Saturday, March 30, 2013

ಶಾಲಾ ಕುಸುಮಗಳು

  ಶಾಲೆಗಳಲ್ಲಿ ಹೆಣ್ಣುಮಕ್ಕಳ ಕೌಶಲ್ಯ ವೃದ್ಧಿಸಲು ಮತ್ತು ಸಾಮರ್ಥ್ಯ ಹೆಚ್ಚಿಸಲು ಹಲವಾರು ಕಾರ್ಯಕ್ರಮಗಳು ಅನುಷ್ಠಾನದಲ್ಲಿವೆ. ಆದರೆ ಅವುಗಳ ಅನುಪಾಲನೆ ಮಾತ್ರ ಸೀಮಿತ ಶಾಲೆಗಳಲ್ಲಿ ನಡೆಯುತ್ತಿದೆ.
 ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಈ ಚಟುವಟಿಕೆಗಾಗಿ ಸುಲಭವಾಗಿ ಸಿಗುವ ಖಚ್ಚಾ ವಸ್ತುಗಳನ್ನು ತಂದು ಅವುಗಳಿಂದ ಹಾರಗಳು, ಅಲಂಕಾರಿಕ ಹೂಕುಂಡಗಳು ಮತ್ತು ಗೋಡೆಗೆ ಹಾಕುವ ವರ್ಣಚಿತ್ರಗಳನ್ನು ತಯಾರಿಸಲಾಗುತ್ತಿದೆ. ಮಕ್ಕಳೇ ಇವುಗಳನ್ನು ತಯಾರಿಸಿ ಶಾಲೆಯಲ್ಲಿ ಮತ್ತು ತಮ್ಮ ಮನೆಗಳಲ್ಲಿ ಪ್ರದರ್ಶಿಸುವ ಮೂಲಕ ತಮ್ಮ ಕೌಶಲ್ಯ ವೃದ್ಧಿಸಿಕೊಳ್ಳುತ್ತಿದ್ದಾರೆ.

  ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಲಂಕಾರಿಕ ಪ್ಲಾಸ್ಟಿಕ್ ಹಾರಗಳನ್ನು ತಯಾರಿಸುತ್ತಿರುವ ವಿದ್ಯಾರ್ಥಿಗಳು.

ಈ ರೀತಿಯ ಚಟುವಟಿಕೆಗಳಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ಇದರಿಂದ ಮಕ್ಕಳ ಗೈರುಹಾಜರಿಯೂ ಕಡಿಮೆಯಾಗುತ್ತದೆ. ಶಿಕ್ಷಣದ ನಂತರ ತಮ್ಮ ಜೀವನ ನಿರ್ವಹಣೆಗೂ ಇದು ಪೂರಕವಾಗಲಿದೆ ಎನ್ನುತ್ತಾರೆ ಶಿಕ್ಷಕರು.
 ’ಈ ರೀತಿಯ ಹಾರ ಮತ್ತು ಹೂಕುಂಡಗಳನ್ನು ತಾಲ್ಲೂಕಿನಲ್ಲಿ ನೆಲೆಸಿರುವ ಹಕ್ಕಿಪಿಕ್ಕಿ ಜನರು ತಯಾರಿಸಿ ಮಾರಾಟಮಾಡುವುದನ್ನು ನೋಡಿ, ಇವುಗಳನ್ನು ನಮ್ಮ ಮಕ್ಕಳೂ ಬಹಳ ಸುಲಭವಾಗಿ ತಯಾರಿಸಬಹುದು ಅನಿಸಿತ್ತು. ಈಗ ’ಮೀನಾ’ ಎಂಬ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆಯು ಜಾರಿಗೆ ತಂದಿದೆ. ಹೆಣ್ಣು ಮಕ್ಕಳ ಗೈರು ಹಾಜರಿ, ಕಲಿಕೆ, ಆರೋಗ್ಯ, ವೈಯಕ್ತಿಕ ಸ್ವಚ್ಛತೆ ಮುಂತಾದ ಅಂಶಗಳ ಬಲವರ್ಧನೆ ಇದರ ಉದ್ದೇಶ.
 ನಮ್ಮ ಶಾಲೆಯ ಮೀನಾ ತಂಡದ ಮಾರ್ಗದರ್ಶಕ ಶಿಕ್ಷಕರು, ಸಹಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯವರೊಂದಿಗೆ ಚರ್ಚಿಸಿ ಬೆಂಗಳೂರಿನಿಂದ ಖಚ್ಚಾ ಸಾಮಗ್ರಿಗಳನ್ನು ತಂದೆವು. ಶಾಲೆಯಲ್ಲಿ ಮಕ್ಕಳಿಂದ ಕರಕುಶಲ ವಸ್ತುಗಳನ್ನು ತಯಾರಿಸಿ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಅತಿಥಿಗಳಿಗೆ ಕಾಣಿಕೆಯಾಗಿ ಇವನ್ನು ಬಳಸಲಾಗುತ್ತಿದೆ. ಮುಂದಿನ ಹಂತದಲ್ಲಿ ಇವುಗಳನ್ನು ಮಕ್ಕಳ ಪೋಷಕರಿಗೆ ನೀಡಿ ಮಕ್ಕಳ ಕೌಶಲ್ಯ ಪ್ರೋತ್ಸಾಹಕ್ಕೆ ಪ್ರೇರಣೆ ನೀಡಲು ಆಲೋಚಿಸಲಾಗಿದೆ.
 ಮುಂದಿನ ವರ್ಷ ಮಕ್ಕಳಿಗೆ ಶಾಂಪೂ, ಬಟ್ಟೆ ಒಗೆಯುವ ಸೋಪು, ಸೋಪ್‌ಪುಡಿ ಮುಂತಾದವುಗಳನ್ನು ತಯಾರಿಸುವುದನ್ನು ಕಲಿಸುವ ಯೋಜನೆಯಿದೆ’ ಎಂದು ಮುಖ್ಯಶಿಕ್ಷಕ ವೆಂಕಟರೆಡ್ಡಿ ತಿಳಿಸಿದರು.

