Monday, April 27, 2009

ನಗೆ - ಬಗೆ ಬಗೆ

ನಗು ಆನಂದದ ಕುರುಹು. ನಗು ವಿಶ್ವವ್ಯಾಪಕ.ನಗುವಿನಲ್ಲಿ ಎಷ್ಟೊಂದು ಬಗೆಗಳು - ಮಗುವಿನ ಮುಗ್ಧನಗು, ವೃದ್ಧರ ಬೊಚ್ಚುನಗು,ಮುಗುಳ್ನಗು, ಗಹಗಹಿಸಿ ನಗು, ಮಂದಹಾಸದ ನಗು, ಅಟ್ಟಹಾಸದ ನಗು,ನಾಚಿಕೆಯ ನಗು, ಅಪಹಾಸ್ಯದ ನಗು,ಅತ್ಯಾನಂದದ ನಗು, ಸಿನಿಕ ನಗು,ದಿಟ್ಟನಗು, ಅಹಂಕಾರದ ಕೇಕೆಯನಗು,ಕೌತುಕದ ನಗು, ಲೇವಡಿನಗು, ಹುಸಿನಗು, ಮುಸಿನಗು, ಮೆಲುನಗು, ನಸುನಗು, ಎಳೆನಗು, ಬಿಸುನಗು, ಹುಚ್ಚುನಗು, ಕೊಂಕುನಗು,ಎದೆಯನ್ನು ಹಗುರಾಗಿಸಿ ಕಣ್ಣನ್ನು ತೇವಗೊಳಿಸುವ ನಗು,ಉರುಳಾಡಿ ನಕ್ಕ ನಗು....
ಈ ಬೆಲೆಕಟ್ಟಲಾಗದ ಮಿಲಿಯನ್ ಡಾಲರ್ ಸ್ಮೈಲ್ ಬಗ್ಗೆ ಬರೆಯುವುದಕ್ಕಿಂತ ಚಿತ್ರಗಳನ್ನು ನೋಡಿ ನಕ್ಕು ಹಗುರಾಗೋಣ. ಏನಂತೀರ?
ಮಗುವೆ ನಿನ್ನ ಹೂನಗೆ ಒಡವೆ ನನ್ನ ಬಾಳಿಗೆ

ನಾಚಿಕೆಯ ನಗು!

ನಗು ನಗುತಾ ನಲೀ ನಲೀ...

ನೀನು ನಕ್ಕರೆ ಹಾಲು ಸಕ್ಕರೆ

ನಕ್ಕರೆ ಅದೇ ಸ್ವರ್ಗ

ಒಮ್ಮೆ ನಕ್ಕು ನನ್ನ ನಗಿಸು
ಬಿಮ್ಮೆನ್ನುತಿದೆ ಎನ್ನ ಮನಸು - ಕೆ.ಎಸ್.ನ.

