Friday, October 29, 2010

ಗೆಣಸಿಗೂ ಬರುತ್ತಿದೆ ಬೇಡಿಕೆ!!

ಬಗೆಬಗೆಯ ತರಕಾರಿಗಳು ಜನರಿಗೆ ಬೇರೆ ಬೇರೆ ಕಾರಣಕ್ಕೆ ಇಷ್ಟವಾಗುತ್ತವೆ. ಬ್ರಿಟೀಷರ ಬಳುವಳಿಯಾಗಿ ಭಾರತಕ್ಕೆ ಬಂದಿರುವ ತರಕಾರಿಯೊಂದು ಶಿಡ್ಲಘಟ್ಟದಲ್ಲಿ ಈಗ ಜನಪ್ರಿಯತೆ ಪಡೆಯುತ್ತಿದೆ. ಜನತೆ ಸ್ವಇಚ್ಛೆಯಿಂದ ಹಿತ್ತಲಿನಲ್ಲಿ, ಹೂತೋಟಗಳಲ್ಲಿ ಮತ್ತು ಮನೆಯ ಮುಂದೆ ರಸ್ತೆ ಬದಿಯಲ್ಲಿ ಬೆಳೆಸುತ್ತಿರುವ ತರಕಾರಿ ಮರಗೆಣಸು. ಇದಕ್ಕೆಲ್ಲ ಅತ್ಯುತ್ತಮ ಉದಾಹರಣೆಯಾಗಿ ರೇಷ್ಮೆ ಗೂಡು ಮಾರುಕಟ್ಟೆ ಸಮೀಪ ಮರಗೆಣಸಿನ ಗಿಡವೊಂದು ಹುಲುಸಾಗಿ ಬೆಳೆದಿದೆ.


ಶಿಡ್ಲಘಟ್ಟದ ರೇಷ್ಮೆ ಗೂಡು ಮಾರುಕಟ್ಟೆಯ ಬಳಿಯ ರಮ್ಯದರ್ಶನ್ ಹೋಟೆಲ್ ಮಾಲೀಕ ಕೃಷ್ಣ ಬೆಳೆದಿರುವ ಮರಗೆಣಸಿನ ಗಿಡ.


ಭಾರತೀಯ ಭಾಷೆಗಳಲ್ಲಿ ಈ ಗಿಡವನ್ನು ತಾಪಿಯೋಕ, ಟಾಪಿಯೋಕ ಎನ್ನುವರು. ಗಿಡವು ಸಣ್ಣ ಮರದಂತಿದ್ದು ಉಬ್ಬಿದ ಬೇರುಗಳು ಸಿಹಿಗೆಣಸನ್ನು ಹೋಲುವುದರಿಂದ ಮರಗೆಣಸು ಎನ್ನುವರು. ತಮಿಳಿನಲ್ಲಿ ಮರವಳ್ಳಿ ಕಿಳಂಗು, ಮಲಯಾಳಂನಲ್ಲಿ ಮರಚೀನಿ ಎನ್ನುತ್ತಾರೆ. ದಕ್ಷಿಣ ಅಮೆರಿಕ ಮೂಲದ ಮರಗೆಣಸು ಭಾರತದಲ್ಲಿ ಅಸ್ಸಾಂ, ಬಂಗಾಳ, ತಮಿಳುನಾಡು, ಕೇರಳ ಮತ್ತು ಕರ್ನಾಟಕ ಹೊರತುಪಡಿಸಿದರೆ ಬೇರೆಲ್ಲೂ ಬಳಕೆಯಲ್ಲಿಲ್ಲ.
ಕೇರಳವನ್ನು ಮರಗೆಣಸಿನ ಕಣಜವೆನ್ನುತ್ತಾರೆ. ಅವರು ಇದರಿಂದ ಅನೇಕ ರೀತಿಯ ಖಾದ್ಯಗಳನ್ನು ತಯಾರಿಸುತ್ತಾರೆ ಹಾಗೂ ಉತ್ತಮ ರೀತಿಯಲ್ಲಿ ಸದ್ಭಳಕೆ ಮಾಡುತ್ತಾರೆ. ತುಂಡು ಮಾಡಿ, ಹಿಟ್ಟಿನ ರೂಪ ನೀಡಿ ತಿಂಗಳುಗಟ್ಟಲೇ ದಾಸ್ತಾನು ಮಾಡುತ್ತಾರೆ. ರೊಟ್ಟಿ, ಪುಟ್ಟು, ಆಪ್ಪಂ, ಪಲ್ಯ, ಕೂಟು, ಬಜ್ಜಿ, ಬೋಂಡ, ಹಪ್ಪಳ, ವಡೆ, ಚಿಪ್ಸ್ ಇತ್ಯಾದಿ ಅನೇಕ ವ್ಯಂಜನಗಳನ್ನು ತಯಾರಿಸುವುದಅಲ್ಲಿ ಅವರು ನಿಸ್ಸೀಮರು.


