Wednesday, February 24, 2010

ಕಲರವ

ಶಿಡ್ಲಘಟ್ಟ ತ್ಲಾಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಬರಹಗಳ ಪುಸ್ತಕ "ಕಲರವ".
ಗದಗಿನಲ್ಲಿ ಕನ್ನಡ ಸಾಹಿತ್ಯದ ಜಾತ್ರೆ ಮುಗಿಯುತ್ತಿರುವ ಹೊತ್ತಿನಲ್ಲೇ ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲದ ಶಾಲೆಯ ಶಿಕ್ಷಕರು ಮಕ್ಕಳಲ್ಲಿ ಬರೆಯಲು ಪ್ರೇರೇಪಿಸಿ "ಕಲರವ" ವನ್ನು ಉಂಟುಮಾಡುತ್ತಿದ್ದಾರೆ. ಇದರ ವಿಶೇಷವೆಂದರೆ ಒಂದರಿಂದ ಎಂಟನೇ ತರಗತಿವರೆಗಿನ ಮಕ್ಕಳು ಬರೆದಿರುವ ಕಥೆ, ಕವನ, ಚಿತ್ರ, ನಾಟಕ, ಪ್ರಬಂಧಗಳನ್ನು ಝೆರಾಕ್ಸ್ ಮಾಡಿಸಿ ಒಟ್ಟು ಮಾಡಿ ಪುಸ್ತಕ ರೂಪ ಕೊಟ್ಟಿದ್ದಾರೆ. ಶಿಕ್ಷಣವೆಂದರೆ ಪಠ್ಯಪುಸ್ತಕ, ಪರೀಕ್ಷೆಗಳಷ್ಟೇ ಅಲ್ಲ, ಮಕ್ಕಳ ಅಭಿವ್ಯಕ್ತಿಯನ್ನು ಪ್ರಸ್ತುತಪಡಿಸುವ ಮಾಧ್ಯಮವೂ ಹೌದು ಎಂಬುದನ್ನು ಸಾಬೀತುಪಡಿಸಿದ್ದಾರೆ.

ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.
ಈ ಶಾಲೆಯಲ್ಲಿ ಪ್ರತಿಯೊಂದು ಮಗುವಿನ ಬಳಿಯೂ "ಲೇಖನಗಳ ಪುಸ್ತಕ" ಎಂಬ ಸಣ್ಣ ನೋಟ್‌ಪುಸ್ತಕ ಇರಲೇಬೇಕು. ಇದರಲ್ಲಿ ಮಕ್ಕಳು ತಮಗೆ ತೋಚಿದಂತೆ ಕಥೆ, ಕವನ, ಅನಿಸಿಕೆ ಇತ್ಯಾದಿ ಬರೆಯುವ ಸ್ವಾತಂತ್ರವಿರುತ್ತದೆ. ಕೆಲವೊಮ್ಮ ಶಿಕ್ಷಕರು ಇಷ್ಟದ ವ್ಯಕ್ತಿ, ಸ್ಥಳ ಇತ್ಯಾದಿ ವಿಷಯಗಳನ್ನು ಕೊಟ್ಟು ಪ್ರೇರೇಪಿಸುವುದೂ ಉಂಟು. ಅತ್ಯಂತ ಸಂಭ್ರಮದಿಂದ ಮತ್ತು ಆಸಕ್ತಿಯಿಂದ ಮಕ್ಕಳು ಬರೆಯುತ್ತಾರೆ. ಮಕ್ಕಳ ಬರಹಗಳ ಮೂಲ ಆಶಯಕ್ಕೆ ಧಕ್ಕೆ ಬರದಂತೆ ಶಿಕ್ಷಕರು ಸಲಹೆ ಸೂಚನೆ ನೀಡುತ್ತಿರುತ್ತಾರೆ. ಮೊದಲು ಕುತೂಹಲದಿಂದ ಬರೆಯಲು ಪ್ರಾರಂಭಿಸುವ ಮಕ್ಕಳು ಕ್ರಮೇಣ ಆತ್ಮವಿಶ್ವಾಸ ಮೂಡಿದಂತೆ ತನ್ನ ಭಾವನೆಗಳಿಗೆ ಅಕ್ಷರ ರೂಪ ನೀಡುವಲ್ಲಿ ಸಫಲರಾಗಿ ಬರೆಯುವ ಸಂಭ್ರಮವನ್ನು ತಮ್ಮದಾಗಿಸಿಕೊಳ್ಳುತ್ತಾರೆ.