 ಹೂದಾನಿಗಳಲ್ಲಿಡುವ ಅಲಂಕಾರಿಕ ವಸ್ತುಗಳ ತಯಾರಿಕೆ.


ಗೋಡೆಗೆ ತೂಗುಹಾಕುವ ವರ್ಣಚಿತ್ರಪಟ. ಪ್ಲಾಸ್ಟಿಕ್ ಹೂಕುಚ್ಚುಗಳು.


  ’ವಾರಕ್ಕೆ ಎರಡು ಬಾರಿ ನಡೆಯುವ ’ಕ್ರಾಫ್ಟ್ಸ್’ ತರಗತಿಗೆ ಕಾಯುತ್ತಿರುತ್ತೇವೆ. ನಾವು ತಯಾರಿಸಿದ ಹಾರಗಳು ಮತ್ತು ಹೂಕುಂಡಗಳನ್ನು ನಮ್ಮ ಶಾಲೆಗೆ ಬರುವ ಅತಿಥಿಗಳಿಗೆ ಕೊಟ್ಟಾಗ ಅವರೂ ಮೆಚ್ಚಿದ್ದಾರೆ. ನಾನು ಚಿತ್ರಿಸಿದ ವರ್ಣಚಿತ್ರ ಶಾಲೆಯ ಗೋಡೆಯ ಮೇಲೆ ಹಾಕಿದ್ದಾರೆ’ ಎಂದು ಏಳನೇ ತರಗತಿಯ ದಿವ್ಯಾ ಹೇಳಿದರು.

Thursday, March 28, 2013

ಮಕ್ಕಳ ಮನದ ಪುಟ್ಟ’ಶಾಮಂತಿ’

 ಇದೊಂದು ವಿಶಿಷ್ಟ ಪುಸ್ತಕ. ಇದರಲ್ಲಿ ಪುಟ್ಟ ಪುಟ್ಟ ಲೇಖನಗಳಿವೆ. ಕವನಗಳಿವೆ. ಅದಕ್ಕೆ ಹೊಂದುವ ರೇಖಾ ಚಿತ್ರಗಳಿವೆ. ಇದನ್ನು ಬರೆದಿರುವುದು ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು. ಈ ಪುಸ್ತಕಕ್ಕೆ ಶಾಮಂತಿ ಎಂಬ ಹೆಸರಿಟ್ಟು, ಮಕ್ಕಳ ಮಾತುಗಳನ್ನು ಪುಸ್ತಕವನ್ನಾಗಿಸುವ ಸಾಹಸಕ್ಕೆ ಕೈಹಾಕಿರುವವರು ಶಾಲಾ ಶಿಕ್ಷಕರು ಮತ್ತು ಗ್ರಾಮದ ಸ್ನೇಹ ಯುವಕ ಸಂಘದ ಸದಸ್ಯರು.
 ’ಲೌಕಿಕ ಲಾಭಗಳನ್ನು ಮಾತ್ರ ಎಣಿಸುವ ಇಂದಿನ ಜಗತ್ತಿನಲ್ಲಿ, ಗ್ರಾಮೀಣ ಮಕ್ಕಳು ಓದುವ ಸರ್ಕಾರಿ ಶಾಲೆಗೆ ಬೆನ್ನೆಲುಬಾಗಿ ನಿಂತು, ಹಳ್ಳಿಯ ಮಕ್ಕಳಲ್ಲಿ ಶುದ್ಧ ಸಾಹಿತ್ಯ ಪ್ರೇಮ ಬೆಳೆಯಲು ಸಹಕರಿಸುತ್ತಿರುವ ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲದ ಸ್ನೇಹ ಯುವಕರ ಸಂಘಕ್ಕೆ ಈ ಪುಸ್ತಕ ಅರ್ಪಣೆ’ ಎಂದು ಮೊದಲ ಪುಟದಲ್ಲೇ ಪುಸ್ತಕಾರ್ಪಣೆ ನುಡಿಯಲ್ಲಿ ಈ ಪುಸ್ತಕದ ರೂಪುಗೊಳ್ಳುವಿಕೆಯ ಬಗ್ಗೆ ಸಂಪಾದಕರು ತಿಳಿಸಿದ್ದಾರೆ.
