರ ರುಚಿ ಇನ್ನೂ ಹೆಚ್ಚು. ಹಾಗೆಯೇ ಹುಣಸೆ ಹೂವನ್ನೂ ಸಹ.

Sunday, April 22, 2012

ಎಲೆ ಅಡಿಕೆ ಚೀಲದಲ್ಲಿ ಬದುಕಿನ ಕ್ಷಣಗಳು


ಎಲೆ ಅಡಿಕೆಯ ಚೀಲ ಅಥವಾ ತಿತ್ತಿ.

 ಗ್ರಾಮೀಣ ಪ್ರದೇಶದಲ್ಲಿ ಜೀವನದ ಅವಿಭಾಜ್ಯ ಅಂಗವಾಗಿ ಹಲವಾರು ಸಂಗತಿಗಳಿರುತ್ತವೆ. ಅವುಗಳಲ್ಲಿ ಎಲೆ ಅಡಿಕೆಯೂ ಸೇರಿದೆ. ಬಾಯಿ ಕೆಂಪಾಗಿಸಿ, ಹಲ್ಲನ್ನು ಬಣ್ಣವಾಗಿಸ್ದಿದರೂ ಎಲೆ ಅಡಿಕೆಯ ಮೋಹವನ್ನು ಬಿಡುವುದಿಲ್ಲ. ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮೀಣ ಪರಿಸರದಲ್ಲಿ ಮೊದಲು ಎಲ್ಲರ ಬಳಿಯೂ ಇರುತ್ತಿದ್ದ ಎಲೆ ಅಡಿಕೆ ಚೀಲ ನಿಡಾನವಾಗಿ ಕಣ್ಮರೆಯಾಗುತ್ತಿದೆ. ಎಲೆ ಅಡಿಕೆ ವಿವಿಧ ರೂಪಗಳಲ್ಲಿ ನಾಡಿನಾದ್ಯಂತ ವ್ಯಾಪಿಸಿದೆ. ಬಾಯಿಯಲ್ಲಿ ಹಾಕಿಕೊಂಡು ಮೆಲ್ಲುವುದರ ಜೊತೆಗೆ ಹುಟ್ಟು-ಸಾವಿನ ನಡುವಿನ ಜೀವನದ ಮಹತ್ವದ ಘಟ್ಟಗಳಲ್ಲಿ ಇದರ ಪ್ರಮುಖ ಪಾತ್ರವಿದೆ. ಪಾನ್‌ಬೀಡಾ, ಪಾನ್‌ಪರಾಗ್ ಮತ್ತಿತರ ಥಳಕು-ಬಳುಕಿಗೆ ಈಗಿನ ಜನರು ಮೊರೆ ಹೋದರೂ ವಿಶೇಷ ಸಂದರ್ಭಗಳಲ್ಲಿ ಎಲೆ ಅಡಿಕೆ ಹಾಕದಿರುವವರು ಕಡಿಮೆ. ಮದುವೆ ಮುಂತಾದ ಮಂಗಳ ಕಾರ್ಯಗಳಲ್ಲಿ ಭೋಜನಾ ನಂತರ ಎಲೆ ಅಡಿಕೆ ಪ್ರತ್ಯಕ್ಷವಾಗುತ್ತದೆ. ಮಂಗಳ ಕಾರ್ಯಗಳಲ್ಲಿ ತಾಂಬೂಲ ಕೊಟ್ಟು ತಾಂಬೂಲ ಹಾಕಿಕೊಂಡು ಹೋಗಿ ಎನ್ನುವುದು ರೂಢಿ. ನವಾಬರು ಇದನ್ನು ಬೀಡಾ ಎಂದೇ ಪ್ರಸಿದ್ಧಿಗೆ ತಂದರು. ಮೈಸೂರು ಎಲೆ, ಬನಾರಸ್, ಮದ್ರಾಸ್, ಕಲ್ಕತ್ತ, ನಾಟಿ ಎಲೆಗಳು ಜನಪ್ರಿಯವಾಗಿವೆ. ಎಲೆ ಅಡಿಕೆಗಳ ಅಭ್ಯಾಸವಿರುವ ಗ್ರಾಮೀಣರು ಮೊಬೈಲ್ ಫೋನ್‌ಗಳಂತೆ ತಮ್ಮೊಟ್ಟಿಗೇ ಇಟ್ಟುಕೊಳ್ಳಲು ಪರಿಕರವೊಂದನ್ನು ಸೃಷ್ಟಿಸಿಕೊಂಡಿದ್ದರು. ಅದುವೇ ಎಲೆ ಅಡಿಕೆ ಚೀಲ. ಸುಲಭವಾಗಿ ಬಳಸುವಂತೆ, ಎಲ್ಲೆ ಹೋಗಲಿ ಜೊತೆಯಲ್ಲಿ ಇಟ್ಟುಕೊಳ್ಳುವಂತೆ ಇದನ್ನು ರೂಪಿಸಿರುತ್ತಿದ್ದರು. ಇದಕ್ಕೆ ತಿತ್ತಿ, ಸಂಚಿ ಎಂದೆಲ್ಲಾ ಕರೆಯುತ್ತಾರೆ.
ಹಲ್ಲಿಲ್ಲದ್ದರಿಂದ ಕುಟ್ಟಾಣಿಯಲ್ಲಿ ಎಲೆ ಅಡಿಕೆ ಸುಣ್ಣ ಬೆರೆಸಿ ಕುಟ್ಟಿಕೊಳ್ಳುತ್ತಿರುವ ರಾಗಿಮಾಕಲಹಳ್ಳಿಯ ರಾಮಕ್ಕ.