ಶಾಲೆಯ ಮಕ್ಕಳು ತಮ್ಮ "ಲೇಖನಗಳ ಪುಸ್ತಕ"ದಲ್ಲಿ ಬರೆಯುವುದರಲ್ಲಿ ಮಗ್ನರಾಗಿರುವುದು.
ಹೀಗೆ ಬರೆದ ಲೇಖನಗಳಲ್ಲಿ ಶಿಕ್ಷಕರು ಆಯ್ದು ಸುಂದರ ಬರವಣಿಗೆಯಲ್ಲಿ ಅವರಿಂದಲೇ ಬರೆಸಿ ಝೆರಾಕ್ಸ್ ಮಾಡಿಸಿ ೪೦ ಪುಟಗಳ ಪುಸ್ತಕ ಮಾಡ್ದಿದಾರೆ. ಶಾಲೆಯಲ್ಲಿರುವ ಎಲ್ಲ ಮಕ್ಕಳಿಗೂ ಈ ಪುಸ್ತಕ ಹಂಚಿ ಶಾಲಾ ಪತ್ರಿಕೆಯನ್ನಾಗಿಸುವುದು ಇವರ ಉದೇಶ. ಪ್ರತಿ ತಿಂಗಳೂ ಇಲಿನ ಶಿಕ್ಷಕರು ತಮ್ಮ ವೇತನದ್ಲಲಿ ೧೦೦ ರೂ ತೆಗೆದಿಟ್ಟು ಶಿಕ್ಷಕರ ನಿಧಿಯಾಗಿ ಮಾಡಿಕೊಂಡು ಆ ನಿಧಿಯಿಂದ ೨೦೦ ಪುಸ್ತಕಗಳನ್ನು ಮಾಡಿಸ್ದಿದಾರೆ. ವರ್ಷಕ್ಕೆ ಕನಿಷ್ಠ ಮೂರು ಪುಸ್ತಕವನ್ನಾದರೂ ತರುವ ಆಸೆಯಿದೆ ಎನ್ನುತ್ತಾರೆ ಶಿಕ್ಷಕರು.
ಪುಸ್ತಕದ ಮುನ್ನುಡಿಯಲ್ಲಿ ಬರೆದಂತೆ ಮಕ್ಕಳ ಬರಹಗಳೆಂದರೆ ಅವರ ವ್ಯಕ್ತಿತ್ವಕ್ಕೆ ಸಿಗುವ ದಿವ್ಯ ಮನ್ನಣೆ ಎಂಬ ಮಾತು ಪುಸ್ತಕವನ್ನು ಓದುತ್ತಿದ್ದಂತೆ ಮನದಟ್ಟಾಗುತ್ತದೆ. ಈ ರೀತಿ ಬರೆಯಲು ಪ್ರಚೋದಿಸುವುದು ಮಕ್ಕಳ ಮಾನಸಿಕ ವಿಕಾಸ ಮತ್ತು ಭಾಷಿಕ ಬೆಳವಣಿಗೆಗೆ ಬಹಳ ಸಹಕಾರಿ ಎಂಬುದು ಇಲ್ಲಿನ ಶಿಕ್ಷಕರ ಅನಿಸಿಕೆ. ಮಕ್ಕಳ ಬರವಣಿಗೆಯನ್ನು ಸುಂದರಗೊಳಿಸುವ ಹಾಗೂ ಅಭಿವ್ಯಕ್ತಿ ಕೌಶಲ್ಯವನ್ನು ಬೆಳೆಸುವ ಮಾಧ್ಯಮವಾಗಿ ಈ ಶಾಲಾ ಪತ್ರಿಕೆ ಮುನ್ನಡಿ ಇಡುತ್ತಿದೆ.