ತಣ್ಣನೆ ಕಡಲಂತೆ ನಗು
ಬಣ್ಣದ ಮುಗುಳಂತೆ ನಗು

ಮನತುಂಬಿ ನಗು

Sunday, April 19, 2009

ಅಮ್ಮ ಹೇಳಿದ ಎಂಟು ಸುಳ್ಳುಗಳು

"ಡಿಯರ್ ಮಲ್ಲಿಕ್, ನನ್ನ ಪುಸ್ತಕ ’ಅಮ್ಮ ಹೇಳಿದ ಎಂಟು ಸುಳ್ಳುಗಳು’ ಕವರ್ ಪೇಜಿಗೆ ಫೋಟೋ ಕಳಿಸಿಕೊಡಿ" ಎಂದು ಮಣಿಕಾಂತ್ ಮೆಸೇಜ್ ಮಾಡಿದ್ದರು. ನನ್ನ ಸಂಗ್ರಹದಲ್ಲಿದ್ದ ಒಂದು ಫೋಟೋ ಇಮೇಲ್ ಮಾಡಿದೆ.
ತಕ್ಷಣ ಮಣಿಕಾಂತ್, "ಇದು ಬೇಡ. ತಾಯಿ ಮಗು ಇರುವ ಚಿತ್ರ ಬೇಕು. ಸಾಧ್ಯವಾದರೆ ತೆಗೆದು ಕಳಿಸಿ" ಎಂದು ಮೆಸೇಜ್ ಮಾಡಿದರು.
ಏನು ಮಾಡುವುದೆಂದು ಅಂಗಡಿಯಲ್ಲಿ ಕುಳಿತು ಯೋಚಿಸುತ್ತಿದ್ದಾಗ ಗೆಳೆಯ ವೆಂಕಟರಮಣ ಬಂದ. ನನ್ನ ತಲೆಯಲ್ಲಿದ್ದ ಹುಳು ತೆಗೆದು ಅವನ ತಲೆಯಲ್ಲಿ ಬಿಟ್ಟೆ. ಅವನು ಒಂದು ಉಪಾಯ ಹೇಳಿದ. ಅವರ ಮನೆ ಅಕ್ಕಪಕ್ಕದವರೆಲ್ಲ ಬಹಳ ಆತ್ಮೀಯರು. ಭಾನುವಾರದಂದು ಎಲ್ಲರೂ ಟೇರೇಸ್ ಮೇಲೆ ಸೇರುತ್ತಾರೆ. ಮೂರೂ ಮನೆಯ ಮಕ್ಕಳಿಗೆಲ್ಲ ಕೈತುತ್ತಿನ ಊಟ. "ಭಾನುವಾರ ರಾತ್ರಿ ಬನ್ನಿ. ನಿಮಗೆ ಯಾವ ತಾಯಿ ಮಗು ಇಷ್ಟವಾದರೆ ಅವರ ಫೋಟೋ ತೆಗೀರಿ. ಜೊತೆಯಲ್ಲಿ ಆಕಾಶದಲ್ಲಿರುವ ಚಂದ್ರನೂ ಫೋಟೋದಲ್ಲಿ ಬೀಳಲಿ. ಚೆನ್ನಾಗಿರುತ್ತೆ" ಎಂದು ಹೇಳಿದ. ಫೋಟೋ ತೆಗೆದು ಮಾಣಿಕಾಂತ್ ಗೆ ಕಳಿಸಿದೆ.
"ಇದಲ್ಲ ಮಲ್ಲಿಕ್. ನನ್ನ ಲೇಖನದಲ್ಲಿ ಬರೋದು ಗಂಡುಮಗು. ಆ ಲೇಖನ ನನ್ನ ಬ್ಲಾಗಲ್ಲಿದೆ, ಓದಿ" ಎಂಬ ಮೆಸೇಜ್ ಬಂತು.
ಇದೇ ಗುಂಗಿನಲ್ಲಿದ್ದಾಗ ಒಮ್ಮೆ ಗೆಳೆಯ ನಾಗಭೂಷಣ್ ಹೆಂಡತಿ ಮಗನೊಂದಿಗೆ ಮಾತ್ರೆ ಕೊಳ್ಳಲು ನನ್ನ ಅಂಗಡಿಗೆ ಬಂದರು. ಅವರಿರುವುದು ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರ ಗ್ರಾಮದಲ್ಲಿ. ಅವರು ವರದನಾಯಕನಹಳ್ಳಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು. ಅವರ ಪತ್ನಿ ವೀರಾಪುರ ಗ್ರಾಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿ. ಅವರ ಮಗ ಐದು ವರ್ಷದ ಮಧುಸೂದನ್. ಅವರನ್ನು ನೋಡುತ್ತಿದ್ದಂತೆಯೇ ನನ್ನ ಕಲ್ಪನೆ ಗರಿಗೆದರಿತು. ನಾಗಭೂಷಣ್ ಗೆ ಸೂಕ್ಷ್ಮವಾಗಿ ವಿಷಯ ತಿಳಿಸಿದೆ. ಅವರು ಸಮ್ಮತಿ ಸೂಚಿಸಿದರು. "ನಿಮ್ಮ ಮನೆಯವರಿಗೆ ಮತ್ತು ಮಗನಿಗೆ ಹೇಳಬೇಡಿ. ಹೇಳಿದರೆ ಫೋಟೋಗಾಗಿ ಡ್ರೆಸ್ ಮಾಡಿಕೊಂಡು ಪೋಸ್ ಕೊಡಲು ಶುರುಮಾಡಿದರೆ ಆಗ ನೈಜತೆಯಿರುವುದಿಲ್ಲ" ಎಂದು ಹೇಳಿದೆ.