ಕನ್ನಡದ ಕವಿಯತ್ರಿ ಹೊನ್ನಮ್ಮ ಈ ಎಲೆ ಅಡಿಕೆ ಚೀಲದಿಂದಾಗಿ ಸಂಚಿ ಹೊನ್ನಮ್ಮ ಎಂದೇ ಕರೆಸಿಕೊಂಡಿದ್ದಾರೆ. ಈ ಸಂಚಿ ಅಥವಾ ತಿತ್ತಿಯಲ್ಲಿ ಬಹುಪಯೋಗಿ ವಿಭಾಗಗಳಿವೆ. ಸುಣ್ಣದ ಡಬ್ಬಿಗೊಂದು ಜಾಗ, ಹಲ್ಲುಕಡ್ಡಿಗೊಂದು ಜಾಗ, ಪಕ್ಕದಲ್ಲಿ ಎಲೆ ಇಡುವ ಅರೆ, ಅಡಿಕೆ ಇಡಲು ಒಂದು ಪದರವಿರುತ್ತದೆ. ಒಂದು ಅಡಿ ಪದರ ಉದವಿದ್ದು ಸೊಂಟಕ್ಕೆ ಸಿಕ್ಕಿಸಿಕೊಳ್ಳಲು ಅನುಕೂಲಕರವಾಗಿರುತ್ತದೆ. ಇದರಲ್ಲಿ ಕಡ್ಡಿಪುಡಿ(ತಂಬಾಕು ಪುಡಿ) ಇಡಲೂ ಸ್ಥಳವುಂಟು. ಹಲ್ಲಿಲ್ಲದವರು ಕುಟ್ಟಾಣಿಯನ್ನೂ ಇದರಲ್ಲಿಟ್ಟುಕೊಳ್ಳುತ್ತಾರೆ. ಕೆಲವು ತಿತ್ತಿಗಳಿಗೆ ಉದ್ದನೆಯ ಪದರದ ತುದಿಗೆ ಪೊರಕೆ ಕಡ್ಡಿ ಗಾತ್ರದ ದಾರ ಹಾಕಿರುತ್ತಾರೆ. ತಿತ್ತಿಯನ್ನು ಗುಂಡಗೆ ಸುತ್ತಿ ಆ ದಾರದಿಂದ ಸುತ್ತಿ ಅದನ್ನು ಮಹಿಳೆಯರು ಸೊಂಟದ ಬಳಿ ಬಟ್ಟೆಗೆ ಸಿಕ್ಕಿಸಿ ಇಟ್ಟುಕೊಳ್ಳುತ್ತಿದ್ದರು. ಇದು ಅನಕ್ಷರಸ್ಥರ ಹಣದ ಚೀಲವೂ ಹೌದು. ಸೂಜಿ ದಾರ ಸೇರಿದಂತೆ ಅನೇಕ ಸಣ್ಣ ಪುಟ್ಟ ಪರಿಕರಗಳನ್ನೂ ಇದರಲ್ಲಿ ಇಟ್ಟಿರುತ್ತಾರೆ. ಇನ್ನೂ ಹಳ್ಳಿಗಳಲ್ಲಿ ಅಲ್ಲಲ್ಲಿ ಈ ತಿತ್ತಿಗಳು ಕಂಡು ಬರುತ್ತಿವೆ. ಇನ್ನೂ ಸಂಪೂರ್ಣವಾಗಿ ಕಣ್ಮರೆಯಾಗಿಲ್ಲ. ಸಂತೆಗಳಲ್ಲಿ, ವೃದ್ಧರ ಬಳಿ ಕಾಣಸಿಗುತ್ತದೆ. ಒಂದು ತಿತ್ತಿಯಲ್ಲಿನ ಎಲೆ ಅಡಿಕೆ ತನ್ನ ಆಯುಷ್ಯದಲ್ಲಿ ನೂರಾರು ಬಾಯಿಗಳನ್ನು ಸೇರುತ್ತದೆ. ಹೆಂಗಸರು ಮೊದಲು ಒಂದೆಡೆ ಸೇರಿದಾಗ ಈ ತಿತ್ತಿಯು ಅವರ ಸ್ನೇಹದ ದ್ಯೋತಕವಾಗಿರುತ್ತಿತ್ತು. ಎಲೆ ಅಡಿಕೆ ಹಂಚಿಕೊಂಡು ನಂತರ ಮಾತಿಗೆ ತೊಡಗುತ್ತಿದ್ದರು. ‘ನನಗೆ ಮೊದಲಿನಿಂದಲೂ ಎಲೆ ಅಡಿಕೆಯ ಅಭ್ಯಾಸವಾಗಿಬಿಟ್ಟಿದೆ. ಅದಿಲ್ಲದೆ ಇರಲಾರೆ. ಹೊಗೆ ಸೊಪ್ಪಿನ ದಂಟನ್ನು ತಂದು ಕುಟ್ಟಿ ಪುಡಿ ಮಾಡಿಟ್ಟುಕೊಂಡು ಬಳಸುತ್ತೇನೆ. ವಯಸ್ಸಾಗಿರುವುದರಿಂದ ಹಲ್ಲಿಲ್ಲ. ಅದಕ್ಕಾಗಿ ಕುಟ್ಟಾಣಿಯಲ್ಲಿ ಎಲೆ ಅಡಿಕೆ ಸುಣ್ಣ ಎಲ್ಲ ಬೆರೆಸಿ ಕುಟ್ಟಿ ನಂತರ ತಿನ್ನುತ್ತೇನೆ’ ಎನ್ನುತ್ತಾರೆ ರಾಗಿಮಾಕಲಹಳ್ಳಿಯ ರಾಮಕ್ಕ.