 ಇದು ಶಾಮಂತಿ-೩ ಪುಸ್ತಕ. ಸತತವಾಗಿ ಮೂರನೇ ವರ್ಷ ಮಕ್ಕಳ ಬರವಣಿಗೆಗಳ ಸಂಗ್ರಹದ ಸಂಕಲನ ರೂಪುಗೊಂಡಿದೆ. ಮಕ್ಕಳ ಸೃಜನಶೀಲತೆ, ಆತ್ಮಸ್ಥೈರ್ಯ ಮತ್ತು ಆಲೋಚನಾಕ್ರಮವನ್ನು ಉದ್ದೀಪನಗೊಳಿಸುವ ಕ್ರಿಯೆಯಲ್ಲಿ ಮಾದರಿ ಹೆಜ್ಜೆಯಾಗಿ ಪಡಿಮೂಡಿದೆ.
 ಈ ಶಾಮಂತಿ ಪುಸ್ತಕದಲ್ಲಿ ಜೀವಸಂಸ್ಕೃತಿ, ಸಂಭ್ರಮ, ಆಸುಪಾಸು ಇಡ್ಲೀಪಾಸು, ನಮ್ಮೋರು, ಕಾಣ್ಕೆ, ಜ್ಞಾಪಕಶಾಲೆ ಎಂಬ ವಿಭಾಗಗಳಿವೆ. ತಮ್ಮ ಅರಿವಿಗೆ ಬಂದ ಜೀವಿಗಳ ಬಗ್ಗೆ, ಸಸ್ಯಗಳ ಬಗ್ಗೆ ಮಕ್ಕಳ ರಚನೆಗಳು ಜೀವಸಂಸ್ಕೃತಿಯಲ್ಲಿದ್ದರೆ, ಮಕ್ಕಳ ಕವನಗಳು ಸಂಭ್ರಮ ವಿಭಾಗದಲ್ಲಿದೆ. ತಾವು ನೋಡಿದ ದೇವಸ್ಥಾನ, ಶಾಸನಕಲ್ಲು, ಕಣ ಮುಂತಾದ ವಿವರಗಳ ಬಗೆಗಿನ ಬರಹಗಳು ಆಸುಪಾಸು ಇಡ್ಲೀಪಾಸು ಎಂಬ ಗುಚ್ಛದಲ್ಲಿದ್ದರೆ, ನಮ್ಮೋರು ವಿಭಾಗದಲ್ಲಿ ಮಕ್ಕಳು ತಮ್ಮ ಬಂಧು ಹಾಗೂ ಸ್ನೇಹಿತರ ಬಗ್ಗೆ ಬರೆದ ಬರಹಗಳಿವೆ. ವಿದ್ಯಾರ್ಥಿಗಳು ತಮ್ಮ ಗ್ರಂಥಾಲಯದಲ್ಲಿ ಓದಿದ ಪುಸ್ತಕಗಳು, ಶಾಲೆಯಲ್ಲಿ ತೋರಿಸಿದ ಸಿನೆಮಾ, ಶಿಕ್ಷಕರೊಂದಿಗೆ ನೋಡಿದ ಸರ್ಕಸ್ ಮುಂತಾದವು ಕಾಣ್ಕೆ ವಿಭಾಗದಲ್ಲಿದೆ. ಜ್ಞಾಪಕಚಿತ್ರಶಾಲೆ-೩ ವಿಭಾಗವು ೨೦೧೧-೧೨ರ ಶಾಲಾ ಶೈಕ್ಷಣಿಕ ಚಟುವಟಿಕೆಗಳಾದ ಅಂಚೆ ಚೀಟಿ ಪ್ರದರ್ಶನ, ರಾಜ್ಯೋತ್ಸವ, ಪುಸ್ತಕ ಪ್ರೀತಿ, ಹೊರಸಂಚಾರ, ಬೇಸಿಗೆ ಶಿಬಿರ, ಬಾಲಮೇಳ ಮುಂತಾದವುಗಳ ಬಗ್ಗೆ ಮಕ್ಕಳು ಬರೆದ ಬರಹಗಳನ್ನೊಳಗೊಂಡಿದೆ. ಪ್ರತಿಯೊಂದು ಲೇಖನ ಹಾಗೂ ಕವನದ ಜೊತೆಯಲ್ಲಿ ಮಕ್ಕಳೇ ರಚಿಸಿದ ಹೊಂದಿಕೆಯಾಗುವ ಚಿತ್ರಗಳಿರುವುದು ಈ ಪುಸ್ತಕದ ವಿಶೇಷ.