ಒಂದು ಭಾನುವಾರ(ಅವರಿಬ್ಬರಿಗೂ ರಜವೆಂದು) ಬೆಳೆಗ್ಗೆ ಅವರ ಮನೆಗೆ ಹೋದೆ. ಅವರ ಮನೆಯಲ್ಲಿ ದೋಸೆ ಮಾಡಿದ್ದರು. ನಾನೂ ತಿಂದೆ. ನಾಗಭೂಷಣ್ ರ ಪತ್ನಿ ಮಗನಿಗೆ ತಿನ್ನಿಸುವಾಗ ಫೋಟೋ ತೆಗೆದೆ. ಅಮ್ಮನನ್ನು ಕೂಸುಮರಿ ರೀತಿ ಹಿಡಿದಿದ್ದ. ಆ ಫೋಟೋ ಮಣಿಕಾಂತ್ ಗೆ ಕಳಿಸಿದೆ.
"ಚೆನ್ನಾಗಿದೆ ಮಲ್ಲಿಕ್. ಇನ್ನೂ ಸ್ವಲ್ಪ ಇಂಪ್ರೂವ್ ಮಾಡೋಕಾಗುತ್ತ ನೋಡಿ. ಯಾರು ನೋಡಿದರೂ ತಮ್ಮ ತಾಯಿ ತಿನ್ನಿಸಿದ್ದು ನೆನಪಾಗಬೇಕು. ತಾಯಿಯ ಮುಖವೂ ಸ್ವಲ್ಪ ಕಾಣುವಂತಿರಲಿ. ಭಾವನೆಗಳು ಮುಖ್ಯ" ಎಂಬ ಮೆಸೇಜ್ ಬಂತು.
ಈಗೇನು ಮಾಡುವುದು? ಸ್ವಲ್ಪ ದಿನ ಸುಮ್ಮನಾದೆ. ಪುನಃ ನಾಗಭೂಷಣ್ ಸಿಕ್ಕಾಗ ಹೇಳಿದೆ, "ಇನ್ನೊಂದೇ ಒಂದು ಬಾರಿ ಫೋಟೋ ತೆಗೆಯುವೆ. ಬೇಜಾರು ಮಾಡಿಕೊಳ್ಳಬೇಡಿ" ಎಂದು. "ಪರವಾಗಿಲ್ಲ, ಮೊಹರಂ ಹಬ್ಬದ ದಿನ ರಜ ಇದೆ. ಮದ್ಯಾಹ್ನ ಬಂದುಬಿಡಿ" ಅಂದರು.ಹನುಮಂತಪುರಕ್ಕೆ ಹೋದೆ. ನಾನು ಹೋಗುತ್ತಿದ್ದಂತೆಯೆ, "ಬೇಗ ಬನ್ನಿ. ಹಿತ್ತಲಲ್ಲಿ ನಮ್ಮವರು ಮಧುಗೆ ತಿನ್ನಿಸುತ್ತಿದ್ದಾರೆ. ಫೋಟೋ ತಕ್ಕೋಳ್ಳಿ" ಎಂದರು ನಾಗಭೂಷಣ್. ಆ ದೃಶ್ಯ ನೋಡುತ್ತಿದ್ದಂತೆ ನನಗೆ ನನ್ನ ಬಾಲ್ಯ ನೆನಪಿಗೆ ಬಂತು. ಚಕಚಕನೆ ಕ್ಲಿಕ್ಕಿಸಿದೆ. ಅಷ್ಟರಲ್ಲಿ ಅವರದೂ ತಿನ್ನಿಸಿದ್ದು ಮುಗಿದಿತ್ತು. "ಚೆನ್ನಾಗಿ ಬಂತಾ? ಇನ್ನೊಮ್ಮೆ ತೆಗೀತೀರಾ? ಮತ್ತೆ ತಿನ್ನಿಸಲು ಹೇಳಲಾ?" ಅಂದರು ನಾಗಭೂಷಣ್. "ನಂಗೆ ಸಾಕು" ಎನ್ನುತ್ತಾ ಮಧು ಆಡಲು ಓಡಿದ. ಹಿಡಿಯಲು ಹೋದ ನಾಗಭೂಷಣ್ ಗೆ "ಬಿಟ್ಬಿಡಿ ಸರ್. ಬಲವಂತ ಮಾಡುವುದು ಬೇಡ. ಅದು ಚೆನ್ನಾಗೂ ಬರಲ್ಲ" ಎಂದು ಹೇಳಿ ಅವರ ಮನೇಲಿ ಪೊಂಗಲ್ ತಿಂದು ಬಂದೆ.
ಮಣಿಕಾಂತ್ ಗೆ ತೆಗೆದಿದ್ದ ಫೋಟೋಗಳನ್ನು ಸಿಡಿಯಲ್ಲಿ ಹಾಕಿ ಕೊರಿಯರ್ ಮಾಡಿದೆ.
"ಅದ್ಭುತವಾಗಿದೆ ಮಲ್ಲಿಕ್. ನನ್ನ ಮನಸ್ಸಿನಲ್ಲಿದ್ದ ಕಲ್ಪನೆಗೆ ತಕ್ಕಂತೆ ಫೋಟೋ ಕಳಿಸಿದ್ದೀರಿ" ಎಂದು ಮಣಿಕಾಂತ್ ರಿಂದ ಸರ್ಟಿಫಿಕೇಟ್ ಬಂತು. ನನಗೆ ದೊಡ್ಡ ಪರೀಕ್ಷೆ ಪಾಸಾದಂತಾಗಿತ್ತು.
ಈಗ ಮಣಿಕಾಂತರ ಪುಸ್ತಕ ಬಿಡುಗಡೆ ರವೀಂದ್ರ ಕಲಾಕ್ಷೇತ್ರದಲ್ಲಿ. ಅದರ ಆಹ್ವಾನ ಪತ್ರಿಕೆ ಇಲ್ಲಿದೆ. ಎಲ್ಲರೂ ಶುಭ ಹಾರೈಸಿ, ಪ್ರೋತ್ಸಾಹಿಸಿ.
ಮಣಿಕಾಂತ್ ಗೆ ಶುಭಹಾರೈಕೆಗಳು.
-ಮಲ್ಲಿಕಾರ್ಜುನ.ಡಿ.ಜಿ.ಶಿಡ್ಲಘಟ್ಟ.