ಮರಗೆಣಸು ಮತ್ತು ಅದರಿಂದ ತಯಾರಿಸಿರುವ ಚಿಪ್ಸ್.

"ನಾನಿದನ್ನು ಹತ್ತು ವರ್ಷಗಳ ಹಿಂದೆ ಕೇರಳದಿಂದ ತಂದು ನೆಟ್ಟಿದ್ದೆ. ಇಂದು ಇದು ಹುಲುಸಾಗಿ ಬೆಳೆಯುತ್ತಿದೆ. ಆರು ತಿಂಗಳಿಗೊಮ್ಮೆ ಗೆಣಸುಗಡ್ಡೆ ಕೀಳುತ್ತೇವೆ. ಮನೆಯಲ್ಲಿ ಬಳಸುವುದರ ಜೊತೆಗೆ ಹೋಟೆಲಿನಲ್ಲೂ ಬಳಸುತ್ತೇವೆ. ಇದರ ರುಚಿ ನೋಡಿ ಅನೇಕರು ತೆಗೆದುಕೊಂಡು ಹೋಗಿದ್ದಾರೆ. ಇದರ ಕಾಂಡದ ತುಂಡು ನೆಟ್ಟರೆ ಸಾಕು ಬೆಳೆಯುತ್ತದೆ" ಎಂದು ರಮ್ಯ ದರ್ಶನ್ ಹೋಟೆಲ್ ಮಾಲೀಕ ಕೃಷ್ಣ ವಿವರಿಸಿದರು.
"ಮೊದಲು ಇದನ್ನು ತೋಟಗಳ ಬದುಗಳಲ್ಲಿ ಮಣ್ಣಿನ ಸವೆತ ತಡೆಯಲು ಬೆಳೆಯುತ್ತಿದ್ದರು. ನೆರೆಯ ರಾಜ್ಯಗಳಂತೆ ಇದನ್ನು ಆಹಾರ ಮತ್ತು ವಾಣಿಜ್ಯ ಬೆಳೆಯಾಗಿ ಪರಿಗಣಿಸಿ ನಮ್ಮ ರೈತರೂ ಆರ್ಥಿಕ ಲಾಭ ಮಾಡಿಕೊಳ್ಳಬಹುದು. ಇದಕ್ಕೆ ಹೆಚ್ಚು ನೀರು ಬೇಕಾಗುವುದಿಲ್ಲ. ಸಾರವಿರುವ ಜಮೀನಿನಲ್ಲಿ ಒಂದು ಗಿಡ ೧೦ ರಿಂದ ೧೫ ಕೆಜಿ ಇಳುವರಿ ನೀಡುತ್ತದೆ. ಬಟ್ಟೆಗೆ ಹಾಕುವ ಗಂಜಿ ಹಾಗೂ ಸಬ್ಬಕ್ಕಿ ತಯಾರಿಸಲೂ ಇದನ್ನು ಬಳಸಲಾಗುತ್ತದೆ. ಇದರ ಸೊಪ್ಪು ದನ ಮೇಕೆಗಳಿಗೆ ಆಹಾರ ಕೂಡ. ಹಂದಿ ಸಾಕಣೆ ಮಾಡುವವರಿಗೂ ಇದು ಉಪಯುಕ್ತ’ ಎನ್ನುತ್ತಾರೆ ಪ್ರಗತಿಪರ ರೈತ ಹಿತ್ತಲಹಳ್ಳಿಯ ಗೋಪಾಲಗೌಡ.

Saturday, October 23, 2010

ಕಾಯಕದಲ್ಲಿ ಅಂಚೆಯಣ್ಣ


ಅಂಚೆಯಣ್ಣನ ಜ್ಞಾಪಕಾರ್ಥವಾಗಿ ೧೯೭೭ರಲ್ಲಿ ಬಿಡುಗಡೆಯಾದ ೨೫ ಪೈಸೆ ಮುಖಬೆಲೆಯ ಅಂಚೆಚೀಟಿ.

