ಈಕೆಗೆ ಎರಡು ಕಾಲುಗಳು ಮತ್ತು ಒಂದು ಕೈ ಸ್ವಾಧೀನದಲ್ಲಿಲ್ಲ. ಸರಿಯಿರುವ ಒಂದು ಕೈಯಿನ ಬೆರಳುಗಳೂ ಸರಿಯಾಗಿಲ್ಲ. ಆದರೂ ಆತ್ಮಾಭಿಮಾನ ಈಕೆಯನ್ನು ದುಡಿಯಲು ಹಚ್ಚಿದೆ. ಸ್ವಾಭಿಮಾನದ ಬದುಕಿಗಾಗಿ ಇವರು ಚಿಲ್ಲರೆ ಅಂಗಡಿಯನ್ನು ನಡೆಸುತ್ತಾರೆ.
ಶಿಡ್ಲಘಟ್ಟ ತಾಲ್ಲೂಕಿನ ಚೌಡಸಂದ್ರ ಗ್ರಾಮದ ರೂಪ ಅಂಗವಿಕಲೆಯಾದರೂ ದುಡಿದು ಬದುಕುವ ಛಲದಿಂದ ಚೌಡಸಂದ್ರ ಗೇಟಿನ ಪ್ರಯಾಣಿಕರ ತಂಗುದಾಣದಲ್ಲಿ ಪ್ರತಿನಿತ್ಯ ಕಾಫಿ ಟೀ ಹಾಗೂ ತಿಂಡಿಗಳನ್ನು ಮಾರಾಟ ಮಾಡುತ್ತಾರೆ. ತನ್ನ ತಾಯಿ ಮತ್ತು ಎರಡನೇ ತರಗತಿಯಲ್ಲಿರುವ ಪುಟ್ಟ ಮಗನ ಆಸರೆಯಿಂದ ಜೀವನಕ್ಕಾಗಿ ಒಂಟಿ ಕೈಯಿನಿಂದಲೇ ಹೋರಾಡುತ್ತಿದ್ದಾರೆ.
ಪ್ರತಿನಿತ್ಯ ತನ್ನ ತ್ರಿಚಕ್ರ ವಾಹನದಲ್ಲಿ ಚಕ್ಕುಲಿ, ಕೋಡುಬಳೆ, ಬಿಸ್ಕತ್ ಮುಂತಾದ ತಿಂಡಿಗಳು ಮತ್ತು ಕಾಫಿ ಟೀಗಳ ಫ್ಲಾಸ್ಕ್ ನೊಂದಿಗೆ ಚೌಡಸಂದ್ರ ಗೇಟಿಗೆ ಆಗಮಿಸುತ್ತಾರೆ. ತನ್ನ ತಾಯಿ ಅಥವಾ ಗ್ರಾಮಸ್ಥರ ಸಹಾಯ ಪಡೆದು ತಿಂಡಿಗಳ ಬಾಟಲಿಗಳನ್ನು ಜೋಡಿಸಿಟ್ಟುಕೊಳ್ಳುತ್ತಾರೆ. ಬರುವ ಗಿರಾಕಿಗಳಿಗೆ ತಿಂಡಿ ತೆಗೆದುಕೊಡಲೂ ಇವರ ಕೈಲಿ ಆಗದು. ಅವರೇ ತೆಗೆದುಕೊಂಡು ಇವರಿಗೆ ಹಣ ನೀಡಿ ಹೋಗಬೇಕು.
ಶಿಡ್ಲಘಟ್ಟ ತಾಲ್ಲೂಕಿನ ಚೌಡಸಂದ್ರದ ಅಂಗವಿಕಲೆ ರೂಪಾ ಗ್ರಾಮಸ್ಥರೊಬ್ಬರ ಸಹಾಯದಿಂದ ತನ್ನ ಚಿಲ್ಲರೆ ಅಂಗಡಿಯ ಸಾಮಾನುಗಳನ್ನು ತನ್ನ ತ್ರಿಚಕ್ರ ವಾಹನದಲ್ಲಿ ತರುತ್ತಿರುವುದು.
’ನನ್ನದು ದುರಂತ ಕಥೆ. ಮೂರು ವರ್ಷದ ಮಗುವಾಗಿದ್ದಾಗ ಜ್ವರ ಬಂದಿತ್ತಂತೆ. ಆಗ ನನ್ನ ಕಾಲುಗಳು ಮತ್ತು ಒಂದು ಕೈ ಸ್ವಾಧೀನ ಕಳೆದುಕೊಂಡಿತಂತೆ. ಇರುವ ಒಂದು ಕೈಯಿನ ಬೆರಳುಗಳು ಕೊಂಚ ತಿರುಚಿವೆ. ಚೌಡಸಂದ್ರದ ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿಯವರೆಗೂ ಓದಿರುವೆ. ಮುಂದೆ ಓದಲು ಮೇಲೂರಿಗೆ ಹೋಗಲಾಗದೇ ಮನೆಯಲ್ಲೇ ಉಳಿದೆ. ನನ್ನ ತಾಯಿ ನಮ್ಮ ಸಂಬಂಧಿಕರಲ್ಲೇ ನನ್ನನ್ನು ಮದುವೆ ಮಾಡಿಕೊಟ್ಟರು. ಅವರಿಗೆ ನಾನು ಎರಡನೇ ಹೆಂಡತಿ. ಆದರೆ ಮಗುವಾದ ಮೇಲೆ ನನ್ನನ್ನು ತಾಯಿ ಮನೆಗೆ ಕಳುಹಿಸಿಬಿಟ್ಟರು. ನನ್ನ ತಾಯಿಗೆ ಹೊರೆಯಾಗಬಾರದೆಂದು ಕಷ್ಟಪಟ್ಟು ದುಡಿಯಲು ಯತ್ನಿಸುತ್ತಿರುವೆ’ ಎನ್ನುತ್ತಾರೆ ಚೌಡಸಂದ್ರದ ರೂಪ.