ಶಾಮಂತಿ ಪುಸ್ತಕವನ್ನು ಜಾನಪದ ತಜ್ಞ ಡಾ.ಎಂ.ಬೈರೇಗೌಡ ಬಿಡುಗಡೆ ಮಾಡಿದರು. ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ರಾಜಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ಶ್ರೀನಿವಾಸ್, ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಪಿ.ಎಸ್.ರವೀಂದ್ರನಾಥ್ ಹಾಜರಿದ್ದರು.


  ಮಕ್ಕಳ ಮನಸ್ಸಿನ ಕರುಣೆ, ಅವಗಾಹನೆ, ನಿಷ್ಕಪಟತೆ, ಪರಿಸರ ಕಾಳಜಿ, ತಿಳುವಳಿಕೆ ಓದುಗರಿಗೆ ಬೆರಗನ್ನು ಮೂಡಿಸುತ್ತದೆ. ಮಕ್ಕಳು ಬಳಸಿರುವ ನಮ್ಮ ನೆಲದ ನುಡಿಗಟ್ಟುಗಳಾದ ಜಡ್ಡೆ, ಗಾಬು, ತ್ಯಾವ, ದಿಗಿಲು, ಇನ್ನೊಂದು ಸರ್ತಿ, ಬಿರೀನ, ಭಾದೆ, ಕಾನೆ, ಕಲ್ದೀರಿರು ಮುಂತಾದ ಪದಗಳು ಪ್ರಾದೇಶಿಕ ಪದಕೋಶದ ಸಂಶೋಧಕರಿಗೆ ಸಹಾಯಕವಾಗಲಿದೆ.
 ’ಶ್ಯಾಮಂತಿ ಯಾವ ಮಹಾಸಾಧನೆಯೂ ಅಲ್ಲ. ಅದರಲ್ಲಿರುವುದು ನಾವು ಮಕ್ಕಳಿಗೆ ಕೊಡದೇ ಕಿತ್ತುಕೊಂಡಿರುವ ಅವರದೇ ಮಾತುಗಳು. ಇದು ಅವರನ್ನೂ ಪರಿಗಣಿಸುವ ಒಂದು ಸಣ್ಣ ರೀತಿಯಷ್ಟೇ. ಜಗತ್ತಿನ ಎಲ್ಲ ಮಕ್ಕಳಿಗೂ ಅವರ ಮಾತುಗಳು ವಾಪಸ್ಸು ಸಿಗಲಿ. ನಾವು ಹೇಳಿದ್ದನ್ನೇ ಕೇಳಿಕೊಂಡು ಬಿದ್ದಿರಬೇಕೆಂಬ ಹುಂಬ ಹಟಗಳನ್ನು ಪಕ್ಕಕ್ಕಿಟ್ಟು, ಕೇಳೋಣ, ಅವರ ಎದೆಯ ಕ್ಷೀಣ ಸ್ವರಗಳಿಗೆ ಅಭಯ ನೀಡೋಣ. ನಾನು ನಿನ್ನ ಭಾವನೆಗಳನ್ನು ಹಂಚಿಕೊಳ್ಳುತ್ತೇನೆ ಎನ್ನೋಣ’ ಎಂಬ ಉದಾತ್ತ ಹಾಗೂ ಮಕ್ಕಳ ಧ್ವನಿಗೆ ಕನ್ನಡಿ ಹಿಡಿಯುವ ಮಾತುಗಳನ್ನು ಪುಸ್ತಕದ ಸಂಪಾದಕ ಹಾಗೂ ಶಿಕ್ಷಕ ಎಸ್.ಕಲಾಧರ್ ಮಾರ್ಮಿಕವಾಗಿ ಹೇಳುತ್ತಾರೆ.
 ’ಶಾಮಂತಿ ಪುಸ್ತಕದಲ್ಲಿನ ಮಾಹಿತಿಗಳು ಇಡೀ ಬಯಲುಸೀಮೆಯ ಎಲ್ಲ ಮಕ್ಕಳ ಮನದಾಳದ ಮಾತುಗಳಾಗಿವೆ. ಇಂಥ ಅನುಭವಗಳನ್ನು ತಮ್ಮ ಬಾಲ್ಯದಲ್ಲಿ ಗ್ರಾಮೀಣ ಕರ್ನಾಟಕದ ಮಕ್ಕಳೆಲ್ಲ ಅನುಭವಿಸಿರುತ್ತಾರೆ. ಮಕ್ಕಳ ಮಾತುಗಳು ಅಕ್ಷರ ರೂಪ ಪಡೆಯುವ ಅಭಿಯಾನ ಎಲ್ಲಾ ಶಾಲೆಗಳಲ್ಲೂ ನಡೆದರೆ ಇತಿಹಾಸ ರಚನೆಗೆ ಪೂರಕ ಸಾಮಗ್ರಿ ಒದಗಿಸಿದ ಶ್ರೇಯಸ್ಸು ಲಭಿಸುತ್ತದೆ. ಪ್ರಾದೇಶಿಕವಾಗಿ ಪರಂಪರೆಯ ಕೊಂಡಿಗಳು ಬೆಸೆದುಕೊಳ್ಳುತ್ತವೆ. ಇದೊಂದು ಅಪೂರ್ವ ದಾಖಲೆ ಮತ್ತು ದಾಖಲಿತ ಸಂಕಲನವಾಗಿದೆ. ’ಬೀದೀಲಿ ಅವ್ವನನ್ನು ನೋಡಿದ ಮೇಲೆ ಮನೇಲಿ ಮಗಳನ್ನು ನೋಡುವ ಅಗತ್ಯವಿಲ್ಲ’ ಎಂಬ ಗಾದೆ ಮಾತಿನಂತೆ, ಮಕ್ಕಳ ಮನೋಭಿತ್ತಿಯ ಮೇಲೆ ಅರಳಿದ ಕುಸುಮಗಳನ್ನು ಆಯ್ದು ಪೋಣಿಸಿ ತಯಾರಿಸಿದ ಒಂದು ಸುಂದರವಾದ ಬಾಡದ ಹೂಮಾಲೆಯಾದ ಶಾಮಂತಿಯ ಮೂಲಕ ಇಲ್ಲಿನ ಮಕ್ಕಳ ಸಂಸ್ಕಾರವನ್ನು ಅರಿಯಬಹುದಾಗಿದೆ’ ಎಂದು ಪುಸ್ತಕ ಬಿಡುಗಡೆ ಮಾಡಿದ ಜಾನಪದ ತಜ್ಞ ಡಾ.ಎಂ.ಬೈರೇಗೌಡ ತಿಳಿಸಿದರು.

 ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಬರಹಗಳ ಸಂಕಲನ ’ಶಾಮಂತಿ’ ಪುಸ್ತಕ.
ಶಾಮಂತಿ ಪುಸ್ತಕದ ಸಂಪಾದಕ  ಎಸ್.ಕಲಾಧರ್  ದೂರವಾಣಿ ಸಂಖ್ಯೆ: ೯೯೦೦೬೯೫೧೪೨

Tuesday, March 26, 2013

ಒಂಟಿ ಕಾಲು... ಕರುಳಿನ ಕೂಗು

ಮೈನಾ ಹಕ್ಕಿಗಾಗಿ ಹುಳುಗಳನ್ನು ಹುಡುಕಲು ಅಗೆತ ಮಾಡುತ್ತಿರುವ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯ ಅಸಿಸ್ಟೆಂಟ್ ಸಬ್‌ಇನ್ಸ್‌ಪೆಕ್ಟರ್ ಕನಕಪ್ಪ.

 ಬೈಕಿನ ಹಿಂಬದಿಯ ಚೀಲದಲ್ಲಿ ಗುದ್ದಲಿಯನ್ನಿಟ್ಟುಕೊಂಡು ಇವರು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ದಿಬ್ಬೂರಹಳ್ಳಿ ರಸ್ತೆಯಲ್ಲಿ ಸಾಗುತ್ತಾರೆ. ಅರಣ್ಯ ಇಲಾಖೆಯ ಕಚೇರಿಯ ಆಸುಪಾಸಿನಲ್ಲಿ ರಸ್ತೆ ಬದಿಯಲ್ಲಿ ಸಾಲು ಮರಗಳಿರುವೆಡೆ ಬೈಕ್ ನಿಲ್ಲಿಸಿ ಮರದ ನೆರಳಿನಲ್ಲಿ ನೆಲವನ್ನು ಗುದ್ದಲಿಯಿಂದ ಅಗೆಯುತ್ತಾರೆ. ಮೆದುವಾಗಿ ಅಗೆತ ಮಾಡಿ ಮಣ್ಣನ್ನು ಸರಿಸಿ ಮಣ್ಣಿನಲ್ಲಿರುವ ಗೊಣ್ಣೆ ಹುಳುವನ್ನು ಆಯ್ದು ತನ್ನ ಬಳಿಯಿರುವ ಕವರಿನಲ್ಲಿ ಹಾಕಿಕೊಳ್ಳುತ್ತಾರೆ. ಈ ವಿಚಿತ್ರ ಕಾಯಕವನ್ನು ಇವರು ಪ್ರತಿನಿತ್ಯವೂ ವ್ರತದಂತೆ ಮಾಡುತ್ತಾರೆ.
 ಈ ವಿಶಿಷ್ಠ ಕೆಲಸದಲ್ಲಿ ತೊಡಗಿಸಿಕೊಂಡಿರುವವರು ಶಿಡ್ಲಘಟ್ಟ ಗ್ರಾಮಾಂತರ ಠಾಣೆಯ ಅಸಿಸ್ಟೆಂಟ್ ಸಬ್‌ಇನ್ಸ್‌ಪೆಕ್ಟರ್ ಕನಕಪ್ಪ. ಇವರು ಮನೆಯಲ್ಲಿ ಸಾಕುತ್ತಿರುವ ಒಂಟಿ ಕಾಲಿನ ಮೈನಾ ಹಕ್ಕಿಗಾಗಿ ಪ್ರತಿದಿನ ಹುಳುಗಳನ್ನು ಅರಸಿ ಅಗೆತ ಮಾಡುತ್ತಾರೆ. ಈ ಹುಳುಗಳಿಗಾಗಿ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ಗಿಡನೆಡಲು ಇವರೇ ಗುಣಿಹೊಡೆದುಕೊಟ್ಟಿದ್ದಾರೆ. ಪ್ರತಿ ದಿನ ಎಷ್ಟೇ ಕೆಲಸವಿದ್ದರೂ ಕನಿಷ್ಠ ಒಂದು ಗಂಟೆ ಹುಳುಗಳ ಅನ್ವೇಷಣೆಗೆ ಮೀಸಲಿಡುತ್ತಾರೆ.


 ನೆಲದೊಳಗೆ ಸಿಕ್ಕ ಗೊಣ್ಣೆಹುಳು.


  
ಗೊಣ್ಣೆಹುಳುಗಳ ಭಕ್ಷಣೆಯಲ್ಲಿ ನಿರತ ಮೈನಾ.

  ’ಈ ಮೈನಾ ಹಕ್ಕಿ ನಮ್ಮ ಮಡಿಲಿಗೆ ಬಂದಿದ್ದು ಒಂದು ವಿಚಿತ್ರ ಸಂದರ್ಭದಲ್ಲಿ. ಬೆಂಗಳೂರಿನಲ್ಲಿ ಉದ್ಯಾನವೊಂದರ ಬಳಿ ಹಾರಲು ಪ್ರಯತ್ನಿಸುತ್ತಿದ್ದ ಈ ಮರಿ ಹಕ್ಕಿ ತನ್ನ ಗೂಡಿನಿಂದ ಕೆಳಕ್ಕೆ ಬಿದ್ದಿದೆ. ಅದನ್ನು ನಾಯಿಯೊಂದು ಕಚ್ಚಿಕೊಂಡು ಹೋಗುವಾಗ, ಅದನ್ನು ನನ್ನ ಮಗಳು ಬಿಡಿಸಿ ರಕ್ಷಿಸಿದಳು. ಆದರೆ ಅಷ್ಟರಲ್ಲಿ ಅದರ ಕಾಲು ಮುರಿದಿತ್ತು. ಬೆಂಗಳೂರಿನಲ್ಲಿ ಹಲವು ಪಶುವೈದ್ಯರ ಬಳಿ ತೋರಿಸಿದರೂ ಗುಣಪಡಿಸಲಾಗಲಿಲ್ಲ. ನನ್ನ ಮಗಳು ಮತ್ತು ಅಳಿಯ ಅವರ ಮನೆಯಲ್ಲಿ ಅದನ್ನು ಸಾಕಲು ಪ್ರಯತ್ನಿಸಿದರು. ಕಾಳುಗಳನ್ನು ಪುಡಿಮಾಡಿ ಬಾಳೆಹಣ್ಣಿನೊಂದಿಗೆ ಕಿವುಚಿ ತಿನ್ನಿಸಿದ್ದಾರೆ. ಆದರೆ ಅದು ಕ್ರಮೇಣ ಕೃಶವಾಗತೊಡಗಿತು. ಅದರ ಪುಕ್ಕ ಉದುರಹತ್ತಿತು. ನಾನು ಹೋಗಿದ್ದಾಗ ನೋಡಿ ನಮ್ಮ ಮನೆಗೆ ತಂದೆ’ ಎಂದು ಮೈನಾ ಹಕ್ಕಿಯ ಆಗಮನವನ್ನು ಕನಕಪ್ಪ ವಿವರಿಸಿದರು.