Saturday, April 18, 2009

ಕನ್ನಡ ಕಸ್ತೂರಿ ಮತ್ತು ಸುವರ್ಣ ಸಂದರ್ಶನ


ಆತ್ಮೀಯ ಬ್ಲಾಗ್ ಗೆಳೆಯರೆ,
ನನ್ನ ಸ್ನೇಹಿತ ಶಿವು ಅವರ ಛಾಯಾಕನ್ನಡಿ ಬ್ಲಾಗಿನ "ಭೂಪಟಗಳ ಚಿತ್ರ-ಲೇಖನ" ವಿಚಾರವಾಗಿ "ಕಸ್ತೂರಿ ಕನ್ನಡ" ಛಾನಲ್ಲಿನವರು ನಡೆಸಿದ ಸಂದರ್ಶನ ದಿನಾಂಕ [ 25-3-2009] ರಂದು ಪ್ರಸಾರವಾಯಿತು.
ಇದರ ವಿಡಿಯೋ ತುಣುಕುಗಳು......

ಹಾಗೂ ಇತ್ತೀಚೆಗೆ ಲಂಡನ್ನಿನ ರಾಯಲ್ ಫೋಟೊಗ್ರಫಿ ಸೊಸೈಟಿಯಿಂದ ಅದರ ಪ್ರತಿನಿಧಿ ಗೌರವ[ARPS Distinction] ನನಗೆ ಮತ್ತು ಶಿವುಗೆ ದೊರಕಿರುವ ಸಂತೋಷವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ. ಈ ಸಂಧರ್ಭದಲ್ಲಿ "ಸುವರ್ಣ ನ್ಯೂಸ್" ಚಾನಲ್ಲಿನಲ್ಲಿ ದಿನಾಂಕ[10-4-2009]ರಂದು ನಮ್ಮನ್ನು ಸಂದರ್ಶಿಸಿದ್ದರು. ಅದರ ವಿಡಿಯೋ ಚಿತ್ರಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟ ಪಡುತ್ತೇವೆ...

ಅದನ್ನು ನೋಡಲು ಅಥವ ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ....
Part 1 - http://video.google.com/videoplay?docid=3023628538498416913

Part 2 - http://video.google.com/videoplay?docid=6131706322515531053

ಪ್ರೀತಿಯಿಂದ ,
ಮಲ್ಲಿಕಾರ್ಜುನ.ಡಿ.ಜಿ. ARPS.