Friday, April 13, 2012

ಶಿಡ್ಲಘಟ್ಟದಲ್ಲಿ "ಗಾಣ" ಗ್ರಾಮ


ಶಿಡ್ಲಘಟ್ಟ ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮದಲ್ಲಿ ಗಾಣದಿಂದ ಎಣ್ಣೆ ತಯಾರಿಸುತ್ತಿರುವುದು.


ಆಧುನಿಕ ತಂತ್ರಜ್ಞಾನದಿಂದಾಗಿ ಹಲವಾರು ಪರಂಪರಾಗತ ಉದ್ದಿಮೆಗಳು ಕಣ್ಮರೆಯಾಗುತ್ತಿವೆ. ಅವುಗಳಲ್ಲಿ ಎಣ್ಣೆ ಗಾಣಗಳೂ ಒಂದು. ಹಿಂದೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಹಲವಾರು ಗ್ರಾಮಗಳಲ್ಲಿದ್ದ ಗಾಣಗಳು ಈಗ ಕೇವಲ ಪಳೆಯುಳಿಕೆಗಳಾಗಿ ಉಳಿದಿವೆ. ಸಂಪ್ರದಾಯಿಕ ಎಣ್ಣೆ ಗಾಣಗಳು ಎಣ್ಣೆ ಕಾರ್ಖಾನೆಯೊಂದಿಗೆ ಯಾವ ತರಹದ ಪೈಪೋಟಿಗಳನ್ನು ನಡೆಸಲಸಾಧ್ಯವಾಗಿವೆ. ಆದರೆ ಶಿಡ್ಲಘಟ್ಟ ತಾಲ್ಲೂಕಿನ ಶೆಟ್ಟಹಳ್ಳಿಯಲ್ಲಿ ಇನ್ನೂ ಹಳೆಯ ಗಾಣವನ್ನೇ ನಂಬಿ ಜೀವನ ನಡೆಸುತ್ತಿರುವುದು ವಿಶೇಷ. ಎಲ್ಲಾ ಗಾಣಗಳೂ ನಿಂತುಹೋಗಿದ್ದರೂ ಶೆಟ್ಟಹಳ್ಳಿ ನಾರಾಯಣಪ್ಪ ಅವರು ಮಾತ್ರ ಪರಂಪರೆಯ ಪಳೆಯುಳಿಕೆಯಾಗಿ ಮುಂದುವರೆಸಿದ್ದಾರೆ.
ಒಂದು ವಸ್ತುವನ್ನು ಹಿಂಡಿ, ಅದಕ್ಕೆ ದ್ರವರೂಪ ನೀಡುವುದು ಗಾಣದ ಮೂಲ ಉದ್ದೇಶ. ಮೂಲತಃ ಕೊಬ್ಬರಿ, ಕಡಲೆ, ಹರಳು, ಹೊನ್ನೆ, ಎಳ್ಳು, ಔಡಲ, ಕುಸುಬಿ ಮುಂತಾದ ಎಣ್ಣೆ ಹಿಂಡುವ ಸಾಧನವಾಗಿದ್ದ ಗಾಣ, ನಂತರದ ದಿನಗಳಲ್ಲಿ ಕಬ್ಬನ್ನು ಅರೆಯುವ ಸಾಧನವಾಗಿ ರೂಪುಗೊಂಡು ಆಲೆಮನೆ ಎಂಬ ಹೆಸರು ಪಡೆಯಿತು.