ಸಣ್ಣ ಊರಾಗಲಿ, ಗ್ರಾಮವಾಗಲಿ ಅಂಚೆಯಣ್ಣನ ವೃತ್ತಿ ಕೇವಲ ಟಪಾಲು ಬಟವಾಡೆಯಲ್ಲ. ಮದುವೆ, ಹೆರಿಗೆ, ಫಲಿತಾಂಶ, ಕೋರ್ಟು ವಾರಂಟು, ಸಾವು, ರೋಗ, ವೃದ್ಧಾಪ್ಯ ವೇತನ ಎಲ್ಲವನ್ನೂ ಮನೆಮನೆಗೆ ಹಂಚುವ ಆತ ಅಂತರಂಗದ ಸದಸ್ಯ. ಕಾಗದಗಳ ಕಟ್ಟು ಸೈಕಲ್ ಕ್ಯಾರಿಯರ್‌ಗೆ ಸಿಕ್ಕಿಸಿಕೊಂಡು ಸೈಕಲ್‌ನಲ್ಲಿ ಹೊರಟು ಕಾಗದಗಳನ್ನು ವಿತರಿಸುವ ಆತ ಒಂದರ್ಥದಲ್ಲಿ ಸಮಾಜದ ಚಲನಶೀಲ ಬಂಧು.


ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರದ ವಾಸಿ ಹೆಚ್.ಕೆ.ರಮೇಶ್ ಹಳ್ಳಿಹಳ್ಳಿ ತಿರುಗಿ ಪತ್ರ ರವಾನಿಸುವುದು.


ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರದ ಹೆಚ್.ಕೆ.ರಮೇಶ್ ಇಂಥ ಚಲನಶೀಲ ಪೋಸ್ಟ್‌ಮನ್‌ಗಳಲ್ಲಿ ಒಬ್ಬರು. ಇವರು ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ಶಾಖಾ ಪೋಸ್ಟ್ ಮಾಸ್ಟರ್. ಆದರೆ ಅವರ ಕಾರ್ಯ ಎಲ್ಲವನ್ನೂ ಒಳಗೊಂಡಿದೆ. ಟಪಾಲು ಸ್ವೀಕಾರ, ಠಸ್ಸೆ ಹೊಡೆಯುವುದು, ರವಾನೆ, ಹಂಚಿಕೆ ಎಲ್ಲವೂ ಅವರೇ ಮಾಡಬೇಕು. ಜೊತೆಯಲ್ಲಿ ಕವರ್, ಕಾರ್ಡ್, ಸ್ಟಾಂಪ್, ಉಳಿತಾಯ ಖಾತೆ, ಮನಿ ಆರ್ಡರ್, ರಿಜಿಸ್ಟರ್ ಪೋಸ್ಟ್ ಸೇರಿದಂತೆ ಎಲ್ಲವನ್ನೂ ನಿಭಾಯಿಸಬೇಕು.

ಇವರ ಕಾರ್ಯವ್ಯಾಪ್ತಿಗೆ ಕುಂದಲಗುರ್ಕಿ, ದೊಡ್ಡದಾಸೇನಹಳ್ಳಿ, ಚಿಕ್ಕದಾಸೇನಹಳ್ಳಿ, ಚಿಕ್ಕಪಾಪನಹಳ್ಳಿ, ಬಸವನಪರ್ತಿ, ಗೊಲ್ಲಹಳ್ಳಿ, ಸಿದ್ದಾಪುರ, ಗಂಗಾಪುರ ಮತ್ತು ರೊಪ್ಪಾರ್ಲಹಳ್ಳಿ ಬರುತ್ತವೆ. ಬೆಳಿಗ್ಗೆ ಶಿಡ್ಲಘಟ್ಟದ ಕಚೇರಿಯಲ್ಲಿ ಟಪಾಲುಗಳನ್ನು ಪಡೆದು ಕುಂದಲಗುರ್ಕಿಗೆ ಹೋಗಿ ಅಲ್ಲಿಂದ ಸೈಕಲ್ ಏರಿ ತಮ್ಮ ೧೦ ಕಿಮೀ ವ್ಯಾಪ್ತಿಯ ಹಳ್ಳಿಗಳಿಗೆ ತೆರಳಿ ಪತ್ರ ರವಾನಿಸಬೇಕು.


ಭಾರತೀಯ ಅಂಚೆಯು ೧೫೦ ವರ್ಷ ಪೂರೈಸಿದ ನೆನಪಿಗಾಗಿ ೨೦೦೪ರಲ್ಲಿ ಬಿಡುಗಡೆಯಾದ ಅಂಚೆ ಲಕೋಟೆ.

