Sunday, March 18, 2012

ಹಿಪ್ಪುನೇರಳೆ ಒಡಲಲ್ಲಿ ಹಕ್ಕಿ ಚಿತ್ತಾರ


ಶಿಡ್ಲಘಟ್ಟದ ಗಾಂಧಿನಗರದಲ್ಲಿರುವ ಶೆಟ್ಟಪ್ಪನವರ ಶಂಕರ್ ಅವರ ಹಿತ್ತಲಿನಲ್ಲಿ ಎತ್ತರಕ್ಕೆ ಬೆಳೆದಿರುವ ಹಿಪ್ಪುನೇರಳೆ ಗಿಡ.

ಶಿಡ್ಲಘಟ್ಟ ತಾಲ್ಲೂಕು ಹಿಪ್ಪುನೇರಳೆ ಸೊಪ್ಪಿಗೆ ಹೆಸರುವಾಸಿ. ರೇಷ್ಮೆ ಹುಳುಗಳಿಗೆ ಆಹಾರವಾಗಿ ಬಳಸುವುದರಿಂದ ಕಂಬಳಿ ಸೊಪ್ಪೆಂದೇ ಇದನ್ನು ಕರೆಯಲಾಗುತ್ತದೆ. ಆದರೆ ಇದನ್ನು ಎತ್ತರವಾಗಲು ಯಾರೂ ಬಿಡುವುದಿಲ್ಲ. ಸೊಪ್ಪು ಬಲಿಯುತ್ತಿದ್ದಂತೆಯೇ ಕತ್ತರಿಸಲಾಗುತ್ತದೆ. ಹಾಗಾಗಿ ಇದರ ಹಣ್ಣುಗಳನ್ನು ಕಾಣುವುದು ಅಪರೂಪ.
ಆದರೆ ಇದಕ್ಕೆ ಅಪವಾದ ಎಂಬಂತೆ ಪಟ್ಟಣದ ಗಾಂಧೀನಗರದ ಶೆಟ್ಟಪ್ಪನವರ ಶಂಕರ್ ಅವರು ತಮ್ಮ ಹಿತ್ತಲಿನ ಕೈತೋಟದಲ್ಲಿ ಹಿಪ್ಪುನೇರಳೆ ಗಿಡವನ್ನು ಬೆಳೆಸಿದ್ದು ಸುಮಾರು ೩೫ ಅಡಿ ಎತ್ತರ ಬೆಳೆದಿದೆ. ತೆಂಗಿನ ಮರದ ಎತ್ತರದವರೆಗೆ ಬೆಳೆದಿರುವ ಹಿಪ್ಪುನೇರಳೆ ಗಿಡದ ತುಂಬ ಹಣ್ಣುಗಳು ಬಿಟ್ಟಿವೆ. ಈ ಹಣ್ಣುಗಳಿಗಾಗಿ ಬರುವ ವೈವಿಧ್ಯಮಯ ಪಕ್ಷಿಗಳಿಂದ ಇವರ ಹೂತೋಟ ಪಕ್ಷಿಧಾಮವಾಗಿದೆ.


ಹಿಪ್ಪುನೇರಳೆ ಹಣ್ಣು.

ಕೋಗಿಲೆ, ಗಿಳಿ, ಬುಲ್‌ಬುಲ್, ಹಸಿರುಗುಟುರ, ಪಿಕಳಾರ, ಮೈನಾ, ಸೊಪ್ಪುಗುಟುರ, ಕಾಮಾಲೆ ಹಕ್ಕಿ ಅಥವಾ ಗೋಲ್ಡನ್ ಓರಿಯೋಲ್, ರೋಸಿ ಪ್ಯಾಸ್ಚರ್ ಮುಂತಾದ ಹಕ್ಕಿಗಳೊಂದಿಗೆ ಅಳಿಲುಗಳು ಮತ್ತು ಮಂಗಗಳೂ ಹಣ್ಣು ತಿನ್ನಲು ಸ್ಪರ್ಧಿಸುತ್ತವೆ. ಹಕ್ಕಿಗಳು ಇಷ್ಟಪಟ್ಟು ಈ ಹಿಪ್ಪುನೇರಳೆ ಹಣ್ಣುಗಳನ್ನು ತಿನ್ನುವುದರಿಂದಾಗಿ ಮನುಷ್ಯರ ನಾಲಗೆ ಕೆಂಪಾಗುವಂತೆ ಅವುಗಳ ಕೊಕ್ಕು ಕೆಂಬಣ್ಣಕ್ಕೆ ತಿರುಗಿರುತ್ತವೆ.
ರೇಷ್ಮೆಯಂತೆಯೇ ಹಿಪ್ಪುನೇರಳೆ ಸೊಪ್ಪು ಕೂಡ ಚೀನಾದಿಂದಲೇ ಬಂದಿದೆ. ಉದ್ದುದ್ದ ಕೋಲಿನಂತಹ ಕಾಂಡ, ಹೃದಯಾಕಾರದ ಎಲೆ ಮತ್ತು ಎಲೆಯ ತೊಟ್ಟಿನ ಬುಡದಲ್ಲಿ ಕಂಬಳಿಹುಳುವಿನಂತೆ ನಸುಗುಲಾಬಿ ಬಣ್ಣದ ಕಾಯಿ. ಹಣ್ಣಾದಾಗ ನೇರಳೆ ಕಪ್ಪು ಬಣ್ಣ ತಳೆಯುತ್ತದೆ. ರುಚಿ ಮಾತ್ರ ಹುಳಿ ಮಿಶ್ರಿತ ಸಿಹಿ.