"ಕಲರವ"ದಲ್ಲಿ ಎರಡನೇ ತರಗತಿಯಲ್ಲಿರುವ ಕೆ.ಎಸ್.ಕವನ ತನ್ನ ತಾಯಿಯ ಬಗ್ಗೆ ಬರೆದಿರುವುದು.
"ನನ್ನ ತಾಯಿಯ ಹೆಸರು ಅಂಬುಜ. ಅವರು ನನಗೆ ತುಂಬಾ ಇಷ್ಟ. ಏಕೆ ಅಂದರೆ ಅವರು ನನಗೆ ಊಟ ಇಕ್ಕುತ್ತಾರೆ..." ಹೀಗೆ ಸಾಗುತ್ತದೆ ಎರಡನೇ ತರಗತಿಯ್ಲಲಿರುವ ಕೆ.ಎಸ್.ಕವನ ತನ್ನ ತಾಯಿಯ ಬಗ್ಗೆ ಬರೆದಿರುವುದು. ಕೃತಕ ಪದಪುಂಜಗಳ್ಲಿಲದೇ ಮಕ್ಕಳು ತುಂಬಾ ಸರಳವಾಗಿ ಮುಗ್ಧತೆಯಿಂದ ಬರೆದಿರುವ ಬರಹಗಳು ಆಪ್ತತೆಯಿಂದ ಕೂಡಿದೆ. ಕಲರವ-೧ ರಲ್ಲಿ ೧೦ ಕಥೆಗಳು, ೬ ಪದ್ಯಗಳು, ೧೧ ಲಘು ಪ್ರಬಂಧಗಳು, ೮ ಚಿತ್ರಗಳು ಮತ್ತು ಒಂದು ನಾಟಕವಿದೆ. ಮಕ್ಕಳ ಭಾವನೆಗಳು, ಆಸೆಗಳು, ಅಗತ್ಯಗಳು, ಅನಿಸಿಕೆಗಳು ಅವರ ಬರಹಗಳ ಮೂಲಕ ನಮಗೆ ಸಿಗುತ್ತವೆ.
ಮಕ್ಕಳ ಬರಹಗಳ ಬಗ್ಗೆ ಈ ಶಾಲೆಯ ಶಿಕ್ಷಕರ ಆಸಕ್ತಿ ಇದೇ ಹೊಸದೇನಲ್ಲ. ಹಿಂದೆ "ನವಿಲುಗರಿ’ ಎಂಬ ಮಕ್ಕಳ ಮಾಸಿಕವೊಂದನ್ನು ಪ್ರಕಟಿಸುತ್ತ್ದಿದರು. ಅದರಲ್ಲಿ ಇಡೀ ಜ್ಲಿಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಬರೆದ ಲೇಖನ ಪ್ರಕಟಿಸುತ್ತಿದ್ದರು. ಒಂದು ವರ್ಷ ನಡೆದು ಕಾರಣಾಂತರಗಳಿಂದ ನಿಂತುಹೋದ ನವಿಲುಗರಿ ಈಗಿನ ಕಲರವಕ್ಕೆ ಸ್ಫೂರ್ತಿ.
ಮುಖ್ಯ ಶಿಕ್ಷಕರಾದ ಹೆಚ್.ಮುನಿಯಪ್ಪ, ಸಹಶಿಕ್ಷಕರಾದ ಎಂ.ದೇವರಾಜ್, ಹೆಚ್.ಬಿ.ಮಂಜುನಾಥ, ಜೆ.ಶ್ರೀನಿವಾಸ, ಕೆ.ಶಿವಶಂಕರ, ಎಸ್.ಕಲಾಧರ್, ಕೆ.ಛಾಯಾದೇವಿ ಮತ್ತು ವಿದ್ಯಾಲಕ್ಷ್ಮಿ ಇವರುಗಳ ಸಾಂಘಿ ಕ ಪ್ರಯೋಗವಾಗಿದೆ ಕಲರವ-೧.
ಮಕ್ಕಳನ್ನು ಅರ್ಥಮಾಡಿಕೊಂಡು ಅವರ ಸೃಜನಶೀಲತೆಯನ್ನು ಅರಳಿಸುವಂತಹ ಶಿಕ್ಷಣ ಹೆಚ್ಚು ಅರ್ಥಪೂರ್ಣ. ಈ ನಿಟ್ಟಿನ್ಲಲಿ ಮಕ್ಕಳ ಭಾವನೆಗಳಿಗೆ ಅಕ್ಷರದ ರೂಪು ನೀಡುತ್ತಾ ಮುನ್ನಡೆಯಿಟ್ಟಿದೆ ಈ ಶಾಲೆ.

ಮಕ್ಕಳ ಪುಸ್ತಕ ಕಲರವ-೧ ಅನ್ನು ಸಾಹಿತಿ ಮತ್ತು ಶಿಕ್ಷಕ ಸ.ರಘುನಾಥ್,ಆದಿಮ ಸಂಸ್ಥೆಯ ಕೋಟಗಾನಹಳ್ಳಿ ರಾಮಯ್ಯ ಮತ್ತು ಅಧ್ಯಾಪಕ ಚಿ.ಶ್ರೀನಿವಾಸಯ್ಯ ಬಿಡುಗಡೆ ಮಾಡಿದರು.