ಗಾಣದ ವಿನ್ಯಾಸವು ಮೊದಲು ಸುಮಾರು ೯ ರಿಂದ ೧೦ ಅಡಿ ವ್ಯಾಸದ ಚಪ್ಪಟೆಯಾದ ಗಟ್ಟಿ ನೆಲ ನಿರ್ಮಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಇಲಿ ತೈಲ ಬೀಜಗಳನ್ನು ಹಾಕಲು ದೊಡ್ಡ ಒರಳನ್ನು ಇಡಲಾಗುತ್ತದೆ. ಅದಕ್ಕೆ ಗಾಣದ ಮರವನ್ನು ಕಟ್ಟುತ್ತಾರೆ. ಕಬ್ಬಿಣದ ಬಳೆಯ ಅಂಚನ್ನುಳ್ಳ ಮರದ ಒನಕೆಯನ್ನು ಗಾಣದ ಒರಳಿನ ಸೂಕ್ತವಾದ ಆಯಕಟ್ಟಿನ ಸ್ಥಳದಲ್ಲಿ ಸ್ಥಾಪಿಸಿರುತ್ತಾರೆ. ಗಾಣದ ಮರ ಹಾಗೂ ಒರಳಿನ ಕೆಳಭಾಗಕ್ಕೂ ಹೊಂದಿಕೊಂಡಿರುವಂತೆ ಕತ್ತರಿ ಹಲಗೆಯೊಂದನ್ನು ನಿರ್ಮಿಸಿ ಆ ಹಲಗೆಯ ಮೇಲೆ ಭಾರವಾದ ಕಲ್ಲುಗಳನ್ನು ಹೇರಿರುತ್ತಾರೆ.
ಕತ್ತರಿ ಹಲಗೆಯು ತನ್ನೊಂದು ಹಗ್ಗದಿಂದ ಗಾಣದ ಮಧ್ಯಭಾಗವನ್ನು ಆವರಿಸಿಕೊಂಡು ಭದ್ರವಾಗಿರುತ್ತದೆ. ನಂತರ ಒನಕೆಗೆ ಹೊಂದಿಕೊಂಡು ಆಸರೆಯಾಗಿರುವಂತೆಯೂ ಬೀಜಗಳನ್ನು ಅರೆಯುವ ಪ್ರಧಾನ ಕ್ರಿಯೆಯು ಸುಸೂತ್ರವಾಗುವಂತೆ ಮಲ್ಲಗಂಬವೊಂದನ್ನು ಸ್ವಲ್ಪ ಓರೆಯಾಗಿ ನಿಲ್ಲಿಸಲಾಗುತ್ತದೆ. ಹೀಗೆ ಸ್ಥಾನ ಗ್ರಹಣ ಮಾಡಿದ ಈ ಮಲ್ಲಗಂಬವು ಮಧ್ಯದಲ್ಲಿ ಬಲವಾದ ಹಗ್ಗದ ಜೋಡಣೆಯನ್ನು ಹೊಂದಿರುತ್ತದೆ. ಈ ಎಲ್ಲಾ ಸಿದ್ಧತೆಗಳನ್ನು ಒಳಗೊಂಡು ರಚನೆಯಾದ ಎಣ್ಣೆಗಾಣದ ಕ್ರಿಯೆಯಿಂದ ಕೊಬ್ಬರಿ, ಔಡಲ, ಶೇಂಗಾ ಮುಂತಾದ ತೈಲ ಬೀಜಗಳ ಎಣ್ಣೆ ಉತ್ಪಾದನೆಯಾಗುತ್ತದೆ. ಇಂಥಾ ಪ್ರತಿಭಾಪೂರ್ಣವಾದ ಗಾಣದ ಕರಕುಶಲ ಕಲೆಯು ಬಡಿಗನ ಕುಶಾಗ್ರಮತಿಯನ್ನು ಪ್ರತಿನಿಧಿಸುತ್ತದೆ. ನೋಡಲು ಲಿಂಗದ ಆಕಾರದ ಈ ಗಾಣ ತುಂಬಾ ಕಲಾತ್ಮಕತೆಯಿಂದ ಕೂಡಿದುದಾಗಿದೆ.