"೩೦೦ ರೂಗಳಿಗೆ ಒಪ್ಪಂದದ ಮೇರೆಗೆ ೧೯೮೬ರಲ್ಲಿ ಕೆಲಸಕ್ಕೆ ಸೇರಿದೆ. ಈಗ ೩೦೦೦ ರೂ ಸಂಬಳ ಬರುತ್ತಿದೆ. ಸೌಲಭ್ಯಗಳಿಗೆ ಸಂಬಂಧಿಸಿದಂತೆ ದೇಶದಾದ್ಯಂತ ಹಲವು ಬಾರಿ ಮುಷ್ಕರಗಳು ನಡೆದರೂ ಹೆಚ್ಚು ಪ್ರಯೋಜನವಾಗಲಿಲ್ಲ. ನಾನಂತೂ ನನ್ನ ಕಾಯಕವನ್ನು ಮುಂದುವರೆಸಿದ್ದೇನೆ" ಎಂದು ಎಚ್.ಕೆ.ರಮೇಶ್ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ.

"ಒಮ್ಮೆ ದೊಡ್ಡದಾಸೇನಹಳ್ಳಿಯ ಶಶಿಕಲಾ ಮತ್ತು ಮಂಜುನಾಥ್ ಎಂಬುವವರಿಗೆ ರಿಜಿಸ್ಟರ್ ಪೊಸ್ಟ್ ಬಂದಿತ್ತು. ಮಧ್ಯಾಹ್ನ ಟಪಾಲು ಪಡೆದು ಹೋಗಿ ಅವರಿಗೆ ತಲುಪಿಸುವಷ್ಟರಲ್ಲಿ ಸಂಜೆಯಾಗಿತ್ತು. ಮಾರನೇ ದಿನವೇ ಅವರಿಗೆ ಸಂದರ್ಶನವಿತ್ತು. ಈಗ ಸಾರಿಗೆ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಜನರು ನನ್ನ ಸೇವೆಯಿಂದ ತೃಪ್ತರಾಗಿದ್ದಾರೆ ಎಂದು ನೊಡಿದಾಗ ಸಂತೋಷವಾಗುತ್ತದೆ. ತಡವಾದರೂ ಪರವಾಗಿಲ್ಲ. ಆ ದಿನವೇ ಸಂಬಂಧಪಟ್ಟವರಿಗೆ ಕಾಗದ ನೀಡಲು ಪ್ರಯತ್ನಿಸುತ್ತೇನೆ" ಎನ್ನುತ್ತಾರೆ ರಮೇಶ್.


ಒಂದು ಲಕ್ಷ ಪೋಸ್ಟ್ ಕಚೇರಿಗಳು ಸ್ಥಾಪನೆಯಾದ ಸವಿನೆನಪಿಗೆ ೧೯೬೮ ರಲ್ಲಿ ಬಿಡುಗಡೆಯಾದ ಅಂಚೆ ಲಕೋಟೆ.

"ಹತ್ತಾರು ಕಿಮೀ ಸೈಕಲ್ ತುಳಿದು ಹಳ್ಳಿ ಹಳ್ಳಿಗೂ ಪತ್ರ ರವಾನಿಸಿ ಹಿಂತಿರುಗಿ ಬರುವಷ್ಟರಲ್ಲಿ ಕತ್ತಲಾಗಿರುತ್ತದೆ. ಊರಿಗೆ ಬರುವ ಬಸ್ ತಪ್ಪಿದರೆ ಸರಹೊದ್ದಿನಲ್ಲಿ ಹಳ್ಳಿಯಲ್ಲಿರುವ ಮನೆಗೆ ನಡೆದು ಬರಬೇಕು. ಇವರ ಕಷ್ಟ ನೋಡಿದರೆ ಯಾರಿಗೂ ಈ ವೃತ್ತಿ ಕೈಗೊಳ್ಳಲು ಇಷ್ಟವಾಗದು. ಸರ್ಕಾರ ಅಂಥವರಿಗೆ ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಕೊಡುವ ಸೌಲಭ್ಯಗಳನ್ನು ನೀಡಬೇಕು" ಎನ್ನುತ್ತಾರೆ ಹನುಮಂತಪುರದ ನಾಗಭೂಷಣ್.