ಎರಡನೇ ತರಗತಿಯ ಕೆ.ಎಸ್.ಕವನ ಕಲರವ ಪುಸ್ತಕದಲ್ಲಿ ತಾನು ಬರೆದಿರುವ ಕವನವನ್ನು ಓದುತ್ತಿರುವುದು.

Thursday, February 18, 2010

ಆಟೋಗ್ರಾಫ್ ಫೋಟೋಗ್ರಾಫ್ ಭಾಗ ೪

ನಾಗತಿಹಳ್ಳಿ ಚಂದ್ರಶೇಖರ್


ಕೆ.ವಿ.ಅಕ್ಷರ

ಎ.ಎನ್.ಪ್ರಸನ್ನ


ಅ.ರ.ಮಿತ್ರ



ಬರಗೂರು ರಾಮಚಂದ್ರಪ್ಪ



ಸಿ.ರಾಮಚಂದ್ರ



ಎಸ್.ದಿವಾಕರ್




ಗರುಡನಗಿರಿ ನಾಗರಾಜ್



ಹಂಸಲೇಖ

ರಾಜೀವ್ ದೀಕ್ಷಿತ್


ಸಚ್ಚಿದಾನಂದ ಹೆಗ್ಗಡೆ


ಶಿವಮೊಗ್ಗ ಸುಬ್ಬಣ್ಣ


ಉಪಾಸನಾ ಮೋಹನ್

Tuesday, February 2, 2010

ಹಾಳು ಬಾವಿಯಲ್ಲಿ ಮಂಡಲ

ಆ ದಿನ ಮಧ್ಯಾಹ್ನ ಮನೆಗೆ ಊಟಕ್ಕೆ ಹೊರಟಿದ್ದೆ. ಕೋಟೆ ಸರ್ಕಲ್ ತಿರುಗುತ್ತಿದ್ದಂತೆ ಈಟೀವಿಯ ವರದಿಗಾರ ಬಾಲಕೃಷ್ಣ ಕಾಣಿಸಿದರು. ಅವರು ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟಕ್ಕೆ ಬಂದಿದ್ದಾರೆಂದರೆ ಏನೋ ಹೊಸ್ ಸಂಗತಿಯಿರಬೇಕು ಎಂಬ ಕುತೂಹಲ ಉಂಟಾಯಿತು. "ಏನ್ಸಾರ್ ವಿಶೇಷ?" ಅಂದೆ. "ಪಿಂಡಪಾಪನಹಳ್ಳಿಯಲ್ಲಿ ಎರಡು ಮಂಡಲ ಹಾವುಗಳಿದೆಯಂತೆ. ನಮ್ಮ ಸ್ನೇಕ್ ನಾಗರಾಜ್ ಹಿಡೀತಾನೆ. ನೀವೂ ಬನ್ನಿ ಹೋಗಿಬರೋಣ" ಅಂದರು.ಸ್ನೇಕ್ ನಾಗರಾಜ್ ಕೊತ್ತನೂರು ಗ್ರಾಮದವನು. ಹಾವುಗಳನ್ನು ಹಿಡಿಯುವುದರಲ್ಲಿ ನಮ್ಮ ತಾಲ್ಲೂಕಿಗೇ ಹೆಸರುವಾಸಿ. ಮನೆಗಳಿಗೆ ಬರುವ ಹಾವುಗಳನ್ನಷ್ಟೇ ಅಲ್ಲದೆ ಹಾಳು ಬಾವಿಗಳಲ್ಲಿ ಬಿದ್ದಿರುವಂತಹ ಹಾವುಗಳನ್ನೆಲ್ಲಾ ಹಿಡಿದು ದೂರದ ಕಾಡಿನಲ್ಲಿ ಬಿಟ್ಟು ಬರುವ ಉರಗಪ್ರೇಮಿ.