ಎಣ್ಣೆ ಕಾಳುಗಳನ್ನು ಬೆಳಗಿನ ಅವಧಿಯಲ್ಲಿ ಗಾಣಕ್ಕೆ ಹಾಕಿ ಪುಡಿ ಮಾಡಿ ಜರಡಿ ಹಿಡಿಯುತ್ತಿರುವುದು.


‘ನಮ್ಮ ಗಾಣದ ಕಲ್ಲು ಎಷ್ಟು ಹಳೆಯದೋ ತಿಳಿಯದು. ನಾನು ಹುಟ್ಟುವ ಮೊದಲಿಂದಲೂ ಇತ್ತು. ವರ್ಷದ ಬಿಸಿಲಿರುವ ಮೂರ್ನಾಕು ತಿಂಗಳಿನಲ್ಲಿ ಮಾತ್ರ ಈ ಕಸುಬು ಚೆನ್ನಾಗಿ ನಡೆಯುತ್ತದೆ. ಮೊದಲು ನಮ್ಮ ಹಳ್ಳಿಯಲ್ಲಿ ಎಂಟು ಗಾಣಗಳಿದ್ದವು. ಈಗ ಎಲ್ಲರೂ ನಿಲ್ಲಿಸಿಬಿಟ್ಟಿದ್ದಾರೆ. ಅವರಲ್ಲಿ ಕೆಲವರು ಯಂತ್ರಗಳಿಂದ ತಯಾರಿಸಿದ ಎಣ್ಣೆಯನ್ನು ಮಾರುವುದನ್ನು ಕಸುಬನ್ನಾಗಿಸಿಕೊಂಡಿದ್ದಾರೆ. ಮೊದಲಾದರೆ ಅರಳು, ಕಡಲೆ, ಇಪ್ಪೆ, ಎಳ್ಳು, ಕೊಬ್ಬರಿ ಮೊದಲಾದವುಗಳಿಂದ ಎಣ್ಣೆ ತೆಗೆಯುತ್ತಿದ್ದೆವು. ಆದರೆ ಈಗ ಹೆಚ್ಚಾಗಿ ಹೊಂಗೆಯನ್ನೇ ನಂಬಿದ್ದೇವೆ’ ಎನ್ನುತ್ತಾರೆ ಹಿರಿಯರಾದ ನಾರಾಯಣಪ್ಪ.