Saturday, October 9, 2010

ಅವಸಾನದ ಅಂಚಿನಲ್ಲಿ ಲಾಳ ಹಾಕುವ ವೃತ್ತಿ

ಜಾನಪದ ಕಲೆಗಳಂತೆ ಗ್ರಾಮೀಣ ಪ್ರದೇಶದ ಹಲವು ಕಸುಬುಗಳು ಹಾಗೂ ಉಪಕಸುಬುಗಳು ನಿರೀಕ್ಷಿತ ಎಂಬಂತೆ ಬದಲಾಗುತ್ತಿವೆ. ಕೆಲವು ಅವಸಾನದ ಅಂಚಿನಲ್ಲಿದ್ದರೆ, ಇನ್ನೂ ಕೆಲವು ಈಗಾಗಲೇ ಅಸ್ತಿತ್ವ ಕಳೆದುಕೊಂಡಿವೆ. ಅಂಥವುಗಳಲ್ಲಿ ಎತ್ತುಗಳಿಗೆ ಲಾಳ ಹಾಕುವ ವೃತ್ತಿಯೂ ಒಂದು. ಅತ್ಯಾಧುನಿಕ ಸ್ವರೂದಲ್ಲಿ ಹಲವು ಬದಲಾವಣೆಗಳಾದರೂ ಮತ್ತು ಹಲವು ಅಡತಡೆಗಳು ಎದುರಾದರೂ ಈ ವೃತ್ತಿ ಮಾತ್ರ ಇನ್ನೂ ಜೀವಂತವಾಗಿದೆ.


ಶಿಡ್ಲಘಟ್ಟದಲ್ಲಿ ಹಳೇ ರೈಲ್ವೆ ನಿಲ್ದಾಣದ ಬಳಿ ಎತ್ತಿನ ಕಾಲುಗಳಿಗೆ ಹೊಡೆಯುವ ಲಾಳಗಳನ್ನ ಸಿದ್ಧಪಡಿಸುತ್ತಿರುವ ಸಯ್ಯದ್ ರಝಾಕ್.

ಜನರಿಗೆ ಓಡಾಡಲು ಚಪ್ಪಲಿಗಳಿದ್ದಂತೆ ಎತ್ತುಗಳಿಗೆ ಲಾಳಗಳು. ೨೦-೩೦ ದಿನಗಳಿಗೊಮ್ಮೆ ಹೊಸ ಲಾಳ ಹಾಕಿಸಬೇಕು. ಲಾಳಗಳನ್ನು ಸಮರ್ಪಕವಾಗಿ ಹಾಕಲು ಪರಿಣಿತರಿಂದ ಮಾತ್ರ ಸಾಧ್ಯ. ಆ ಪರಿಣತಿ ಸಾಧಿಸಿರುವ ಸೂಲಿಬೆಲೆಯ ಸೈಯದ್ ರಜಾಕ್ ಅವರಿಗಾಗಿ ಎತ್ತಿನ ಒಡೆಯರು ಕಾಯುತ್ತಾರೆ. ಪಟ್ಟಣದ ಹಳೆಯ ರೈಲು ನಿಲ್ದಾಣದ ಬಳಿ ಕಾಯುವ ಜನರು ತಮ್ಮ ಎತ್ತುಗಳಿಗೆ ಹಾಕಿಸಿದ ನಂತರವೇ ಮುಂದಿನ ಕೃಷಿ ಚಟುವಟಿಕೆ ಮತ್ತು ಇತರ ಕಾರ್ಯಗಳತ್ತ ಗಮನಹರಿಸುತ್ತಾರೆ.

ಎತ್ತುಗಳಿಗೆ ಲಾಳ ಹಾಕುವುದು ಸಾಮಾನ್ಯ ಸಂಗತಿಯೇನಲ್ಲ. ಮೊದಲು ಎತ್ತನ್ನು ಒಂದು ಕಡೆ ಮಲಗಿಸಲಾಗುತ್ತದೆ. ಅದರ ಕಾಲಿಗೆ ಹಗ್ಗ ಬಿಗಿದು, ಮೂರು ಜನ ಹಿಡಿದು ಒಂದು ಕಡೆಯಿಂದ ಚಕ್ಕನೆ ಎಳೆಯುವುದರ ಮೂಲಕ ಮಗುವಿನಂತೆ ಮಲಗಿಸಬಲ್ಲ ಚಾಕಚಕ್ಯತೆ ಎಂಥವರನ್ನೂ ಅಚ್ಚರಿಗೊಳಿಸುತ್ತದೆ. ನಂತರ ಸವೆದಿರುವ ಲಾಳಗಳನ್ನು ಮತ್ತು ಅದರ ಮೊಳೆಗಳನ್ನು ಕಿತ್ತು ಬಿಡಿಸುತ್ತಾರೆ. ಒರಟಾದ ಪಾದಗಳನ್ನು ಉಜ್ಜಿ ಹೊಸ ಲಾಳವನ್ನಿಟ್ಟು ಮೊಳೆ ಹೊಡೆಯುತ್ತಾರೆ. ಮೊಳೆ ಹೊಡೆಯುವಾಗ ಕೊಂಚ ಎಚ್ಚರ ತಪ್ಪಿದರೂ ಎತ್ತಿಗೆ ಗಾಯವಾಗುತ್ತದೆ.