ನಾನು ಹೋದಾಗ ಎಲ್ಲರೂ ಛಾಯಾರಮೇಶನ ಸ್ಟುಡಿಯೋ ಬಳಿ ಸೇರಿದ್ದರು. ಸ್ನೇಕ್ ನಾಗರಾಜ್ ನನ್ನನ್ನು ನೋಡಿ "ನಮಸ್ಕಾರ ಸರ್" ಅಂದ. ಆತನ ಕೈಲಿ ಚೀಲವೊಂದಿತ್ತು. "ಚೀಲದಲ್ಲಿ ಏನಿದೆ?" ಎಂದು ಕೇಳಿದೆ. "ನಾಗರಹಾವು ಇದೆ ಸರ್. ಇಲ್ಲೇ ಗಿಡ್ನಳ್ಳಿಯಲ್ಲಿ ಹಾಳು ಬಾವಿಯಲ್ಲಿ ಬಿದ್ದಿತ್ತು" ಎಂದ. "ಅಲ್ಲಪ್ಪಾ, ಹಾಳು ಬಾವೀಲಿ ಬಿದ್ದಿದ್ರೆ ನಿಂಗೇನು. ಮನೆಗೇನೂ ನುಗ್ಗಿರಲಿಲ್ಲವಲ್ಲ. ಅದನ್ಯಾಕೆ ಹಿಡಿದು ತಂದೆ?" ಎಂದು ಕೇಳಿದೆ. "ಪಾಪ ಅದಕ್ಕಲ್ಲಿ ಊಟ ಇಲ್ದೇ ವೀಕಾಗಿಬಿಟ್ಟಿದೆ ಸರ್. ಕಾಡಲ್ಲಿ ಬಿಟ್ಬುಡ್ತೀನಿ. ಆರಾಮಾಗಿರ್ತದೆ" ಎಂದು ಅನುಕಂಪದ ಮಾತಾಡಿದ.
ಶಶಿ, ರಮೇಶ್, ಬಾಬು, ಬಾಲಕೃಷ್ಣ, ಸ್ನೇಕ್ ನಾಗರಾಜ್ ಮತ್ತು ನಾನು ಬೈಕುಗಳಲ್ಲಿ ಪಿಂಡಪಾಪನಹಳ್ಳಿಗೆ ಹೊರಟೆವು. ಹಳ್ಳಿಯ ಒಳಗೆ ತೋಪುಗಳ ನಡುವೆ ತೋಟವೊಂದಿತ್ತು. ಅದರಲ್ಲಿ ಹಾಳು ಬಾವಿಯಿತ್ತು. ಅಂದಾಜು ೭೦ ರಿಂದ ೮೦ ಅಡಿ ಆಳವಿರಬಹುದು. ಮುಂಚೆ ನೀರು ಸಮೃದ್ಧವಾಗಿದ್ದ ಕಾಲದಲ್ಲಿ ಬಳಸುತ್ತಿದ್ದ ಮೆಷಿನ್ ರೂಂ(ಮೋಟರ್ ಇಡುವ ಸ್ಟಳ) ಕೂಡ ಶಿಥಿಲವಾಗಿತ್ತು. ಮೆಷಿನ್ ರೂಂ ಒಳಗಿಂದ ಹಗ್ಗ ಕಟ್ಟಿಕೊಂಡು ನಾಗರಾಜ್ ಸಲೀಸಾಗಿ ಬಾವಿಯೊಳಗೆ ಇಳಿದುಬಿಟ್ಟ. ನಮಗಿಲ್ಲಿ ಬಗ್ಗಿ ನೋಡಲೂ ಭಯ. ಕಾಲು ಜರುತ್ತದೆ. ಆದರೂ ಕ್ಯಾಮೆರಾ ಮುಂದೆ ಹಿಡಿದು ಕ್ಲಿಕ್ಕಿಸಲು ಹೋದೆ. ಶಶಿ ತಡೆದ. "ರಿಸ್ಕ್ ತಗೋಬೇಡಿ. ಮೇಲೆ ತರುತ್ತಾನೆ. ಆಮೇಲೆ ಫೋಟೋ ತೆಗೆದರಾಯ್ತು" ಎಂದು ನನ್ನನ್ನು ಹಿಂದಕ್ಕೆ ಎಳೆದ.

ಹಾಳುಬಾವಿಯಲ್ಲಿ ಹಾವು ಹಿಡಿಯುತ್ತಿರುವ ನಾಗರ‍ಾಜ್




ನಾಗರಾಜ್ ಎರಡು ಚೀಲದಲ್ಲಿ ಎರಡು ಹಾವುಗಳನ್ನು ತುಂಬಿಕೊಂಡು ಸಲೀಸಾಗಿ ಮೇಲೆ ತಂದ. ಸ್ವಲ್ಪ ದೂರದಲ್ಲಿ ಕೆರೆಯ ಬಳಿಗೆ ಹೋಗಿ ಬಯಲಲ್ಲಿ ಬಿಟ್ಟ. ಬಾಲಕೃಷ್ಣ ವೀಡಿಯೋ ತೆಗೆದರು. ಸಂದರ್ಶನ ಮಾಡಿದರು.