Monday, April 13, 2009

ವೈವಿಧ್ಯಮಯ ದೃಷ್ಟಿಬೊಂಬೆಗಳು

"ಸ್ವಲ್ಪ ಇರಿ. ಇದಕ್ಕೆ ಸರಿಯಾಗಿ ನಿಲ್ಲೋದನ್ನು ಹೇಳಿಕೊಡ್ತೀನಿ" ಅಂತ ನನ್ನ ಸ್ನೇಹಿತ ರೆಡ್ಡಿ ತಾಲೀಮು ನಡೆಸಿದ್ದಾನೆ. (ಅವರೆ ಬೆಳೆ)
ತಮ್ಮ ಬೆಳೆಗೆ ರೋಗ ಬರದಿರಲಿ, ಜನರ ಕೆಟ್ಟ ದೃಷ್ಟಿ ಬೀಳದಿರಲಿ ಮತ್ತು ಬೆಳೆ ಚೆನ್ನಾಗಿ ಆಗಲೆಂದು ಕೋಲಾರ ಜಿಲ್ಲೆಯಲ್ಲಿ ರೈತರು ಬೆಳೆ ಅರ್ಧ ಹಂತದಲ್ಲಿದ್ದಾಗ "ಸೀಡುದ್ಯಾವರ" ಅಂತ ಮಾಡುತ್ತಾರೆ. ಗ್ರಂಥಿಕೆ ಅಂಗಡಿಯಲ್ಲಿ ಸಿಗುವ "ಪಚ್ಚೆಅಚ್ಚು" ಎಂಬ ಪೂಜಾಸಾಮಗ್ರಿಯನ್ನು ತಂದು ಏಳು ಕಲ್ಲು ಜೋಡಿಸಿ, ಪೂಜಿಸಿ, ಕೋಳಿ ಬಲಿಕೊಡುತ್ತಾರೆ. ದೃಷ್ಟಿಬೊಂಬೆಯನ್ನು ತಯಾರಿಸಿ ರಕ್ತದ ತಿಲಕವಿಡುತ್ತಾರೆ. ಗಾಳಿ ತಮ್ಮ ಬೆಳೆ ಕಡೆ ಬೀಸುವೆಡೆ ಕೋಳಿ ಸುಡುತ್ತಾರೆ.

ನನ್ನ ಸ್ಕರ್ಟ್ ಹೇಗಿದೆ?(ಅವರೆ ಬೆಳೆ)

ನನ್ನನ್ನ ಕಂಬಕ್ಕೆ ಕಟ್ಟಾಕವ್ರೆ ಬಿಡಿಸ್ರೀ ಸ್ವಾಮಿ.(ಅವರೆ ಬೆಳೆ)
ರೈತ ಅನ್ನದಾತನಾದರೂ, ಅವನದ್ದು ಮಾತ್ರ ಅನಿಶ್ಚಿತ ಬದುಕು. ಬೀಜ, ಗೊಬ್ಬರ, ಮಳೆ, ರೋಗಗಳು, ಔಷಧಗಳು... ಎಲ್ಲ ಅಡೆತಡೆಗಳನ್ನೂ ದಾಟಿ ಒಳ್ಳೆ ಬೆಳೆ ಬಂದರೆ, ಅದಕ್ಕೆ ತಕ್ಕ ಬೆಲೆ ಮಾರುಕಟ್ಟೆಯಲ್ಲಿ ಸಿಗಬೇಕು. ತನ್ನ ಹಿಡಿತಕ್ಕೆ ಮೀರಿದ ಕಂಟಕಗಳನ್ನು ಎದುರಿಸುವ ರೈತ ಅನೇಕ ನಂಬುಗೆಯ ಆಚರಣೆಗಳನ್ನು ಆಚರಿಸುವುದುಂಟು. ಈ ದೃಷ್ಟಿಬೊಂಬೆಯೂ ಅದರಲ್ಲೊಂದು. ಶ್ರಮಜೀವಿಯ ಸೃಜನಶೀಲತೆ ಈ ಬೊಂಬೆಗಳಲ್ಲಿ ಕಾಣಸಿಗುತ್ತದೆ.
ನನ್ನ ಹೊಟ್ಟೆಗಿಂತ ತಲೆನೇ ದಪ್ಪಮಾಡಿಟ್ಟವ್ರೆ!(ಟೊಮೆಟೊ)

ರುಂಡ ಒಂದು ಕಡೆ ಮುಂಡ ಒಂದು ಕಡೆ...

ಅಟೆನ್ಷನ್ ಪೊಸಿಷನ್!!(ಬೀಟ್ ರೂಟ್)

ಹೆಂಗಿದೆ ನನ್ನ ಸ್ಟೆಪ್ಪು!(ಮೆಣಸಿನಕಾಯಿ)

ಯೊವ್, ಸೀರೆ ಸೆರಗು ಸರಿಮಾಡ್ಕೊತೀನಿ ಇರಯ್ಯ.(ಆಲೂಗಡ್ಡೆ)
"ಬೆಳೆ ಎಷ್ಟು ಚೆನ್ನಾಗಿ ಬಂದಿದೆ!" ಅಂದುಕೊಂಡು ಹೋಗುವವರ ದೃಷ್ಟಿ ತಾಕದಿರಲಿ ಮತ್ತು ಬೆಳೆಗಳಿಗೆ ರೋಗ ಬಾರದಿರಲಿ ಎಂಬ ಕಾರಣಕ್ಕಾಗಿ ನಿಲ್ಲಿಸುವ ಈ ಬೊಂಬೆಯನ್ನು ಬೆಳೆ ಬಂದಾದ ಮೇಲೆ ಸುಟ್ಟುಬಿಡುತ್ತಾರೆ. ಬೆಳೆಗೆ ತಗುಲಬಹುದಾದ ಕೆಡುಕನ್ನೆಲ್ಲಾ ತನ್ನೊಡಲಲ್ಲಿರಿಸಿಕೊಂಡ ಬೊಂಬೆ ಸುಟ್ಟು ಬೂದಿಯಾಗುತ್ತದೆ.
ನನ್ನ ತಲೆ ಮೇಲೆ ಹಕ್ಕಿ ಗಲೀಜು ಮಾಡ್ತಾ ಇದೆ, ಓಡ್ಸಪ್ಪೋ.(ಮೆಣಸಿನಕಾಯಿ)

ನನ್ನ ಕೆಳಗೆ ಇಳ್ಸಿ, ನಾನೂ ದ್ರಾಕ್ಷಿ ನೋಡಿ ಖುಸಿ ಪಡ್ತೀನಿ.(ದ್ರಾಕ್ಷಿ)