‘ಒಣಗಿದ ಎಣ್ಣೆ ಕಾಳುಗಳನ್ನು ಬೆಳಗಿನ ಅವಧಿಯಲ್ಲಿ ಗಾಣಕ್ಕೆ ಹಾಕಿ ಪುಡಿ ಮಾಡಿ ಜರಡಿ ಹಿಡಿಯುತ್ತೇವೆ. ನಂತರ ಪುಡಿಗೆ ಸ್ವಲ್ಪ ನೀರು ಹಾಕಿ ಹದವಾಗಿ ಉಂಡೆ ಮಾಡಿಟ್ಟು ಅವನ್ನು ಸಂಜೆ ವೇಳೆಗೆ ಗಾಣಕ್ಕೆ ಹಾಕಿ ಎಣ್ಣೆ ತೆಗೆಯುತ್ತೇವೆ. ೫೦ ಕೆಜಿ ಬೀಜದಿಂದ ೧೦ ಕೆಜಿ ಎಣ್ಣೆ ತಯಾರಾಗುತ್ತದೆ ಮತ್ತು ೩೦ ಕೆಜಿ ಹಿಂಡಿ ಸಿಗುತ್ತದೆ. ಹಿಂಡಿ ತೋಟಗಳಿಗೆ ಒಳ್ಳೆಯ ಗೊಬ್ಬರ. ಒಂದು ಕೆಜಿ ಎಣ್ಣೆ ೬೫ ರಿಂದ ೭೦ ರೂಗೆ ಮಾರಾಟವಾದರೆ, ಹಿಂಡಿ ಒಂದು ಕೆಜಿಯನ್ನು ೧೬ ರೂಗಳಂತೆ ಮಾರುತ್ತೇವೆ. ಹೊಂಗೆ ಬೀಜವನ್ನು ನಾವು ರೈತರಿಂದ ಒಂದು ಸೇರಿಗೆ ೨೦೦ ಗ್ರಾಂ ಎಣ್ಣೆ ನೀಡಿ ಪಡೆಯುತ್ತೇವೆ. ಅದರಿಂದ ಸಿಗುವ ಚಕ್ಕೆ ಅಥವಾ ಹಿಂಡಿಯೇ ನಮಗೆ ಲಾಭ. ಯಂತ್ರದಿಂದ ತಯಾರಾದ ಎಣ್ಣೆಗಿಂತ ಗಾಣದಲ್ಲಿ ತೆಗೆಯುವ ಎಣ್ಣೆ ಗುಣಮಟ್ಟದಲ್ಲಿ ಚೆನ್ನಾಗಿರುತ್ತದೆಂದು ಕೆಲವರು ನಮ್ಮಲ್ಲೇ ಕೊಳ್ಳುತ್ತಾರೆ. ಗಾಣಕ್ಕೆ ಕೆಲಸವಿರದ ಸಮಯದಲ್ಲಿ ನಾವು ವ್ಯವಸಾಯ ಮತ್ತು ಪಶುಪಾಲನೆಯಲ್ಲಿ ತೊಡಗುತ್ತೇವೆ’ ಎಂದು ಅವರು ಹೇಳಿದರು.


ಗಾಣದಿಂದ ಹೊರಬರುತ್ತಿರುವ ಎಣ್ಣೆ.