ಕನಕಪ್ಪನವರ ಮಮತೆಯ ಮಡಿಲಲ್ಲಿ ಒಂಟಿಕಾಲಿನ ಮೈನಾ ಹಕ್ಕಿ.

’ಅಂತರ್ಜಾಲದಲ್ಲಿ ಈ ಹಕ್ಕಿಯ ಆಹಾರ ಕ್ರಮ, ಹಕ್ಕಿ ಸಾಕಾಣಿಕೆ ಬಗ್ಗೆ ವಿವರ ಸಂಗ್ರಹಿಸಲು ಪ್ರಯತ್ನಿಸಿದೆ. ಇದು ಕಾಳುಗಳನ್ನು ತಿನ್ನದು. ಇದಕ್ಕೆ ಕಬ್ಬಿಣದ ಅಂಶ ಕಡಿಮೆಯಿರುವ ಪ್ರೋಟೀನ್ ಆಹಾರ ನೀಡಬೇಕು ಎಂದು ತಿಳಿಯಿತು. ಆಗ ಮೊದಲ ಪ್ರಯತ್ನವಾಗಿ ತೋಟಗಾರಿಕೆಯ ಇಲಾಖೆಯಲ್ಲಿ ನೆಲ ತೋಡಿ ಎರೆಹುಳುಗಳನ್ನು ತಂದು ತಿನ್ನಿಸಿದೆ. ಹಾಗೆಯೇ ಒಮ್ಮೆ ಸಿಕ್ಕ ಗೊಣ್ಣೆ ಹುಳುಗಳನ್ನು ತಂದಾಗ ಬಹಳ ಇಷ್ಟಪಟ್ಟು ತಿಂದಿತು. ಅದರ ಇಷ್ಟಾನುಸಾರವಾಗಿ ಹುಳುಗಳನ್ನು ತರಲು ಪ್ರಾರಂಭಿಸಿದೆ.
 ಕಳೆದ ಒಂದು ವರ್ಷದಿಂದ ಈ ಮೈನಾ ಹಕ್ಕಿಯನ್ನು ಸಾಕುತ್ತಿದ್ದೇವೆ. ಒಂದೂವರೆ ಗಂಟೆಗೊಮ್ಮೆ ಇದಕ್ಕೆ ಹುಳುಗಳನ್ನು ತಿನ್ನಿಸಬೇಕು. ದಿನಕ್ಕೆರಡು ಬಾರಿ ನೀರಿನ ಪಾತ್ರೆಯಲ್ಲಿ ಆನಂದದಿಂದ ಸ್ನಾನ ಮಾಡುತ್ತದೆ. ನಾನು ಕೆಲಸಕ್ಕೆ ಹೋದಾಗ ನನ್ನ ಪತ್ನಿ ಇದಕ್ಕೆ ತಿನ್ನಿಸಿ ಸ್ನಾನ ಮಾಡಿಸುವರು. ಒಂದು ಕಾಲಿಲ್ಲದಿರುವುದರಿಂದ ತನ್ನ ಒಂದು ರೆಕ್ಕೆಯನ್ನೇ ಕಾಲಿನಂತೆ ಆಸರೆಗಾಗಿ ಬಳಸುವುದರಿಂದ ಒಂದು ರೆಕ್ಕೆ ಪೂರಾ ಸವೆದುಹೋಗಿದೆ. ಇದು ಹಾರಲಾರದು. ಹೊರಗೆ ಬಿಟ್ಟರೆ ಕಾಗೆ, ಹದ್ದು ಅಥವಾ ಬೆಕ್ಕಿಗೆ ಬಲಿಯಾಗುತ್ತದೆ. ಕಬ್ಬಿಣದ ಮೆಶ್ ಬಳಸಿ ಇದಕ್ಕೆ ಮನೆಯೊಂದನ್ನು ಮಾಡಿದ್ದೇವೆ. ಮನೆಯ ಮುಂದಿನ ಮರದ ರೆಂಬೆಯ ಮೇಲೆ ಅದರ ಸ್ವಜಾತಿ ಮೈನಾಗಳು ಬಂದಾಗ ಇದು ಸಂಭಾಷಣೆಯಲ್ಲಿ ತೊಡಗುತ್ತದೆ. ಹಲವು ಬಾರಿ ಕಾಗೆಗಳು ಬಂದು ಧಾಳಿ ಮಾಡುತ್ತವೆ. ಆಗ ಇದು ಮುದುಡಿಹೋಗುತ್ತದೆ.



ಮೈನಾ ಹಕ್ಕಿಯ ಮನೆ.


  ನನ್ನ ವೃತ್ತಿಯ ನಡುವೆ ಮೈನಾ ಹಕ್ಕಿಗೆ ಹುಳುಗಳನ್ನು ತರಲು ಕಷ್ಟವಾಗುತ್ತದೆ. ಆದರೂ ಈ ಕೆಲಸ ಬಹಳ ಇಷ್ಟಪಟ್ಟು ಮಾಡುತ್ತೇನೆ. ಹಕ್ಕಿಯನ್ನು ಪಂಜರದಲ್ಲಿಟ್ಟು ಸಾಕಬಾರದಂತೆ. ಆದರೆನು ಮಾಡುವುದು ನಮ್ಮ ಮಡಿಲಿಗೆ ಬಂದಿರುವ ಇದನ್ನು ಬೇರೆ ಪ್ರಾಣಿಗೆ ಆಹಾರವಾಗಲು ಬಿಡಲು ಮನಸ್ಸು ಬಾರದು. ಇದರ ಆಯಸ್ಸು ೨೫ ವರ್ಷಗಳಂತೆ. ನಾನು ಇದಕ್ಕೆ ನೋವಾಗದಂತೆ ಸಾಕುತ್ತೇನೆ. ಯಾರಾದರೂ ಇದರ ಕಾಲು ಸರಿ ಮಾಡಿದಲ್ಲಿ ಎಷ್ಟು ಹಣ ಖರ್ಚಾದರೂ ಕೊಡಲು ಸಿದ್ದವಿದ್ದೇನೆ. ಇದನ್ನು ನಮ್ಮಂತೆಯೇ ಸಲಹುವ ಪ್ರಾಣಿದಯಾಸಂಘವಿದ್ದರೆ ನಾನು ದತ್ತು ತೆಗೆದುಕೊಂಡು ಇದರ ಪೋಷಣೆಯ ಖರ್ಚನ್ನೂ ನೀಡುತ್ತೇನೆ’ ಎಂದು ಅವರು ಹೇಳಿದರು. ಕನಕಪ್ಪನವರ ಫೋನ್ ನಂಬರ್: ೭೭೬೦೨೩೪೪೩೩.