Monday, April 6, 2009

ಪುಟ್ಟಜೀವಿಯ ದೊಡ್ಡ ಮನೆ

"ಅರೆ! ಇದೇನಿದು ಮರಕ್ಕೇನೋ ಕಟ್ಟಿದ ಹಾಗಿದೆ?"ನನ್ನ ಹೆಂಡತಿ ಕೈತೋರಿದತ್ತ ನೋಡಿದಾಗ ಅಲ್ಲಿ ಕಂಡದ್ದು, ಕೈ ಚಾಚಿ ತಬ್ಬಿಕೊಳ್ಳಬಹುದಾದಷ್ಟು ದೊಡ್ಡದಾದ ಮಣ್ಣಿನ ಹೆಂಟೆ. ಹಲಸಿನ ಮರದ ಕೊಂಬೆಯಿಂದ ಆ ಹೆಂಟೆ ನೇತಾಡುತ್ತಿತ್ತು. ತಕ್ಷಣವೇ ಹೊಳೆಯಿತು - ಅದು ಕಣಜದ ಗೂಡೆಂದು. ನಿಧಾನವಾಗಿ ಹತ್ತಿರ ಹೋಗುತ್ತಿದ್ದಂತೆಯೇ, "ಅಲ್ಲಿಗೆ ಹೋಗ್ಬೇಡ್ರೀ, ಹುಳ ಕಚ್ತವೆ" ಎಂದು ಅಲ್ಲಿಯೇ ಸಮೀಪದಲ್ಲಿದ್ದ ಒಬ್ಬ ಮಹಿಳೆ ಕೂಗಿಕೊಂಡರು. ದೂರದಿಂದಲೇ ನೋಡುವುದಷ್ಟಕ್ಕೇ ನಾವು ತೃಪ್ತಿಪಡಬೇಕಾಯಿತು.
ಅಂದಹಾಗೆ, ಶಿಡ್ಲಘಟ್ಟದಿಂದ ಎರಡು ಕಿ.ಮೀ. ದೂರದಲ್ಲಿರುವ ಗವಿಗುಟ್ಟವೆಂಬ ಗವಿಯಲ್ಲಿರುವ ಶಿವನ ದೇವಸ್ಥಾನಕ್ಕೆ ಹೋದಾಗ ನಮ್ಮ ಕಣ್ಣಿಗೆ ಈ ಅಪರೂಪದ ಗೂಡಿನ ದೃಶ್ಯ ಬಿದ್ದಿತ್ತು.
ದೇವಾಲಯದಲ್ಲಿನ ಅರ್ಚಕರನ್ನು ಕಣಜದ ಗೂಡಿನ ಬಗ್ಗೆ ವಿಚಾರಿಸಿದೆವು. ಅವರು ಹೇಳಿದ್ದಿಷ್ಟು: "ಸುಮಾರು ಮೂರು ತಿಂಗಳಿಂದ ಈ ಗೂಡು ಇಲ್ಲಿದೆ. ಹುಡುಗರ ತಂಟೆ ಇಲ್ಲಿ ಜಾಸ್ತಿ. ನಾವು ಆದಷ್ಟೂ ಯಾರನ್ನೂ ಗೂಡಿನ ಹತ್ತಿರಕ್ಕೆ ಬಿಡೊಲ್ಲ. ಅಕಸ್ಮಾತ್ ಯಾರನ್ನಾದ್ರೂ ಹುಳಗಳು ಕಚ್ಚಿ ಏನಾದ್ರೂ ಅನಾಹುತ ಆದ್ರೆ..."
ಸೊಳ್ಳೆಗಳಂತೆ ಕಣಜಗಳಲ್ಲೂ ಹೆಣ್ಣುಗಳಿಗೆ ಮಾತ್ರ ಮುಳ್ಳಿರುತ್ತದೆ. ಈ ಮುಳ್ಳಿರುವ ಕಣಜಗಳು ಮಾತ್ರ ಕಚ್ಚುತ್ತವೆ. ತಮ್ಮನ್ನು ರಕ್ಷಿಸಿಕೊಳ್ಳಲು ಇವು ಕುಟುಕುತ್ತವೆಯೇ ಹೊರತು, ಸುಮ್ಮಸುಮ್ಮನೆ ಮನುಷ್ಯನ ಮೇಲೇರಿ ಹೋಗುವುದಿಲ್ಲ. ಗುಂಪಿನಲ್ಲಿ ವಾಸಿಸುವ ಕಣಜಗಳಲ್ಲಿ ತಮ್ಮ ದೊಡ್ಡ ಮನೆಯ ರಕ್ಷಣೆಗಾಗಿಯೇ ಮುಳ್ಳುಗಳನ್ನು ಹೊಂದಿರುವ ಸೈನಿಕರ ಪಡೆ ಇರುತ್ತದೆ. ಇವುಗಳ ಕೊಂಡಿ ಅಥವಾ ಮುಳ್ಳು ವಿಷಕಾರಿ. ಈ ಮುಳ್ಳುಗಳಲ್ಲಿ ಕೆಂಪು ರಕ್ತ ಕಣಗಳನ್ನು ಕರಗಿಸುವ ಹಿಸ್ಟಮಿನ್ ರಾಸಾಯನಿಕವನ್ನು ಬಿಡುಗಡೆ ಮಾಡುವ ಕೋಶಗಳಿರುತ್ತವೆ. ಕಣಜಗಳ ಗುಂಪು ದಾಳಿಯಲ್ಲಿ ಕಡಿತಕ್ಕೊಳಗಾದ ವ್ಯಕ್ತಿ ಸಾವಿಗೀಡಾಗುವ ಸಾಧ್ಯತೆಯೂ ಇದೆ.
ಕಣಜದ ಬಗೆಗಿನ ಧ್ಯಾನದಲ್ಲೇ ಪೂಜೆ ಮುಗಿಸಿ ಮನೆಗೆ ಬಂದವನೇ ಕ್ಯಾಮೆರಾದೊಂದಿಗೆ ಮರಳಿ ದೇಗುಲದ ಬಳಿ ಹೋದೆ. ಸದ್ದು ಮಾಡದೆ ಪೋಟೋಗಳನ್ನು ಕ್ಲಿಕ್ಕಿಸಿಕೊಂಡು ಬಂದೆ.
ಇಂಗ್ಲಿಷ್ ನಲ್ಲಿ ಹಾರ್ನೆಟ್ ಎಂದು ಕರೆಯುವ ಗುಂಪಿನ ಕಣಜಗಳು ತಮ್ಮ ಗೂಡಿನ ಸುತ್ತಲೂ ಚೆಂಡಿನಂತಹ ಗುಂಡಗಿನ ಹೊದಿಕೆಯನ್ನು ರಕ್ಷಿಸಿಕೊಳ್ಳುತ್ತವೆ. ಈ ಗೂಡುಗಳಲ್ಲಿ ನೂರಾರು, ಕೆಲವೊಮ್ಮೆ ಸಾವಿರಾರು ಕಣಜಗಳು ಸಹಜೀವನ ನಡೆಸುತ್ತವೆ.
ರಾಣಿಯ ಆಡಳಿತ ಹೊಂದಿರುವ ಈ ಕಣಜಗಳು ಗೂಡು ಕಟ್ಟುವ ರೀತಿಯೇ ವಿಚಿತ್ರ. ಒಣ ಮರ ಮತ್ತು ತೊಗಟೆಗಳನ್ನು ಜಗಿದು ತಮ್ಮ ಜೊಲ್ಲಿನೊಂದಿಗೆ ಮಿಶ್ರಣ ಮಾಡಿಕೊಂಡು ಆರು ಮುಖಗಳಿರುವ ಮನೆಗಳನ್ನು ಕಟ್ಟುತ್ತಾ ಹೋಗುತ್ತವೆ. ಒಂದೇ ಅಳತೆಯ, ಒಂದರ ಪಕ್ಕ ಒಂದು, ಮೇಲೆ ಕೆಳಗೆ, ಸುತ್ತ ಮುತ್ತ, ಹೀಗೆ ಗೂಡು ಕಟ್ಟುವ ಇವುಗಳ ತಾಂತ್ರಿಕ ಕೌಶಲ್ಯಕ್ಕೆ ಯಾರಾದರೂ ತಲೆದೂಗಲೇಬೇಕು.
ಕೊಂಡಿ ಹೊಂದಿರುವ ಕಣಜವು ಜೀವಲೋಕದ ಮುಖ್ಯ ಕೊಂಡಿಯೂ ಹೌದು. ಕಣಜವನ್ನು ತಿನ್ನುವ ಜೀವಿಗಳಿರುವಂತೆ, ಕಣಜವು ತಿನ್ನುವ ಹಲವು ಜೀವಿಗಳಿವೆ. ಬೆಳೆಗಳಿಗೆ ಮಾರಕವಾದ ಹಲವು ಕ್ರಿಮಿಕೀಟಗಳನ್ನು ತಿನ್ನುವ ಕಣಜ ರೈತರಿಗೆ ಉಪಕಾರಿ. ಹೂಗಳ ಮಕರಂದವನ್ನು ಹೀರುತ್ತಾ ಪರಾಗ ಸ್ಪರ್ಶದ ಕೆಲಸವನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತವೆ.
ಸ್ವಲ್ಪ ದಿನಗಳ ನಂತರ ಊರಿನಲ್ಲಿ ಭೇಟಿಯಾದ ಗವಿಗುಟ್ಟದ ಅರ್ಚಕರು ಸೂತಕದ ಸಮಾಚಾರ ತಂದಿದ್ದರು. "ನಾವಿಲ್ಲದ ಹೊತ್ತಿನಲ್ಲಿ ಯಾರೋ ಹುಡುಗರು ಆ ಗೂಡನ್ನು ಒಡೆದು ಹಾಕಿದ್ದಾರಪ್ಪ" ಅಂದರು. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಅಂತಾರಲ್ಲ, ಹಾಗಾಗಿತ್ತು. ತಕ್ಷಣವೇ ಹೋಗಿ ನೋಡಿದೆ. ಗೂಡಿನ ಅರ್ಧಕ್ಕೂ ಹೆಚ್ಚು ಭಾಗ ಕಳಚಿ ಬಿದ್ದಿತ್ತು. ಗೂಡಿನ ಒಳಭಾಗ ಅನಾವರಣಗೊಂಡಿತ್ತು. ಕೆಳಗೆ ಬಿದ್ದಿದ್ದ ಗೂಡಿನ ಅವಶೇಷಗಳನ್ನು ನೋಡಿ ಮನಸ್ಸಿಗೆ ಪಿಚ್ಚೆನ್ನಿಸಿತು. ಕಣಜಗಳು ಕಾಣಲಿಲ್ಲ. ಎಲ್ಲಿ ಹೋದವೋ? ಅವು ಎಷ್ಟು ಕಷ್ಟಪಟ್ಟು ಈ ಗೂಡು ಕಟ್ಟಿದ್ದವೋ?
ನಮ್ಮಲ್ಲಂತೂ ಒಟ್ಟು ಕುಟುಂಬಗಳು, ದೊಡ್ಡ ಕುಟುಂಬಗಳು ಅಪರೂಪವಾಗುತ್ತಿವೆ. ಸಹಜೀವನದ ಉದಾಹರಣೆಗಾಗಿ ಕಣಜಗಳಂಥ ಜೀವಿಗಳತ್ತ ನೋಡುವ ಸಂದರ್ಭ ಬಂದಿದೆ. ಆದರೆ ಕಲಾತ್ಮಕ ಗೂಡನ್ನು ಹೊಡೆದು ಬಡಿದು ಬೀಳಿಸುವ ವಿಕೃತಿಗೆ ಏನನ್ನುವುದು?