‘ಗುಂಡು ತೋಪುಗಳು ಕರಗುತ್ತಿವೆ. ಅವುಗಳ್ಲಲಿ ಬೆಳೆಯುತ್ತಿದ್ದ ಹೊಂಗೆ ಇಪ್ಪೆ, ಬೇವು ಮೊದಲಾದ ಮರಗಳಿಂದ ಸಿಗುತ್ತಿದ್ದ ಎಣ್ಣೆ ಬೀಜಗಳ ಲಭ್ಯತೆ ಕಡಿಮೆಯಾಗುತ್ತಿದೆ. ಅಕಸ್ಮಾತ್ ಎಣ್ಣೆ ಬೀಜಗಳು ಸಿಕ್ಕರೂ ಕೊಂಡು ಶೇಖರಿಸುವಷ್ಟು ಹಣ ಗಾಣದವರ ಬಳಿ ಇರುವುದಿಲ್ಲ. ಹೀಗಾಗಿ ಗಾಣಗಳು ಸ್ಥಗಿತಗೊಂಡು, ದುಡಿಯುವ ಸಂಪತ್ತು ವ್ಯರ್ಥವಾಗಿದೆ. ಸರ್ಕಾರ ಎಣ್ಣೆ ಬೀಜಗಳನ್ನು ಒದಗಿಸುವುದರಿಂದ ಈ ಪಾರಂಪರಿಕ ವೃತ್ತಿಯ ಅವಸಾನವನ್ನು ತಡೆಯಲು ಪ್ರಯತ್ನಿಸಬೇಕು’ ಎಂದು ಗ್ರಾಮದ ಹಿರಿಯರೊಬ್ಬರು ತಿಳಿಸಿದರು.


ತಯಾರಾದ ಎಣ್ಣೆಯನ್ನು ಡಬ್ಬಿಗೆ ಸುರಿಯುತ್ತಿರುವುದು.


ಕರ್ನಾಟಕದಲ್ಲಿ ಎಣ್ಣೆ ತೆಗೆಯುವ ಸಮುದಾಯವನ್ನು ಗಾಣಿಗ ಎನ್ನುತ್ತಾರೆ. ಕೇರಳದಲ್ಲಿ ಗಾಣಿಗರನ್ನು ಗಾನಿಕರೆಂದು ಕರೆಯುವರು. ಗಾಣಿಗರಲ್ಲಿ ಎಣ್ಣೆ ತೆಗೆಯುವ ರೀತಿ, ಎತ್ತಿನ ಜೋಡುಗಳ ಸಂಖ್ಯೆ, ಎಣ್ಣೆ ತೆಗೆಯಲು ಉಪಯೋಗಿಸುವ ಚೌಕಟ್ಟು ಮತ್ತು ಭಾಷೆಗಳ ಆಧಾರದ ಮೇಲೆ ಉಪಪಂಗಡಗಳಿವೆ. ಕಿರುಗಾಣಿಗ, ಹೆಗ್ಗಾಣಿಗ, ಜ್ಯೋತಿಘನ, ಪಂಚಮಸಾಲಿ ಗಾಣಿಗ, ಸಜ್ಜನ, ತೆಲೀ, ವನಿಯನ್, ಗಾಂಡ್ಲಾ, ಕರಿಗಾಣಿಗ, ಬಿಳಿಗಾಣಿಗ ಮತ್ತು ತುಳುಗಾಣಿಗರೆಂಬ ಪಂಗಡಗಳಿವೆ.

ಇಪ್ಪತ್ತನೇ ಶತಮಾನದ ಆರಂಭದಲ್ಲಿ ನಮ್ಮ ದೇಶದಲ್ಲಿ ಸುಮಾರು ಐದು ಲಕ್ಷ ಗಾಣಗಳು ಹನ್ನೆರಡು ವಿಧದ ಎಣ್ಣೆ ತಯಾರಿಕೆಯಲ್ಲಿ ತೊಡಗಿದ್ದವು. ಕ್ರಿ.ಪೂ.೧೫೦೦ ರಲ್ಲಿಯೇ ಗಾಣವಿತ್ತಿಂದು ಋಗ್ವೇದದಿಂದ ತಿಳಿದುಬರುತ್ತದೆ. ಯಂತ್ರಗಳು ಬರುವ ಮುನ್ನ ಸುಮಾರು ೨೫೦೦ ವರ್ಷಗಳ ಕಾಲ ದೇಶದ ಎಣ್ಣೆಯ ಅಗತ್ಯತೆಯನ್ನು ಪೂರೈಸಿದ್ದಾವೆ ಗಾಣಗಳು ಎಂದು ತಮ್ಮ ‘ಘಾನಿ - ದ ಟ್ರಡಿಷನಲ್ ಆಯಿಲ್‌ಮಿಲ್ ಆಫ್ ಇಂಡಿಯಾ’ ಎಂಬ ಪುಸ್ತಕದಲ್ಲಿ ಬರೆದಿದ್ದಾರೆ ಕೆ.ಟಿ.ಅಚ್ಚಯ್ಯ.