ಎತ್ತನ್ನು ಮಲಗಿಸಿ ಕಾಲಿಗೆ ಲಾಳ ಹೊಡೆಯುತ್ತಿರುವುದು.

"ಮೊದಲೆಲ್ಲಾ ಎತ್ತುಗಳನ್ನು ತುಂಬ ಸಾಕುತಿದ್ದರು. ಈಗ ಬಹಳ ಕಡಿಮೆ. ಕೆಲ ದಿನಗಳು ಬೋಣಿಯೇ ಆಗುವುದಿಲ್ಲ. ಒಂದು ಎತ್ತಿನ ನಾಲ್ಕು ಕಾಲುಗಳಿಗೆ ಲಾಳ ಹೊಡೆಯಲು ೨೦೦ ರೂ ಪಡೆಯುತ್ತೇನೆ. ಅದರಲ್ಲಿ ಲಾಳದ ಸಾಮಾನಿನ ಖರ್ಚು ೧೨೦ ರೂಪಾಯಿ ಬರುತ್ತದೆ. ೪೦ ವರ್ಷಗಳಿಂದ ಇದೇ ವೃತ್ತಿಯನ್ನು ಮಾಡುತ್ತಿದ್ದೇನೆ. ಪಟ್ಟಣದಲ್ಲಿ ರೇಷ್ಮೆಗಾಗಿ ನೀರಿನ ಗಾಡಿಗಳು ಇರುವುದರಿಂದ ನಮಗೆ ಕೆಲಸ ಸಿಗುತ್ತಿದೆ. ಸಂಪಾದನೆ ಕಡಿಮೆಯಾದರೂ ಕಲಿತ ವೃತ್ತಿಯನ್ನು ಬಿಡಲಾಗದು" ಎನ್ನುತ್ತಾರೆ ಸೈಯದ್ ರಝಾಕ್.


ಲಾಳ ಹೊಡೆಯಲು ಬಳಸುವ ಉಪಕರಣಗಳು.


"ಈಗ ಎತ್ತುಗಳನ್ನು ಸಾಕುವುದು ಕಷ್ಟ. ಹಳ್ಳಿಗಳಲ್ಲಿ ಕೆಲಸಗಾರರ ಅಭಾವದಿಂದ ಟಿಲ್ಲರ್ ಮತ್ತು ಟ್ರಾಕ್ಟರ್‌ಗಳ ಬಳಕೆ ಹೆಚ್ಚಾಗಿದೆ. ಮೊದಲು ನಮ್ಮ ಗ್ರಾಮದಲ್ಲಿ ೭೫ ಜೊತೆ ಎತ್ತುಗಳಿದ್ದವು. ಆದರೆ ಈಗ ಕೇವಲ ೧೦ ಜೊತೆಯಿವೆ. ಒಟ್ಟು ಕುಟುಂಬದಲ್ಲಿ ಎತ್ತುಗಳನ್ನು ಸಾಕುವವರೇ ಒಬ್ಬರು ಇರುತ್ತಿದ್ದರು. ಅವರನ್ನು ಎತ್ತುಗಳಪ್ಪ ಎಂದು ಕರೆಯುತ್ತಿದ್ದರು. ಆದರೆ ಈಗ ಒಟ್ಟು ಕುಟುಂಬವೂ ಇಲ್ಲ. ಪರಿಸರಕ್ಕೆ ಅನುಕೂಲವಾಗುವಾಗಿರುವ ಎತ್ತುಗಳ ಸಾಕಣಿಕೆಯೂ ಕಡಿಮೆ" ಎಂದು ಚೌಡಸಂದ್ರದ ರೈತ ನಂಜುಡಪ್ಪ ತಿಳಿಸಿದರು.