Wednesday, April 1, 2009

"ತೇಜಸ್ವಿ" ಎಂಬ ಸ್ಫೂರ್ತಿ

"ಅಲ್ರೀ, ನಾನೂ ನಿಮ್ಮಂತೆ ಮನುಷ್ಯ. ಕಷ್ಟಪಟ್ರೆ ನೀವು ಕೂಡ ಈ ರೀತಿ ಫೋಟೋ ತೆಗೀಬಹುದು" ಎಂದು ತೇಜಸ್ವಿಯವರು ಅಂದು ಹೇಳಿದ್ದು ಈಗ ಹೇಳಿದಂತಿದೆ. ಅವರ ಮನೆಯಲ್ಲಿ ಟೀಪಾಯ್ ಮೇಲೆಲ್ಲಾ ನಾನಾ ವಿಧದ ಹಕ್ಕಿಚಿತ್ರಗಳು. ಕೆಲವೊಂದಂತೂ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ನೋಡುತ್ತಿರುವುದು. ತೇಜಸ್ವಿಯವರು ತೆಗೆದಿದ್ದ ಚಿತ್ರಗಳನ್ನೆಲ್ಲಾ ನೋಡುತ್ತಾ ಬೆಕ್ಕಸಬೆರಗಾಗಿ,"ಇವೆಲ್ಲಾ ನಮ್ಮ ಕೈಲಿ ತೆಗೆಯೊಕಾಗಲ್ಲ" ಎಂದುಬಿಟ್ಟೆ. ತಕ್ಷಣ ಗುಂಡಿನಂತೆ ಬಂದ ತೇಜಸ್ವಿಯವರ ಮಾತು ನನ್ನೊಬ್ಬನಿಗೇ ಅಲ್ಲ ಎಲ್ಲರಿಗೂ ಎಲ್ಲಾ ಕೆಲಸಕ್ಕೂ ಅನ್ವಯಿಸುತ್ತದೆ.
ಅಂದು ೨೦೦೨ರ ಏಪ್ರಿಲ್ ೨೬. ತೇಜಸ್ವಿಯವರ ತೋಟದೊಳಗೆ ಗೇಟಿಗೆ ಸುತ್ತಿದ್ದ ಚೈನ್ ಬಿಡಿಸಿಕೊಂಡು ಒಳಗಡೆ ಹೋದೆವು. ಅಕ್ಕಪಕ್ಕ ಬರಿ ಕಾಫಿ ಗಿಡಗಳು. ಮುಂದೆ ಕಾಲುದಾರಿ. ಆಹ್ಲಾದಕರವಾದ ಮಲೆನಾಡ ವಾತಾವರಣ. ಎಲ್ಲೆಲ್ಲೂ ಮರಗಿಡಗಳು. ಸ್ವಲ್ಪ ದೂರ ಹೋದ ನಂತರ ಅವರ ಮನೆ "ನಿರುತ್ತರ"ದ ಹೆಂಚು ಕಾಣಿಸಿತು. ಮನೆಯ ಸುತ್ತ ನಾನಾ ಬಗೆಯ ಹೂಗಿಡಗಳು. ಮುಂದೆ ಹುಲ್ಲುಹಾಸು, ಆಕರ್ಷಕ ಸಸ್ಯ ವೈವಿಧ್ಯ.
ಅಂಜುತ್ತಲೇ ಬೆಲ್ ಮಾಡಿದೆವು. ತೇಜಸ್ವಿಯವರು ಬಂದರು. ಸ್ವಲ್ಪ ಮಡಿಸಿದ ಜೀನ್ಸ್ ಪ್ಯಾಂಟ್, ಕಾಟನ್ ಶರ್ಟ್, ಬಿಳಿಗಡ್ಡ, ಕನ್ನಡಕ. ಒಳಕರೆದು ಕುಳಿತುಕೊಳ್ಳಿ ಅಂದರು. ಆಗಲೇ ನಾವು ನೋಡಿದ್ದು ಟೀಪಾಯ್ ಮೇಲೆ ನೂರಾರು ಪಕ್ಷಿಗಳು. "ಇವು ನನ್ನ ೩೦ಕ್ಕೂ ಹೆಚ್ಚು ವರ್ಷಗಳ ಅನುಭವ ಮತ್ತು ಪರಿಶ್ರಮದಿಂದ ತೆಗೆದ ಚಿತ್ರಗಳು" ಅಂದರು.
ಅವರ ಪತ್ನಿ ರಾಜೇಶ್ವರಿಯವರು ಕೊಟ್ಟ ಕಾಫಿ, ಬಿಸ್ಕತ್ ಸೇವಿಸಿ ಮಾತನಾಡುತ್ತ ಕುಳಿತೆವು. ಅವರು ಮಾಡಿರುವ ಪೇಂಟಿಂಗ್ ಗೋಡೆಯ ಮೇಲಿತ್ತು. ಕೇಳಿದ್ದಕ್ಕೆ, "ಐ ಯಾಮ್ ಎ ಪೇಂಟರ್. ಮೈಸೂರಿನಲ್ಲಿ ತಿಪ್ಪೇಸ್ವಾಮಿಯವರ ಬಳಿ ಕಲಿತಿರುವೆ. ಅದಕ್ಕೂ ಮುಖ್ಯವಾಗಿ ನಾನೊಬ್ಬ ಮ್ಯುಸಿಷಿಯನ್. ಪಂಡಿತ್ ರವಿಶಂಕರರ ಬಳಿ ಸಿತಾರ್ ಕಲಿತಿರುವೆ" ಅಂದರು.
ಮನೆಯ ಹಿಂದೆ ಇರುವ ನೀರಿನ ಪುಟ್ಟ ತೊರೆಯಲ್ಲಿ ತೇಜಸ್ವಿ ಮೀನುಗಳನ್ನು ಸಾಕಿದ್ದರು. ನನ್ನ ಜೊತೆ ಬಂದಿದ್ದ ನನ್ನಕ್ಕನ ಮಗಳ ಕೈಲಿ ಅವಕ್ಕೆ ಬ್ರೆಡ್ ಹಾಕಿಸಿದರು. ಅವರ ಫೋಟೋ ತೆಗೆದಾಗ "ಯಾಕ್ರೀ ಇಷ್ಟೊಂದು ಫೋಟೋ ತೆಗೆಯುತ್ತೀರಿ. ನಾನೂ ಕೂಡ ನಿಮ್ಮಂತೆಯೇ ಮನುಷ್ಯ" ಅಂದರು. ತಮ್ಮನ ಜೊತೆ ರೇಷ್ಮೆ ಹುಳು ಸಾಕಲು ಅವರ ಮೈಸೂರಿನ ಮನೆಯಲ್ಲಿ ಪ್ರಯತ್ನಿಸಿದ್ದು ಮತ್ತು ಹಿಪ್ಪುನೇರಳೆ ಸೊಪ್ಪಿಗಾಗಿ ಅಲೆದದ್ದು ಎಲ್ಲಾ ನೆನಪಿಸಿಕೊಂಡು ನಕ್ಕರು. ಚೀನಾ ರೇಷ್ಮೆಯಿಂದ ನಮ್ಮ ರೇಷ್ಮೆ ಬೆಳೆಗಾರರಿಗೆ ಆಗುತ್ತಿರುವ ತೊಂದರೆ ಬಗ್ಗೆ ಕೇಳಿದಾಗ, "ಚೀನಾ ದೇಶದವನು ತಿನ್ನುವುದೂ ಅನ್ನವೇ, ನಮ್ಮ ದೇಶದವನು ತಿನ್ನುವುದೂ ಅನ್ನವೇ. ಅವರು ಕಡಿಮೆ ಬೆಲೆಗೆ ರೇಷ್ಮೆ ಇಲ್ಲಿಗೆ ತಂದು ಮಾರುತ್ತಿದ್ದಾರೆಂದರೆ ನಾವು ಏಕೆ ಅಷ್ಟು ಕಡಿಮೆ ಬೆಲೆಗೆ ರೇಷ್ಮೆ ತಯಾರಿಸಲಾಗುತ್ತಿಲ್ಲವೆಂದು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಸರಕಾರದಿಂದ ಸಬ್ಸಿಡಿ ಪಡೆದು ನೆಮ್ಮದಿಯ ಜೀವನ ನಡೆಸಿದರೆ ಬುದ್ಧಿ ಮಂದವಾಗುತ್ತದೆ. ಚಾಲೆಂಜುಗಳನ್ನು ಎದುರಿಸಬೇಕು" ಅಂದರು.
ಅವರು ಭಾವಾನುವಾದ ಮಾಡಿರುವ ಕೆನೆತ್ ಆಂಡರ್ಸನ್, ಜಿಮ್ ಕಾರ್ಬೆಟ್ ರ ಕಥೆಗಳು, ಹೆನ್ರಿಶಾರೇರೆ ಬರೆದಿರುವ ಪ್ಯಾಪಿಲಾನ್ ಕೃತಿಗಳಂಥ ರೋಮಾಂಚಕಾರಿ ಕಥೆಗಳ ಬಗ್ಗೆ ಕೇಳಿದೆವು. "ಈ ಪುಸ್ತಕಗಳನ್ನೆಲ್ಲಾ ನಾವು ಹೈಸ್ಕೂಲಿನಲ್ಲಿದ್ದಾಗಲೇ ಓದಿದ್ದೆವು. ೪೦ ವರ್ಷಗಳ ನಂತರ ಅನುವಾದ ಮಾಡಿರುವೆನಷ್ಟೆ. ನಮ್ಮ ಸ್ನೇಹಿತರ ಗುಂಪು ಹಾಗಿತ್ತು. ಬರೀ ಓದಿದ್ದರೆ ಮರೆತುಬಿಡುತ್ತಿದ್ದೆವು. ನಾವುಗಳು ಚರ್ಚೆ-ವಿಮರ್ಶೆ ಮಾಡುತ್ತಿದ್ದುದರಿಂದ ಇನ್ನೂ ನೆನಪಿನಲ್ಲಿವೆ" ಎಂದರು ತೇಜಸ್ವಿ.
"ನಿಮ್ಮ ಮಿಲೇನಿಯಂ ಸರಣಿಯನ್ನು ಮುಂದುವರೆಸಿ" ಎಂದು ಹೇಳಿದಾಗ ಅವರು ನಕ್ಕರು. "ಈ ರೀತಿ ಮಾಹಿತಿ ಸಾಹಿತ್ಯದ ಪುಸ್ತಕಗಳನ್ನು ಬರೆದರೆ ಕಥೆ ಕಾದಂಬರಿ ಬರೆಯಿರಿ ಅನ್ನುತ್ತಾರೆ. ಅದನ್ನು ಬರೆದರೆ ಇದನ್ನು ಬರೆಯಿರಿ ಅನ್ನುತ್ತಾರೆ. ಒಮ್ಮೆ ಶಿವರಾಮ ಕಾರಂತರು ಈ ರೀತಿ ಮಕ್ಕಳಿಗೆ ಜ್ಞಾನದಾಯಕವಾದಂತಹ ಪುಸ್ತಕಗಳನ್ನೇ ಬರೆಯಲು ಹೇಳಿದ್ದರು. ಏಕೆಂದರೆ ಮಕ್ಕಳು ಮುಂದಿನ ಭವಿಷ್ಯ, ಅವರನ್ನು ತಿದ್ದಬೇಕು. ಬೆಳೆದವರನ್ನು ಏನು ತಿದ್ದುವುದು?" ಎಂದರು.
"ಸಣ್ಣವರಿದ್ದಾಗ ಎಷ್ಟೊಂದು ಗಲಾಟೆ, ತಂಟೆ ಮಾಡುತ್ತಿದ್ದೆವೆಂದರೆ, ನಮ್ಮಮ್ಮ ಇವರು ಶಾಲೆಗೆ ಹೋದರೆ ಸಾಕಪ್ಪ ಎಂದು ಶಾಲೆಗೆ ಅಟ್ಟುತ್ತಿದ್ದರು. ಶಾಲೆಗಾದರೋ ಒಂದು ಪುಸ್ತಕ ಹಿಡಿದು ಹೋಗುತ್ತಿದ್ದೆವು. ಈಗಿನ ಮಕ್ಕಳನ್ನು ನೋಡಿದರೆ ಅಯ್ಯೋ ಅನ್ನಿಸುತ್ತೆ. ನಾವು ಗುರುಗಳ ಪಾಠದ ಶೈಲಿಯಿಂದಲ್ಲ, ಅವರ ವ್ಯಕ್ತಿತ್ವದಿಂದ ಪ್ರಭಾವಿತರಾಗಿದ್ದೆವು" ಎಂದರು.
ಏಪ್ರಿಲ್ ೫ಕ್ಕೆ ಅವರು ನಮ್ಮನ್ನಗಲಿ ಎರಡು ವರ್ಷಗಳಾಯ್ತು. ಅವರಿನ್ನೂ ಇರಬೇಕಿತ್ತು. ನಮ್ಮೆಲ್ಲರ ಚೈತನ್ಯದ ಭಾಗವಾಗಿರುವ ಅವರು ನಮ್ಮನ್ನು ಪೊರೆಯಲಿ.