ಸ್ವಾಭಿಮಾನದ ಬದುಕು


 ಈಕೆಗೆ ಎರಡು ಕಾಲುಗಳು ಮತ್ತು ಒಂದು ಕೈ ಸ್ವಾಧೀನದಲ್ಲಿಲ್ಲ. ಸರಿಯಿರುವ ಒಂದು ಕೈಯಿನ ಬೆರಳುಗಳೂ ಸರಿಯಾಗಿಲ್ಲ. ಆದರೂ ಆತ್ಮಾಭಿಮಾನ ಈಕೆಯನ್ನು ದುಡಿಯಲು ಹಚ್ಚಿದೆ. ಸ್ವಾಭಿಮಾನದ ಬದುಕಿಗಾಗಿ ಇವರು ಚಿಲ್ಲರೆ ಅಂಗಡಿಯನ್ನು ನಡೆಸುತ್ತಾರೆ.

 ಶಿಡ್ಲಘಟ್ಟ ತಾಲ್ಲೂಕಿನ ಚೌಡಸಂದ್ರ ಗ್ರಾಮದ ರೂಪ ಅಂಗವಿಕಲೆಯಾದರೂ ದುಡಿದು ಬದುಕುವ ಛಲದಿಂದ ಚೌಡಸಂದ್ರ ಗೇಟಿನ ಪ್ರಯಾಣಿಕರ ತಂಗುದಾಣದಲ್ಲಿ ಪ್ರತಿನಿತ್ಯ ಕಾಫಿ ಟೀ ಹಾಗೂ ತಿಂಡಿಗಳನ್ನು ಮಾರಾಟ ಮಾಡುತ್ತಾರೆ. ತನ್ನ ತಾಯಿ ಮತ್ತು ಎರಡನೇ ತರಗತಿಯಲ್ಲಿರುವ ಪುಟ್ಟ ಮಗನ ಆಸರೆಯಿಂದ ಜೀವನಕ್ಕಾಗಿ ಒಂಟಿ ಕೈಯಿನಿಂದಲೇ ಹೋರಾಡುತ್ತಿದ್ದಾರೆ.

 ಪ್ರತಿನಿತ್ಯ ತನ್ನ ತ್ರಿಚಕ್ರ ವಾಹನದಲ್ಲಿ ಚಕ್ಕುಲಿ, ಕೋಡುಬಳೆ, ಬಿಸ್ಕತ್ ಮುಂತಾದ ತಿಂಡಿಗಳು ಮತ್ತು ಕಾಫಿ ಟೀಗಳ ಫ್ಲಾಸ್ಕ್ ನೊಂದಿಗೆ ಚೌಡಸಂದ್ರ ಗೇಟಿಗೆ ಆಗಮಿಸುತ್ತಾರೆ. ತನ್ನ ತಾಯಿ ಅಥವಾ ಗ್ರಾಮಸ್ಥರ ಸಹಾಯ ಪಡೆದು ತಿಂಡಿಗಳ ಬಾಟಲಿಗಳನ್ನು ಜೋಡಿಸಿಟ್ಟುಕೊಳ್ಳುತ್ತಾರೆ. ಬರುವ ಗಿರಾಕಿಗಳಿಗೆ ತಿಂಡಿ ತೆಗೆದುಕೊಡಲೂ ಇವರ ಕೈಲಿ ಆಗದು. ಅವರೇ ತೆಗೆದುಕೊಂಡು ಇವರಿಗೆ ಹಣ ನೀಡಿ ಹೋಗಬೇಕು.



 ಶಿಡ್ಲಘಟ್ಟ ತಾಲ್ಲೂಕಿನ ಚೌಡಸಂದ್ರದ ಅಂಗವಿಕಲೆ ರೂಪಾ ಗ್ರಾಮಸ್ಥರೊಬ್ಬರ ಸಹಾಯದಿಂದ ತನ್ನ ಚಿಲ್ಲರೆ ಅಂಗಡಿಯ ಸಾಮಾನುಗಳನ್ನು ತನ್ನ ತ್ರಿಚಕ್ರ ವಾಹನದಲ್ಲಿ ತರುತ್ತಿರುವುದು.