’ಸರ್ಕಾರದಿಂದ ವೀಲ್ ಚೇರ್ ಕೊಟ್ಟಿದ್ದಾರೆ. ಆದರೆ ಅದರಲ್ಲಿ ಓಡಾಡಲು ಸಾಧ್ಯವಿಲ್ಲದ್ದರಿಂದ ಆರು ನೂರು ರೂ ಕೊಟ್ಟು ಮೂರು ಚಕ್ರದ ಸೈಕಲ್ ಮಾಡಿಸಿಕೊಂಡೆ. ಪ್ರತಿನಿತ್ಯ ಅಂಗಡಿಯ ಸಾಮಾನುಗಳನ್ನು ಇದರಲ್ಲಿ ತಂದು ಮಾರಾಟಮಾಡುತ್ತೇನೆ. ದಿನಕ್ಕೆ ೫೦ ರೂ ಸಂಪಾದಿಸುತ್ತೇನೆ. ನನ್ನ ಏಳು ವರ್ಷದ ಮಗ ಮೇಲೂರಿನ ಖಾಸಗಿ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿದ್ದಾನೆ. ಭಕ್ತರಹಳ್ಳಿಯ ಸುಮಾ ಎಂಬ ಗೃಹಿಣಿ ಓದಿಸುತ್ತಿದ್ದಾರೆ. ಸರ್ಕಾರದಿಂದ ಪ್ರತಿ ತಿಂಗಳೂ ೧,೦೦೦ ರೂ ಪೆನ್ಶನ್ ಸಿಗುತ್ತಿದೆ. ಮನೆ, ಅಂಗಡಿ ಮತ್ತು ಸೈಟ್‌ಗಾಗಿ ಕೋರಿ ಅರ್ಜಿ ಸಲ್ಲಿಸಿದ್ದರೂ ಇದುವರೆಗೂ ಸಿಕ್ಕಿಲ್ಲ. ನನಗೆ ಸಾಲ ನೀಡಿದರೆ ದುಡಿದು ತೀರಿಸಿ ನನ್ನಂಥಹ ಅಂಗವಿಕಲರಿಗೆ ಸಹಾಯ ಮಾಡುತ್ತೇನೆ. ನನಗೆ ಅನುಕಂಪ ಬೇಡ. ನನ್ನನ್ನು ಮನುಷ್ಯರಂತೆ ಪರಿಗಣಿಸಿದರೆ ಸಾಕು’ ಎಂದು ಅವರು ಹೇಳಿದರು.
’ಬಾಡಿಗೆ ಮನೆಯಲ್ಲಿದ್ದು, ಬಡತನವಿದ್ದರೂ ಸ್ವಾಭಿಮಾನದಿಂದ ರೂಪಾ ಜೀವನ ನಡೆಸುತ್ತಿದ್ದಾರೆ. ಪ್ರತಿನಿತ್ಯ ಈಗೆ ತನ್ನ ಸೈಕಲ್‌ನಲ್ಲಿ ಬರುವಾಗ ನಾವು ಯಾರಾದರೂ ಸಹಾಯ ಮಾಡುತ್ತೇವೆ. ಪ್ರತಿಯೊಂದು ಕೆಲಸದಲ್ಲೂ ಪರಾವಲಂಬಿಯಾದರೂ ತನ್ನ ದುಡಿಮೆ ತಾನೇ ಮಾಡಿಕೊಳ್ಳಬೇಕೆಂಬ ಇವರ ನಿಲುವು ಇತರರಿಗೆ ಮಾದರಿಯಾಗಿದೆ’ ಎಂದು ಚೌಡಸಂದ್ರ ಗ್ರಾಮದ ರಾಮಕೃಷ್ಣಪ್ಪ ಹೇಳಿದರು.
ಚೌಡಸಂದ್ರದ ರೂಪಾ ಅವರ ಮೊಬೈಲ್ ಸಂಖ್ಯೆ ೯೫೩೫೧೪೫೧೩೪.
ಶಿಡ್ಲಘಟ್ಟ ತಾಲ್ಲೂಕಿನ ಚೌಡಸಂದ್ರದ ಅಂಗವಿಕಲೆ ರೂಪಾ ಚೌಡಸಂದ್ರ ಗೇಟಿನ ಪ್ರಯಾಣಿಕರ ತಂಗುದಾಣದಲ್ಲಿ ಚಿಲ್ಲರೆ ಅಂಗಡಿ ನಡೆಸುತ್ತಿರುವುದು.
2 comments:
ಬಹಳ ದಿನಗಳ ನಂತರ ನಿಮ್ಮ ಲೇಖನ ಮೂಡಿ ಬಂದಿದೆ. ಅಪರೂಪದ ಜೀವಿಗಳನ್ನು (-ಅವು ಪಕ್ಷಿಗಳೇ ಆಗಿರಲಿ, ಮನುಷ್ಯರೇ ಆಗಿರಲಿ-) ಪರಿಚಯಿಸುವ ನಿಮ್ಮ ಕಾರ್ಯ ಸ್ತುತ್ಯವಾಗಿದೆ. ಪ್ರಸ್ತುತ ಲೇಖನ ಓದಿ ಮನಸ್ಸು ತುಂಬಿ ಬಂದಿತು. ನಿಮಗೆ ಧನ್ಯವಾದಗಳು.
Inspirational lady...
Post a Comment