ಹಿಪ್ಪುನೇರಳೆ ಹಣ್ಣನ್ನು ತಿನ್ನಲು ಆಗಮಿಸಿರುವ ಗೋಲ್ಡನ್ ಓರಿಯೋಲ್ ಹಕ್ಕಿ.

ಹಿಪ್ಪುನೇರಳೆ ಹಣ್ಣು ಬಿಡುವುದು ಬೇಸಿಗೆಯ ಕಾಲದಲ್ಲಿ. ಇದರಲ್ಲಿ ಶರ್ಕರಪಿಷ್ಟ, ಸಸಾರಜನಕ, ನಾರು, ಸುಣ್ಣ, ರಂಜಕ ಮೊದಲಾದ ಪೌಷ್ಟಿಕಾಂಶಗಳಿವೆ. ಇದರಿಂದ ತಂಪುಪಾನೀಯವನ್ನೂ ತಯಾರಿಸಬಹುದು. ಈ ಹಣ್ಣಿಗೆ ಹಲವಾರು ಔಷಧೀಯ ಗುಣಗಳೂ ಇವೆ. ರಕ್ತ ಸಂಚಲನೆಗೆ, ಹೃದಯಕ್ಕೆ ಒಳ್ಳೆಯದು. ಶೀತಕಾರಕ, ಪಿತ್ತ ಶಮನಕಾರಿ ಹಾಗೂ ಜೀರ್ಣಕಾರಿ. ದೊರಗು ಹಣ್ಣಿನಿಂದ ಮಲಬದ್ಧತೆ ನಿವಾರಣೆಯಾದರೆ, ಚಕ್ಕೆ ಹಾಗೂ ಬೇರಿನಲ್ಲಿ ಜಂತುನಾಶಕ ಗುಣವಿದೆ. ಎಲೆ ಚಟ್ನಿಯ ಲೇಪದಿಂದ ಗಾಯ ಮಾಯುತ್ತದೆ. ಹೊಟ್ಟೆ ಶೂಲೆ, ಅತಿ ಬಾಯಾರಿಕೆ ಮತ್ತು ಸುಸ್ತು ನಿವಾರಣೆಗೆ ಹಣ್ಣಿನ ಸಿರಪ್ ಉತ್ತಮ.


ಹಿಪ್ಪುನೇರಳೆ ಹಣ್ಣು ತಿಂದು ಕೊಕ್ಕೆಲ್ಲಾ ಕೆಂಪಾದ ಕೋಗಿಲೆ.

"ನಮ್ಮ ಮನೆಯ ಹಿತ್ತಲಿನಲ್ಲಿರುವ ಹಿಪ್ಪುನೇರಳೆ ನಾಟಿ ತಳಿಯದ್ದು. ಇದಕ್ಕೆ ಸುಮಾರು ೧೫ ವರ್ಷಗಳಾಗಿರಬಹುದು. ನಮಗೇ ಆಶ್ಚರ್ಯವಾಗುವ ರೀತಿ ಈ ಗಿಡ ಎತ್ತರವಾಗಿ ಬೆಳೆಯತೊಡಗಿತು. ಇದು ಹಣ್ಣು ಬಿಟ್ಟಾಗೆಲ್ಲಾ ಹಲವಾರು ಹಕ್ಕಿಗಳು ಬರುವುದರಿಂದ ಕಡಿಯದೇ ಹಾಗೇ ಬೆಳೆಯಲು ಬಿಟ್ಟೆವು. ವಿದ್ಯುತ್ ತಂತಿಗಳಿಗೆ ಅಡಚಣೆಯಾಗುತ್ತದೆಂದು ಒಮ್ಮೆ ವಿದ್ಯುತ್ ಇಲಾಖೆಯವರು ದೂರಿದ್ದರು. ಆಗ ಒಂದೆರಡು ರೆಂಬೆಗಳನ್ನು ಕಡಿದು ಗಿಡವನ್ನು ಎಳೆದು ಕಟ್ಟಿದ್ದೆವು. ಆದರೆ ಈಗ ಅದು ವಿದ್ಯುತ್ ತಂತಿಗಳಿಗಿಂತ ಮೇಲೆ ಬೆಳೆದಿದೆ. ಪ್ರತಿ ಬೇಸಿಗೆಯಲ್ಲೂ ಹಣ್ಣುಗಳು ಬಿಟ್ಟಾಗ ಹೆಸರೇ ತಿಳಿಯದ ಬಣ್ಣ ಬಣ್ಣದ ಹಕ್ಕಿಗಳು ಹಣ್ಣಿಗಾಗಿ ಬರುತ್ತವೆ. ಕೆಲವು ಹಕ್ಕಿಗಳ ಶಬ್ದಗಳಂತೂ ಕೇಳಲು ಮಧುರವಾಗಿರುತ್ತದೆ" ಎನ್ನುತ್ತಾರೆ ಶೆಟ್ಟಪ್ಪನವರ ಶಂಕರ್.


ಹಿಪ್ಪುನೇರಳೆ ಹಣ್ಣನ್ನು ಬಾಯಲ್ಲಿಟ್ಟುಕೊಂಡಿರುವ ಗೋಲ್ಡನ್ ಓರಿಯೋಲ್ ಹೆಣ್ಣು ಹಕ್ಕಿ.