ಮಂಡಲ ಹಾವಿನ ವಿಷದಂತ ಒಂದು ಸೆಂಟಿಮೀಟರ್ ಉದ್ದ ಇದ್ದು, ಕಚ್ಚಿದರೆ ಗಾಯ ಆಳವಾಗಿ ವಿಷ ಬೇಗ ರಕ್ತವನ್ನು ಸೇರುತ್ತದೆ ಮತ್ತು ಬೇಗ ಪ್ರಭಾವ ಬೀರುತ್ತದೆ. ರಕ್ತ ಹೆಪ್ಪುಗಟ್ಟುವುದನ್ನು ನಿಲ್ಲಿಸಿ ಅತಿಯಾದ ರಕ್ತಸ್ರಾವಕ್ಕೆ ಆಸ್ಪದವಾಗುತ್ತದೆ. ಅಂಗಾಂಶಗಳ ನಾಶವಾಗುತ್ತದೆ. ಇದರ ವಿಷ ನಾಗರ ಹಾವಿನ ವಿಷಕ್ಕಿಂತ ಮೂರನೆ ಒಂದರಷ್ಟು ಪ್ರಭಾವಿ. ತಕ್ಷಣ ಊದು, ಉರಿ, ನೋವು ಕಾಣಿಸಿಕೊಳ್ಳುತ್ತದೆ. ತಲೆತಿರುಗುತ್ತದೆ. ಬಲಹೀನತೆಯಾಗುತ್ತದೆ. ದೇಹದ ಮೇಲೆ ಬೊಬ್ಬೆಗಳು ಏಳುತ್ತವೆ. ಉಗುಳು, ವಾಂತಿ, ಮೂತ್ರ ಮಲಗಳಲ್ಲಿ ರಕ್ತ ಹೋಗುವುದು, ದೃಷ್ಟಿ ಮಂದವಾಗುವುದು, ಉಸಿರಾಟಕ್ಕೆ ತೊಂದರೆಯಾಗುವುದು, ಅತಿರಕ್ತ ಸ್ರಾವದಿಂದ ಮೂತ್ರ ಪಿಂಡಗಳು ಸ್ಥಗಿತಗೊಳ್ಳಬಹುದು.






ಒಮ್ಮೆ ಎರಡೂ ಕೈಗಳಲ್ಲಿ ಎರಡೂ ಮಂಡಲ ಹಾವನ್ನು ಹಿಡಿದ. ಒಂದಂತೂ ಬುಸುಗುಡುತ್ತಾ ಅವನೆಡೆಗೇ ನುಗ್ಗಿತು. ಅದರಷ್ಟೇ ವೇಗವಾಗಿ ಹಿಂದೆ ಸರಿದ. ಅದರ ಬಾಯಿ ಅವನ ಕೈಯನ್ನು ಸವರಿತು. ಮೈಜುಮ್ಮೆನ್ನುವಂತಹ ದೃಶ್ಯವದು.



"ಇಂತಹ ಹಾಳು ಬಾವಿಗೆ ಬಿದ್ದಿರುವುದು ನಿನಗೆ ಹೇಗೆ ಗೊತ್ತಾಗುತ್ತೆ ನಾಗರಾಜ್?" ಎಂದು ಬಾಲಕೃಷ್ಣ ಕೇಳಿದರು."ಈ ಸುತ್ತ ಮುತ್ತ ಎಲ್ಲೇ ಹಾವು ಕಾಣ್ಸಿದ್ರೂ ನನಗೆ ಹೇಳ್ತಾರೆ ಸರ್. ಇದುವರ್ಗೂ ಹಾಗೆ ೬೫೦ ಹಾವುಗಳನ್ನು ಹಿಡಿದು ಬಿಟ್ಟಿದ್ದೀನಿ" ಎಂದ.
ಒಬ್ಬೊಬ್ಬರದು ಒಂದೊಂದು ವಿದ್ಯೆ. ಆದರೆ ಕೆಲವರ ವಿದ್ಯೆಯಿಂದ ತಮ್ಮ ಸುತ್ತಲಿನ ಸಮಾಜ ಮತ್ತು ನಿಸರ್ಗಕ್ಕೂ ಉಪಯೋಗವಾದಾಗ ಅದು ಸಾರ್ಥಕತೆ ಪಡೆಯುತ್ತದೆ.