 ’ನನ್ನದು ದುರಂತ ಕಥೆ. ಮೂರು ವರ್ಷದ ಮಗುವಾಗಿದ್ದಾಗ ಜ್ವರ ಬಂದಿತ್ತಂತೆ. ಆಗ ನನ್ನ ಕಾಲುಗಳು ಮತ್ತು ಒಂದು ಕೈ ಸ್ವಾಧೀನ ಕಳೆದುಕೊಂಡಿತಂತೆ. ಇರುವ ಒಂದು ಕೈಯಿನ ಬೆರಳುಗಳು ಕೊಂಚ ತಿರುಚಿವೆ. ಚೌಡಸಂದ್ರದ ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿಯವರೆಗೂ ಓದಿರುವೆ. ಮುಂದೆ ಓದಲು ಮೇಲೂರಿಗೆ ಹೋಗಲಾಗದೇ ಮನೆಯಲ್ಲೇ ಉಳಿದೆ. ನನ್ನ ತಾಯಿ ನಮ್ಮ ಸಂಬಂಧಿಕರಲ್ಲೇ ನನ್ನನ್ನು ಮದುವೆ ಮಾಡಿಕೊಟ್ಟರು. ಅವರಿಗೆ ನಾನು ಎರಡನೇ ಹೆಂಡತಿ. ಆದರೆ ಮಗುವಾದ ಮೇಲೆ ನನ್ನನ್ನು ತಾಯಿ ಮನೆಗೆ ಕಳುಹಿಸಿಬಿಟ್ಟರು. ನನ್ನ ತಾಯಿಗೆ ಹೊರೆಯಾಗಬಾರದೆಂದು ಕಷ್ಟಪಟ್ಟು ದುಡಿಯಲು ಯತ್ನಿಸುತ್ತಿರುವೆ’ ಎನ್ನುತ್ತಾರೆ ಚೌಡಸಂದ್ರದ ರೂಪ.

 ’ಸರ್ಕಾರದಿಂದ ವೀಲ್ ಚೇರ್ ಕೊಟ್ಟಿದ್ದಾರೆ. ಆದರೆ ಅದರಲ್ಲಿ ಓಡಾಡಲು ಸಾಧ್ಯವಿಲ್ಲದ್ದರಿಂದ ಆರು ನೂರು ರೂ ಕೊಟ್ಟು ಮೂರು ಚಕ್ರದ ಸೈಕಲ್ ಮಾಡಿಸಿಕೊಂಡೆ. ಪ್ರತಿನಿತ್ಯ ಅಂಗಡಿಯ ಸಾಮಾನುಗಳನ್ನು ಇದರಲ್ಲಿ ತಂದು ಮಾರಾಟಮಾಡುತ್ತೇನೆ. ದಿನಕ್ಕೆ ೫೦ ರೂ ಸಂಪಾದಿಸುತ್ತೇನೆ. ನನ್ನ ಏಳು ವರ್ಷದ ಮಗ ಮೇಲೂರಿನ ಖಾಸಗಿ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿದ್ದಾನೆ. ಭಕ್ತರಹಳ್ಳಿಯ ಸುಮಾ ಎಂಬ ಗೃಹಿಣಿ ಓದಿಸುತ್ತಿದ್ದಾರೆ. ಸರ್ಕಾರದಿಂದ ಪ್ರತಿ ತಿಂಗಳೂ ೧,೦೦೦ ರೂ ಪೆನ್ಶನ್ ಸಿಗುತ್ತಿದೆ. ಮನೆ, ಅಂಗಡಿ ಮತ್ತು ಸೈಟ್‌ಗಾಗಿ ಕೋರಿ ಅರ್ಜಿ ಸಲ್ಲಿಸಿದ್ದರೂ ಇದುವರೆಗೂ ಸಿಕ್ಕಿಲ್ಲ. ನನಗೆ ಸಾಲ ನೀಡಿದರೆ ದುಡಿದು ತೀರಿಸಿ ನನ್ನಂಥಹ ಅಂಗವಿಕಲರಿಗೆ ಸಹಾಯ ಮಾಡುತ್ತೇನೆ. ನನಗೆ ಅನುಕಂಪ ಬೇಡ. ನನ್ನನ್ನು ಮನುಷ್ಯರಂತೆ ಪರಿಗಣಿಸಿದರೆ ಸಾಕು’ ಎಂದು ಅವರು ಹೇಳಿದರು.

 ’ಬಾಡಿಗೆ ಮನೆಯಲ್ಲಿದ್ದು, ಬಡತನವಿದ್ದರೂ ಸ್ವಾಭಿಮಾನದಿಂದ ರೂಪಾ ಜೀವನ ನಡೆಸುತ್ತಿದ್ದಾರೆ. ಪ್ರತಿನಿತ್ಯ ಈಗೆ ತನ್ನ ಸೈಕಲ್‌ನಲ್ಲಿ ಬರುವಾಗ ನಾವು ಯಾರಾದರೂ ಸಹಾಯ ಮಾಡುತ್ತೇವೆ. ಪ್ರತಿಯೊಂದು ಕೆಲಸದಲ್ಲೂ ಪರಾವಲಂಬಿಯಾದರೂ ತನ್ನ ದುಡಿಮೆ ತಾನೇ ಮಾಡಿಕೊಳ್ಳಬೇಕೆಂಬ ಇವರ ನಿಲುವು ಇತರರಿಗೆ ಮಾದರಿಯಾಗಿದೆ’ ಎಂದು ಚೌಡಸಂದ್ರ ಗ್ರಾಮದ ರಾಮಕೃಷ್ಣಪ್ಪ ಹೇಳಿದರು.
 ಚೌಡಸಂದ್ರದ ರೂಪಾ ಅವರ ಮೊಬೈಲ್ ಸಂಖ್ಯೆ ೯೫೩೫೧೪೫೧೩೪.

 ಶಿಡ್ಲಘಟ್ಟ ತಾಲ್ಲೂಕಿನ ಚೌಡಸಂದ್ರದ ಅಂಗವಿಕಲೆ ರೂಪಾ ಚೌಡಸಂದ್ರ ಗೇಟಿನ ಪ್ರಯಾಣಿಕರ ತಂಗುದಾಣದಲ್ಲಿ ಚಿಲ್ಲರೆ ಅಂಗಡಿ ನಡೆಸುತ್ತಿರುವುದು.